ಬೆಂಗಳೂರು; ಬೆಂಬಲ ಬೆಲೆ ಯೋಜನೆಯಡಿಯಲ್ಲಿ ಆವರ್ತ ಹಾಗೂ ಇತರೆ ನಿಧಿಗಳಿಂದ ಹಣ ಪಡೆದುಕೊಂಡಿರುವ ಖರೀದಿ ಸಂಸ್ಥೆಗಳು, ಉದ್ದಿಮೆದಾರರು ಹಾಗೂ ಇತರರು 2023ರ ಡಿಸೆಂಬರ್ ಅಂತ್ಯಕ್ಕೆ 3,108.89 ಕೋಟಿ ರು.ಗಳನ್ನು ಪಾವತಿಸಲು ಬಾಕಿ ಇರಿಸಿಕೊಂಡಿರುವುದು ಇದೀಗ ಬಹಿರಂಗವಾಗಿದೆ.
ವಿಧಾನಪರಿಷತ್ ಸದಸ್ಯ ಕೆ ಎಸ್ ಎಲ್ ಬೋಜೇಗೌಡ ಅವರು ಕೇಳಿದ್ದ ಪ್ರಶ್ನೆಗೆ ಉತ್ತರಿಸಿರುವ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ್ ಅವರು ಆವರ್ತ ಮತ್ತು ಇತರೆ ನಿಧಿಗಳಿಂದ ಹಣ ಪಡೆದು ಬಾಕಿ ಇರಿಸಿಕೊಂಡಿರುವ ಅಂಕಿ ಸಂಖ್ಯೆಗಳನ್ನು ಒದಗಿಸಿದ್ದಾರೆ.
ಡಿಸೆಂಬರ್ 2023ರ ಅಂತ್ಯಕ್ಕೆ ಒಟ್ಟು 5,607.20 ಕೋಟಿ ರು. ಬಿಡುಗಡೆ ಮಾಡಿತ್ತು. ಈ ಪೈಕಿ 2,478.37 ಕೋಟಿ ರು.ಗಳು ಮಾತ್ರ ಪಾವತಿಯಾಗಿದೆ. ನಷ್ಟದ ಮೊತ್ತ 19.93 ಕೋಟಿ ರು ಸೇರಿ ಒಟ್ಟಾರೆ 3,108.89 ಕೋಟಿ ರು.ಗಳನ್ನು ಪಾವತಿಸಲು ಬಾಕಿ ಇದೆ ಎಂದು ಉತ್ತರದಲ್ಲಿ ವಿವರಿಸಿದ್ದಾರೆ.
ಕೆಎಫ್‌ಸಿಎಸ್‌ಸಿಗೆ 1,181.83 ಕೋಟಿ ರು ಬಿಡುಗಡೆ ಮಾಡಿತ್ತು. ಇದರಲ್ಲಿ 424.34 ಕೋಟಿ ರು. ಮಾತ್ರ ಪಾವತಿಸಿದೆ. 1,241.75 ಕೋಟಿ ರು.ಗಳನ್ನು ಪಾವತಿಸಲು ಬಾಕಿ ಇರಿಸಿಕೊಂಡಿದೆ.
ಅದೇ ರೀತಿ ಕೆಎಸ್‌ಸಿಎಎಂಎಫ್‌ಗೆ 1,724.19 ಕೋಟಿ ರು. ಬಿಡುಗಡೆ ಮಾಡಿತ್ತು. ಇದರಲ್ಲಿ 820.10 ಕೋಟಿ ರು. ಪಾವತಿಯಾಗಿದೆ. 904.05 ಕೋಟಿ ರು. ಪಾವತಿಗೆ ಬಾಕಿ ಇರಿಸಿಕೊಂಡಿದೆ.
ಹಾಗೆಯೇ ಕೆಎಸ್‌ಡಬ್ಲ್ಯುಸಿಗೆ 1,181.83 ಕೋಟಿ ರು. ಬಿಡುಗಡೆಯಾಗಿತ್ತು. ಇದರಲ್ಲಿ 424.34 ಕೋಟಿ ರು. ಪಾವತಿಯಾಗಿದೆ. 757.49 ಕೋಟಿ ರು. ಪಾವತಿಗೆ ಬಾಕಿ ಇದೆ ಎಂಬುದು ಸಚಿವರು ಉತ್ತರಿಸಿರುವ ಅಂಕಿ ಅಂಶದಿಂದ ಗೊತ್ತಾಗಿದೆ.
1999ರಿಂದ 2022-23ನೇ ಸಾಲಿನವರೆಗೆ ಕನಿಷ್ಟ ಬೆಂಬಲ ಯೋಜನೆಯಡಿ 32,86,974 ರೈತರು ಪ್ರಯೋಜನ ಪಡೆದುಕೊಂಡಿದ್ದಾರೆ.
ಕನಿಷ್ಠ ಬೆಂಬಲ ಬೆಲೆ ಯೋಜನೆಯ ಅನುಷ್ಠಾನಕ್ಕಾಗಿ ಕೃಷಿ ಮತ್ತು ತೋಟಗಾರಿಕೆ ಉತ್ಪನ್ನಗಳ ಬೆಲೆ ಸ್ಥಿರೀಕರಣ ಸಚಿವ ಸಂಪುಟ ಉಪ ಸಮಿತಿಯು ಸಭೆಯು ಆಗಿದ್ದಾಂಗ್ಗೆ ಸಭೆ ನಡೆಸುತ್ತದೆ. ಈ ಸಮಿತಿ ತೀರ್ಮಾನ ಮತ್ತು ಸರ್ಕಾರದ ಆದೇಶಗಳ ಪ್ರಕಾರ ಆವರ್ತ ನಿಧಿಯಿಂದ ಖರೀದಿ ಸಂಸ್ಥೆಗಳಿಗೆ ಹಣ ಬಿಡುಗಡೆ ಮಾಡಲಾಗುತ್ತದೆ.
ಮರು ಪಾವತಿಗೆ ಸಂಬಂಧಿಸಿದಂತೆ ಸಚಿವ ಸಂಪುಟ ಉಪ ಸಮಿತಿಯು ಕ್ರಮ ಜರುಗಿಸುತ್ತಿದೆ. ಕನಿಷ್ಠ ಬೆಂಬಲ ಯೋಜನೆ ಅನುಷ್ಠಾನವು ನಿರಂತರ ಪ್ರಕ್ರಿಯೆಯಾಗಿದೆ ಎಂದು ಸಚಿವರು ಉತ್ತರದಲ್ಲಿ ವಿವರಿಸಿದ್ದಾರೆ.
ರಾಜ್ಯದಲ್ಲಿ ಕೃಷಿ ಕ್ಷೇತ್ರವನ್ನು ಸಮರ್ಥನೀಯವಾಗಿ ಬಲಪಡಿಸುವ ಹಾಗೂ ಕೃಷಿ ಕ್ಷೇತ್ರದಲ್ಲಿ ಸ್ಥಿರತೆ ಕಾಪಾಡುವ ದೃಷ್ಟಿಯಿಂದ ಕನಿಷ್ಠ ಬೆಂಬಲ ಬೆಲೆ ಯೋಜನೆ ಜಾರಿಗೊಳಿಸಿದೆ. ಬೆಂಬಲ ಬೆಲೆ ಯೋಜನೆಯಡಿಯಲ್ಲಿ ಆವರ್ತ ನಿಧಿಯಡಿ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿಯೂ ಕೇವಲ 189 ಕೋಟಿ ಮಾತ್ರ ಇತ್ತು. . ವಿವಿಧ ಸಂಗ್ರಹಣಾ ಸಂಸ್ಥೆಗಳಿಂದ ಆವರ್ತ ನಿಧಿಗೆ 2,500 ಕೋಟಿ ಬಾಕಿ ಬರಬೇಕಿತ್ತು.
ಕೃಷಿ ಮಾರಾಟ ಇಲಾಖೆಯೂ ಸೇರಿದಂತೆ ಸಹಕಾರ ಇಲಾಖೆಯಡಿ ಬರುವ ವಿವಿಧ ಸ್ವ ಸಹಾಯ ಸಂಘಗಳು, ಸಹಕಾರ ಬ್ಯಾಂಕ್‌ಗಳು, ಬೆಂಬಲ ಬೆಲೆ ಯೋಜನೆ ಸೇರಿದಂತೆ ಇನ್ನಿತರೆ ಯೋಜನೆಗಳಿಗೆ ಸಂಬಂಧಿಸಿದಂತೆ 2021ರ ಅಕ್ಟೋಬರ್ 21ರಂದು ಸಹಕಾರ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ನಡೆದಿದ್ದ ಸಭೆಯಲ್ಲಿ ಆವರ್ತ ನಿಧಿಗೆ 2,500 ಕೋಟಿ ರು. ಬಾಕಿ ಬರಬೇಕಿದೆ ಎಂದು ಕೃಷಿ ಮಾರಾಟ ಇಲಾಖೆಯ ನಿರ್ದೇಶಕರು ತಿಳಿಸಿದ್ದರು.
‘ಬೆಂಬಲ ಬೆಲೆ ಯೋಜನೆಯಡಿಯಲ್ಲಿ ಆವರ್ತ ನಿಧಿಯಡಿ ಪ್ರಸ್ತುತ 189 ಕೋಟಿಗಳಿದ್ದು, ವಿವಿಧ ಸಂಗ್ರಹಣಾ ಸಂಸ್ಥೆಗಳಿಂದ ಆವರ್ತ ನಿಧಿಗೆ ಬರಬೇಕಾಗಿರುವ ಬಾಕಿ 2,500 ಕೋಟಿಗಳಿರುತ್ತವೆ,’ ಎಂದು ಕೃಷಿ ಮಾರಾಟ ಇಲಾಖೆಯ ಹಿಂದಿನ ನಿರ್ದೇಶಕ ಕರಿಗೌಡ ಅವರು ಸಭೆಗೆ ಮಾಹಿತಿ ಒದಗಿಸಿದ್ದರು.
ಕೃಷಿಗೆ ಹಾನಿ ಉಂಟಾದಾಗ ಕೃಷಿಕರಿಗೆ ಪ್ರಯೋಜನವಾಗಲು ಆವರ್ತ ನಿಧಿ ಪ್ರಾರಂಭಿಸಲಾಗಿತ್ತು. ಆವರ್ತ ನಿಧಿ ಮೊತ್ತವನ್ನು ಹೆಚ್ಚಿಸುವುದು ಸೇರಿದಂತೆ ಮುಂತಾದ ಅಂಶಗಳನ್ನು ಸಮಗ್ರ ಖರೀದಿ ನೀತಿಯಲ್ಲಿ ಅಳವಡಿಸಿಕೊಳ್ಳಲು ಕೃಷಿ ಬೆಲೆ ಆಯೋಗವು ಶಿಫಾರಸು ಮಾಡಿತ್ತು.
ಆವರ್ತ ನಿಧಿಯಲ್ಲಿರುವುದು ಕೇವಲ 189 ಕೋಟಿ, ಬಾಕಿ ಬರಬೇಕಿದೆ 2,500 ಕೋಟಿ
ರೈತರ ಉತ್ಪನ್ನ ಖರೀದಿಗಾಗಿಯೇ ಇಟ್ಟಿದ್ದ ಆವರ್ತ ನಿಧಿ ಎಲ್ಲಿ ಹೋಯಿತು? ಅದನ್ನು ಯಾತಕ್ಕೆ ಬಳಕೆ ಮಾಡಲಾಯಿತು ಎಂದು ಇತ್ತೀಚೆಗಷ್ಟೇ ರೈತ ಸಂಘದ ಮುಖಂಡರು ಪ್ರಶ್ನೆ ಮಾಡಿದ್ದರು. ರೈತರು ಬೆಳೆದಿರುವ ಉತ್ಪನ್ನ ಖರೀದಿ ಮಾಡದಿದ್ದರೆ ಹೇಗೆ? ಈಗಾಗಲೇ ರೈತರು ತಮ್ಮ ಉತ್ಪನ್ನಗಳನ್ನು ಅಗ್ಗದ ದರಕ್ಕೆ ಮಾರಿದ್ದಾರೆ. ಬೆಂಬಲ ಬೆಲೆ ಕೇಂದ್ರ ತೆರೆಯದಿದ್ದರೂ ಪರವಾಗಿಲ್ಲ, ರೈತರ ಖಾತೆಗೆ ನೇರವಾಗಿ ಹಣವನ್ನಾದರೂ ಜಮಾ ಮಾಡಿ ಎಂದು ಒತ್ತಾಯಿಸಿದ್ದರು.
ಸೂರ್ಯಕಾಂತಿ ಹಾಗೂ ಶೇಂಗಾ ಎಣ್ಣೆಕಾಳುಗಳ ಬೆಲೆ ಕುಸಿತಕ್ಕೊಳಾಗಿರುವ ಹಿನ್ನೆಲೆಯಲ್ಲಿ ಬೆಂಬಲ ಬೆಲೆ ಅಡಿಯಲ್ಲಿ ಖರೀದಿಸಬೇಕು ಎಂದು 2021ರ ಸೆಪ್ಟಂಬರ್ 18ರಂದು ಕರ್ನಾಟಕ ಕೃಷಿ ಬೆಲೆ ಆಯೋಗವು ಸಹಕಾರ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗೆ ಪತ್ರ ಬರೆದಿದ್ದನ್ನು ಸ್ಮರಿಸಬಹುದು.
ಇನ್ನು, ಕಾಯಕ ಯೋಜನೆಯನ್ನು ಸ್ವಸಹಾಯ ಗುಂಪುಗಳ ಸಾಲಗಳ ಮೇಲಿನ ಬಡ್ಡಿ ಸಹಾಯಧನ ಯೋಜನೆಯಲ್ಲಿ ವಿಲೀನಗೊಳಿಸಲಾಗಿದೆ. ಬಡವರ ಬಂಧು ಯೋಜನೆಯನ್ನು ಪ್ರಸಕ್ತ ಸಾಲಿನಲ್ಲಿ ಅಂತ್ಯಗೊಳಿಸಲಾಗಿದೆ. ಹೀಗಾಗಿ ಹಳೇ ಬಿಲ್ಲುಗಳಿಗೆ ಮಾತ್ರ ಅನುದಾನವನ್ನು ಬಡವರ ಬಂಧು ಯೋಜನೆಯಡಿ ಬಿಡುಗಡೆ ಮಾಡುತ್ತಿರುವುದು ನಡವಳಿಯಿಂದ ಗೊತ್ತಾಗಿದೆ.
ಅದೇ ರೀತಿ ಸಹಕಾರಿ ಸಂಸ್ಥೆಗಳಲ್ಲಿ ವಿವಿಧ ವರ್ಗದ ಜನರಿಗೆ ಸದಸ್ಯರನ್ನಾಗಿ ನೋಂದಾಯಿಸಲು ಒಟ್ಟು 100 ಕೋಟಿ ರು. ಅನುದಾನ ಬಿಡುಗಡೆ ಮಾಡಿದೆ. ಡಿಸಿಸಿ ಬ್ಯಾಂಕ್‌ಗಳಲ್ಲಿ ಷೇರು ಬಂಡವಾಳ ಹೂಡಿಕೆ ಯೋಜನೆಯಡಿ 210 ಲಕ್ಷ ರು. ಬಿಡುಗಡೆಯಾಗಿದೆ. ಸಂಬಂಧಪಟ್ಟ ಬ್ಯಾಂಕ್‌ಗಳಿಗೆ ತಲಾ 10 ಲಕ್ಷ ರು. ಬಿಡುಗಡೆ ಮಾಡಲು ಇಲಾಖೆ ಕ್ರಮ ವಹಿಸಿದೆ.
ಈರುಳ್ಳಿ, ಟೊಮ್ಯಾಟೋ, ಆಲೂಗಡ್ಡೆ ಇತ್ಯಾದಿ ಉತ್ಪನ್ನಗಳನ್ನು ಗೋದಾಮಿನಲ್ಲಿ ಶೇಖರಣೆ ಮಾಡುವ ಬದಲು ಶಾಲಾ ಮಕ್ಕಳ ಉಪಯೋಗಕ್ಕಾಗಿ ಬಳಸಿಕೊಳ್ಳುವ ಸಂಬಂಧ ಪರಿಶೀಲಿಸಿ ಯೋಜನೆ ರೂಪಿಸಲು ಕೃಷಿ ಮಾರಾಟ ಇಲಾಖೆಗೆ ಸಭೆಯಲ್ಲಿ ಸೂಚಿಸಿದೆ ಎಂದು ತಿಳಿದು ಬಂದಿದೆ.