ಬೆಂಗಳೂರು; ಟೆಂಡರ್‌ಗಳು, ಕಾಮಗಾರಿಗಳ ವಿಚಾರದಲ್ಲಿ ಉದ್ದೇಶಪೂರ್ವಕ ನಿಷ್ಕ್ರಿಯತೆ ಹಾಗೂ ಸಂಚುಕೋರ ರಕ್ಷಣೆ ಮಾಡಲಾಗುತ್ತಿದೆ ಎಂದು ಮುಖ್ಯಮಂತ್ರಿ ಡಿ ಕೆ ಶಿವಕುಮಾರ ಅವರ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಆಗಿರುವ ಹಿರಿಯ ಐಎಎಸ್ ಅಧಿಕಾರಿ ತುಷಾರ್ ಗಿರಿನಾಥ್ ಅವರ ವಿರುದ್ಧ ಮುಖ್ಯ ಕಾರ್ಯದರ್ಶಿಗಳಿಗೆ ಲಿಖಿತ ದೂರು ಸಲ್ಲಿಕೆಯಾಗಿದೆ.
ಎಂಎಸ್‌ವಿ ಕನ್ಸ್ಟ್ರಕ್ಷನ್ಸ್ ಸಂಸ್ಥೆಗೆ ಸಂಬಂಧಿಸಿದಂತೆ ಟೆಂಡರ್‌ಗಳು ಮತ್ತು ಕಾಮಗಾರಿಗಳ ವಿಚಾರದಲ್ಲಿ ಉದ್ದೇಶಪೂರ್ವಕ ನಿಷ್ಕ್ರಿಯತೆ ಹಾಗೂ ಸಂಚುಕೋರ ರಕ್ಷಣೆ ಮಾಡಲಾಗಿದೆ ಎಂದು ಸಾಮಾಜಿಕ ಹೋರಾಟಗಾರ ಟಿ ಜೆ ಅಬ್ರಾಹಂ ಅವರು ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿಗೆ 2026ರ ಜನವರಿ, ಫೆಬ್ರುವರಿ ಮತ್ತು ಮಾರ್ಚ್‌ನಲ್ಲಿ ಒಟ್ಟು ಮೂರು ಬಾರಿ ಕಾನೂನು ನೋಟೀಸ್ ನೀಡಿದ್ದರು.
ಈ ನೋಟೀಸ್ ಸ್ವೀಕರಿಸಿದ್ದರೂ ಸಹ ಇದಕ್ಕೆ ಸಂಬಂಧಿಸಿದಂತೆ ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಹಿಂದಿನ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಯಾವುದೇ ಕ್ರಮವಹಿಸಿರಲಿಲ್ಲ. ಹೀಗಾಗಿ 2026ರ ಮೇ 25ರಂದು ಮತ್ತೊಮ್ಮೆ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಮತ್ತು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಲಿಖಿತ ದೂರು ಸಲ್ಲಿಸಿದ್ದಾರೆ.
ಘನತ್ಯಾಜ್ಯ ವಿಲೇವಾರಿಗೆ ಸಂಬಂಧಿಸಿದಂತೆ ಟೆಂಡರ್ ಪ್ರಕ್ರಿಯೆಯಲ್ಲಿ ನಡೆದಿದೆ ಎನ್ನಲಾದ ವಿವಿಧ ರೀತಿಯ ಗಂಭೀರ ಸ್ವರೂಪದ ಅಕ್ರಮಗಳಿಗೆ ಸಂಬಂಧಿಸಿದಂತೆ ಪ್ರತಿಪಕ್ಷ ನಾಯಕ ಆರ್ ಅಶೋಕ್ ಅವರು ಸೇರಿದಂತೆ ಹಲವರು ದೂರು ಸಲ್ಲಿಸಿದ್ದರು. ಈ ದೂರಿನ ಕುರಿತು ನೂತನ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಮತ್ತು ಪ್ರತಿಪಕ್ಷ ನಾಯಕ ಆರ್ ಅಶೋಕ್ ಅವರ ಮಧ್ಯೆ ವಾಕ್ಸಮರ ನಡೆದಿತ್ತು. ಈ ಬೆಳವಣಿಗೆ ನಡುವೆಯೇ ಇದೀಗ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ತುಷಾರ್ ಗಿರಿನಾಥ್ ಅವರ ವಿರುದ್ಧ ಗುರುತರವಾದ ಆರೋಪ ಕೇಳಿ ಬಂದಿರುವುದು ಮುನ್ನೆಲೆಗೆ ಬಂದಿದೆ.
ಟಿ ಜೆ ಅಬ್ರಾಹಂ ಅವರು ನೀಡಿರುವ ದೂರಿನ ಪ್ರತಿಯು ‘ದಿ ಫೈಲ್’ಗೆ ಲಭ್ಯವಾಗಿದೆ.
ಇದಕ್ಕೂ ಮೊದಲು ಬಿಬಿಎಂಪಿ / ಜಿಬಿಎ ಆಯುಕ್ತರು ಹಾಗೂ ಬೆಂಗಳೂರು ಕೇಂದ್ರ, ಉತ್ತರ, ಪೂರ್ವ, ದಕ್ಷಿಣ ಮತ್ತು ಪಶ್ಚಿಮ ನಗರ ನಿಗಮಗಳ ಆಯುಕ್ತರಿಗೆ ಟಿ ಜೆ ಅಬ್ರಾಹಂ ಅವರು ದುರು ಸಲ್ಲಿಸಿದ್ದರು. ಈ ಮನವಿಯಲ್ಲಿ ಎಂ/ಎಸ್ ಎಂಎಸ್‌ವಿ ಕನ್ಸ್ಟ್ರಕ್ಷನ್ಸ್, ಬಿಬಿಎಂಪಿ / ಜಿಬಿಎ ಅಧಿಕಾರಿಗಳು ಹಾಗೂ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳ ಕಚೇರಿಗೆ ಸಂಬಂಧಿಸಿದ ಗಂಭೀರ ಮತ್ತು ವ್ಯವಸ್ಥಿತ ಅಕ್ರಮಗಳ ಕುರಿತು ಮತ್ತು ಕರ್ನಾಟಕ ಸಾರ್ವಜನಿಕ ಖರೀದಿ ಪಾರದರ್ಶಕತೆ ನಿಯಮಗಳ ಸ್ಪಷ್ಟ ಉಲ್ಲಂಘನೆಗಳನ್ನು ವಿವರಿಸಿದ್ದರು.

ಟೆಂಡರ್ ಪ್ರಕ್ರಿಯೆಗಳಲ್ಲಿ ವಂಚನೆ
ಸಾರ್ವಜನಿಕ ಮೂಲಸೌಕರ್ಯ ಕಾಮಗಾರಿಗಳಲ್ಲಿ ಎಂಎಸ್‌ವಿ ಕನ್ಸ್ಟ್ರಕ್ಷನ್ಸ್ ಸಂಸ್ಥೆಯು ನಡೆಸಿದೆ ಎಂದು ದೂರಲಾಗಿರುವ ವ್ಯವಸ್ಥಿತ ಭ್ರಷ್ಟಾಚಾರ, ಟೆಂಡರ್ ಪ್ರಕ್ರಿಯೆಗಳಲ್ಲಿ ವಂಚನೆ, ದಾಖಲೆಗಳನ್ನು ತಿರುಚಿರುವುದು ಹಾಗೂ ಭಾರೀ ಪ್ರಮಾಣದ ಕಾರ್ಯನಿರ್ವಹಣಾ ವೈಫಲ್ಯಗಳ ಕುರಿತು ವಿವರಿಸಲಾಗಿದೆ. ಈ ಎಲ್ಲವೂ ಬಿಬಿಎಂಪಿ (ಈಗ ಜಿಬಿಎ) ಅಧಿಕಾರಿಗಳೊಂದಿಗೆ ಹಾಗೂ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ (ನಗರಾಭಿವೃದ್ಧಿ) ಅವರ ಕಚೇರಿಯ ಸಹಭಾಗಿತ್ವದಲ್ಲಿ ನಡೆದಿದೆ ಎಂದು ದೂರುದಾರ ಟಿ ಜೆ ಅಬ್ರಹಾಂ ಅವರು ಆರೋಪಿಸಿರುವುದು ಗೊತ್ತಾಗಿದೆ.
ಜಿಬಿಎ ಅಧಿಕಾರಿಗಳೊಂದಿಗೆ ಸಂಸ್ಥೆಯು ಆಪ್ತ ಸಂಬಂಧ ಹೊಂದಿದೆಯೇ?
‘ಎಂಎಸ್‌ವಿ ಕನ್ಸ್ಟ್ರಕ್ಷನ್ಸ್ ಸಂಸ್ಥೆಯು ನಿರಂತರ ಕಾರ್ಯನಿರ್ವಹಣಾ ವೈಫಲ್ಯ ಹಾಗೂ ವಂಚನಾತ್ಮಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದೆ. ಆದರೂ ಸಹ, ಬಿಬಿಎಂಪಿ/ಜಿಬಿಎ ಹಾಗೂ ಇತರ ಇಲಾಖೆಗಳ ಮೂಲಕ ದೊಡ್ಡ ಪ್ರಮಾಣದ ಸಾರ್ವಜನಿಕ ಕಾಮಗಾರಿಗಳ ಗುತ್ತಿಗೆಗಳನ್ನು ನಿರಂತರವಾಗಿ ಪಡೆಯುತ್ತ ಬಂದಿದೆ. ಇದು ಜಿಬಿಎ ಅಧಿಕಾರಿಗಳೊಂದಿಗೆ ಸಂಸ್ಥೆಯು ಹೊಂದಿರುವ ಆಪ್ತ ಸಂಬಂಧ (nexus) ಮತ್ತು ಅದರ ಮೂಲಕ ದೊರೆತ ಅನುಕೂಲದಿಂದ ಸಾಧ್ಯವಾಗಿದೆ ಎಂಬುದು ಗೋಚರಿಸುತ್ತದೆ,’ ಎಂದು ದೂರುದಾರ ಟಿ ಜೆ ಅಬ್ರಹಾಂ ಅವರು ಆಪಾದಿಸಿದ್ದಾರೆ.

ಸಾಮರ್ಥ್ಯಕ್ಕೂ ಮೀರಿದ ಟೆಂಡರ್
2021ರ ವೇಳೆಗೆ ಎಂಎಸ್‌ವಿ ಸಂಸ್ಥೆಯ ಟೆಂಡರ್ ಸಾಮರ್ಥ್ಯ (Bid Capacity) ಕೇವಲ ಸುಮಾರು ₹12.5 ಕೋಟಿಯಷ್ಟಿತ್ತು. ಆದರೆ ಆ ಸಾಮರ್ಥ್ಯವನ್ನು ಮೀರಿದ ಮೌಲ್ಯದ ಟೆಂಡರ್‌ಗಳಲ್ಲಿ ಈ ಕಂಪನಿಯು ಭಾಗವಹಿಸುತ್ತಲೇ ಬಂದಿದೆ. ಅಂತಹ ಟೆಂಡರ್‌ಗಳನ್ನು ಪಡೆಯುವುದನ್ನೂ ಮುಂದುವರಿಸಿತು. ಇದು ಕೆಟಿಪಿಪಿ ಚೌಕಟ್ಟಿನ ಅಡಿಯಲ್ಲಿ ನಿಗದಿಪಡಿಸಲಾದ ಕಾನೂನುಬದ್ಧ ಹಣಕಾಸು ಅರ್ಹತಾ ಮಾನದಂಡಗಳ ಉಲ್ಲಂಘನೆಯಾಗಿದೆ ಎಂದು ಆರೋಪಿಸಿರುವುದು ತಿಳಿದು ಬಂದಿದೆ.
ಈ ಆರೋಪಕ್ಕೆ ಟಿ ಜೆ ಅಬ್ರಹಾಂ ಅವರು ಕೆಲವು ಜಾಬ್ ಕೋಡ್ ಸಂಖ್ಯೆಗಳನ್ನು ನೀಡಿದ್ದಾರೆ. (ಸಂಖ್ಯೆ 102-18-000059 ರಿಂದ 102-18-000064, 304-20-000303, 304-20-000012, 304-20-000292 ಹಾಗೂ 028-20-000016 ಅಡಿಯಲ್ಲಿ) ಒಟ್ಟು 8 ಟೆಂಡರ್‌ಗಳನ್ನು ಎಂಎಸ್‌ವಿ ಸಂಸ್ಥೆಗೆ ನೀಡಲಾಗಿದೆ. ಈ ಟೆಂಡರ್‌ಗಳ ಒಟ್ಟು ಮೌಲ್ಯ ₹ 56,72,50,947/- ಆಗಿದೆ ಎಂದು ವಿವರಿಸಿದ್ದಾರೆ.

ಕಂಪನಿಗೆ 173 ಕೋಟಿ ಮೌಲ್ಯದ ಹೆಚ್ಚುವರಿ ಟೆಂಡರ್ ಸಿಕ್ಕಿದ್ಹೇಗೆ?
ಆದರೆ, ಈ ಕಾಮಗಾರಿಗಳನ್ನು ಕಂಪನಿಯು ನಿರ್ವಹಿಸಲಿಲ್ಲ, ಅಥವಾ ಯಾವುದೇ ಭಾಗದ ಕಾಮಗಾರಿಯನ್ನೂ ಪೂರ್ಣಗೊಳಿಸಲಿಲ್ಲ. ಹಾಗೆಯೇ ಕೆಡಬ್ಲ್ಯೂ 4ರ ಷರತ್ತು 26ರ ಅಡಿಯಲ್ಲಿ ಅವಧಿ ವಿಸ್ತರಣೆಗೆ ಅಗತ್ಯ ಅನುಮತಿಯನ್ನು ಸಹ ಪಡೆದಿರಲಿಲ್ಲ ಎಂದು ದೂರಲಾಗಿದೆ. ₹56,72,50,947 ರು ಮೌಲ್ಯದ ಹಳೆಯ ಬಾಕಿ/ಅಪೂರ್ಣ ಕಾಮಗಾರಿಗಳು ಇದ್ದವು. ಆದರೂ 2020ರಲ್ಲಿ ಎಂಎಸ್‌ವಿ ಸಂಸ್ಥೆಯು ಹೊಸ ಟೆಂಡರ್‌ಗಳನ್ನು ಪಡೆಯುವುದನ್ನು ಮುಂದುವರಿಸಿತು. 2021 ರಿಂದ 2025ರ ಅವಧಿಯಲ್ಲಿ ಸುಮಾರು ₹173 ಕೋಟಿ ಮೌಲ್ಯದ ಹೆಚ್ಚುವರಿ ಟೆಂಡರ್‌ಗಳನ್ನು ಸಂಸ್ಥೆಗೆ ನೀಡಲಾಗಿದೆ ಎಂದು ದೂರಿನಲ್ಲಿ ಗಮನಸೆಳೆದಿರುವುದು ಗೊತ್ತಾಗಿದೆ.
ವಿಶೇಷವಾಗಿ 2021ರ ಮಾರ್ಚ್ 30ರಂದು ಎಂಎಸ್‌ವಿ ಸಂಸ್ಥೆಯ ಹಿಂದಿನ ದಾಖಲೆಗಳು ಮತ್ತು ಕರ್ತವ್ಯ ಲೋಪಗಳ ಬಗ್ಗೆ ಪೂರ್ವಜ್ಞಾನವಿದ್ದರೂ ಸಹ, ಅನೇಕ ಟೆಂಡರ್‌ಗಳನ್ನು ಇದೇ ಕಂಪನಿಗೆ ಮಂಜೂರು ಮಾಡಲಾಗಿದೆ. 2020ರ ಮೊದಲು ಮತ್ತು ನಂತರ ಎಂಎಸ್‌ವಿ ಸಂಸ್ಥೆಗೆ ನೀಡಲಾದ ಅನೇಕ ಕಾಮಗಾರಿಗಳು ಅಪೂರ್ಣವಾಗಿಯೇ ಉಳಿದಿವೆ ಎಂದು ಅಬ್ರಹಾಂ ಅವರು ದೂರಿನಲ್ಲಿ ವಿವರಿಸಿದ್ದಾರೆ.

ಇದರ ಪರಿಣಾಮವಾಗಿ, ಜುಲೈ 2022ರಲ್ಲಿ ಜಿಬಿಎ (GBA) ಸಂಸ್ಥೆಯು ₹1,91,36,228/- ಮೊತ್ತದ ಭದ್ರತಾ ಠೇವಣಿಗಳು (Security Deposits) ಮತ್ತು ಬ್ಯಾಂಕ್ ಗ್ಯಾರಂಟಿಗಳನ್ನು ಮುಟ್ಟುಗೋಲು (Forfeit) ಹಾಕಿಕೊಂಡಿದೆ. ಹಾಗೆಯೇ 2021ರ ಸೆ.9ರಂದು ಹೊರಡಿಸಿದ್ದ ಆದೇಶ (ಸಂಖ್ಯೆ 882/2021-22 ) ದ ಮೂಲಕ ಈ ಟೆಂಡರ್‌ಗಳನ್ನು ರದ್ದುಪಡಿಸಲಾಗಿತ್ತು. ಅಲ್ಲದೇ 2022ರ ಜುಲೈ 8ರಂದು (ಆದೇಶ ಸಂಖ್ಯೆ 187/2022-23 ಮೂಲಕ ) ಮುಟ್ಟುಗೋಲು ಆದೇಶ ಹೊರಡಿಸಿದೆ.
6. 22 ಕೋಟಿ ನಷ್ಟ?
ಕಾಮಗಾರಿಗಳನ್ನು ನಿರ್ವಹಿಸದಿರುವುದು ಹಾಗೂ ಅವುಗಳನ್ನು ರದ್ದುಪಡಿಸಿರುವುದರಿಂದ, ಜಿಬಿಎಗೆ ಒಟ್ಟಾರೆ ₹6,22,92,658.48 ನಷ್ಟ ಉಂಟಾಗಿದೆ ಎಂದು ಲೆಕ್ಕ ಹಾಕಿದ್ದಾರೆ. ಇದರಲ್ಲಿ ಕೇವಲ ₹1,91,36,228/- ಮಾತ್ರ ಬ್ಯಾಂಕ್ ಗ್ಯಾರಂಟಿಗಳನ್ನು ನಗದೀಕರಿಸುವ (encash) ಮೂಲಕ ವಸೂಲಾಗಿದೆ. ಇನ್ನೂ ₹4,31,56,430.48/- ಮೊತ್ತವನ್ನು ಎಂಎಸ್‌ವಿ ಸಂಸ್ಥೆಯಿಂದ ವಸೂಲು ಮಾಡಬೇಕಾಗಿದೆ ಎಂದು ಸರ್ಕಾರದ ಗಮನಸೆಳೆದಿರುವುದು ತಿಳಿದು ಬಂದಿದೆ.

ದೂರುದಾರರು ತಮ್ಮ ದೂರಿನಲ್ಲಿ ಎಂಎಸ್‌ವಿ ಕನ್ಸ್ಟ್ರಕ್ಷನ್ಸ್ (“MSV”) ಮತ್ತು/ಅಥವಾ ಎಂಎಸ್‌ವಿ ವೆಂಕಟೇಶ್ ಕನ್ಸ್ಟ್ರಕ್ಷನ್ಸ್ ಹಾಗೂ/ಅಥವಾ ಎಂ. ಎಸ್. ವೆಂಕಟೇಶ್ ಅವರು ಕಾಮಗಾರಿಗಳನ್ನು ಉದ್ದೇಶಪೂರ್ವಕವಾಗಿ ಆರಂಭಿಸಿಲ್ಲ. ಅಥವಾ ಅಪೂರ್ಣವಾಗಿ ಬಾಕಿ ಉಳಿಸುತ್ತಿದ್ದ ರೀತಿಯ ಕುರಿತು ವಿವರಿಸಿದ್ದಾರೆ.

ಜಿಬಿಎ ಮುಂದೆ ತಪ್ಪು ನಿರೂಪಣೆ
ಇದಾದ ನಂತರ ಅಂತಹ ಕಾಮಗಾರಿಗಳನ್ನು ಹೊಸ ಟೆಂಡರ್‌ಗಳಲ್ಲಿ ಸೇರಿಸಿ ಬೇರೆ ಗುತ್ತಿಗೆದಾರರ ಮೂಲಕ ಕಾರ್ಯಗತಗೊಳಿಸಲಾಗಿದೆ. ಎಂಎಸ್‌ವಿ ಸಂಸ್ಥೆಯು ಛಾಯಾಚಿತ್ರಗಳ ದಿನಾಂಕ ಮತ್ತು ಸಮಯಗಳನ್ನು ಬದಲಾಯಿಸಿ ಅವುಗಳನ್ನು ತಿರುಚುವ ಮೂಲಕ ಆ ಕಾಮಗಾರಿಗಳನ್ನು ತಾವೇ ಪೂರ್ಣಗೊಳಿಸಿರುವಂತೆ ಬಿಬಿಎಂಪಿ (ಜಿಬಿಎ) ಮುಂದೆ ತಪ್ಪು ನಿರೂಪಣೆ ಮಾಡಿದೆ ಎಂದು ಆರೋಪಿಸಿರುವುದು ಗೊತ್ತಾಗಿದೆ.
ನ್ಯಾಯಸಮ್ಮತವಲ್ಲದ ಪಾವತಿ
ವಾಸ್ತವದಲ್ಲಿ ಎಂದಿಗೂ ನಿರ್ವಹಿಸದ ಕಾಮಗಾರಿಗಳಿಗೂ ಪಾವತಿಗಳನ್ನು ಪಡೆಯುವ ಉದ್ದೇಶದಿಂದ ಸುಳ್ಳು ಮತ್ತು ನಕಲಿ ಹಕ್ಕುಪತ್ರಗಳನ್ನು (claims) ಸಲ್ಲಿಸಲಾಗಿದೆ ಎಂದು ಆರೋಪಿಸಲಾಗಿದೆ. ಈ ರೀತಿಯಾಗಿ, ಅನಧಿಕೃತ ಹಾಗೂ ನ್ಯಾಯಸಮ್ಮತವಲ್ಲದ ಪಾವತಿಗಳನ್ನು ಪಡೆಯಲಾಗಿದೆ. ತಮಗೆ ಅಕ್ರಮವಾಗಿ ಆರ್ಥಿಕ ಲಾಭ ಮಾಡಿಕೊಳ್ಳುವುದರ ಜೊತೆಗೆ, ಸಾರ್ವಜನಿಕ ಖಜಾನೆಗೆ ನಷ್ಟ ಉಂಟುಮಾಡಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಕ್ರಿಮಿನಲ್ ಸಂಚು ನಡೆಸಿದ್ದರೇ?
ಈ ಆರೋಪಗಳು ಕಾನೂನುಗಳ ಅಡಿಯಲ್ಲಿ ಕ್ರಿಮಿನಲ್ ಕ್ರಮಕ್ಕೆ ಒಳಪಡಬಹುದಾದವು ಎಂದು ದೂರಿನಲ್ಲಿ ತಿಳಿಸಲಾಗಿದೆ. ಭಾರತೀಯ ನ್ಯಾಯ ಸಂಹಿತೆ (BNS) ಕಲಂ 318(4) (ಹಿಂದಿನ ಐಪಿಸಿ ಕಲಂ 420) – ವಂಚನೆ (Cheating) BNS ಕಲಂ 316(2) (ಹಿಂದಿನ ಐಪಿಸಿ ಕಲಂ 406) – ಕ್ರಿಮಿನಲ್ ನಂಬಿಕೆ ದ್ರೋಹ (Criminal Breach of Trust) BNS ಕಲಂ 316(5) (ಹಿಂದಿನ ಐಪಿಸಿ ಕಲಂ 409) – ಸಾರ್ವಜನಿಕ ಸೇವಕರಿಂದ ನಂಬಿಕೆ ದ್ರೋಹ BNS ಕಲಂ 336(3) (ಹಿಂದಿನ ಐಪಿಸಿ ಕಲಂ 468) – ವಂಚನೆಯ ಉದ್ದೇಶಕ್ಕಾಗಿ ನಕಲಿ ದಾಖಲೆ ಸೃಷ್ಟಿ (Forgery for Purpose of Cheating) BNS ಕಲಂ 340(2) (ಹಿಂದಿನ ಐಪಿಸಿ ಕಲಂ 471) – ನಕಲಿ ದಾಖಲೆಯನ್ನು ನಿಜವಾದ ದಾಖಲೆಯಂತೆ ಬಳಸುವುದು BNS ಕಲಂ 61(2) (ಹಿಂದಿನ ಐಪಿಸಿ ಕಲಂ 120B) – ಕ್ರಿಮಿನಲ್ ಸಂಚು (Criminal Conspiracy)ಗಳನ್ನು ದೂರಿನಲ್ಲಿ ಉಲ್ಲೇಖಿಸಿರುವುದು ಗೊತ್ತಾಗಿದೆ.

ಈ ಅಪರಾಧಗಳನ್ನು ಭ್ರಷ್ಟಾಚಾರ ತಡೆ ಕಾಯ್ದೆ (Prevention of Corruption Act) ಕಲಂ 13 ರೊಂದಿಗೆ ಓದಬೇಕು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಆದರೂ ಈ ದೂರಿನ ಮೇಲೆ ಇದುವರೆಗೆ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ. ಹಾಗೂ ಕರ್ನಾಟಕ ಸಾರ್ವಜನಿಕ ಖರೀದಿ ಪಾರದರ್ಶಕತೆ (KTPP) ನಿಯಮಗಳ ಪ್ರಕಾರ ಸಂಬಂಧಿತ ಗುತ್ತಿಗೆದಾರರಾದ ಎಂ. ಎಸ್. ವೆಂಕಟೇಶ್ ವಿರುದ್ಧ ಯಾವುದೇ ಕ್ರಮ ಜರುಗಿಸಲಾಗಿಲ್ಲ ಎಂದು ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಮತ್ತು ಮುಖ್ಯಕಾರ್ಯದರ್ಶಿಗೆ ಬರೆದಿರುವ ದೂರಿನಲ್ಲಿ ವಿವರಿಸಿರುವುದು ತಿಳಿದು ಬಂದಿದೆ.

ಇದಾದ ನಂತರ ಮತ್ತೊಂದು ದೂರನ್ನು ನೀಡಿದ್ದರು.
ಲೀಗಲ್ ನೋಟೀಸ್ ನೀಡಿದ್ದೇಕೆ?
ಜಿಬಿಎ – ಪಶ್ಚಿಮ ವಲಯ-2ರ ಮುಖ್ಯ ಇಂಜಿನಿಯರ್ ವಿರುದ್ಧ ಆರೋಪಗಳನ್ನು ಮಾಡಿದ್ದರು. ಕರ್ತವ್ಯ ಲೋಪ, ಎಂಎಸ್‌ವಿ ಕನ್ಸ್ಟ್ರಕ್ಷನ್ಸ್ ಸಂಸ್ಥೆಯೊಂದಿಗೆ ಹೊಂದಾಣಿಕೆ (Collusion), ಹಾಗೂ ಅದರ ಪರಿಣಾಮವಾಗಿ ಸರ್ಕಾರಿ ಖಜಾನೆಗೆ ಉಂಟಾದ ನಷ್ಟದ ಕುರಿತು ಅಪಾದಿಸಲಾಗಿತ್ತು. ಆದರೂ ಎರಡು ವಿವರವಾದ ಲಿಖಿತ ಮನವಿಗಳಿದ್ದರೂ ಸಹ ಯಾವುದೇ ಕ್ರಮ ಕೈಗೊಂಡಿಲ್ಲ. ಹೀಗಾಗಿ ಅನಿವಾರ್ಯವಾಗಿ 2026ರ ಮಾರ್ಚ್ 18ರಂದು ಲೀಗಲ್ ನೋಟೀಸ್ ನೀಡಬೇಕಾಯಿತು ಎಂದು ಅಬ್ರಹಾಂ ಅವರು ವಿವರಿಸಿರುವುದು ಗೊತ್ತಾಗಿದೆ.

ವ್ಯವಸ್ಥಿತ ಭ್ರಷ್ಟಾಚಾರ
ಎಂಎಸ್‌ವಿ ಕನ್ಸ್ಟ್ರಕ್ಷನ್ಸ್‌ಗೆ ಸಂಬಂಧಿಸಿದಂತೆ ಹಲವು ವಿಷಯಗಳ ಬಗ್ಗೆ ಆಕ್ಷೇಪಣೆ ವ್ಯಕ್ತಪಡಿಸಲಾಗಿತ್ತು. ವ್ಯವಸ್ಥಿತ ಭ್ರಷ್ಟಾಚಾರ (Systemic Corruption),ಟೆಂಡರ್ ಪ್ರಕ್ರಿಯೆಯಲ್ಲಿನ ಅಕ್ರಮಗಳು (Tender Malpractices), ಗಂಭೀರ ಕಾರ್ಯನಿರ್ವಹಣಾ ವೈಫಲ್ಯ (Gross Non-Performance), ಹಾಗೂ ಕರ್ನಾಟಕ ಸಾರ್ವಜನಿಕ ಖರೀದಿ ಪಾರದರ್ಶಕತೆ ಕಾಯ್ದೆ/ನಿಯಮಗಳ ಉಲ್ಲಂಘನೆಗಳು, ಕರ್ನಾಟಕ ಸಾರ್ವಜನಿಕ ಖರೀದಿ ಪಾರದರ್ಶಕತೆ (KTPP) ಚೌಕಟ್ಟಿನ ಅಡಿಯಲ್ಲಿ ಆಗಿರುವ ಉಲ್ಲಂಘನೆಗಳ ಕುರಿತು ವಿವರಿಸಿದ್ದರು.
ಹೀಗೆ ಹಲವು ಲಿಖಿತ ಮನವಿಗಳು ಹಾಗೂ ಹಿರಿಯ ಕ್ಷೇತ್ರಾಧಿಕಾರಿಗಳು / ಮುಖ್ಯ ಇಂಜಿನಿಯರ್ ಅವರೊಂದಿಗೆ ನಡೆಸಿದ ವೈಯಕ್ತಿಕ ಸಂವಹನಗಳಿದ್ದರೂ ಸಹ ಯಾವುದೇ ಪಾರದರ್ಶಕ ಅಥವಾ ಸ್ವತಂತ್ರ ತನಿಖೆಯನ್ನು ಆರಂಭಿಸಲಿಲ್ಲ. ಎಂಎಸ್‌ವಿ ಕನ್ಸ್ಟ್ರಕ್ಷನ್ಸ್ ಸಂಸ್ಥೆಯನ್ನು ಅನರ್ಹಗೊಳಿಸಲು (Debar) ಅಥವಾ ಕಪ್ಪುಪಟ್ಟಿಗೆ ಸೇರಿಸಲು (Blacklist) ಯಾವುದೇ ಕ್ರಮ ಕೈಗೊಂಡಿಲ್ಲ. ಅಲ್ಲದೇ ಮುಂದಿನ ಪಾವತಿಗಳನ್ನು ನಿರ್ಬಂಧಿಸಲು ಅಥವಾ ತಡೆಹಿಡಿಯಲು ಕ್ರಮ ಕೈಗೊಳ್ಳಲಿಲ್ಲ ಎಂದು ದೂರಿನಲ್ಲಿ ವಿವರಿಸಿರುವುದು ತಿಳಿದು ಬಂದಿದೆ.

ಹಾಗೆಯೇ ಬಿಬಿಎಂಪಿ / ಜಿಬಿಎಗೆ ಉಂಟಾಗಿದೆ ಎಂದು ಹೇಳಲಾಗಿರುವ ₹4,31,56,430.48 ಮೊತ್ತದ ನಷ್ಟವನ್ನು ವಸೂಲು ಮಾಡಲು ಯಾವುದೇ ಅರ್ಥಪೂರ್ಣ ವಸೂಲಾತಿ ಕ್ರಮಗಳನ್ನು ಆರಂಭಿಸಿಲ್ಲ ಎಂದು ಆರೋಪಿಸಿರುವುದು ಗೊತ್ತಾಗಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತಿದ್ದುಪಡಿ ಕ್ರಮಗಳು (Corrective Measures), ಶಿಸ್ತು ಕ್ರಮಗಳು (Disciplinary Measures), ನಷ್ಟ ವಸೂಲಾತಿ ಕ್ರಮಗಳು (Recovery Measures) ಕ್ರಿಮಿನಲ್ ಕ್ರಮಗಳು (Criminal Proceedings) ಕೈಗೊಳ್ಳದಿದ್ದಲ್ಲಿ ಪೊಲೀಸ್ ಅಧಿಕಾರಿಗಳು, ಲೋಕಾಯುಕ್ತ ಹಾಗೂ ಸೂಕ್ತ ನ್ಯಾಯಾಲಯಗಳ ಮೊರೆ ಹೋಗಬೇಕಾಗುತ್ತದೆ ಎಂದು ನೋಟಿಸ್‌ನಲ್ಲಿ ಎಚ್ಚರಿಸಿದ್ದರು.

ನಡೆಯದ ಪಾರದರ್ಶಕ ತನಿಖೆ
ಆದರೂ ತುಷಾರ್ ಗಿರಿನಾಥ್ ಅವರು ಈ ಸಂಬಂಧ ಯಾವುದೇ ಪರಿಣಾಮಕಾರಿ ಕ್ರಮವನ್ನು ಆರಂಭಿಸಿಲ್ಲ. ಯಾವುದೇ ಪಾರದರ್ಶಕ ತನಿಖೆಯನ್ನು ಪ್ರಾರಂಭಿಸಿಲ್ಲ. ಯಾವುದೇ ಸ್ವತಂತ್ರ ತನಿಖೆ ನಡೆಸಲು ಮುಂದಾಗಿರಲಿಲ್ಲ. ಹೀಗಾಗಿ ಅವರು ಗಂಭೀರ ಕರ್ತವ್ಯಲೋಪ (Dereliction of Duty) ಎಸಗಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ ಎಂದು ದೂರಿನಲ್ಲಿ ತಿಳಿಸಿರುವುದು ಗೊತ್ತಾಗಿದೆ.

‘ಇಷ್ಟೊಂದು ದೂರುಗಳು ಮತ್ತು ಕಾನೂನು ನೋಟಿಸ್‌ಗಳು ಜಾರಿಯಾಗಿದ್ದರೂ ಸಹ ಸಂಬಂಧಿತ ಗುತ್ತಿಗೆದಾರರಾದ ಎಂ. ಎಸ್. ವೆಂಕಟೇಶ್ ಅವರು ಸಂಪೂರ್ಣ ಸರ್ಕಾರಿ ವ್ಯವಸ್ಥೆಗೆ ವಂಚನೆ ಮಾಡಿದ್ದರು. ಹೊಸ ಟೆಂಡರ್ ಪ್ರಕ್ರಿಯೆಯಲ್ಲಿ ಭಾಗವಹಿಸಲು ಅವಕಾಶ ನೀಡಿರುವುದು ಅತ್ಯಂತ ಆಶ್ಚರ್ಯಕರ ಹಾಗೂ ಆಘಾತಕಾರಿ ಸಂಗತಿಯಾಗಿದೆ,’ ಎಂದು ಹೇಳಿದ್ದಾರೆ.

ರಾಜಾಜಿನಗರ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಟೆಂಡರ್ ಪ್ರಕ್ರಿಯೆಗಳಲ್ಲಿ ಲೋಪಗಳಾಗಿವೆ. ಆಟದ ಮೈದಾನ, ವಾರ್ಡ್ ಕಚೇರಿ ಕಟ್ಟಡ, ರಸ್ತೆಗಳು ಮತ್ತು ಚರಂಡಿಗಳ ಸಮಗ್ರ ಅಭಿವೃದ್ಧಿ ( ಪ್ಯಾಕೇಜ್ ಸಂಖ್ಯೆ 01-RNR-2025-26), ಆಯ್ದ ಮುಖ್ಯ ಮತ್ತು ಉಪ ಮುಖ್ಯ ರಸ್ತೆಗಳ ರಸ್ತೆ, ಚರಂಡಿ, ಪಾದಚಾರಿ ಮಾರ್ಗ ಹಾಗೂ ಬೀದಿ ದೀಪಗಳ ಸಮಗ್ರ ಅಭಿವೃದ್ಧಿ (ಪ್ಯಾಕೇಜ್ ಸಂಖ್ಯೆ 02-RNR-2025-26) ಕಾಮಗಾರಿಗಳ ಟೆಂಡರ್‍ನಲ್ಲಿ ಎಂಎಸ್‌ವಿ (MSV) ಎಂ. ಎಸ್. ವೆಂಕಟೇಶ್ ಭಾಗವಹಿಸಿದ್ದರು.

ಟೆಂಡರ್ ತಿರಸ್ಕೃತವಾಗಿದ್ದೇಕೆ?
ಆದರೆ ಟೆಂಡರ್ ಪ್ರಕ್ರಿಯೆಯಲ್ಲಿ ಅವರು ತಪ್ಪು ಮಾಹಿತಿ ನೀಡಿದ್ದರು ಹಾಗೂ ವಾಸ್ತವಾಂಶಗಳನ್ನು ತಪ್ಪಾಗಿ ಪ್ರತಿನಿಧಿಸಿದ್ದರು (Misrepresentation) ಎಂಬ ನಿರ್ದಿಷ್ಟ ಕಾರಣಕ್ಕಾಗಿ ಅವರ ಟೆಂಡರ್ ಅರ್ಜಿಯನ್ನು ತಿರಸ್ಕರಿಸಲಾಗಿತ್ತು. ಇತರ ಸ್ಪರ್ಧಾತ್ಮಕ ಟೆಂಡರ್‌ದಾರರು ಎಂಎಸ್‌ವಿ ಸಂಸ್ಥೆಯು ಟೆಂಡರ್ ಪ್ರಕ್ರಿಯೆಯಲ್ಲಿ ಸುಳ್ಳು ಮತ್ತು ತಪ್ಪು ಮಾಹಿತಿಯನ್ನು ಸಲ್ಲಿಸಿದೆ ಎಂದು ಗಂಭೀರ ಆಕ್ಷೇಪಣೆ ವ್ಯಕ್ತಪಡಿಸಿದ ನಂತರ, ಕೆಡಬ್ಲ್ಯೂ 4 ಒಪ್ಪಂದ ಷರತ್ತು 3.7ರ ಅನ್ವಯ ಅವರ ಟೆಂಡರ್ ಅನ್ನು ಅನಿವಾರ್ಯವಾಗಿ ತಿರಸ್ಕರಿಸಲಾಗಿತ್ತು.
ಕಾರ್ಯನಿರ್ವಾಹಕ ಇಂಜಿನಿಯರ್ ಅವರ ವರದಿಯಲ್ಲಿ KW-4 ಸ್ಟ್ಯಾಂಡರ್ಡ್ ಟೆಂಡರ್ ದಾಖಲೆಯ ಷರತ್ತು 3.7 ಅನ್ನು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ಆ ಷರತ್ತಿನ ಪ್ರಕಾರ, ಟೆಂಡರ್‌ದಾರರು ಮೂಲಭೂತ ಸಂಖ್ಯಾತ್ಮಕ ಅರ್ಹತಾ ಮಾನದಂಡಗಳನ್ನು ಪೂರೈಸಿದರೂ ಸಹ, ಕೆಳಕಂಡ ಸಂದರ್ಭಗಳಲ್ಲಿ ಅವರನ್ನು ಅನರ್ಹಗೊಳಿಸಬಹುದು.

ಅರ್ಹತಾ ಮಾನದಂಡಗಳನ್ನು ಸಾಬೀತುಪಡಿಸಲು ಸಲ್ಲಿಸಲಾದ ಅರ್ಜಿಗಳು, ಹೇಳಿಕೆಗಳು ಅಥವಾ ಲಗತ್ತುಗಳಲ್ಲಿ ತಪ್ಪು ಅಥವಾ ದಾರಿತಪ್ಪಿಸುವ ಮಾಹಿತಿಯನ್ನು ನೀಡಿದ್ದರೆ; ಕಾಮಗಾರಿಗಳನ್ನು ಅರ್ಧದಲ್ಲೇ ಬಿಟ್ಟುಹೋಗಿರುವ ಅಥವಾ ಕೈಬಿಟ್ಟಿರುವ ಇತಿಹಾಸ ಹೊಂದಿದ್ದರೆ; ಒಪ್ಪಂದದ ಕಾಮಗಾರಿಗಳನ್ನು ಸರಿಯಾಗಿ ಪೂರ್ಣಗೊಳಿಸದ ದಾಖಲೆ ಇದ್ದರೆ; ಅತಿಯಾದ ವಿಳಂಬದ ಇತಿಹಾಸ ಇದ್ದರೆ; ನ್ಯಾಯಾಂಗ ವ್ಯಾಜ್ಯಗಳ (Litigation) ಇತಿಹಾಸ ಇದ್ದರೆ; ಹಣಕಾಸು ವೈಫಲ್ಯಗಳ ದಾಖಲೆ ಇದ್ದರೇ ಇಂತಹ ಸಂದರ್ಭಗಳಲ್ಲಿ ಟೆಂಡರ್‌ದಾರರನ್ನು ಅನರ್ಹ (Disqualified) ಎಂದು ಘೋಷಿಸಲು ಅವಕಾಶವಿದೆ.

ಕಾರ್ಯನಿರ್ವಾಹಕ ಇಂಜಿನಿಯರ್ ಅವರ ವರದಿಯಲ್ಲಿ, ಎರಡೂ ಪ್ಯಾಕೇಜುಗಳ ಟೆಂಡರ್ ಮೌಲ್ಯಮಾಪನದ ವೇಳೆ ಲಭ್ಯ ಟೆಂಡರ್ ಸಾಮರ್ಥ್ಯ (Assessed Available Tender Capacity) – KW-4ರ ಷರತ್ತು 3.6, ಹಾಗೂ ಈಗಾಗಲೇ ಕೈಗೊಂಡಿರುವ ಬದ್ಧತೆಗಳು ಮತ್ತು ನಡೆಯುತ್ತಿರುವ ಕಾಮಗಾರಿಗಳು (Existing Commitments and Ongoing Works) ಇವುಗಳನ್ನು ಪರಿಗಣಿಸಲಾಗಿದೆ ಎಂದು ದಾಖಲಿಸಲಾಗಿದೆ.
ಮಾಹಿತಿಯನ್ನು ಮರೆಮಾಚಲಾಗಿತ್ತೇ?
ಈ ಪರಿಶೀಲನೆಯಲ್ಲಿ, ಎಂಎಸ್‌ವಿ ಸಂಸ್ಥೆಯು ಈಗಾಗಲೇ ಪಡೆದಿದ್ದ ಕಾಮಗಾರಿ ಆದೇಶಗಳು ಮತ್ತು ಬದ್ಧತೆಗಳಿಗೆ ಸಂಬಂಧಿಸಿದ ₹35,17,02,158/- ಮೊತ್ತದ ಮಾಹಿತಿಯನ್ನು ಮರೆಮಾಚಲಾಗಿದೆ. ಹಾಗೂ ತಪ್ಪಾಗಿ ನಿರೂಪಿಸಿರುವುದು (Misrepresentation) ಕಂಡುಬಂದಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಮೇಲ್ಮನವಿ ಪುರಸ್ಕರಿಸಿದ್ದ ತುಷಾರ್ ಗಿರಿನಾಥ್
‘ಆದ್ದರಿಂದ KW-4 ಒಪ್ಪಂದದ ಷರತ್ತು 3.7ರ ಅನ್ವಯ ಎಂಎಸ್‌ವಿ ಸಂಸ್ಥೆಯ ಟೆಂಡರ್ ಅನ್ನು ತಿರಸ್ಕರಿಸಲಾಯಿತು ಎಂದು ವರದಿಯಲ್ಲಿ ತಿಳಿಸಲಾಗಿದೆ. ಈ ಟೆಂಡರ್ ತಿರಸ್ಕಾರ ಆದೇಶದ ವಿರುದ್ಧ ಎಂಎಸ್‌ವಿ ಸಂಸ್ಥೆಯು ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳಾದ ತುಷಾರ್ ಗಿರಿನಾಥ್, ಐಎಎಸ್ ಅವರ ಮುಂದೆ ಮೇಲ್ಮನವಿ ಸಲ್ಲಿಸಿತ್ತು. ಈ ಮೇಲ್ಮನವಿಯನ್ನು ತುಷಾರ್ ಗಿರಿನಾಥ್ ಅವರು ಪುರಸ್ಕರಿಸಿದ್ದರು.
2026ರ ಏಪ್ರಿಲ್ 2ರಂದು (02-04-2026ರ UDD 266 MNY 2026 ಆದೇಶ, 02-04-2026ರ UDD 267 MNY 2026 ಆದೇಶ) ಹೊರಡಿಸಿದ್ದ ಆದೇಶದಲ್ಲಿ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳು ಸ್ವತಃ ದಾಖಲಿಸಿರುವ ಮತ್ತು ಅಂಗೀಕರಿಸಿರುವ ಪ್ರಮುಖ ವಾಸ್ತವಾಂಶಗಳ ಪ್ರಕಾರ ಎಂಎಸ್‌ವಿ ಕನ್ಸ್ಟ್ರಕ್ಷನ್ಸ್ ಸಂಸ್ಥೆಯು ತನ್ನ ಈಗಿರುವ ಬದ್ಧತೆಗಳು (Existing Commitments), ನಡೆಯುತ್ತಿರುವ ಕಾಮಗಾರಿಗಳು (Ongoing Works) ಹಾಗೂ ಟೆಂಡರ್ ಸಾಮರ್ಥ್ಯಕ್ಕೆ (Tender Capacity) ಸಂಬಂಧಿಸಿದ ಪ್ರಮುಖ ಮಾಹಿತಿಗಳನ್ನು ಮರೆಮಾಚಿದೆ. ಅಥವಾ ತಪ್ಪಾಗಿ ನಿರೂಪಿಸಿದೆ ಎಂಬುದನ್ನು ಸ್ಪಷ್ಟವಾಗಿ ತೋರಿಸುತ್ತವೆ,’ ಎಂದು ದೂರಿನಲ್ಲಿ ವಿವರಿಸಿರುವುದು ತಿಳಿದು ಬಂದಿದೆ.

ಮಾಹಿತಿ ಬಹಿರಂಗಪಡಿಸಲು ವಿಫಲ
ಕಾರ್ಯನಿರ್ವಾಹಕ ಇಂಜಿನಿಯರ್ ಅವರು ಎಂಎಸ್‌ವಿ ಕನ್ಸ್ಟ್ರಕ್ಷನ್ಸ್ ಸಂಸ್ಥೆಯ ತಾಂತ್ರಿಕ ಟೆಂಡರ್ ಅನ್ನು ತಿರಸ್ಕರಿಸಿದ್ದರು. ಇದಕ್ಕೆ ಗುತ್ತಿಗೆದಾರನು ತಪ್ಪು ಅಥವಾ ದಾರಿತಪ್ಪಿಸುವ ಮಾಹಿತಿಗಳನ್ನು ಸಲ್ಲಿಸಿರುವುದು ಮತ್ತು ಇದರ ಪರಿಣಾಮವಾಗಿ, KW-4 ಪ್ರಮಾಣಿತ ಟೆಂಡರ್ ದಾಖಲೆಯ ಷರತ್ತು 3.7ರ ಅಡಿಯಲ್ಲಿ ಅನರ್ಹತೆಗೆ (Disqualification) ಒಳಪಟ್ಟಿರುವುದನ್ನು ಪರಿಗಣಿಸಿದ್ದರು. ಅಲ್ಲದೇ ₹35,17,02,158/- ಮೊತ್ತದ ಈಗಿರುವ ಬದ್ಧತೆಗಳ (Existing Commitments) ಮಾಹಿತಿಯನ್ನು ಬಹಿರಂಗಪಡಿಸಲು ವಿಫಲರಾಗಿದ್ದರು ಎಂಬುದನ್ನು ಪತ್ತೆ ಹಚ್ಚಿರುವುದೇ ಮೂಲ ಕಾರಣ ಎಂದು ದೂರಿನಲ್ಲಿ ವಿವರಿಸಿರುವುದು ತಿಳಿದು ಬಂದಿದೆ.
ಗುಪ್ತ ಕಾಮಗಾರಿಗಳ ವಿವರಗಳನ್ನು ಸಲ್ಲಿಸಿರಲಿಲ್ಲವೇಕೆ?
ಪ್ರಸ್ತುತ ಅಧಿಸೂಚನೆಯಲ್ಲಿರುವ ಕಾಮಗಾರಿಯ ರಾಜಾಜಿನಗರ ವಿಭಾಗಕ್ಕೆ ಸಂಬಂಧಿಸಿದಂತೆ, ಮೇಲ್ಮನವಿದಾರರ ಪ್ರಸ್ತುತ ಅಧಿಸೂಚನೆಯಲ್ಲಿರುವ ಬಿಡ್‌ನ್ನು ತಿರಸ್ಕರಿಸಲು (ದಿನಾಂಕ 26-02-2026 ) ತಾಂತ್ರಿಕ ಮೌಲ್ಯಮಾಪನ ಸಮಿತಿಯ ಸಭೆಯಲ್ಲಿ ತಿಳಿಸಲಾಗಿತ್ತು. ಹಾಗೂ 2 ಮತ್ತು 3 ರವರ ಹೇಳಿಕೆಯಂತೆ, ಮೇಲ್ಮನವಿದಾರರು ಕೆಎಸ್‌ಎಸ್‌ಐಡಿಸಿ ಹಾಗೂ ದಾಸರಹಳ್ಳಿ ವಿಭಾಗದಲ್ಲಿ ತಾವು ಪಡೆದುಕೊಂಡಿರುವ ಗುಪ್ತ ಕಾಮಗಾರಿಗಳ ವಿವರಗಳನ್ನು ಸಲ್ಲಿಸಿರಲಿಲ್ಲ. ಅಥವಾ ಅದನ್ನು ಗೌಪ್ಯವಾಗಿಟ್ಟಿದ್ದರು. ಹೀಗಾಗಿ KW-4 ರ 3.7 ರ ಅನ್ವಯ ಬಿಡ್‌ನ್ನು ತಿರಸ್ಕರಿಸಲು ಸೂಕ್ತ ಕಾರಣವಾಗಿದೆ ಎಂದು ವಿವರಿಸಿದ್ದಾರೆ.
ಇದನ್ನು ಆಕ್ಷೇಪಿಸಿದ್ದ ಮೇಲ್ಮನವಿದಾರರು ಯಾವುದೇ ಹೇಳಿಕೆ ಒದಗಿಸಿರಲಿಲ್ಲ. ಹೀಗಾಗಿ ಟೆಂಡರ್ ಮೌಲ್ಯಮಾಪನ ಸಮಿತಿಯು 2026ರ ಫೆ.26ರಂದು ಕೈಗೊಂಡಿದ್ದ ಮೌಲ್ಯಮಾಪನವು ಸೂಕ್ತ ಮತ್ತು ಸಮಂಜಸವಾಗಿದೆ ಎಂದು ಪರಿಗಣಿಸಿತ್ತು. ಅಲ್ಲದೆ ಮೇಲ್ಮನವಿಯನ್ನು ವಜಾಗೊಳಿಸಿ ಆದೇಶಿಸಿತ್ತು.
ಮೇಲ್ಮನವಿದಾರರ 2 ರವರ ಬಿಡ್‌ನ್ನು ಪ್ರಕ್ರಿಯೆಯಲ್ಲಿರುವ ಕಾಮಗಾರಿಗಳ ಬಗ್ಗೆ ತಪ್ಪು ಮಾಹಿತಿ ನೀಡಿರುವುದು ಕಂಡುಬಂದಿರುವುದರಿಂದ ಹಾಗೂ ಈ ವಿವರಗಳನ್ನು ಮೇಲ್ನಿವೇದಕರು 1, 2 ಮತ್ತು 3 ರವರು, ಹಾಗೂ ದಿನಾಂಕ 26-02-2026 ರ ಮೌಲ್ಯಮಾಪನ ಸಭೆಯ ನಡವಳಿಕೆಯಲ್ಲಿ ಈ ವಿವರಗಳನ್ನು ದಾಖಲಿಸಿ ಅನರ್ಹಗೊಳಿಸಿರುವ ಕ್ರಮವನ್ನು ಎತ್ತಿಹಿಡಿದು, ಮೇಲ್ಮನವಿದಾರರ-2 ರವರ ಮೇಲ್ಮನವಿಯನ್ನು ವಜಾಗೊಳಿಸಿ ಆದೇಶಿಸಿದೆ.
ವೆಂಕಟರಾಮಿರೆಡ್ಡಿ ಅವರ (KVR Construction Heights Private Limited) ಬಿಡ್ ಅನ್ನು ತಾಂತ್ರಿಕವಾಗಿ ಅನರ್ಹಗೊಳಿಸಿರುವುದು ಕಾನೂನುಬದ್ಧವಾಗಿರುವುದರಿಂದ ಅನರ್ಹಗೊಳಿಸಿರುವ ಟೆಂಡರ್ ಸಂಬಂಧಿತ ಕಾರ್ಯವಿಧಾನ ಹಾಗೂ ಸಾವರ್ಜನಿಕ ಸಂಗ್ರಹಣೆಯ ಅಧಿನಿಯಮದ ಕಲಂ 15 ರಲ್ಲಿ ಪ್ರಸ್ತಾಪವಾದ ಅಧಿಕಾರವನ್ನು ಚಲಾಯಿಸಿ, ಪ್ರಸ್ತುತ ಟೆಂಡರ್ ಅಧಿಸೂಚನೆಯನ್ನು ರದ್ದುಗೊಳಿಸಿ, ಮರು ಟೆಂಡರ್ ಕರೆಯಲು ಆದೇಶಿಸಿತ್ತು.
ರಾಜ್ಯದ ಹಿತಾಸಕ್ತಿಗೆ ವಿರುದ್ಧ- ರಾಜ್ಯಕ್ಕೆ ದ್ರೋಹದ ಕೃತ್ಯ
ಕೆಟಿಪಿಪಿ ಕಾಯ್ದೆಯ KW-4 ಪ್ರಮಾಣಿತ ಟೆಂಡರ್ ದಾಖಲೆಯ ಷರತ್ತು 3.7ರ ಪ್ರಕಾರ ಎಂಎಸ್‌ವಿ (MSV) ಸಂಸ್ಥೆಯನ್ನು ಡಿಬಾರ್ (Debar) ಮಾಡುವ ಅಧಿಕಾರ ಮತ್ತು ಅವಕಾಶವಿದೆ. ಆದರೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳ (ACS) ಹಂತದಲ್ಲಿ ಅದನ್ನು ಮಾಡಿರಲಿಲ್ಲ. ಇದು ರಾಜ್ಯದ ಹಿತಾಸಕ್ತಿಗೆ ವಿರುದ್ಧವಾದ ಹಾಗೂ ರಾಜ್ಯಕ್ಕೆ ದ್ರೋಹದ ಕೃತ್ಯ (Act of Treachery) ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳಿಗೆ ಈ ವಿಷಯದ ಸಂಪೂರ್ಣ ಮಾಹಿತಿ ಲಭ್ಯವಾದ ನಂತರ ಹಾಗೂ ಅವರ ಮುಂದೆ ಇದ್ದ ದಾಖಲೆಗಳು ಎಲ್ಲವನ್ನೂ ಬಹಿರಂಗಪಡಿಸಿದ ನಂತರ ಎಂಎಸ್‌ವಿ ಕನ್ಸ್ಟ್ರಕ್ಷನ್ಸ್ ಸಂಸ್ಥೆಯು ಪ್ರಮುಖ ವಾಸ್ತವಾಂಶಗಳನ್ನು ಮರೆಮಾಚಲಾಗಿದೆ. ತಪ್ಪಾಗಿ ನಿರೂಪಿಸಲಾಗಿದೆ. ಹಾಗೂ ಆ ಎಲ್ಲವನ್ನೂ ಗುಪ್ತವಾಗಿಡುವ ಮೂಲಕ ಸಾರ್ವಜನಿಕ ಕಾಮಗಾರಿಗಳ ಗುತ್ತಿಗೆಗಳನ್ನು ಪಡೆಯಲು ಪ್ರಯತ್ನಿಸಿದೆ.
ಆದರೂ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳು ಸಮರ್ಪಕ ಅಥವಾ ಸಮರ್ಥನೀಯ ಕಾರಣಗಳಿಲ್ಲದೆ ಎಂಎಸ್‌ವಿ ಸಂಸ್ಥೆಯನ್ನು ಕಾನೂನುಬದ್ಧವಾಗಿ ಅನರ್ಹಗೊಳಿಸಿದ್ದರೂ ಸಹ ಅದನ್ನೆಲ್ಲಾ ನಿಷ್ಪ್ರಭಾವಗೊಳಿಸುವಂತಹ ಆದೇಶಗಳನ್ನು ಹೊರಡಿಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಇದರ ಪರಿಣಾಮವಾಗಿ ಎಂಎಸ್‌ವಿ ಸಂಸ್ಥೆಯ ವಿರುದ್ಧ ಕೈಗೊಳ್ಳಲಾದ ಕಾನೂನುಬದ್ಧ ತಿರಸ್ಕಾರ ಕ್ರಮವನ್ನು ದುರ್ಬಲಗೊಳಿಸಲಾಗಿದೆ. ಹಾಗೂ ಇತರ ಅರ್ಹ ಟೆಂಡರ್‌ದಾರರನ್ನು ಮುಂದಿನ ಪರಿಗಣನೆಯಿಂದ ವಂಚಿಸಲಾಗಿದೆ.
ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳು (ACS), ಉಳಿದ ಟೆಂಡರ್‌ದಾರರ ತಾಂತ್ರಿಕ ಬಿಡ್‌ಗಳನ್ನು ತಪ್ಪಾಗಿ ತಿರಸ್ಕರಿಸಲಾಗಿದೆ ಎಂದು ಸ್ಥಾಪಿಸಲು ಅಗತ್ಯವಾದ ಕಾರಣಗಳನ್ನು ದಾಖಲಿಸಿ ನಿರ್ಧಾರ ಕೈಗೊಂಡಿದ್ದರು. ಆದರೂ ಆ ತಪ್ಪಾದ ತಿರಸ್ಕಾರವನ್ನು ಹಿಂತೆಗೆದು, ಟೆಂಡರ್‌ದಾರರನ್ನು ತಿರಸ್ಕಾರಕ್ಕಿಂತ ಮುಂಚಿನ ಹಂತಕ್ಕೆ ಮರುಸ್ಥಾಪಿಸಿ, ಅಧಿಕಾರಿಗಳು ಮಾಡಿದ ತಪ್ಪನ್ನು ಸರಿಪಡಿಸಿ, ಆ ಬಿಡ್‌ಗಳನ್ನು ಸ್ವೀಕರಿಸಿ ಮುಂದಿನ ಪರಿಶೀಲನೆ ನಡೆಸುವ ಬದಲು, ಅವರು ಉದ್ದೇಶಪೂರ್ವಕವಾಗಿ ಹಾಗೂ ಏಕಪಕ್ಷೀಯವಾಗಿ ಆ ಟೆಂಡರ್‌ಗಳನ್ನೂ ರದ್ದುಗೊಳಿಸಿದ್ದರು. ಅವರು ಯಾವುದೇ ತಪ್ಪು ಮಾಡಿರದಿದ್ದರೂ ಸಹ, ಅವರ ಟೆಂಡರ್‌ಗಳನ್ನು ರದ್ದುಗೊಳಿಸಲಾಗಿದೆ ಎಂದು ವಿವರಿಸಿರುವುದು ತಿಳಿದು ಬಂದಿದೆ.
ಭ್ರಷ್ಟಾಚಾರದಲ್ಲಿ ತಮ್ಮ ಆಪ್ತ ಸಹಚರನೇ?
ಭ್ರಷ್ಟಾಚಾರದಲ್ಲಿ ತಮ್ಮ ಆಪ್ತ ಸಹಚರನೆಂದು ಹೇಳಲಾಗಿರುವ ಎಂಎಸ್‌ವಿ (MSV) ಸಂಸ್ಥೆಯ ಬಿಡ್ ಅನಿವಾರ್ಯವಾಗಿ ತಿರಸ್ಕೃತವಾಗಿದ್ದರಿಂದ, ಎಂ/ಎಸ್ ಎಂಎಸ್‌ವಿ ಕನ್ಸ್ಟ್ರಕ್ಷನ್ ಕಂಪನಿಯ ಎಂ. ಎಸ್. ವೆಂಕಟೇಶ್ ಅವರಿಗೆ ಹೊಸ ಟೆಂಡರ್ ಪ್ರಕ್ರಿಯೆಯಲ್ಲಿ ಮತ್ತೊಮ್ಮೆ ಭಾಗವಹಿಸಲು ಅವಕಾಶ ಕಲ್ಪಿಸುವ ಉದ್ದೇಶವಿತ್ತು ಎಂದು ಸಂಶಯ ವ್ಯಕ್ತಪಡಿಸಿರುವುದು ಗೊತ್ತಾಗಿದೆ.
ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳ ಈ ನಡೆ ಕೇವಲ ಆಡಳಿತಾತ್ಮಕ ತಪ್ಪು (Administrative Error) ಮಾತ್ರವಲ್ಲ. ದೂರಿನ ಪ್ರಕಾರ, ಇದು ಎಂ/ಎಸ್ ಎಂಎಸ್‌ವಿ ಕನ್ಸ್ಟ್ರಕ್ಷನ್ಸ್ ಸಂಸ್ಥೆಗೆ ಉದ್ದೇಶಪೂರ್ವಕವಾಗಿ ಹಾಗೂ ಜಾಗೃತಿಯಿಂದ ನೀಡಲಾದ ರಕ್ಷಣೆಯ ಕ್ರಮವಾಗಿದೆ. ಕಾರ್ಯನಿರ್ವಾಹಕ ಇಂಜಿನಿಯರ್ ಅವರ ವರದಿಯಲ್ಲಿ KW-4 ಷರತ್ತುಗಳ ಕ್ಲಾಸ್ 3.7 ಅನ್ನು ಸ್ಪಷ್ಟವಾಗಿ ಅನ್ವಯಿಸಲಾಗಿದೆ. ಅಲ್ಲದೆ, ನಡೆಯುತ್ತಿರುವ ಕಾಮಗಾರಿಗಳು ಮತ್ತು ಈಗಿರುವ ಬದ್ಧತೆಗಳನ್ನು ಮರೆಮಾಚಿರುವುದನ್ನು ತೋರಿಸುವ ದಾಖಲೆಗಳೂ ಲಭ್ಯವಿದ್ದವು.
ಇಷ್ಟೆಲ್ಲಾ ದಾಖಲೆಗಳಿದ್ದರೂ, ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳು ಅರ್ಹ ಟೆಂಡರ್‌ದಾರರೊಂದಿಗೆ ಟೆಂಡರ್ ಪ್ರಕ್ರಿಯೆಯನ್ನು ಮುಂದುವರಿಸಲು ನಿರ್ದೇಶನ ನೀಡಲಿಲ್ಲ. ಬದಲಾಗಿ, ಅವರು ಏಕಪಕ್ಷೀಯವಾಗಿ ಟೆಂಡರ್ ಪ್ರಕ್ರಿಯೆಯನ್ನೇ ರದ್ದುಗೊಳಿಸಿದರು. ಇದರಿಂದ ಎಂ/ಎಸ್ ಎಂಎಸ್‌ವಿ ಕನ್ಸ್ಟ್ರಕ್ಷನ್ಸ್ ಸಂಸ್ಥೆಗೆ ನಂತರದ ಹೊಸ ಟೆಂಡರ್ ಪ್ರಕ್ರಿಯೆಯಲ್ಲಿ ಪುನಃ ಭಾಗವಹಿಸುವ ಅವಕಾಶ ಸೃಷ್ಟಿಯಾಯಿತು ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಕರ್ನಾಟಕ ಸರ್ಕಾರದ (UDD, G.O.K.) ನಗರಾಭಿವೃದ್ಧಿ ಇಲಾಖೆ, ಎಂ/ಎಸ್ ಎಂಎಸ್‌ವಿ ಕನ್ಸ್ಟ್ರಕ್ಷನ್ ಕಂಪನಿ (ಶ್ರೀ ಎಂ. ಎಸ್. ವೆಂಕಟೇಶ್) ಅವರು ವಾಸ್ತವವಾಗಿ ಸಮರ್ಥ ಪ್ರಾಧಿಕಾರವಾದ ಜಿಬಿಎ (GBA) ಯನ್ನು ವಂಚಿಸಿರುವುದನ್ನು ಸ್ಥಾಪಿಸಿದಂತಾಗಿದೆ. ಟೆಂಡರ್/ಗುತ್ತಿಗೆ ಕಾಮಗಾರಿಯನ್ನು ತಮ್ಮ ಪರವಾಗಿ ಪಡೆಯಲು ಅರ್ಹರಾಗುವ ಉದ್ದೇಶದಿಂದ, ಬಹಿರಂಗಪಡಿಸಬೇಕಾಗಿದ್ದ ಪ್ರಮುಖ ಮಾಹಿತಿಗಳನ್ನು ಉದ್ದೇಶಪೂರ್ವಕವಾಗಿ ಜಿಬಿಎ ಪ್ರಾಧಿಕಾರದಿಂದ ಮರೆಮಾಚಿದ್ದಾರೆ ಎಂಬುದು ದಾಖಲೆಗಳಿಂದ ದೃಢಪಟ್ಟಿದೆ.
ಗುತ್ತಿಗೆದಾರನಿಗೆ ಬಹುಮಾನ?
‘ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳು ಎಂಎಸ್‌ವಿ ಕನ್ಸ್ಟ್ರಕ್ಷನ್ಸ್ ಸಂಸ್ಥೆಗೆ ಅನುಕೂಲವಾಗುವ ರೀತಿಯಲ್ಲಿ ಮತ್ತು ರಾಜ್ಯದ ಹಿತಾಸಕ್ತಿಗೆ ವಿರುದ್ಧವಾಗಿ ವರ್ತಿಸಿದ್ದಾರೆ ಎಂಬುದನ್ನು ಸ್ಪಷ್ಟವಾಗಿ ತೋರಿಸುತ್ತವೆ. ಎಂಎಸ್‌ವಿ ಸಂಸ್ಥೆಯ ತಾಂತ್ರಿಕ ಬಿಡ್ ತಿರಸ್ಕೃತವಾದ ನಂತರ ಟೆಂಡರ್ ಅನ್ನು ರದ್ದುಪಡಿಸಿರುವ ಕ್ರಮವು, ಟೆಂಡರ್ ಪ್ರಾಧಿಕಾರವನ್ನು ದಾರಿತಪ್ಪಿಸಲು ಪ್ರಯತ್ನಿಸಿದ ಗುತ್ತಿಗೆದಾರನಿಗೆ ಪರಿಣಾಮಕಾರಿಯಾಗಿ ಬಹುಮಾನ ನೀಡಿದಂತಾಗಿದೆ,’ ಎಂದು ಹೇಳಿದ್ದಾರೆ.
ಇದರ ಪರಿಣಾಮವಾಗಿ, ಕಾನೂನುಬದ್ಧ, ಸ್ಪರ್ಧಾತ್ಮಕ ಹಾಗೂ ಪಾರದರ್ಶಕ ಟೆಂಡರ್ ಪ್ರಕ್ರಿಯೆಯಿಂದ ರಾಜ್ಯ ಸರ್ಕಾರ ಮತ್ತು ಸಾರ್ವಜನಿಕರಿಗೆ ದೊರಕಬೇಕಾಗಿದ್ದ ಪ್ರಯೋಜನಗಳು ಕಳೆದುಹೋಗಿವೆ. KW-4 ಪ್ರಮಾಣಿತ ಟೆಂಡರ್ ದಾಖಲೆಯ ಷರತ್ತು 3.7ರಿಂದ ಉಂಟಾಗುವ ಗಂಭೀರ ಪರಿಣಾಮಗಳನ್ನು ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳು ನಿರ್ಲಕ್ಷಿಸಲು ಸಾಧ್ಯವಿರಲಿಲ್ಲ.
ಕೆಟಿಪಿಪಿ ನಿಯಮಗಳ ನಿಯಮ 26-Aರ ಅಡಿಯಲ್ಲಿ ಡಿಬಾರ್ (Debarment) ಕ್ರಮ, ಪಾವತಿಗಳ ಸ್ಥಗಿತ, ಲೆಕ್ಕಪರಿಶೋಧನೆ (Audit), ತನಿಖೆ (Enquiry) ಹಾಗೂ ಇಲಾಖಾ/ಕ್ರಿಮಿನಲ್ ಕ್ರಮಗಳನ್ನು ಆರಂಭಿಸುವಂತೆ ನಿರ್ದಿಷ್ಟವಾಗಿ ಕೋರಲಾಗಿತ್ತು. ಆದರೆ ಎಂಎಸ್‌ವಿ ಕನ್ಸ್ಟ್ರಕ್ಷನ್ಸ್ ಸಂಸ್ಥೆಯ ವಿರುದ್ಧ ಡಿಬಾರ್/ಕಪ್ಪುಪಟ್ಟಿಗೆ ಸೇರಿಸುವ (Blacklisting) ಕ್ರಮಗಳನ್ನು ಆರಂಭಿಸಲು ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳು ವಿಫಲವಾಗಿದ್ದಾರೆ. ಅಲ್ಲದೇ ಸಂಪೂರ್ಣವಾಗಿ ಕಾನೂನುಬಾಹಿರ, ಮನಬಂದಂತೆ (Arbitrary) ಹಾಗೂ ಕರ್ನಾಟಕ ಸಾರ್ವಜನಿಕ ಖರೀದಿ ಪಾರದರ್ಶಕತೆ (KTPP) ವ್ಯವಸ್ಥೆಯ ಮೂಲ ಉದ್ದೇಶಕ್ಕೆ ವಿರುದ್ಧವಾಗಿದೆ.
ಟೆಂಡರ್ ಪ್ರಾಧಿಕಾರವನ್ನು ದಾರಿತಪ್ಪಿಸಲು ಪ್ರಯತ್ನಿಸಿರುವ ಮತ್ತು ಕಾರ್ಯನಿರ್ವಹಣಾ ವೈಫಲ್ಯದ ಇತಿಹಾಸ ಹೊಂದಿರುವ ಗುತ್ತಿಗೆದಾರನಿಗೆ ಸಾರ್ವಜನಿಕ ಟೆಂಡರ್‌ಗಳಲ್ಲಿ ನಿರಂತರವಾಗಿ ಭಾಗವಹಿಸುವ ಅವಕಾಶ ನೀಡಬಾರದು. ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳ ನಿಷ್ಕ್ರಿಯತೆ (Inaction) ಇನ್ನಷ್ಟು ಗಂಭೀರ ಸ್ವರೂಪ ಪಡೆಯುತ್ತದೆ, ಏಕೆಂದರೆ ಹಿಂದಿನ ದೂರುಗಳು ಮತ್ತು ಕಾನೂನು ನೋಟಿಸ್‌ಗಳ ಮೂಲಕ ಅವರ ಗಮನಕ್ಕೆ ಮೊದಲೇ ತರಲಾಗಿತ್ತು ಎಂದು ವಿವರಿಸಿರುವುದು ಗೊತ್ತಾಗಿದೆ.
ಟೆಂಡರ್‌ಗಳ ರದ್ದತಿ, ₹1,91,36,228/- ಮೊತ್ತದ ಬ್ಯಾಂಕ್ ಗ್ಯಾರಂಟಿಗಳ ಮುಟ್ಟುಗೋಲು (Forfeiture), ₹ 4,31,56,430.48/- ಮೊತ್ತದ ಲೆಕ್ಕಹಾಕಲಾದ ಬಾಕಿ ನಷ್ಟವು ಎಂ/ಎಸ್ ಎಂಎಸ್‌ವಿ ಕನ್ಸ್ಟ್ರಕ್ಷನ್ಸ್‌ನಿಂದ ಇನ್ನೂ ವಸೂಲಿ ಆಗಬೇಕಾಗಿದೆ. ಇಂತಹ ದಾಖಲೆಗಳು ಮತ್ತು ಮಾಹಿತಿಗಳು ಲಭ್ಯವಿದ್ದರೂ ಸಹ, ಆ ಮೊತ್ತದ ವಸೂಲಾತಿಗಾಗಿ ಯಾವುದೇ ಪರಿಣಾಮಕಾರಿ ನಿರ್ದೇಶನ ನೀಡಲಾಗಿಲ್ಲ. ಯಾವುದೇ ಪಾವತಿಗಳನ್ನು ತಡೆಹಿಡಿಯಲು ಆದೇಶಿಸಲಿಲ್ಲ, ಯಾವುದೇ ಲೆಕ್ಕಪರಿಶೋಧನೆ (Audit) ನಡೆಸಲು ಸೂಚಿಸಲಿಲ್ಲ ಮತ್ತು ಡಿಬಾರ್ (Debarment) ಕ್ರಮಗಳನ್ನು ಆರಂಭಿಸಲಿಲ್ಲ ಎಂದು ಅಬ್ರಹಾಂ ಅವರು ದೂರಿರುವುದು ತಿಳಿದು ಬಂದಿದೆ.
ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯವರು ರಾಜ್ಯದ ಹಿತಾಸಕ್ತಿಯನ್ನು ರಕ್ಷಿಸುವುದು ಹಾಗೂ ಟೆಂಡರ್ ಷರತ್ತುಗಳ ಕಟ್ಟುನಿಟ್ಟಿನ ಅನುಷ್ಠಾನವನ್ನು ಖಚಿತಪಡಿಸುವ ಬದಲು, ಎಂ/ಎಸ್ ಎಂಎಸ್‌ವಿ ಕನ್ಸ್ಟ್ರಕ್ಷನ್ಸ್‌ಗೆ ಅನಗತ್ಯ ಹಾಗೂ ಅನ್ಯಾಯಕರ ಅನುಕೂಲವಾಗುವ ರೀತಿಯಲ್ಲಿ ಕಾರ್ಯನಿರ್ವಹಿಸಿದ್ದಾರೆ. ಈ ನಿರ್ಲಕ್ಷ್ಯವು ಉದ್ದೇಶಪೂರ್ವಕ, ಜಾಣತನದಿಂದ ಮಾಡಿದದ್ದು ಹಾಗೂ ಕರ್ತವ್ಯಲೋಪದ (Gross Dereliction of Duty) ಗಂಭೀರ ಉದಾಹರಣೆಯಾಗಿದೆ.
ಟೆಂಡರ್ ವ್ಯವಸ್ಥೆಯ ಮೇಲಿನ ಸಾರ್ವಜನಿಕರ ವಿಶ್ವಾಸವನ್ನು ಹಾಳು ಮಾಡಿದರೇ?
ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯವರು ನಗರಾಭಿವೃದ್ಧಿ ಇಲಾಖೆಯ ಟೆಂಡರ್‌ಗಳಿಗೆ ಸಂಬಂಧಿಸಿದ ವಿಷಯಗಳಲ್ಲಿ ಎಂಎಸ್‌ವಿ ಕನ್ಸ್ಟ್ರಕ್ಷನ್ಸ್ ಸಂಸ್ಥೆಯ ರಕ್ಷಕ ಮತ್ತು ಪೋಷಕರಂತೆ ವರ್ತಿಸಿರುವಂತೆ ಕಂಡುಬರುತ್ತದೆ. ಈಗಿರುವ ಬದ್ಧತೆಗಳನ್ನು ಮರೆಮಾಚಿರುವುದು ಹಾಗೂ ತಪ್ಪುದಾರಿಗೆಳೆಯುವ ಮಾಹಿತಿಗಳನ್ನು ಒದಗಿಸಿರುವುದು ಸಾಬೀತಾಗಿರುವ ಗುತ್ತಿಗೆದಾರನಿಗೆ ಡಿಬಾರ್ ಕ್ರಮದಿಂದ ತಪ್ಪಿಸಿಕೊಳ್ಳಲು ಅವಕಾಶ ನೀಡಿದರೆ ಮತ್ತು ಹೊಸ ಟೆಂಡರ್‌ಗಳಲ್ಲಿ ಮತ್ತೆ ಭಾಗವಹಿಸಲು ಅವಕಾಶ ಕಲ್ಪಿಸಿದರೆ ಟೆಂಡರ್ ವ್ಯವಸ್ಥೆಯ ಮೇಲಿನ ಸಾರ್ವಜನಿಕರ ವಿಶ್ವಾಸವನ್ನು ಹಾಳುಮಾಡುತ್ತದೆ ಎಂದು ದೂರುದಾರರು ಎಚ್ಚರಿಸಿದ್ದಾರೆ.
ಅಲ್ಲದೇ ಸಾರ್ವಜನಿಕ ಕಾಮಗಾರಿಗಳಲ್ಲಿ ಭ್ರಷ್ಟಾಚಾರವನ್ನು ಉತ್ತೇಜಿಸುತ್ತದೆ, ಹಾಗೂ ಪಾರದರ್ಶಕ ಮತ್ತು ನ್ಯಾಯಸಮ್ಮತ ಟೆಂಡರ್ ವ್ಯವಸ್ಥೆಯ ಮೂಲ ಉದ್ದೇಶವನ್ನೇ ದುರ್ಬಲಗೊಳಿಸುತ್ತದೆ. ಇತರೆ ಅರ್ಹ ಟೆಂಡರ್‌ದಾರರಿಗೆ ಹಣಕಾಸು (Financial) ಬಿಡ್ ಹಂತಕ್ಕೆ ಮುಂದುವರಿಯಲು ಅವಕಾಶ ನೀಡುವ ಬದಲು ಸಂಪೂರ್ಣ ಟೆಂಡರ್ ಪ್ರಕ್ರಿಯೆಯನ್ನೇ ರದ್ದುಪಡಿಸಿರುವ ಕ್ರಮವು ಆಡಳಿತಾತ್ಮಕ ಅಧಿಕಾರದ ಸ್ಪಷ್ಟ ದುರುಪಯೋಗವಾಗಿದೆ ಎಂದು ವಿವರಿಸಿದ್ದಾರೆ.
ಪ್ರಜ್ಞಾಪೂರ್ವಕ ನಿರ್ಲಕ್ಷ್ಯ
ಈ ನಡೆಯು ಸಾರ್ವಜನಿಕ ಹಿತಾಸಕ್ತಿಗೆ ವಿರುದ್ಧವಾಗಿದೆ ಹಾಗೂ ಇದರ ಬಗ್ಗೆ ಸ್ವತಂತ್ರ ತನಿಖೆ ನಡೆಸಬೇಕಾದ ಅಗತ್ಯವಿದೆ. ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯವರ ಪ್ರಜ್ಞಾಪೂರ್ವಕ ನಿರ್ಲಕ್ಷ್ಯ (Conscious Omission)ವಾಗಿದೆ. ಹೀಗಾಗಿ ಎಂಎಸ್‌ವಿ ಸಂಸ್ಥೆಯು ಮಾಡಿರುವ ವಂಚನೆ (Fraud), ಮಾಹಿತಿಗಳನ್ನು ಮರೆಮಾಚುವುದು (Suppression), ಕಾರ್ಯನಿರ್ವಹಣೆಯ ವೈಫಲ್ಯ (Non-performance), ಹಣಕಾಸು ಡೀಫಾಲ್ಟ್, ಸಾರ್ವಜನಿಕ ಖಜಾನೆಗೆ ನಷ್ಟ ಮಾಡಿರುವ ಗಂಭೀರ ಆರೋಪಗಳಿದ್ದರೂ ಸಹ ಸಾರ್ವಜನಿಕ ಟೆಂಡರ್‌ಗಳಲ್ಲಿ ಭಾಗವಹಿಸುವುದನ್ನು ಮುಂದುವರಿಸಲು ಸಾಧ್ಯವಾದಂತಾಗಿದೆ.
ಇಂತಹ ನಡೆ-ನುಡಿಗಳು ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯವರ ವಿರುದ್ಧ ಶಿಸ್ತು ಕ್ರಮಗಳನ್ನು (Disciplinary Proceedings) ಕೈಗೊಳ್ಳಲು ಹಾಗೂ ಅವರ ಪಾತ್ರದ ಕುರಿತು ಸ್ವತಂತ್ರ ತನಿಖೆ ನಡೆಸಲು ಆಧಾರ ಒದಗಿಸುತ್ತವೆ. ನಗರಾಭಿವೃದ್ಧಿ ಇಲಾಖೆಯ ಆಡಳಿತಾತ್ಮಕ ಮುಖ್ಯಸ್ಥರಾಗಿರುವ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯವರಿಗೆ, ವಂಚನೆಯ ಹಿನ್ನೆಲೆ ಮತ್ತು ಕಳಪೆ ಕಾರ್ಯನಿರ್ವಹಣೆಯ ದಾಖಲೆಗಳನ್ನು ಹೊಂದಿರುವ ಗುತ್ತಿಗೆದಾರರು ಸಾರ್ವಜನಿಕ ಖರೀದಿ (Public Procurement) ಪ್ರಕ್ರಿಯೆಯನ್ನು ದುರುಪಯೋಗಪಡಿಸಿಕೊಳ್ಳದಂತೆ ನೋಡಿಕೊಳ್ಳುವ ಕರ್ತವ್ಯವಿತ್ತು ಎಂದು ದೂರಿನಲ್ಲಿ ವಿವರಿಸಿದೆ.
‘ಆದರೆ ಅವರು ದೂರುಗಳ ಮೇಲೆ ಕ್ರಮ ಕೈಗೊಳ್ಳದೆ, ಕಾನೂನು ನೋಟಿಸ್‌ನ್ನು ನಿರ್ಲಕ್ಷಿಸಿ, ಕಾರ್ಯನಿರ್ವಾಹಕ ಇಂಜಿನಿಯರ್ ಅವರ ವರದಿ ಹಾಗೂ ಟೆಂಡರ್ ದಾಖಲೆಗಳನ್ನು ಕಡೆಗಣಿಸಿ, ಎಂಎಸ್‌ವಿ ಸಂಸ್ಥೆಗೆ ಅನುಕೂಲವಾಗುವ ಆದೇಶಗಳನ್ನು ಹೊರಡಿಸುವ ಮೂಲಕ, ತಮ್ಮ ಕಾನೂನುಬದ್ಧ (Statutory) ಹಾಗೂ ಸಾರ್ವಜನಿಕ ಕರ್ತವ್ಯಗಳನ್ನು ನಿರ್ವಹಿಸುವಲ್ಲಿ ವಿಫಲರಾಗಿದ್ದಾರೆ,’ ಎಂದು ಆರೋಪಿಸಿರುವುದು ದೂರಿನಿಂದ ತಿಳಿದು ಬಂದಿದೆ.
ಹೀಗಾಗಿ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯವರ ನಡೆ-ನುಡಿಗಳನ್ನು ಕೇವಲ ಇಲಾಖಾ ಮಟ್ಟದಲ್ಲಿ ಮಾತ್ರವಲ್ಲದೆ, ಭ್ರಷ್ಟಾಚಾರ, ಅಧಿಕಾರ ದುರುಪಯೋಗ ಹಾಗೂ ಅಪರಾಧಿಕ ದುರ್ವರ್ತನೆ (Criminal Misconduct) ದೃಷ್ಟಿಕೋನದಿಂದಲೂ ಪರಿಶೀಲಿಸುವ ಅಗತ್ಯವಿದೆ.
ಈ ಕುರಿತು ಕರ್ನಾಟಕ ಲೋಕಾಯುಕ್ತ ಅಥವಾ ತಾಂತ್ರಿಕ ಸಮಿತಿಯಿಂದ ಸ್ವತಂತ್ರ ತನಿಖೆ ನಡೆಸಬೇಕಾಗಿದೆ. ದಾಖಲೆಗಳನ್ನು ಕೋರಿಸುವುದು (Summon Records), ಟೆಂಡರ್ ಕಡತಗಳನ್ನು ಪರಿಶೀಲಿಸುವುದು, ಪಾವತಿಗಳ ಪರಿಶೀಲನೆ ನಡೆಸುವುದು, ತಾಂತ್ರಿಕ ಮೌಲ್ಯಮಾಪನ ವರದಿಗಳನ್ನು ದೃಢೀಕರಿಸುವುದು, ಹಾಗೂ ಎಂಎಸ್‌ವಿ ಕನ್ಸ್ಟ್ರಕ್ಷನ್ಸ್ ಸಂಸ್ಥೆಗೆ ರಕ್ಷಣೆ ಒದಗಿಸಿದ ಅಧಿಕಾರಿಗಳನ್ನು ಗುರುತಿಸುವ ಅಧಿಕಾರಗಳನ್ನು ಸಮಿತಿಗೆ ನೀಡಬೇಕು ಎಂದು ದೂರಿನಲ್ಲಿ ಹೇಳಲಾಗಿದೆ.
‘ತಕ್ಷಣದ ಕ್ರಮ ಕೈಗೊಳ್ಳದಿದ್ದಲ್ಲಿ, ಎಂ/ಎಸ್ ಎಂಎಸ್‌ವಿ ಕನ್ಸ್ಟ್ರಕ್ಷನ್ಸ್ ಸಂಸ್ಥೆಯು ಟೆಂಡರ್ ಪ್ರಕ್ರಿಯೆಯನ್ನು ಮತ್ತಷ್ಟು ದುರುಪಯೋಗಪಡಿಸಿಕೊಳ್ಳುವುದು, ಪ್ರಮುಖ ಮಾಹಿತಿಗಳನ್ನು ಮರೆಮಾಚುವುದು, ಹೊಸ ಟೆಂಡರ್‌ಗಳಲ್ಲಿ ಭಾಗವಹಿಸುವುದು, ಸಾರ್ವಜನಿಕ ಕಾಮಗಾರಿಗಳನ್ನು ಪಡೆಯುವುದು ಹಾಗೂ ಸರ್ಕಾರದ ಖಜಾನೆಗೆ ಮತ್ತಷ್ಟು ನಷ್ಟ ಉಂಟುಮಾಡುವುದು ಮುಂದುವರಿಯುತ್ತದೆ,’ ಎಂದೂ ಎಚ್ಚರಿಸಿದ್ದಾರೆ.
ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯವರ ನಿರಂತರ ನಿಷ್ಕ್ರಿಯತೆಯು ಈಗಾಗಲೇ ಆ ಗುತ್ತಿಗೆದಾರನಿಗೆ ಧೈರ್ಯ ತುಂಬಿದೆ. ನಗರಾಭಿವೃದ್ಧಿ ಇಲಾಖೆಯ ಅತ್ಯುನ್ನತ ಮಟ್ಟಗಳಲ್ಲಿ ಎಂಎಸ್‌ವಿ ಸಂಸ್ಥೆಗೆ ಅಧಿಕೃತ ರಕ್ಷಣೆ ದೊರೆಯುತ್ತಿದೆ ಎಂಬ ಭಾವನೆಯನ್ನು ಸೃಷ್ಟಿಸಿದೆ. ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯವರ ನಡೆ-ನುಡಿ ಸಾರ್ವಜನಿಕ ನಂಬಿಕೆಗೆ ಮಾಡಿದ ದ್ರೋಹ (Betrayal of Public Trust) ವಾಗಿದೆ. ಪಾರದರ್ಶಕ ಆಡಳಿತದ ಮೂಲ ತತ್ವಗಳಿಗೆ ಸಂಪೂರ್ಣ ವಿರುದ್ಧವಾಗಿದೆ ಎಂದು ವಿವರಿಸಿದ್ದಾರೆ.
ರಾಜ್ಯ ಸರ್ಕಾರವು ತಕ್ಷಣ ಮಧ್ಯಪ್ರವೇಶಿಸಲಿದೆಯೇ?
ಸಾರ್ವಜನಿಕ ಖರೀದಿ (Public Procurement) ವ್ಯವಸ್ಥೆಯು ಅನುಕೂಲಿತ ಗುತ್ತಿಗೆದಾರರು ಮತ್ತು ಅವರೊಂದಿಗೆ ಕೈಜೋಡಿಸಿರುವ ಅಧಿಕಾರಿಗಳ ನಡುವಿನ ಖಾಸಗಿ ವ್ಯವಸ್ಥೆಯಾಗಿ (Private Arrangement) ಮಾರ್ಪಡಲು ಅವಕಾಶ ನೀಡಬಾರದು. ರಾಜ್ಯ ಸರ್ಕಾರವು ತಕ್ಷಣ ಮಧ್ಯಪ್ರವೇಶಿಸಬೇಕು.
ಎಂ/ಎಸ್ ಎಂಎಸ್‌ವಿ ಕನ್ಸ್ಟ್ರಕ್ಷನ್ಸ್‌ಗೆ ಸಂಬಂಧಿಸಿದ ಟೆಂಡರ್‌ಗಳು ಹಾಗೂ ಪಾವತಿಗಳನ್ನು ಸ್ವತಂತ್ರವಾಗಿ ಪರಿಶೀಲನೆಗೆ (Independent Scrutiny) ಒಳಪಡಿಸಬೇಕು. ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ತುಷಾರ್ ಗಿರಿನಾಥ್, ಐಎಎಸ್ ಅವರ ಕಾರ್ಯಗಳು, ನಿರ್ಲಕ್ಷ್ಯಗಳು ಹಾಗೂ ಪಾತ್ರದ ಕುರಿತು ಉನ್ನತ ಮಟ್ಟದ ಸ್ವತಂತ್ರ ತನಿಖೆಗೆ ಆದೇಶಿಸಬೇಕು ಎಂದು ಕೋರಿರುವುದು ಗೊತ್ತಾಗಿದೆ.
ಟೆಂಡರ್‌ಗಳನ್ನು ಮಂಜೂರು ಮಾಡುವಲ್ಲಿ ನಡೆದಿರುವ ಅಕ್ರಮಗಳು, ಕಾರ್ಯಗತಗೊಂಡ ಕಾಮಗಾರಿಗಳಲ್ಲಿ ನಡೆದಿರುವ ಅಕ್ರಮಗಳು, ಹಾಗೂ ಎಂ/ಎಸ್ ಎಂಎಸ್‌ವಿ ಕನ್ಸ್ಟ್ರಕ್ಷನ್ಸ್ ನ ಎಂ.ಎಸ್. ವೆಂಕಟೇಶ್ ಅವರು ಪೂರ್ಣಗೊಳಿಸಿದ್ದಾರೆಂದು ಹೇಳಲಾಗಿರುವ ಕಾಮಗಾರಿಗಳ ಕುರಿತು ಮಾಡಿರುವ ಸುಳ್ಳು ಹಕ್ಕು ದಾವೆಗಳು (Fake Claims) ಕೆಟಿಪಿಪಿ ಕಾಯ್ದೆ (KTPP Act), ಕೆಟಿಪಿಪಿ ನಿಯಮಗಳು (KTPP Rules), ಅದರಲ್ಲೂ ವಿಶೇಷವಾಗಿ ನಿಯಮ 26-A ಹಾಗೂ ಟೆಂಡರ್ ಷರತ್ತುಗಳ ಅನ್ವಯ ಎಂಎಸ್‌ವಿ ಕನ್ಸ್ಟ್ರಕ್ಷನ್ಸ್ ಎಂ.ಎಸ್. ವೆಂಕಟೇಶ್ ವಿರುದ್ಧ ತಕ್ಷಣ ಡಿಬಾರ್ (Debarment) / ಕಪ್ಪುಪಟ್ಟಿಗೆ (Blacklisting) ಸೇರಿಸುವ ಕ್ರಮಗಳನ್ನು ಆರಂಭಿಸುವಂತೆ ನಿರ್ದೇಶಿಸಬೇಕು ಎಂದು ಕೋರಿದ್ದಾರೆ.

ಎಂಎಸ್‌ವಿ ಕನ್ಸ್ಟ್ರಕ್ಷನ್ಸ್‌ನ ಎಂ.ಎಸ್. ವೆಂಕಟೇಶ್ ಅವರನ್ನು ತನಿಖೆ ಪೂರ್ಣಗೊಳ್ಳುವವರೆಗೆ ಬಿಬಿಎಂಪಿ / ಜಿಬಿಎ / ನಗರಾಭಿವೃದ್ಧಿ ಇಲಾಖೆಯ ಅಡಿಯಲ್ಲಿ ನಡೆಯುವ ಯಾವುದೇ ಹೊಸ ಭವಿಷ್ಯದ ಟೆಂಡರ್‌ಗಳಲ್ಲಿ ಭಾಗವಹಿಸುವುದನ್ನು ನಿರ್ಬಂಧಿಸುವಂತೆ ನಿರ್ದೇಶಿಸಬೇಕು. ಎಂ/ಎಸ್ ಎಂಎಸ್‌ವಿ ಕನ್ಸ್ಟ್ರಕ್ಷನ್ಸ್ ಹಾಗೂ ಅದರ ಸಂಬಂಧಿತ ಸಂಸ್ಥೆಗಳಿಗೆ ನೀಡಬೇಕಾದ ಎಲ್ಲಾ ಬಾಕಿ ಹಾಗೂ ಭವಿಷ್ಯದ ಪಾವತಿಗಳನ್ನು ಸ್ಥಗಿತಗೊಳಿಸುವುದು / ತಡೆಹಿಡಿಯುವಂತೆ ನಿರ್ದೇಶಿಸಬೇಕು ಎಂದು ಕೋರಿದ್ದಾರೆ.
ಅದೇ ರೀತಿ ಈ ಸಂಬಂಧಿತ ಸಂಸ್ಥೆಗಳಿಗೆ ಪಾವತಿಗಳನ್ನು ಸಂಪೂರ್ಣ ತಾಂತ್ರಿಕ ಹಾಗೂ ಹಣಕಾಸು ಫಾರೆನ್ಸಿಕ್ ಆಡಿಟ್ ಪೂರ್ಣಗೊಳ್ಳುವವರೆಗೆ ಸ್ಥಗಿತಗೊಳಿಸಬೇಕು. ₹4,31,56,430.48/- ಮೊತ್ತದ ಲೆಕ್ಕಹಾಕಲಾದ ಬಾಕಿ ನಷ್ಟವನ್ನು, ಅನ್ವಯವಾಗುವ ಬಡ್ಡಿ ಹಾಗೂ ಇತರೆ ವಸೂಲಿ ಮಾಡಬಹುದಾದ ಮೊತ್ತಗಳೊಂದಿಗೆ ತಕ್ಷಣ ವಸೂಲಿ ಮಾಡಲು ಕ್ರಮಗಳನ್ನು ಆರಂಭಿಸುವಂತೆ ನಿರ್ದೇಶಿಸಬೇಕು ಎಂದು ಮನವಿ ಮಾಡಿರುವುದು ಗೊತ್ತಾಗಿದೆ.
2018-19 ರಿಂದ ಇಂದಿನವರೆಗಿನ ಅವಧಿಗೆ ಸಂಬಂಧಿಸಿದಂತೆ ಎಂಎಸ್‌ವಿ ಕನ್ಸ್ಟ್ರಕ್ಷನ್ಸ್‌ಗೆ ಸಂಬಂಧಿಸಿದ ಎಲ್ಲಾ ದಾಖಲೆಗಳು, ಟಿಪ್ಪಣಿ ಹಾಳೆಗಳು (Noting Sheets), ಟೆಂಡರ್ ಕಡತಗಳು, ತಾಂತ್ರಿಕ ಮೌಲ್ಯಮಾಪನ ವರದಿಗಳು, ಮೇಲ್ಮನವಿ ಕಡತಗಳು, ಸರ್ಕಾರಿ ಆದೇಶಗಳು, IFMS ಪಾವತಿ ನೋಂದಣಿಗಳು ಹಾಗೂ ಪತ್ರವ್ಯವಹಾರಗಳನ್ನು ಹಾಜರುಪಡಿಸಿ ಪರಿಶೀಲಿಸಲು ನಿರ್ದೇಶಿಸಬೇಕು. ಬಿಬಿಎಂಪಿ / ಜಿಬಿಎ / ನಗರಾಭಿವೃದ್ಧಿ ಇಲಾಖೆಯಿಂದ ಎಂ/ಎಸ್ ಎಂಎಸ್‌ವಿ ಕನ್ಸ್ಟ್ರಕ್ಷನ್ಸ್ / ಎಂ.ಎಸ್. ವೆಂಕಟೇಶ್ ಹಾಗೂ ಅವರ ಸಂಬಂಧಿತ ಸಂಸ್ಥೆಗಳಿಗೆ ನೀಡಲಾದ ಎಲ್ಲಾ ಕಾಮಗಾರಿಗಳ ಕುರಿತು ಸಮಗ್ರ ತಾಂತ್ರಿಕ ಹಾಗೂ ಹಣಕಾಸು ಫಾರೆನ್ಸಿಕ್ ಆಡಿಟ್ ನಡೆಸುವಂತೆ ನಿರ್ದೇಶಿಸಬೇಕು ಎಂದು ದೂರಿನಲ್ಲಿ ಒತ್ತಾಯಿಸಿರುವುದು ತಿಳಿದು ಬಂದಿದೆ.

ತನಿಖೆ ಬಾಕಿ ಇರುವ ಅವಧಿಯಲ್ಲಿ, ಅನ್ವಯವಾಗುವ ಸೇವಾ ನಿಯಮಗಳ ಪ್ರಕಾರ ನಗರಾಭಿವೃದ್ಧಿ ಇಲಾಖೆಯ ಪ್ರಸ್ತುತ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ತುಷಾರ್ ಗಿರಿನಾಥ್, ಐಎಎಸ್ ಅವರ ವಿರುದ್ಧ ಸೂಕ್ತ ಮಧ್ಯಂತರ ಶಿಸ್ತು ಕ್ರಮಗಳನ್ನು (Interim Disciplinary Measures) ಪರಿಗಣಿಸಬೇಕು ಎಂದು ಕೋರಿರುವುದು ಗೊತ್ತಾಗಿದೆ.
ಈ ದೂರಿನಲ್ಲಿ ಮಾಡಿರುವ ಆರೋಪಗಳಿಗೆ ಸಂಬಂಧಿಸಿದಂತೆ ದಿ ಫೈಲ್, ತುಷಾರ್ ಗಿರಿನಾಥ್ ಅವರ ಸ್ಪಷ್ಟೀಕರಣ/ ಪ್ರತಿಕ್ರಿಯೆ ಕೋರಿದ್ದ ಅಧಿಕೃತ ಇ ಮೇಲ್ ಕಳಿಸಿದೆ. ಇದುವರೆಗೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಪ್ರತಿಕ್ರಿಯೆ ನೀಡಿದ ನಂತರ ಇದೇ ವರದಿಯನ್ನು ನವೀಕೃತಗೊಳಿಸಲಾಗುವುದು.




