ಆದೇಶ ಉಲ್ಲಂಘನೆ!; ಕೌನ್ಸಿಲಿಂಗ್ ಇಲ್ಲದೆಯೇ ಪಿಡಿಒಗಳ ವರ್ಗಾವಣೆ, ಲಕ್ಷಾಂತರ ರು ಲಂಚ ಆರೋಪ

ಬೆಂಗಳೂರು; ಪಂಚಾಯ್ತಿ ಅಭಿವೃದ್ದಿ ಅಧಿಕಾರಿಗಳು ಸೇರಿದಂತೆ ಇಲಾಖೆಯ ಮತ್ತಿತರೆ ಅಧಿಕಾರಿ, ನೌಕರರ ವರ್ಗಾವಣೆಯನ್ನು ಆರಂಭಿಸಿರುವ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್‌ರಾಜ್‌ ಇಲಾಖೆಯು ಕೌನ್ಸಲಿಂಗ್‌ ಪ್ರಕ್ರಿಯೆಯನ್ನು ಬದಿಗಿರಿಸಿರುವುದು ಇದೀಗ ಬಹಿರಂಗವಾಗಿದೆ.

 

2024ರ ಆಗಸ್ಟ್‌ 1ರಂದು ಕೆಂಪೇಗೌಡ ರಸ್ತೆಯಲ್ಲಿರುವ ಪಂಚಾಯತ್‌ರಾಜ್‌ ಅಧಿಕಾರಿಗಳು, ಸಚಿವರ ಕಚೇರಿ ಸಿಬ್ಬಂದಿಗಳು ಸಂಜೆಯಿಂದಲೂ ಆಯುಕ್ತಾಲಯದ ಕಚೇರಿಯಲ್ಲೇ ಮೊಕ್ಕಾಂ ಹೂಡಿದ್ದಾರೆ. ರಾತ್ರಿ ಒಂಬತ್ತಾದರೂ ಆಯುಕ್ತಾಲಯದ ಕಚೇರಿಯಲ್ಲೇ ಬೀಡುಬಿಟ್ಟು  ಗುಪ್ತವಾಗಿ ವರ್ಗಾವಣೆ ಪ್ರಕ್ರಿಯೆ  ನಡೆಸಿದ್ದಾರೆ ಎಂದು ವಿಶ್ವಸನೀಯ ಮೂಲಗಳು ಖಚಿತಪಡಿಸಿವೆ.

 

ವರ್ಗಾವಣೆ ಮತ್ತು ನಿಯೋಜನೆ ಮಾಡಲು ತಂತ್ರಾಂಶದಲ್ಲಿ ಅವಕಾಶ ಕಲ್ಪಿಸಲಾಗಿದೆ. ಈ ಸಂಬಂಧ ಇಲಾಖೆಯಲ್ಲಿ ಕಳೆದ ಕೆಲ ದಿನಗಳ ಹಿಂದೆಯೇ ಹಲವು ಪೂರ್ವಭಾವಿ ಸಭೆ ನಡೆಸಿ, ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಆದರೂ ಆಯುಕ್ತಾಲಯದ ಅಧಿಕಾರಿಗಳು, ಸಚಿವರ ಕಚೇರಿಯ ಕೆಲ ಅಧಿಕಾರಿಗಳು, ಮಧ್ಯವರ್ತಿಗಳ ಸಮ್ಮುಖದಲ್ಲಿ ಮ್ಯಾನ್ಯುಯಲ್‌ ಮೂಲಕ ವರ್ಗಾವಣೆ ಮಾಡಲಾಗಿದೆ. ಇದಕ್ಕೆ ಸಚಿವ ಪ್ರಿಯಾಂಕ್‌ ಖರ್ಗೆ ಅವರ ಹೆಸರನ್ನೂ ಬಳಸಲಾಗಿದೆ  ಎಂದು ಉನ್ನತ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

 

ಪಿಡಿಓ, ಪಂಚಾಯತ್ ಕಾರ್ಯದರ್ಶಿಗಳು ಇತರೆ ಪಂಚಾಯಿತಿ ಸರ್ಕಾರಿ ಅಧಿಕಾರಿಗಳು, ನೌಕರರನ್ನು ಕೌನ್ಸಿಲಿಂಗ್ ಮುಖಾಂತರ ವರ್ಗಾವಣೆ ಮಾಡಲಾಗುವುದು ಎಂದು ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಯು 2024ರ ಜೂನ್‌ 25ರಂದೇ ಆದೇಶ ಹೊರಡಿಸಿತ್ತು.

 

ಆದರೆ ಇದೀಗ ಇಲಾಖೆಯು ಒಂದು ತಿಂಗಳ ಹಿಂದೆಯೆ ಹೊರಡಿಸಿದ್ದ ಆದೇಶವನ್ನೇ ಉಲ್ಲಂಘಿಸಿ ಪಿಡಿಓಗಳಿಂದ ಲಕ್ಷಾಂತರ ರುಪಾಯಿ ವಸೂಲು ಮಾಡಿ  ಮ್ಯಾನ್ಯುಯಲ್‌ ಮೂಲಕ ವರ್ಗಾವಣೆ ಮಾಡುತ್ತಿದೆ ಎಂದು ತಿಳಿದು ಬಂದಿದೆ.

 

ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆ ವ್ಯಾಪ್ತಿಯಲ್ಲಿನ ಪಂಚಾಯ್ತಿ ಅಭಿವೃದ್ದಿ ಅಧಿಕಾರಿಗಳ ವರ್ಗಾವಣೆಗೆ ತಲಾ 10ರಿಂದ 20 ಲಕ್ಷ ರು. ಲಂಚ ಪಡೆಯಲಾಗುತ್ತಿದೆ. ಉಳಿದ ಹುದ್ದೆಗಳಿಗೆ ಆಯಾ ಸ್ಥಳಗಳಿಗೆ ಅನುಗುಣವಾಗಿ 2 ರಿಂದ 5 ಲಕ್ಷ ರು.ವರೆಗೂ ಲಂಚ ನಿಗದಿಯಾಗಿದೆ ಎಂಬ ಆರೋಪವು ಕೇಳಿ ಬಂದಿದೆ.

 

ಕಳೆದ ಮೂರ್ನಾಲ್ಕು ತಿಂಗಳಿನಿಂದಲೂ ಹುದ್ದೆ ನಿರೀಕ್ಷಣೆಯಲ್ಲಿರುವ ಪಿಡಿಒ ಸೇರಿದಂತೆ ಇಲಾಖೆಯ ಮತ್ತಿತರ ಅಧಿಕಾರಿ ನೌಕರರನ್ನೂ ಮ್ಯಾನುಯಲ್‌ ಮೂಲಕ ವರ್ಗಾವಣೆ ಮಾಡಲಾಗಿದೆ ಎಂದು ಗೊತ್ತಾಗಿದೆ. ಈ ಎಲ್ಲಾ ಪ್ರಕ್ರಿಯೆಗಳಲ್ಲಿ ಮಧ್ಯವರ್ತಿಗಳ ಮೂಲಕ ಸಚಿವ ಪ್ರಿಯಾಂಕ್‌ ಖರ್ಗೆ ಅವರ ಕಚೇರಿಯ ಪ್ರಭಾವಿ ಅಧಿಕಾರಿಗಳು, ಆಪ್ತ ಸಹಾಯಕರು, ವಿಶೇಷ ಕರ್ತವ್ಯಾಧಿಕಾರಿಗಳು ತರಾತುರಿಯಲ್ಲಿ ವರ್ಗಾವಣೆ ಪ್ರಕ್ರಿಯೆ ನಡೆಸುತ್ತಿದ್ದಾರೆ ಎಂಬ ಆಪಾದನೆಯೂ ಕೇಳಿ ಬಂದಿದೆ.

 

‘ಹುದ್ದೆ ನಿರೀಕ್ಷಣೆಯಲ್ಲಿದ್ದ ಪಿಡಿಒ ಮತ್ತು ಇತರೆ ಅಧಿಕಾರಿ ನೌಕರರು ನಿರ್ದಿಷ್ಟವಾದ ಸ್ಥಳಕ್ಕೆ ವರ್ಗಾವಣೆ ಅಥವಾ ನಿಯೋಜನೆ ಬಯಸಿದ್ದರು. ಆದರೂ ಇವರ್‍ಯಾರಿಗೂ ಸ್ಥಳ ತೋರಿಸದೇ, ನಿಯೋಜನೆಯನ್ನೂ ಮಾಡದೇ ತಿಂಗಳುಗಟ್ಟಲೇ ವೇತನ ಪಾವತಿಸಲಾಗಿದೆ. ವರ್ಗಾವಣೆ ಪ್ರಕ್ರಿಯೆ ಆರಂಭಕ್ಕೂ ಮೊದಲು ಹುದ್ದೆ ನಿರೀಕ್ಷಣೆಯಲ್ಲಿದ್ದ ಪಿಡಿಒ ಮತ್ತು ಇತರೆ ಅಧಿಕಾರಿ, ನೌಕರರನ್ನು ವರ್ಗಾವಣೆ ಅಥವಾ ನಿಯೋಜನೆ ಪ್ರಕ್ರಿಯೆ ಪೂರ್ಣಗೊಳಿಸಬಹುದಿತ್ತು,’ ಎನ್ನುತ್ತಾರೆ ಹೆಸರು ಹೇಳಲಿಚ್ಛಿಸದ ಪಿಡಿಒ

 

.
ಸರ್ಕಾರದ ಆದೇಶದ ಪ್ರಕಾರ 2024ರ ಜೂನ್‌ ಅಂತ್ಯದೊಳಗೇ ವರ್ಗಾವಣೆ ಪ್ರಕ್ರಿಯೆ ಪೂರ್ಣಗೊಳ್ಳಬೇಕಿತ್ತು. ಅದರೂ ಮೂರು ಬಾರಿ ವರ್ಗಾವಣೆ ಅವಧಿಯ ಕಾಲಾವಕಾಶ ವಿಸ್ತರಣೆ ಅಂದರೆ ಜುಲೈ 31ರೊಳಗೇ ಪೂರ್ಣಗೊಳ್ಳಬೇಕಿತ್ತು. ಆದರೆ ಈ ಕಾಲಮಿತಿಯೊಳಗೆ ವರ್ಗಾವಣೆ ಪ್ರಕ್ರಿಯೆ ಪೂರ್ಣಗೊಂಡಿಲ್ಲ. ಬದಲಿಗೆ ಹಿಂದಿನ ದಿನಾಂಕ ನಮೂದಿಸಿ ವರ್ಗಾವಣೆ ಆದೇಶಗಳನ್ನು ಹೊರಡಿಸಲಾಗುತ್ತಿದೆ ಎಂದು ಗೊತ್ತಾಗಿದೆ.

SUPPORT THE FILE

Latest News

Related Posts