ಬೆಂಗಳೂರು; ರಾಜ್ಯದ ಬೆಂಗಳೂರು, ಹುಬ್ಬಳ್ಳಿ, ಮಂಗಳೂರು ವಿದ್ಯುತ್ ಸರಬರಾಜು ಕಂಪನಿಗಳಿಗೆ ಅವಶ್ಯಕವಿರುವ 11,721 ಸಂಖ್ಯೆಯ ಟ್ರಾನ್ಸ್‌ಫಾರ್ಮ್‌ರ್‍ಗಳನ್ನು 174.73 ಕೋಟಿ ರು ವೆಚ್ಚದಲ್ಲಿ ಖರೀದಿಸಲು ಕೇರಳ ಎಲೆಕ್ಟ್ರಿಕಲ್ ಅಂಡ್ ಅಲೈಡ್ ಇಂಜಿನಿಯರಿಂಗ್ ಕಂಪನಿ ಲಿಮಿಟೆಡ್‌ಗೆ 4 ಜಿ ವಿನಾಯಿತಿ ನೀಡಿದೆ. ಈ ಸಂಬಂಧ ಆರ್ಥಿಕ ಇಲಾಖೆಯು ಅಧಿಸೂಚನೆ ಹೊರಡಿಸಿದೆ.
ಕೇರಳ ಎಲೆಕ್ಟ್ರಿಕಲ್ ಅಂಡ್ ಅಲೈಡ್ ಇಂಜಿನಿಯರಿಂಗ್ ಕಂಪನಿ ಲಿಮಿಟೆಡ್‌ಗೆ 4 ಜಿ ವಿನಾಯಿತಿ ನೀಡಿರುವ ಕಾರಣ 174.73 ಕೋಟಿ ರು ಆದಾಯವು ಕರ್ನಾಟಕ ವಿದ್ಯುತ್ ಕಾರ್ಖಾನೆಗೆ ತಪ್ಪಿ ಹೋಗಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ.
ಕರ್ನಾಟಕ ವಿದ್ಯುತ್ ಕಾರ್ಖಾನೆಯನ್ನು ಬದಿಗೊತ್ತಿ ಕೇರಳ ಎಲೆಕ್ಟ್ರಿಕಲ್ ಅಂಡ್ ಅಲೈಡ್ ಇಂಜಿನಿಯರಿಂಗ್ ಕಂಪನಿ ಲಿಮಿಟೆಡ್‌ನಿಂದಲೇ ವಿದ್ಯುತ್ ಪರಿವರ್ತಕಗಳನ್ನು ಖರೀದಿಸಲು ಮುಂದಾಗಿದ್ದ ರಾಜ್ಯ ಸರ್ಕಾರದ ಕ್ರಮಕ್ಕೆ ಪ್ರತಿಪಕ್ಷ ಬಿಜೆಪಿ ಮತ್ತು ಜೆಡಿಎಸ್ ಬಲವಾಗಿ ವಿರೋಧಿಸಿತ್ತು. ಅಲ್ಲದೇ 2026ರ ಮಾರ್ಚ್‌ನಲ್ಲಿ ನಡೆದಿದ್ದ ವಿಧಾನಮಂಡಲ ಅಧಿವೇಶನದಲ್ಲಿಯೂ ಸರ್ಕಾರದ ನಡೆಯ ಬಗ್ಗೆ ತಕರಾರು ಎತ್ತಿತ್ತು.
ವಿಧಾನ ಪರಿಷತ್‌ನಲ್ಲಿ ಈ ಬಗ್ಗೆ 2026ರ ಮಾರ್ಚ್ 9ರಂದು ತೀವ್ರ ಚರ್ಚೆ ನಡೆದಿತ್ತು. ಸದಸ್ಯ ಎನ್ ರವಿಕುಮಾರ್ ಮತ್ತು ಸಚಿವ ಕೆ ಜೆ ಜಾರ್ಜ್ ಅವರ ನಡುವೆ ಮಾತಿನ ಚಕಮಕಿಗೂ ಈ ಪ್ರಕರಣವು ಕಾರಣವಾಗಿತ್ತು. ಆಗ ಉತ್ತರಿಸಿದ್ದ ಸಚಿವ ಕೆ ಜೆ ಜಾರ್ಜ್ ಅವರು ‘ ಆರ್ಥಿಕ ಇಲಾಖೆಯು ಅನುಮತಿ ಕೊಡದಿದ್ದರೇ ನಾವು ಖರೀದಿ ಮಾಡುವ ಹಾಗಿಲ್ಲ. 4 ಜಿ ವಿನಾಯಿತಿ ಕೊಡಬೇಕಾಗಿರುವುದು ಎಫ್ ಡಿ ಆಗಿದ್ದು ಅವರು ಇನ್ನೂ ಕೊಡಲಿಲ್ಲ. 4 ಜಿ ಮಾಡದಿದ್ದರೇ ಟೆಂಡರ್ ಕರೆದು ಕೊಡುತ್ತೇವೆ,’ ಎಂದು ಉತ್ತರಿಸಿದ್ದರು.

ಅಲ್ಲದೇ ಅಧಿವೇಶನವು ನಡೆಯುತ್ತಿದ್ದ ಹೊತ್ತಿನಲ್ಲಿಯೇ ಆರ್ಥಿಕ ಇಲಾಖೆಯು 2026ರ ಮಾರ್ಚ್ 25ರಂದೇ ಕೇರಳ ಎಲೆಕ್ಟ್ರಿಕಲ್ ಅಂಡ್ ಅಲೈಡ್ ಇಂಜಿನಿಯರಿಂಗ್ ಕಂಪನಿ ಲಿಮಿಟೆಡ್‌ಗೆ 4 ಜಿ ವಿನಾಯಿತಿ ನೀಡಿ ಅಧಿಸೂಚನೆ ಹೊರಡಿಸಿದೆ. ವಿಶೇಷವೆಂದರೇ ಕೇರಳ ಎಲೆಕ್ಟ್ರಿಕಲ್ ಅಂಡ್ ಅಲೈಡ್ ಇಂಜಿನಿಯರಿಂಗ್ ಕಂಪನಿ ಲಿಮಿಟೆಡ್‌ಗೆ 4 ಜಿ ವಿನಾಯಿತಿ ನೀಡಲು ಆರ್ಥಿಕ ಇಲಾಖೆಯು ಬಲವಾಗಿ ಆಕ್ಷೇಪ ಎತ್ತಿತ್ತು. 174.73 ಕೋಟಿ ರುಪಾಯಿ ಮೊತ್ತದಲ್ಲಿ ಕರ್ನಾಟಕ ವಿದ್ಯುತ್ ಕಾರ್ಖಾನೆಯಿಂದಲೇ ಏಕೆ ಖರೀದಿಸಬಾರದು ಎಂದು ಇಂಧನ ಇಲಾಖೆಯನ್ನು ಕೇಳಿತ್ತು. ಆದರೀಗ ಆರ್ಥಿಕ ಇಲಾಖೆಯು ಕೇರಳ ಎಲೆಕ್ಟ್ರಿಕಲ್ ಅಂಡ್ ಅಲೈಡ್ ಇಂಜಿನಿಯರಿಂಗ್ ಕಂಪನಿ ಲಿಮಿಟೆಡ್‌ಗೆ 4 ಜಿ ವಿನಾಯಿತಿ ನೀಡಿ ಅಧಿಸೂಚನೆ ಹೊರಡಿಸಿರುವುದು ಚರ್ಚೆಗೆ ಗ್ರಾಸವಾಗಿದೆ.
‘ರಾಜ್ಯದ ಹೆಸ್ಕಾಂ, ಮೆಸ್ಕಾಂ, ಬೆಸ್ಕಾಂ ಸಂಸ್ಥೆಗಳಿಗೆ ಅವಶ್ಯಕವಿರುವ ಒಟ್ಟು 11,174 ಸಂಖ್ಯೆಯ ವಿತರಣೆ ಪರಿವರ್ತಕಗಳನ್ನು ಕೇರಳ ಎಲೆಕ್ಟ್ರಿಕಲ್ ಅಂಡ್ ಅಲೈಡ್ ಇಂಜಿನಿಯರಿಂಗ್ ಕಂಪನಿ ಲಿಮಿಟೆಡ್‌ನಿಂದ ಒಟ್ಟಾರೆ 174.73 ಕೋಟಿ ರುಪಾಯಿ ವೆಚ್ಚದಲ್ಲಿ ನೇರವಾಗಿ ಸಂಗ್ರಹಣೆ ಮಾಡಿಕೊಳ್ಳಲು ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗೆಳಲ್ಲಿ ಪಾರದರ್ಶಕತೆ ಅಧಿನಿಯಮ 1999ರ ಕಲಂ 4 (ಜಿ) ಅಡಿ ಇಂಧನ ಇಲಾಖೆಗೆ ಪಾರದರ್ಶಕತೆ ಕಾಯ್ದೆಯಿಂದ ವಿನಾಯಿತಿ ನೀಡಿದೆ,’ ಎಂದು ಅಧಿಸೂಚನೆಯಲ್ಲಿ ಹೇಳಿದೆ.

ಮತ್ತೊಂದು ವಿಶೇಷವೆಂದರೇ ಎಸ್ಕಾಂಗಳಿಗೆ ಅಗತ್ಯವಾಗಿ ಬೇಕಿದ್ದ 11,721 ಸಂಖ್ಯೆಯ ಟ್ರಾನ್ಸ್‌ಫಾರ್ಮ್‌ರ್‍ಗಳನ್ನು ಪೂರೈಸಲು ಕರ್ನಾಟಕ ವಿದ್ಯುತ್ ಕಾರ್ಖಾನೆಯು ಸದ್ಯಕ್ಕೆ ಸಿದ್ಧವಾಗಿಲ್ಲ ಎಂದು ಇಂಧನ ಇಲಾಖೆಯೇ ಹೇಳಿತ್ತು. ಹೀಗಾಗಿ ಕೇರಳ ಎಲೆಕ್ಟ್ರಿಕಲ್ ಅಂಡ್ ಅಲೈಡ್ ಇಂಜಿನಿಯರಿಂಗ್ ಕಂಪನಿ ಲಿಮಿಟೆಡ್‌ನಿಂದಲೇ ಖರೀದಿಸಲು 4 ಜಿ ವಿನಾಯಿತಿ ನೀಡಬೇಕು ಎಂದು ಕೋರಿತ್ತು. ಆದರೀಗ ಕೇರಳ ಎಲೆಕ್ಟ್ರಿಕಲ್ ಅಂಡ್ ಅಲೈಡ್ ಇಂಜಿನಿಯರಿಂಗ್ ಕಂಪನಿ ಲಿಮಿಟೆಡ್‌ಗೆ 4 ಜಿ ವಿನಾಯಿತಿ ಸಿಗುವ ಮೂರು ದಿನದ ಮೊದಲೇ ಇಂಧನ ಇಲಾಖೆಯು 36,000 ವಿದ್ಯುತ್ ಪರಿವರ್ತಕಗಳನ್ನು ಕರ್ನಾಟಕ ವಿದ್ಯುತ್ ಕಾರ್ಖಾನೆಯಿಂದ ಖರೀದಿಸಲು 4 ಜಿ ವಿನಾಯಿತಿ ನೀಡಬೇಕು ಎಂದು ಪ್ರಸ್ತಾವನೆ ( ಕಡತ ಸಂಖ್ಯೆ; ENERGY/253/EBS/2022, DATED 23/03/2026) ಸಲ್ಲಿಸಿದೆ.
ಅಲ್ಲದೇ ಎನ್‌ಜಿಎಫ್‌ನಿಂದಲೂ ವಿದ್ಯುತ್ ಪರಿವರ್ತಕಗಳನ್ನು ಖರೀದಿಸಲು 4 ಜಿ ವಿನಾಯಿತಿ ನೀಡಬೇಕು ಎಂದು ಇಂಧನ ಇಲಾಖೆಯು ಆರ್ಥಿಕ ಇಲಾಖೆಗೆ (ಕಡತ ಸಂಖ್ಯೆ; ENERGY/387/EEB/2025 DATEED 27.03.2026) ಪ್ರಸ್ತಾವ ಸಲ್ಲಿಸಿದೆ. ಆದರೆ ಆರ್ಥಿಕ ಇಲಾಖೆಯು ಎನ್‌ಜಿಎಫ್ ಗೆ 4 ಜಿ ವಿನಾಯಿತಿ ನೀಡಿಲ್ಲ ಎಂದು ಗೊತ್ತಾಗಿದೆ.
ಕರ್ನಾಟಕ ವಿದ್ಯುತ್ ಕಾರ್ಖಾನೆಗೆ 11, 721 ಸಂಖ್ಯೆಯ ವಿದ್ಯುತ್ ಪರಿವರ್ತಕಗಳನ್ನು ಪೂರೈಸಲು ಸಾಧ್ಯವಿಲ್ಲ ಎಂದು ಹೇಳಿ ಕೇರಳ ಎಲೆಕ್ಟ್ರಿಕಲ್ ಅಂಡ್ ಅಲೈಡ್ ಇಂಜಿನಿಯರಿಂಗ್ ಕಂಪನಿ ಲಿಮಿಟೆಡ್‌ಗೆ 4 ಜಿ ವಿನಾಯಿತಿ ಪಡೆದುಕೊಂಡಿರುವ ಇಂಧನ ಇಲಾಖೆಯು ಇದೀಗ ಕರ್ನಾಟಕ ವಿದ್ಯುತ್ ಕಾರ್ಖಾನೆಯಿಂದ 36,000 ಸಂಖ್ಯೆಯ ವಿದ್ಯುತ್ ಪರಿವರ್ತಕಗಳನ್ನು ಖರೀದಿಸಲು ಪ್ರಸ್ತಾವನೆ ಸಲ್ಲಿಸಿರುವುದೇಕೆ ಎಂಬ ಪ್ರಶ್ನೆಗಳೂ ಸಹ ಕೇಳಿ ಬಂದಿವೆ. ಇಂಧನ ಇಲಾಖೆಯ ಪ್ರಕಾರ 11,721 ಸಂಖ್ಯೆಯ ವಿದ್ಯುತ್ ಪರಿವರ್ತಕಗಳನ್ನು ಪೂರೈಸಲು ಕರ್ನಾಟಕ ವಿದ್ಯುತ್ ಕಾರ್ಖಾನೆಗೆ ಸಾಧ್ಯವಾಗಿಲ್ಲ. ಆದರೀಗ ಇದ್ದಕ್ಕಿದ್ದಂತೆ 36,000 ಸಂಖ್ಯೆಯ ಪರಿವರ್ತಕಗಳನ್ನು ಹೇಗೆ ತಾನೇ ಪೂರೈಸಬಲ್ಲದು ಎಂಬ ಪ್ರಶ್ನೆಯೂ ಕೇಳಿ ಬಂದಿದೆ.
ಕೇರಳ ಎಲೆಕ್ಟ್ರಿಕಲ್ ಅಂಡ್ ಅಲೈಡ್ ಇಂಜಿನಿಯರಿಂಗ್ ಕಂಪನಿ ಲಿಮಿಟೆಡ್‌ಗೆ 4 ಜಿ ವಿನಾಯಿತಿ ಮೂಲಕ 174.73 ಕೋಟಿ ರು ಆದಾಯ ತಂದುಕೊಟ್ಟ ನಂತರ ಈಗ ಕರ್ನಾಟಕ ವಿದ್ಯುತ್ ಕಾರ್ಖಾನೆಗೆ 4 ಜಿ ವಿನಾಯಿತಿಗೆ ಪ್ರಸ್ತಾವ ಸಲ್ಲಿಸಿರುವುದು ಹಲವು ಅನುಮಾನಗಳಿಗೆ ದಾರಿಮಾಡಿಕೊಟ್ಟಂತಾಗಿದೆ.
2024-25ನೇ ಸಾಲಿನಲ್ಲಿ ಎಸ್ಕಾಂಗಳಿಗೆ ಕೇರಳ ಎಲೆಕ್ಟ್ರಿಕಲ್ ಅಂಡ್ ಅಲೈಡ್ ಇಂಜಿನಿಯರಿಂಗ್ ಕಂಪನಿ ಲಿಮಿಟೆಡ್‌ನಿಂದ ವಿದ್ಯುತ್ ಪರಿವರ್ತಕಗಳನ್ನು ಖರೀದಿಸಿರಲಿಲ್ಲ. 2024-25ನೇ ಸಾಲಿನಲ್ಲಿ ಕವಿಕಾದಿಂದಲೇ 141.52 ಕೋಟಿ ರುಪಾಯಿ ವೆಚ್ಚದಲ್ಲಿ 9,535 ಸಂಖ್ಯೆಯ ಪರಿವರ್ತಕಗಳನ್ನು ಖರೀದಿಸಿದೆ ಎಂದು ಸಚಿವ ಕೆ ಜೆ ಜಾರ್ಜ್ ಅವರು ಉತ್ತರಿಸಿದ್ದರು.

ಅದೇ ರೀತಿ ಟೆಂಡರ್ ಮೂಲಕ 2024-25ನೇ ಸಾಲಿನಲ್ಲಿ ಎಸ್ಕಾಂಗಳಿಗೆ 16,284 ಸಂಖ್ಯೆಯ ಪರಿವರ್ತಕಗಳನ್ನು 190.36 ಕೋಟಿ ರು ವೆಚ್ಚದಲ್ಲಿ ವಿದ್ಯುತ್ ಪರಿವರ್ತಕಗಳನ್ನು ಖರೀದಿಸಿತ್ತು.

ಕೇರಳ ಸರ್ಕಾರಿ ಸ್ವಾಮ್ಯದ ಕೇರಳ ಎಲೆಕ್ಟ್ರಿಕಲ್ ಅಂಡ್ ಅಲೈಡ್ ಇಂಜಿನಿಯರಿಂಗ್ ಕಂಪನಿಯಿಂದ ವಿದ್ಯುತ್ ಪರಿವರ್ತಕಗಳನ್ನು ನೇರವಾಗಿ ಖರೀದಿಸಲು ಕೆಟಿಪಿಪಿ ಕಾಯ್ದೆಯಡಿಯಲ್ಲಿ ವಿನಾಯಿತಿ ನೀಡಲು ನಿರ್ದೇಶನ ನೀಡಬೇಕು ಎಂದು ಕರ್ನಾಟಕ ವಿಧಾನಸಭೆಯ ಮುಖ್ಯ ಸಚೇತಕ ಹಾಗೂ ಶಾಸಕ ಅಶೋಕ್ ಪಟ್ಟಣ್ ಅವರು ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದಿದ್ದರು. ಈ ಪತ್ರದ ಮೇಲೆಯೇ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರು ಆರ್ಥಿಕ ಇಲಾಖೆ ತುರ್ತು ಕ್ರಮ ಕೈಗೊಳ್ಳಬೇಕು ಎಂದು ಒಕ್ಕಣೆ ಹಾಕಿದ್ದರು.
ಕೇರಳ ಸರ್ಕಾರಿ ಸ್ವಾಮ್ಯದ ಕಂಪನಿಯಿಂದಲೇ ಪರಿವರ್ತಕ ಖರೀದಿಸಲು ಅಶೋಕ್ ಎಂ ಪಟ್ಟಣ್ ಪತ್ರ
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವು ಅಧಿಕಾರಕ್ಕೆ ಬಂದ ನಂತರ ಪ್ರತೀ ವರ್ಷವೂ ನೇರವಾಗಿ ಕೇರಳ ಎಲೆಕ್ಟ್ರಿಕಲ್ ಅಂಡ್ ಅಲೈಡ್ ಇಂಜಿನಿಯರಿಂಗ್ ಕಂಪನಿಯಿಂದಲೇ ಮೂರ್ನಾಲ್ಕು ಬಾರಿ ವಿದ್ಯುತ್ ಪರಿವರ್ತಕಗಳನ್ನು ನೇರವಾಗಿ ಖರೀದಿಸಿರುವ ಬೆನ್ನಲ್ಲೇ ಇದೀಗ ಅಶೋಕ್ ಪಟ್ಟಣ್ ಅವರೂ ಕೇರಳ ಎಲೆಕ್ಟ್ರಿಕಲ್ ಅಂಡ್ ಅಲೈಡ್ ಇಂಜಿನಿಯರಿಂಗ್ ಕಂಪನಿ ಪರವಾಗಿ ಪತ್ರ ಬರೆದಿರುವುದು ಚರ್ಚೆಗೆ ಗ್ರಾಸವಾಗಿತ್ತು.
ಸಿದ್ದಾರ್ಥ ಹೊಸಮನಿ ಎಂಬುವರು ಅಶೋಕ್ ಎಂ ಪಟ್ಟಣ್ ಅವರಿಗೆ ವಿಳಾಸಿಸಿ ಬರೆದಿದ್ದ ಪತ್ರವನ್ನಾಧರಿಸಿ ಅಶೋಕ್ ಪಟ್ಟಣ್ ಅವರು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದರು. ಈ ಸಿದ್ದಾರ್ಥ ಹೊಸಮನಿ ಎಂಬುವರು ಯಾರು, ಎಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂಬ ಯಾವ ಮಾಹಿತಿಯೂ ಸದ್ಯಕ್ಕೆ ಲಭ್ಯವಿಲ್ಲ.
ಅಶೋಕ್ ಪಟ್ಟಣ್ ಅವರ ಪತ್ರದಲ್ಲೇನಿತ್ತು?
ಸರ್ಕಾರಿ ಸ್ವಾಮ್ಯದ ವಿದ್ಯುತ್ ಪರಿವರ್ತಕ ತಯಾರಿಕ ಸಂಸ್ಥೆಯಾದ ಕೆ ಇ ಎಲ್ ಸಂಸ್ಥೆಯು ಸರ್ಕಾರದ ಅಂಗ ಸಂಸ್ಥೆಯಾಗಿದದು, ಅತ್ಯುತ್ತಮ ಗುಣಮಟ್ಟದ ಪರಿವರ್ತಕಗಳನ್ನು ಪೂರೈಸುತ್ತಾ ಬಂದಿರುತ್ತದೆ. ಅವರು ತಯಾರಿಸುವ ಪರಿವರ್ತಕಗಳ ಕುರಿತು ಈಗಾಗಲೇ ಬೆಸ್ಕಾಂ, ಹೆಸ್ಕಾಂ ಮತ್ತು ಮೆಸ್ಕಾಂ ವಿದ್ಯುತ್ ಸರಬರಾಜು ಕಂಪನಿಯ ಮನವಿಯ ಮೇರೆಗೆ ಇಂಧನ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಯವರಿಂದ ಹಣಕಾಸು ಇಲಾಖೆಗೆ ಶಿಫಾರಸ್ಸು (ಕಡತ ಸಂಖ್ಯೆ; ಎನರ್ಜಿ 800 ಇಇಬಿ 2025 ಕಂಪ್ಯೂಟರ್ ನಂಬರ್ 1949793) ಮಾಡಲಾಗಿದೆ ಎಂದು ಗಮನಸೆಳೆದಿದ್ದರು.
ಈ ಕಡತವು ಹಣಕಾಸು ಇಲಾಖೆಯಲ್ಲಿರುತ್ತದೆ. ಖಾಸಗಿ ಕಂಪನಿಗಳು ತಯಾರಿಸಿದ ಪರಿವರ್ತಕಗಳ ಬಗ್ಗೆ ಹಲವಾರು ತಕರಾರುಗಳು ಬಂದಿರುತ್ತವೆ. ಆದರೆ ಕೆ ಇ ಎಲ್ ಸಂಸ್ಥೆಯಿಂದ ತಯಾರಿಸಿ ಪೂರೈಸಿರುವ ಪರಿವರ್ತಕಗಳಲ್ಲಿ ಯಾವುದೇ ತಕರಾರು ಬಂದಿರುವುದಿಲ್ಲ. ಕಳೆದ ವರ್ಷವೂ ಸದರಿ ಕಂಪನಿಯಿಂದ ನೇರವಾಗಿ ವಿದ್ಯುತ್ ಪರಿವರ್ತಕಗಳನ್ನು ಖರೀದಿಸಲು ಕೆಟಿಪಿಪಿ ಕಾಯ್ದೆಯಡಿಯಲ್ಲಿ ಪರವಾನಗಿ ನೀಡಿರುತ್ತದೆ. ಇದೇ ಮಾದರಿಯಲ್ಲಿ ಈ ವರ್ಷವೂ ಸಹ ಪರಿವರ್ತಕಗಳನ್ನು ತಯಾರಿಸಲು ಸರ್ಕಾರದಿಂದ ವಿನಾಯಿತಿ ನೀಡಲು ಹಣಕಾಸು ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಸೂಕ್ತ ನಿರ್ದೇಶನ ನೀಡಬೇಕು ಎಂದು ಅಶೋಕ್ ಪಟ್ಟಣ್ ಅವರು ಮುಖ್ಯ ಕಾರ್ಯದರ್ಶಿಗಳನ್ನು ಕೋರಿದ್ದರು.

ಇದೇ ಕೇರಳ ಸರ್ಕಾರಿ ಸ್ವಾಮ್ಯದ ಕಂಪನಿಯಿಂದ ವಿದ್ಯುತ್ ಪರಿವರ್ತಕಗಳನ್ನು ಖರೀದಿಸಲು ವಿನಾಯಿತಿ ನೀಡಬೇಕು ಎಂದು ಸಿದ್ಧಾರ್ಥ ಹೊಸಮನಿ ಎಂಬುವರು ಅಶೋಕ್ ಎಂ ಪಟ್ಟಣ್ ಅವರಿಗೆ ಪತ್ರ ಬರೆದಿದ್ದರು.

ಈ ಪತ್ರದಲ್ಲಿದ್ದ ಅಂಶಗಳನ್ನೇ ಅಶೋಕ್ ಎಂ ಪಟ್ಟಣ್ ಅವರು ಯಥಾವತ್ತಾಗಿ ಬಳಸಿಕೊಂಡಿರುವುದು ಪತ್ರದಿಂದ ಗೊತ್ತಾಗಿದೆ. ವಿಶೇಷವೆಂದರೇ ಸಿದ್ಧಾರ್ಥ ಹೊಸಮನಿ ಎಂಬುವರು 2025ರ ಡಿಸೆಂಬರ್ 11ರಂದು ಕೋರಿಕೆ ಸಲ್ಲಿಸಿದ್ದ ದಿನದಂದೇ ಅಶೋಕ್ ಪಟ್ಟಣ್ ಅವರು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿತ್ತು.
ಕರ್ನಾಟಕ ಸರ್ಕಾರದ ಸ್ವಾಮ್ಯದಲ್ಲಿರುವ ಕರ್ನಾಟಕ ವಿದ್ಯುತ್ ಕಾರ್ಖಾನೆಯು ವಿದ್ಯುತ್ ಸರಬರಾಜು ಕಂಪನಿಗಳಿಗೆ ವಿದ್ಯುತ್ ಪರಿವರ್ತಕಗಳನ್ನು ದಶಕಗಳಿಂದಲೂ ಪೂರೈಸುತ್ತ ಬಂದಿದೆ. ಹಿಂದಿನ ಬಿಜೆಪಿ ಸರ್ಕಾರದಲ್ಲಿಯೂ ಕವಿಕಾಕ್ಕೆ 4 ಜಿ ವಿನಾಯಿತಿ ನೀಡಿತ್ತು. ಆದರೆ ಕಾಂಗ್ರೆಸ್ ಸರ್ಕಾರವು ಅಧಿಕಾರಕ್ಕೆ ಬಂದ ನಂತರ ಪ್ರತೀ ವರ್ಷವೂ ಕೇರಳ ಸರ್ಕಾರಿ ಸ್ವಾಮ್ಯದ ಕಂಪನಿಯಿಂದಲೇ ನೇರವಾಗಿ ಪರಿವರ್ತಕಗಳನ್ನು ಖರೀದಿಸಲು 4 ಜಿ ವಿನಾಯಿತಿ ನೀಡಿತ್ತು.
ಹುಬ್ಬಳ್ಳಿಯಲ್ಲಿರುವ ಎನ್‌ಜಿಎಫ್, ಬೆಂಗಳೂರಿನಲ್ಲಿರುವ ಕರ್ನಾಟಕ ವಿದ್ಯುತ್ ಕಾರ್ಖಾನೆಯನ್ನು ಬದಿಗೊತ್ತಿ ಕೇರಳ ಎಲೆಕ್ಟ್ರಿಕಲ್ ಅಂಡ್ ಅಲೈಡ್ ಇಂಜಿನಿಯರಿಂಗ್ ಕಂಪನಿಯಿಂದಲೇ ವಿದ್ಯುತ್ ಪರಿವರ್ತಕಗಳನ್ನು ಖರೀದಿಸುತ್ತಿರುವ ಇಂಧನ ಇಲಾಖೆಯು ಇದಕ್ಕೆ ಯಾವುದೇ ಸಮರ್ಥನೆಗಳನ್ನೂ ಒದಗಿಸಿರಲಿಲ್ಲ.
ಕವಿಕಾ,ಎನ್‌ಜಿಇಎಫ್‌ಗೆ ಚೊಂಬು; ಕೇರಳದಿಂದ ಪ್ರತೀ ವರ್ಷವೂ ಬಹುಕೋಟಿ ವೆಚ್ಚದಲ್ಲಿ ಟ್ರಾನ್ಸ್‌ಫಾರ್ಮ್‌ರ್ ಖರೀದಿ
2019-20ನೇ ಸಾಲಿನಲ್ಲಿ ಅಗತ್ಯವಿದ್ದ ವಿವಿಧ ಸಾಮರ್ಥ್ಯದ ವಿದ್ಯುತ್ ವಿತರಣಾ ಪರಿವರ್ತಕಗಳನ್ನು 78.45 ಕೋಟಿ ರು ವೆಚ್ಚದಲ್ಲಿ ಕೇರಳ ಎಲೆಕ್ಟ್ರಿಕಲ್ ಅಲೈಡ್ ಇಂಜಿನಿಯರಿಂಗ್ ಕಂಪನಿಯಿಂದ ನೇರವಾಗಿ ಖರೀದಿಸಲು 2019ರ ಮೇ 13ರಲ್ಲೇ 4 ಜಿ ವಿನಾಯಿತಿ ನೀಡಿತ್ತು.
ಅದೇ ರೀತಿ ರಾಜ್ಯದ ಎಲ್ಲಾ ವಿದ್ಯುತ್ ಸರಬರಾಜು ಸಂಸ್ಥೆಗಳು 2023-24ನೇ ಸಾಲಿಗಾಗಿ 4,500 ಪರಿವರ್ತಕಗಳನ್ನು 69.76 ಕೋಟಿ ರು ವೆಚ್ಚದಲ್ಲಿ ಕೇರಳ ಎಲೆಕ್ಟ್ರಿಕಲ್ ಅಲೈಡ್ ಇಂಜಿನಿಯರಿಂಗ್ ಕಂಪನಿಯಿಂದ ನೇರವಾಗಿ ಖರೀದಿಸಲು 2024ರ ಮಾರ್ಚ್ 16ರಂದು 4 ಜಿ ವಿನಾಯಿತಿ ನೀಡಿತ್ತು.
ಗುಲ್ಬರ್ಗ ವಿದ್ಯುತ್ ಸರಬರಾಜು ಕಂಪನಿ ವ್ಯಾಪ್ತಿಯಲ್ಲಿ 2025-26ನೇ ಸಾಲಿನಲ್ಲಿ ಅವಶ್ಯಕವಿರುವ 2,000 ವಿದ್ಯುತ್ ಪರಿವರ್ತಕಗಳನ್ನು 32.16 ಕೋಟಿ ರು ವೆಚ್ಚದಲ್ಲಿ ಕೇರಳ ಎಲೆಕ್ಟ್ರಿಕಲ್ ಅಲೈಡ್ ಇಂಜಿನಿಯರಿಂಗ್ ಕಂಪನಿಯಿಂದ ನೇರವಾಗಿ ಖರೀದಿಸಲು 2025ರ ಸೆಪ್ಟಂಬರ್ 2ರಂದು 4 ಜಿ ವಿನಾಯಿತಿ ನೀಡಿತ್ತು.
ಕೇರಳ ಸರ್ಕಾರಿ ಕಂಪನಿಗೆ 180.37 ಕೋಟಿ
2019ರಿಂದ 2025ರ ಸೆಪ್ಟಂಬರ್‍ವರೆಗೆ ಒಟ್ಟಾರೆ 180.37 ಕೋಟಿ ರು ವೆಚ್ಚದಲ್ಲಿ 6,500ಕ್ಕೂ ಹೆಚ್ಚು ಪರಿವರ್ತಕಗಳನ್ನು ಕೇರಳ ಎಲೆಕ್ಟ್ರಿಕಲ್ ಅಲೈಡ್ ಇಂಜಿನಿಯರಿಂಗ್ ಕಂಪನಿಯಿಂದಲೇ ನೇರವಾಗಿ ಖರೀದಿಸಿದೆ. ಆರ್ಥಿಕ ಇಲಾಖೆಯು, 2025-26ನೇ ಸಾಲಿನಲ್ಲಿ 174 ಕೋಟಿ ರು ಮೊತ್ತದದಲ್ಲಿ ಕೇರಳ ಎಲೆಕ್ಟ್ರಿಕಲ್ ಅಂಡ್ ಅಲೈಡ್ ಇಂಜಿನಿಯರಿಂಗ್ ಕಂಪನಿಯಿಂದಲೇ ವಿದ್ಯುತ್ ಪರಿವರ್ತಕಗಳನ್ನು ಖರೀದಿಸಲು 4 ಜಿ ವಿನಾಯಿತಿ ನೀಡಲು ತಕರಾರು ಎತ್ತಿದೆ.
ಈ ಹಿಂದಿನ ಮೂರು ವರ್ಷಗಳಲ್ಲಿ ಕೆಇಎಲ್‌ಗೆ 4 ಜಿ ವಿನಾಯಿತಿ ನೀಡಿದ್ದ ಆರ್ಥಿಕ ಇಲಾಖೆಯು 2025-26ರಲ್ಲಿ ಕೆಇಎಲ್‌ಗೆ 4 ಜಿ ವಿನಾಯಿತಿ ನೀಡಲು ಆಕ್ಷೇಪ ಎತ್ತಿರುವುದು ಅದರ ದ್ವಿಮುಖ ನೀತಿಗೆ ಕೈಗನ್ನಡಿ ಹಿಡಿದಂತಾಗಿತ್ತು.
ಕೇರಳ ಸರ್ಕಾರಿ ಕಂಪನಿಯಿಂದ ಟ್ರಾನ್ಸ್‌ಫಾರ್ಮ್‌ರ್‍ಗಳ ಖರೀದಿ; 174.73 ಕೋಟಿ ರು ಮೊತ್ತಕ್ಕೆ 4 (ಜಿ) ಪ್ರಸ್ತಾವ
2025-26ನೇ ಸಾಲಿನಲ್ಲಿ ಎಸ್ಕಾಂಗಳಿಗೆ ವಿದ್ಯುತ್ ಪರಿವರ್ತಕಗಳನ್ನು ನೇರವಾಗಿ ಕೇರಳ ಕೇರಳ ಎಲೆಕ್ಟ್ರಿಕಲ್ ಅಂಡ್ ಅಲೈಡ್ ಇಂಜನಿಯರಿಂಗ್ ಲಿಮಿಟೆಡ್‌ನಿಂದಲೇ ಖರೀದಿಸಲು ಗೆ 4 ಜಿ ವಿನಾಯಿತಿ ಕೋರಿರುವುದನ್ನು ಸ್ಮರಿಸಬಹುದು. ಈ ಕುರಿತು ದಿ ಫೈಲ್ 2026ರ ಜನವರಿ 8ರಂದು ವರದಿ ಪ್ರಕಟಿಸಿತ್ತು.




