Sunday | June 14, 2026 |

ಕೌನ್ಸಲಿಂಗ್‌ಗೂ ಮುನ್ನವೇ ಪಿಡಿಒಗಳ ವರ್ಗಾವಣೆ; ಹಣ ಕೊಟ್ಟವರಿಗೆ ಆದೇಶ, ಕೊಡದವರಿಗೆ ಕೌನ್ಸಲಿಂಗ್, ಆರೋಪ

ಬೆಂಗಳೂರು; ಪಂಚಾಯ್ತಿ ಅಭಿವೃದ್ದಿ ಅಧಿಕಾರಿಗಳ ವರ್ಗಾವಣೆಯನ್ನು ಕೌನ್ಸಲಿಂಗ್‌ ಮೂಲಕವೇ ನಡೆಸಲಾಗುವುದು ಎಂದು ಹೇಳಿಕೆ ನೀಡಿದ್ದ  ರಾಜ್ಯ ಕಾಂಗ್ರೆಸ್‌ ಸರ್ಕಾರವು ಇದೀಗ ಕೌನ್ಸಲಿಂಗ್ ಪ್ರಕ್ರಿಯೆ ಆರಂಭಗೊಳ್ಳುವ ಮುನ್ನವೇ 75 ಪಿಡಿಒ ಮತ್ತು ಕಾರ್ಯದರ್ಶಿ, ಸಹಾಯಕ ಲೆಕ್ಕಾಧಿಕಾರಿ 17 ಮಂದಿ ಸೇರಿದಂತೆ ಒಟ್ಟಾರೆ 92 ಅಧಿಕಾರಿ ಸಿಬ್ಬಂದಿಗಳನ್ನು ವರ್ಗಾವಣೆ ಮಾಡಿದೆ.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್ ಇಲಾಖೆಯು 2026ರ ಮೇ 7ರಂದು ಅಧಿಕೃತ ಜ್ಞಾಪನ ಪತ್ರ ಹೊರಡಿಸಿದೆ. ಇದಕ್ಕೆ  ಕರ್ನಾಟಕ ರಾಜ್ಯ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘವು ಆಕ್ಷೇಪ ವ್ಯಕ್ತಪಡಿಸಿದೆ. ಅಲ್ಲದೇ ದುಡ್ಡು ಕೊಟ್ಟವರಿಗೆ ಇಲಾಖೆಯಿಂದ ವರ್ಗಾವಣೆ, ದುಡ್ಡು ಕೊಡದವರಿಗೆ ಕೌನ್ಸಲಿಂಗ್‌ ವರ್ಗಾವಣೆ ಮಾಡಲಾಗುತ್ತಿದೆ ಎಂಬ ಆರೋಪಕ್ಕೆ ಇಲಾಖೆಯು ಗುರಿಯಾಗಿದೆ.

2024 ಮತ್ತು 2025ರಲ್ಲಿಯೂ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್‌ ರಾಜ್ ಇಲಾಖೆಯು ಕೌನ್ಸಲಿಂಗ್‌ ಪ್ರಕ್ರಿಯೆ ಆರಂಭಗೊಳ್ಳುವ ಮುನ್ನವೇ ವರ್ಗಾವಣೆ ಮಾಡಿತ್ತು. ಈ ಕುರಿತು ‘ದಿ ಫೈಲ್‌’ 2024ರ ಆಗಸ್ಟ್‌ 1ರಂದೇ ವರದಿ ಪ್ರಕಟಿಸಿತ್ತು. ಈ ವರದಿ ಪ್ರಕಟಗೊಂಡ ನಂತರ ಇಲಾಖೆಯು ವರ್ಗಾವಣೆ ಆದೇಶಗಳನ್ನೇ ಹಿಂಪಡೆದುಕೊಂಡಿತ್ತು.

ಆದರೆ 2026ರಲ್ಲಿಯೂ ಸಹ ಇಲಾಖೆಯು ಕೌನ್ಸಲಿಂಗ್‌ ಪ್ರಕ್ರಿಯೆ ಆರಂಭಗೊಳ್ಳುವ ಮುನ್ನವೇ ವರ್ಗಾವಣೆ ಮಾಡಿರುವುದು ಹಲವು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ.

2026ರ ಮೇ 7ರಂದು ಹೊರಡಿಸಿರುವ ಅಧಿಕೃತ ಜ್ಞಾಪನ ಪತ್ರಕ್ಕೆ ಸಚಿವ ಪ್ರಿಯಾಂಕ್ ಖರ್ಗೆ ಅವರು ಅನುಮೋದಿಸಿದ್ದಾರೆ ಎಂದು ತಿಳಿದು ಬಂದಿದೆ. ಈ ಅಧಿಕೃತ ಜ್ಞಾಪನ ಪತ್ರ ಮತ್ತು  ಕರ್ನಾಟಕ ರಾಜ್ಯ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ದಿ ಸಂಘವು ಸಚಿವ ಪ್ರಿಯಾಂಕ್‌ ಖರ್ಗೆ ಅವರಿಗೆ 2026ರ ಮೇ 8ರಂದು ಬರೆದಿರುವ ಪತ್ರದ ಪ್ರತಿಯೂ ‘ದಿ ಫೈಲ್‌’ಗೆ ಲಭ್ಯವಾಗಿದೆ.

ಕೌನ್ಸಲಿಂಗ್‌ ಪ್ರಕ್ರಿಯೆಯು ಆರಂಭವಾಗುವ ಮುನ್ನವೇ 97 ಮಂದಿ ವರ್ಗಾವಣೆ ಮಾಡಿರುವುದರ ಹಿಂದೆ ಶಿಫಾರಸ್ಸು ಮತ್ತು ಪ್ರಭಾವ ದಟ್ಟವಾಗಿ ಬೀರಿದೆ ಎಂದು ಸಂಘವು ಆಪಾದಿಸಿರುವುದು ಪತ್ರದಿಂದ ಗೊತ್ತಾಗಿದೆ.  ದೊಡ್ಡ ಪ್ರಮಾಣದಲ್ಲಿ ವರ್ಗಾವಣೆ ಮಾಡಿದ ಮೇಲೆ ಕೌನ್ಸಲಿಂಗ್‌ ಅವಶ್ಯಕತೆ ಏನು, ದುಡ್ಡು ಕೊಟ್ಟವರಿಗೆ ಇಲಾಖೆಯಿಂದ ವರ್ಗಾವಣೆ, ದುಡ್ಡು ಕೊಡದವರಿಗೆ ಕೌನ್ಸಲಿಂಗ್‌ ಮೂಲಕ ವರ್ಗಾವಣೆ ಎಂದು ಆದೇಶ ಮಾಡಿ ಎಂಬ ಮಾತುಗಳೂ ಸಹ ಕೇಳಿ ಬರುತ್ತಿವೆ.

ಸಂಘವು ನೀಡಿರುವ ದೂರಿನಲ್ಲೇನಿದೆ?

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಯಲ್ಲಿ ಅಧಿಕಾರಿಗಳ ವರ್ಗಾವಣೆ ಪ್ರಕ್ರಿಯೆಯು ನ್ಯಾಯಯುತವಾಗಿ ನಡೆಯುತ್ತಿಲ್ಲ. ಸಮಾನ ಅವಕಾಶಗಳು ಸಿಗುತ್ತಿಲ್ಲ. ಇದನ್ನು ಹೋಗಲಾಡಿಸಲು ಕೌನ್ಸಲಿಂಗ್‌ ಪ್ರಕ್ರಿಯೆ ಆರಂಭಿಸಲಾಗಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಈ ಸಾಲಿನ ವರ್ಗಾವಣೆಗಳನ್ನು ಕೌನ್ಸಲಿಂಗ್‌ಗೂ ಮುನ್ನವೇ ಶಿಫಾರಸ್ಸು ಪತ್ರಗಳು, ಪ್ರಭಾವ ಹಾಗೂ ಆಧಾರರಹಿತ ದೂರುಗಳ ಆಧಾರದ ಮೇಲೆ ವರ್ಗಾವಣೆ ಪಟ್ಟಿ ಸಿದ್ಧಪಡಿಸಿದೆ ಎಂಬ ಆತಂಕವು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ವಲಯದಲ್ಲಿ ವ್ಯಕ್ತವಾಗುತ್ತಿದೆ ಎಂದು ಸಂಘವು ಕಳವಳ ವ್ಯಕ್ತಪಡಿಸಿರುವುದು ದೂರಿನಿಂದ  ಗೊತ್ತಾಗಿದೆ.

 

 

ಅಲ್ಲದೇ ಪಂಚಾಯತ್‌ ಅಭಿವೃದ್ಧಿ ಅಧಿಕಾರಿಗಳ ವಿರುದ್ಧ ಯಾವುದೇ ರೀತಿಯಾದ ಸಾಬೀತಾದ ಆರೋಪಗಳು ಮತ್ತು ಇಲಾಖಾತ್ಮಕ ದೋಷಗಳು ಇಲ್ಲ. ಕೆಲವು ವೈಯಕ್ತಿಕ ದೂರುಗಳು, ಒತ್ತಡಗಳು ಹಾಗೂ ಶಿಫಾರಸ್ಸು ಪತ್ರಗಳ ಆಧಾರದ ಮೇಲೆ ವರ್ಗಾವಣೆ ಮಾಡುವ ಪ್ರಯತ್ನಗಳು ನಡೆಯುತ್ತಿವೆ. ಇದರಿಂದ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿಗಳ ಮಾನಸಿಕ ಸ್ಥೈರ್ಯ ಕುಂದಲಿದೆ. ಅಲ್ಲದೆ ಇಲಾಖೆಯ ಮೇಲಿನ ವಿಶ್ವಾಸಕ್ಕೂ ಧಕ್ಕೆಯಾಗುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅಳಲು ವ್ಯಕ್ತಪಡಿಸಿರುವುದು ದೂರಿನಿಂದ ತಿಳಿದು ಬಂದಿದೆ.

 

 

ಕೌನ್ಸಲಿಂಗ್ ವ್ಯವಸ್ಥೆ ಬಿಟ್ಟು ಶಿಫಾರಸ್ಸು ಹಾಗೂ ದೂರು ಆಧರಿತ ರೀತಿಯಲ್ಲಿ ವರ್ಗಾವಣೆ ಮಾಡಿರುವುದು ನ್ಯಾಯ ಸಮ್ಮತವಲ್ಲ. ಹೀಗಾಗಿ ಪಿಡಿಒಗಳ ವರ್ಗಾವಣೆಯನ್ನು ಕಡ್ಡಾಯವಾಗಿ ಕೌನ್ಸಲಿಂಗ್ ಮೂಲಕವೇ ನಡೆಸಬೇಕು. ಶಿಫಾರಸ್ಸು ಪತ್ರಗಳು, ರಾಜಕೀಯ, ವೈಯಕ್ತಿಕ ಒತ್ತಡಗಳು ಹಾಗೂ ಆಧಾರ ರಹಿತ ದೂರುಗಳ ಆಧಾರದ ಮೇಲೆ ವರ್ಗಾವಣೆ ಮಾಡುವ ಕ್ರಮಗಳನ್ನು ತಡೆಗಟ್ಟಬೇಕು ಎಂದು ದೂರಿನಲ್ಲಿ ಸಂಘವು ಒತ್ತಾಯಿಸಿದೆ.

2026ರ ಮೇ 7ರಂದು ಗ್ರಾಮ ಪಂಚಾಯತ್‌ ಕಾರ್ಯದರ್ಶಿ, ಗ್ರಾಮೀಣಾಭಿವೃದ್ಧಿ ಸಹಾಯಕ (ಗ್ರೇಡ್ 1- ಮತ್ತು 2) ದ್ವಿತೀಯ ದರ್ಜೆ ಲೆಕ್ಕ ಸಹಾಯಕರ ವರ್ಗಾವಣೆ ಮಾಡಿರುವ ಇಲಾಖೆಯು ಪ್ರತ್ಯೇಕವಾಗಿ 2 ಅಧಿಕೃತ ಜ್ಞಾಪನ ಪತ್ರಗಳನ್ನು ಹೊರಡಿಸಿದೆ.

 

ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳ ವರ್ಗಾವಣೆಯನ್ನು ಪಾರದರ್ಶಕವಾಗಿ ಕೌನ್ಸೆಲಿಂಗ್ ಮೂಲಕ ನಡೆಸುವ ಪ್ರಕ್ರಿಯೆಗೆ 2025ರಲ್ಲಿ  ಚಾಲನೆ ನೀಡಿದ್ದ ಸಚಿವ ಪ್ರಿಯಾಂಕ್ ಖರ್ಗೆ ಅವರು   ‘ಇದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್‌ ಇಲಾಖೆಯ ಪುಟಗಳಲ್ಲಿ ಚರಿತ್ರಾರ್ಹ ದಿನವಾಗಿದೆ,’ ಎಂದು ಬಣ್ಣಿಸಿದ್ದರು.
ಗ್ರಾಮ ಪಂಚಾಯತಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳ ಪ್ರಮುಖ ಬೇಡಿಕೆಯಂತೆ ಕೌನ್ಸಿಲಿಂಗ್ ವರ್ಗಾವಣೆಗಳನ್ನು ಜಾರಿಗೆ ತರಲಾಗಿದ್ದು, ಪಿಡಿಒಗಳು ಗ್ರಾಮಗಳ ಅಭಿವೃದ್ಧಿಗೆ ಆದ್ಯತೆ ನೀಡಿ ಕಾರ್ಯನಿರ್ವಹಿಸುವಲ್ಲಿ ಕಂಕಣಬದ್ಧರಾಗಬೇಕಾಗಿದೆ.  ತಮ್ಮ ಇಚ್ಛೆಗೆ ಅನುಸಾರವಾಗಿ ವರ್ಗಾವಣೆಗಳನ್ನು ಸ್ವಯಂ ನಿರ್ಧರಿಸುವ ಅವಕಾಶವನ್ನು ಕಲ್ಪಿಸಿಕೊಡುವ ಮೂಲಕ ಇಲಾಖೆಯಲ್ಲಿ ಮಹತ್ತರ ಬದಲಾವಣೆ ತರಲಾಗಿದೆ. ಸ್ಥಳೀಯ ಸರ್ಕಾರಗಳಾಗಿ ಕೆಲಸ ಮಾಡುತ್ತಿರುವ ಪಂಚಾಯತ್ ವ್ಯವಸ್ಥೆಯನ್ನು ಸದೃಢಗೊಳಿಸಲು ಪಿಡಿಒಗಳು ಪಣತೊಡಬೇಕು. ನೌಕರರು ಹೊಂದಾಣಿಕೆ ಮಾಡಿಕೊಂಡಲ್ಲಿ ಪಿಡಿಒಗಳ ಜೇಷ್ಠತಾ ಪಟ್ಟಿಯನ್ನು ಅಂತಿಮಗೊಳಿಸಿ ಬೇಡಿಕೆಯನ್ನು ಈಡೇರಿಸಲಾಗುವುದು ಎಂದು ಹೇಳಿಕೆ ನೀಡಿದ್ದರು.
ಸೆಪ್ಟೆಂಬರ್ 08ರವರೆಗೆ ವಿಶೇಷ ಪ್ರಕರಣಗಳ ಮೊದಲ ಸುತ್ತಿನ ಕೌನ್ಸಿಲಿಂಗ್ ಆರಂಭಗೊಂಡಿದ್ದು, ಸೆಪ್ಟೆಂಬರ್ 10ರಿಂದ ಸೆಪ್ಟೆಂಬರ್ 20 ರವರೆಗೆ ಕಡ್ಡಾಯ ವರ್ಗಾವಣೆ ಕೌನ್ಸಿಲಿಂಗ್ ಮತ್ತು ಸೆಪ್ಟೆಂಬರ್ 23 ಹಾಗೂ 24ರಂದು ಸಾಮಾನ್ಯ ಕೋರಿಕೆ ವರ್ಗಾವಣೆಗಳ ಕೌನ್ಸಿಲಿಂಗ್ ಪ್ರಕ್ರಿಯೆಗಳು ಜರುಗಿಲಾಗಿದೆ.  ಪ್ರಸಕ್ತ ಸಾಲಿನಲ್ಲಿ ಒಂದು ಬಾರಿಗೆ ಅನ್ವಯಿಸುವಂತೆ ಒಂದೇ ಸ್ಥಳದಲ್ಲಿ 5 ವರ್ಷಕ್ಕಿಂತ ಹೆಚ್ಚು ಸೇವೆ ಸಲ್ಲಿಸಿದ ಎಲ್ಲಾ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳನ್ನು ಕೌನ್ಸಿಲಿಂಗ್ ಮೂಲಕ ವರ್ಗಾವಣೆಗೊಳಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಅವರು ಸಾಮಾಜಿಕ ಜಾಲತಾಣದಲ್ಲಿ  ವಿವರಿಸಿದ್ದರು.
2024ರ ಆಗಸ್ಟ್‌ 1ರಂದು ಕೆಂಪೇಗೌಡ ರಸ್ತೆಯಲ್ಲಿರುವ ಪಂಚಾಯತ್‌ರಾಜ್‌ ಅಧಿಕಾರಿಗಳು, ಸಚಿವರ ಕಚೇರಿ ಸಿಬ್ಬಂದಿಗಳು ಸಂಜೆಯಿಂದಲೂ ಆಯುಕ್ತಾಲಯದ ಕಚೇರಿಯಲ್ಲೇ ಮೊಕ್ಕಾಂ ಹೂಡಿದ್ದಾರೆ. ರಾತ್ರಿ ಒಂಬತ್ತಾದರೂ ಆಯುಕ್ತಾಲಯದ ಕಚೇರಿಯಲ್ಲೇ ಬೀಡುಬಿಟ್ಟು  ಗುಪ್ತವಾಗಿ ವರ್ಗಾವಣೆ ಪ್ರಕ್ರಿಯೆ  ನಡೆಸಿದ್ದರು.

ಆದೇಶ ಉಲ್ಲಂಘನೆ!; ಕೌನ್ಸಿಲಿಂಗ್ ಇಲ್ಲದೆಯೇ ಪಿಡಿಒಗಳ ವರ್ಗಾವಣೆ, ಲಕ್ಷಾಂತರ ರು ಲಂಚ ಆರೋಪ

 

ವರ್ಗಾವಣೆ ಮತ್ತು ನಿಯೋಜನೆ ಮಾಡಲು ತಂತ್ರಾಂಶದಲ್ಲಿ ಅವಕಾಶ ಕಲ್ಪಿಸಲಾಗಿದೆ. ಈ ಸಂಬಂಧ ಇಲಾಖೆಯಲ್ಲಿ ಕಳೆದ ಕೆಲ ದಿನಗಳ ಹಿಂದೆಯೇ ಹಲವು ಪೂರ್ವಭಾವಿ ಸಭೆ ನಡೆಸಿ, ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಆದರೂ ಆಯುಕ್ತಾಲಯದ ಅಧಿಕಾರಿಗಳು, ಸಚಿವರ ಕಚೇರಿಯ ಕೆಲ ಅಧಿಕಾರಿಗಳು, ಮಧ್ಯವರ್ತಿಗಳ ಸಮ್ಮುಖದಲ್ಲಿ ಮ್ಯಾನ್ಯುಯಲ್‌ ಮೂಲಕ ವರ್ಗಾವಣೆ ಮಾಡಿತ್ತು.  ಪಿಡಿಓ, ಪಂಚಾಯತ್ ಕಾರ್ಯದರ್ಶಿಗಳು ಇತರೆ ಪಂಚಾಯಿತಿ ಸರ್ಕಾರಿ ಅಧಿಕಾರಿಗಳು, ನೌಕರರನ್ನು ಕೌನ್ಸಿಲಿಂಗ್ ಮುಖಾಂತರ ವರ್ಗಾವಣೆ ಮಾಡಲಾಗುವುದು ಎಂದು ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಯು 2024ರ ಜೂನ್‌ 25ರಂದೇ ಆದೇಶ ಹೊರಡಿಸಿತ್ತು.

 

 

 

 

 

ಆದರೆ ಇದೀಗ ಇಲಾಖೆಯು ಒಂದು ತಿಂಗಳ ಹಿಂದೆಯೆ ಹೊರಡಿಸಿದ್ದ ಆದೇಶವನ್ನೇ ಉಲ್ಲಂಘಿಸಿ ಪಿಡಿಓಗಳಿಂದ ಲಕ್ಷಾಂತರ ರುಪಾಯಿ ವಸೂಲು ಮಾಡಿ  ಮ್ಯಾನ್ಯುಯಲ್‌ ಮೂಲಕ ವರ್ಗಾವಣೆ ಮಾಡಿತ್ತು ಎಂಬ ಆರೋಪ ಕೇಳಿ ಬಂದಿತ್ತು.  ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆ ವ್ಯಾಪ್ತಿಯಲ್ಲಿನ ಪಂಚಾಯ್ತಿ ಅಭಿವೃದ್ದಿ ಅಧಿಕಾರಿಗಳ ವರ್ಗಾವಣೆಗೆ ತಲಾ 10ರಿಂದ 20 ಲಕ್ಷ ರು. ಲಂಚ ಪಡೆಯಲಾಗುತ್ತಿದೆ. ಉಳಿದ ಹುದ್ದೆಗಳಿಗೆ ಆಯಾ ಸ್ಥಳಗಳಿಗೆ ಅನುಗುಣವಾಗಿ 2 ರಿಂದ 5 ಲಕ್ಷ ರು.ವರೆಗೂ ಲಂಚ ನಿಗದಿಯಾಗಿದೆ ಎಂಬ ಆಪಾದನೆ ಕೇಳಿ ಬಂದಿತ್ತು.

ಹುದ್ದೆ ನಿರೀಕ್ಷಣೆಯಲ್ಲಿದ್ದ  ಪಿಡಿಒ ಸೇರಿದಂತೆ ಇಲಾಖೆಯ ಮತ್ತಿತರ ಅಧಿಕಾರಿ ನೌಕರರನ್ನೂ ಮ್ಯಾನುಯಲ್‌ ಮೂಲಕ ವರ್ಗಾವಣೆ ಮಾಡಲಾಗಿತ್ತು.  ಈ ಎಲ್ಲಾ ಪ್ರಕ್ರಿಯೆಗಳಲ್ಲಿ ಮಧ್ಯವರ್ತಿಗಳ ಮೂಲಕ ಸಚಿವ ಪ್ರಿಯಾಂಕ್‌ ಖರ್ಗೆ ಅವರ ಕಚೇರಿಯ ಪ್ರಭಾವಿ ಅಧಿಕಾರಿಗಳು, ಆಪ್ತ ಸಹಾಯಕರು, ವಿಶೇಷ ಕರ್ತವ್ಯಾಧಿಕಾರಿಗಳು ತರಾತುರಿಯಲ್ಲಿ ವರ್ಗಾವಣೆ ಪ್ರಕ್ರಿಯೆ ನಡೆಸುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದ್ದವು.

Hot this week

ಮಾನ್ಸೂನ್ ಅಧಿವೇಶನವೋ, ವಿಸ್ತರಿಸಿದ ಅಧಿವೇಶನವೋ: ಸಚಿವ ಸಂಪುಟ ಮಾರ್ಗದರ್ಶನ ಕೋರಿದ ಸಂಸದೀಯ ಇಲಾಖೆ

ಬೆಂಗಳೂರು; ಕರ್ನಾಟಕ ವಿಧಾನಸಭೆ ಮತ್ತು ಕರ್ನಾಟಕ ವಿಧಾನ ಪರಿಷತ್ತಿನ ಅಧಿವೇಶನ ಅನಿರ್ದಿಷ್ಟಾವಧಿಗೆ...

ಆರ್ಥಿಕ ಬಿಕ್ಕಟ್ಟು; ಶಿಕ್ಷಕರ ನೇಮಕಾತಿ, ವೃತ್ತಿಪರತೆ ಅಭಿವೃದ್ಧಿ ವೆಚ್ಚಕ್ಕೆ ತಡೆಹಿಡಿದಿತ್ತೇ ಸರ್ಕಾರ?

ಬೆಂಗಳೂರು; ರಾಜ್ಯದ ಹೆಚ್ಚಿನ ಸರ್ಕಾರಿ ಶಾಲೆಗಳು ಆರ್‍‌ಟಿಇ ಕಾಯ್ದೆಯು ಭೌತಿಕ ಮೂಲಸೌಕರ್ಯಗಳು...
Please Scan to make Your Contribution

Topics

ಮಾನ್ಸೂನ್ ಅಧಿವೇಶನವೋ, ವಿಸ್ತರಿಸಿದ ಅಧಿವೇಶನವೋ: ಸಚಿವ ಸಂಪುಟ ಮಾರ್ಗದರ್ಶನ ಕೋರಿದ ಸಂಸದೀಯ ಇಲಾಖೆ

ಬೆಂಗಳೂರು; ಕರ್ನಾಟಕ ವಿಧಾನಸಭೆ ಮತ್ತು ಕರ್ನಾಟಕ ವಿಧಾನ ಪರಿಷತ್ತಿನ ಅಧಿವೇಶನ ಅನಿರ್ದಿಷ್ಟಾವಧಿಗೆ...

ಆರ್ಥಿಕ ಬಿಕ್ಕಟ್ಟು; ಶಿಕ್ಷಕರ ನೇಮಕಾತಿ, ವೃತ್ತಿಪರತೆ ಅಭಿವೃದ್ಧಿ ವೆಚ್ಚಕ್ಕೆ ತಡೆಹಿಡಿದಿತ್ತೇ ಸರ್ಕಾರ?

ಬೆಂಗಳೂರು; ರಾಜ್ಯದ ಹೆಚ್ಚಿನ ಸರ್ಕಾರಿ ಶಾಲೆಗಳು ಆರ್‍‌ಟಿಇ ಕಾಯ್ದೆಯು ಭೌತಿಕ ಮೂಲಸೌಕರ್ಯಗಳು...

ಕಸ ವಿಲೇವಾರಿ ಟೆಂಡರ್‍‌ನಲ್ಲಿ ಅಕ್ರಮ; 10,000 ಕೋಟಿ ಕಿಕ್‌ ಬ್ಯಾಕ್‌ ಆರೋಪ, ಹೈಕಮಾಂಡ್ ಕಪ್ಪದ ಟೆಂಡರ್, ರಾಜ್ಯಪಾಲರಿಗೆ ದೂರು, ದಿ ಫೈಲ್ ವರದಿ ಬೆನ್ನಲ್ಲೇ ತುಟಿ ಬಿಚ್ಚಿದ ಆರ್ ಅಶೋಕ್

ಬೆಂಗಳೂರು; ಸಮಗ್ರ ಘನತ್ಯಾಜ್ಯ ವಿಲೇವಾರಿಗೆ ಸಂಬಂಧಿಸಿದಂತೆ ಬಿಎಸ್‌ಡಬ್ಲ್ಯೂಎಂಎಲ್‌ ಯೋಜಿಸಿದ್ದ ಟೆಂಡರ್ ಪ್ಯಾಕೇಜ್‌ಗಳಲ್ಲಿ...

Related Articles

Popular Categories

error: Content is protected !!