Friday | June 5, 2026 |

ಮತದಾರರ ಪಟ್ಟಿ ಪರಿಷ್ಕರಣೆ; ಹಲವು ಜಿಲ್ಲೆಗಳಲ್ಲಿ ವರ್ಷವಾದರೂ ನೇಮಕವಾಗದ ಬಿಎಲ್‌ಒ, ಕಾಲಕಸವಾಯಿತೇ ಆಯೋಗದ ಪತ್ರ?

ಬೆಂಗಳೂರು; ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಮತ್ತು ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ಚಟುವಟಿಕೆ ಕೈಗೊಳ್ಳಲು ಚುನಾವಣೆ ಆಯೋಗವು ರಾಜ್ಯದಲ್ಲಿ ಈಗಾಗಲೇ ಚಾಲನೆ ನೀಡಿದೆಯಾದರೂ ರಾಜ್ಯದ ಕಲ್ಬುರ್ಗಿ, ಮೈಸೂರು ಸೇರಿದಂತೆ ಇನ್ನಿತರೆ ಕಡೆಗಳಲ್ಲಿ ಮತದಾರರ ನೋಂದಣಾಧಿಕಾರಿಗಳನ್ನು ನೇಮಿಸಿಲ್ಲ.

ಮತದಾರರ ಪಟ್ಟಿ ಪರಿಷ್ಕರಣೆ 2026ಕ್ಕೆ ಸಂಬಂಧಿಸಿದಂತೆ ನೂತನ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಪಕ್ಷದ ಕಚೇರಿಯಲ್ಲಿ  ಕಾರ್ಯಕರ್ತರ ಗಮನ ಸೆಳೆದಿದ್ದರು. ಅಲ್ಲದೇ ಬ್ಲಾಕ್‌ ಮಟ್ಟದಲ್ಲಿ ಬಿಎಲ್‌ಒಗಳ ಜತೆಯಲ್ಲಿ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದು ಎಚ್ಚರಿಕೆಯಿಂದ ಗಮನಿಸಬೇಕು ಎಂದು ಸೂಚಿಸಿದ್ದರು. ಇದರ ಬೆನ್ನಲ್ಲೇ   ಮತದಾರರ ನೋಂದಣಾಧಿಕಾರಿಗಳು ಮತ್ತು ಸಹಾಯಕ ಮತದಾರರ ನೋಂದಣಾಧಿಕಾರಿಗಳನ್ನು ನೇಮಿಸಬೇಕು ಎಂದು 2025ರಲ್ಲೇ ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ ಅವರು ನಗರಾಭಿವೃದ್ಧಿ ಇಲಾಖೆಗೆ ಬರೆದಿದ್ದ  ಪತ್ರವು ಬಹಿರಂಗವಾಗಿದೆ.

ಈ ಪತ್ರ ಬರೆದು ಒಂದ ವರ್ಷವಾದರೂ ಸಹ ಮತದಾರರ ನೋಂದಣಾಧಿಕಾರಿಗಳು ಮತ್ತು ಸಹಾಯಕ ಮತದಾರರ ನೋಂದಣಾಧಿಕಾರಿಗಳನ್ನು ನೇಮಿಸಿಲ್ಲ.  ಇದಕ್ಕೆ ಸಂಬಂಧಿಸಿದಂತೆ ದಿ ಫೈಲ್ ಗೆ ನಗರಾಭಿವೃದ್ದಿ ಇಲಾಖೆಯ (UDD/194/MNE/2025- COMPUTER NUMBER 1807845)  ಟಿಪ್ಪಣಿ ಹಾಳೆಗಳು ಲಭ್ಯವಾಗಿವೆ.

ಎಲ್ಲೆಲ್ಲಿ ಖಾಲಿ ಇವೆ?

ರಾಜ್ಯದ ಕಲ್ಬುರ್ಗಿ ಮಹಾನಗರಪಾಲಿಕೆಯ ಕಲ್ಬುರ್ಗಿ ದಕ್ಷಿಣ, ಮೈಸೂರು ಮಹಾನಗರ ಪಾಲಿಕೆಯ ನರಸಿಂಹರಾಜ ವಿಧಾನಸಭೆ ಕ್ಷೇತ್ರ, ಬೆಳಗಾವಿ ಮಹಾನಗರಪಾಲಿಕೆಯ ಬೆಳಗಾವಿ ಉತ್ತರ ವ್ಯಾಪ್ತಿಯಲ್ಲಿ ಮತದಾರರ ನೋಂದಣಾಧಿಕಾರಿಗಳ ಹುದ್ದೆಯನ್ನು ಭರ್ತಿ ಮಾಡಿಲ್ಲ.  ರಾಜ್ಯದ ಮಹಾನಗರಪಾಲಿಕೆಗಳ ವೃಂದ ಮತ್ತು ನೇಮಕಾಥಿ ನಿಯಮಗಳು 2011ರ ಅನ್ವಯ ರಾಜ್ಯದ ಮಹಾನಗರಪಾಲಿಕೆಗಳಲ್ಲಿ ಉಪ ಆಯುಕ್ತರು (ಆಡಳಿತ) ಹುದ್ದೆಗಳನ್ನು ಕೆಎಎಸ್‌ ಹಿರಿಯ ಶ್ರೇಣಿ, ಕೆಎಂಎಎಸ್ ಪೌರಾಯುಕ್ತರು  ಗ್ರೇಡ್‌ 1 ವೃಂದದಿಂದ, ಕೌನ್ಸಿಲ್‌ ಕಾರ್ಯದರ್ಶಿ/ಸಹಾಯಕ ಆಯುಕ್ತರು (ವಲಯ ಆಯುಕ್ತರು) ಹುದ್ದೆಗಳನ್ನು ಕೆಎಎಸ್‌ ಕಿರಿಯ ಶ್ರೇಣಿ, ಕೆಎಂಎಎಸ್‌ ಪೌರಾಯುಕ್ತರು, ಗ್ರೇಡ್‌ 2 ವೃಂದದಿಂದ ನಿಯೋಜನೆ ಮೇಲೆ ಭರ್ತಿ ಮಾಡಬೇಕು.

 

 

ಮೈಸೂರು ಮಹಾನಗರಪಾಲಿಕೆಯ ಉಪ ಆಯುಕ್ತರಾಗಿ ಈಗಾಗಲೇ ದಾಸೇಗೌಡ ಎಂಬುವರು ಕಾರ್ಯನಿರ್ವಹಿಸುತ್ತಿದ್ದಾರೆ. ಹೀಗಾಗಿ ಈ ಹುದ್ದೆಯು ಖಾಲಿ ಇಲ್ಲ. ಅಲ್ಲದೇ ಮೈಸೂರು ಮಹಾನಗರಪಾಲಿಕೆಯ ನರಸಿಂಹರಾಜ ವಿಧಾನಸಭೆ ಕ್ಷೇತ್ರದಲ್ಲಿ ಸಹಾಯಕ ಮತದಾರರ ನೋಂದಣಾಧಿಕಾರಿ ಹುದ್ದೆಯು ಖಾಲಿ ಇದೆ. ಅಲ್ಲದೇ ಪಾಲಿಕೆಯಲ್ಲಿ ಖಾಲಿ ಇರುವ ಕೌನ್ಸಿಲ್‌ ಕಾರ್ಯದರ್ಶಿ ಹುದ್ದೆಯೂ ಸಹ ಖಾಲಿ ಇರುವುದು ಟಿಪ್ಪಣಿ ಹಾಳೆಯಿಂದ ತಿಳಿದು ಬಂದಿದೆ.

ಈ ಹುದ್ದೆಗಳನ್ನು ಚುನಾವಣೆ ಆಯೋಗದ ನಿರ್ದೇಶನದಂತೆ ತುರ್ತಾಗಿ ಭರ್ತಿ ಮಾಡಬೇಕು ಎಂದು 2025ರ ಜೂನ್‌ 13ರಂದೇ ಇಲಾಖೆಯ ಅಧಿಕಾರಿಯು ಟಿಪ್ಪಣಿ ಹಾಳೆಯಲ್ಲಿ ವಿವರಿಸಿದ್ದರು. ಆದರೆ ವರ್ಷ ಕಳೆದರೂ ಈ ಹುದ್ದೆಗಳನ್ನು ಭರ್ತಿ ಮಾಡಿಲ್ಲ.

‘ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯ ಸಂಬಂಧಿತ ಖಾಲಿ ಇರುವ ಮತದಾರರ ನೋಂದಣಾಧಿಕಾರಿಗಳು ಮತ್ತು ಸಹಾಯಕ ಮತದಾರರ ನೋಂದಣಾಧಿಕಾರಿಗಳ ಹುದ್ದೆಗಳನ್ನು ತ್ವರಿತವಾಗಿ ಭರ್ತಿ ಮಾಡಲು ಸಂಬಂಧಪಟ್ಟ ಇಲಾಖೆಗಳಿಗೆ ನಿರ್ದೇಶನ ನೀಡಲು ಕೋರಲಾಗಿತ್ತು. ಆದರೆ ಇದುವರೆಗೂ ಭರ್ತಿಯಾಗದೇ ಇರುವುದರಿಂದ ಮತದಾರರ ನೋಂದಣಾಧಿಕಾರಿಗಳು ಮತ್ತು ಸಹಾಯಕ ಮತದಾರರ ನೋಂದಣಾಧಿಕಾರಿ ಹುದ್ದೆಗಳನ್ನು ಶೀಘ್ರವಾಗಿ ಭರ್ತಿ ಮಾಡಲು ಸಂಬಂಧಪಟ್ಟ ಇಲಾಖೆಗಳಿಗೆ ಸೂಕ್ತ ನಿರ್ದೇಶನ ನೀಡಬೇಕು,’ ಎಂದು ಭಾರತ ಚುನಾವಣೆ ಆಯೋಗವು 2025ರ ಆಗಸ್ಟ್‌ 28ರಂದೇ ಅರೆ ಸರ್ಕಾರಿ ಪತ್ರವನ್ನು ಬರೆದಿತ್ತು.

 

 

ಈ ಮಧ್ಯೆ ಕರ್ನಾಟಕ ಮುಖ್ಯ ಚುನಾವಣಾಧಿಕಾರಿಗಳು ರಾಜ್ಯದ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಕಾರ್ಯದ ವೇಳಾಪಟ್ಟಿಯನ್ನು 2026ರ ಮೇ 14ರಂದು ಪ್ರಕಟಿಸಿತ್ತು. ಆದರೆ ಇದಕ್ಕೂ ಮುನ್ನವೇ   ಕರ್ನಾಟಕ ರಾಜ್ಯದ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಕಾರ್ಯದ ಪ್ರಾರಂಭಕ್ಕೂ ಮುನ್ನ ವಿಧಾನಸಭೆ ಕ್ಷೇತ್ರವಾರು ಅಧಿಸೂಚಿಸಿರುವ ಮತದಾರರ ನೋಂದಣಾಧಿಕಾರಿಗಳು ಮತ್ತು ಸಹಾಯಕ ಮತದಾರರ ನೋಂದಣಾಧಿಕಾರಿಗಳ ಹುದ್ದೆಗಳನ್ನು ಭರ್ತಿ ಮಾಡಬೇಕು ಎಂದು ಹಲವಾರು ಬಾರಿ ಸಂಬಂಧಿಸಿದ ಇಲಾಖೆಗಳ ಮುಖ್ಯಸ್ಥರಿಗೆ ಬರೆದಿದ್ದ ಪತ್ರಗಳನ್ನು ಕಾಲಕಸವಾಗಿದ್ದವು.

 

 

‘ಮತದಾರರ ನೋಂದಣಾಧಿಕಾರಿಗಳು ಮತ್ತು ಸಹಾಯಕ ಮತದಾರರ ನೋಂದಣಾಧಿಕಾರಿಗಳ ಹುದ್ದೆಗಳನ್ನು ಜರೂರಾಗಿ ಭರ್ತಿ ಮಾಡಬೇಕು. ಮತದಾರರ ಪಟ್ಟಿಯ ಸಮಗ್ರ ಪರಿಷ್ಕರಣೆ ಕಾರ್ಯದಲ್ಲಿ ನಿರತರಾಗಿರುವ ಯಾವುದೇ ಅಧಿಕಾರಿ ನೌಕರರನ್ನು ವರ್ಗಾವಣೆ  ಮಾಡಬಾರದು. ಅನಿವಾರ್ಯವಾದಲ್ಲಿ ಚುನಾವಣೆ ಆಯೋಗದ ಅನುಮತಿ ಪಡೆಯಬೇಕು,’ ಎಂದು ಸೂಚಿಸಲಾಗಿತ್ತು.

 

 

ಈ ಕುರಿತು ನಗರಾಭಿವೃದ್ಧಿ ಇಲಾಖೆಯ ಸರ್ಕಾರದ ಕಾರ್ಯದರ್ಶಿ ದೀಪಾ ಚೋಳನ್ ಅವರು ಅಧಿಕಾರಿಗಳೊಂದಿಗೆ 2026ರ ಜೂನ್‌ 1ರಂದು ಚರ್ಚಿಸಿರುವುದು ಗೊತ್ತಾಗಿದೆ.

 

 

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯು 2026ರ ಫೆಬ್ರುವರಿ 5ರಂದು ನಡೆದಿದ್ದ ಸಚಿವ ಸಚಿವ ಸಂಪುಟಕ್ಕೆ ಎಸ್‌ಐಆರ್ ಕುರಿತಾದ ಸಮಗ್ರ ಮಾಹಿತಿಯನ್ನು ಒದಗಿಸಿತ್ತು.

ಸಚಿವ ಸಂಪುಟಕ್ಕೆ ಸಲ್ಲಿಸಿರುವ ಪ್ರಸ್ತಾವದಲ್ಲೇನಿತ್ತು?

ಭಾರತದ ಸಂವಿಧಾನದ 324ನೇ ವಿಧಿ ಮತ್ತು ಜನತಾ ಪ್ರಾತಿನಿಧ್ಯ ಅಧಿನಿಯಮ, 1950ರ ನಿಬಂಧನೆಗಳ ಅಡಿಯಲ್ಲಿ ನೀಡಲಾದ ಅಧಿಕಾರಗಳನ್ನು ಬಳಸಿಕೊಂಡು ಭಾರತ ಚುನಾವಣೆ ಆಯೋಗವು ಮತದಾರರ ಪಟ್ಟಿಯ ನಿಖರತೆ, ಒಳಗೊಳ್ಳುವಿಕೆ ಮತ್ತು ಸಮಗ್ರತೆಯನ್ನು ಖಚಿತಪಡಿಸಿಕೊಳ್ಳಲು ನಿಯತಕಾಲಿಕವಾಗಿ ಪರಿಷ್ಕರಣೆ ಕೈಗೊಳ್ಳುತ್ತದೆ ಎಂದು ವಿವರಿಸಿತ್ತು.

 

 

 

 

ಮುಕ್ತ ಮತ್ತು ನಿಷ್ಪಕ್ಷಪಾತ ಚುನಾವಣೆಗಳನ್ನು ನಡೆಸಲು ಮತದಾರರ ಪಟ್ಟಿಗಳ ವಿಶ್ವಾಸಾರ್ಹತೆಯನ್ನು ಕಾಪಾಡಿಕೊಳ್ಳುವುದು ಅತ್ಯಂತ ಮೂಲಭೂತ ಅವಶ್ಯಕತೆಯಾಗಿದೆ. ಹೀಗಾಗಿ ಮತದಾರ ಪಟ್ಟಿಯಲ್ಲಿ ಎಲ್ಲಾ ಅರ್ಹ ನಾಗರೀಕರ ಸೇರ್ಪಡೆ, ಅನರ್ಹ ವ್ಯಕ್ತಿಗಳನ್ನು ತೆಗೆದುಹಾಕುವುದು ಮತ್ತು ಚುನಾವಣೆ ಪ್ರಕ್ರಿಯೆಯ ಒಟ್ಟಾರೆ ವಿಶ್ವಾಸಾರ್ಹತೆಯನ್ನು ಹೆಚ್ಚಿಸುವ ಉದ್ದೇಶದಿಂದ ಕರ್ನಾಟಕ ರಾಜ್ಯದಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್) ನಡೆಸಲು ಭಾರತ ಚುನಾವಣೆ ಆಯೋಗವು ಉದ್ದೇಶಿಸಿದೆ. ಈ ಕುರಿತು ಮುಖ್ಯ ಚುನಾವಣಾಧಿಕಾರಿಗಳು ಇವರು ಮಾಹಿತಿಯನ್ನು ಒದಗಿಸಿದ್ದರು.

 

ಈ ಪ್ರಸ್ತಾವನೆಯನ್ನು ಸಚಿವ ಸಂಪುಟಕ್ಕೆ ಮಾಹಿತಿಗಾಗಿ ಮಾತ್ರ ಮಂಡಿಸಲಾಗಿದೆ. ಈ ಪ್ರಸ್ತಾವನೆ ಕುರಿತು ಇತರೆ ಇಲಾಖೆಗಳೊಂದಿಗೆ ಸಮಾಲೋಚನೆ ಅಗತ್ಯವಿರುವುದಿಲ್ಲ. ಅಗತ್ಯವಿರುವ ಮಾಹಿತಿಯನ್ನು ಮುಖ್ಯ ಚುನಾವಣಾಧಿಕಾರಿಗಳಿಂದ ಪಡೆಯಲಾಗಿದೆ ಎಂದು ಸಚಿವ ಸಂಪುಟ ಟಿಪ್ಪಣಿಯಲ್ಲಿ ಹೇಳಿತ್ತು.

 

 

 

ಮುಖ್ಯ ಚುನಾವಣಾಧಿಕಾರಿಗಳು ಒದಗಿಸಿರುವ ಮಾಹಿತಿಯಲ್ಲೇನಿತ್ತು?

ಮುಖ್ಯ ಚುನಾವಣಾಧಿಕಾರಿಗಳು ವಿಶೇಷ ಸಮಗ್ರ ಪರಿಷ್ಕರಣೆ ಮತ್ತು ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ಕುರಿತು ರಾಜ್ಯ ಸರ್ಕಾರಕ್ಕೆ ಸಮಗ್ರ ಮಾಹಿತಿ ಒದಗಿಸಿದ್ದಾರೆ. 1950-51ರಲ್ಲಿ ದೇಶದಲ್ಲಿ ಮೊದಲ ಮತದಾರರ ಪಟ್ಟಿಯನ್ನು 1951ರ ನವೆಂಬರ್‍‌ 15ರಂದು ಸಿದ್ಧಪಡಿಸಲಾಗಿತ್ತು. 1952-56ರ ಅವಧಿಯಲ್ಲಿ ಪ್ರತೀ ವರ್ಷ ಸುಮಾರು ಶೇ. 20ರಷ್ಟು ರಾಜ್ಯಗಳಲ್ಲಿ ಎಸ್‌ಐಆರ್‍‌ ನಡೆಸಲಾಗಿದೆ. 1961ರಲ್ಲಿ ನಗರ ಪ್ರದೇಶಗಳಿಗಾಗಿ ಎಸ್‌ಐಆರ್ ನಡೆಸಲಾಗಿದೆ. 1965-66ರಲ್ಲಿ ಶೇ. 40ರಷ್ಟು ರಾಜ್ಯಗಳಲ್ಲಿ ಮತ್ತು 1966ರಲ್ಲಿ ಶೇ. 60ರಷ್ಟು ರಾಜ್ಯಗಳಲ್ಲಿ ಎಸ್‌ಐಆರ್ ನಡೆಸಲಾಗಿದೆ ಎಂಬ ಮಾಹಿತಿ ನೀಡಿದ್ದರು.

1983-84 ಮತ್ತು 1987-89ರಲ್ಲಿಯೂ ಅವಧಿಯಲ್ಲಿ ಇಡೀ ಭಾರತದಾದ್ಯಂತ ಎಸ್‌ಐಆರ್ ನಡೆಸಲಾಗಿದೆ. 1993ರಲ್ಲಿ ಜಮ್ಮು ಕಾಶ್ಮೀರ ಹೊರತುಪಡಿಸಿ ಭಾರತದಾದ್ಯಂತ ಎಸ್‌ಐಆರ್ ನಡೆಸಲಾಗಿದೆ. 1995ರಲ್ಲಿ 24 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಎಸ್‌ಐಆರ್ ನಡೆಸಲಾಗಿದೆ. 2002ರಲ್ಲಿ ಕರ್ನಾಟಕ ಸೇರಿದಂತೆ 29 ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಎಸ್‌ಐಆರ್ ನಡೆಸಲಾಗಿದೆ ಎಂಬ ಮಾಹಿತಿಯನ್ನು ನೀಡಿತ್ತು.

 

 

ಕರ್ನಾಟಕದಲ್ಲಿ 2002ರಲ್ಲಿ ನಡೆಸಿರುವ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್)ಯೇ ಕೊನೆಯದಾಗಿದೆ. ಅಲ್ಲದೇ ಇದನ್ನೆ ಮೂಲ ಪಟ್ಟಿ ಎಂದು ಪರಿಗಣಿಸಲಾಗಿದೆ. 2025ರ ಎಸ್‌ಐಆರ್ ಸಂದರ್ಭದಲ್ಲಿ 2002ರರ ಮತದಾರರ ಪಟ್ಟಿ ಪ್ರಮುಖ ಉಲ್ಲೇಖದ ದಾಖಲೆಯಾಗಿದೆ. 2002ರಲ್ಲಿ ರಾಜ್ಯದಲ್ಲಿ ಒಟ್ಟು 28 ಜಿಲ್ಲೆಗಳು ಹಾಗೂ 224 ವಿಧಾನಸಭೆ ಕ್ಷೇತ್ರಗಳಿದ್ದವು ಎಂದು ಮಾಹಿತಿಯಲ್ಲಿ ವಿವರಿಸಿತ್ತು.

ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಅಗತ್ಯವೇ?

ಮತದಾರರ ಪಟ್ಟಿಯು ಪ್ರಜಾಪ್ರಭುತ್ವದ ಮೂಲ ಆಧಾರವಾಗಿದೆ. ಮತದಾರರ ಪಟ್ಟಿಯಲ್ಲಿ ಅರ್ಹ ಮತದಾರರು ತಪ್ಪದೇ ಮತದಾರರ ಪಟ್ಟಿಯಲ್ಲಿ ಸೇರಬೇಕು. ಅನರ್ಹ (ಪುನರಾವರ್ತಿತ, ಸ್ಥಳಾಂತರಗೊಂಡ, ಮೃತ ಹೊಂದಿದ) ಮತದಾರರು ಮತದಾರರ ಪಟ್ಟಿಯಿಂದ ವಜಾಗೊಳ್ಳಬೇಕು. ಈ ಕಾರಣಕ್ಕೆ ವಿಶೇಷ ಸಮಗ್ರ ಪರಿಷ್ಕರಣೆ ಅಗತ್ಯವಿದೆ ಎಂದು ಕರ್ನಾಟಕದ ಮುಖ್ಯ ಚುನಾವಣಾಧಿಕಾರಿಗಳು ಸರ್ಕಾರಕ್ಕೆ ಮಾಹಿತಿ ಒದಗಿಸಿದ್ದರು.

ಭಾರತ ಚುನಾವಣೆ ಆಯೋಗವು ಸಹ ಕರ್ನಾಟಕದಲ್ಲಿ ವಿಶೇಷ ಸಮಗ್ರ ಪರಿಷ್ಕರಣೆ ನಡೆಸುವ ವೇಳಾಪಟ್ಟಿಯನ್ನು ಶೀಘ್ರದಲ್ಲಿ ಹೊರಡಿಸುವ ನಿರೀಕ್ಷೆಯಿದೆ. ಆದರೆ ಭಾರತ ಚುನಾವಣೆ ಆಯೋಗದ ನಿರ್ದೇಶನದ ಪ್ರಕಾರ ಪೂರ್ವಭಾವಿಯಾಗಿ 2025ರ ಮತದಾರರ ಪಟ್ಟಿಯಲ್ಲಿನ ಮತದಾರರನ್ನು 2002ರ ಮತದಾರರ ಪಟ್ಟಿಯಿಂದ ಮ್ಯಾಪಿಂಗ್‌ ಮಾಡುವ ಪೂರ್ವಭಾವಿ ಕಾರ್ಯವು ಪ್ರಗತಿಯಲ್ಲಿದೆ. ಭಾರತ ಚುನಾವಣೆ ಆಯೋಗವು ವಿಶೇಷ ಸಮಗ್ರ ಪರಿಷ್ಕರಣೆ ಕುರಿತು ಪ್ರಕಟಣೆ ಹೊರಡಿಸಿದ ನಂತರ ವೇಳಾಪಟ್ಟಿಯಂತೆ ಪರಿಷ್ಕರಣೆ ಕಾರ್ಯವನ್ನು ಪೂರ್ಣ ಪ್ರಮಾಣದಲ್ಲಿ ಕೈಗೊಳ್ಳಲಾಗುವುದು ಎಂದು ವಿವರಿಸಿತ್ತು.

 

 

ವಿಶೇಷ ಸಮಗ್ರ ಪರಿಷ್ಕರಣೆ ಕುರಿತು ರಾಜ್ಯದಲ್ಲಿ ಈಆಗಲೇ ರಾಜ್ಯಮಟ್ಟದಿಂದ ಡಿಇಒ, ಇಆರ್‍‌ಒ, ಎಇಆರ್‍‌ಒ, ಬಿಎಲ್‌ಒ ಸೂಪರ್‍‌ವೈಸರ್‍‌ಗಳು, ಬಿಎಲ್‌ಒಗಳಿಗೆ ತರಬೇತಿ ನೀಡಲಾಗಿದೆ. ತರಬೇತಿಯಲ್ಲಿ ಅವರ ಪಾತ್ರ ಹಾಗೂ ಜವಾಬ್ದಾರಿ, ಮ್ಯಾಪಿಂಗ್ ಮಾಡುವ ವಿಧಾನಗಳನ್ನು ವಿವರಿಸಿದೆ ಎಂದು ಮುಖ್ಯ ಚುನಾವಣಾಧಿಕಾರಿಗಳು ಮಾಹಿತಿ ಒದಗಿಸಿದ್ದರು.

ಮ್ಯಾಪಿಂಗ್‌ ಹೇಗಾಗಲಿದೆ?

2002ರ ಮತದಾರರ ಪಟ್ಟಿಯಲ್ಲಿ ಹೆಸರು ಹೊಂದಿದ್ದು ಪ್ರಸ್ತುತ 40 ವರ್ಷಕ್ಕಿಂತ ಹೆಚ್ಚು ವಯಸ್ಸಿನ ಮತದಾರರ ಮ್ಯಾಪಿಂಗ್‌ ನ್ನು ಬಿಎಲ್‌ಒ ಅವರು ಪರಿಶೀಲನೆ ನಡೆಸಲಿದ್ದಾರೆ. ಆ ನಂತರ ಬಿಎಲ್‌ಒ ಆಪ್‌ ಮೂಲಕ ಕಡ್ಡಾಯವಾಗಿ ದೃಢೀಕರಿಸಿದ ನಂತರ ಮ್ಯಾಪಿಂಗ್ ಮಾಡಲಿದೆ. 2002ರ ಪಟ್ಟಿಯಲ್ಲಿ ಹೆಸರು ಇಲ್ಲದಿದ್ದರೂ 40 ವರ್ಷ ಅಥವಾ ಅದಕ್ಕಿಂತ ಕಡಿಮೆ ವಯಸ್ಸಿನ ಮತದಾರರ ವಂಶಸ್ಥರ ಮ್ಯಾಪಿಂಗ್ ಸಹ ಕೈಗೊಳ್ಳಲಾಗುತ್ತಿದೆ.

ಇಂತಹ ಮತದಾರರನ್ನು 2002ರ ಪಟ್ಟಯಲ್ಲಿ ಹೆಸರು ಹೊಂದಿರುವ ಅವರ ತಂದೆ, ತಾಯಿ, ತಾತ, ಅಜ್ಜಿಯೊಂದಿಗೆ ಮ್ಯಾಪಿಂಗ್ ಮಾಡಲಾಗುತ್ತದೆ. ಅಲ್ಲದೇ ಭಾರತದ ಚುನಾವಣೆ ಆಯೋಗದ ನಿರ್ದೇಶನದ ಪ್ರಕಾರ ವಂಶಸ್ಥರ ಮ್ಯಾಪಿಂಗ್‌, ಮಗ, ಮಗಳು, ಮೊಮ್ಮಗ, ಮೊಮ್ಮಗಳು (ತೃತೀಯ ಲಿಂಗಿ) ಸಹ ಅನ್ವಯವಾಗಲಿದ್ದಾರೆ ಎಂದು ವಿವರಿಸಿತ್ತು.

 

 

ಹಾಗೆಯೇ ಕರ್ನಾಟಕ ರಾಜ್ಯದ 2025ರ ಮತದಾರರ ಪಟ್ಟಿಯಲ್ಲಿ ಹೆಸರಿರುವ ಮತದಾರರು 2002ರ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ಅವಧಿಯಲ್ಲಿ ಕರ್ನಾಟಕ ರಾಜ್ಯದ ಮತದಾರರ ಪಟ್ಟಿಯಲ್ಲಿ ಇಲ್ಲದೇ ಇರುವ ಆದರೆ ಬೇರೆ ರಾಜ್ಯ, ಕೇಂದ್ರಾಡಳಿತ ಪ್ರದೇಶದಲ್ಲಿ ಈ ಹಿಂದೆ ನಡೆದ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ನಂತರ ಪ್ರಕಟಿಸಿದ ಮತದಾರರ ಪಟ್ಟಿಯಲ್ಲಿ ಹೆಸರಿದ್ದ ಪಕ್ಷದಲ್ಲಿ ಅಂತಹ ಮತದಾರರನ್ನೂ ಸಹ ಮ್ಯಾಪಿಂಗ್ ಮಾಡಲು ಬಿಎಲ್ಒ ಆಪ್‌ನಲ್ಲಿ ಅವಕಾಶ ಕಲ್ಪಿಸಿದೆ ಎಂದು ಮಾಹಿತಿ ನೀಡಿತ್ತು.

 

 

ಕರ್ನಾಟಕದಲ್ಲಿ ಮ್ಯಾಪಿಂಗ್ ಪ್ರಗತಿ ಹೇಗಿದೆ?

2002ರಲ್ಲಿ ರಾಜ್ಯದಲ್ಲಿ 3,55,92,524 ಮತದಾರರಿದ್ದರೇ 2025ರಲ್ಲಿ 5,57,36,561ರಷ್ಟು ಸಂಖ್ಯೆಯ ಮತದಾರರಿದ್ದಾರೆ. 2026ರ ಜನವರಿ 28ರ ಪ್ರಕಾರ ರಾಜ್ಯದಲ್ಲಿ 5,57,36,561 ಒಟ್ಟು ಮತದಾರರಿದ್ದರು. ಈ ಮತದಾರರ ಪಟ್ಟಿಯು ನಿರಂತರವಾಗಿ ನವೀಕರಣಗೊಳ್ಳುತ್ತಿದೆ.

 

 

ಈ ಪೈಕಿ 3,12,57,088 ಮತದಾರರು 40 ವರ್ಷ ಮೇಲ್ಪಟ್ಟವರಾಗಿದ್ದಾರೆ. ಜನವರಿ 2026ರ ಅಂತ್ಯಕ್ಕೆ  ಈ ಪೈಕಿ 1,96,46,707 ಸಂಖ್ಯೆಯ ಮತದಾರರನ್ನಷ್ಟೇ ಮ್ಯಾಪಿಂಗ್ ಮಾಡಲಾಗಿತ್ತು.

 

 

ಇದು ಒಟ್ಟು ಮತದಾರರ ಸಂಖ್ಯೆಗೆ ಹೋಲಿಸಿದರೆ ಶೇ 62.86ರಷ್ಟಿತ್ತು.

 

 

 

 

 

 

40 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮತದಾರರ ಸಂಖ್ಯೆಯು 2,44,79,473ರಷ್ಟಿದೆ. ಇದರಲ್ಲಿ ವಂಶಸ್ಥರ ಮ್ಯಾಪಿಂಗ್‌ ಆಗಿರುವವರ ಸಂಖ್ಯೆಯು 1,52,39,492ರಷ್ಟಿದೆ. ಒಟ್ಟಾರೆ 3,48,86,199 ಮತದಾರರು ಮ್ಯಾಪಿಂಗ್ ಆಗಿದ್ದಾರೆ ಎಂದು ಅಂಕಿ ಸಂಖ್ಯೆಗಳನ್ನು ಮುಖ್ಯ ಚುನಾವಣಾಧಿಕಾರಿಗಳು ಸರ್ಕಾರಕ್ಕೆ ಮಾಹಿತಿ ನೀಡಿದ್ದರು.

ಜಿಲ್ಲಾವಾರು ಪಟ್ಟಿ ಇಲ್ಲಿದೆ

2026ರ ಜನವರಿ 28ರ ಪ್ರಕಾರ ಬೆಳಗಾವಿಯಲ್ಲಿ 41,85,986 ಒಟ್ಟು ಮತದಾರರಿದ್ದಾರೆ. ಬಾಗಲಕೋಟೆಯಲ್ಲಿ 16,47,346, ವಿಜಯಪುರದಲ್ಲಿ 19,95,147, ಕಲ್ಬುರ್ಗಿಯಲ್ಲಿ 23,88,636, ರಾಯಚೂರಿನಲ್ಲಿ 17,32,895, ಕೊಪ್ಪಳದಲ್ಲಿ 12,06,245,

 

 

ಗದಗ್‌ನಲ್ಲಿ 9,05,649,  ಧಾರವಾಡದಲ್ಲಿ 16,30, 595, ಉತ್ತರ ಕನ್ನಡದಲ್ಲಿ 12,29,149, ಹಾವೇರಿಯಲ್ಲಿ 13,53,427, ಬಳ್ಳಾರಿಯಲ್ಲಿ 12,48, 457, ಚಿತ್ರದುರ್ಗದಲ್ಲಿ 14,43,845,

 

ದಾವಣಗೆರೆಯಲ್ಲಿ 15,21,071, ಶಿವಮೊಗ್ಗದಲ್ಲಿ 15,30,765, ಉಡುಪಿಯಲ್ಲಿ 10,66, 261 ಒಟ್ಟು ಮತದಾರರಿದ್ದಾರೆ. ಚಿಕ್ಕಮಗಳೂರಿನಲ್ಲಿ 9,79,447, ತುಮಕೂರಿನಲ್ಲಿ 23,10,062, ಚಿಕ್ಕಬಳ್ಳಾಪುರದಲ್ಲಿ 10,73,109,

 

 

ಕೋಲಾರದಲ್ಲಿ 13,08,833, ಬೆಂಗಳೂರು ಗ್ರಾಮಾಂತರದಲ್ಲಿ 9,21,994, ರಾಮನಗರದಲ್ಲಿ 9,37,759, ಮಂಡ್ಯದಲ್ಲಿ 15,83,629, ಹಾಸನದಲ್ಲಿ 15,54,308, ದಕ್ಷಿಣ ಕನ್ನಡದಲ್ಲಿ 18,16,918,

 

 

ಕೊಡಗಿನಲ್ಲಿ 4,77,556, ಮೈಸೂರಿನಲ್ಲಿ 27,94,405, ಚಾಮರಾಜನಗರದಲ್ಲಿ 8,78,079, ಬೆಂಗಳೂರು ನಗರ ಜಿಲ್ಲೆ- 40,09,295, ಯಾದಗಿರಿ- 10,53,385, ವಿಜಯನಗರ ಜಿಲ್ಲೆ- 11,50317 ಒಟ್ಟು ಮತದಾರರಿದ್ದಾರೆ.

 

 

 

ಬಿಬಿಎಂಪಿ (ಕೇಂದ್ರ ) ವ್ಯಾಪ್ತಿಯಲ್ಲಿ 18,81,361, ಬಿಬಿಎಂಪಿ ಉತ್ತರದಲ್ಲಿ 23,14,930, ಬಿಬಿಎಂಪಿ ದಕ್ಷಿಣದಲ್ಲಿ 21,33,685, ಬೆಂಗಳೂರು ನಗರ ಜಿಲ್ಲೆಯಲ್ಲಿ 40,09,295, ಯಾದಗಿರಿಯಲ್ಲಿ 10,53,385, ವಿಜಯನಗರ ಜಿಲ್ಲೆಯಲ್ಲಿ 11,50317 ಸಂಖ್ಯೆಯಷ್ಟು ಒಟ್ಟು ಮತದಾರರಿದ್ದಾರೆ ಎಂದು ಮಾಹಿತಿ ಒದಗಿಸಿದ್ದರು.

 

 

ಮ್ಯಾಪಿಂಗ್‌ ಮಾಡಿರುವ ಪ್ರಗತಿ ಪಟ್ಟಿಯಲ್ಲಿ ಬಿಬಿಎಂಪಿ ಕೇಂದ್ರ ವ್ಯಾಪ್ತಿಯಲ್ಲಿ ಶೇ. 30.3, ಬಿಬಿಎಂಪಿ ಉತ್ತರದಲ್ಲಿ ಶೇ. 28.57, ಬಿಬಿಎಂಪಿ ದಕ್ಷಿಣದಲ್ಲಿ ಶೇ.28.61ರಷ್ಟು, ಬೆಂಗಳೂರು ನಗರ ಜಿಲ್ಲೆಯಲ್ಲಿ ಶೇ. 31.62ರಷ್ಟು ಮಾತ್ರ ಪ್ರಗತಿಯಾಗಿತ್ತು. ಜೂನ್‌ 2026ರ ಹೊತ್ತಿಗೆ  ಶೇ.72ರಷ್ಟು ಮ್ಯಾಪಿಂಗ್‌ ಪೂರ್ಣವಾಗಿತ್ತು.  ಬೆಂಗಳೂರು ನಗರ ಜಿಲ್ಲೆಯಲ್ಲಿ ಶೇ. 78.93, ಕೇಂದ್ರ ನಗರ ಜಿಲ್ಲೆ ಶೇ. 67.53, ದಕ್ಷಿಣ ನಗರ ಜಿಲ್ಲೆ ಶೇ.67.93, ಉತ್ತರ ನಗರ ಜಿಲ್ಲೆ ಶೇ. 69.23ರಷ್ಟು ಮ್ಯಾಪಿಂಗ್‌ ಪ್ರಗತಿಯಲ್ಲಿದೆ ಎಂದು ಜಿಬಿಎ ಮುಖ್ಯ ಆಯುಕ್ತ ಮಹೇಶ್ವರರಾವ್ ಅವರು ಮಾಹಿತಿ ನೀಡಿದ್ದರು.

ಭಾರತ ಚುನಾವಣೆ ಆಯೋಗದ ನಿರ್ದೇಶನದ ಪ್ರಕಾರ ಪೂರ್ವಭಾವಿಯಾಗಿ 2025ರ ಮತದಾರರ ಪಟ್ಟಿಯಲ್ಲಿನ ಮತದಾರರನ್ನು 2002ರ ಮತದಾರರ ಪಟ್ಟಿಯೊಂದಿಗೆ ಮ್ಯಾಪಿಂಗ್ ಮಾಡುವ ಕಾರ್ಯವು ಪ್ರಗತಿಯಲ್ಲಿದೆ ಎಂದು ವಿವರಿಸಿತ್ತು.

 

 

 

ಭಾರತ ಚುನಾವಣೆ ಆಯೋಗವು ವಿಶೇಷ ಸಮಗ್ರ ಪರಿಷ್ಕರಣೆ ಕುರಿತು ಪ್ರಕಟಣೆ ಹೊರಡಿಸಿದ ನಂತರ ವೇಳಾಪಟ್ಟಿ ಪ್ರಕಾರ ಪರಿಷ್ಕರಣೆ ಕಾರ್ಯವನ್ನು ಪೂರ್ಣಪ್ರಮಾಣದಲ್ಲಿ ಕೈಗೊಳ್ಳಲಾಗುವುದು ಎಂದು ಕರ್ನಾಟಕ ಮುಖ್ಯ ಚುನಾವಣಾಧಿಕಾರಿಗಳು ರಾಜ್ಯ ಸರ್ಕಾರಕ್ಕೆ ಮಾಹಿತಿ ಒದಗಿಸಿದ್ದರು.

Hot this week

ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ವಿರುದ್ಧದ ಪ್ರಕರಣ; 6 ವರ್ಷವಾದರೂ ಹೈಕೋರ್ಟ್‌ನಲ್ಲಿ ವಿಚಾರಣೆಗೆ ನಿಗದಿಯಾಗದ ದಿನಾಂಕ

ಬೆಂಗಳೂರು;  ಹಾಲಿ ಮುಖ್ಯಮಂತ್ರಿ  ಡಿ ಕೆ ಶಿವಕುಮಾರ್ ಅವರು ಸೇರಿದಂತೆ ಅವರ...

ಆರ್‍‌ಬಿಎಸ್‌ಎಸ್ಎನ್‌ ಗಣಿ ಕಂಪನಿಗೆ 64.50 ಎಕರೆ ವಿಸ್ತೀರ್ಣದ ಸರ್ಕಾರಿ ಜಮೀನು; 3 ಬಾರಿ ಪ್ರಸ್ತಾವ ತಿರಸ್ಕೃತವಾದರೂ ಸಚಿವ ಸಂಪುಟಕ್ಕೆ ಮಂಡಿಸಲು ಸಿಎಂ ನಿರ್ದೇಶನ

ಬೆಂಗಳೂರು; ಕಾನೂನುಬಾಹಿರವಾಗಿ ಗಣಿಗಾರಿಕೆ ನಡೆಸುತ್ತಿದೆ ಎಂಬ ಗಂಭೀರ ಆರೋಪಕ್ಕೆ ಗುರಿಯಾಗಿರುವ ಆರ್‍‌ಬಿಎಸ್‌ಎನ್‌...

ಶೈಕ್ಷಣಿಕ ಅಸಮಾನತೆ ಹೆಚ್ಚಳ; ರಾಜ್ಯದ ಆರ್ಥಿಕ ಪ್ರಗತಿಗೆ ಬೆದರಿಕೆ ಹಾಕುವ ಸಾಧ್ಯತೆ, ಸರ್ಕಾರಕ್ಕೆ ಎಚ್ಚರಿಕೆ ನೀಡಿದ ಆಯೋಗ

ಬೆಂಗಳೂರು; ಪ್ರಾಥಮಿಕ ಶಾಲೆ ಮತ್ತು ವಿಶ್ವವಿದ್ಯಾಲಯ ಮಟ್ಟಗಳೆರಡರಲ್ಲೂ ಸಾಂಸ್ಥಿಕ ಮೂಲ ಸೌಕರ್ಯಗಳ...
Please Scan to make Your Contribution

Topics

ಆರ್‍‌ಬಿಎಸ್‌ಎಸ್ಎನ್‌ ಗಣಿ ಕಂಪನಿಗೆ 64.50 ಎಕರೆ ವಿಸ್ತೀರ್ಣದ ಸರ್ಕಾರಿ ಜಮೀನು; 3 ಬಾರಿ ಪ್ರಸ್ತಾವ ತಿರಸ್ಕೃತವಾದರೂ ಸಚಿವ ಸಂಪುಟಕ್ಕೆ ಮಂಡಿಸಲು ಸಿಎಂ ನಿರ್ದೇಶನ

ಬೆಂಗಳೂರು; ಕಾನೂನುಬಾಹಿರವಾಗಿ ಗಣಿಗಾರಿಕೆ ನಡೆಸುತ್ತಿದೆ ಎಂಬ ಗಂಭೀರ ಆರೋಪಕ್ಕೆ ಗುರಿಯಾಗಿರುವ ಆರ್‍‌ಬಿಎಸ್‌ಎನ್‌...

ಶೈಕ್ಷಣಿಕ ಅಸಮಾನತೆ ಹೆಚ್ಚಳ; ರಾಜ್ಯದ ಆರ್ಥಿಕ ಪ್ರಗತಿಗೆ ಬೆದರಿಕೆ ಹಾಕುವ ಸಾಧ್ಯತೆ, ಸರ್ಕಾರಕ್ಕೆ ಎಚ್ಚರಿಕೆ ನೀಡಿದ ಆಯೋಗ

ಬೆಂಗಳೂರು; ಪ್ರಾಥಮಿಕ ಶಾಲೆ ಮತ್ತು ವಿಶ್ವವಿದ್ಯಾಲಯ ಮಟ್ಟಗಳೆರಡರಲ್ಲೂ ಸಾಂಸ್ಥಿಕ ಮೂಲ ಸೌಕರ್ಯಗಳ...

5 ವರ್ಷಕ್ಕಿಂತ ಹೆಚ್ಚಿನ ಅವಧಿಗೂ ಮೇಲ್ಪಟ್ಟು ಒಂದೇ ಸ್ಥಳದಲ್ಲಿ 17,842 ಅಧಿಕಾರಿ, ನೌಕರರು ಠಿಕಾಣಿ; ವರ್ಗಾವಣೆ ಮಾಡಿಲ್ಲವೇಕೆ?

ಬೆಂಗಳೂರು; ವಿಧಾನಸೌಧ, ವಿಕಾಸ ಸೌಧ ಮತ್ತು ಬಹುಮಹಡಿ ಕಟ್ಟಡಗಳಲ್ಲಿರುವ ಕರ್ನಾಟಕ ಸರ್ಕಾರದ...

Related Articles

Popular Categories

error: Content is protected !!