ಬೆಂಗಳೂರು; ಕಲ್ಬುರ್ಗಿಯ ವಾಡಿಯಲ್ಲಿ ಅದಾನಿ ಸಮೂಹದ ಎಸಿಸಿ ಸಿಮೆಂಟ್ಸ್ ಪ್ರೈವೈಟ್ ಲಿಮಿಟೆಡ್ ಅಕ್ರಮವಾಗಿ ಗಣಿಗಾರಿಕೆ ನಡೆಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಗಣಿ ಭೂ ವಿಜ್ಞಾನ ಇಲಾಖೆ ನಿರ್ದೇಶಕರು ಸೇರಿದಂತೆ ಅಕ್ರಮ ಗಣಿಗಾರಿಕೆ ತಡೆಗಟ್ಟಲು ವಿಫಲರಾದ ಅಧಿಕಾರಿಗಳ ವಿರುದ್ಧ ಪ್ರಕರಣದ ತನಿಖೆಯನ್ನು ಲೋಕಾಯುಕ್ತ ತನಿಖೆಗೆ ವಹಿಸಬೇಕು ಎಂದು ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ (ಗಣಿ)ಯು ಶಿಫಾರಸ್ಸು ಮಾಡಿದೆ. ಆದರೆ ಈ ಶಿಫಾರಸ್ಸಿನ ಕಡತವು ಗಣಿ ಸಚಿವ ಎಸ್ ಎಸ್ ಮಲ್ಲಿಕಾರ್ಜುನ ಅವರ ಕಚೇರಿಯಲ್ಲಿ ಧೂಳಿಡಿದು ಕೂತಿದೆ.
ಕಲ್ಬುರ್ಗಿಯ ವಾಡಿಯಲ್ಲಿ ಅಕ್ರಮ ಗಣಿಗಾರಿಕೆ ನಡೆಸಿರುವ ಅದಾನಿ ಸಮೂಹದ ಎಸಿಸಿ ಸಿಮೆಂಟ್ಸ್ ಪ್ರೈವೈಟ್ ಲಿಮಿಟೆಡ್‌ನಿಂದ ದಂಡ ಮತ್ತು ರಾಯಧನ ಸೇರಿ ಒಟ್ಟಾರೆ 850 ಕೋಟಿಗೂ ಅಧಿಕ ಮೊತ್ತವನ್ನು ವಸೂಲು ಮಾಡಬೇಕು. ಈ ಸಂಬಂಧ ಎಂಎಂಡಿಆರ್ ಕಾಯ್ದೆಯ ಸೆಕ್ಷನ್ 221(1) ಮತ್ತು 21(2) ಅಡಿಯಲ್ಲಿ ಕ್ರಿಮಿನಲ್ ಪ್ರಕರಣಗಳನ್ನು ದಾಖಲಿಸಬೇಕು ಎಂದು ಕಾನೂನು ಸಚಿವ ಎಚ್ ಕೆ ಪಾಟೀಲ್ ಅವರು ಶಿಫಾರಸ್ಸು ಮಾಡಿದ್ದರು.
ಈ ಶಿಫಾರಸ್ಸನ್ನು ಪರಿಶೀಲಿಸಿದ್ದ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ (ಗಣಿಶಾಖೆಯು) ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ನಿರ್ದೇಶಕರು ಸೇರಿದಂತೆ ಇದಕ್ಕೆ ಹೊಣೆಗಾರರಾದ ಅಧಿಕಾರಿ, ನೌಕರರ ವಿರುದ್ಧ ಇಲಾಖೆ ತನಿಖೆ ಅಥವಾ ಲೋಕಾಯುಕ್ತ ತನಿಖೆ ನಡೆಸುವುದು ಸೂಕ್ತ ಎಂದು ಅಭಿಪ್ರಾಯಿಸಿತ್ತು. ಈ ಅಭಿಪ್ರಾಯವಿದ್ದ ಕಡತವನ್ನು ಇಲಾಖೆಯು, ಗಣಿ ಸಚಿವ ಎಸ್ ಎಸ್ ಮಲ್ಲಿಕಾರ್ಜುನ್ ಅವರ ಅನುಮೋದನೆಗೆ ಕಳಿಸಿತ್ತು. ಆದರೆ ಇದುವರೆಗೂ ಸಚಿವ ಎಸ್ ಎಸ್ ಮಲ್ಲಿಕಾರ್ಜುನ್ ಅವರು ಈ ಶಿಫಾರಸ್ಸಿಗೆ ಅನುಮೋದನೆ ನೀಡಿಲ್ಲ ಎಂದು ತಿಳಿದು ಬಂದಿದೆ.
ಇದಕ್ಕೆ ಸಂಬಂಧಿಸಿದಂತೆ ಕಡತದ ಟಿಪ್ಪಣಿ ಹಾಳೆಗಳು ‘ದಿ ಫೈಲ್’ಗೆ ಲಭ್ಯವಾಗಿವೆ.
‘ಕಾನೂನು ಇಲಾಖೆಯ ಅಭಿಪ್ರಾಯದ ಪ್ರಕಾರ ಆಡಳಿತಾತ್ಮಕ ಇಲಾಖೆಗೆ ತಕ್ಷಣ ಕ್ರಮ ಕೈಗೊಳ್ಳುವಂತೆ ನಿರ್ದೇಶಿಸಬಹುದು. ಜೊತೆಗೆ ಇಲಾಖಾ ತನಿಖೆ ಆರಂಭಿಸುವುದು ಅಥವಾ ಪ್ರಕರಣವನ್ನು ಲೋಕಾಯುಕ್ತಕ್ಕೆ ತನಿಖೆಗೆ ಒಪ್ಪಿಸಲು ಪರಿಗಣಿಸಬಹುದು,’ ಎಂದು ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯು ಟಿಪ್ಪಣಿ ಹಾಳೆಯಲ್ಲಿ ವಿವರಿಸಿದೆ ಎಂದು ತಿಳಿದು ಬಂದಿದೆ.
ಅಲ್ಲದೇ 2023ರ ಫೆ.18ರಿಂದ 2024ರ ಆಗಸ್ಟ್ 18ರವರೆಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಲ್ಲಿ ಕಾರ್ಯನಿರ್ವಹಿಸಿದ ನಿರ್ದೇಶಕರು, ಉಪ ನಿರ್ದೇಶಕರು, ಹಿರಿಯ ಭೂವಿಜ್ಞಾನಿಗಳು ಹಾಗೂ ಅಕ್ರಮ ಗಣಿಗಾರಿಕೆಯನ್ನು ತಡೆಗಟ್ಟಲು ವಿಫಲವಾಗಿರುವ ಮತ್ತು ನಡೆದಿರುವ ಗಂಭೀರ ಲೋಪಗಳ ಕುರಿತು ತನಿಖೆ ನಡೆಸಬೇಕು. ಹಾಗೆಯೇ ಕಾನೂನುಬದ್ಧ ಕರ್ತವ್ಯಗಳನ್ನು ನಿರ್ವಹಿಸದಿದ್ದಕ್ಕಾಗಿ ಅವರನ್ನು ಹೊಣೆಗಾರರನ್ನಾಗಿ ಮಾಡಬೇಕು. ಮತ್ತು ರಾಜ್ಯ ಖಜಾನೆಗೆ ಉಂಟಾಗಿರುವ ಭಾರೀ ನಷ್ಟ / ಹಾನಿಗೆ ಉತ್ತರದಾಯಕರನ್ನಾಗಿ ಮಾಡಬಹುದು ಎಂದು ಇಲಾಖೆಯು ಕಡತದ ಟಿಪ್ಪಣಿ ಹಾಳೆಯಲ್ಲಿ ವಿವರಿಸಿದೆ ಎಂದು ಗೊತ್ತಾಗಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ರಾಜ್ಯ ಅಡ್ವೋಕೇಟ್ ಜನರಲ್ ಮತ್ತು ಕಾನೂನು ಇಲಾಖೆಯು ಅಭಿಪ್ರಾಯ ನೀಡಿದೆ. ಈ ಪ್ರಕರಣದಲ್ಲಿ ಹಣಕಾಸು ಸಂಬಂಧಿತ ವಿಷಯಗಳ ಕುರಿತು ಅಭಿಪ್ರಾಯ ನೀಡಲು ಕಡತವನ್ನು ಹಣಕಾಸು ಇಲಾಖೆಗೆ ಕಳಿಸಬೇಕು ಎಂದು ಹೇಳಿತ್ತು. ಆದರೆ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ (ಗಣಿ) ಯು ಹಣಕಾಸು ಇಲಾಖೆಗೆ ಇದುವರೆಗೂ ಕಳಿಸಿಲ್ಲ ಎಂದು ತಿಳಿದು ಬಂದಿದೆ.
ಕಾನೂನು ಇಲಾಖೆಯ ಅಭಿಪ್ರಾಯದ ಪ್ರಕಾರ ಕಾನೂನುಬದ್ಧ ಬಾಕಿಗಳು ಒಟ್ಟು 850.21 ಕೋಟಿ ರು ಇದೆ. ಇದರಲ್ಲಿ ರಾಯಲ್ಟಿ / ಬಡ್ಡಿ 492.51 ಕೋಟಿಯಷ್ಟು ಇದೆ. ಕಂಪನಿಯು ಈಗಾಗಲೇ 125 ಕೋಟಿ ಪಾವತಿಸಿದೆ. ಇನ್ನೂ ₹367.51 ಕೋಟಿ ಬಾಕಿ ಉಳಿಸಿಕೊಂಡಿದೆ.
ಎಂಎಂಡಿಆರ್ ಕಾಯ್ದೆ 1957 ರ ಸೆಕ್ಷನ್ 21(5) ಅಡಿಯಲ್ಲಿ, ಲೀಸ್ ಅವಧಿ ಮುಗಿದ ನಂತರ 2023ರ ಫೆ.18ರಿಂದ 2024ರ ಆಗಸ್ಟ್ 18ರವರೆಗೆ ಗುತ್ತಿಗೆಯ ಮಾನ್ಯತೆ ಇಲ್ಲದೆ ನಡೆಸಿದ ಅಕ್ರಮ ಗಣಿಗಾರಿಕೆ ನಡೆಸಿರುವ ಕಾರಣಕ್ಕೆ 482.59 ಕೋಟಿ ದಂಡ ವಿಧಿಸಲಾಗಿದೆ. ಟೆಂಡರ್ ದಾಖಲೆಗಳ ವಿಧಿ 10 ಉಲ್ಲಂಘಿಸಿ ದೊಡ್ಡ ಪ್ರಮಾಣದ ಕಾನೂನುಬದ್ಧ ಬಾಕಿಗಳನ್ನು ಪಾವತಿಸದಿರುವುದರಿಂದ ಯೋಜನೆ ಪ್ರಸ್ತಾಪಕರನ್ನು ಡೀಫಾಲ್ಟರ್ ಎಂದು ಪರಿಗಣಿಸಲಾಗಿದೆ. ಕಾನೂನು ಸ್ಥಿತಿ ಮತ್ತು ನ್ಯಾಯಾಲಯದಲ್ಲಿ ಬಾಕಿ ಇರುವ ಪ್ರಕರಣಗಳ ಕುರಿತು ಚರ್ಚಿಸಲಾಗಿದೆ ಎಂದು ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯು ಟಿಪ್ಪಣಿ ಹಾಳೆಯಲ್ಲಿ ವಿವರಿಸಿದೆ.
ರಾಯಲ್ಟಿ ಪಾವತಿಗೆ ಸಂಬಂಧಿಸಿದಂತೆ ರಿಟ್ ಅರ್ಜಿ 25298/2024, 36850/2025, ರಿವಿಷನಲ್ ಆದೇಶವನ್ನು ಪ್ರಶ್ನಿಸಿರುವ ಮತ್ತು ದಂಡಕ್ಕೆ ಸಂಬಂಧಿಸಿದಂತೆ ರಿಟ್ ಅರ್ಜಿ (W.P. No. 18655/2025) ಈ ಎಲ್ಲಾ ಪ್ರಕರಣಗಳು ಕರ್ನಾಟಕ ಹೈಕೋರ್ಟ್ ಮುಂದೆ ಬಾಕಿಯಿವೆ. ಎಸಿಸಿ ಲಿಮಿಟೆಡ್, ಗಣಿಗಾರಿಕೆ ಕಂಪನಿಯು ಎಂಎಂಡಿಆರ್ ಕಾಯ್ದೆ 1957 ಅಡಿಯಲ್ಲಿ ಪಾವತಿಸಬೇಕಾದ ಕಾನೂನುಬದ್ಧ ಬಾಕಿಗಳನ್ನು ಪಾವತಿಸದಿರುವ ಬಗ್ಗೆಯೂ ಉಲ್ಲೇಖಿಸಲಾಗಿದೆ. ಎಂಎಂಡಿಆರ್ ಕಾಯ್ದೆ ಸೆಕ್ಷನ್ 9 ಪ್ರಕಾರ, ಖನಿಜಗಳನ್ನು ತೆಗೆದುಕೊಳ್ಳುವಾಗ ಅಥವಾ ಉಪಯೋಗಿಸುವಾಗ ಕಡ್ಡಾಯವಾಗಿದೆ ರಾಯಲ್ಟಿ ಪಾವತಿಸಬೇಕು.
ಇದು ಕಾನೂನುಬದ್ಧ ತೆರಿಗೆ ಆಗಿದ್ದು ಮಾತುಕತೆಯಿಂದ ಬದಲಾಯಿಸಲಾಗುವುದಿಲ್ಲ. ರಾಯಲ್ಟಿ ಪಾವತಿಸದಿದ್ದರೆ ಕಾನೂನುಬದ್ಧ ಬಡ್ಡಿ ಹಾಗೂ ದಂಡ ವಿಧಿಸಲಾಗುತ್ತದೆ ಮತ್ತು ಅವುಗಳನ್ನು ಭೂಮಿ ಹಣ ಬಾಕಿಗಳಂತೆ ವಸೂಲಿ ಮಾಡಬಹುದು ಎಂದೂ ಟಿಪ್ಪಣಿಯಲ್ಲಿ ವಿವರಿಸಿದೆ.
ಎಂಎಂಡಿಆರ್ ಕಾಯ್ದೆ ಸೆಕ್ಷನ್ 21 (5) ಪ್ರಕಾರ, ರಾಜ್ಯ ಸರ್ಕಾರಕ್ಕೆ ಅಕ್ರಮವಾಗಿ ತೆಗೆಯಲಾದ ಖನಿಜಗಳ ಮೌಲ್ಯದ 100% ವಸೂಲಿ ಮಾಡುವ ಅಧಿಕಾರ ಇದೆ. ಇದು ರಾಯಲ್ಟಿ, ಬಾಡಿಗೆ ಹಾಗೂ ದಂಡದಿಂದ ಪ್ರತ್ಯೇಕವಾಗಿದ್ದು, ಕ್ರಿಮಿನಲ್ ಪ್ರಕರಣಗಳಿಂದ Common Cause vs Union of India, (2017) 9 SCC 499) ಸ್ವತಂತ್ರವಾಗಿದೆ ಎಂದು ಹೇಳಿರುವುದು ಗೊತ್ತಾಗಿದೆ.
‘ಅಪರಾಧಗಳನ್ನು ಮನ್ನಿಸುವುದು ಅಥವಾ ದಂಡ ಪಾವತಿಸುವುದರಿಂದ ಕ್ರಿಮಿನಲ್ ಕ್ರಮವನ್ನು ತಡೆಯಲು ಸಾಧ್ಯವಿಲ್ಲ. ಆಡಳಿತಾತ್ಮಕ ದಂಡ ಮತ್ತು ಕ್ರಿಮಿನಲ್ ಕ್ರಮಗಳು ವಿಭಿನ್ನ ಕಾನೂನು ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತವೆ. (Citation: Jayant vs State of Madhya Pradesh (2020) 18 SCC 401) ಪುನರಾವರ್ತಿತ ಉಲ್ಲಂಘನೆಗಳ ಹಿನ್ನೆಲೆಯಲ್ಲಿ ಹಣದ ದಂಡ ಸೇರಿದಂತೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕಾಗಿದೆ,’ ಇಲಾಖೆಯು ಶಿಫಾರಸ್ಸು ಮಾಡಿರುವುದು ತಿಳಿದು ಬಂದಿದೆ.
ಆಡಳಿತಾತ್ಮಕ ಇಲಾಖೆಯು ತಕ್ಷಣವೇ ಅಕ್ರಮವಾಗಿ ತೆಗೆಯಲಾದ ಖನಿಜಗಳ ಮೌಲ್ಯದ 100% ವಸೂಲಿ ಮಾಡುವಂತೆ ಬೇಡಿಕೆ ಎತ್ತಿ ಜಾರಿಗೊಳಿಸಬೇಕು, ಹಾಗೂ ಕಾನೂನು ಪ್ರಕಾರ ರಾಯಲ್ಟಿ, ಬಡ್ಡಿ ಮತ್ತು ದಂಡ ವಸೂಲಿ ಮಾಡಬೇಕು. ಜೊತೆಗೆ ಎಂಎಂಡಿಆರ್ ಕಾಯ್ದೆ ಸೆಕ್ಷನ್ 221(1) ಮತ್ತು 21(2) ಅಡಿಯಲ್ಲಿ ಅಕ್ರಮ ಗಣಿಗಾರಿಕೆಗೆ ಕ್ರಿಮಿನಲ್ ಪ್ರಕರಣಗಳನ್ನು ದಾಖಲಿಸಬೇಕು ಎಂದು ಹೇಳಿದೆ.
‘ ಈ ಮೇಲಿನ ವಿಚಾರಗಳನ್ನು ಪರಿಗಣಿಸಿದಾಗ, ಡೀಫಾಲ್ಟರ್ ಕಂಪನಿಯು ಅಕ್ರಮ ಗಣಿಗಾರಿಕೆ ಮತ್ತು ಇತರೆ ಕಾನೂನುಬದ್ಧ ಬಾಕಿಗಳ ಹಿನ್ನೆಲೆಯಲ್ಲಿ ರಾಜ್ಯ ಖಜಾನೆಗೆ ರಾಯಲ್ಟಿ / ಬಡ್ಡಿ / ದಂಡ ರೂಪದಲ್ಲಿ ದೊಡ್ಡ ಮೊತ್ತವನ್ನು ಪಾವತಿಸಬೇಕಾಗಿದೆ. ಕಾನೂನು ವಿಧಿಗಳ ಪುನರಾವರ್ತಿತ ಉಲ್ಲಂಘನೆಗಳನ್ನು ಗಂಭೀರವಾಗಿ ಪರಿಗಣಿಸಬೇಕಾಗಿದೆ,’ ಎಂದು ವಿವರಿಸಿದೆ.
ರಾಜ್ಯದ ಹಣಕಾಸು ಹಿತಾಸಕ್ತಿಯನ್ನು ಕಾಪಾಡುವ ದೃಷ್ಟಿಯಿಂದ, ವರ್ಷಗಳಿಂದ ಆದಾಯ ಸಂಗ್ರಹಣೆಯಲ್ಲಿ ಉಂಟಾದ ಗಂಭೀರ ಲೋಪಗಳನ್ನು ಗಮನಿಸಬೇಕು. ಹಾಗೂ ಆಡಳಿತಾತ್ಮಕ ಇಲಾಖೆಯ ಈ ಗಂಭೀರ ತಪ್ಪುಗಳನ್ನು ಗಂಭೀರವಾಗಿ ಪರಿಗಣಿಸಿ, ಕಾನೂನುಬದ್ಧ ಬಾಕಿಗಳನ್ನು ವಸೂಲಿ ಮಾಡಲು ಅತ್ಯಂತ ಆದ್ಯತೆಯೊಂದಿಗೆ ಕ್ರಮ ಕೈಗೊಳ್ಳಬೇಕು ಎಂದು ವಿವರಿಸಿರುವುದು ತಿಳಿದು ಬಂದಿದೆ.
850.21 ಕೋಟಿಯಷ್ಟು ಬಾಕಿ ಉಳಿಸಿಕೊಂಡಿದ್ದರೂ ಅದಾನಿ ಸಮೂಹದ ಎಸಿಸಿ ಸಿಮೆಂಟ್ಸ್ ಪ್ರೈವೈಟ್ ಲಿಮಿಟೆಡ್‌ಗೆ ಲೆಟರ್ ಆಫ್ ಇಂಟೆಂಟ್‌ನ್ನು ವಿಸ್ತರಿಸಲು ನೇರವಾಗಿ ಕೇಂದ್ರ ಸರ್ಕಾರದ ಮಾರ್ಗದರ್ಶನ ಕೋರಿ ಮುಜುಗರಕ್ಕೀಡಾಗಿದ್ದ ಬೆಳವಣಿಗೆ ನಡುವೆಯೇ ಇದೀಗ ರಾಜ್ಯ ಸರ್ಕಾರವು ಗಣಿ ವಿಭಾಗದದಿಂದ ಕಾರ್ಯದರ್ಶಿ ರೋಹಿಣಿ ಸಿಂಧೂರಿ ಅವರನ್ನು ಎತ್ತಂಗಡಿ ಮಾಡಿತ್ತು.
ಅದಾನಿ ಎಸಿಸಿಗೆ ಲೆಟರ್ ಆಫ್ ಇಂಟೆಂಟ್; ದಿ ಫೈಲ್ ವರದಿ ಬೆನ್ನಲ್ಲೇ ಗಣಿ ವಿಭಾಗದಿಂದ ರೋಹಿಣಿ ಸಿಂಧೂರಿ ಎತ್ತಂಗಡಿ
ಈ ವರದಿಗಳ ಬೆನ್ನಲ್ಲೇ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯು ಕಡೆಗೂ ಕ್ರಮಕ್ಕೆ ಮುಂದಾಗಿದೆ. ರಾಜ್ಯ ಸರ್ಕಾರದ ಬೊಕ್ಕಸಕ್ಕೆ ರಾಜಧನ, ದಂಡ, ಬಡ್ಡಿ ಮತ್ತು ಇನ್ನಿತರೆ ಶಾಸನಬದ್ಧ ಬೇ ಬಾಕಿ ರೂಪದಲ್ಲಿ ಪಾವತಿಸಲು ಬಾಕಿ ಉಳಿಸಿಕೊಂಡಿದ್ದ 850.21 ಕೋಟಿ ರುಪಾಯಿಗಳನ್ನು ವಸೂಲಿ ಮಾಡಲು ಮುಂದಿನ ಕ್ರಮ ಕೈಗೊಳ್ಳಬೇಕು ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ನಿರ್ದೇಶಕರಿಗೆ ನಿರ್ದೇಶನ ನೀಡಿತ್ತು. 2026ರ ಫೆ.12ರಂದೇ ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ನಿರ್ದೇಶಕರಿಗೆ ಪತ್ರ (ಸಂಖ್ಯೆ ಸಿಐ 14 ಸಿಎಂಸಿ 2024, ದಿನಾಂಕ 12.02.2026) ಬರೆದಿತ್ತು.
ಪತ್ರದಲ್ಲೇನಿತ್ತು?
ಎಸಿಸಿ ಲಿಮಿಟೆಡ್ ಸ್ವಾಮ್ಯದ ಗಣಿ ಗುತ್ತಿಗೆ ಸಂಖ್ಯೆ 2641ಕ್ಕೆ ಸಂಬಂಧಿಸಿದಂತೆ ಕಣ್ಣೂರು ವಾಡಿ ಸುಣ್ಣದ ಕಲ್ಲು ಬ್ಲಾಕ್ ಹೊಂದಿದೆ. ಈ ಕಂಪನಿಯಿಂದ ರಾಜ್ಯ ಸರ್ಕಾರಕ್ಕೆ ರಾಜಧನ, ದಂಡ, ಬಡ್ಡಿ ಮತ್ತು ಇತರೆ ಶಾಸನಬದ್ಧ ಬೇ ಬಾಕಿ ರೂಪದಲ್ಲಿ ಪಾವತಿಸಬೇಕಾಗಿರುವ ಬಾಕಿ ಮೊತ್ತ ಸುಮಾರು 850.21 ಕೋಟಿ ವಸೂಲಿಗೆ ಬಾಕಿ ಇರುವುದಾಗಿ ಸ್ಪಷ್ಟವಾಗಿ ತಿಳಿದು ಬರುತ್ತದೆ. ಈ ಸಂಬಂಧ ಕರ್ನಾಟಕ ಅಡ್ವೋಕೇಟ್ ಜನರಲ್ ಮತ್ತು ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳ ಇಲಾಖೆಯು ಅಭಿಪ್ರಾಯ ನೀಡಿದೆ. ಈ ಅಭಿಪ್ರಾಯದಂತೆ ಸರ್ಕಾರಕ್ಕೆ ಸಂದಾಯವಾಗಬೇಕಿರುವ ಮೊತ್ತವನ್ನು ಕಾನೂನು ರೀತಿ ಬೇ ಬಾಕಿ ವಸೂಲಿ ಮಾಡಲು ಮುಂದಿನ ಕ್ರಮವಹಿಸಬೇಕು ಎಂದು ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯು ನಿರ್ದೇಶಿಸಿತ್ತು.
ಅದಾನಿ ಸಮೂಹದ ಎಸಿಸಿ ಸಿಮೆಂಟ್ಸ್ ಪ್ರೈವೈಟ್ ಲಿಮಿಟೆಡ್‌ಗೆ ಲೆಟರ್ ಆಫ್ ಇಂಟೆಂಟ್‌ನ್ನು ವಿಸ್ತರಿಸಲು ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯು (ಗಣಿ) ಭೌತಿಕ ಕಡತವನ್ನು ಕಾನೂನು ಇಲಾಖೆಗೆ ರವಾನಿಸಿ ಅಭಿಪ್ರಾಯವನ್ನು ಕೋರಿತ್ತು. ಈ ಕಡತವನ್ನು ಪರಿಶೀಲಿಸಿ ಕಾನೂನು ಇಲಾಖೆಯು ನೀಡಿದ್ದ ಅಭಿಪ್ರಾಯವನ್ನು ಸ್ವತಃ ಸಚಿವ ಎಚ್ ಕೆ ಪಾಟೀಲ್ ಅವರು ಅನುಮೋದಿಸಿದ್ದರು. ಈ ಅರ್ಜಿಗೆ ಕಾನೂನು ಇಲಾಖೆಯು (ಅಭಿಪ್ರಾಯ) 2026 ಜನವರಿ 23ರಂದು ಉತ್ತರಿಸಿದೆ. ಅಚ್ಚರಿ ಎಂದರೇ ಈ ಕಡತಕ್ಕೆ ಸಂಬಂಧಿಸಿದಂತೆ ಕಾನೂನು ಇಲಾಖೆಯ ಅಭಿಪ್ರಾಯ ಶಾಖೆಯಿಂದ ಯಾವುದೇ ಅಭಿಪ್ರಾಯ ನೀಡಲಾಗಿರುವುದಿಲ್ಲ ಎಂದು ಉತ್ತರಿಸಿತ್ತು.
ಅದಾನಿ ಸಮೂಹದ ಎಸಿಸಿ ಪ್ರಕರಣ; ಕಾನೂನು ಅಧಿಕಾರಿಗಳ ಕಳ್ಳಾಟ, ಅಭಿಪ್ರಾಯವನ್ನೇ ಮುಚ್ಚಿಟ್ಟಿತೇ?
ಆರ್‍ಟಿಐ ಅರ್ಜಿಗೆ ನೀಡಿದ್ದ ಉತ್ತರವನ್ನು ದಿ ಫೈಲ್, ಇ-ಆಫೀಸ್ ತಂತ್ರಾಂಶದಲ್ಲಿ ಪುನರ್ ಪರಿಶೀಲಿಸಿತ್ತು. ಇದರ ಪ್ರಕಾರ ಈ ಕಡತವನ್ನು ಇ-ಆಫೀಸ್‌ನಲ್ಲಿ 2024ರ ಫೆ.3ರಂದು ತೆರೆದಿತ್ತು. 2024ರಿಂದ 2026ರ ಜನವರಿ 28ರವರೆಗೂ ಈ ಕಡತವು ಚಲನೆಯಲ್ಲಿತ್ತು.
2 ವರ್ಷ ಕಾನೂನುಬಾಹಿರ ಗಣಿಗಾರಿಕೆ
2020ರ ಅಕ್ಟೋಬರ್ 5ರಂದು ಹೊರಡಿಸಿದ್ದ ಅಧಿಸೂಚನೆ ಪ್ರಕಾರ ಎಸಿಸಿ ಲಿಮಿಟೆಡ್ ಸುಮಾರು 2 ವರ್ಷಗಳ ಕಾಲ ಕಾನೂನುಬಾಹಿರವಾಗಿ ಸುಣ್ಣದ ಕಲ್ಲು ಗಣಿಗಾರಿಕೆ ನಡೆಸಿದೆ. ದಂಡ ವಸೂಲಿ ಮಾಡುವ ಆದೇಶ ಹೊರಡಿಸಿರುವುದನ್ನು ಹೊರತುಪಡಿಸಿದರೇ ಬೇರೆ ಯಾವುದೇ ಕ್ರಮವಹಿಸಿರಲಿಲ್ಲ. ಕಾಮನ್ ಕಾಸ್/ ಯೂನಿಯನ್ ಆಫ್ ಇಂಡಿಯಾದ 2017ರ ಪ್ರಕರಣದಲ್ಲಿ ಸುಪ್ರೀಕೋರ್ಟ್ ನೀಡಿರುವ ತೀರ್ಪನ್ನು ಕಾನೂನು ಅಭಿಪ್ರಾಯದಲ್ಲಿ ಉಲ್ಲೇಖವಾಗಿತ್ತು.
https://the-file.in/2026/01/governance/40174/
ಕಾನೂನುಬದ್ಧ ಪ್ರಾಧಿಕಾರವಿಲ್ಲದೆ ಗಣಿಗಾರಿಕೆಯನ್ನು ನಡೆಸಿದರೆ ಎಂಎಂಡಿಆರ್ ಕಾಯ್ದೆಯ ಸೆಕ್ಷನ್ 21(5) ಅನ್ವಯವಾಗುತ್ತದೆ. ಹೀಗಾಗಿ ರಾಯಧನ, ಮತ್ತು ಕಾನೂನುಬಾಹಿರವಾಗಿ ಗಣಿಗಾರಿಕೆ ಮಾಡಿದ ಖನಿಜದ ಬೆಲೆಯ ಶೇ.100ರಷ್ಟನ್ನೂ ವಸೂಲು ಮಾಡಲು ರಾಜ್ಯ ಸರ್ಕಾರಕ್ಕೆ ಅಧಿಕಾರವಿದೆ. ಅಲ್ಲದೇ ಅಂತಹ ವಸೂಲಾತಿಯು ಕ್ರಿಮಿನಲ್ ಮೊಕದ್ದಮೆಯಿಂದ ಸ್ವತಂತ್ರವಾಗಿದೆ ಎಂದು ಕಾನೂನು ಅಭಿಪ್ರಾಯದಲ್ಲಿ ವಿವರಿಸಿತ್ತು.
‘ಆದ್ದರಿಂದ, ವಸೂಲಾತಿಯನ್ನು ಕೇವಲ ದಂಡದ ಮೊತ್ತಕ್ಕೆ ಸೀಮಿತಗೊಳಿಸಲಾಗುವುದಿಲ್ಲ. ಸಂಪೂರ್ಣ ₹850.21 ಕೋಟಿ ರು.ಗಳನ್ನು ವಸೂಲಿ ಮಾಡಬೇಕು. ಕಂಪನಿಯು ರಾಜ್ಯದ ಅನುಮತಿಯಿಲ್ಲದೆ ಸುಮಾರು ಎರಡು ವರ್ಷಗಳ ಕಾಲ ಗಣಿಗಾರಿಕೆ ಕಾರ್ಯಾಚರಣೆಯನ್ನು ಮುಂದುವರೆಸಿದೆ. ಇದು ಎಂಎಂಡಿಆರ್ ಕಾಯಿದೆಯಡಿಯಲ್ಲಿ “ಕಾನೂನುಬಾಹಿರ ಗಣಿಗಾರಿಕೆ” ಯ ವ್ಯಾಖ್ಯಾನದೊಳಗೆ ಸ್ಪಷ್ಟವಾಗಿ ಬರುತ್ತದೆ,’ ಎಂದು ಹೇಳಿದ್ದರು.
ಜಯಂತ್/ ಮಧ್ಯಪ್ರದೇಶ ರಾಜ್ಯ ಸರ್ಕಾರ ಪ್ರಕರಣದಲ್ಲಿ (2020) 18 SCC 401) ಅಪರಾಧಗಳ ಸಂಯೋಜನೆ ಅಥವಾ ದಂಡದ ಪಾವತಿಯು ಕ್ರಿಮಿನಲ್ ಮೊಕದ್ದಮೆಗೆ ಅಡ್ಡಿಯಾಗುವುದಿಲ್ಲ. ಆಡಳಿತಾತ್ಮಕ ದಂಡಗಳು ಮತ್ತು ಕ್ರಿಮಿನಲ್ ಪ್ರಕ್ರಿಯೆಗಳು ವಿಭಿನ್ನ ಕಾನೂನು ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತವೆ ಎಂದು ಸುಪ್ರೀಂ ಕೋರ್ಟ್ ನೀಡಿರುವ ಆದೇಶವನ್ನೂ ಉಲ್ಲೇಖಿಸಿತ್ತು.
ಹೀಗಾಗಿ, ವಿತ್ತೀಯ ದಂಡಕ್ಕೆ ಸೀಮಿತವಾದ ಪ್ರಸ್ತುತ ಇಲಾಖಾ ಕ್ರಮವು ಕಾನೂನುಬದ್ಧವಾಗಿ ಸಾಕಷ್ಟಿಲ್ಲ. ಮತ್ತು ಕಾನೂನುಬಾಹಿರ ಗಣಿಗಾರಿಕೆ ಮತ್ತು ಕಾನೂನಿನ ನಿಬಂಧನೆಗಳ ಪುನರಾವರ್ತಿತ ಉಲ್ಲಂಘನೆಗಳಿಗಾಗಿ ಎಂಎಂಡಿಆರ್ ಕಾಯಿದೆಯ ಸೆಕ್ಷನ್ 21(1) ಮತ್ತು (2) ರ ಅಡಿಯಲ್ಲಿ ಕ್ರಮ ಕೈಗೊಳ್ಳಬೇಕಾಗಿದೆ. ಅದಕ್ಕೆ ಅನುಗುಣವಾಗಿ, ಆಡಳಿತ ಇಲಾಖೆಯು ತಕ್ಷಣವೇ ಕಾನೂನುಬಾಹಿರವಾಗಿ ಗಣಿಗಾರಿಕೆ ಮಾಡಿದ ಖನಿಜದ ಬೆಲೆ, ರಾಯಧನ, ಬಡ್ಡಿ ಮತ್ತು ದಂಡದ ಶೇ. 100ರಷ್ಟು ವಸೂಲಿಗಾಗಿ ಬೇಡಿಕೆಗಳನ್ನು ಹೆಚ್ಚಿಸಿಬೇಕಲ್ಲದೇ ಅದನ್ನು ಜಾರಿಗೊಳಿಸಬೇಕು ಎಂದು ಹೇಳಿತ್ತು.

ಹಾಗೆಯೇ ಕಾನೂನುಬಾಹಿರ ಗಣಿಗಾರಿಕೆ ಮತ್ತು ಪುನರಾವರ್ತಿತ ಉಲ್ಲಂಘನೆಗಳಿಗಾಗಿ ಎಂಎಂಡಿಆರ್ ಕಾಯಿದೆಯ ಸೆಕ್ಷನ್‌ಗಳು 21(1) ಮತ್ತು 21(2) ರ ಅಡಿಯಲ್ಲಿ ಕ್ರಿಮಿನಲ್ ಮೊಕದ್ದಮೆಗಳನ್ನು ಪ್ರಾರಂಭಿಸಬೇಕು ಎಂದು ಕಾನೂನು ಇಲಾಖೆಯು ತನ್ನ ಅಭಿಪ್ರಾಯದಲ್ಲಿ ಶಿಫಾರಸ್ಸು ಮಾಡಿತ್ತು.
ಎಸಿಸಿಯನ್ನು ನಿರ್ಬಂಧಿಸಿ
ಈ ಪ್ರಕರಣದಲ್ಲಿ ಗಮನಾರ್ಹವಾದ ಆರ್ಥಿಕ ಪರಿಣಾಮಗಳನ್ನು ಒಳಗೊಂಡಿದೆ. ಅಲ್ಲದೇ ಬಿಡ್ಡಿಂಗ್/ಹರಾಜು ಕಾರ್ಯವಿಧಾನಗಳು ಒಳಗೊಂಡಿರುವುದರಿಂದ ಹಣಕಾಸು ಇಲಾಖೆಯನ್ನು ಸಂಪರ್ಕಿಸಬಹುದು. ಮತ್ತು ಕಾನೂನುಗಳ ಪರಿಪಾಲನೆಯನ್ನು ಖಚಿತಪಡಿಸಿಕೊಳ್ಳುವವರೆಗೆ ಎಸಿಸಿ ಲಿಮಿಟೆಡ್ ಅನ್ನು ಭವಿಷ್ಯದಲ್ಲಿ ಸರ್ಕಾರಿ ಟೆಂಡರ್‌ಗಳು, ಹರಾಜುಗಳು ಮತ್ತು ಗಣಿಗಾರಿಕೆ-ಸಂಬಂಧಿತ ಪ್ರಕ್ರಿಯೆಗಳಲ್ಲಿ ಭಾಗವಹಿಸದಂತೆ ನಿರ್ಬಂಧಿಸಬೇಕು ಎಂದು ಕಾನೂನು ಇಲಾಖೆಯು ಶಿಫಾರಸ್ಸು ಮಾಡಿದೆ. ಇದನ್ನು ಸಚಿವ ಎಚ್ ಕೆ ಪಾಟೀಲ್ ಅವರೂ ಸಹ ಅನುಮೋದಿಸಿದ್ದರು.

ಕಾನೂನು ಇಲಾಖೆಯ ಅಭಿಪ್ರಾಯಕ್ಕೂ ಎದುರು ನೋಡದೆಯೇ ಲೆಟರ್ ಅಫ್ ಇಂಟೆಂಟ್‌ನ್ನು ಒಂದು ವರ್ಷದ ಅವಧಿಯವರೆಗೆ ವಿಸ್ತರಿಸಲು ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ (ಗಣಿ)ಯು ನೇರವಾಗಿ ಕೇಂದ್ರ ಸರ್ಕಾರದ ನಿರ್ದೇಶನ ಕೋರಿತ್ತು.
ಕಾನೂನು ಅಭಿಪ್ರಾಯ ಕೈ ಸೇರುವ ಮುನ್ನವೇ ಪ್ರಸ್ತಾವ ಸಲ್ಲಿಸಿದ್ದ ಇಲಾಖೆ
ಅದಾನಿ ಸಮೂಹದ ಎಸಿಸಿ ಸಿಮೆಂಟ್ಸ್ ಪ್ರೈವೈಟ್ ಲಿಮಿಟೆಡ್‌ಗೆ ಲೆಟರ್ ಆಫ್ ಇಂಟೆಂಟ್‌ನ್ನು ವಿಸ್ತರಿಸಲು ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯು (ಗಣಿ) ಕಾನೂನು ಇಲಾಖೆಯ ಅಭಿಪ್ರಾಯವನ್ನು ಕೋರಿತ್ತು. ಆದರೆ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯು (ಗಣಿ) ಈ ಅಭಿಪ್ರಾಯಕ್ಕೂ ಕಾದಿರಲಿಲ್ಲ. ಬದಲಿಗೆ ಕಾನೂನು ಅಭಿಪ್ರಾಯ ತನ್ನ ಕೈ ಸೇರುವ ಮುನ್ನವೇ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿತ್ತು.
ಈ ಸಂಬಂಧ ಕೇಂದ್ರಕ್ಕೆ ಪ್ರಸ್ತಾವ ಸಲ್ಲಿಸಿದೆ ಎಂದು ದಿ ಫೈಲ್ 2026ರ ಜನವರಿ 7ರಂದೇ ವರದಿ ಪ್ರಕಟಿಸಿತ್ತು.








