Tuesday | June 30, 2026 |

ಪಿಂಚಣಿ ಮೊತ್ತ ಮರುಸ್ಥಾಪನೆ; ಇಡಿಗಂಟು ಮೊತ್ತಕ್ಕಾಗಿ ಆರ್ಥಿಕ ಹೊರೆ, ಸಾರ್ವಜನಿಕ ಹಿತಾಸಕ್ತಿಗೆ ವಿರುದ್ಧ ನೆಪ, ನಿವೃತ್ತ ಸರ್ಕಾರಿ ನೌಕರರಿಗೆ ‘ಕೈ’ ಕೊಟ್ಟ ಸರ್ಕಾರ

ಬೆಂಗಳೂರು; ಪರಿವರ್ತಿತ ಪಿಂಚಣಿ ಮೌಲ್ಯದ ವಸೂಲಿಗೆ ಅವಧಿ ಪೂರ್ಣಗೊಳ್ಳುವ ಮೊದಲೇ ಈ ವಸೂಲಾತಿ ನಿಲ್ಲಿಸಬೇಕು ಮತ್ತು ಮರು ಸ್ಥಾಪನಾ ಅವಧಿ ಕಡಿತಗೊಳಿಸಿರುವ ಉದಾಹರಣೆಗಳನ್ನು ಅನುಸರಿಸಬೇಕು ಎಂದು ನಿವೃತ್ತ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರ ಸಂಘಗಳ ಬೇಡಿಕೆಯನ್ನು ರಾಜ್ಯ ಸರ್ಕಾರವು ಒಪ್ಪಿಕೊಂಡಿಲ್ಲ.

ಅಲ್ಲದೇ ಪಿಂಚಣಿಯ ಪರಿವರ್ತನೆಯಿಂದ ಪಾವತಿಸುವ ಇಡಿಗಂಟು ಮೊತ್ತಕ್ಕಾಗಿ ಸರ್ಕಾರವು ಸಾಕಷ್ಟು ಆರ್ಥಿಕ ಹೊರೆ ಎದುರಿಸುತ್ತಿದೆ ಎಂದು ಸಮಜಾಯಿಷಿ ನೀಡಿದೆ. ಈ ಸಂಬಂಧ ಆರ್ಥಿಕ ಇಲಾಖೆಯು 2026ರ ಫೆ.25ರಂದೇ ಸುತ್ತೋಲೆ ಹೊರಡಿಸಿದೆ.
ಇದರ ಪ್ರತಿಯು ದಿ ಫೈಲ್‌ ಗೆ ಲಭ್ಯವಾಗಿದೆ.

ಪರಿವರ್ತಿತ ಪಿಂಚಣಿ ಮೌಲ್ಯದ ವಸೂಲಿಗಾಗಿ ಕರ್ನಾಟಕ ನಾಗರಿಕ ಸೇವಾ ನಿಯಮಗಳ ನಿಯಮ 376 (14)ರಡಿ ನಿಗದಿಪಡಿಸಿರುವ ಅವಧಿಯನ್ನು ಕಡಿತಗೊಳಿಸುವ ಕುರಿತು ನಿವೃತ್ತ ಸರ್ಕಾರಿ ನೌಕರರು ಸರ್ಕಾರಕ್ಕೆ ಹಲವು ಮನವಿಗಳನ್ನು ಸಲ್ಲಿಸಿದ್ದರು. ಈ ಮನವಿಗಳನ್ನು ಪರಿಶೀಲಿಸಿದ್ದ ಆರ್ಥಿಕ ಇಲಾಖೆಯು ‘ಚಾಲ್ತಿಯಲ್ಲಿರುವ ಶಾಸನಬದ್ಧ ನಿಯಮಗಳು, ನ್ಯಾಯಾಂಗ ತೀರ್ಪುಗಳು, ದೃಢವಾದ ಆರ್ಥಿಕ ತತ್ವಗಳು ಮತ್ತು ಸಾರ್ವಜನಿಕ ಹಿತಾಸಕ್ತಿಗೆ ವ್ಯತಿರಿಕ್ತವಾಗಿರು ಈ ಬೇಡಿಕೆಗಳನ್ನು ಒಪ್ಪಲು ಸಾಧ್ಯವಿಲ್ಲ,’ ಎಂದು ಪ್ರತಿಪಾದಿಸಿದೆ.

ಈ ಸುತ್ತೋಲೆಗೆ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರು ಅನುಮೋದಿಸಿದ್ದರು. ಇದನ್ನು ಬದಲಾಯಿಸಬೇಕು ಎಂದು ನಿವೃತ್ತ ಸರ್ಕಾರಿ ನೌಕರರು ಹಾಲಿ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರ ಕಚೇರಿಯ ಕದ ತಟ್ಟಿದ್ದಾರೆ.

ಪರಿವರ್ತಿತ ಪಿಂಚಣಿ ಇಡಿಗಂಟು ಮೊತ್ತವನ್ನು ಹೇಗೆ ಪಡೆಯಬಹುದು?

ಕರ್ನಾಟಕ ನಾಘರಿಕ ಸೇವಾ ನಿಯಮಗಳು 376 ಪರಿವರ್ತಿತ ಪಿಂಚಣಿಗೆ ಪರಿವರ್ತನೆಗೆ ಸಂಬಂಧಿಸಿದೆ. ಸರ್ಕಾರಿ ನೌಕರರು ನಿವೃತ್ತಿ ಸಂದರ್ಭದಲ್ಲಿ ತಮ್ಮ ಪಿಂಚಣಿಯ ಗರಿಷ್ಠ ಮೂರನೇ ಒಂದು ಭಾಗದವರೆಗೆ ಪರಿವರ್ತನೆ ಮಾಡಿಕೊಂಡು ನಿಯಮಗಳಡಿ ನಿಗದಿಪಡಿಸಿರುವ ಪರಿವರ್ತನೆ ಪ್ರಕಾರ ಪರಿವರ್ತಿತ ಪಿಂಚಣಿಯ ಇಡಿಗಂಟು ಪಡೆಯಬಹುದು.

ನಿಯಮ 376 (14)ರಲ್ಲಿ ಪಿಂಚಣಿಯ ಪರಿವರ್ತಿತ ಭಾಗವನ್ನು ಪರಿವರ್ತನೆಯ ದಿನಾಂಕದಿಂದ ಹದಿನೈದು ವರ್ಷಗಳ ಅವಧಿ ಮುಗಿದ ನಂತರದ ತಿಂಗಳ ಮೊದಲ ದಿನದಿಂದ ಮರುಸ್ಥಾಪಿಸಬೇಕು ಎಂದು ಷರತ್ತು ವಿಧಿಸಿದೆ. ಈ ವಿಧಾನವು ಹಲವು ದಶಕಗಳಿಂದಲೂ ಜಾರಿಯಲ್ಲಿದೆ. ರಾಜ್ಯದಲ್ಲಿ ಪಿಂಚಣಿ ನಿರ್ವಹಣೆಯನ್ನು ನಿಯಂತ್ರಿಸುವ ಕಾನೂನುಬದ್ಧ ಚೌಕಟ್ಟಿನ ಭಾಗವಾಗಿದೆ. ಪಿಂಚಣಿಯ ಪರಿವರ್ತಿತ ಭಾಗವನ್ನು ಮರು ಸ್ಥಾಪಿಸಲು 15 ವರ್ಷಗಳ ಅವಧಿ ನಿಗದಿಪಡಿಸಿರುವುದು ಪಿಂಚಣಿದಾರರ ಹಿತಾಸಕ್ತಿ ಇದೆ. ಅಲ್ಲದೇ ಸರ್ಕಾರದ ಆರ್ಥಿಕ ಸ್ಥಿರತೆಯ ನಡುವಿನ ಸಮತೋಲನವನ್ನು ಕಾಪಾಡುವ ಆರ್ಥಿಕ ಮತ್ತು ಆಡಳಿತಾತ್ಮಕ ಪರಿಗಣನೆಗಳ ಮೇಲೆ ಆಧಾರಿತ ಕ್ರಮವಾಗಿದೆ ಎಂದು ಆರ್ಥಿಕ ಇಲಾಖೆಯು ವಿವರಿಸಿರುವುದು ಸುತ್ತೋಲೆಯಿಂದ ತಿಳಿದು ಬಂದಿದೆ.

 

 

ಮನವಿಗಳಲ್ಲಿನ ವಾದಾಂಶವೇನು?

ಸರಳ ಬಡ್ಡಿ ಲೆಕ್ಕಾಚಾರದ ಪ್ರಕಾರ ಬಡ್ಡಿಯೊಂದಿಗೆ ಪರಿವರ್ತಿತ ಮೊತ್ತವೂ 15 ವರ್ಷಗಳ ಮುನ್ನವೇ ವಸೂಲಾಗುತ್ತದೆ ಎಂದು ಹೇಳಲಾಗಿದೆ. ಅದರ ನಂತರದ ವಸೂಲಿ ಹೆಚ್ಚುವರಿ ವಸೂಲಿಯಾಗಿದೆ ಎಂದು ತಿಳಿಸಲಾಗಿದೆ. ಆಯಷ್ಯಾವಧಿ ಗಣನೀಯವಾಗಿ ಹೆಚ್ಚಿರುವುದರಿಂದ ಮರಣಾಂಶದ ಅಪಾಯ ಕಡಿಮೆಯಾಗಿದೆ. ಸರಳ ಬಡ್ಡಿ ಅನ್ವಯಿಸಿ 15 ವರ್ಷ ಪೂರೈಸಿದ ಪಿಂಚಣಿದಾರರಿಗ ಪಿಂಚಣಿಯ ಪರಿವರ್ತಿತ ಮೌಲ್ಯವನ್ನು ಮರು ಪಾವತಿಸಬೇಕು ಎಂದು ಕೋರಲಾಗಿದೆ. ಪರಿವರ್ತನೆ ಮೌಲ್ಯ ಮತ್ತು ಮರು ಸ್ಥಾಪನೆ ಅವಧಿಗೆ ಯಾವುದೇ ಕ್ರಮಬದ್ಧ ಆಧಾರವಿಲ್ಲ ಎಂದು ತಿಳಿಸಿದೆ.

ನ್ಯಾಯಾಂಗದ ಪೂರ್ವ ನಿದರ್ಶನಗಳೇನು?

ಪಿಂಚಣಿಯ ಪರಿವರ್ತಿತ ಮೌಲ್ಯವನ್ನು ವಸೂಲು ಮಾಡುವ ಅವಧಿಯನ್ನು ಪಿಂಚಣಿದಾರರು ಪ್ರಶ್ನಿಸಿದ್ದಾರೆ. ಆದರೆ ಈ ಬಗ್ಗೆ ಸರ್ವೋಚ್ಛ ನ್ಯಾಯಾಲಯ ಮತ್ತು ರಾಜ್ಯಗಳ ಉಚ್ಛ ನ್ಯಾಯಾಲಯಗಳು ಅನೇಕ ಬಾರಿ ಪರಿಶೀಲನೆ ಮಾಡಿವೆ ಮತ್ತು ಹಲವು ತೀರ್ಮಾನಗಳನ್ನು ನೀಡಿವೆ ಎಂದು ಆರ್ಥಿಕ ಇಲಾಖೆಯು ಪ್ರಮುಖ ತೀರ್ಪುಗಳನ್ನು ಸುತ್ತೋಲೆಯಲ್ಲಿ ಉಲ್ಲೇಖಿಸಿದೆ.

ಶೀಲಾದೇವಿ ಮತ್ತಿತರರು ವಿರುದ್ಧ ಪಂಜಾಬ್ ರಾಜ್ಯ ಮತ್ತಿತರರು ವಿರುದ್ಧ ಪ್ರಕರಣದಲ್ಲಿ ಪಂಜಾಬ್ ಹರಿಯಾಣ ಉಚ್ಛ ನ್ಯಾಯಾಲಯವು ರಿಟ್‌ ಅರ್ಜಿ (ಸಂಖ್ಯೆ 9426/2023) ಹಾಗೂ 379 ಸಂಬಂಧಿತ ಅರ್ಜಿಗಳನ್ನು 2024ರ ನವೆಂಬರ್‍‌ 27 ಮತ್ತು ಡಿಸೆಂಬರ್‍‌4ರಂದು ಸಮಗ್ರವಾಗಿ ಪರಿಶೀಲನೆ ನಡೆಸಿತ್ತು. ನಂತರ ಅವುಗಳನ್ನು ತಳ್ಳಿ ಹಾಕಿತ್ತು.

 

 

ಭಾರತದ ಸರ್ವೋಚ್ಛ ನ್ಯಾಯಾಲಯವು ಸಹ 2025ರ ಏಪ್ರಿಲ್‌ 7ರಂದು ಪಂಜಾಬ್ ಮತ್ತು ಹರಿಯಾಣ ಉಚ್ಛ ನ್ಯಾಯಾಲಯದ ತೀರ್ಪಿನ ವಿರುದ್ಧ ಸಲ್ಲಿಸಲಾದ ಹಲವು ಮೇಲ್ಮವನಿಗಳನ್ನು ತಳ್ಳಿ ಹಾಕಿತ್ತು. ಅಂತಿಮವಾಗಿ ಪಂಜಾಬ್‌ ರಾಜ್ಯದ ಪರವಾಗಿ ಅಂತಿಮಗೊಳಿಸಿತ್ತು. ಇದೇ ವಿಷಯದ ಕುರಿತು ಈ ಹಿಂದೆಯೂ ಸಹ ನಿವೃತ್ತ ಐಪಿಎಸ್‌ ಅಧಿಕಾರಿಗಳು ಭಾರತ ಸರ್ಕಾರದ ವಿರುದ್ಧ ಪ್ರಕರಣದಲ್ಲಿ ದೆಹಲಿ ಉಚ್ಛ ನ್ಯಾಯಾಲಯವೂ ಸಹ ಈ ಮನವಿಗಳನ್ನು ತಳ್ಳಿ ಹಾಕಿತ್ತು. 2019ರ ಏಪ್ರಿಲ್ 15ರಂದೇ ಸರ್ವೋಚ್ಛ ನ್ಯಾಯಾಲಯವು ನೀಡಿದ್ದ ತೀರ್ಪಿನಲ್ಲಿ ಮರು ಸ್ಥಾಪನೆ ಅವಧಿಯನ್ನು 15 ವರ್ಷಗಳವರೆಗೆ ನಿಗದಿಪಡಿಸಿದ್ದನ್ನು ಎತ್ತಿ ಹಿಡಿದಿತ್ತು. ಈ ವಿಷಯವು ಈಗಾಗಲೇ ನ್ಯಾಯಾಂಗದಿಂದ ಅಂತಿಮವಾಗಿ ತೀರ್ಮಾನಿಸಿದ ವಿಷಯವಾಗಿದೆ ಎಂದು ಸುತ್ತೋಲೆಯಲ್ಲಿ ವಿವರಿಸಿದೆ.

ಹೀಗಾಗಿ ಪಿಂಚಣಿದಾರರು ತಮ್ಮ ಮನವಿಗಳಲ್ಲಿ ಪ್ರಸ್ತಾಪಿಸಿರುವ ಈ ಅಂಶಗಳನ್ನು ಈಗಾಗಲೇ ಸಂವಿಧಾನಿಕ ನ್ಯಾಯಾಲಯಗಳು ಹಲವು ಬಾರಿ ಪರಿಶೀಲಿಸಿ ತಿರಸ್ಕರಿಸಿವೆ ಎಂದು ಹೇಳಿದೆ.

ಪರಿವರ್ತಿತ ಪಿಂಚಣಿ ನಿಯಮಗಳ ನಿರ್ವಹಣೆ- ಪರಿಗಣನೆಗೆ ಅಂಶಗಳೇನಿವೆ?

ಪಿಂಚಣಿಯ ಪರಿವರ್ತನೆ ಸಂಪೂರ್ಣವಾಗಿ ಆಯ್ಕೆ ಆಧರಿತ ಮತ್ತು ಸ್ವಯಂ ಪ್ರೇರಿತವಾಗಿದೆ. ಯಾವುದೇ ಸರ್ಕಾರಿ ನೌಕರನ್ನು ಅವರ ಪಿಂಚಣಿಯನ್ನು ಪರಿವರ್ತಿಸಲು ಒತ್ತಾಯಿಸುವುದಿಲ್ಲ. ಪಿಂಚಣಿದಾರರು ಪಿಂಚಣಿ ಪರಿವರ್ತನೆಯನ್ನು ನಿರಾಕರಿಸಿ ಪೂರ್ಣ ಮಾಸಿಕ ಪಿಂಚಣಿ ಪಡೆಯಬಹುದು. ಅದೇ ರೀತಿ ಪಿಂಚಣಿ ಪರಿವರ್ತಿಸಲು ನಿಗದಿಪಡಿಸಿದ ಗರಿಷ್ಠ ಮಿತಿಗೊಳಪಟ್ಟು ಪಿಂಚಣಿದಾರರು ಇಚ್ಛಾನುಸಾರ ಪಿಂಚಣಿಯ ಯಾವುದೇ ಭಾಗವನ್ನು ಪರಿವರ್ತಿಸಬಹುದು. ನಿವೃತ್ತಿಯ ನಂತರದ ದಿನಾಂಕಕ್ಕೆ ನಿರ್ಧಾರವನ್ನು ಮುಂದೂಡಬಹುದು. ಪಿಂಚಣಿ ಪರಿವರ್ತನೆ ಆಯ್ಕೆ ಮಾಡುವಾಗ ಪಿಂಚಣಿದಾರರು 15 ವರ್ಷಗಳ ಮರುಸ್ಥಾಪನೆ ಅವಧಿ ಸೇರಿದಂತೆ ಎಲ್ಲಾ ಷರತ್ತುಗಳನ್ನು ಒಪ್ಪಿಕೊಂಡು ಆಯ್ಕೆ ಮಾಡುತ್ತಾರೆ.

‘ಆದ್ದರಿಂದ ಸ್ವಯಂಪ್ರೇರಿತವಾಗಿ ಇಡಿಗಂಟು ಮೊತ್ತದ ಲಾಭವನ್ನು ಪಡೆದುಕೊಂಡ ನಂತರ ನಿಯಮಗಳಲ್ಲಿನ ನಿಬಂಧನೆಗಳನ್ನು ಬದಲಾಯಿಸುವಂತೆ ಕೋರುವುದು ಸಮಂಜಸವಲ್ಲ,’ ಎಂದು ಆರ್ಥಿಕ ಇಲಾಖೆಯು ಪ್ರತಿಪಾದಿಸಿರುವುದು ಸುತ್ತೋಲೆಯಿಂದ ತಿಳಿದು ಬಂದಿದೆ.

ಸರಳ ಬಡ್ಡಿ ಲೆಕ್ಕಾಚಾರ ಸಮಂಜಸವಲ್ಲ

ಪಿಂಚಣಿದಾರರು ಸರಳ ಬಡ್ಡಿ ಲೆಕ್ಕಾಚಾರ ಮಾಡಿ ವಸೂಲಿ ಅವಧಿಯನ್ನು 10 ವರ್ಷ 8 ತಿಂಗಳು ಅಥವಾ 11 ವರ್ಷ 3 ತಿಂಗಳು ಅಥವಾ 12 ವರ್ಷಗಳಿಗೆ ನಿಗದಿಪಡಿಸಬೇಕು ಎಂದ ಕೋರಿದ್ದರು. ಆದರೆ ನಿಯಮ 376 (14)ರಲ್ಲಿನ ಅವಧಿಯು ಸರಳ ಬಡ್ಡಿ ಲೆಕ್ಕಾಚಾರದ ಅನ್ವಯ ನಿರ್ಧರಿತ ಅವಧಿಯಾಗಿಲ್ಲ.

 

 

ಸರಳ ಬಡ್ಡಿ ಅನ್ವಯಿಸುವ ಲೆಕ್ಕಾಚಾರಗಳು ಇಡಿಗಂಟು ಮೊತ್ತದ ಹೂಡಿಕೆ ಆದಾಯವನ್ನು ಪರಿಗಣಿಸುವುದಿಲ್ಲ. ತೆರಿಗೆ ವಿನಾಯಿತಿಯನ್ನು ಕಡೆಗಣಿಸುತ್ತವೆ. ಸರಳ ಬಡ್ಡಿ ಲೆಕ್ಕಾಚಾರ ಮಾಡಿದಲ್ಲಿ ಅದು ಹಣದ ಮೌಲ್ಯವು ಕಾಲಕ್ರಮೇಣ ಕಡಿಮೆಯಾಗುವುದನ್ನು ಕಡೆಗಣಿಸಿದಂತಾಗುತ್ತದೆ. ಇದು ಮರಣಾಂಶ ಹಾಗೂ ಇತರೆ ಅಪಾಯಗಳನ್ನು ಪರಿಗಣಿಸುವುದಿಲ್ಲ. ಸರ್ಕಾರದ ಯಾವುದೇ ನೀತಿಯು ಸಾರ್ವಜನಿಕ ಹಿತಾಸಕ್ತಿಯಿಂದ ಕೂಡಿರಬೇಕು. ಸರಳ ಬಡ್ಡಿ ಲೆಕ್ಕಾಚಾರ ಮಾಡುವುದರಿಂದ ರಾಜ್ಯದ ಬೊಕ್ಕಸದ ಮೇಲೆ ವ್ಯತಿರಿಕ್ತ ಹಣಕಾಸು ಪರಿಣಾಮ ಉಂಟಾಗುತ್ತದೆ. ಈ ಅಂಶಗಳ್ನು ಪಿಂಚಣಿದಾರರು ತಮ್ಮ ಮನವಿಗಳಲ್ಲಿ ಕಡೆಗಣಿಸಿದ್ದಾರೆ ಎಂದು ಆರ್ಥಿಕ ಇಲಾಖೆಯು ತನ್ನ ಸುತ್ತೋಲೆಯಲ್ಲಿ ಪ್ರತಿಪಾದಿಸಿದೆ.

ಬಡ್ಡಿಯೊದಿಗೆ ಹಣ ವಸೂಲಿಯಿಲ್ಲ

ಸರ್ಕಾರವು ಬಡ್ಡಿಯೊದಿಗೆ ಹಣ ವಸೂಲು ಮಾಡುತ್ತಿಲ್ಲ ಎಂದು ಹೇಳಿರುವ ಆರ್ಥಿಕ ಇಲಾಖೆಯು ಪರಿವರ್ತನೆ ಸಮಯದಲ್ಲಿ ಇಡಿಗಂಟು ಮೊತ್ತವನ್ನು ಈಗಾಗಲೇ ನೀಡಿರುವುದರಿಂದ 15 ವರ್ಷಗಳ ಆಲ ಪಿಂಚಣಿಯ ಪರಿವರ್ತಿತ ಭಾಗವನ್ನು ಪಿಂಚಣಿದಾರರಿಗೆ ನೀಡುವುದಿಲ್ಲ ಎಂದು ಹೇಳಿದೆ. ಪಿಂಚಣಿಯ ಪರಿವರ್ತನೆಯಿಂದ ಪಾವತಿಸುವ ಇಡಿಗಂಟು ಮೊತ್ತಕ್ಕಾಗಿ ಸರ್ಕಾರ ಸಾಕಷ್ಟು ಆರ್ಥಿಕ ಹೊರೆ ಎದುರಿಸುತ್ತಿದೆ ಎಂದು ವಿವರಿಸಿದೆ.

ಪಿಂಚಣಿ ನೀತಿ ಸರ್ಕಾರದ ಸಾಮಾನ್ಯ ನೀತಿ

ನ್ಯಾಯಾಂಗ ಪರಿಶೀಲನೆಯು ನಿಯಮಗಳಿಗೆ ವ್ಯತಿರಿಕ್ತ ಕ್ರಮವನ್ನು ತಳ್ಳಿಹಾಕುವುದಕ್ಕೆ ಮಾತ್ರ ಸೀಮಿತಗೊಂಡಿದೆ. ಪಿಂಚಣಿ ಮತ್ತು ಪರಿವರ್ತಿತ ಪಿಂಚಣಿ ಇವು ಸರ್ಕಾರದ ಸಾಮಾನ್ಯ ನೀತಿ ವಿಷಯಗಳಾಗಿದೆ. ಇದರಲ್ಲಿ ನ್ಯಾಯಾಲಯಗಳು ಹಸ್ತಕ್ಷೇಪ ಮಾಡುವುದಿಲ್ಲ ಎಂದು ನ್ಯಾಯಾಲಯಗಳು ಹಲವು ಬಾರಿ ಹೇಳಿವೆ. ನಿಯಮ 376 (14) ರಲ್ಲಿ ನಿಗದಿಪಡಿಸಿರುವ 15 ವರ್ಷದ ಅವಧಿ ದೃಢವಾದ ಹಣಕಾಸು ಮತ್ತು ಆಡಳಿತಾತ್ಮಕ ತತ್ವಗಳ ಮೇಲೆ ಅಧಾರಿತವಾಗಿದೆ ಎಂದು ತನ್ನ ನಿಲುವನ್ನು ಬಲಪಡಿಸಿಕೊಂಡಿರುವುದು ಗೊತ್ತಾಗಿದೆ.

376 (14) ಸಂವಿಧಾನಕ್ಕೆ ವಿರುದ್ಧವಾಗಿಲ್ಲ

ಕೆಲವು ಪಿಂಚಣಿದಾರರು ಇತರ ರಾಜ್ಯ ಸರ್ಕಾರಗಳು ಮರುಸ್ಥಾಪನಾ ಅವಧಿಯನ್ನು ಕಡಿತಗೊಳಿಸಿರುವ ಉದಾಹರಣೆಗಳನ್ನು ಪೂರ್ವ ನಿದರ್ಶನಗಳನ್ನಾಗಿ ಉಲ್ಲೇಖಿಸಿದ್ಧಾರೆ. ಕರ್ನಾಟಕವೂ ಅದನ್ನು ಅನುಸರಿಸಬೇಕು ಎಂದು ಮನವಿ ಮಾಡಿದ್ದಾರೆ. ಆದರೆ ರಾಜ್ಯ ಸರ್ಕಾರವು ಇನ್ನು ಒಪ್ಪಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ. ಏಕೆಂದರೇ ಕರ್ನಾಟಕ ರಾಜ್ಯವು ತನ್ನ ವಿಶಿಷ್ಟ ಆರ್ಥಿಕ ಸ್ಥಿತಿ ಮತ್ತು ಇತರ ಸಂಬಂಧಿತ ಅಂಶಗಳನ್ನು ಅಧರಿಸಿ ತನ್ನದೇ ನೀತಿಗಳನ್ನು ರೂಪಿಸಲು ಸಕ್ಷಮವಾಗಿದೆ. ನಾಗರಿಕ ಸೇವಾ ನಿಯಮ 376 (14) ಏಕಪಕ್ಷೀಯ, ಅಸಂಗತ ಅಥವಾ ಸಂವಿಧಾನಕ್ಕೆ ವಿರುದ್ಧವಾಗಿದೆ ಎಂದು ಯಾವುದೇ ನ್ಯಾಯಾಲಯವೂ ಅವಲೋಕಿಸಿಲ್ಲ,’ ಎಂದು ವಿವರಿಸಿದೆ.

 

 

ಈ ಎಲ್ಲಾ ಅಂಶಗಳ ಹಿನ್ನೆಲೆಯಲ್ಲಿ ಸರ್ಕಾರಕ್ಕೆ ಬಂದಿರುವ ಎಲ್ಲಾ ನಿಯಮಗಳನ್ನು ಕೂಲಂಕಷವಾಗಿ ಪರಿಶೀಲಿಸಿರುವ ಆರ್ಥಿಕ ಇಲಾಖೆಯು ‘ ಚಾಲ್ತಿಯಲ್ಲಿರುವ ಶಾಸನಬದ್ಧ ನಿಯಮಗಳು, ನ್ಯಾಯಾಂಗ ತೀರ್ಪುಗಳು, ದೃಢವಾದ ಆರ್ಥಿಕ ತತ್ವಗಳು ಮತ್ತು ಸಾರ್ವಜನಿಕ ಹಿತಾಸಕ್ತಿಗೆ ವ್ಯತಿರಿಕ್ತವಾಗಿರುವ ಈ ಬೇಡಿಕೆಗಳನ್ನು ಒಪ್ಪಲು ಸಾಧ್ಯವಿಲ್ಲ,’ ಎಂದು ತಳ್ಳಿ ಹಾಕಿದೆ.

ಸರ್ಕಾರದ ಸೂಚನೆಯೇನು?

ಪರಿವರ್ತಿತ ಪಿಂಚಣಿಯ ಮೊತ್ತವನ್ನು ವಸೂಲಿ ಮಾಡುವಲ್ಲಿ ಕರ್ನಾಟಕ ನಾಗರಿಕ ಸೇವಾ ನಿಯಮಾವಳಿಗಳ ನಿಯಮ 376 (14) ದಲ್ಲಿನ ಹಾಲಿ ಪ್ರಚಲಿತ ವಿಧಾನದಲ್ಲಿ ಯಾವುದೇ ಬದಲಾವಣೆಯಿಲ್ಲ ಎಂದು ಹೇಳಿದೆ. ಪಿಂಚಣಿಯ ಪರಿವರ್ತಿತ ಮೊತ್ತವನ್ನು ನಿರ್ಧರಿತ ಅವಧಿ ಪೂರ್ಣಗೊಂಡ ನಂತರವೇ ಮರು ಸ್ಥಾಪಿಸಬೇಕು. ನಿಗದಿತ ಅವಧಿಯ ಮುನ್ನ ಮರುಸ್ಥಾಪನೆಗೆ ಅನುಮತಿ ನೀಡಬಾರದು ಎಂದು ಸೂಚನೆ ನೀಡಿದೆ.

 

 

ಅದೇ ರೀತಿ ಈಗಾಗಲೇ ವಸೂಲಿಯಾದ ಮೊತ್ತವನ್ನು ಮರು ಪಾವತಿಸಬಾರದು. ಪಿಂಚಣಿಯ ಪರಿವರ್ತಿತ ಮೊತ್ತದ ವಸೂಲಿಯನ್ನು ನಿಲ್ಲಿಸುವಂತೆ ಅಥವಾ ವಸೂಲಿಯ ಅವಧಿಯನ್ನು ಕಡಿತಗೊಳಿಸುವಂತೆ ಸ್ವೀಕೃತವಾಗುವ ಮನವಿಗಲನ್ನು ಈ ಸುತ್ತೋಲೆ ಆಧರಿಸಿ ವಿವರವಾದ ಹಿಂಬರಹ ಹೊರಡಿಸಿ ತಿರಸ್ಕರಿಸಬೇಕು ಎಂದು ನಿರ್ದೇಶನ ನೀಡಿದೆ.

ನ್ಯಾಯಾಲಯದ ಮಧ್ಯಂತರ ಆದೇಶಗಳಿಂದ ವಸೂಲಿ ನಿಲ್ಲಿಸಿದ್ದಲ್ಲಿ ಪ್ರಕರಣಗಳು ಅಂತ್ಯಗೊಂಡ ನಂತರ ನ್ಯಾಯಾಲಯದ ತೀರ್ಪಿಗೆ ಒಳಪಟ್ಟು ತಕ್ಷಣವೇ ಪುನರಾರಂಭಿಸಬೇಕು ಎಂದು ಸೂಚಿಸಿರುವುದು ಸುತ್ತೋಲೆಯಿಂದ ಗೊತ್ತಾಗಿದೆ.

Hot this week

ವಿಟಿಯು ಕುಲಪತಿ ವಿರುದ್ಧದ ಎರಡು ರಿಟ್ ಅರ್ಜಿ; ವಿಚಾರಣೆಯಿಂದಲೇ ಹಿಂದೆ ಸರಿದ ನ್ಯಾಯಮೂರ್ತಿ, ಚರ್ಚೆಗೆ ಗ್ರಾಸವಾದ ನಡೆ

ಬೆಂಗಳೂರು;   ವಿಟಿಯು ಹಾಲಿ ಕುಲಪತಿ ಡಾ ಎಸ್‌ ವಿದ್ಯಾಶಂಕರ್ ಅವರ ನೇಮಕಾತಿಯನ್ನು...

ಕೆಟಿಪಿಪಿ ಉಲ್ಲಂಘನೆ, ಅಧಿಕಾರ ದುರ್ಬಳಕೆ, 60 ಲಕ್ಷ ರು ದುರುಪಯೋಗ ಆರೋಪ; ಚೀಫ್‌ ಇಂಜಿನಿಯರ್ ವಿರುದ್ಧ ಚಾರ್ಜ್‌ಶೀಟ್‌

ಬೆಂಗಳೂರು; ಕೆಟಿಪಿಪಿ ಕಾಯ್ದೆ ಉಲ್ಲಂಘನೆ ಮತ್ತು ಅಧಿಕಾರ ದುರ್ಬಳಕೆ ಆರೋಪಕ್ಕೆ ಸಂಬಂಧಿಸಿದಂತೆ...
Please Scan to make Your Contribution

Topics

ವಿಟಿಯು ಕುಲಪತಿ ವಿರುದ್ಧದ ಎರಡು ರಿಟ್ ಅರ್ಜಿ; ವಿಚಾರಣೆಯಿಂದಲೇ ಹಿಂದೆ ಸರಿದ ನ್ಯಾಯಮೂರ್ತಿ, ಚರ್ಚೆಗೆ ಗ್ರಾಸವಾದ ನಡೆ

ಬೆಂಗಳೂರು;   ವಿಟಿಯು ಹಾಲಿ ಕುಲಪತಿ ಡಾ ಎಸ್‌ ವಿದ್ಯಾಶಂಕರ್ ಅವರ ನೇಮಕಾತಿಯನ್ನು...

ಕೆಟಿಪಿಪಿ ಉಲ್ಲಂಘನೆ, ಅಧಿಕಾರ ದುರ್ಬಳಕೆ, 60 ಲಕ್ಷ ರು ದುರುಪಯೋಗ ಆರೋಪ; ಚೀಫ್‌ ಇಂಜಿನಿಯರ್ ವಿರುದ್ಧ ಚಾರ್ಜ್‌ಶೀಟ್‌

ಬೆಂಗಳೂರು; ಕೆಟಿಪಿಪಿ ಕಾಯ್ದೆ ಉಲ್ಲಂಘನೆ ಮತ್ತು ಅಧಿಕಾರ ದುರ್ಬಳಕೆ ಆರೋಪಕ್ಕೆ ಸಂಬಂಧಿಸಿದಂತೆ...

ಮೆಟ್ರೋ ರೈಲು 3ನೇ ಹಂತಕ್ಕೆ 7.02 ಎಕರೆ ಭೂಮಿ; 203.76 ಕೋಟಿ ರುಪಾಯಿ ಭೂ ಪರಿಹಾರ ಕೇಳಿದ ರಕ್ಷಣಾ ಇಲಾಖೆ, ಸರ್ಕಾರದ ನಿಲುವೇನು?

ಬೆಂಗಳೂರು: ಮೆಟ್ರೋ ರೈಲು ಯೋಜನೆಯ ಮೂರನೇ ಹಂತದ ಅನುಷ್ಠಾನಕ್ಕಾಗಿ ಅಗತ್ಯವಿರುವ 7.02...

Related Articles

Popular Categories

error: Content is protected !!