Wednesday | May 6, 2026 |

ಬಿಜೆಪಿ ಅವಧಿಯಲ್ಲಿದ್ದ 120 ಎಕರೆ ಗೋಮಾಳ, ಕಾಂಗ್ರೆಸ್‌ ಅವಧಿಯಲ್ಲಿ ಕಣ್ಮರೆ!; 24 ಕೋಟಿ ಮೌಲ್ಯದ ಜಮೀನು, ಖಾಸಗಿ ವ್ಯಕ್ತಿಗಳ ಪಾಲು?

ಬೆಂಗಳೂರು; ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಕಲ್ಬುರ್ಗಿಯ ಸೇಡಂ ತಾಲೂಕಿನ ಬೀರನಹಳ್ಳಿ ಗ್ರಾಮದ ವಿವಿಧ ಸರ್ವೆ ನಂಬರ್‍‌ಗಳಲ್ಲಿ  120 ಎಕರೆ ಗೋಮಾಳ ಎಂದು ಆರ್‍‌ಟಿಐ ಅರ್ಜಿಗೆ ಹಿಂಬರಹ ನೀಡಿದ್ದ ತಹಶೀಲ್ದಾರ್‍‌, ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ಇದೇ ಸರ್ವೆ ನಂಬರ್‍‌ಗಳಲ್ಲಿ 120 ಎಕರೆ ಗೋಮಾಳ ಎಂದು ಕಂಡುಬರುವುದಿಲ್ಲ ಎಂದು ಜಿಲ್ಲಾಧಿಕಾರಿಗೆ ವರದಿ  ಸಲ್ಲಿಸಿರುವುದು ಇದೀಗ ಬಹಿರಂಗವಾಗಿದೆ.

ವೈದ್ಯಕೀಯ ಶಿಕ್ಷಣ ಸಚಿವ ಡಾ ಶರಣ್ ಪ್ರಕಾಶ ಪಾಟೀಲ್ ಅವರ ಸ್ವಕ್ಷೇತ್ರ ಕಲ್ಬುರ್ಗಿಯ ಸೇಡಂ ವಿಧಾನಸಭೆ ಕ್ಷೇತ್ರದಲ್ಲಿ ಅಂದಾಜು 24 ಕೋಟಿ ರು ಮೌಲ್ಯದ 120 ಎಕರೆ ವಿಸ್ತೀರ್ಣದ ಗೋಮಾಳ ಫಡಾ ಎಂದು 1952ರಿಂದ 2024ರವರೆಗೂ ಅಸ್ತಿತ್ವದಲ್ಲಿತ್ತು. ಆದರೀಗ 2026ರಲ್ಲಿ ದಾಖಲೆಗಳಲ್ಲಿ ಗೋಮಾಳವನ್ನೇ ಕಣ್ಮರೆ ಮಾಡಿರುವ ಬೃಹತ್‌ ಭೂ ಹಗರಣ ನಡೆದಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ.

ಸೇಡಂ ತಾಲೂಕಿನ ಬೀರನಹಳ್ಳಿಯಲ್ಲಿ ಯಾವುದೇ ಗೋಮಾಳ ಎಂದು ಕಂಡು ಬರುವುದಿಲ್ಲ ಎಂದು ಸೇಡಂ ತಹಶೀಲ್ದಾರ್ ಮತ್ತು ಸಹಾಯಕ ಆಯುಕ್ತರು 2026ರ ಫೆ.7ರಂದು ಜಿಲ್ಲಾಧಿಕಾರಿಗೆ ವರದಿ ನೀಡಿದ್ದಾರೆ.

ಇದಕ್ಕೆ ಸಂಬಂಧಿಸಿದಂತೆ ಸಮಗ್ರ ದಾಖಲೆಗಳು ‘ದಿ ಫೈಲ್‌’ಗೆ ಲಭ್ಯವಾಗಿವೆ.

ಮತ್ತೊಂದು ವಿಶೇಷವೆಂದರೇ ಈ ಪ್ರಕರಣದಲ್ಲಿ ಸೇಡಂನಲ್ಲಿರುವ ನ್ಯಾಯಾಲಯವು ದೂರುದಾರರ ಅರ್ಜಿಯು ವಿಚಾರಣೆಗೆ ಇನ್ನೂ ಬಾಕಿ ಇದೆ. ಅದರೂ ಸಹ ಈ ಅರ್ಜಿಯನ್ನು ನ್ಯಾಯಾಲಯವು ವಜಾಗೊಳಿಸಿದೆ ಎಂದು ಜಿಲ್ಲಾಧಿಕಾರಿಗೂ ತಪ್ಪು ಮಾಹಿತಿ ನೀಡಿರುವುದು ಕಂಡು ಬಂದಿದೆ.

ವೈದ್ಯಕೀಯ ಶಿಕ್ಷಣ ಸಚಿವ ಡಾ ಶರಣ ಪ್ರಕಾಶ ಪಾಟೀಲ್ ಅವರ ದೂರದ ಸಂಬಂಧಿಯೊಬ್ಬರು ಇದೇ ಗೋಮಾಳವನ್ನು ಒತ್ತುವರಿ ಮಾಡಿಕೊಂಡು ಸ್ವಾಧೀನದಲ್ಲಿದ್ದಾರೆ ಎಂಬ ಆರೋಪಗಳು ಸಹ ಕೇಳಿ ಬಂದಿವೆ. ಹೀಗಾಗಿ ಒತ್ತಡಕ್ಕೆ ಮಣಿದಂತಿರುವ ಹಾಲಿ ತಹಶೀಲ್ದಾರ್‍‌ ಅವರು, 5 ವರ್ಷಗಳ ಹಿಂದೆ ಗೋಮಾಳ ಇದೆ ಎಂದು ಹಿಂದಿನ ತಹಶೀಲ್ದಾರ್‍‌ ಅವರು ನೀಡಿದ್ದ ಹಿಂಬರಹಕ್ಕೆ ಸವಾಲು ಎಸೆದಿದ್ದಾರೆ.

 

ಕಲ್ಬುರ್ಗಿ ಸೇಡಂ ತಾಲೂಕಿನ ಬೀರನಹಳ್ಳಿಯಲ್ಲಿರುವ ಗೋಮಾಳದ ಚಿತ್ರವಿದು

120 ಎಕರೆ ವಿಸ್ತಿರ್ಣದ ಗೋಮಾಳ ಪಹಣಿ ದಾಖಲೆಗಳಲ್ಲಿ ಖಾಸಗಿ ವ್ಯಕ್ತಿಗಳ ಹೆಸರುಗಳು ಅನಧಿಕೃತವಾಗಿ ಸೇರ್ಪಡೆಯಾಗಿದೆ. ಹೀಗಿದ್ದರೂ ತಹಶೀಲ್ದಾರ್ ಅನಧಿಕೃತ ವ್ಯಕ್ತಿಗಳ ಹೆಸರುಗಳನ್ನು ತೆಗೆದು ಗೋಮಾಳ ಎಂದು ಪುನರ್ ಸ್ಥಾಪಿಸದೇ ಗೋಮಾಳ ಎಂಬುದು ಕಂಡುಬರುವುದಿಲ್ಲ ಎಂದು ವರದಿ ನೀಡಿರುವುದು ಸಂಶಯಕ್ಕೆ ದಾರಿಮಾಡಿಕೊಟ್ಟಿದೆ.

ಅಲ್ಲದೇ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ಸಾರ್ವಜನಿಕ ಜಮೀನುಗಳ ನಿಗಮ ನಿಯಮಿತದಲ್ಲಿಯೂ ದಾಖಲೆಗಳ ಸಮೇತ 2022ರಲ್ಲೇ ದೂರು ಸಲ್ಲಿಕೆಯಾಗಿತ್ತು.

 

 

ಈ ದೂರನ್ನು ಸ್ವೀಕರಿಸಿ ಪರಿಶೀಲಿಸಿದ್ದ ಸಾರ್ವಜನಿಕ ನಿಗಮಗಳ ನಿಯಮಿತವು, ಈ ಸಂಬಂಧ ವರದಿ ಸಲ್ಲಿಸಬೇಕು ಎಂದು ಕಲ್ಬುರ್ಗಿ ಜಿಲ್ಲಾಧಿಕಾರಿಗೆ ನಿರ್ದೇಶನ ನೀಡಿತ್ತು. ಈ ಬಗ್ಗೆ 2022, 2023 ಮತ್ತು 2024ರಲ್ಲಿಯೂ ಹಲವು ನೆನಪೋಲೆಗಳನ್ನೂ ಸಹ ಕಳಿಸಿದ್ದರು.

 

 

 

ಆದರೆ ಜಿಲ್ಲಾಧಿಕಾರಿಯು ಇದುವರೆಗೂ ಯಾವುದೇ ವರದಿಯನ್ನು ಸಲ್ಲಿಸಿಲ್ಲ ಎಂದು ತಿಳಿದು ಬಂದಿದೆ.

ಅಲ್ಲದೇ 2025ರ ಮಾರ್ಚ್‌ 13ರಂದು ಸೇಡಂನ ಉಪ ವಿಭಾಗದ ಸಹಾಯಕ ಆಯುಕ್ತರಿಗೂ ಈ ಬಗ್ಗೆ ದೂರು ಸಲ್ಲಿಕೆಯಕಾಗಿತ್ತು. ಅಲ್ಲದೇ ಈ ಹಗರಣದ ಬಗ್ಗೆ ತನಿಖಾ ತಂಡ ರಚಿಸಬೇಕು ಎಂದು ಶಿವಾನಂದ ವಾಲೀಕಾರ ಅವರು ಕೋರಿದ್ದರು.

 

 

 

120 ಎಕರೆ ಭೂಹಗರಣದ ಹೂರಣ

ಕಲ್ಬುರ್ಗಿ ಜಿಲ್ಲೆ ಸೇಡಂ ತಾಲೂಕಿನ ಬೀರನಹಳ್ಳಿ ಗ್ರಾಮದ ಸರ್ವೆ ನಂಬರ್‍‌ 16, 17, 18, 19 ಮತ್ತು 20ರಲ್ಲಿ ಒಟ್ಟು 120 ಎಕರೆ ವಿಸ್ತೀರ್ಣದ ಗೋಮಾಳ ಜಮೀನಿತ್ತು. ಈ ಭಾಗದ ದನ ಕರು ಮೇವಿನ ಸಲುವಾಗಿ ಈ ಜಮೀನುಗಳನ್ನು ಮೀಸಲಿಟ್ಟಿತ್ತು. ಈ ಜಮೀನುಗಳು 1952ರಿಂದ 2024ರವರೆಗೂ ಪಡಾ ಜಮೀನುಗಳಾಗಿದ್ದವು. ಆದರೆ ಈ ಜಮೀನುಗಳಿಗೆ ಯಾವುದೇ ಭದ್ರತೆ ನೀಡದ ಕಾರಣ ಪ್ರಭಾವಿಗಳ ಸಂಪರ್ಕದಲ್ಲಿರುವ ಹಲವು ಮಂದಿ ಒತ್ತುವರಿ ಮಾಡಿಕೊಂಡಿದ್ದರು. ಅಲ್ಲದೇ ಈ ಜಮೀನುಗಳನ್ನು ಮಾರಾಟವನ್ನೂ ಮಾಡಿದ್ದರು.

 

 

ಹಾಗೆಯೇ ಈ ಜಮೀನುಗಳನ್ನು ಸಾಗುವಳಿ ಮಾಡಲು ಸೇಡಂನ ತಹಶೀಲ್ದಾರ್ ಮತ್ತು ಸಹಾಯಕ ಆಯುಕ್ತರು ಅವಕಾಶವನ್ನು ಕೊಟ್ಟಿದ್ದರು ಎಂಬ ಆರೋಪ ಕೇಳಿ ಬಂದಿತ್ತು.

ಈ ಸಂಬಂಧ ಶಿವಾನಂದ ವಾಲೀಕರ ಎಂಬುವರು ಆರ್‍‌ಟಿಐ ಅಡಿ ಮಾಹಿತಿ ಪಡೆದು ಸಮಗ್ರ ದಾಖಲೆಗಳೊಂದಿಗೆ ಕರ್ನಾಟಕ ಸಾರ್ವಜನಿಕ ಜಮೀನುಗಳ ನಿಗಮಕ್ಕೆ ದೂರು ಸಲ್ಲಿಸಿದ್ದರು. ಅಲ್ಲದೇ ಕಲ್ಬುರ್ಗಿಯ ಪ್ರಾದೇಶಿಕ ಆಯುಕ್ತರೂ ಸಹ ವರದಿ ಕೇಳಿ ಕಲ್ಬುರ್ಗಿ ಜಿಲ್ಲಾಧಿಕಾರಿಗೆ ನಿರ್ದೇಶನವನ್ನು ನೀಡಿದ್ದರು. ಆದರೆ ಇದುವರೆಗೂ ಜಿಲ್ಲಾಧಿಕಾರಿಯು ಯಾವುದೇ ವರದಿಯನ್ನು ನೀಡಿಲ್ಲ ಎಂದು ತಿಳಿದು ಬಂದಿದೆ.

 

 

ಹಾಗೆಯೇ ಉಮೇಶ್‌ ಎಂಬುವರು ಸಹ 2024ರಲ್ಲಿ ಇದೇ ಸರ್ವೇ ನಂಬರ್‍‌ನಲ್ಲಿರುವ ಜಮೀನುಗಳ ಬಗ್ಗೆ ಪಹಣಿ ಕುರಿತಾದ ಹಿಂಬರಹವನ್ನು ಪಡೆದುಕೊಂಡಿದ್ದರು. ಉಮೇಶ್‌ ಎಂಬುವರಿಗೆ ತಹಶೀಲ್ದಾರ್‍‌ ಅವರು ನೀಡಿದ್ದ ಹಿಂಬರಹದದಲ್ಲಿ ಒದಗಿಸಿದ್ದ 1952ರ ಖಾಸರ ಪಹಣಿ ಪ್ರಕಾರ ಬೀರನಹಳ್ಳಿ ಗ್ರಾಮದ ಸರ್ವೇ ನಂಬರ್‍‌ 16ರಿಂದ 20ರವರೆಗೆ ಪಹಣಿ ಕಾಲಂ 10ರಲ್ಲಿ ಸರ್ಕಾರಿ ಎಂದು ನಮೂದಾಗಿತ್ತು. ಕಾಲಂ ನಂ 12ರಲ್ಲಿ ಅಲ್ಲಾಪ ಮೊಹದಿನ್ನ ಅಮರಪ್ಪಾ, ಸಖರಾಮ ಪಟವಾರಿ, ರಿಯಾಯಾ ವಗೈರಾ ಎಂದು ನಮೂದಾಗಿರುವುದು ಕಂಡು ಬಂದಿದೆ.

 

 

 

ಹಾಗೆಯೇ ಇದೇ ಸರ್ವೇ ನಂಬರ್‍‌ಗಳಲ್ಲಿನ ಜಮೀನುಗಳಲ್ಲಿ 2021-22ರಿಂದ 2024-25ರವರೆಗಿನ ಅವಧಿಯಲ್ಲಿ   ಯಾವುದೇ ಬೆಳೆ ಬೆಳೆದಿರುವುದಿಲ್ಲ, ಪಾಳು ಬಿದ್ದಿದೆ ಎಂದು ಕೃಷಿ ಇಲಾಖೆಯೂ ಸಹ ಆರ್‍‌ಟಿಐ ಅರ್ಜಿಗೆ ಮಾಹಿತಿ ನೀಡಿತ್ತು.

 

 

2020ರಲ್ಲಿ ಗೋಮಾಳ ಎಂಬ ಹಿಂಬರಹ

ಶಿವಾನಂದ ಎಂ ವಾಲೀಕಾರ ಎಂಬುವರು 2020ರಲ್ಲಿಯೇ ಈ ಸಂಬಂಧ ಆರ್‍‌ಟಿಐ ಅಡಿ ಮಾಹಿತಿ ಕೋರಿ ಅರ್ಜಿ ಸಲ್ಲಿಸಿದ್ದರು. ಅಂದಿನ ತಹಶೀಲ್ದಾರ್ ಬಸವರಾಜ ಬೆಣ್ಣೆ ಶಿರೂರ ಅವರು 2020ರ ಡಿಸಂಬರ್‍‌ 4ರಂದು ಹಿಂಬರಹ ನೀಡಿದ್ದರು. ಈ ಹಿಂಬರಹದ ಪ್ರಕಾರ ಸೇಡಂ ತಾಲೂಕಿನ ಬೀರನಹಳ್ಳಿ ಗ್ರಾಮದ ಸರ್ವೇ ನಂಬರ್‍‌ 16,17,18,19,20,22ರಲ್ಲಿನ ಜಮೀನುಗಳು ಗೈರಾಣ, ಗೌಂಠಾಣ, ಸರಕಾರಿ ಗೋಮಾಳ ಜಮೀನುಗಳಾಗಿರುತ್ತವೆ ಎಂದು ಮಾಹಿತಿ ನೀಡಿದ್ದರಲ್ಲದೇ ಅದನ್ನು ದೃಢೀಕರಿಸಿದ್ದರು.

 

 

2026ರಲ್ಲಿ ಗೋಮಾಳವೇ ಇಲ್ಲವೆಂದು ವರದಿ

ವಿಶೇಷವೆಂದರೇ 5 ವರ್ಷಗಳ ಹಿಂದೆ ತಹಶೀಲ್ದಾರ್‍‌ ನೀಡಿದ್ದ ಹಿಂಬರಹಕ್ಕೆ ವಿರುದ್ಧವಾಗಿ ಹಾಲಿ ಹಾಲಿ ತಹಶೀಲ್ದಾರ್‍ ಶ್ರಿಯಾಂಕ ಎ ಧನ ಶ್ರೀ ‌ ವರದಿ ನೀಡಿದ್ದಾರೆ.. 2026ರ ಫೆ.7ರಂದು ಕಲ್ಬುರ್ಗಿ ಜಿಲ್ಲಾಧಿಕಾರಿಗೆ ನೀಡಿರುವ ವರದಿಯಲ್ಲಿ ಸೇಡಂ ತಾಲೂಕಿನ ಬೀರನಹಳ್ಳಿ ಗ್ರಾಮದ ಸರ್ವೇ ನಂಬರ್‍‌ 16,17,18,19,20,22ರಲ್ಲಿನ ಜಮೀನುಗಳ ಕಲಂನಲ್ಲಿ ಗೋಮಾಳ ಎಂದು ಕಂಡು ಬರುವುದಿಲ್ಲ ಎಂದು ವಿವರಿಸಿದ್ದಾರೆ.

ಹಾಲಿ ತಹಶೀಲ್ದಾರ್ ವರದಿಯಲ್ಲೇನಿದೆ?

‘1964ರ ಕೈ ಬರಹದ ಪಹಣಿ ಪರಿಶೀಲಿಸಲಾಗಿ ಸದರಿ ಪಹಣಿ ಪತ್ರಿಕೆಯಲ್ಲಿ ಗೋಮಾಳ ಎಂದು ನೋಂದಾಯಿಸಿರುವುದಿಲ್ಲ. ಸರ್ವೆ ನಂಬರ್‍‌ 16,17,18,19, 20 ವಿಸ್ತೀರ್ಣ 120 ಎಕರೆ ಜಮೀನು ಪೂರ್ತಿ ಪರಿಶೀಲಿಸಲಾಗಿ ಯಾವುದೇ ಕಾಲಂನಲ್ಲಿ ಗೋಮಾಳ ಎಂದು ಕಂಡು ಬರುವುದಿಲ್ಲ,’ ಎಂದು ವರದಿ ನೀಡಿರುವುದು ಗೊತ್ತಾಗಿದೆ.

 

 

ಅದೇ ರೀತಿ 1954ರಲ್ಲಿ ಸರ್ವೆ ನಂಬರ್‍‌ 16ರಲ್ಲಿ 22 ಎಕರೆ 19 ಗುಂಟೆ ವಿಸ್ತೀರ್ಣದ ಜಮೀನಿನ ಕಾಸ್ರಾ ಪಹಣಿ ಪ್ರಕಾರ ಅಲ್ಲಾಪ, ಮೊದೀನ್, ಪ., ಅಮರಪ್ಪ, ಸಖರಾಮಪ್ಪ, ಅಯ್ಯಪ್ಪ, ರಿಯಾಯ ಎಂದು, ಇದೇ ಅದೇ ಪ್ರಕಾರ ಸರ್ವೆ ನಂಬರ್‍‌ 17ರ ವಿಸ್ತೀರ್ಣ 22 ಎಕರೆ 11 ಗುಂಟೆ, ಸರ್ವೆ ನಂಬರ್‍‌ 18ರಲ್ಲಿ 16 ಎಕರೆ 11 ಗುಂಟೆ, ಸರ್ವೆ ನಂಬರ್‍‌ 19ರಲ್ಲಿ 32 ಎಕರೆ 6 ಗುಂಟೆ ಹಾಗೂ ಸರ್ವೆ ನಂಬ್‌ 20ರಲ್ಲಿ 29 ಎಕರೆ 19 ಗುಂಟೆ ಕುಡ ಅದೇ ಪ್ರಕಾರ ಇದ್ದು ಯಾವುದೇ ಕಾಲಂನಲ್ಲಿ ಗೋಮಾಳ ಎಂದು ಕಂಡುಬರುವುದಿಲ್ಲೆಂದು ವರದಿ ನೀಡಿದ್ದರು.

ಹಾಗೆಯೇ ಸರ್ವೇ ನಂಬರ್ 16,17,18,19 ಮತ್ತು 20ರಲ್ಲಿನ ಒಟ್ಟು ವಿಸ್ತೀರ್ಣ 120 ಎಕರೆ ಜಮೀನಿನ 1964-65ರ ಕೈ ಬರಹ ಪಹಣಿಯನ್ನೂ ಪರಿಶೀಲಿಸಿದ್ದಾರೆ. ಇದರ ಪ್ರಕಾರ ಈ ಪಹಣಿಯಲ್ಲಿ ಕೂಡ ಅಲ್ಲಾಪ, ಮೋದಿನ್ ಪಟೇಲ್, ಅಮರಪ್ಪ, ಸಾಕಾರಾಮ ಪಟವಾರಿ, ಅಯ್ಯಪ್ಪ ಎಂದು ಕಂಡುಬಂದಿರುತ್ತದೆ. ಹಾಗೂ ಸರ್ವೆ ನಂಬರ್‍‌ 18ರಲ್ಲಿನ 16 ಎಕರೆ 11 ಗುಂಟೆ ವಿಸ್ತೀರ್ಣದ ಜಮೀನಿನ ಪಹಣಿಯಲ್ಲಿ ಅಲ್ಲಾ ಪಟೇಲ ಎಂದು ಕಂಡುಬರುತ್ತದೆ. ಹೀಗಾಗಿ ಈ ಸರ್ವೆ ನಂಬರ್‍‌ಗಳಲ್ಲಿನ ಜಮೀನು ಗೋಮಾಳ ಎಂದು ಕಂಡುಬಂದಿರುವುದಿಲ್ಲ. ಚಾಲ್ತಿ ಪಹಣಿಯಲ್ಲಿರುವ ಪಟ್ಟೇದಾರರೇ ಸಾಗುವಳಿ ಮಾಡುತ್ತಿದ್ದಾರೆ ಎಂದು ಕಂದಾಯ ನಿರೀಕ್ಷಕರು ನೀಡಿದ್ದ ವರದಿಯನ್ನೇ ತಹಶೀಲ್ದಾರ್‍‌ ಅವರು ಅಂಗೀಕರಿಸಿರುವುದು ಗೊತ್ತಾಗಿದೆ.

 

 

 

ಸರ್ವೆ ನಂಬರ್‍‌ 16,17,18.19.20 ರಲ್ಲಿನ ಪಹಣಿಗಳನ್ನು ಪರಿಶೀಲನೆ ಮಾಡಿದ್ದು 1968-69ನೇ ಸಾಲಿನ ಎಲ್ಲಾ ಕೈ ಬರಹದ ಪಹಣಿಗಳಲ್ಲಿ ಪಹಣಿ ಕಲಂ 9ರಲ್ಲಿ ಪಟ್ಟೇದಾರರ ಹೆಸರು ಇದೆ. ಕಲಂ ನಂ 6ರಲ್ಲಿ ಪಟ್ಟಾ ಎಂದು ನಮೂದಾಗಿದೆ. ಕಾಲಂ ನಂ 12 (2)ರಲ್ಲಿ ಗೋಮಾಳ ಫಡಾ ಎಂದು ನಮೂದಾಗಿದೆ. ಈ ಎರಡೂ ವರ್ಷದ ಪಹಣಿಗಳನ್ನು ಹೊರತುಪಡಿಸಿ ಎಲ್ಲಾ ವರ್ಷದ ಪಹಣಿಗಳಲ್ಲಿ ಪಟ್ಟೇದಾರರ ಹೆಸರು ನಮೂದಾಗಿದೆ ಎಂದು ವಿವರಿಸಿರುವುದು ತಿಳಿದು ಬಂದಿದೆ.

ದೂರರ್ಜಿ ವಿಚಾರಣೆಗೆ ಬಾಕಿಯಿದ್ದರೂ ವಜಾ ಎಂದು ಸುಳ್ಳು ಹೇಳಿದರೇ ತಹಶೀಲ್ದಾರ್?

ಇದೇ ಪ್ರಕರಣದಲ್ಲಿ ನ್ಯಾಯಾಲಯವು ಅರ್ಜಿದಾರರ ಅರ್ಜಿಗಳನ್ನು ವಜಾಗೊಳಿಸಿ ಆದೇಶ ಹೊರಡಿಸಿದೆ ಎಂದು ತಹಶೀಲ್ದಾರ್ ವರದಿಯಲ್ಲಿ ಹೇಳಲಾಗಿದೆ. ಆದರೆ ವಾಸ್ತವದಲ್ಲಿ ಅಸಲು ದಾವೆಯು ವಜಾಗೊಂಡಿಲ್ಲ ಎಂದು ತಿಳಿದು ಬಂದಿದೆ. ಸದ್ಯ ಈ ಅರ್ಜಿಯು ವಿಚಾರಣೆಗೆ ಇನ್ನೂ ಬಾಕಿ ಇದೆ. ಇದೇ 2026ರ ಜೂನ್‌ 9ರಂದು ವಿಚಾರಣೆಗೆ ದಿನಾಂಕ ನಿಗದಿಯಾಗಿದೆ.

 

 

ತಹಶೀಲ್ದಾರ್‍‌ ನೀಡಿದ್ದ ವರದಿಯನ್ನೇ ಉಪ ವಿಭಾಗಾಧಿಕಾರಿ ಪ್ರಭುರೆಡ್ಡಿಯವರೂ ಅನುಮೋದಿಸಿರುವುದಲ್ಲದೇ ಈ ವರದಿಗೆ ತಮ್ಮ ಸಹಿ ಮಾಡುವ ಮೂಲಕ ವರದಿಯನ್ನು ದೃಢೀಕರಿಸಿರುವುದು ಗೊತ್ತಾಗಿದೆ. ಸರ್ವೇ ನಂಬರ್ 19ರಲ್ಲಿ ಹೆಚ್ಚುವರಿ ಭೂಮಿಗೆ ಸಂಬಂಧಿಸಿದಂತೆ ಖಾಯಂ ಕಡತವಿದೆ. ಆದರೀಗ ಈ ಕಡತವೂ ಲಭ್ಯವಿಲ್ಲ ಎಂದು ಹಿಂಬರಹ ನೀಡಿರುವುದು ಸಹ ಸಂಶಯಗಳನ್ನು ಮತ್ತಷ್ಟು ಬಲಪಡಿಸಿದಂತಾಗಿದೆ.

 

 

‘ಕಲಬುರಗಿ ಜಿಲ್ಲೆಯಲ್ಲಿ ನಡೆದಿರುವ ದೊಡ್ಡ ಭೂ ಹಗರಣಕ್ಕೆ ಸಂಬಂಧಪಟ್ಟಂತೆ ಸರ್ಕಾರಕ್ಕೆ ಹಲವು ದೂರುಗಳನ್ನು ದಾಖಲೆ ಸಮೇತ ಕೊಟ್ಟಿದ್ದೇವೆ.ಇದುವರೆಗೂ ತನಿಖೆ ನಡೆದಿಲ್ಲಾ. ಈ ಬೃಹತ ಭೂಹಗರಣ ಮುಚ್ಚಿಹಾಕುವ ಷಡ್ಯಂತ್ರ ನಡೆದಿದೆ.ಹೀಗಾಗಿ ಗೋಮಾಳವನ್ನು ಪುನಃ ಸರ್ಕಾರ ವಶಕ್ಕೆ ಪಡೆಯಬೇಕು.ಸರ್ಕಾರಕ್ಕೆ ತಪ್ಪುಮಾಹಿತಿಯನ್ನು ನೀಡುತ್ತಿರುವ ಅಧಿಕಾರಿಗಳ ವಿರುದ್ದ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು.ತತ್‌ಕ್ಷಣವೇ ಗೋಮಾಳ ಭೂಮಿ ಮಾರಟ ಮಾಡದಂತೆ ಕ್ರಮವಹಿಸಬೇಕು. ಇಡೀ ಹಗರಣವನ್ನು ವಿಶೇಷ ತನಿಖಾ ತಂಡ (ಎಸ್ಐಟಿ) ಮೂಲಕ ತನಿಖೆ  ನಡೆಸಬೇಕು,’ ಎನ್ನುತ್ತಾರೆ ದೂರುದಾರ ಶಿವಾನಂದ ವಾಲೀಕಾರ ಅವರು.

ವಿಶೇಷವೆಂದರೇ ಶಿವಾನಂದ ವಾಲೀಕಾರ್ ಅವರು ಈ ಪ್ರಕರಣದ ಬಗ್ಗೆ ತನಿಖಾ ತಂಡ ರಚಿಸಬೇಕು ಎಂದು ವರ್ಷದ ಹಿಂದೆಯೇ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರು.

 

 

ಆದರೆ ಈ ಮನವಿ ಆಧರಿಸಿ ಸರ್ಕಾರವು ಯಾವುದೇ ಕ್ರಮವಹಿಸಿಲ್ಲ. ಈ ಪ್ರಕರಣದ ಬಗ್ಗೆ ದಿ ಫೈಲ್‌ ಕೂಡ ಕಲ್ಬುರ್ಗಿ ಜಿಲ್ಲಾಧಿಕಾರಿಗಳಿಗೆ ಪ್ರತಿಕ್ರಿಯೆ ಕೋರಿ ಪ್ರಶ್ನಾವಳಿ ಕಳಿಸಲಾಗಿದೆ. ಜಿಲ್ಲಾಧಿಕಾರಿಗಳು ಪ್ರತಿಕ್ರಿಯೆ ನೀಡಿದ ನಂತರ  ವರದಿಯನ್ನು ನವೀಕರಿಸಲಾಗುವುದು.

Hot this week

ಒಂದೇ ಜಾಗದಲ್ಲಿ ಎರಡು ಫ್ಲೈ ಓವರ್, ಶೇ.50ರಷ್ಟು ಕಾಮಗಾರಿಯಾಗಿದ್ದರೂ ಪೂರ್ಣ ಪಾವತಿ; ಬ್ಯಾಂಕ್‌ ಗ್ಯಾರಂಟಿ ಮುಟ್ಟುಗೋಲಿಲ್ಲ, ಗುತ್ತಿಗೆದಾರರಿಗೆ ಲಾಭ, ಬಿಬಿಎಂಪಿ ನಿಧಿಗೆ ನಷ್ಟ

ಬೆಂಗಳೂರು;  ಈಜಿಪುರ ಮೇಲ್ಸೇತುವೆ ಎಲಿವೇಟೆಡ್‌ ಕಾರಿಡಾರ್  ಕಾಮಗಾರಿಯನ್ನು ನಿಗದಿತ ಅವಧಿಯಲ್ಲಿ  ಪೂರ್ಣಗೊಳಿಸದ...

ಅನುದಾನ ಬಿಡುಗಡೆಯಾಗಿದ್ದರೂ ಪೂರ್ಣಗೊಳ್ಳದ ಕಾಮಗಾರಿ; ತನಿಖಾ ವರದಿಗೆ ಮೆತ್ತಿಕೊಂಡ ಧೂಳು, ಕ್ರಮಕೈಗೊಳ್ಳದ ಸಚಿವ

ಬೆಂಗಳೂರು; ತುಮಕೂರು ಜಿಲ್ಲೆಯ ಶಿರಾ ಪಟ್ಟಣದಲ್ಲಿರುವ ಕಸ್ತೂರಿ ರಂಗಪ್ಪ ನಾಯಕ ಕೋಟೆಯ...

ಧರ್ಮಸ್ಥಳ ಪ್ರಕರಣಗಳ ತನಿಖೆ; ಎಸ್‌ಐಟಿ ವರದಿ ಪ್ರತಿ ಒದಗಿಸದ ಸರ್ಕಾರ, ಗೃಹ ಇಲಾಖೆ ಶಾಖೆಯಲ್ಲಿ ಸಭೆ ನಡವಳಿಯೂ ಲಭ್ಯವಿಲ್ಲ

ಬೆಂಗಳೂರು: ಧರ್ಮಸ್ಥಳದ ಸುತ್ತಮುತ್ತ ನಡೆದಿರುವ ಮಹಿಳೆಯರು ಮತ್ತು ಯುವತಿಯರ ಮೇಲಿನ ದೌರ್ಜನ್ಯ/ಕೊಲೆ,...
Please Scan to make Your Contribution

Topics

ಅನುದಾನ ಬಿಡುಗಡೆಯಾಗಿದ್ದರೂ ಪೂರ್ಣಗೊಳ್ಳದ ಕಾಮಗಾರಿ; ತನಿಖಾ ವರದಿಗೆ ಮೆತ್ತಿಕೊಂಡ ಧೂಳು, ಕ್ರಮಕೈಗೊಳ್ಳದ ಸಚಿವ

ಬೆಂಗಳೂರು; ತುಮಕೂರು ಜಿಲ್ಲೆಯ ಶಿರಾ ಪಟ್ಟಣದಲ್ಲಿರುವ ಕಸ್ತೂರಿ ರಂಗಪ್ಪ ನಾಯಕ ಕೋಟೆಯ...

ಧರ್ಮಸ್ಥಳ ಪ್ರಕರಣಗಳ ತನಿಖೆ; ಎಸ್‌ಐಟಿ ವರದಿ ಪ್ರತಿ ಒದಗಿಸದ ಸರ್ಕಾರ, ಗೃಹ ಇಲಾಖೆ ಶಾಖೆಯಲ್ಲಿ ಸಭೆ ನಡವಳಿಯೂ ಲಭ್ಯವಿಲ್ಲ

ಬೆಂಗಳೂರು: ಧರ್ಮಸ್ಥಳದ ಸುತ್ತಮುತ್ತ ನಡೆದಿರುವ ಮಹಿಳೆಯರು ಮತ್ತು ಯುವತಿಯರ ಮೇಲಿನ ದೌರ್ಜನ್ಯ/ಕೊಲೆ,...

ವೈಟ್‌ ಟ್ಯಾಪಿಂಗ್‌ ಗೋಲ್ಮಾಲ್‌; ಅಗತ್ಯವಿರದಿದ್ದರೂ ಕಾಮಗಾರಿ, ತಾಂತ್ರಿಕ ಪರಿಶೀಲನೆಯಿಲ್ಲದಿದ್ದರೂ ಹೆಚ್ಚುವರಿ ವೆಚ್ಚ, ಗುತ್ತಿಗೆದಾರರಿಗೆ ಲಾಭ

ಬೆಂಗಳೂರು;  ವೈಟ್‌ ಟ್ಯಾಪಿಂಗ್ ಅಗತ್ಯವಿಲ್ಲದಿದ್ದರೂ  ಕಾಮಗಾರಿ ಆರಂಭಿಸಿದ ನಂತರ ತಾಂತ್ರಿಕ ಮಂಜೂರಾತಿ...

Related Articles

Popular Categories

error: Content is protected !!