ಬೆಂಗಳೂರು; ಗ್ರೇಟರ್‌ಬೆಂಗಳೂರು ಪ್ರದೇಶ ವ್ಯಾಪ್ತಿಯಲ್ಲಿನ ಹೆಬ್ಬಾಳ (ಎಸ್ಟಿಮ್‌ಮಾಲ್) ಜಂಕ್ಷನ್‌ನಿಂದ ಹೆಚ್.ಎಸ್.ಆರ್ ಲೇಔಟ್ ಸಿಲ್ಕ್‌ಬೋರ್ಡ್ ಜಂಕ್ಷನ್‌ವರೆಗೆ ಸುರಂಗ ಮಾರ್ಗದ ಉತ್ತರ-ದಕ್ಷಿಣ ಕಾರಿಡಾರ್ ಪ್ಯಾಕೇಜ್-1 ಮತ್ತು 2 ರ ಕಾಮಗಾರಿಗಳಿಗೆ ಕರೆಯಲಾಗಿರುವ ಒಟ್ಟು ಮೊತ್ತಕ್ಕೆ ರಿಯಾಯಿತಿ ಮೌಲ್ಯ ಹೆಚ್ಚಳ ಮಾಡಲು ನಗರಾಭಿವೃದ್ಧಿ ಇಲಾಖೆಯು ಸಚಿವ ಸಂಪುಟದ ಅನುಮೋದನೆ ಕೋರಲು ನಗರಾಭಿವೃದ್ಧಿ ಇಲಾಖೆಯು ಮುಂದಾಗಿದೆ.
ಈ ಯೋಜನೆ ಕಾಮಗಾರಿ ಪಡೆದುಕೊಂಡಿರುವ ಎಲ್ 1 ಬಿಡ್‌ದಾರರಾದ ಅದಾನಿ ಎಂಟರ್ ಪ್ರೈಸೆಸ್‌ಗೆ ಗುತ್ತಿಗೆ ಅವಧಿಯನ್ನೇ 10 ವರ್ಷಕ್ಕೆ ವಿಸ್ತರಿಸಲು ಪ್ರಸ್ತಾವಿಸಿದೆ. ವಾಹನ ಸಂಚಾರ ದಟ್ಟಣೆಯು ಹೆಚ್ಚುವರಿಯಾದ್ದಲ್ಲಿ 30 ವರ್ಷಗಳ ಅವಧಿಯನ್ನು ಪೂರ್ಣಗೊಳಿಸುವ ಮುನ್ನವೇ ಇನ್ನೂ 10 ವರ್ಷ ಅವಧಿಗೆ ವಿಸ್ತರಣೆಗೆ ಪ್ರಸ್ತಾಪಿಸಿದೆ. ಅದು ಹೇಗೆಂದರೇ ಒಂದು ವೇಳೆ ಸಂಚಾರ ದಟ್ಟಣೆಯು ಕಡಿಮೆ ಆದರೂ ಸಹ ಗರಿಷ್ಠ 40 ವರ್ಷಗಳ ಅವಧಿಗೆ ಗುತ್ತಿಗೆಯನ್ನು ಸಿಮೀತಗೊಳಿಸುವ ಮಾದರಿ ಪರಿಚಯಿಸಲಿದೆ. ಅದಾನಿ ಎಂಟರ್ ಪ್ರೈಸೆಸ್‌ಗೆ ಅನುಕೂಲ ಮಾಡಿಕೊಡಲೆಂದೇ ರೂಪಿಸಲಾಗಿದೆ ಎಂದು ಹೇಳಲಾಗಿರುವ ಈ ಪ್ಯಾಕೇಜ್‌ಗಳಿಗೆ ಅನುಮೋದನೆಗೆ ಪ್ರಸ್ತಾವ ಸಲ್ಲಿಸಲು ನಗರಾಭಿವೃದ್ಧಿ ಇಲಾಖೆಯು ಭರದಿಂದ ಸಿದ್ಧತೆ ನಡೆಸಿದೆ.
ಅಲ್ಲದೇ ಪ್ರಸ್ತುತ ಪಶ್ಚಿಮ ಏಷ್ಯಾದ ಯುದ್ಧದ ಪರಿಸ್ಥಿತಿ ಮತ್ತು ಜಾಗತಿಕ ಮಟ್ಟದಲ್ಲಿನ ಪ್ರೈಸ್ ಇಂಡೆಕ್ಸ್‌ನಲ್ಲಿ ಏರಿಕೆ, ಯುರೋ ದರ ಏರಿಕೆ ಹಾಗೂ ಇತರೆ ಬೆಲೆಗಳು ಏರಿಕೆಯಾಗಿರುವ ಕಾರಣ ಮರು ಟೆಂಡರ್ ಕರೆಯದಿರಲು ಇಲಾಖೆಯು ನಿರ್ಧರಿಸಿದೆ. ಮರು ಟೆಂಡರ್ ಕರೆದಲ್ಲಿ ಅಂದಾಜು ಮೊತ್ತವು ಪುನಃ ಪರಿಷ್ಕರಣೆಯಾಗಲಿದೆ. ಇದರಿಂದ ಯೋಜನಾ ಮೊತ್ತವೂ ಹೆಚ್ಚಾಗುವ ಸಾಧ್ಯತೆ ಇದೆ ಎಂದು ನಗರಾಭಿವೃದ್ಧಿ ಇಲಾಖೆಯು ಸಚಿವ ಸಂಪುಟದ ಮುಂದೆ ಪ್ರತಿಪಾದಿಸಲು ಮುಂದಾಗಿದೆ.
ಈ ಯೋಜನೆಗೆ ಸಂಬಂಧಿಸಿದಂತೆ ನಗರಾಭಿವೃದ್ಧಿ ಇಲಾಖೆಯು ಸಚಿವ ಸಂಪುಟಕ್ಕೆ ಸಲ್ಲಿಸಿರುವ ಸಮಗ್ರ ಕಡತವು (ನ ಅ ಇ 396/ಎಂಎನ್‌ವೈ 2026) ದಿ ಫೈಲ್ ಗೆ ಲಭ್ಯವಾಗಿದೆ.
ಹಾಗೆಯೇ ದರಗಳನ್ನು ಪ್ರಸ್ತುತ ಮಾರುಕಟ್ಟೆ ಮೌಲ್ಯಕ್ಕೆ ಪರಿಷ್ಕರಣೆ ಮತ್ತು ಕೆಲವು ಅಂಶಗಳನ್ನು ಮಾರ್ಪಾಟು ಮಾಡಬೇಕಾಗಿದೆ. ಹೀಗಾಗಿ ಅಂದಾಜು ವೆಚ್ಚವು ಸುಮಾರು ಶೇ.40ರಿಂದ 45ಕ್ಕೆ ಹೆಚ್ಚಾಗುವ ಸಾಧ್ಯತೆ ಇದೆ. ಈ ಹಂತದಲ್ಲಿ ಮರು ಟೆಂಡರ್ ಆಗುವ ಸಂದರ್ಭದಲ್ಲಿ ವಿಜಿಎಫ್ ಮೊತ್ತವೂ ಸಹ ಅನುಗುಣವಾಗಿ ಹೆಚ್ಚಾಗಲಿದೆ. ಇದು ಸರ್ಕಾರಕ್ಕೆ ಹೆಚ್ಚುವರಿ ಆರ್ಥಿಕ ಪರಿಣಾಮಗಳನ್ನು ಉಂಟು ಮಾಡುತ್ತದೆ ಎಂಬ ಕಾರಣವನ್ನು ಮುಂದಿರಿಸಿರುವ ಇಲಾಖೆಯು ಮರು ಟೆಂಡರ್ ಕರೆಯದೇ ಇರುವುದಕ್ಕೆ ಸಮರ್ಥನೆ ನೀಡಿರುವುದು ಸಚಿವ ಸಂಪುಟದ ರಹಸ್ಯ ಹಾಳೆಗಳಿಂದ ತಿಳಿದು ಬಂದಿದೆ.
ಹೀಗಾಗಿ ವಿಜಿಎಫ್ ಮೊತ್ತದ ಹೆಚ್ಚಳ ಮತ್ತು ಸರ್ಕಾರದ ಮೇಲೆ ಹೆಚ್ಚುವರಿ ಆರ್ಥಿಕ ಹೊರೆಯನ್ನು ತಪ್ಪಿಸಲು ಒಟ್ಟು ರಿಯಾಯಿತಿ ಮೌಲ್ಯದ ಹೆಚ್ಚಳವನ್ನು ಪರಿಗಣಿಸಬಹುದು ಎಂದು ಅಭಿಪ್ರಾಯಪಟ್ಟಿರುವುದು ಗೊತ್ತಾಗಿದೆ.
ಗ್ರೇಟರ್‌ಬೆಂಗಳೂರು ಪ್ರದೇಶ(ಹಿಂದಿನ ಬಿಬಿಎಂಪಿ) ವ್ಯಾಪ್ತಿಯಲ್ಲಿನ ಹೆಬ್ಬಾಳ (ಎಸ್ಟಿಮ್‌ಮಾಲ್) ಜಂಕ್ಷನ್‌ನಿಂದ ಹೆಚ್.ಎಸ್.ಆರ್‌ಲೇಔಟ್‌ಸಿಲ್ಕ್‌ಬೋರ್ಡ್ ಜಂಕ್ಷನ್‌ವರೆಗೆ ಉತ್ತರ-ದಕ್ಷಿಣ ಕಾರಿಡಾರ್ ಯೋಜನೆಗೆ ಮುಖ್ಯ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ನಡೆದಿದ್ದ ಪಿಪಿಪಿ ಯೋಜನೆಗಳ 34ನೇ ರಾಜ್ಯಮಟ್ಟದ ಏಕ ಗವಾಕ್ಷಿ ಸಮಿತಿಯ ಸಭೆಯು 2025ರ ಆಗಸ್ಟ್ 6ರಂದೇ ಅನುಮೋದನೆ ನೀಡಿದೆ.
ಈ ಯೋಜನೆಗೆ ತಯಾರಿಸಲಾಗಿದ್ದ ಡಿಪಿಆರ್‌ಹಾಗೂ ಅಂದಾಜು ಪಟ್ಟಿಗಳಿಗೆ ಅನುಮೋದನೆ ಕೋರಿ (ಪ್ರಕರಣ ಸಂಖ್ಯೆ: ಸಿ:357/2025) ಸಚಿವ ಸಂಪುಟದ ಮುಂದೆ ಮಂಡಿಸಿತ್ತು. 2025ರ ಜೂನ್ 5ರಂದು ನಡೆದಿದ್ದ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ನಿರ್ಣಯವನ್ನೂ ಕೈಗೊಳ್ಳಲಾಗಿತ್ತು.
ಈ ನಿರ್ಣಯದ ಪ್ರಕಾರ ಹೆಬ್ಬಾಳ (ಎಸ್ಟಿಮ್‌ಮಾಲ್) ಜಂಕ್ಷನ್‌ನಿಂದ ಹೆಚ್.ಎಸ್.ಆರ್ ಲೇಔಟ್ ಸಿಲ್ಕ್‌ಬೋರ್ಡ್ ಜಂಕ್ಷನ್‌ವರೆಗೆ ತ್ರಿಪಥದ ಸುರಂಗ ಮಾರ್ಗ ಯೋಜನೆಗೆ ಅಂದಾಜು ಮೊತ್ತ ರೂ.17,780.13 ಕೋಟಿಗಳಿಗೆ (ಸರ್ಕಾರದ ಆದೇಶ ಸಂಖ್ಯೆ: ನಅಇ 82 ಎಂಎನ್‌ವೈ 2025 (ಇ), ದಿನಾಂಕ: 09-06-2025) ಆಡಳಿತಾತ್ಮಕ ಅನುಮೋದನೆ ನೀಡಿತ್ತು.
ಇದರಲ್ಲಿ ಪ್ಯಾಕೇಜ್-1 (ಉತ್ತರ) ರೂ 8814.78 ಕೋಟಿ ರು (ಉದ್ದ 8.75km) ಮತ್ತು ಪ್ಯಾಕೇಜ್-2 (ದಕ್ಷಿಣ) ರೂ 8, 965.35 ಕೋಟಿಗಳು (ಉದ್ದ 8.00km) ಎಂದು ಎರಡು ಪ್ಯಾಕೇಜ್‌ಗಳ ಅಡಿಯಲ್ಲಿ ಪ್ರತ್ಯೇಕವಾಗಿಸಿತ್ತು. ಇದು ಶೇ.40ರಷ್ಟರ ವಿ.ಜಿ.ಎಫ್ ಆಧಾರದಲ್ಲಿ ಸುಧಾರಿತ ಬಿ.ಓ.ಓ.ಟಿ (BOOT) ಮಾದರಿಯಲ್ಲಿ Global Tender ಆಹ್ವಾನಿಸಿ ಅನುಷ್ಠಾನಗೊಳಿಸಲು ಆದೇಶಿಸಿತ್ತು.
ಬೆಂಗಳೂರು ಸ್ಮಾರ್ಟ್ ಇನ್ಫ್ರಾಸ್ಟ್ರಕ್ಚರ್‌ನ ವ್ಯವಸ್ಥಾಪಕ ನಿರ್ದೇಶಕರು, ವಾಹನ ಸುರಂಗ ಮಾರ್ಗ ನಿರ್ಮಿಸುವ ಸಂಬಂಧ ನೂತನ ಸೇರ್ಪಡೆ/ ಮಾರ್ಪಾಟು ಹೊಂದಿದ ಟೆಂಡರ್ ದಸ್ತಾವೇಜುಗಳಾದ ಆರ್.ಎಫ್.ಪಿ. ದಸ್ತಾವೇಜು, ರಿಯಾಯತಿ ಕರಾರು ಒಪ್ಪಂದ ಮತ್ತು ಷೆಡ್ಯೂಲ್ ದಸ್ತಾವೇಜುಗಳನ್ನು 2025ರ ಜುಲೈ 11ರಂದು ಪ್ರಸ್ತಾಪಿಸಿದ್ದರು.
ಈ ಮಾರ್ಪಾಡುಗಳನ್ನು ಪರಿಶೀಲಿಸಿದ್ದ ಆರ್ಥಿಕ ಇಲಾಖೆಯು ‘ಟಿಬಿಎಂ ಕಾರ್ಯಾಚರಣೆಗೆ ತಾಂತ್ರಿಕವಾಗಿ ಅಗತ್ಯವಿರುವ ಪ್ರಮಾಣಕ್ಕಿಂತ ಹೆಚ್ಚಿನ ಭೂ ಸ್ವಾಧೀನವನ್ನು ಇಂಟರ್ ಮೋಡಲ್ ಹಬ್‌ಗಳಲ್ಲಿ ಕೈಗೊಳ್ಳಲಾಗಿಲ್ಲ. ಜೊತೆಗೆ ಸ್ಪರ್ಧಾತ್ಮಕ ಹಾಗೂ ಅರ್ಹ ಬಿಡ್‌ಗಳನ್ನು ಉತ್ತೇಜಿಸುವ ಉದ್ದೇಶದಿಂದ ಘೋಷಿತೆಲ್ಲಾ ಸಹಭಾಗಿಗಳು, ಒಕ್ಕೂಟ (ಕನ್ಸೊರ್ಟಿಯಂ) ಸದಸ್ಯರ ಹಣಕಾಸು ಸಾಮರ್ಥ್ಯ ಮತ್ತು ತಾಂತ್ರಿಕ ಅರ್ಹತೆಗಳ ಕಟ್ಟುನಿಟ್ಟಿನ ಪರಿಶೀಲನೆಗೆ ರೂಪಿಸಿರುವ ವಿಶೇಷ ವ್ಯವಸ್ಥೆಯ ಅಂಶಗಳನ್ನು ಖಚಿತಪಡಿಸಿಕೊಳ್ಳಬೇಕು,’ ಎಂದು ತಿಳಿಸಿ ಅನುಮೋದನೆ ನೀಡಿತ್ತು.
ಇದರ ಅನ್ವಯ ಸುಧಾರಿತ ಬಿ.ಓ.ಓ.ಟಿ (BOOT) ಮಾದರಿಯಂತೆ ಕಾಮಗಾರಿಗಳಿಗೆ ಶೇ 40 ರಷ್ಟು ಮೊತ್ತದ ವಿ.ಜಿ.ಎಫ್‌ಅನ್ನು ನಿಗದಿಪಡಿಸಿತ್ತು. ಉಳಿಕೆ ಮೊತ್ತವನ್ನು ರಿಯಾಯಿತಿದಾರರಿಂದ ಭರಿಸಬೇಕಾಗಿತ್ತು. “ರಿಯಾಯಿತಿ ಮೌಲ್ಯ(TCV)” ಯನ್ನು ನಿಗಧಿಪಡಿಸಿತ್ತಲ್ಲದೇ ರಿಯಾಯಿತಿದಾರರಿಗೆ ಸಂಧಾನಿತ ಒಟ್ಟು ರಿಯಾಯಿತಿ ಮೌಲ್ಯವನ್ನು ಮಾತ್ರ ಸಂಗ್ರಹಿಸಲು ಅವಕಾಶ ಕಲ್ಪಿಸಲಾಗಿತ್ತು.
ವಾಹನ ಸಂಚಾರ ದಟ್ಟಣೆಯು ಹೆಚ್ಚುವರಿಯಾದ್ದಲ್ಲಿ 30 ವರ್ಷಗಳ ಅವಧಿಯನ್ನು ಪೂರ್ಣಗೊಳಿಸುವ ಮುಂಚಿತವಾಗಿಯೇ ಗುತ್ತಿಗೆ ಮುಕ್ತಾಯಗೊಳ್ಳುವ ಹಾಗೂ ಒಂದು ವೇಳೆ ಸಂಚಾರ ದಟ್ಟಣೆಯು ಕಡಿಮೆ ಆದರೂ ಸಹ ಗರಿಷ್ಠ 40 ವರ್ಷಗಳ ಅವಧಿಗೆ ಗುತ್ತಿಗೆಯನ್ನು ಸಿಮೀತಗೊಳಿಸುವ ಮಾದರಿಯಲ್ಲಿ ಪ್ಯಾಕೇಜ್-1ನ್ನು ರೂಪಿಸಿತ್ತು.
ಈ ಪ್ಯಾಕೇಜ್ 1ರ ಕಾಮಗಾರಿಯಾದ ಹೆಬ್ಬಾಳ ಎಸ್ಟೀಮ್ ಮಾಲ್ ಜಂಕ್ಷನ್‌ನಿಂದ ರೇಸ್ ಕೋರ್ಸ್ ರಸ್ತೆಯ ಶೇಷಾದ್ರಿ ರಸ್ತೆಯವರೆಗೆ (Hebbal near Esteem mall junction (Km 0+000) to Sheshadri road, Race Course road junction (Km 8+748) ಹಾಗೆಯೇ ಪ್ಯಾಕೇಜ್2 ರ ಕಾಮಗಾರಿಯಾದ ಶೇಷಾದ್ರಿ ರಸ್ತೆಯಿಂದ ಸಿಲ್ಕ್ ಬೋರ್ಡ್‌ವರೆಗೆ (-Seshadri Road (Km 8+748) to Silk Board (Km 16+745) ಕೈಗೊಳ್ಳಲಾಗಿರುವ ಟೆಂಡರ್‌ಗೆ ಬೆಂಗಳೂರು ಸ್ಮಾರ್ಟ್‌ಇನ್ಫ್ರಾಸ್ಟಕ್ಚರ್‌ಲಿಮಿಟೆಡ್ ಅನುಮೋದನೆ ಕೋರಿತ್ತು. ಇದನ್ನಾಧರಿಸಿ ಸರ್ಕಾರದ ಅನುಮೋದನೆಗೆ ಇಲಾಖೆಯು ಪ್ರಸ್ತಾವವನ್ನು ಮಂಡಿಸಿತ್ತು.
ಈ ಎರಡೂ ಕಾಮಗಾರಿಗಳ ಅಂದಾಜು ಪಟ್ಟಿಯ ಮೊತ್ತವನ್ನು ಸುಧಾರಿತ-ಬಿ.ಓ.ಓ.ಟಿ ಆಧಾರದಲ್ಲಿ ದರ ವಿಶ್ಲೇಷಣೆಯಂತೆ ಮತ್ತು ವಾರ್ಷಿಕ ಹೆಚ್ಚುವರಿ 5% ಮತ್ತು ವಾರ್ಷಿಕ ಬಡ್ಡಿದರ ಒಳಗೊಂಡಂತೆ ಲೆಕ್ಕಚಾರ ಮಾಡಲಾಗಿದೆ. ಟೆಂಡರ್ ಮೊತ್ತವು ಪ್ಯಾಕೇಜ್-1ಕಾಮಗಾರಿಗೆ ರೂ.8, 870.06 ಕೋಟಿಗಳು ಮತ್ತು ಪ್ಯಾಕೇಜ್-2ಕಾಮಗಾರಿಗೆ ರೂ.8, 928.00 ಕೋಟಿ ರು ಎಂದು ಪ್ರಸ್ತಾವನೆಯಲ್ಲಿ ವಿವರಿಸಿರುವುದು ತಿಳಿದು ಬಂದಿದೆ.
ಅದೇ ರೀತಿ ಪ್ಯಾಕೇಜ್ 1 ರ ಕಾಮಗಾರಿಗೆ ವಿಜಿಎಫ್ ಮೊತ್ತ ರೂ 3,508.01 ಕೋಟಿಗಳು ಮತ್ತು ಪ್ಯಾಕೇಜ್-2ಕಾಮಗಾರಿಗೆ ರೂ 3, 571.37 ಕೋಟಿಗಳನ್ನು ನಿಗದಿಪಡಿಸಿರುವ ಇಲಾಖೆಯು 2025ರ ಜುಲೈ 14ರಂದೇ ಟೆಂಡರ್ ಆಹ್ವಾನಿಸಿದೆ. ಇದಾದ ನಂತರ ಪ್ಯಾಕೇಜ್-1 ರ ಕಾಮಗಾರಿಯ ವ್ಯಾಪ್ತಿಗೆ ಬರುವ ಮೇಖ್ರಿ ವೃತ್ತದ ಪ್ರದೇಶದಲ್ಲಿ ತಾಂತ್ರಿಕ ಕಾರಣಗಳಿಂದಾಗಿ ಸುರಂಗ ಮಾರ್ಗದ ಅಂಶಗಳಲ್ಲಿ ಕೆಲವೊಂದು ಮಾರ್ಪಾಟು ಮಾಡಿಕೊಂಡಿತ್ತು.
ಟೆಂಡರ್‌ಗಿಟ್ಟ ಮೊತ್ತವಾದ 8, 770.06 ಕೋಟಿಗಳನ್ನು ಕಡಿಮೆಗೊಳಿಸಿ ರೂ.8294.00 ಕೋಟಿಗಳಿಗೆ ಅಂದಾಜು ಪಟ್ಟಿಯನ್ನು ಪರಿಷ್ಕರಿಸಿತ್ತು. “ಒಟ್ಟು ರಿಯಾಯಿತಿ ಮೌಲ್ಯ (Total Concession Value)” ವು ನೀಡಲಾಗುವ ವಿ.ಜಿ.ಎಫ್‌ಮೊತ್ತದ ಮೇಲೆ ಅವಲಂಬಿತವಾಗಿತ್ತು.
ಈಗಾಗಲೇ ಸರ್ಕಾರದ ಆದೇಶದಲ್ಲಿ ಅನುಮೋದನೆಯಾಗಿದ್ದ ವಿ.ಜಿ.ಎಫ್‌ಮೊತ್ತವನ್ನೇ ನಿಗಧಿಪಡಿಸಿ ಪ್ಯಾಕೇಜ್-1ಕಾಮಗಾರಿಗೆ ನ್ಯಾಯಯುತ ಆಂತರಿಕ ಲಾಭದ ದರ (Equity Internal Rate of Return (EIRR)) ರಂತೆ ಬಂದಂತಹ “ಒಟ್ಟು ರಿಯಾಯಿತಿ ಮೌಲ್ಯವು (Total Concession Value (TCV))” ರೂ.5, 484.32 ಕೋಟಿಗಳು ಮತ್ತು ಪ್ಯಾಕೇಜ್-2ರ ಕಾಮಗಾರಿಗೆ ನ್ಯಾಯಯುತ ಆಂತರಿಕ ಲಾಭದ ದರ (Equity Internal Rate of Return (EIRR)) ರಂತೆ ಬಂದಂತಹ “ಒಟ್ಟು ರಿಯಾಯಿತಿ ಮೌಲ್ಯವು (Total Concession Value (TCV))” 6, 539.40 ಕೋಟಿ ರು ಆಗಿದೆ ಎಂದು ವಿವರಿಸಿದೆ.
ಈ ಟೆಂಡರ್‍ನಲ್ಲಿ ಅದಾನಿ ಎಂಟರ್ ಪ್ರೈಸೆಸ್ ಎಲ್ 1 ಬಿಡ್‌ದಾರನಾಗಿ ಹೊರಹೊಮ್ಮಿತ್ತು. ಪ್ಯಾಕೇಜ್-1ಮತ್ತು ಪ್ಯಾಕೇಜ್-2 ಕಾಮಗಾರಿಗಳ ಎಲ್-1ಬಿಡ್ಡುದಾರರಾದ ಅದಾನಿ ಎಂಟರ್ ಪ್ರೈಸೆಸ್ ಕ್ರಮವಾಗಿ “ಒಟ್ಟು ರಿಯಾಯಿತಿ ಮೌಲ್ಯವು (Total Concession Value (TCV))” ರೂ 10867.50 ಕೋಟಿಗಳು ಮತ್ತು ರೂ 11400.40 ಕೋಟಿಗಳನ್ನು ನಮೂದಿಸಿತ್ತು. ಈ ಮೊತ್ತವು ಟೆಂಡರ್‌ಗಿಟ್ಟ ಒಟ್ಟು ರಿಯಾಯಿತಿ ಮೌಲ್ಯಕ್ಕೆ ಹೋಲಿಸಿದಾಗ ಕ್ರಮವಾಗಿ ಶೇ 98.16 ಮತ್ತು ಶೇ 74.33 ರಷ್ಟಿತ್ತು.
ರಿಯಾಯಿತಿ ಮೌಲ್ಯ ಹೆಚ್ಚಳ ಮಾಡಿದ್ದ ಅದಾನಿ ಎಂಟರ್ ಪ್ರೈಸೆಸ್
ಅದಾನಿ ಎಂಟರ್ ಪ್ರೈಸೆಸ್ ಸಲ್ಲಿಸಿದ್ದ ಒಟ್ಟು ರಿಯಾಯಿತಿ ಮೌಲ್ಯವು ಹೆಚ್ಚಾಗಿತ್ತು. ಇದನ್ನು ಮರು ವಿಶ್ಲೇಷಣೆ ಮಾಡಲು ಕೋರಿತ್ತು. ಈಗಾಗಲೇ ತಯಾರಿಸಲಾದ ಅಂದಾಜು ಪಟ್ಟಿಯಲ್ಲಿ “ಸುರಂಗ ಮಾರ್ಗ ಕೊರೆಯುವ ಯಂತ್ರ (Tunnel Boring Machine)” ದರದ ಸವಕಳಿ ಮೊತ್ತವನ್ನು (Salvage Value) ಅನ್ನು ಶೇ.50ರಷ್ಟು ಮೀಸಲಿರಿಸಿದೆ. ಇದು ಮಾರುಕಟ್ಟೆಯ ಅನುಭವಕ್ಕೆ ವಾಸ್ತವಿಕವಲ್ಲವೆಂದು ಅಂದಾಜು ಪಟ್ಟಿಯನ್ನು ಐಆರ್‍ಸಿ 136 ರಂತೆ ತಯಾರಿಸಿದೆ.
ಈ ಐಆರ್‍ಸಿ 136 ರಂತೆ ತಯಾರಿಸಿರುವ ಅಂದಾಜು ಪಟ್ಟಿಯು ಮೇಲ್ಮೈ ರಸ್ತೆಯ ಕಾರ್ಯಾಚರಣೆ ಮತ್ತು ನಿರ್ವಹಣೆಗೆ (At-grade National Highways) ಗೆ ಸಂಬಂಧಿಸಿತ್ತು. ಈ ಅಂದಾಜು ಪಟ್ಟಿಯು “ಸುರಂಗ ಮಾರ್ಗದ ಧೀರ್ಘಾವಧಿ ಕಾರ್ಯಚರಣೆ ಮತ್ತು ನಿರ್ವಹಣೆಗೆ ಅನ್ವಯಿಸುವುದಿಲ್ಲ” ಎಂದು ತಿಳಿಸಿತ್ತು. ಡಿ.ಪಿ.ಆರ್ ಅಂದಾಜು ಪಟ್ಟಿ ಮತ್ತು ರಿಯಾಯಿತದಾರರು ನಮೂದಿಸಿರುವ ಕಾರ್ಯಾಚರಣೆ ಮತ್ತು ನಿರ್ವಹಣಾ ದರಗಳಲ್ಲಿ ಶೇ.277.26ರಷ್ಟು ವ್ಯತ್ಯಾಸವಿದೆ ಎಂದು ಸಮರ್ಥಿಸಿಕೊಂಡಿತ್ತು. ಅಲ್ಲದೇ ಅದಾನಿ ಎಂಟರ್ ಪ್ರೈಸೆಸ್ ಈ ಬಗ್ಗೆ ಸವಿವರವಾದ ವಿಶ್ಲೇಷಣೆಗಳನ್ನು ಒದಗಿಸಿತ್ತು.
ಈ ಅಂದಾಜು ಪಟ್ಟಿಯನ್ನು ಬಿ-ಸ್ಮೈಲ್ ಸಂಸ್ಥೆಯಿಂದ ನಿಯೋಜಿಸಲ್ಪಟ್ಟ ರೋಡಿಕ್ ಕನ್ಸ್ಲ್‌ಟೆಂಟ್ಸ್ ಮತ್ತು ಆರ್ಥಿಕ ತಜ್ಞ ಸಂಸ್ಥೆಯಾದ ಬಿ.ಸಿ.ಜಿ ಸಂಸ್ಥೆರವರಿಂದ ವರದಿ ಪಡೆದಿತ್ತು.
ಉತ್ತರ-ದಕ್ಷಿಣ ವಾಹನ ಸುರಂಗ ನಿರ್ಮಾಣ ಕಾಮಗಾರಿಯ ಅಂದಾಜು ಪಟ್ಟಿಯೊಂದಿಗೆ ಆರ್ಥಿಕ ಬಿಡ್ಡಿನ ಪರಿಶೀಲನೆ ನಡೆಸಲು ಲೋಕೋಪಯೋಗಿ ಇಲಾಖೆ ಸರ್ಕಾರದ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ತಜ್ಞರ ಸಮಿತಿಯನ್ನು ರಚಿಸಲು ಕೋರಿತ್ತು. ಈ ಪ್ರಸ್ತಾವನೆಯನ್ನು ಪರಿಶೀಲಿಸಿದ್ದ (ಸರ್ಕಾರದ ಪತ್ರ ಸಂಖ್ಯೆ: ನಅಇ 34 ಎಂಎನ್‌ವೈ 2024 (ಇ) ದಿ:26.02.2026) ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ನಿವೃತ್ತ ಮುಖ್ಯ ಅಭಿಯಂತರರುಗಳು, ನಮ್ಮ ಮೆಟ್ರೋ ಸಂಸ್ಥೆಯ ಮುಖ್ಯ ಅಭಿಯಂತರರು ಅಥವಾ ಕೊಂಕಣ್ ರೈಲ್ವೆಯ ನಿವೃತ್ತ ಮುಖ್ಯ ಅಭಿಯಂತರರು ಹಾಗೂ ಹಣಕಾಸು ತಜ್ಞರನ್ನೊಳಗೊಂಡ, ಒಂದು ತಾಂತ್ರಿಕ ಮತ್ತು ಆರ್ಥಿಕ ಸಮಿತಿಯನ್ನು ಬಿ ಸ್ಮೈಲ್ ಹಂತದಲ್ಲಿ ರಚಿಸಲಾಗಿತ್ತು.
ಈ ಸಮಿತಿಯ ಶಿಫಾರಸ್ಸಿನ ಪ್ರಕಾರ ಅದಾನಿ ಎಂಟರ್ ಪ್ರೈಸೆಸ್‌ನೊಂದಿಗೆ ದರ ಸಂಧಾನ ನಡೆಸಿತ್ತು. ಪ್ಯಾಕೇಜ್-1ಮತ್ತು ಪ್ಯಾಕೇಜ್-2ಕಾಮಗಾರಿಗಳಿಗೆ ಅಂತಿಮ “ಒಟ್ಟು ರಿಯಾಯಿತಿ ಮೌಲ್ಯ (Total Concession Value (TCV))” ಅನ್ನು ಕ್ರಮವಾಗಿ ರೂ 10, 737.00 ಕೋಟಿಗಳು ಮತ್ತು ರೂ 11, 263.50 ಕೋಟಿಗಳನ್ನು ಸಲ್ಲಿಸಿತ್ತು. ಟೆಂಡರ್‌ಗಿಟ್ಟ ಒಟ್ಟು ರಿಯಾಯಿತಿ ಮೌಲ್ಯಕ್ಕೆ ಹೋಲಿಸಿದಾಗ ಕ್ರಮವಾಗಿ ಶೇ 95.77 ಮತ್ತು ಶೇ 72.24 ಆಗಿತ್ತು.
ಯೋಜನೆ ಸಮಾಲೋಚಕರಗಳ ಹಾಗೂ ತಜ್ಞರ ಸಮಿತಿ ವರದಿ ಮತ್ತು ಬಿ-ಸ್ಮೈಲ್5 ನೇ ಮಂಡಳಿ ಸಭೆಯ ತೀರ್ಮಾನದ ಅನುಸಾರ ಈ ಎರಡು ಪ್ಯಾಕೇಜುಗಳಿಗೆ ಸದ್ಯದ ದರಗಳು ಹಾಗೂ ಅಂದಾಜು ಪಟ್ಟಿಯನ್ನು ಸರಿಪಡಿಸಿಕೊಂಡು ದರಗಳನ್ನು ವಿಶ್ಲೇಷಿಸಿತ್ತು. 2026ರ ಮೇ 4ರಂದು ಚಾಲ್ತಿಯಲ್ಲಿದ್ದ ಮಾರುಕಟ್ಟೆ ದರಗಳ ಅನ್ವಯ ಅಂದಾಜು ಪಟ್ಟಿಯನ್ನು ಪರಿಷ್ಕರಿಸಿತ್ತು.
10, 737.00 ಕೋಟಿಗಳ ಒಟ್ಟು ರಿಯಾಯಿತಿ ಮೌಲ್ಯ ಟೆಂಡರ್‌ಗಿಟ್ಟ ರಿಯಾಯಿತಿ ಮೌಲ್ಯಕ್ಕೆ ಶೇ 14 ರಷ್ಟು ಇಐಆರ್‍ಆರ್ ರಂತೆ ಹೋಲಿಸಿತ್ತು. ಇದರ ಪ್ರಕಾರ ಶೇ 95.77 ಹೆಚ್ಚು, ಪರಿಷ್ಕೃತ ಟೆಂಡರ್‌ಗಿಟ್ಟ ರಿಯಾಯಿತಿ ಮೌಲ್ಯಕ್ಕೆ ಶೇ 14 ರಷ್ಟು ಇಐಆರ್‍ಆರ್ ರಂತೆ ಶೇ 40 ಮತ್ತು ಶೇ 16 ರಷ್ಟು ಇಐಆರ್‍ಆರ್ ರಂತೆ ಶೇ 24 ಹೆಚ್ಚು ಇತ್ತು.
ಅದೇ ರೀತಿ 11,263. 50 ಕೋಟಿಗಳ ಒಟ್ಟು ರಿಯಾಯಿತಿ ಮೌಲ್ಯ, ಟೆಂಡರ್‌ಗಿಟ್ಟ ರಿಯಾಯಿತಿ ಮೌಲ್ಯಕ್ಕೆ ಶೇ 14 ರಷ್ಟು ಇಐಆರ್‍ಆರ್ ರಂತೆ ಹೋಲಿಸಿತ್ತು. ಇದು 2026ರ ಮೇ 4ರ ಮಾರುಕಟ್ಟೆ ದರಗಳಿಗೆ ಶೇ 72.24 ಹೆಚ್ಚು ಮತ್ತು ಪರಿಷ್ಕೃತ ಟೆಂಡರ್‌ಗಿಟ್ಟ ರಿಯಾಯಿತಿ ಮೌಲ್ಯಕ್ಕೆ ಶೇ 14 ರಷ್ಟು ಇಐಆರ್‍ಆರ್ ರಂತೆ ಶೇ 34.82 ಮತ್ತು ಶೇ 16 ರಷ್ಟು EIRR ರಂತೆ ಶೇ 24 ಹೆಚ್ಚು ಇತ್ತು. ಈ ಮೊತ್ತವನ್ನು ನಮೂದಿಸಿದ್ದ ಟೆಂಡರ್‍ಗೆ ಅನುಮೋದನೆ ಕೋರಿ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಕೆಯಾಗಿತ್ತು.
ಈ ಪ್ರಸ್ತಾವನೆಗಳ ಕುರಿತು ನಗರಾಭಿವೃದ್ಧಿ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿನ ಅಧಿಕಾರಯುಕ್ತ ಸಮಿತಿಯು 2026ರ ಮೇ 18ರಂದು ಸಭೆ ನಡೆದಿತ್ತು. ಸಿದ್ದನಗೌಡ ಹೆಗ್ಗಾರೆಡ್ಡಿ ಅಧ್ಯಕ್ಷತೆಯಲ್ಲಿದ್ದ ತಾಂತ್ರಿಕ ತಜ್ಞರ ಸಮಿತಿಯು ನೀಡಿದ್ದ ವಿಸ್ತೃತ ಯೋಜನಾ ವರದಿಯನ್ನೂ ಈ ಸಮಿತಿಯು ಪರಿಶೀಲಿಸಿತ್ತು. ಈ ಸಮಿತಿಯ ಅಭಿಪ್ರಾಯದ ಅನುಸಾರ ಡಿಪಿಆರ್ ಮತ್ತು ಅಂದಾಜುಗಳ ಮೊತ್ತವನ್ನು ಶೇ.10 ರಿಂದ ಶೇ.15 ರಷ್ಟು ಪ್ರಮಾಣದಲ್ಲಿ ಹೆಚ್ಚಿಸಿಕೊಳ್ಳುವುದು ಸೂಕ್ತವೆಂದು ತಿಳಿಸಿತ್ತು.
ಇದನ್ನು ಪರಿಶೀಲಿಸಿದ್ದ ಸಚಿವ ಸಂಪುಟವು “ರೂ.17,780.13 ಕೋಟಿಗಳಿಗೆ ಸಲ್ಲಿಸಿರುವ ಅಂದಾಜುಗಳನ್ನು, ತಾಂತ್ರಿಕ ತಜ್ಞರ ಸಮಿತಿಗೆ ಒದಗಿಸಿ ಅಭಿಪ್ರಾಯ ಕೋರಿತ್ತು. ತಜ್ಞರ ಸಮಿತಿಯು (ದಿನಾಂಕ: 05-05-2025 ಮತ್ತು ದಿನಾಂಕ:29-05-2025ರ) ತನ್ನ ವರದಿಯ ಅವಲೋಕನದಲ್ಲಿ, ತಯಾರಿಸಲಾಗಿರುವ ಅಂದಾಜುಗಳು ಅತ್ಯಂತ ಮಿತವ್ಯಯಕಾರಿಯಾಗಿವೆ ಎಂದು ಅಭಿಪ್ರಾಯಪಟ್ಟಿತ್ತು. ಅಂದಾಜು ಪಟ್ಟಿಗಳನ್ನು ಆಡಳಿತಾತ್ಮಕ ಅನುಮೋದನೆಗೆ ಪರಿಗಣಿಸಿತ್ತು. ಟೆಂಡರ್‌ನಲ್ಲಿ ಸಲ್ಲಿಕೆಯಾದ ಬಿಡ್‌ಗಳ ಮೌಲ್ಯ ಮಾಪನ ಸಂದರ್ಭದಲ್ಲಿ, ಅಂದಾಜು ಮೊತ್ತದಲ್ಲಿ ಏರಿಕೆ ಉಂಟಾದಲ್ಲಿ, ತಜ್ಞರ ಅಭಿಪ್ರಾಯವನ್ನು ಪರಿಗಣಿಸಿ ಮತ್ತೊಮ್ಮೆ ಸಚಿವ ಸಂಪುಟದ ಮುಂದೆ ಮಂಡಿಸಲು ಪ್ರಸ್ತಾವನೆ ಸಲ್ಲಿಸುವಂತೆ “ನಿರ್ಣಯಿಸಿತ್ತು.
ಈ ಕುರಿತು ವಿವರವಾಗಿ ಚರ್ಚಿಸಲಾಗಿತ್ತು. ನಂತರ ಪ್ಯಾಕೇಜ್-1ರ ಕಾಮಗಾರಿಯ ಸಂಬಂಧ “ಎಲ್‌ಬಿಡ್ಡ್‌ದಾರರಾದ ಸಂಧಾನಿತ “ಒಟ್ಟು ರಿಯಾಯಿತಿ ಮೌಲ್ಯ”ದ ಬಿಡ್ಡ್‌ಮೊತ್ತವಾದ ರೂ.10,737.00 ಕೋಟಿಗಳ ಟೆಂಡರ್ ಅನುಮೋದನೆ ಪ್ರಸ್ತಾವನೆಯನ್ನು ಹಾಗೂ ಪ್ಯಾಕೇಜ್-2ರ ಕಾಮಗಾರಿಯ ಸಂಬಂಧ “ಎಲ್ 1 ಬಿಡ್ಡ್‌ದಾರರಾದ ಸಂಧಾನಿತ “ಒಟ್ಟು ರಿಯಾಯಿತಿ ಮೌಲ್ಯ”ದ ಬಿಡ್ಡ್ ಮೊತ್ತವಾದ ರೂ.11,263.50 ಕೋಟಿಗಳ ಟೆಂಡರ್ ಅನುಮೋದನೆ ಪ್ರಸ್ತಾವನೆಯನ್ನು ಸಚಿವ ಸಂಪುಟದ ಮುಂದೆ ಸೂಕ್ತ ನಿರ್ಣಯಕ್ಕಾಗಿ ಮಂಡಿಸಲು ತೀರ್ಮಾನಿಸಿತ್ತು.
ಸಮರ್ಥನೆಯಲ್ಲೇನಿದೆ?
ಬೆಂಗಳೂರಿ ಅಗಾಧ ಪ್ರಮಾಣದ ವಾಹನ ದಟ್ಟಣೆಗೆ ದೀರ್ಘವಧಿಯಲ್ಲಿ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಈ ಯೋಜನೆಯನ್ನು ಅತ್ಯಂತ ಪರಿಣಾಮಕಾರಿ ಹಾಗೂ ಅತ್ಯವಶ್ಯಕವೆಂದು ಭಾವಿಸಿದೆ. ಅದೇ ರೀತಿ ನಿಗಧಿಪಡಿಸಲಾದ ವಿ.ಜಿ.ಎಫ್ ಮೊತ್ತಕ್ಕಿಂತ ಯಾವುದೇ ಹೆಚ್ಚುವರಿ ಮೊತ್ತವನ್ನು ನೀಡುವ ಅಗತ್ಯತೆ ಇರುವುದಿಲ್ಲ. ರಸ್ತೆ-ಬಳಕೆದಾರರಿಗೆ ರಾಷ್ಟ್ರೀಯ ಹೆದ್ದಾರಿ (ದರ ನಿರ್ಧಾರ ಮತ್ತು ಸಂಗ್ರಹಣೆ) ನಿಯಮ 2008 ರಂತೆ ದರಗಳಂತೆ ಸಂಗ್ರಹಣೆ ಮಾಡಬೇಕಾಗಿರುವುದರಿಂದ ರಿಯಾಯಿತಿದಾರರಿಂದ ರಸ್ತೆ ಬಳಕೆದಾರರಿಗೆ ಯಾವುದೇ ಹೆಚ್ಚುವರಿ ದರ ನಿಗದಿ ಮಾಡುವ ಅಧಿಕಾರವಿರುವುದಿಲ್ಲ ಎಂದು ನಗರಾಭಿವೃದ್ಧಿ ಇಲಾಖೆಯು ಸಮರ್ಥಿಸಿಕೊಂಡಿರುವುದು ಟಿಪ್ಪಣಿ ಹಾಳೆಯಿಂದ ಗೊತ್ತಾಗಿದೆ.
ಸಂಚಾರ ದಟ್ಟಣೆ ಕಡಿಮೆ ಆದರೂ 40 ವರ್ಷ ಅವಧಿಗೆ ಗುತ್ತಿಗೆ
ಅದೇ ರೀತಿ ರಿಯಾಯಿತಿದಾರರಿಗೆ ಸಂಧಾನಿತ ಒಟ್ಟು ರಿಯಾಯಿತಿ ಮೌಲ್ಯವನ್ನು ಮಾತ್ರ ಸಂಗ್ರಹಿಸಲು ಅವಕಾಶ ಕಲ್ಪಿಸಲಾಗಿದೆ. ವಾಹನ ಸಂಚಾರ ದಟ್ಟಣೆಯು ಹೆಚ್ಚುವರಿಯಾದ್ದಲ್ಲಿ 30 ವರ್ಷಗಳ ಅವಧಿಯನ್ನು ಪೂರ್ಣಗೊಳಿಸುವ ಮುಂಚಿತವಾಗಿಯೇ ಗುತ್ತಿಗೆ ಮುಕ್ತಾಯಗೊಳ್ಳುವ ಹಾಗೂ ಒಂದು ವೇಳೆ ಸಂಚಾರ ದಟ್ಟಣೆಯು ಕಡಿಮೆ ಆದರೂ ಸಹ ಗರಿಷ್ಠ 40 ವರ್ಷಗಳ ಅವಧಿಗೆ ಗುತ್ತಿಗೆಯನ್ನು ಸಿಮೀತಗೊಳಿಸಲಾಗುವುದು. ಇದರಿಂದ ರಿಯಾಯಿತಿದಾರರು ಹೆಚ್ಚುವರಿ ಲಾಭಾಂಶ ಪಡೆಯುವ ಸಾಧ್ಯತೆಗೆ ಕಡಿವಾಣ ಹಾಕಲಾಗಿದೆ. ಬಿಡ್ಡುದಾರರು ನೀಡಿರುವ ಸಂಧಾನಿತ ಒಟ್ಟು ರಿಯಾಯಿತಿ ಮೌಲ್ಯದ ಬಗ್ಗೆ ಕ್ರಮಕೈಗೊಳ್ಳಬಹುದೆಂದು ಅಭಿಪ್ರಾಯಿಸಿದೆ.
ಅದೇ ರೀತಿ ಎಲಿವೇಟೆಡ್ ಕಾರಿಡಾರ್‌ಗಳು, ಮೆಟ್ರೋ ವ್ಯವಸ್ಥೆಗಳು, ವಿಸ್ತರಿತ ಬಸ್ ನೆಟ್‌ವರ್ಕ್ ಮತ್ತು ಇತರ ಮೂಲಸೌಕರ್ಯ ಯೋಜನೆಗಳನ್ನು ಕೈಗೊಳ್ಳಲು ಪ್ರಾಧಿಕಾರಕ್ಕೆ ಯಾವುದೇ ನಿರ್ಬಂಧವಿಲ್ಲ. ಪರ್ಯಾಯ ಮಾರ್ಗಗಳನ್ನು ಅಭಿವೃದ್ಧಿಪಡಿಸಲು ಯಾವುದೇ ನಿರ್ಬಂಧವಿಲ್ಲದಿರುವುದರಿಂದ ಸಾರ್ವಜನಿಕ ಹಿತಾಸಕ್ತಿ ರಕ್ಷಿಸಲಾಗಿದೆ ಎಂದೂ ಇಲಾಖೆಯು ಸಮರ್ಥಿಸಿಕೊಂಡಿದೆ.
ಶೇ 6-7 ಟ್ರಾಫಿಕ್ ಹೆಚ್ಚಳವೆಂದ ಅದಾನಿ ಎಂಟರ್ ಪ್ರೈಸೆಸ್
ರಿಯಾಯಿತಿದಾರರು ಶೇ 6-7 ಟ್ರಾಫಿಕ್ ಹೆಚ್ಚಾಗುವುದಾಗಿ ಪರಿಗಣಿಸಿದೆ. ಬೆಂಗಳೂರು Comprehensive Mobility Plan ಪ್ರಕಾರ ಅಂದಾಜಿಸಲಾಗಿರುವ ಶೇ 2-3 ಕ್ಕಿಂತ ಹೆಚ್ಚಾಗಿದೆ. ರಿಯಾಯಿತಿದಾರರಿಗೆ Concession Period ಅನ್ನು ನಿಗದಿಪಡಿಸಲಾಗಿದೆ. ಊಹಿಸಿರುವ ಟ್ರಾಫಿಕ್ ಬರದೇ ಇದ್ದಲ್ಲಿ ರಿಸ್ಕ್ ಕೂಡ ರಿಯಾಯಿತಿದಾರರದ್ದೇ ಆಗಿರುತ್ತದೆ. ಇದರಿಂದಾಗಿ ಸರ್ಕಾರಕ್ಕೆ ಯಾವುದೇ ಹೊರೆಯಾಗುವುದಿಲ್ಲ ಎಂದು ಸಮರ್ಥನೆಯನ್ನು ಮುಂದೊಡ್ಡಿದೆ.
ಇಂಟರ್‌ಮೋಡಲ್ ಹಬ್‌ಗಳಲ್ಲಿ ವಾಣಿಜ್ಯ ಅಭಿವೃದ್ಧಿಯನ್ನು ಕೈಗೊಳ್ಳಲು ಮತ್ತು ಬಾಡಿಗೆ ಆದಾಯವನ್ನು ಗಳಿಸುವ ಹಕ್ಕನ್ನು ಬಿಡ್‌ದಾರರು ಹೊಂದಿದ್ದಾರೆ. ಈ ಆದಾಯಗಳು ರಿಯಾಯಿತಿದಾರರ ಒಟ್ಟು ಆದಾಯದ ಶೇ. 5 ಕ್ಕಿಂತ ಕಡಿಮೆ ಇರುತ್ತವೆ. ಆದ್ದರಿಂದ ಇಐಆರ್‍ಆರ್ ಶೇ 1 ಕ್ಕಿಂತ ಕಡಿಮೆ ಎಂದು ನಿರೀಕ್ಷಿಸಲಾಗಿದೆ. ಇಂಟರ್‌ಮೋಡಲ್ ಹಬ್‌ಗಳಲ್ಲಿ ವಾಣಿಜ್ಯ ಅಭಿವೃದ್ಧಿಯನ್ನು ಸರ್ಕಾರದ ಪೂರ್ವ ಅನುಮತಿ ಮತ್ತು ಅನುಮೋದನೆಯನ್ನು ಪಡೆದ ನಂತರವಷ್ಟೆ ಅಭಿವೃದ್ಧಿ ನಿರ್ಮಾಣ ಕೈಗೊಳ್ಳುವ ಷರತ್ತನ್ನು ರಿಯಾಯಿತಿದಾರರಿಗೆ ವಿಧಿಸಲಾಗಿದೆ ಎಂದು ವಿವರಿಸಿದೆ.
ಪ್ರಸ್ತುತ ಪಶ್ಚಿಮ ಏಷ್ಯಾದ ಯುದ್ಧ ಪರಿಸ್ಥಿತಿ ಮತ್ತು World Price Index ನಲ್ಲಿ ಏರಿಕೆಯಿಂದಾಗಿ, ಯುರೋ ದರ ಏರಿಕೆ ಮತ್ತು ಇತರೇ ಬೆಲೆಗಳು ಏರಿಕೆಯಾಗಿದ್ದು ಮರು ಟೆಂಡರ್‌ಕೈಗೊಂಡಲ್ಲಿ ಅಂದಾಜು ಮೊತ್ತವನ್ನು ಪರಿಷ್ಕರಿಸಬೇಕಾಗಿದ್ದು ಯೋಜನಾ ಮೊತ್ತವು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹೇಳಿದೆ.
ಸುಧಾರಿತ ಬಿಓಓಟಿ ಮಾದರಿಯಲ್ಲಿ ಮೊದಲನೆಯ ಬಾರಿಗೆ ಕೈಗೊಳ್ಳಲಾಗುತ್ತಿದ್ದು, ಅಂದಾಜು ಪಟ್ಟಿಯಲ್ಲಿ ಬಂಡವಾಳ ಮೊತ್ತ ಮತ್ತು ಕಾರ್ಯಾಚರಣೆ ಮತ್ತು ನಿರ್ವಹಣೆಯ ಕೆಲವೊಂದು ಅಂಶಗಳನ್ನು ಕಲ್ಪಿಸಿಕೊಂಡು ತಯಾರಿಸಲಾಗಿದೆ. ಬಿಡ್ಡುದಾರರ ಸಂಭವನೀಯ ವೆಚ್ಚಗಳನ್ನು ಹೋಲಿಸಿದಾಗ ಅಂದಾಜು ಪಟ್ಟಿಗಳನ್ನು ಪರಿಷ್ಕರಿಸಿದ್ದಲ್ಲಿ ನಿಗಧಿಪಡಿಸಬೇಕಾಗಿದ್ದ “ಒಟ್ಟು ರಿಯಾಯಿತಿ ಮೌಲ್ಯ” ವು ಹೆಚ್ಚಾಗುತ್ತದೆ ಎಂದು ವಿವರಿಸಿದೆ.
ಮಾರುಕಟ್ಟೆ ಮೌಲ್ಯಕ್ಕೆ ಪರಿಷ್ಕರಣೆ- ಹೆಚ್ಚುವರಿ ಆರ್ಥಿಕ ಪರಿಣಾಮ
ದರಗಳನ್ನು ಪ್ರಸ್ತುತ ಮಾರುಕಟ್ಟೆ ಮೌಲ್ಯಕ್ಕೆ ಪರಿಷ್ಕರರಣೆ ಮತ್ತು ಕೆಲವು ಅಂಶಗಳನ್ನು ಮಾರ್ಪಾಡು ಮಾಡಬೇಕಾಗಿದೆ. ಇದರ ಅಂದಾಜು ವೆಚ್ಚವು ಸುಮಾರು ಶೇ. 40-45 ರಷ್ಟು ಹೆಚ್ಚಾಗುವ ಸಾಧ್ಯತೆಯಿದೆ. ಈ ಹಂತದಲ್ಲಿ ಮರು-ಟೆಂಡರ್ ಆಗುವ ಸಂದರ್ಭದಲ್ಲಿ, ವಿಜಿಎಫ್ ಮೊತ್ತವು ಸಹ ಅನುಗುಣವಾಗಿ ಹೆಚ್ಚಾಗುತ್ತದೆ. ಇದು ಸರ್ಕಾರಕ್ಕೆ ಹೆಚ್ಚುವರಿ ಆರ್ಥಿಕ ಪರಿಣಾಮಗಳನ್ನು ಉಂಟುಮಾಡುತ್ತದೆ. ಆದ್ದರಿಂದ, ವಿಜಿಎಫ್ ಮೊತ್ತದ ಹೆಚ್ಚಳವನ್ನು ತಪ್ಪಿಸಲು ಮತ್ತು ಸರ್ಕಾರದ ಮೇಲೆ ಹೆಚ್ಚುವರಿ ಆರ್ಥಿಕ ಹೊರೆಯನ್ನು ತಪ್ಪಿಸಲು ಒಟ್ಟು ರಿಯಾಯಿತಿ ಮೌಲ್ಯದ ಹೆಚ್ಚಳವನ್ನು ಪರಿಗಣಿಸಬಹುದು ಎಂದು ಅಭಿಪ್ರಾಯಪಟ್ಟಿದೆ.
ಆರ್ಥಿಕ ಪರಿಣಾಮಗಳೇನು?
ಈ ಯೋಜನೆಗೆ ಈಗಾಗಲೇ ಸರ್ಕಾರದಿಂದ ರೂ.19000.00 ಕೋಟಿಗಳ ಸಾಲವನ್ನು ಪಡೆಯಲು ಸರ್ಕಾರದ ಗ್ಯಾರಂಟಿಯನ್ನು ನೀಡಿದೆ. ಪ್ರಸ್ತುತ ಹುಡ್ಕೋ ಸಂಸ್ಥೆಯವರು ಸಂಧಾನದ ನಂತರ ನೀಡಿರುವ ಸಿ.ಓ.ಡಿ ಮುಂಚಿತ ಬಡ್ಡಿ ದರ ಶೇ.8.95ಮತ್ತು ಸಿ.ಓ.ಡಿ ನಂತರದ ಬಡ್ಡಿ ದರ ಶೇ.8.95 ಷ್ಟು ರಂತೆ ಪ್ಯಾಕೇಜ್-1ಕ್ಕೆ ರೂ.4614.45 ಕೋಟಿಗಳನ್ನು (ಜಿ.ಎಸ್.ಟಿ, ಭೂ-ಸ್ವಾಧೀನ ಮತ್ತು ಉಪಲಬ್ಧ ಸ್ಥಳಾಂತರ ಅಂಶಗಳು ಒಳಗೊಂಡಂತೆ) ಮತ್ತು ಪ್ಯಾಕೇಜ್-2ಕ್ಕೆ ರೂ.4,689.21 ಕೋಟಿಗಳನ್ನು (ಜಿ.ಎಸ್.ಟಿ, ಭೂ-ಸ್ವಾಧೀನ ಮತ್ತು ಉಪಲಬ್ಧ ಸ್ಥಳಾಂತರ ಅಂಶಗಳು ಒಳಗೊಂಡಂತೆ) ಒಟ್ಟು ರೂ.9303.66 ಕೋಟಿಗಳ ಆರ್ಥಿಕ ಸಾಲವನ್ನು ಪಡೆಯಲು ಅನುಮೋದನೆ ನೀಡಿದೆ.
ಹೀಗಾಗಿ ಇದನ್ನು ಹೊರತುಪಡಿಸಿ ಯಾವುದೇ ಹೆಚ್ಚುವರಿ ಹೊರೆ ಸರ್ಕಾರದ ಮೇಲೆ ಕಂಡುಬಂದಿರುವುದಿಲ್ಲ. ಈ ಯೋಜನೆಯ ಕರಾರಿನ ನಿಬಂಧನೆಯ ಪ್ರಕಾರ ಪ್ರಾಧಿಕಾರಕ್ಕೆ ಎಲಿವೇಟೆಡ್ ಕಾರಿಡಾರ್‌ಗಳು, ಮೆಟ್ರೋ ವ್ಯವಸ್ಥೆಗಳು, ವಿಸ್ತರಿತ ಬಸ್ ನೆಟ್‌ವರ್ಕ್ ಮತ್ತು ಇತರ ಮೂಲಭೂತ ಸೌಕರ್ಯ ಯೋಜನೆಗಳನ್ನು ಕೈಗೊಳ್ಳಲು ಯಾವುದೇ ನಿರ್ಬಂಧವಿಲ್ಲ. ಪ್ರಾಧಿಕಾರದಿಂದ ಸಾರ್ವಜನಿಕರಿಗೆ ಇತರೇ ಮೂಲಭೂತ ಸೌಕರ್ಯಗಳನ್ನು ಒದಗಿಸುವುದರಿಂದ ಟೋಲ್‌ಶುಲ್ಕ ಪಾವತಿಸಿ ಸುರಂಗ ಮಾರ್ಗವನ್ನು ಬಳಸುವ ಬದಲಾಗಿ ಪರ್ಯಾಯ ಆಯ್ಕೆಗಳನ್ನು ಒದಗಿಸುವ ಅವಕಾಶವಿದೆ ಎಂದು ವಿವರಿಸಿದೆ.
ಆರ್ಥಿಕ ವಿಶ್ಲೇಷಣೆಯಲ್ಲೇನಿದೆ?
ಈ ಯೋಜನೆಯ ಪ್ಯಾಕೇಜ್–01 ಮತ್ತು ಪ್ಯಾಕೇಜ್–02 ಎರಡಕ್ಕೂ ಸಂಬಂಧಿಸಿದಂತೆ ₹7,079 ಕೋಟಿ ವ್ಯವಹಾರ ಸಾಧ್ಯತೆ ಅಂತರ ಅನುದಾನ (VGF) ಬದ್ಧತೆ ಮೂಲ ಟೆಂಡರ್ ಬಿಡ್‌ನಲ್ಲಿದ್ದಂತೆಯೇ ಅಚಲವಾಗಿದೆ. ಮತ್ತು ಇದು ಯೋಜನೆಯ ವೆಚ್ಚ ಅಂದಾಜಿನಿಂದ ಸ್ವತಂತ್ರವಾಗಿದೆ. ಆದ್ದರಿಂದ ಪ್ರಾಧಿಕಾರಕ್ಕೆ ಯಾವುದೇ ಹೆಚ್ಚುವರಿ ಹಣಕಾಸು ಭಾರ ಉಂಟಾಗುವುದಿಲ್ಲ ಎಂದು ವಿಶ್ಲೇಷಿಸಲಾಗಿದೆ.
ರಿಯಾಯಿತಿ (Concession) ಚೌಕಟ್ಟನ್ನು ಚಲನೆಯುತ ಅವಧಿ (Dynamic Duration Mechanism) ಆಧಾರದ ಮೇಲೆ ರೂಪಿಸಿದೆ. ಮೂಲ ರಿಯಾಯಿತಿ ಅವಧಿ 30 ವರ್ಷಗಳಾಗಿದ್ದರೂ, ಅದನ್ನು ಕಾಲಕಾಲಕ್ಕೆ ಪರಿಶೀಲಿಸಲಾಗುತ್ತದೆ. ರಿಯಾಯಿತಿದಾರನು ವಸೂಲಿಸುವ ಟೋಲ್ ಆದಾಯದ ನಿವ್ವಳ ವರ್ತಮಾನ ಮೌಲ್ಯ (NPV) ಬಿಡ್ದಾರನು ಉಲ್ಲೇಖಿಸಿದ ಒಟ್ಟು ರಿಯಾಯಿತಿ ಮೌಲ್ಯ (TCV) ತಲುಪಿದಾಗ ರಿಯಾಯಿತಿ ಅವಧಿ ಕೊನೆಗೊಳ್ಳುತ್ತದೆ ಎಂದು ವಿಶ್ಲೇಷಿಸಿದೆ.
ಇದರಿಂದ ಅತಿಯಾದ ಲಾಭ ಗಳಿಸುವ ಸಾಧ್ಯತೆಯನ್ನು ನಿಯಂತ್ರಿಸಲಾಗುತ್ತದೆ. ಮೂಲ 30 ವರ್ಷದ ಅವಧಿಯೊಳಗೆ ಟೋಲ್ ಆದಾಯದಿಂದ ಉಲ್ಲೇಖಿತವಾಗಿರುವ ಒಟ್ಟು ರಿಯಾಯಿತಿ ಮೌಲ್ಯ (TCV) ಸಾಧಿಸಲಾಗದಿದ್ದಲ್ಲಿ, ಬಿ-ಸ್ಮೈಲ್ (B-SMILE) ರಿಯಾಯಿತಿ ಅವಧಿಯನ್ನು ಗರಿಷ್ಠ 10 ವರ್ಷಗಳವರೆಗೆ ವಿಸ್ತರಿಸಬಹುದು. ಕಾರ್ಯಕ್ಷಮತೆಯನ್ನು ಆರಂಭದಲ್ಲಿ ವಾರ್ಷಿಕವಾಗಿ ಪರಿಶೀಲಿಸಲಾಗುವುದು. ಒಟ್ಟು ರಿಯಾಯಿತಿ ಮೌಲ್ಯ (TCV) ಶೇ. 90ರಷ್ಟು ಸಾಧನೆಯಾದ ನಂತರ, ಪರಿಶೀಲನೆಯನ್ನು ಮಾಸಿಕವಾಗಿ ನಡೆಸಲಾಗುವುದು ಎಂದು ವಿವರಿಸಿದೆ.
ಪ್ಯಾಕೇಜ್–1ಕ್ಕೆ ಸಂಬಂಧಿಸಿದಂತೆ, ಪರಿಷ್ಕೃತ ಉಲ್ಲೇಖಿತ ಒಟ್ಟು ರಿಯಾಯಿತಿ ಮೌಲ್ಯವು ₹10,737 ಕೋಟಿ ಆಗಿದೆ. ಇದು ಮೂಲ ಒಟ್ಟು ರಿಯಾಯಿತಿ ಮೌಲ್ಯದ (TCV) ಅಂದಾಜು ₹5,484.32 ಕೋಟಿಗಿಂತ ಶೇ. 95.77ರಷ್ಟು ಹೆಚ್ಚಿದೆ. (ಈ ಮೂಲ ಅಂದಾಜು ಫೆಬ್ರವರಿ 2025ರ DPR ವೆಚ್ಚ ಅಂದಾಜಿನ ಮೇಲೆ Corrigendum–06ರ ಬದಲಾವಣೆಗಳನ್ನು ಒಳಗೊಂಡಂತೆ ಪರಿಷ್ಕರಣೆ) ಶೇ. 14ರಷ್ಟು ಇಐಆರ್‍ಆರ್ ಆಧರಿಸಿದೆ.
ಮರು ಟೆಂಡರ್‍ನಿಂದ ದೂರ ಸರಿದಿದ್ದೇಕೆ?
‘ಇದೇ ಯೋಜನೆಯನ್ನು ಇಂದೇ ಮರು ಟೆಂಡರ್ ಮಾಡಿದರೆ, ಪರಿಷ್ಕೃತ ವೆಚ್ಚ ಅಂದಾಜಿನ ಪ್ರಕಾರ ಶೇ. 14ರಷ್ಟು ಇಐಆರ್‍ಆರ್ ಪಡೆಯಲು ಅಗತ್ಯವಿರುವ ಒಟ್ಟು ರಿಯಾಯಿತಿ ಮೌಲ್ಯ ₹7,674 ಕೋಟಿ ಹಾಗೂ ಶೇ. 16 ಇಐಆರ್‍ಆರ್ ಪಡೆಯಲು ಅಗತ್ಯವಿರುವ ₹8,665 ಕೋಟಿ ರು ಒಟ್ಟು ರಿಯಾಯಿತಿ ಮೌಲ್ಯವಾಗಿದೆ.
ಹೀಗಾಗಿ, ಬಿಡ್‌ದಾರರು ಉಲ್ಲೇಖಿಸಿರುವ ಒಟ್ಟು ರಿಯಾಯಿತಿ ಮೌಲ್ಯವು ಶೇ. 14ರಷ್ಟು ಇಐಆರ್‍ಆರ್ ಆಧಾರದ ಮೇಲೆ ಅಗತ್ಯವಿರುವ ಒಟ್ಟು ರಿಯಾಯಿತಿ ಮೌಲ್ಯಕ್ಕಿಂತ ಶೇ. 40ರಷ್ಟು ಹೆಚ್ಚು ಹಾಗೂ ಶೇ. 16 ಇಐಆರ್‍ಆರ್ ಆಧಾರದ ಮೇಲೆ ಅಗತ್ಯವಿರುವ ಒಟ್ಟು ರಿಯಾಯಿತಿ ಮೌಲ್ಯಕ್ಕಿಂತ ಶೇ.24ಕ್ಕಿಂತ ಹೆಚ್ಚು ಇದೆ. (ಇದು ನವೀಕರಿಸಲಾದ DPR ವೆಚ್ಚ ಅಂದಾಜಿನ ಹಿನ್ನೆಲೆಯಲ್ಲಿ ಎಲ್ 1 ಬಿಡ್‌ದಾರನ ಒಟ್ಟು ರಿಯಾಯಿತಿ ಮೌಲ್ಯ ವಿಶ್ಲೇಷಣಾತ್ಮಕ ಸೂಚಕವಾಗಿ ಪರಿಗಣಿಸಲಾಗಿದೆ ಎಂದು ವಿವರಿಸಿದೆ.
ಇದೇ ರೀತಿಯಾಗಿ ಪ್ಯಾಕೇಜ್–2ಕ್ಕೆ ಸಂಬಂಧಿಸಿದಂತೆಯೂ ಇದೇ ಮಾದರಿಯಲ್ಲಿಯೇ ಲೆಕ್ಕ ಹಾಕಿದೆ. ಈ ಪ್ಯಾಕೇಜ್ 2ರಲ್ಲಿ ಪರಿಷ್ಕೃತ ಉಲ್ಲೇಖಿತ ಒಟ್ಟು ರಿಯಾಯಿತಿ ಮೌಲ್ಯವು ₹11,263.5 ಕೋಟಿ ಆಗಿದೆ. ಇದು ಮೂಲ ಒಟ್ಟು ರಿಯಾಯಿತಿ ಮೌಲ್ಯವು ಅಂದಾಜು ₹6,539.4 ಕೋಟಿಗಿಂತ 72.24% ಹೆಚ್ಚು ಇದೆ. (ಈ ಅಂದಾಜು ಫೆಬ್ರವರಿ 2025ರ DPR ವೆಚ್ಚ ಅಂದಾಜಿನ ಮೇಲೆ 14% EIRR ಆಧರಿಸಿ, Corrigendum–06ರ ಬದಲಾವಣೆಗಳನ್ನು ಒಳಗೊಂಡಂತೆ ಪರಿಷ್ಕರಿಸಲಾಗಿದೆ.)
ಆದರೆ, ಇದೇ ಯೋಜನೆಯನ್ನು ಇಂದೇ ಮರು ಟೆಂಡರ್ ಮಾಡಿದರೆ ಪರಿಷ್ಕೃತ ವೆಚ್ಚ ಅಂದಾಜಿನ ಪ್ರಕಾರ ಶೇ. 14 ಇಐಆರ್‍ಆರ್ ಪಡೆಯಲು ಅಗತ್ಯವಿರುವ ಒಟ್ಟು ರಿಯಾಯಿತಿ ಮೌಲ್ಯವು ₹8,354 ಕೋಟಿ ಹಾಗೂ ಶೇ. 16 ರಷ್ಟು ಇಐಆರ್‍ಆರ್ ಪಡೆಯಲು ಒಟ್ಟು ರಿಯಾಯಿತಿ ಮೌಲ್ಯವು ₹9,622 ಕೋಟಿ ಆಗಲಿದೆ.
ಹೀಗಾಗಿ, ಬಿಡ್‌ದಾರನ ಉಲ್ಲೇಖಿತ ಒಟ್ಟು ರಿಯಾಯಿತಿ ಮೌಲ್ಯವು ಶೇ. 14 ಇಐಆರ್‍ಆರ್ ಆಧಾರದ ಮೇಲೆ ಅಗತ್ಯವಿರುವ ಒಟ್ಟು ರಿಯಾಯಿತಿ ಮೌಲ್ಯಕ್ಕಿಂತ ಶೇ. 35 ಹೆಚ್ಚು ಹಾಗೂ ಶೇ. 16ರಷ್ಟು EIRR ಆಧಾರದ ಮೇಲಿದೆ. ಅಗತ್ಯವಿರುವ ಒಟ್ಟು ರಿಯಾಯಿತಿ ಮೌಲ್ಯಕ್ಕಿಂತ ಶೇ. 17% ಹೆಚ್ಚು ಇದೆ.(ಇದು ನವೀಕರಿಸಲಾದ ಡಿಪಿಆರ್ ವೆಚ್ಚ ಅಂದಾಜಿನ ಹಿನ್ನೆಲೆಯಲ್ಲಿ ಎಲ್ 1 ಬಿಡ್‌ದಾರನ ಒಟ್ಟು ರಿಯಾಯಿತಿ ಮೌಲ್ಯದ ವಿಶ್ಲೇಷಣಾತ್ಮಕ ಸೂಚಕವಾಗಿ ಪರಿಗಣಿಸಲಾಗಿದೆ ಎಂದು ವಿವರಿಸಿದೆ.




