ಬೆಂಗಳೂರು; ಕಲ್ಬುರ್ಗಿಯ ಸೇಡಂ ತಾಲೂಕಿನ ಬೀರನಹಳ್ಳಿ ಗ್ರಾಮದ ವಿವಿಧ ಸರ್ವೆ ನಂಬರ್‍ಗಳಲ್ಲಿರುವ 120 ಎಕರೆ ವಿಸ್ತೀರ್ಣದ ಜಮೀನನ್ನು ಗೋಮಾಳ ಜಮೀನು ಎಂದು ನೋಂದಾಯಿಸಲು ಯೋಗ್ಯವಾಗಿದೆ ಎಂದು ಸೇಡಂನ ಕಂದಾಯ ನಿರೀಕ್ಷಕರು ವರ್ಷದ ಹಿಂದೆಯೇ ತಹಶೀಲ್ದಾರ್‍ಗೆ ನೀಡಿದ್ದ ವರದಿಯನ್ನೇ ಮುಚ್ಚಿ ಹಾಕಿರುವುದು ಇದೀಗ ಬಹಿರಂಗವಾಗಿದೆ.
ಬೀರನಹಳ್ಳಿ ಗ್ರಾಮದ ಸರ್ವೆ ನಂಬರ್ 16,17,18,19,20 ರಲ್ಲಿರುವ ಒಟ್ಟಾರೆ 120 ಎಕರೆ ವಿಸ್ತೀರ್ಣದ ಜಮೀನನ್ನು ಕೆಲವು ಖಾಸಗಿ ವ್ಯಕ್ತಿಗಳು ಒತ್ತುವರಿ ಮಾಡಿದ್ದಾರೆ ಎಂದು ಸಲ್ಲಿಕೆಯಾಗಿದ್ದ ದೂರನ್ನಾಧರಿಸಿ ಕಂದಾಯ ನಿರೀಕ್ಷಕರು ಸ್ಥಳ ಪರಿಶೀಲನೆ ಮಾಡಿ ಪಂಚನಾಮ ವರದಿಯನ್ನು ಸಲ್ಲಿಸಿದ್ದರು. ಆದರೆ ಈ ತಹಶೀಲ್ದಾರ್ ಅವರು ಕಂದಾಯ ನಿರೀಕ್ಷಕರು ಸಲ್ಲಿಸಿದ್ದ ವರದಿಯನ್ನು ಬದಿಗೊತ್ತಿ ಈ ಸರ್ವೆ ನಂಬರ್‍ಗಳಲ್ಲಿರುವ ಜಮೀನುಗಳು ಗೋಮಾಳ ಜಮೀನು ಎಂದು ಕಂಡು ಬರುವುದಿಲ್ಲವೆಂದು 2026 ಫೆಬ್ರುವರಿಯಲ್ಲಿ ವರದಿ ಸಲ್ಲಿಸಿದ್ದರು.
ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಇದೇ ಸರ್ವೆ ನಂಬರ್‍ಗಳಲ್ಲಿ 120 ಎಕರೆ ಗೋಮಾಳ ಎಂದು ಕಂಡುಬರುವುದಿಲ್ಲ ಎಂದು ಜಿಲ್ಲಾಧಿಕಾರಿಗೆ ವರದಿ ಸಲ್ಲಿಸಿದ್ದರು. ಈ ಬೆಳವಣಿಗೆ ನಡುವೆಯೇ ಕಂದಾಯ ನಿರೀಕ್ಷಕರು ಸಲ್ಲಿಸಿರುವ ಸ್ಥಳ ಪಂಚನಾಮೆ ವರದಿಯು ಮುನ್ನೆಲೆಗೆ ಬಂದಿದೆ.
ಕಂದಾಯ ನಿರೀಕ್ಷಕರು 2025ರ ಜನವರಿ 30ರಂದು ಸಲ್ಲಿಸಿದ್ದ ಸ್ಥಳ ಪಂಚನಾಮೆ ವರದಿಯಯ ಕೈ ಬರವಣಿಗೆಯ ಪ್ರತಿಯು ‘ದಿ ಫೈಲ್’ಗೆ ಲಭ್ಯವಾಗಿದೆ.
ಕಂದಾಯ ನಿರೀಕ್ಷಕರ ವರದಿಯಲ್ಲೇನಿದೆ?
ಸೇಡಂ ತಾಲೂಕಿನ ಬೀರನಹಳ್ಳಿ ಗ್ರಾಮದ ಸರ್ವೆ ನಂಬರ್ 16,17,18.19,20ರಲ್ಲಿ ಒಟ್ಟು 120 ಎಕರೆ ವಿಸ್ತೀರ್ಣದ ಎಕರೆ ಜಮೀನು ಅನಧಿಕೃತವಾಗಿ ಸಾಗುವಳಿಯಾಗುತ್ತಿದೆ. ಈ ಸರ್ವೆ ನಂಬರ್‍ಗಳಲ್ಲಿನ ಜಮೀನುಗಳು ಒತ್ತುವರಿಯಾಗಿವೆ. ಈ ಸಂಬಂಧ ಬೀರನಹಳ್ಳಿ ಗ್ರಾಮದ ನಿವಾಸಿಗಳು ಸೇಡಂ ನ್ಯಾಯಾಲಯದಲ್ಲಿ ಒಟ್ಟು 20 ಮಂದಿ ಭೂ ಕಬಳಿಕೆದಾರರ ವಿರುದ್ಧ ನ್ಯಾಯಾಲಯದಲ್ಲಿ ಅಸಲು ದಾವೆ ಹೂಡಿದ್ದರು. ಆದರೆ ಸೇಡಂ ತಹಶೀಲ್ದಾರ್ ಮತ್ತು ಸಹಾಯಕ ಆಯುಕ್ತರು ನ್ಯಾಯಾಲಯಕ್ಕೆ ಹಾಜರಾಗಿರಲಿಲ್ಲ. ಅಲ್ಲದೇ ಪ್ರತಿವಾದ ಪತ್ರವನ್ನೂ ಹಾಕಿರಲಿಲ್ಲ. ಹೀಗಾಗಿ 20 ಮಂದಿ ಗೋಮಾಳದಲ್ಲಿ ಅನಧಿಕೃತವಾಗಿ ಸಾಗುವಳಿ ಮಾಡುತ್ತಿದ್ದರು ಎಂದು ಕಂದಾಯ ನಿರೀಕ್ಷಕರು ತಮ್ಮ ವರದಿಯಲ್ಲಿ ವಿವರಿಸಿರುವುದು ಗೊತ್ತಾಗಿದೆ.

ಒಟ್ಟು 120 ಎಕರೆ ವಿಸ್ತೀರ್ಣದ ಈ ಜಮೀನು ಜಾನುವಾರುಗಳಿಗೆ ಮೇವಿನ ಸಲುವಾಗಿ ಗೋಮಾಳ ಎಂದು ಕಾಯ್ದಿರಿಸಿತ್ತು. ಸುಮಾರು 70-75 ವರ್ಷಗಳಿಂದಲೂ ಜಾನುವಾರುಗಳಿಗೆಂದೆ ಮೀಸಲಿಟ್ಟಿದೆ. ಸದ್ಯ ಬೇರೊಬ್ಬರು ಅನಧಿಕೃತವಾಗಿ ಒತ್ತುವರಿ ಮಾಡಿದ್ದಾರೆ. ಇದಕ್ಕೆ ಬೀರನಹಳ್ಳಿ ಗ್ರಾಮಸ್ಥರು ತಕರಾರು ಹೂಡಿದ್ದರು. ಅಲ್ಲದೇ 1954ರ ಮೂಲ ದಾಖಲಾತಿ ಪಹಣಿಯನ್ನು ಪರಿಶೀಲಿಸಲಾಯಿತು. ಈ ಪಹಣಿಯಲ್ಲಿ ಬಂಜಾರು ಉಪ್ತಾದ ಸರಕಾರಿ ಎಂದು ನಮೂದಾಗಿದೆ ಎಂದು ಪಂಚನಾಮೆ ವರದಿಯಲ್ಲಿ ಹೇಳಲಾಗಿದೆ.

ಆದರೆ ಕಾಲಂ ನಂ 12ರಲ್ಲಿ ಅಲ್ಲಾಪ ಮೊದಿನ್ನಪ, ಅಮರಪ್ಪ ಸಖರಾಮ ಪಂ, ಎಂದು ಇದೆ. 1968-69ರಲ್ಲಿನ ಪಹಣಿ ಕಾಲಂ 12ರಲ್ಲಿ ಗೋಮಾಳ ಎಂದಿದೆ. ಹೀಗಾಗಿ ಈ ಜಮೀನಿನ ಮೂಲ ಪಟ್ಟೆದಾರರಿಗೂ ಹಾಗೂ ವಾರಸುದಾರರಿಗೂ ಸಂಬಂಧವೇ ಇರುವುದಿಲ್ಲ ಎಂದು ಪಂಚನಾಮೆ ವರದಿಯಲ್ಲಿ ಕಂದಾಯ ನಿರೀಕ್ಷಕರು ಹೇಳಿದ್ದಾರೆ. ಅದೇ ರೀತಿ 1973ರಿಂದ ಯಾವುದೇ ಮ್ಯುಟೇಷನ್ ಅಥವಾ ಪಾವತಿ ಸೇರಿದಂತೆ ವರ್ಗಾವಣೆಯಾದ ದಾಖಲಾತಿಯೂ ಇರುವುದಿಲ್ಲ ಎಂದು ವಿವರಿಸಿದ್ದಾರೆ.

ಹಾಗೆಯೇ ಸರ್ವೇ ನಂಬರ್ 17ನ್ನು 1983ರಲ್ಲಿ ಜಯರಾವ ಎಂಬುವರು 14 ಎಕರೆ, ಶಂಭುಲಿಂಗ ಶಿವಪ್ಪ ನಾಟೀಕರ್ ಎಂಬುವರು 8 ಎಕರೆ ಖರೀದಿ ಮಾಡಿರುವುದನ್ನು ಕಂದಾಯ ನಿರೀಕ್ಷಕರು ಸ್ಥಳ ಪರಿಶೀಲನೆ ವೇಳೆ ಪತ್ತೆ ಹಚ್ಚಿದ್ದರು. ಸರ್ವೆ ನಂಬರ್ 18 ಮತ್ತು 19ರಲ್ಲಿನ ಜಮೀನು ಕೂಡ ಯಾವುದೇ ವರ್ಗಾವಣೆಯಿಲ್ಲದೇ ಪಹಣಿಯಲ್ಲಿ ಹೆಸರು ಕಂಡುಬಂದಿತ್ತು. ಸರ್ವೇ ನಂಬರ್ 20ರ ಪಹಣಿಯಲ್ಲಿ ವಾರಸುದಾರರ ಸಂಬಂಧವಿಲ್ಲದೇ ವರ್ಗಾವಣೆಗೊಂಡಿತ್ತು. ಹೀಗಾಗಿ ಯಾವುದೇ ದಾಖಲೆಗಳು ಇರುವುದಿಲ್ಲ ಎಂದು ವಿವರಿಸಿದೆ.

‘ಸದರಿ ಜಮೀನು ಗೋಮಾಳ ಜಮೀನಾಗಿದ್ದು ಸದರಿ ಮೇಲೆ ವಿವರಿಸಿದ ಸರ್ವೆ ನಂಬರ್ ಮೇಲೆ ಈಗಾಗಲೇ ನ್ಯಾಯಾಲಯದಲ್ಲಿ ದಾವೆ ನಡೆದಿದ್ದು ಕಾರಣ ಸದರಿ ಸರ್ವೆ ನಂಬರ್ ಪಹಣಿಯಲ್ಲಿ ಗೋಮಾಳ ಜಮೀನೆಂದು ನೋಂದಾಯಿಸಲು ಯೋಗ್ಯವಿರುತ್ತದೆ. ಮತ್ತು ಜಮೀನು ಪಡಾ ಇರುತ್ತದೆ. 120 ಎಕರೆ ಪೂರ್ತಿ ಗೋಮಾಳ ಜಾನುವಾರುಗಳಿಗೆ ಮೀಸಲಿಡಲು ಸೂಕ್ತವಿರುತ್ತದೆ ಎಂದು ನಾವು ಪಂಚರು ಅಭಿಪ್ರಾಯಪಟ್ಟೆವು ಎಂದು ಕಂದಾಯ ನಿರೀಕ್ಷಕರು ವರದಿಯಲ್ಲಿ ವಿವರಿಸಿದ್ದರು.

ಕಂದಾಯ ನಿರೀಕ್ಷಕರು ಸ್ಥಳ ಪಂಚನಾಮೆ ವರದಿ ಸಲ್ಲಿಸಿದ್ದರೂ ಸಹ ಸೇಡಂ ತಾಲೂಕಿನ ಹಾಲಿ ತಹಶೀಲ್ದಾರ್ ಅವರು 2026ರಲ್ಲಿ ಈ ಸರ್ವೇ ನಂಬರ್‍ಗಳಲ್ಲಿ ಗೋಮಾಳ ಜಮೀನು ಎಂದು ಕಂಡುಬರುತ್ತಿಲ್ಲ ಎಂದು ವರದಿ ನೀಡಿರುವುದು ಹಲವು ಅನುಮಾನಗಳಿಗೆ ದಾರಿಮಾಡಿಕೊಟ್ಟಿದೆ.
ಈ ಪ್ರಕರಣದಲ್ಲಿ ಸೇಡಂನಲ್ಲಿರುವ ನ್ಯಾಯಾಲಯವು ದೂರುದಾರರ ಅರ್ಜಿಯು ವಿಚಾರಣೆಗೆ ಇನ್ನೂ ಬಾಕಿ ಇದೆ. ಅದರೂ ಸಹ ಈ ಅರ್ಜಿಯನ್ನು ನ್ಯಾಯಾಲಯವು ವಜಾಗೊಳಿಸಿದೆ ಎಂದು ಜಿಲ್ಲಾಧಿಕಾರಿಗೂ ತಪ್ಪು ಮಾಹಿತಿ ನೀಡಿದ್ದರು.
ವೈದ್ಯಕೀಯ ಶಿಕ್ಷಣ ಸಚಿವ ಡಾ ಶರಣ ಪ್ರಕಾಶ ಪಾಟೀಲ್ ಅವರ ದೂರದ ಸಂಬಂಧಿಯೊಬ್ಬರು ಇದೇ ಗೋಮಾಳವನ್ನು ಒತ್ತುವರಿ ಮಾಡಿಕೊಂಡು ಸ್ವಾಧೀನದಲ್ಲಿದ್ದಾರೆ ಎಂಬ ಆರೋಪಗಳು ಸಹ ಕೇಳಿ ಬಂದಿದ್ದವು. ಹೀಗಾಗಿ ಒತ್ತಡಕ್ಕೆ ಮಣಿದಂತಿರುವ ಹಾಲಿ ತಹಶೀಲ್ದಾರ್ ಅವರು, 5 ವರ್ಷಗಳ ಹಿಂದೆ ಗೋಮಾಳ ಇದೆ ಎಂದು ಹಿಂದಿನ ತಹಶೀಲ್ದಾರ್ ಅವರು ನೀಡಿದ್ದ ಹಿಂಬರಹಕ್ಕೆ ಸವಾಲು ಎಸೆದಿದ್ದರು.

120 ಎಕರೆ ವಿಸ್ತಿರ್ಣದ ಗೋಮಾಳ ಪಹಣಿ ದಾಖಲೆಗಳಲ್ಲಿ ಖಾಸಗಿ ವ್ಯಕ್ತಿಗಳ ಹೆಸರುಗಳು ಅನಧಿಕೃತವಾಗಿ ಸೇರ್ಪಡೆಯಾಗಿದೆ. ಹೀಗಿದ್ದರೂ ತಹಶೀಲ್ದಾರ್ ಅನಧಿಕೃತ ವ್ಯಕ್ತಿಗಳ ಹೆಸರುಗಳನ್ನು ತೆಗೆದು ಗೋಮಾಳ ಎಂದು ಪುನರ್ ಸ್ಥಾಪಿಸದೇ ಗೋಮಾಳ ಎಂಬುದು ಕಂಡುಬರುವುದಿಲ್ಲ ಎಂದು ವರದಿ ನೀಡಿರುವುದು ಸಂಶಯಕ್ಕೆ ದಾರಿಮಾಡಿಕೊಟ್ಟಿತ್ತು.
ಅಲ್ಲದೇ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ಸಾರ್ವಜನಿಕ ಜಮೀನುಗಳ ನಿಗಮ ನಿಯಮಿತದಲ್ಲಿಯೂ ದಾಖಲೆಗಳ ಸಮೇತ 2022ರಲ್ಲೇ ದೂರು ಸಲ್ಲಿಕೆಯಾಗಿತ್ತು.

ಈ ದೂರನ್ನು ಸ್ವೀಕರಿಸಿ ಪರಿಶೀಲಿಸಿದ್ದ ಸಾರ್ವಜನಿಕ ನಿಗಮಗಳ ನಿಯಮಿತವು, ಈ ಸಂಬಂಧ ವರದಿ ಸಲ್ಲಿಸಬೇಕು ಎಂದು ಕಲ್ಬುರ್ಗಿ ಜಿಲ್ಲಾಧಿಕಾರಿಗೆ ನಿರ್ದೇಶನ ನೀಡಿತ್ತು. ಈ ಬಗ್ಗೆ 2022, 2023 ಮತ್ತು 2024ರಲ್ಲಿಯೂ ಹಲವು ನೆನಪೋಲೆಗಳನ್ನೂ ಸಹ ಕಳಿಸಿದ್ದರು.


ಆದರೆ ಜಿಲ್ಲಾಧಿಕಾರಿಯು ಇದುವರೆಗೂ ಯಾವುದೇ ವರದಿಯನ್ನು ಸಲ್ಲಿಸಿಲ್ಲ ಎಂದು ತಿಳಿದು ಬಂದಿದೆ.
ಅಲ್ಲದೇ 2025ರ ಮಾರ್ಚ್ 13ರಂದು ಸೇಡಂನ ಉಪ ವಿಭಾಗದ ಸಹಾಯಕ ಆಯುಕ್ತರಿಗೂ ಈ ಬಗ್ಗೆ ದೂರು ಸಲ್ಲಿಕೆಯಕಾಗಿತ್ತು. ಅಲ್ಲದೇ ಈ ಹಗರಣದ ಬಗ್ಗೆ ತನಿಖಾ ತಂಡ ರಚಿಸಬೇಕು ಎಂದು ಶಿವಾನಂದ ವಾಲೀಕಾರ ಅವರು ಕೋರಿದ್ದರು.


120 ಎಕರೆ ಭೂಹಗರಣದ ಹೂರಣ
ಕಲ್ಬುರ್ಗಿ ಜಿಲ್ಲೆ ಸೇಡಂ ತಾಲೂಕಿನ ಬೀರನಹಳ್ಳಿ ಗ್ರಾಮದ ಸರ್ವೆ ನಂಬರ್ 16, 17, 18, 19 ಮತ್ತು 20ರಲ್ಲಿ ಒಟ್ಟು 120 ಎಕರೆ ವಿಸ್ತೀರ್ಣದ ಗೋಮಾಳ ಜಮೀನಿತ್ತು. ಈ ಭಾಗದ ದನ ಕರು ಮೇವಿನ ಸಲುವಾಗಿ ಈ ಜಮೀನುಗಳನ್ನು ಮೀಸಲಿಟ್ಟಿತ್ತು. ಈ ಜಮೀನುಗಳು 1952ರಿಂದ 2024ರವರೆಗೂ ಪಡಾ ಜಮೀನುಗಳಾಗಿದ್ದವು. ಆದರೆ ಈ ಜಮೀನುಗಳಿಗೆ ಯಾವುದೇ ಭದ್ರತೆ ನೀಡದ ಕಾರಣ ಪ್ರಭಾವಿಗಳ ಸಂಪರ್ಕದಲ್ಲಿರುವ ಹಲವು ಮಂದಿ ಒತ್ತುವರಿ ಮಾಡಿಕೊಂಡಿದ್ದರು. ಅಲ್ಲದೇ ಈ ಜಮೀನುಗಳನ್ನು ಮಾರಾಟವನ್ನೂ ಮಾಡಿದ್ದರು.

ಹಾಗೆಯೇ ಈ ಜಮೀನುಗಳನ್ನು ಸಾಗುವಳಿ ಮಾಡಲು ಸೇಡಂನ ತಹಶೀಲ್ದಾರ್ ಮತ್ತು ಸಹಾಯಕ ಆಯುಕ್ತರು ಅವಕಾಶವನ್ನು ಕೊಟ್ಟಿದ್ದರು ಎಂಬ ಆರೋಪ ಕೇಳಿ ಬಂದಿತ್ತು.
ಈ ಸಂಬಂಧ ಶಿವಾನಂದ ವಾಲೀಕರ ಎಂಬುವರು ಆರ್‍ಟಿಐ ಅಡಿ ಮಾಹಿತಿ ಪಡೆದು ಸಮಗ್ರ ದಾಖಲೆಗಳೊಂದಿಗೆ ಕರ್ನಾಟಕ ಸಾರ್ವಜನಿಕ ಜಮೀನುಗಳ ನಿಗಮಕ್ಕೆ ದೂರು ಸಲ್ಲಿಸಿದ್ದರು. ಅಲ್ಲದೇ ಕಲ್ಬುರ್ಗಿಯ ಪ್ರಾದೇಶಿಕ ಆಯುಕ್ತರೂ ಸಹ ವರದಿ ಕೇಳಿ ಕಲ್ಬುರ್ಗಿ ಜಿಲ್ಲಾಧಿಕಾರಿಗೆ ನಿರ್ದೇಶನವನ್ನು ನೀಡಿದ್ದರು. ಆದರೆ ಇದುವರೆಗೂ ಜಿಲ್ಲಾಧಿಕಾರಿಯು ಯಾವುದೇ ವರದಿಯನ್ನು ನೀಡಿಲ್ಲ ಎಂದು ತಿಳಿದು ಬಂದಿದೆ.

ಹಾಗೆಯೇ ಉಮೇಶ್ ಎಂಬುವರು ಸಹ 2024ರಲ್ಲಿ ಇದೇ ಸರ್ವೇ ನಂಬರ್‍ನಲ್ಲಿರುವ ಜಮೀನುಗಳ ಬಗ್ಗೆ ಪಹಣಿ ಕುರಿತಾದ ಹಿಂಬರಹವನ್ನು ಪಡೆದುಕೊಂಡಿದ್ದರು. ಉಮೇಶ್ ಎಂಬುವರಿಗೆ ತಹಶೀಲ್ದಾರ್ ಅವರು ನೀಡಿದ್ದ ಹಿಂಬರಹದದಲ್ಲಿ ಒದಗಿಸಿದ್ದ 1952ರ ಖಾಸರ ಪಹಣಿ ಪ್ರಕಾರ ಬೀರನಹಳ್ಳಿ ಗ್ರಾಮದ ಸರ್ವೇ ನಂಬರ್ 16ರಿಂದ 20ರವರೆಗೆ ಪಹಣಿ ಕಾಲಂ 10ರಲ್ಲಿ ಸರ್ಕಾರಿ ಎಂದು ನಮೂದಾಗಿತ್ತು. ಕಾಲಂ ನಂ 12ರಲ್ಲಿ ಅಲ್ಲಾಪ ಮೊಹದಿನ್ನ ಅಮರಪ್ಪಾ, ಸಖರಾಮ ಪಟವಾರಿ, ರಿಯಾಯಾ ವಗೈರಾ ಎಂದು ನಮೂದಾಗಿರುವುದು ಕಂಡು ಬಂದಿತ್ತು.
2020ರಲ್ಲಿ ಗೋಮಾಳ ಎಂಬ ಹಿಂಬರಹ
ಶಿವಾನಂದ ಎಂ ವಾಲೀಕಾರ ಎಂಬುವರು 2020ರಲ್ಲಿಯೇ ಈ ಸಂಬಂಧ ಆರ್‍ಟಿಐ ಅಡಿ ಮಾಹಿತಿ ಕೋರಿ ಅರ್ಜಿ ಸಲ್ಲಿಸಿದ್ದರು. ಅಂದಿನ ತಹಶೀಲ್ದಾರ್ ಬಸವರಾಜ ಬೆಣ್ಣೆ ಶಿರೂರ ಅವರು 2020ರ ಡಿಸಂಬರ್ 4ರಂದು ಹಿಂಬರಹ ನೀಡಿದ್ದರು. ಈ ಹಿಂಬರಹದ ಪ್ರಕಾರ ಸೇಡಂ ತಾಲೂಕಿನ ಬೀರನಹಳ್ಳಿ ಗ್ರಾಮದ ಸರ್ವೇ ನಂಬರ್ 16,17,18,19,20,22ರಲ್ಲಿನ ಜಮೀನುಗಳು ಗೈರಾಣ, ಗೌಂಠಾಣ, ಸರಕಾರಿ ಗೋಮಾಳ ಜಮೀನುಗಳಾಗಿರುತ್ತವೆ ಎಂದು ಮಾಹಿತಿ ನೀಡಿದ್ದರಲ್ಲದೇ ಅದನ್ನು ದೃಢೀಕರಿಸಿದ್ದರು.

2026ರಲ್ಲಿ ಗೋಮಾಳವೇ ಇಲ್ಲವೆಂದು ವರದಿ
ವಿಶೇಷವೆಂದರೇ 5 ವರ್ಷಗಳ ಹಿಂದೆ ತಹಶೀಲ್ದಾರ್ ನೀಡಿದ್ದ ಹಿಂಬರಹಕ್ಕೆ ವಿರುದ್ಧವಾಗಿ ಹಾಲಿ ಹಾಲಿ ತಹಶೀಲ್ದಾರ್ ಶ್ರಿಯಾಂಕ ಎ ಧನ ಶ್ರೀ ವರದಿ ನೀಡಿದ್ದಾರೆ.. 2026ರ ಫೆ.7ರಂದು ಕಲ್ಬುರ್ಗಿ ಜಿಲ್ಲಾಧಿಕಾರಿಗೆ ನೀಡಿರುವ ವರದಿಯಲ್ಲಿ ಸೇಡಂ ತಾಲೂಕಿನ ಬೀರನಹಳ್ಳಿ ಗ್ರಾಮದ ಸರ್ವೇ ನಂಬರ್ 16,17,18,19,20,22ರಲ್ಲಿನ ಜಮೀನುಗಳ ಕಲಂನಲ್ಲಿ ಗೋಮಾಳ ಎಂದು ಕಂಡು ಬರುವುದಿಲ್ಲ ಎಂದು ವಿವರಿಸಿದ್ದರು.
ಈ ಪ್ರಕರಣದ ಕುರಿತು ದಿ ಫೈಲ್ 2026ರ ಮೇ 6ರಂದು ದಾಖಲೆ ಸಹಿತ ವರದಿ ಪ್ರಕಟಿಸಿತ್ತು.




