ಜಗದೀಶ್‌ ಶೆಟ್ಟರ್‌ ಅವಧಿಯಲ್ಲೂ ಅಕ್ರಮ;’ದಿ ಫೈಲ್‌’ ಬಹಿರಂಗಗೊಳಿಸಿದ್ದ 9 ಶಿಕ್ಷಕರು ಸೇರಿ 38 ಮಂದಿ ದಸ್ತಗಿರಿ

photo credit-tv9 kannada

ಬೆಂಗಳೂರು; ಜಗದೀಶ್‌ ಶೆಟ್ಟರ್‌ ಮತ್ತು ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ  ಕೋಲಾರ, ಚಿಕ್ಕಬಳ್ಳಾಪುರ ಮತ್ತು ಚಿತ್ರದುರ್ಗ ಜಿಲ್ಲೆ ಸೇರಿದಂತೆ ಗಡಿ ಜಿಲ್ಲೆಗಳಲ್ಲಿ ವಾಮಮಾರ್ಗದಲ್ಲಿ ಶಿಕ್ಷಕರಾಗಿ ನೇಮಕವಾಗಿರುವ ಪ್ರಕರಣವನ್ನು ‘ವಾರ್ತಾಭಾರತಿ-ದಿ ಫೈಲ್‌’ ಹೊರಗೆಡವುತ್ತಿದ್ದಂತೆ  ತನಿಖೆಯನ್ನು ಚುರುಕುಗೊಳಿಸಿರುವ ಸಿಐಡಿ ತನಿಖಾ ತಂಡವು ಈ ಸಂಬಂಧ ಗಡಿ ಜಿಲ್ಲೆಯ ವಿವಿಧ ಗ್ರಾಮಗಳಲ್ಲಿ ನೇಮಕವಾಗಿದ್ದಾರೆ ಎಂಬ ಆರೋಪದಡಿಯಲ್ಲಿ  38 ಶಿಕ್ಷಕರನ್ನು ದಸ್ತಗಿರಿ ಮಾಡಿದೆ.

 

ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ದಸ್ತಗಿರಿಗೊಳಗಾಗಿರುವ 38  ಶಿಕ್ಷಕರ ಪೈಕಿ ಒಟ್ಟು 9 ಮಂದಿ ಶಿಕ್ಷಕರ ಹೆಸರುಗಳನ್ನು ‘ದಿ ಫೈಲ್‌ ‘- ವಾರ್ತಾಭಾರತಿ 2022ರ ಸೆಪ್ಟಂಬರ್‌ 17ರಂದು ಬಹಿರಂಗಗೊಳಿಸಿತ್ತು.

ಗಡಿ ಜಿಲ್ಲೆಗಳಲ್ಲಿನ ಪ್ರೌಢಶಾಲೆಗಳಲ್ಲೂ ಅಕ್ರಮ ನೇಮಕಾತಿ; ಸಿಐಡಿ ತನಿಖೆ ಬೆನ್ನಲ್ಲೇ ಮುನ್ನೆಲೆಗೆ ಬಂದ ಹೊಸ ಪಟ್ಟಿ

2022ರ ಅಕ್ಟೋಬರ್‌ 19ರಂದು ಸಿಐಡಿ ತನಿಖಾ ತಂಡವು ದಸ್ತಗಿರಿ ಮಾಡಿರುವ 38 ಶಿಕ್ಷಕರ ಪೈಕಿ ವಾರ್ತಾಭಾರತಿ ಮತ್ತು ದಿ ಫೈಲ್‌ ಬಹಿರಂಗಗೊಳಿಸಿದ್ದ 9 ಮಂದಿ ಶಿಕ್ಷಕರೂ ಇದ್ದಾರೆ. ದಸ್ತಗಿರಿ ಆಗಿರುವ ಶಿಕ್ಷಕರ ಪೈಕಿ ಬಹುತೇಕರು ಉತ್ತರ ಕರ್ನಾಟಕದವರಾಗಿದ್ದಾರೆ.

 

ಕೋಲಾರ, ಚಿಕ್ಕಬಳ್ಳಾಪುರ, ಬಂಗಾರಪೇಟೆ ತಾಲೂಕಿನ ವಿವಿಧ ಗ್ರಾಮಗಳಲ್ಲಿನ ಸರ್ಕಾರಿ ಪ್ರೌಢಶಾಲೆಗಳಿಗೆ ಅಕ್ರಮವಾಗಿ ನೇಮಕವಾಗಿರುವ ಶಿಕ್ಷಕರ ಪಟ್ಟಿಯನ್ನು ಲಂಚಮುಕ್ತ ಕರ್ನಾಟಕ ವೇದಿಕೆಯು ಸರ್ಕಾರಕ್ಕೆ ಸಲ್ಲಿಸಿತ್ತು. ಸಿಐಡಿ ತನಿಖಾ ತಂಡವು ದಸ್ತಗಿರಿ ಮಾಡಿರುವ ಎಲ್ಲಾ ಶಿಕ್ಷಕರ ಪಟ್ಟಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

9 ಮಂದಿ ಶಿಕ್ಷಕರ ಹೆಸರಿನ ಪಟ್ಟಿ

 

ವೀರೇಂದ್ರ ಬಂಗಾರಿ (ಬಂಗಾರಪೇಟೆ ತಾಲೂಕಿನ ದೊಡ್ಡೂರು), ಮುತ್ತಣ್ಣ ಆರ್‌ ಗೌಡರ್‌ (ಬಂಗಾರಪೇಟೆ ಪಟ್ಟಣ ಸರ್ಕಾರಿ ಬಾಲಕಿಯರ ಪ್ರೌಢಶಾಲೆ), ಮಂಜುನಾಥ್‌ ಲಾಲ್‌ಸಂಗಿ (ಬಂಗಾರಪೇಟೆ ದೊಡ್ಡಪನ್ನಹದಹಳ್ಳಿ ಸರ್ಕಾರಿ ಪ್ರೌಢಶಾಲೆ), ಸಿದ್ದನಗೌಡ ಕರಡಿ (ಬಂಗಾರಪೇಟೆ ತಾಲೂಕಿನ ದೋಣಿಮಡಗು ಸರ್ಕಾರಿ ಪ್ರೌಢಶಾಲೆ), ಶರಣಪ್ಪ ಬಿರಾದಾರ (ಶ್ರೀನಿವಾಸಪುರ ತಾಲೂಕಿನ ತೊಪ್ಪನಹಳ್ಳಿ ಸರ್ಕಾರಿ ಪ್ರೌಢಶಾಲೆ), ತೋಪು ರಾಥೋಢ್‌ ( ಬಂಗಾರಪೇಟೆ ತಾಲೂಕಿನ ತೊಪ್ಪನಹಳ್ಳಿ ಸರ್ಕಾರಿ ಪ್ರೌಢಶಾಲೆ), ರವೀಂದ್ರ ದೊಡ್ಡಮನಿ (ಬಂಗಾರಪೇಟೆಯ ಬೋಡೆನಹಳ್ಳಿ ಗ್ರಾಮದ ಸರ್ಕಾರಿ ಪ್ರೌಢಶಾಲೆ), ದುರುಗಮ್ಮ ( ಬೋಡೇನಹಳ್ಳಿ ಗ್ರಾಮದ ಸರ್ಕಾರಿ ಪ್ರೌಢಶಾಲೆ) ಅವರನ್ನು ಸಿಐಡಿ ತನಿಖಾ ತಂಡವು ದಸ್ತಗಿರಿ ಮಾಡಿದೆ.

 

2012-13ನೇ ಸಾಲಿನಲ್ಲಿ ನೇಮಕವಾಗಿದ್ದ ರವೀಂದ್ರ ದೊಡ್ಡಮನಿ, ತೋಪು ರಾಥೋಡ್‌, ದುರುಗಮ್ಮ ಎಂಬುವರ ವಿರುದ್ಧ ವಿಧಾನಸೌಧ ಪೊಲೀಸ್‌ ಠಾಣೆಯಲ್ಲಿ (ಮೊಕದ್ದಮೆ ಸಂಖ್ಯೆ 55/2022) ಭ್ರಷ್ಟಾಚಾರ ತಡೆ ಕಾಯ್ದೆ 1988ರ ಕಾಯ್ದೆ ಕಲಂ 7,8,9 ಮತ್ತು ಐಪಿಸಿ ಕಲಂ 465, 468,471, 420 ಅನ್ವಯ ಮೊಕದ್ದಮೆ ದಾಖಲು ಮಾಡಿರುವುದು ತಿಳಿದು ಬಂದಿದೆ.

 

ಇನ್ನಿತರೆ ಆರೋಪಿ ಶಿಕ್ಷಕರ ಪಟ್ಟಿ

 

ಮಲ್ಲಿಕಾರ್ಜುನ ಕರಡಿ ( ಬೆಂಗಳೂರು ದಕ್ಷಿಣ ಶೈಕ್ಷಣಿಕ ಜಿಲ್ಲೆ ಕಾಡುಸೊಣ್ಣಪ್ಪನಹಳ್ಳಿಯ ಸರ್ಕಾರಿ ಪ್ರೌಢಶಾಲೆ), ಚಂದ್ರಶೇಖರ್‌ ಕಲ್ಯಾಣಿ (ಆನೇಕಲ್‌ ತಾಲೂಕುಕ ಮಾಯಸಂದ್ರ ಸರ್ಕಾರಿ ಪ್ರೌಢಶಾಲೆ), ಶಾಂತಪ್ಪ ಅವರಾಧಿ (ಆನೇಕಲ್‌ ತಾಲೂಕಿನ ಗುಂಜೂರು ಸ.ಪ್ರೌ.ಶಾ), ನಿಶ್ಚಿತ ಡಿ ಎ (ಅನೇಕಲ್‌ ತಾಲೂಕಿನ ಸರ್ಜಾಪುರ ಸ. ಪ್ರೌ. ಶಾ), ನರೇಂದ್ರ ಹಿಪ್ಪರಗಿ (ಆನೇಕಲ್‌ ತಾಲೂಕಿನ ಕನ್ನಮಂಗಲ ಸ.ಪ್ರೌ ಶಾ), ವಿಶ್ವನಾಥ ಧೂಳಖೇಡ (ಶಿಡ್ಲಘಟ್ಟ ತಾಲೂಕಿನ ಕುಕಂದಲಕುರ್ಕಿ ಸ.ಪ್ರೌ.ಶಾ), ಜಯಶ್ರೀ ಹಿರೇಮಠ್‌ (ಬಂಗಾರಪೇಟೆ ತಾಲೂಕು ದೊಡ್ಡೂರು), ಗುರಪ್ಪ ಗೌಡ ಬಿರಾದಾರ (ಮಾಲೂರು ತಾಲೂಕು ಕೆಸರಗೆರೆ), ಪ್ರಸನ್ನಕುಮಾರ್‌ ಪಾಟೀಲ್‌ (ಮಾಲೂರು ತಾಲೂಕಿನ ಚಿಕ್ಕಕುಂತೂರು), ಗಿರೀಶ್‌ ದಂಬಳ್ಳಿ (ಮುಳಬಾಗಿಲು ತಾಲೂಕು ಗುಮ್ಮಲಾಪುರ), ಬಸವರಾಜ ಬೆಂಡಿಗೇರಿ (ಮುಳಬಾಗಿಲು ತಾಲೂಕು ವಿರೂಪಾಕ್ಷಿ ಗ್ರಾಮ), ಅಬ್ದುಲ್‌ ಗಫರ್‌ ಉಪ್ಪಾರಘರ್‌ (ಮುಳಬಾಗಿಲು ತಾಲೂಕಿನ ಗುಟ್ಟಹಳ್ಳಿ), ಮಲ್ಲಣ್ಣ (ಮುಳಬಾಗಿಲು ತಾಲೂಕಿನ ಯಲಗೊಂಡಹಳ್ಳಿ), ಬಸವರಾಜ ಬಿರಾದಾರ (ಕೋಲಾರ ಶ್ರೀನಿವಾಸಪುರ ಆದರ್ಶ ವಿದ್ಯಾಲಯ), ಪ್ರಭು ಬಿರಾದಾರ (ಶ್ರೀನಿವಾಸಪುರ ತಾಲೂಕು ಪುಳಗೂರು ಕೋಟೆ), ವೀರೇಶ್‌ ಕೊಮ್ಮೂರು (ಶ್ರೀನಿವಾಸಪುರ ರಾಯಲಪಾಡು), ಕುಮಾರ್‌ ರಾಥೋಡ್‌ (ಬಂಗಾರಪೇಟೆ ದೋಣಿಮಡಗು), ಚಂದ್ರಶೇಖರ ಬೆಳ್ಳಿ (ಶ್ರೀನಿವಾಸಪುರ ಬೈರಗಾನಪಲ್ಲಿ), ರಾಮನಗೌಡ ಗುರದ್ದಿ (ಶ್ರೀನಿವಾಸಪುರ ಕೂರಿಗೆಪಲ್ಲಿ ), ದೀಪಕ್‌ ಪೂಜಾರಿ (ಚಿತ್ರದುರ್ಗ ಹೊಳಲ್ಕೆರೆ ಹಿರೇಕಂದವಾಡಿ ), ಕೊಟ್ರಪ್ಪ ಹೆಚ್‌ (ಹೊಳಲ್ಕೆರೆ ಮದ್ದೇರು), ಜಯಶ್ರೀ ಹಣಮಂತರಾಯ ( ಬಂಗಾರಪೇಟೆ ಕಾಮಸಮುದ್ರ ), ಮಧ್ವಾಚಾರ್ಯ ತಿಕೋಟಿಕರ (ಮುಳಬಾಗಿಲು ಬಾಲಸಂದ್ರ), ಬಸಪ್ಪ ಹುಣಸೇಮರದ್‌ (ಚಿಂತಾಮಣಿ ಮುರುಗಮಲ್ಲ), ಉಮ್ಮೇ ಸಲ್ಮಾ (ಚಿತ್ರದುರ್ಗ ಪಟ್ಟಣ ಅಗಸನಕಲ್ಲು), ಸವಿತ (ಮೊಳಕಾಲ್ಮೂರು ಬಂದ್ರಾವಿ), ಕರಬಸಪ್ಪ ಐರಾಣಿ (ಮೊಳಕಾಲ್ಮೂರು ನಾಗಸಮುದ್ರ)

 

ಈ ಶಿಕ್ಷಕರ ಸೇವಾ ಹಿರಿತನಕ್ಕೆ ಸಂಬಂಧಿಸಿದಂತೆ ಇಲಾಖೆಯ ಅಧಿಕೃತ ವೆಬ್‌ಸೈಟ್‌ನಲ್ಲಿ ಈ ಶಿಕ್ಷಕರ ಹೆಸರುಗಳಿಲ್ಲ. ಇದು ಅಕ್ರಮ ನಡೆದಿದೆ ಎಂಬುದು ಮೇಲ್ನೋಟಕ್ಕೆ ಕಂಡು ಬಂದಿದೆ. ದೈಹಿಕ ಶಿಕ್ಷಣ, ಆಂಗ್ಲಭಾಷೆ, ಹಿಂದಿ, ಸಮಾಜ ವಿಜ್ಞಾನ ವಿಭಾಗದಲ್ಲಿ ಈ ಶಿಕ್ಷಕರು ಅಕ್ರಮವಾಗಿ ನೇಮಕಾತಿಯಾಗಿದ್ದಾರೆ ಎಂಬ ಗುರುತರವಾದ ಆರೋಪವಿದೆ.

 

ಈ ಶಿಕ್ಷಕರ ಅಕ್ರಮ ನೇಮಕಾತಿಯನ್ನು ಈ ಕೆಳಕಂಡ ಅಯಾಮಗಳಲ್ಲಿ ತನಿಖೆ ನಡೆಸುವ ಅಗತ್ಯವಿದೆ. ಮಂಜೂರಾದ ಹುದ್ದೆಗಳಿಗೆ ಎದುರಾಗಿ ಎಷ್ಟು ಸಂಖ್ಯೆಯಲ್ಲಿ ನೇಮಕ ಮಾಡಲಾಗಿದೆ. ಭರ್ತಿಯಾಗದೇ ಉಳಿಕೆಯಾಗಿರುವ ಹುದ್ದೆಗಳನ್ನು ಸರ್ಕಾರಕ್ಕೆ ಮರಳಿಸಿರುವ ಸಂಖ್ಯೆ ಪತ್ತೆಯಾಗಬೇಕಿದೆ. ಉಳಿಕೆಯಾದ ಹುದ್ದೆಗಳನ್ನು ಯಾವ ದಿನಾಂಕದಂದು ಮತ್ತು ವರ್ಷದಂದು ಮರಳಿಸಲಾಗಿದೆ ಎಂಬುದನ್ನು ಕಂಡು ಹಿಡಿಯಬೇಕಿದೆ.,’ ಎಂದು ಸರ್ಕಾರಕ್ಕೆ ದೂರಿನಲ್ಲಿ ಒತ್ತಾಯಿಸಿದ್ದಾರೆ.

 

 

ಅದೇ ರೀತಿ ಅಕ್ರಮವಾಗಿ ನೇಮಕವಾಗಿರುವ ಶಿಕ್ಷಕರ ಬೌದ್ಧಿಕ ಪರಿಜ್ಞಾನ ಮತ್ತು ಪಾಠ ಪ್ರವಚನ ಪರಿಶೀಲನೆ ನಡೆಸಬೇಕು ಮತ್ತು ಈ ಸಂಬಂಧ ಸೂಕ್ತ ಪರೀಕ್ಷೆಯನ್ನು ನಡೆಸಬೇಕು. ಇಂತಹ ಅಕ್ರಮ ನೇಮಕಾತಿಗಳು ರಾಜ್ಯದ ಗಡಿ ಜಿಲ್ಲೆಗಳಲ್ಲಿಯೇ ನಡೆದಿದೆ ಎಂಬ ಮಾಹಿತಿಯೂ ಇದೆ. ಹೀಗಾಗಿ ರಾಜ್ಯದ ಗಡಿ ಜಿಲ್ಲೆ, ತಾಲೂಕು, ಗ್ರಾಮಗಳಲ್ಲಿನ ಸರ್ಕಾರಿ ಪ್ರೌಢಶಾಲೆ ಮತ್ತು ಪ್ರಾಥಮಿಕ ಶಾಲೆಗಳಿಗೆ ಮೇಲ್ಕಂಡ ಅವಧಿಯಲ್ಲಿ ನೇಮಕವಾಗಿರುವ ಶಿಕ್ಷಕರ ನೇಮಕಾತಿಯನ್ನು ತನಿಖೆಗೊಳಪಡಿಸಬೇಕು. ಈ ಶಿಕ್ಷಕರು ಕಾಲಕಾಲಕ್ಕೆ ಪಡೆದಿರುವ ಬಡ್ತಿ, ವೇತನ, ಸೇವಾ ಹಿರಿತನ ಪಟ್ಟಿಯಲ್ಲಿ ಹೇಗೆ ಸೇರ್ಪಡೆಗೊಳಿಸಲಾಗಿದೆ ಎಂದು ಪರಿಶೀಲನೆಗೊಳಪಡಿಸಬೇಕು. ಈ ಶಿಕ್ಷಕರು ಪಡೆದಿರುವ ಪದವಿ ಪ್ರಮಾಣ ಪತ್ರಗಳನ್ನು ಸೂಕ್ತ ತನಿಖೆಗೊಳಪಡಿಸಬೇಕು. ಅಲ್ಲದೆ ಫೋರೆನ್ಸಿಕ್‌ ಮೂಲಕ ತನಿಖೆಗೊಳಪಡಿಸಬೇಕು ಎಂದೂ ವೇದಿಕೆಯು ಆಗ್ರಹಿಸಿತ್ತು.

 

ಅಕ್ರಮ ನಡೆದಿರುವುದು ಹೇಗೆ?

 

ನೇಮಕಾತಿ ಸಂಬಂಧ ಮೊದಲು ಪ್ರಕಟಿಸುವ ಆಯ್ಕೆ ಪಟ್ಟಿಯಲ್ಲಿ ಅಭ್ಯರ್ಥಿಗಳ ಹೆಸರು ಇರುವುದಿಲ್ಲ. ನೇಮಕಾತಿ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿ ಆಯ್ಕೆ ಪಟ್ಟಿಯಲ್ಲಿದ್ದ ಕೆಲವು ಅಭ್ಯರ್ಥಿಗಳು ಯಾವುದೋ ಕಾರಣದಿಂದ ಕೆಲಸಕ್ಕೆ ಹಾಜರಾಗದೇ ಇರುವ ಕಾರಣಕ್ಕೆ ಈ ಹುದ್ದೆಗಳು ಖಾಲಿ ಇರುತ್ತವೆ. ಹೀಗೆ ಖಾಲಿಯಾದ ಹುದ್ದೆಗಳಗೆ ಇವರು cut of percentage ಇರುವ ಅಭ್ಯರ್ಥಿಗಳನ್ನು ಪಟ್ಟಿಮಾಡಿ ನೇಮಕ ಮಾಡಿಕೊಳ್ಳದೇ ನೇಮಕಾತಿಯನ್ನು ಮುಂದೂಡುತ್ತಾರೆ. ಇದು ವರ್ಷಗಟ್ಟಲೇ ಹೀಗೆಯೇ ಮುಂದುವರೆಯುತ್ತದೆ ಎಂದು ವೇದಿಕೆಯು ಪತ್ರದಲ್ಲಿ ವಿವರಿಸಿದೆ.

 

ಆ ನಂತರದ ದಿನಗಳಲ್ಲಿ ಹಿಂದೆ ನಡೆದಿದ್ದ ಪರೀಕ್ಷೆಗೆ ಹಾಜರಾದ ಅಭ್ಯರ್ಥಿಗಳನ್ನು ಈ ಜಾಲವು ಸಂಪರ್ಕಿಸುತ್ತದೆ. ಇಂತಹ ಅಭ್ಯರ್ಥಿಗಳು ಪರೀಕ್ಷೆಯಲ್ಲಿ ಆಯ್ಕೆಯಾಗಲು ನಿಗದಿತ ಅಂಕಗಳು ಪಡೆಯದಿದ್ದರೂ ಲಕ್ಷಾಂತರ ರುಪಾಯಿ ಲಂಚ ಪಡೆದು ಇವರಿಗೆ ಮೂಲ ಸಿಂಧುತ್ವ ಪ್ರಮಾಣ ಪತ್ರ, ಪೊಲೀಸ್ ವೆರಿಫಿಕೇಶನ್ ಪತ್ರ ಕಳಿಸಿಕೊಟ್ಟಿದ್ದಾರೆ. ಆ ನಂತರ ಮೇಲಾಧಿಕಾರಿಗಳ ಗಮನಕ್ಕೆ ತರದೆಯೇ ನೇಮಕಾತಿ ಆದೇಶ ನೀಡಿದ್ದಾರೆ ಎಂದು ವೇದಿಕೆಯು ಪತ್ರದಲ್ಲಿ ಆರೋಪಿಸಿದೆ.

 

ಇದಾದ ನಂತರ ಖಾಲಿ ಇರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸ್ಥಳ ತೋರಿಸಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸ್ಥಳ ತೋರಿಸಿ ನೇಮಕಾತಿ ಆದೇಶ ನೀಡಿದ್ದಾರೆ. ಆದರೆ ನೇಮಕಾತಿ ನಿಯಮದ ಪ್ರಕಾರ ಮೊದಲನೇ ಆಯ್ಕೆ ಪಟ್ಟಿಯಲ್ಲಿ ನೇಮಕಾತಿ ಆಗದಿರುವ ಅಭ್ಯರ್ಥಿಗಳಿಗೆ ಕಟ್ ಆಫ್ ಪರ್ಸೆಂಟೇಜ್ ಎಷ್ಟಕ್ಕೆ ನಿಲ್ಲಿಸಲಾಗಿದೆಯೋ ಅದರ ಕೆಳಗಿನ ಅಂಕ ಪಡೆದ ಅಭ್ಯರ್ಥಿಗಳಿಗೆ ಈ ಎರಡನೇ ಪಟ್ಟಿಯಲ್ಲಿ ಹೆಸರು ಪ್ರಕಟಿಸಿ ನೇಮಕಾತಿ ಆದೇಶ ನೀಡಬೇಕು. ಇಲ್ಲದಿದ್ದರೆ ಖಾಲಿ ಹುದ್ದೆಗಳನ್ನು ಸರ್ಕಾರಕ್ಕೆ ಮರು ಹಿಂದಿರುಗಿಸಬೇಕು. ಆದರೆ ಇಲ್ಲಿ ಈ ಯಾವ ಪ್ರಕ್ರಿಯೆಯೂ ನಡೆದಿಲ್ಲ. ಹಣ ಪಡೆದು ಅಕ್ರಮವಾಗಿ ನೇಮಕ ನಡೆಸಲಾಗಿದೆ ಎಂದು ವೇದಿಕೆಯು ಆಪಾದಿಸಿದೆ.

 

ಶಿಕ್ಷಕರ ನೇಮಕಾತಿಯಲ್ಲಿನ ಅಕ್ರಮವನ್ನು ಹೊರಗೆಳೆದಿದ್ದ ಲಂಚಮುಕ್ತ ನಿರ್ಮಾಣ ಕರ್ನಾಟಕ ವೇದಿಕೆಯ ರಾಜ್ಯಾಧ್ಯಕ್ಷ ಮಲ್ಲಿಕಾರ್ಜುನ ಭಟ್ಟರಹಳ್ಳಿ ಅವರು ಮುಖ್ಯಮಂತ್ರಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ, ಪ್ರಧಾನ ಕಾರ್ಯದರ್ಶಿಗಳಿಗೆ ಲಿಖಿತ ದೂರು ನೀಡಿದ್ದರು.

SUPPORT THE FILE

Latest News

Related Posts