Saturday | July 18, 2026 |

ಚಿಕ್ಕಬಳ್ಳಾಪುರ ವೈದ್ಯಕೀಯ ವಿಜ್ಞಾನ ಸಂಸ್ಥೆ ಕಟ್ಟಡ ನಿರ್ಮಾಣ; ಸಚಿವರ ಸೂಚನೆಯಂತೆ ಹೆಚ್ಚುವರಿ ಕಾಮಗಾರಿ, ಸರ್ಕಾರಕ್ಕೆ 285 ಕೋಟಿ ಹೊರೆ, ನಿರ್ದಿಷ್ಟ ಗುತ್ತಿಗೆದಾರರಿಗೆ ಅನುಕೂಲ

ಬೆಂಗಳೂರು; ಚಿಕ್ಕಬಳ್ಳಾಪುರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಕಟ್ಟಡ ನಿರ್ಮಾಣ ಕಾಮಗಾರಿ ಸಂದರ್ಭದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾಗಿದ್ದ  ಡಾ ಕೆ ಸುಧಾಕರ್ ಅವರ ಸೂಚನೆ ಮೇರೆಗೆ ಹೆಚ್ಚುವರಿ ಕಾಮಗಾರಿಗಳನ್ನು ಕೈಗೊಳ್ಳಲಾಗಿತ್ತು. ಇದರಿಂದಾಗಿಯೇ ಸರ್ಕಾರಕ್ಕೆ 285.00 ಕೋಟಿ ರು ಹೊರೆಯಾಗಿದೆ ಎಂದು ಲೋಕೋಪಯೋಗಿ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ನೇತೃತ್ವದ ತನಿಖಾ ತಂಡವು ದಾಖಲೆಗಳ ಸಮೇತ ದೃಢಪಡಿಸಿದೆ.

ಅಲ್ಲದೇ ಈ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿದಂತೆ ಆಯ್ದ ಗುತ್ತಿಗೆದಾರರಿಗೆ ಅನುಕೂಲವಾಗುವಂತೆ ಹೆಚ್ಚುವರಿ ಷರತ್ತುಗಳನ್ನು ವಿಧಿಸಲಾಗಿತ್ತು. ಹೀಗಾಗಿಯೇ ಈ ಟೆಂಡರ್‍‌ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಗುತ್ತಿಗೆದಾರರು ಭಾಗವಹಿಸಲು ತಪ್ಪಿಸಿದಂತಾಗಿತ್ತಲ್ಲದೇ ಸ್ಪರ್ಧಾತ್ಮಕತೆ ಅವಕಾಶವನ್ನು ತಪ್ಪಿಸಿದಂತಾಗಿತ್ತು ಎಂದು ತನಿಖಾ ತಂಡವು ಬಯಲು ಮಾಡಿದೆ. ಈ ವರದಿ ಕುರಿತು ಸಚಿವ ಡಾ ಶರಣ ಪ್ರಕಾಶ ಪಾಟೀಲ್ ಅವರೊಂದಿಗೆ ಅಧಿಕಾರಿಗಳು ಹಲವು ಬಾರಿ ಚರ್ಚಿಸಿದ್ದಾರೆ. ಆದರೂ  ಸಹ ಇನ್ನೂ ಯಾರೊಬ್ಬರ ಮೇಲೂ ಕ್ರಮ ಜರುಗಿಸಿಲ್ಲ.

ಲೋಕೋಪಯೋಗಿ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ನೇತೃತ್ವದ ತನಿಖಾ ತಂಡವು 14 ಪುಸ್ತಕಗಳ 5,134 ಪುಟಗಳಲ್ಲಿ  ನೀಡಿರುವ  ಸಮಗ್ರ ತನಿಖಾ ವರದಿಯು ದಿ ಫೈಲ್‌ ಗೆ ಲಭ್ಯವಾಗಿವೆ.

 

 

 

 

ತನಿಖಾ ವರದಿಯಲ್ಲೇನಿದೆ?

ಚಿಕ್ಕಬಳ್ಳಾಪುರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಕಟ್ಟಡ ನಿರ್ಮಾಣ ಕಾಮಗಾರಿಯ ನಿರ್ವಹಿಸುವ ಸಂದರ್ಭದಲ್ಲಿ ಎಂಸಿಐ ಮತ್ತು ಎನ್‌ಎಂಸಿ ನಿಯಮಗಳು ಪಾಲನೆಯಾಗಿದೆಯೇ ಇಲ್ಲವೇ ಎಂಬುದನ್ನು ತನಿಖಾ ಸಮಿತಿಯು ಅವಲೋಕಿಸಿದೆ. ದಾಖಲೆಗಳನ್ನು ಪರಿಶೀಲಿಸಿದ್ದ ಸಮಿತಿಯು ಮಾನದಂಡಗಳ ಪ್ರಕಾರ ಹಾಗೂ ಉಪಯೋಗಿ ಇಲಾಖೆಯವರ ಕೋರಿಕೆಯಂತೆ ಪರಿಶೀಲಿಸಲಾಗಿ ಹೆಚ್ಚುವರಿಯಾಗಿ ಒಟ್ಟಾರೆಯಾಗಿ ಅಂದಾಜು 14,947 ಚ ಮೀ ಕಟ್ಟಡವನ್ನು ನಿರ್ಮಿಸಿರುವುದನ್ನು ತನಿಖಾ ತಂಡವು ಪತ್ತೆ ಹಚ್ಚಿದೆ.

ಗುತ್ತಿಗೆದಾರರಿಗೆ ಹೆಚ್ಚುವರಿಯಾಗಿ ಯಾವುದೇ ಕಾರ್ಯಾದೇಶ ನೀಡಿಲ್ಲ. ಆದರೆ ಈ ಕಾಮಗಾರಿಗೆ 525.00 ಕೋಟಿ ರು ಗಳಿಗೆ ಅಂದಾಜು ಪಟ್ಟಿ ಮಂಜೂರಾಗಿತ್ತು. ಹೆಚ್ಚುವರಿ ಕಾಮಗಾರಿಗಳಿಗಾಗಿ ಒಟ್ಟಾರೆ 810.00 ಕೋಟಿ ರು ಪರಿಷ್ಕೃತ ಅಂದಾಜುಪಟ್ಟಿಯ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಆಡಳಿತಾತ್ಮಕ ಅನುಮೋದನೆ ಕೋರಿ ಸಲ್ಲಿಸಿತ್ತು. ಇದನ್ನು ಪರಿಶೀಲಿಸಿರುವ ತನಿಖಾ ಸಮಿತಿಯು ಪರಿಷ್ಕೃತ ಅಂದಾಜಿಗೆ ಕಾರಣಗಳೇನು ಎಂದು ತನ್ನ ವರದಿಯಲ್ಲಿ ಪಟ್ಟಿ ಮಾಡಿದೆ.

 

 

ಸರ್ಕಾರಕ್ಕೆ  285.00 ಕೋಟಿ ಹೊರೆ

ಇದರ ಪ್ರಕಾರ ಟೆಂಡರ್ ಪ್ರೀಮಿಯಂ, ದರ ಹೊಂದಾಣಿಕೆ, ಹೆಚ್ಚುವರಿಯಾಗಿ ಶೇ. 6ರಷ್ಟು ಜಿಎಸ್‌ಟಿಗಳು ಮೂಲ ಅಂದಾಜಿನಲ್ಲಿ ಸೇರ್ಪಡೆಯಾಗಿರಲಿಲ್ಲ ಎಂದು ಹೇಳಿದೆ. ಹೀಗಾಗಿ ಇವೆಲ್ಲವನ್ನೂ ಪರಿಷ್ಕೃತ ಅಂದಾಜಿನಲ್ಲಿ 171.43 ಕೋಟಿ ರು  ಸೇರಿಸಲಾಗಿದೆ.

 

ಚಿಕ್ಕಬಳ್ಳಾಪುರ ವೈದ್ಯಕೀಯ ವಿಜ್ಞಾನ ಸಂಸ್ಥೆ ಕಟ್ಟಡ

 

ಕೌಶಲ್ಯಾಭಿವೃದ್ಧಿ  ಕೇಂದ್ರ, ಉಪಹಾರ ಗೃಹ ನಿರ್ಮಾಣ ಸೇರಿದಂತೆ ಇನ್ನಿತರೆ ಕಾಮಗಾರಿಗಳಿಗೆ 113.56 ಕೋಟಿ ರೂ ಸಹ ಈ ಹೆಚ್ಚುವರಿ ಕಾಮಗಾರಿಯಲ್ಲಿ ಸೇರಿಸಲಾಗಿತ್ತು.  ಒಟ್ಟಾರೆಯಾಗಿ ಮೂಲ ಅಂದಾಜಿನಲ್ಲಿ ಸೇರ್ಪಡೆಯಾಗಿಲ್ಲದ ಕಾಂಪೋನೆಂಟ್‌ಗಳು ಮತ್ತು ಹೆಚ್ಚುವರಿಯಾಗಿ ನಿರ್ಮಿಸಿರುವ , ನಿರ್ಮಿಸುತ್ತಿರುವ ಕಾಂಪೋನೆಂಟ್‌ಗಳಿಂದಾಗಿ ಮೂಲ ಮಂಜೂರಾದ ಅಂದಾಜಿಗಿಂತ 285.00 ಕೋಟಿ ರು ಹೆಚ್ಚುವರಿಯಾಗಿದೆ ಎಂದು ತನಿಖಾ ತಂಡವು ಪತ್ತೆ ಹಚ್ಚಿದೆ.

 

 

ಕಾಂಪೋನೆಂಟ್‌ಗಳು ಅವಶ್ಯವಿತ್ತೇ?

ಈ ಕಾಮಗಾರಿಯಲ್ಲಿ ಒಳಗೊಂಡಿರುವ ಎಲ್ಲಾ ಕಾಂಪೋನೆಂಟ್‌ಗಳು ಅವಶ್ಯಕವಿತ್ತೇ ಅಥವಾ ಅವುಗಳನ್ನು ಅನಾವಶ್ಯಕವಾಗಿ ಸೇರಿಸಲಾಗಿದೆಯೇ ಎಂಬ ಬಗ್ಗೆ ತನಿಖಾ ತಂಡವು ಪರಿಶೀಲನೆ ನಡೆಸಿದೆ. ಡೋಮ್ಸ್‌ ಮತ್ತು ಕಾರ್ನಿಸಿಸ್‌ ಉಪಯೋಗಿ ಇಲಾಖೆಯ ಹಾಗೂ  ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಚಿವರ ಪ್ರಗತಿ ಪರಿಶೀಲನೆ ಸಭೆಯಲ್ಲಿ ಈ ಬಗ್ಗೆ ಸೂಚಿಸಲಾಗಿತ್ತು. ಅಲ್ಲದೇ ಸಭೆಯ ನಡವಳಿಯಂತೆ ಈ ಕಾಮಗಾರಿಗಳನ್ನು ಪರಿಗಣಿಸಲಾಗಿತ್ತು. ಇದಕ್ಕಾಗಿ ಸುಮಾರು 21.00 ಕೋಟಿ ರುಪಾಯಿ, ಐಸಿಯು ಮತ್ತಿತರೆ ಕಾಮಗಾರಿಗಳಿಗೆ 2.28 ಕೋಟಿ ರು.,  ಕಿಚನ್‌ ಮತ್ತು ಲ್ಯಾಂಡ್ರಿಗಳಿಗಾಗಿ 6.30 ಕೋಟಿ ರು ಗೆ ಅನುವು ಮಾಡಿಕೊಡಲಾಗಿದೆ   ಅನುವು ಮಾಡಿಕೊಟ್ಟಿದ್ದನ್ನು ತನಿಖಾ ತಂಡವು ಬಯಲು  ಮಾಡಿದೆ.

 

 

ಹೆಚ್ಚುವರಿ ಕಾಮಗಾರಿಗಳಿಗೆ ಮಾನದಂಡಗಳೇನು?

ಈ ಹೆಚ್ಚುವರಿ ಕಾಮಗಾರಿಗಳು ಯಾವ ಮಾನದಂಡಗಳ ಅನ್ವಯ ನಡೆಸಲಾಗಿದೆ, ಇದಕ್ಕೆ ಹೆಚ್ಚುವರಿಯಾಗಿ ಅನುಮೋದನೆ ನೀಡಿರುವ ಪ್ರಕ್ರಿಯೆ ಮತ್ತು ಇದಕ್ಕೆ  ಯಾರೆಲ್ಲ ಹೊಣೆಗಾರರು ಎಂಬುದನ್ನು ಸಹ ತನಿಖಾ ತಂಡವು ಪತ್ತೆ ಹಚ್ಚಿದೆ. ಮಂಜೂರಾದ ಅಂದಾಜಿನಲ್ಲಿ ಒಳಗೊಂಡಿರದ ಹೆಚ್ಚುವರಿ ಕಾಮಗಾರಿಗಳನ್ನು ಸೇರ್ಪಡೆಗೊಳಿಸಿರುವುದು ಪರಿಷ್ಕೃತ ಅಂದಾಜು ಪಟ್ಟಯಲ್ಲಿ ಕಂಡು ಬಂದಿದೆ ಎಂದು ತನಿಖಾ ತಂಡವು ಹೇಳಿದೆ.

ಚಿಕ್ಕಬಳ್ಳಾಪುರ ವೈದ್ಯಕೀಯ ವಿಜ್ಞಾನ ಸಂಸ್ಥೆಯ ನಿರ್ದೇಶಕ ಮತ್ತು ಡೀನ್ ಆದ ಡಾ ಸಿದ್ದೀಕ್ ಮುಕಮಿಲ್ ಅಹಮದ್ ಅವರ ಅಧ್ಯಕ್ಷತೆಯಲ್ಲಿ  ನಡೆದಿದ್ದ ನೀಡ್‌ ಅಸೆಸ್‌ಮೆಂಟ್‌ ಸಮಿತಿ ಸಭೆಯಲ್ಲಿ ನೀಡಿದ್ದ ಸೂಚನೆ ಮೇರೆಗೆ ಹೆಚ್ಚುವರಿ ಕಾಮಗಾರಿಗಳನ್ನು ಸೇರ್ಪಡೆಗೊಳಿಸಲಾಗಿದೆ. 2022ರ ಆಗಸ್ಟ್‌ 18ರಂದು ಇಲಾಖೆ ಸಚಿವರ ಅಧ್ಯಕ್ಷತೆಯಲ್ಲಿ ನಡೆದಿದ್ದ ಪ್ರಗತಿ ಪರಿಶೀಲನಾ ಸಭೆಯಲ್ಲಿ  ಈ ಹೆಚ್ಚುವರಿ ಕಾಮಗಾರಿಗಳನ್ನು ಸೇರ್ಪಡೆಗೊಳಿಸಿದೆ.

 

 

 

2022ರ ಜುಲೈ 28ರಂದು ಉಪಯೋಗಿ ಇಲಾಖೆಯೂ ಸಹ ಹೆಚ್ಚುವರಿ ಕಾಮಗಾರಿಗಳನ್ನು ಸೇರ್ಪಡೆಗೊಳಿಸಲು ಮನವಿ ಮಾಡಿತ್ತು. ಅದರಂತೆ 2022ರ ಸೆ.30ರಂದು ನಡೆದಿದ್ದ ತಾಂತ್ರಿಕ ಸಲಹಾ ಸಮಿತಿ (ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ)ಯಲ್ಲಿ ಈ ಪರಿಷ್ಕೃತ ಅಂದಾಜು ಪ್ರಸ್ತಾವನೆಗೆ ಅನುಮೋದನೆಯನ್ನು ಪಡೆಯಲಾಗಿತ್ತು ಎಂದು ತನಿಖಾ ತಂಡವು ವರದಿಯಲ್ಲಿ ವಿವರಿಸಿರುವುದು ಗೊತ್ತಾಗಿದೆ.

ಬೊಕ್ಕಸಕ್ಕೆ ಆಗಿದೆಯೇ ನಷ್ಟ?

ಸರ್ಕಾರದಿಂದ ಆಡಳಿತಾತ್ಮಕ ಅನುಮೋದನೆಯಾದ 525.00 ಕೋಟಿ ರುಗಳ ಅಂದಾಜು ಪಟ್ಟಿಯಲ್ಲಿ ಸೇರ್ಪಡೆಗೊಳ್ಳದ ಶಾಸನಬದ್ಧ ಪಾವತಿಯಾದ ಟೆಂಡರ್ ಪ್ರೀಮಿಯಂ, ಪ್ರೈಸ್‌ ಅಡ್ಜಸ್‌ಮೆಂಟ್‌ ಮತ್ತು ಹೆಚ್ಚುವರಿ ಜಿಎಸ್‌ಟಿ ಅಂಶಗಳು ಸೇರ್ಪಡೆಯಾಗಿರಲಿಲ್ಲ. ಇದರಿಂದಾಗಿ 171.43 ಕೋಟಿ ರು ಹೆಚ್ಚುವರಿಯಾಗಿದೆ. ಹಾಗೆಯೇ ಕೆಲವು ಹೆಚ್ಚುವರಿ ಅಂಶಗಳನ್ನು ಉಪಯೋಗಿ ಇಲಾಖೆ ಕೋರಿಕೆ ಮೇರೆಗೆ ನಿರ್ವಹಿಸಿದೆ. ಈ ಅಂಶಗಳ ಮೊತ್ತವು 113.56 ಕೋಟಿ ರು ಆಗಿದೆ. ಈ ಹೆಚ್ಚುವರಿ ಅಂಶಗಳನ್ನು ಪರಿಷ್ಕೃತ ಅಂದಾಜು ಪಟ್ಟಿಯಲ್ಲಿ ಅಳವಡಿಸಲಾಗಿದೆ ಎಂದು ತನಿಖಾ ತಂಡವು ಪತ್ತೆ ಮಾಡಿದೆ.

ಅಲ್ಲದೇ ಈ ಕಾಮಗಾರಿಯ ಪರಿಷ್ಕೃತ ಅಂದಾಜು ಪಟ್ಟಿಗೆ ಸಂಬಂಧಿಸಿದಂತೆ ಸರ್ಕಾರದಿಂದ ರಚಿಸಲಾಗಿದ್ದ ಲೋಕೋಪಯೋಗಿ ಇಲಾಖೆಯಕ ಸರ್ಕಾರದ ಕಾರ್ಯದರ್ಶಿ ನೇತೃತ್ವದ ಸಮಿತಿ ಮತ್ತು ರಾಜ್ಯ ಟೆಂಡರ್ ಪೂರ್ವ ಪರಿಶೀಲನಾ ಸಮಿತಿಯಿಂದಲೂ ತೀರುವಳಿ ಪಡೆದಿದೆ.

 

 

ಸರ್ಕಾರಕ್ಕೆ ಹೊರೆ

‘ಮೇಲಿನ ಹೆಚ್ಚುವರಿ ಕಾಮಗಾರಿಗಳನ್ನು ಸಮಿತಿಗಳಿಂದ ಶಿಫಾರಸ್ಸಿನೊಂದಿಗೆ ಕೈಗೊಂಡಿರುವುದು ಮತ್ತು ಅಂದಾಜುಪಟ್ಟಿಯಲ್ಲಿ ಸೇರ್ಪಡೆಗೊಳ್ಳದೇ ಇರುವಂತಹ ಅಂಶಗಳನ್ನು ಪರಿಗಣಿಸಿಕೊಂಡಿರುವುದರಿಂದ ಪರಿಷ್ಕೃತ ಅಂದಾಜು ಮೊತ್ತವು ಹೆಚ್ಚಾಗಿರುವುದು ಕಂಡು ಬಂದಿರುತ್ತದೆ. ಇನ್ನೂ ಹಲವು ಕಾಮಗಾರಿಗಳ ಅಂಶಗಳನ್ನು ಪರಿಷ್ಕೃತ ಅಂದಾಜು ಪಟ್ಟಿ ಅನುಮೋದನೆಯಾದ ನಂತರ ಕೈಗೊಳ್ಳುವಂತಹ ಕೆಲಸಗಳಾಗಿರುತ್ತದೆ. ಹಾಗೂ ಕೆಲವು ಕಟ್ಟಡಗಳನ್ನು ಕಟ್ಟಬೇಕಾಗಿರುತ್ತದೆ. ಇದನ್ನು ಪರಿಶೀಲಿಸಲಾಗಿದ್ದು  ಹೆಚ್ಚುವರಿ ಕಾಮಗಾರಿಗಳನ್ನು ಕೈಗೊಂಡಿದ್ದರಿಂದಾಗಿ ಸರ್ಕಾರಕ್ಕೆ ಹೊರೆಯಾಗಿರುವುದು ಕಂಡುಬಂದಿರುತ್ತದೆ,’ ಎಂದು ತನಿಖಾ ಸಮಿತಿಯು ವಿವರಿಸಿದೆ.

ಗುತ್ತಿಗೆದಾರರಿಗೆ ಅನುಕೂಲ ಮಾಡಿಕೊಡಲಾಗಿದೆಯೇ?

ಕಾಮಗಾರಿಗಳ ಟೆಂಡರ್‍‌ಗಳನ್ನು ಕರೆಯುವಾಗ ಕೆಲವೇ ಕೆಲವು ಗುತ್ತಿಗೆದಾರರಿಗೆ ಅನುಕೂಲವಾಗುವಂತೆ ಹಾಗೂ ಉಳಿದ ಗುತ್ತಿಗೆದಾರರು ಟೆಂಡರ್ ಪ್ರಕ್ರಿಯೆಗಳಲ್ಲಿ ಭಾಗವಹಿಸದಂತೆ ಷರತ್ತುಗಳನ್ನು ರೂಪಿಸಲಾಗಿತ್ತೇ ಇಲ್ಲವೇ ಎಂಬುದರ ಕುರಿತೂ ತನಿಖಾ ಸಮಿತಿಯು ಪರಿಶೀಲನೆ ನಡೆಸಿತ್ತು.

ಈ ಕಾಮಗಾರಿಯ ಟೆಂಡರ್‍‌ನ್ನು ಕರ್ನಾಟಕ ಸರ್ಕಾರದ ಸ್ಟಾಂಡರ್ಡ್ ಟೆಂಡರ್ ಡಾಕ್ಯುಮೆಂಟ್‌ ಅನುಸಾರ ಟೆಂಡರ ಪ್ರಕ್ರಿಯೆ ಕೈಗೊಳ್ಳಲಾಗಿದೆ. ಈ ಕಾಮಗಾರಿಯು ವೈದ್ಯಕೀಯ ಕಾಲೇಜು ನಿರ್ಮಾಣ ಮತ್ತು 300 ಹಾಸಿಗೆಗಳ ಸುಸಜ್ಜಿತ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ ಕಾಮಗಾರಿಯಾಗಿದೆ. ಟೆಂಡರ್ ಡಾಕ್ಯುಮೆಂಟ್ಸ್‌ನಲ್ಲಿ ಜಾಯಿಂಟ್‌ ವೆಂಚರ್‍‌ ಕ್ಲಾಸ್‌ನಲ್ಲಿ ಅಳವಡಿಸಲಾಗಿದೆ. ಈ ಸಂಬಂಧ ಟೆಂಡರ್ ಡಾಕ್ಯುಮೆಂಟ್ ಸಿದ್ಧಪಡಿಸಿಕೊಂಡು ಟೆಂಡರ್ ಕರೆಯಲಾಗಿದೆ.

ಟೆಂಡರ್‍‌ನಲ್ಲಿ ಮೂರು ಮಂದಿ ಗುತ್ತಿಗೆದಾರರು ಭಾಗವಹಿಸಿದ್ದರು. ಬಿಎಸ್‌ಆರ್‍‌ ಇನ್ಫ್ರಾಟೆಕ್, ಸ್ಟಾರ್ ಇನ್ಫ್ರಾ ಟೆಕ್‌ ಬೆಂಗಳೂರು, ಹೈದರಾಬಾದ್‌ನ  ಕೆಎಂವಿ ಪ್ರಾಜೆಕ್ಟ್ಸ್‌   ಜೆಎಂಸಿ ಪ್ರಾಜೆಕ್ಟ್ಸ್‌ ಇಂಡಿಯಾ ಲಿಮಿಟೆಡ್‌ ಭಾಗವಹಿಸಿದ್ದವು. ಇದರಲ್ಲಿ ಅತೀ ಕನಿಷ್ಟ ದರಗಳನ್ನು ನಮೂದಿಸಿದ ಅರ್ಹ ಗುತ್ತಿಗೆದಾರರಿಗೆ ಟೆಂಡರ್‍‌ನ್ನು  ಸರ್ಕಾರದಿಂದ ಅನುಮೋದನೆ ಪಡೆದುಕೊಂಡು ಗುತ್ತಿಗೆ ವಹಿಸಲಾಗಿದೆ.

ಕಾಮಗಾರಿ ನಿರ್ವಹಿಸಲು 36 ತಿಂಗಳು ಕಾಲಾವಕಾಶ ನೀಡಿತ್ತು. ಕೆಡಬ್ಲ್ಯೂ 4 ರ ಪ್ರಕಾರ ತಾಂತ್ರಿಕ ಬಿಡ್‌ ಮೌಲ್ಯಮಾಪನಕ್ಕೆ 38.50 ಕೋಟಿ ರು ಮೊತ್ತದ ಲಿಕ್ಟಿಡ್ ಅಸೆಟ್ಸ್‌ ಅವಶ್ಯಕವಿರಬೇಕು. ಆದರೆ 136.60 ಕೋಟಿ ರು ಮೊತ್ತವು ಅವಶ್ಯಕವೆಂದು ಪರಿಗಣಿಸಲಾಗಿತ್ತು. ಈ ಕಾಮಗಾರಿಗಾಗಿ ಟೆಂಡರ್‍‌ಗಿಟ್ಟ ಮೊತ್ತವು 462.00 ಕೋಟಿ ರು ಅಗಿತ್ತು. ತಾಂತ್ರಿಕ ಬಿಡ್‌ ಪರಿಶೀಲನೆ ಸಂದರ್ಭದಲ್ಲಿ ಮೂಲ ದಾಖಲೆಗಳನ್ನು ಪರಿಶೀಲನೆಗಾಗಿ ಒದಗಿಸಲು 3 ದಿನಗಳ ಅವಧಿ ನೀಡಲಾಗಿತ್ತು. ಇಲ್ಲದಿದ್ದಲ್ಲಿ ತಾಂತ್ರಿಕ ಬಿಡ್‌ನ್ನು ನಾನ್ ರೆಸ್ಪಾನ್ಸಿವ್ ಎಂದು ಪರಿಗಣಿಸಲಾಗುವುದು ಎಂದು ಟೆಂಡರ್ ಡಾಕ್ಯುಮೆಂಟ್‌ನಲ್ಲಿ ತಿಳಿಸಲಾಗಿತ್ತು. ಹಾಗೆಯೇ ಕಾಮಗಾರಿಗೆ ನಿಗದಿಪಡಿಸಿರುವ ಕಾಲಮಿತಿ ಟೆಂಡರ್ ಪ್ರಕಟಣೆಯಲ್ಲಿ 24 ತಿಂಗಳು (ಮಳೆಗಾಲ ಸೇರಿದಂತೆ) ಕರಡು ಗುತ್ತಿಗೆ ದಸ್ತಾವೇಜಿನಲ್ಲಿ 36 ತಿಂಗಳು ಎಂದು ನಮೂದಿಸಿತ್ತು.

ಸ್ಪರ್ಧಾತ್ಮಕತೆಯನ್ನು ನಿಯಂತ್ರಿಸಲಾಗಿತ್ತೇ?

‘ಈ ಮೇಲ್ಕಂಡ ವಿಶೇಷ ಮತ್ತು ಹೆಚ್ಚುವರಿ ಷರತ್ತುಗಳೊಂದಿಗೆ ಟೆಂಡರ್ ಆಹ್ವಾನಿಸಿದ್ದು ಅದರಂತೆ ಮೌಲ್ಯಮಾಪನ ಮಾಡಿದೆ. ಈ ನಿರ್ಬಂಧಿತ ಷರತ್ತುಗಳಿಂದಾಗಿ ಸ್ಪರ್ಧಾತ್ಮಕತೆಯನ್ನು  ನಿಯಂತ್ರಿಸಿದಂತಾಗಿರುತ್ತದೆ. ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ  ಗುತ್ತಿಗೆದಾರರು ಭಾಗವಹಿಸುವುದನ್ನು ತಪ್ಪಿಸಿದಂತಾಗಿದೆ,’ ಎಂದು ತನಿಖಾ ತಂಡವು ತನ್ನ ವರದಿಯಲ್ಲಿ ಅಭಿಪ್ರಾಯಿಸಿರುವುದು ಗೊತ್ತಾಗಿದೆ.

ಪ್ರತಿ ಕಾಮಗಾರಿಯನ್ನು ಪ್ರಾರಂಭಿಸುವ ಮೊದಲು ಸಾಮಗ್ರಿಗಳು ಉಪಕರಣಗಳು ಮುಂತಾದವುಗಳಿಗೆ ಸಂಬಂಧಿಸಿದಂತೆ ಗುಣಮಟ್ಟ ಪರೀಕ್ಷೆಗಳನ್ನು ನಿರ್ದಿಷ್ಟಪಡಿಸಿ ಅಧಿಕೃತ ಏಜೆನ್ಸಿಗಳಿಂದ ಗುಣಮಟ್ಟ ಪರೀಕ್ಷೆ ಮಾಡಿಸಿರುವ ಬಗ್ಗೆಯೂ ತನಿಖಾ ತಂಡವು ಹಲವು ಸಂಗತಿಗಳನ್ನು ಬಯಲು ಮಾಡಿದೆ.

 

 

ಈ ಕಾಮಗಾರಿ ಪ್ರಗತಿಯಲ್ಲಿರುವಾಗ ಕಾಂಕ್ರೀಟ್‌ ಕೆಲಸಗಳಿಗೆ ಗುತ್ತಿಗೆದಾರರು ಮತ್ತು ಪಿಎಂಸಿಯಿಂದ ಎನ್‌ ಡಿ ಟಿ (NON DESTUCTIVE TEST)  ಅನ್ನು ರಿಬೌಂಡ್‌ ಹ್ಯಾಮರ್‍‌ನಿಂದ ಕೈಗೊಂಡಿದೆ ಎಂದು ವರದಿಯಲ್ಲಿ ವಿವರಿಸಿದೆ.

ತನಿಖಾ ಸಮಿತಿಯ ಅಭಿಪ್ರಾಯವೇನು?

ಅಂದಾಜು ಪಟ್ಟಿಯಲ್ಲಿ ಟೆಂಡರ್ ಪ್ರೀಮಿಯಂ, ಪ್ರೈಸ್‌ ಅಡ್ಜಸ್ಟ್‌ಮೆಂಟ್‌ ಅಳವಡಿಸಿಕೊಳ್ಳದಿರುವುದನ್ನು ಗಮನಿಸಿರುವ ತನಿಖಾ ತಂಡವು ಶಾಸನಬದ್ಧವಾದ ಹೆಚ್ಚುವರಿ ಜಿಎಸ್‌ಟಿ ಅಳವಡಿಸಿಕೊಂಡಿರುವುದನ್ನು ಬಯಲು ಮಾಡಿದೆ. ಇದರಿಂದಾಗಿಯೇ ಸರ್ಕಾರಕ್ಕೆ ಹೆಚ್ಚುವರಿ ಹೊರೆಯಾಗಿದೆ ಎಂದು ವರದಿಯಲ್ಲಿ ಅಭಿಪ್ರಾಯಿಸಿದೆ.

ಕನಕಪುರದಿಂದ ಚಿಕ್ಕಬಳ್ಳಾಪುರಕ್ಕೆ ಕಟ್ಟಡ ಬದಲಾವಣೆಯಿಂದ ಸ್ಥಳಕ್ಕೆ ತಕ್ಕಂತೆ ಹೆಚ್ಚುವರಿ ಪರಿಮಾಣಗಳು, ಅಂಶಗಳನ್ನು ಮೂಲ ಅಂದಾಜಿನಲ್ಲಿ ಅಳವಡಿಸಿಕೊಂಡಿಲ್ಲ. ಉಪಯೋಗಿ ಇಲಾಖೆ ಕೋರಿಕೆ ಮತ್ತು ಅಂದಿನ ಆರೋಗ್ಯ ಸಚಿವರ ಸೂಚನೆ ಮೇರೆಗೆ ಹಲವು  ಹೆಚ್ಚುವರಿ ಕಾಮಗಾರಿ ಮತ್ತು ಹೆಚ್ಚುವರಿಯಾಗಿ 14,947 ಚ ಮೀ ವಿಸ್ತೀರ್ಣದಲ್ಲಿ ಕಾಮಗಾರಿ ನಡೆಸಲಾಗಿದೆ. ಟೆಂಡರ್ ಪ್ರಕ್ರಿಯೆಯಲ್ಲಿ ಹೆಚ್ಚುವರಿ ಮತ್ತು ನಿರ್ಬಂಧಿತ ಷರತ್ತುಗಳನ್ನು ವಿಧಿಸುವ ಮೂಲಕ ಸ್ಪರ್ಧಾತ್ಮಕತೆಯನ್ನು ನಿಯಂತ್ರಿಸಲಾಗಿದೆ. ಇದರಿಂದಾಗಿಯೇ ಹೆಚ್ಚಿನ ಸಂಖ್ಯೆಯಲ್ಲಿ ಗುತ್ತಿಗೆದಾರರು ಭಾಗವಹಿಸಲು ತಪ್ಪಿಸಿದಂತಾಗಿದೆ ಎಂದು ತ ನಿಖಾ ತಂಡವು ವರದಿಯಲ್ಲಿ ವಿವರಿಸಿದೆ.

ಅಂದಿನ ಆರೋಗ್ಯ ಸಚಿವರು ಅಂತಿಮಗೊಳಿಸಿರುವ ಹಾಗೂ ಕಟ್ಟಡದ ಸೌಂದರ್ಯವನ್ನು ಹೆಚ್ಚಿಸಲಾಗಿದೆ. ಇದಕ್ಕಾಗಿ ಜಿಆರ್‍‌ಸಿ ಕಾರ್ನೋಸ್ ಮತ್ತು ಡೋಮ್ಸ್‌ ಕಾಮಗಾರಿಗಳನ್ನು ಮಾಡಲಾಗಿದೆ. ಅದರಂತೆ ಪರಿಷ್ಕೃತ ಅಂದಾಜಿನಲ್ಲಿ ಅಳವಡಿಸಿಕೊಳ್ಳಲಾಗಿದೆ. ಹೆಚ್ಚುವರಿಯಾಗಿ ಕೈಗೊಂಡ ಕಾಮಗಾರಿಗಳಿಂದಾಗಿ 525 ಕೋಟಿ ರು ಮೂಲ ಅಂದಾಜು ಮೊತ್ತಕ್ಕಿಂತ ಪರಿಷ್ಕೃತ ಅಂದಾಜು ಮೊತ್ತ 810 ಕೋಟಿಗೆ ಹೆಚ್ಚಳವಾಗಿದೆ. ಇದರಿಂದಾಗಿ ನಿವ್ವಳ ಮೊತ್ತ 285.00 ಕೋಟಿ ರು ಸರ್ಕಾರಕ್ಕೆ ಹೊರೆಯಾಗಿದೆ ಎಂದು ತನಿಖಾ ತಂಡವು ವರದಿಯಲ್ಲಿ ಅಭಿಪ್ರಾಯಿಸಿದೆ.

 

 

 

ಈ ವೇಳೆ ಕಾರ್ಯನಿರ್ವಹಿಸಿದ್ದ ಇಂಜಿನಿಯರ್‍‌, ತಾಂತ್ರಿಕ ಸಹಾಯಕರು ಮತ್ತು ಲೆಕ್ಕಾಧಿಕಾರಿಗಳ ಪಟ್ಟಿಯನ್ನು ತನಿಖಾ ಸಮಿತಿಯು ಒದಗಿಸಿದೆ.

 

 

ಮುಖ್ಯ ಇಂಜಿನಿಯರ್‍‌ ಎಂ ಗಣೇಶ್‌, ಸಿ ಮಂಜಪ್ಪ, ಹೆಚ್‌ ಸಿ ರಮೇಂದ್ರ,  ಡೆಪ್ಯೂಟಿ ಚೀಫ್‌ ಇಂಜಿನಿಯರ್‍‌ಗಳಾದ ಆರ್ ಲಕ್ಷ್ಮೀಪತಿ, ಕೆ ಜಿ ಸತ್ಯನಾರಾಯಣ, ಸಿ ಆರ್ ಮಹೇಶ್‌ ಕುಮಾರ್, ಟಿ ಎ ಸತ್ಯನಾರಾಯಣ ರಾವ್, ಟಿ ಕೃಷ್ಣಪ್ಪ, ಬಿ ಆಋf ಉಮೇಶ್‌, ಎಂ ಜೆ ಯೋಗೇಶ್‌, ತಾಂತ್ರಿಕ ಸಹಾಯಕರಾದ ಎಂ ಜಿ ರಮಾದೇವಿ, ರತ್ನ ವಿ., ವೈ ಆರ್ ರತ್ನಾಕರ್, ಟಿ ವಿ ವಿನೋದ್‌ ಕುಮಾರ್ ಕವಿತಾ ಎಚ್‌ ಎಸ್‌, ಬಿ ಎಲ್‌ ದೇವರಾಜ,  ಮಮತಾ, ರಾಮಚಂದ್ರಪ್ಪ ಜಿ, ವಿಜಯಕುಮಾರ್ ವಿ, ಬಿ ಎಂ ರಮೇಶ್‌ ಅವರ ಹೆಸರನ್ನು ತನಿಖಾ ವರದಿಯಲ್ಲಿ  ಉಲ್ಲೇಖಿಸಿದೆ.

 

 

ರಾಜ್ಯದ ಚಿಕ್ಕಬಳ್ಳಾಪುರ, ಹಾವೇರಿ, ಯಾದಗಿರಿ ಮತ್ತು ಚಿಕ್ಕಮಗಳೂರು ವೈದ್ಯಕೀಯ ಕಾಲೇಜುಗಳ ಕಟ್ಟಡ ಕಾಮಗಾರಿಗಳಲ್ಲಿ ನಿಯಮ ಉಲ್ಲಂಘನೆ, ಭ್ರಷ್ಟಾಚಾರ ಮತ್ತು ಅನಗತ್ಯ ವೆಚ್ಚವಾಗಿದೆ ಎಂದು ಲೋಕೋಪಯೋಗಿ ಇಲಾಖೆಯು ನೀಡಿರುವ ತಾಂತ್ರಿಕ ವರದಿ ಆಧರಿಸಿ ದೋಷಾರೋಪಣೆ ಪಟ್ಟಿ ತಯಾರಿಸಲು ವೈದ್ಯಕೀಯ ಶಿಕ್ಷಣ ಇಲಾಖೆಯು ಈಗಾಗಲೇ ಆದೇಶಿಸಿದೆ.

ಈ ಅಕ್ರಮದಲ್ಲಿ ಭಾಗಿಯಾಗಿದ್ದಾರೆ ಎನ್ನಲಾಗಿರುವ ಆರೋಪಿತರ ವಿರುದ್ಧ ದೋಷಾರೋಪಣೆ ಪಟಟಿ ಸಲ್ಲಿಸಲು ನಿವೃತ್ತ ಜಿಲ್ಲಾ ನ್ಯಾಯಾಧೀಶರನ್ನು ನೇಮಿಸಿದೆ. ಆಡಳಿತಾತ್ಕ ಅನುಮೋದನೆ ಪಡೆಯದೇ ಹೆಚ್ಚುವರಿ ಕಾಮಗಾರಿಗಳನ್ನು ಕೈಗೊಳ್ಳುವ ಮೂಲಕ ಅನಗತ್ಯ ವೆಚ್ಚ ಮಾಡಲಾಗಿತ್ತು. ಇದಕ್ಕೆ ಕಾರಣರಾದವರ ವಿರುದ್ಧ ಶಿಸ್ತು ಕ್ರಮ ಜರುಗಿಸಲು ಅನುಬಂಧ -1ರಿಂದ 4 ನ್ನು ಒಳಗೊಂಡ ದೋಷಾರೋಪಣೆ ಪಟ್ಟಿ ತಯಾರಿಸಲು ನಿವೃತ್ತ ಜಿಲ್ಲಾ ನ್ಯಾಯಾಧೀಶ ಜಿ ನಂಜುಂಡಯ್ಯ ಅವರನ್ನು 2026ರ ಮಾರ್ಚ್‌ನಲ್ಲಿಯೇ ಆದೇಶ ಹೊರಡಿಸಿದೆ.

 

 

 

 

ಟೆಂಡರ್ ಪ್ರಕ್ರಿಯೆಯನ್ನು ರಾಜ್ಯ ಮಟ್ಟದ ತಾಂತ್ರಿಕ ಸಮಿತಿಯಲ್ಲಿ ಮಂಡಿಸಿ ಅನುಮೋದನೆ ಪಡೆದಿದ್ದರೂ ಸಹ ಸಂಬಂಧಪಟ್ಟ ಅಧಿಕಾರಿ ವರ್ಗವು ನಿಯಮಗಳ ಉಲ್ಲಂಘನೆ ಮಾಡಿರುವುದು ತನಿಖಾ ವರದಿಯಿಂದ ನಿಖರವಾಗಿ ಕಂಡು ಬಂದಿದೆ ಎಂದು ವೈದ್ಯಕೀಯ ಶಿಕ್ಷಣ ಇಲಾಖೆಯ ಆದೇಶದಲ್ಲಿ ವಿವರಿಸಿತ್ತು.

 

 

ಲೋಕೋಪಯೋಗಿ ಇಲಾಖೆ ನೀಡಿರುವ ತಾಂತ್ರಿಕ ವರದಿ ಆಧಾರದ ಮೇಲೆ ಚಿಕ್ಕಬಳ್ಳಾಪುರ, ಹಾವೇರಿ, ಯಾದಗಿರಿ ಮತ್ತು ಚಿಕ್ಕಮಗಳೂರು ವೈದ್ಯಕೀಯ ಕಾಲೇಜುಗಳ ಕಟ್ಟಡಗ ಕಾಮಗಾರಿಗಳಿಗೆ ನಿಯಮಗಳನ್ನು ಪಾಲಿಸಿಲ್ಲ ಎಂಬುದು ಖಚಿತಪಟ್ಟಿದೆ. ಹಾಗೆಯೇ ಸಕ್ಷಮ ಪ್ರಾಧಿಕಾರದ ಆಡಳಿತಾತ್ಮಕ ಅನುಮೋದನೆಯನ್ನು ಪಡೆಯದೇ ಇರುವುದರ ಹಿಂದೆ ದುರದ್ದೇಶವಿದೆ. ಈ ಮೂಲಕ ಅನಗತ್ಯವಾಗಿ ಹೆಚ್ಚುವರಿ ಕಾಮಗಾರಿ ಮತ್ತು ಅನಗತ್ಯವಾಗಿ ವೆಚ್ಚ ಮಾಡಲಾಗಿದೆ ಎಂದು ಆದೇಶದಲ್ಲಿ ವಿವರಿಸಿರುವುದು ತಿಳಿದು ಬಂದಿದೆ.

ಭಾರತ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು (ಕೇಂದ್ರ ಪುರಸ್ಕೃತ ಯೋಜನೆಯಡಿ) 3ನೇ ಹಂತದಲ್ಲಿ ಪ್ರತಿ ವೈದ್ಯಕೀಯ ಕಾಲೇಜಿಗೆ 325.00 ಕೋಟಿಗಳ ವೆಚ್ಚದಲ್ಲಿ ದೇಶದಾದ್ಯಂತ 75 ವೈದ್ಯಕೀಯ ಕಾಲೇಜುಗಳನ್ನು ಸ್ಥಾಪಿಸುವ ಕೇಂದ್ರ ಪುರಸ್ಕೃತ ಯೋಜನೆ ಜಾರಿಗೊಳಿಸಿತ್ತು. ಈ ಯೋಜನೆಯಡಿ ಕರ್ನಾಟಕ ಸರ್ಕಾರವು ತಾಂತ್ರಿಕ ಮೌಲ್ಯಮಾಪನ ಸಮಿತಿಗೆ 2019ರ ಸೆ.8ರಂದು ವಿಸ್ತೃತ ಯೋಜನಾ ವರದಿಯನ್ನು ಸಲ್ಲಿಸಿತ್ತು.

ನಂತರ ಯೋಜನಾ ವರದಿಯನ್ನು ಪರಿಶೀಲಿಸಿ, ಚಿಕ್ಕಮಗಳೂರು ಅರಳಗುಪ್ಪೆ ಮಲ್ಲೇಗೌಡ ಜಿಲ್ಲಾ ಆಸ್ಪತ್ರೆಯನ್ನು ಉನ್ನತೀಕರಣಗೊಳಿಸಿ ಚಿಕ್ಕಮಗಳೂರು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯನ್ನು 60:40 ಅನುಪಾತದಲ್ಲಿ ವೆಚ್ಚ ಭರಿಸಿ ಸ್ಥಾಪಿಸುವ ಕರ್ನಾಟಕ ಸರ್ಕಾರದ ಪ್ರಸ್ತಾವನೆಗೆ 2019ರ ಅಕ್ಟೋಬರ್ 23ರಂದು ಕೇಂದ್ರ ಸಚಿವಾಲಯವು ಅನುಮೋದನೆ ನೀಡಿತ್ತು.

ಭಾರತ ಸರ್ಕಾರವು ತನ್ನ ಪಾಲಿನ 195 ಕೋಟಿಗಳಲ್ಲಿ 2019ರ ನವೆಂಬರ್‍‌ 15ರಂದು 23 ಕೋಟಿ, 2020ರ ಜೂನ್‌ 10ರಂದು 27 ಕೋಟಿ ರು ಅನುದಾನವನ್ನು ಬಿಡುಗಡೆ ಮಾಡಿತ್ತು. ಅದೇ ರೀತಿ ಆರೋಗ್ಯ ಕ್ಷೇತ್ರದಲ್ಲಿ ಮಾನವ ಸಂಪನ್ಮೂಲದ ಕೊರತೆಯನ್ನು ನೀಗಿಸಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಜಿಲ್ಲಾ ಆಸ್ಪತ್ರೆಗಳ ಜೊತೆಗೆ ಹೊಸ ವೈದ್ಯಕೀಯ ಕಾಲೇಜುಗಳ ಸ್ಥಾಪನೆ ಕುರಿತ ಕೇಂದ್ರ ಪುಸ್ಕೃತ ಯೋಜನೆಯನ್ನು ಅನುಷ್ಟಾನಗೊಳಿಸುವುದೂ ಸೇರಿದಂತೆ ಹಲವು ಕ್ರಮಗಳನ್ನು ಕೈಗೊಂಡಿತ್ತು.

ಈ ಯೋಜನೆಯ ಮೊದಲನೇ ಹಂತದಲ್ಲಿ 2014 ರಲ್ಲಿ 58 ಹೊಸ ವೈದ್ಯಕೀಯ ಕಾಲೇಜುಗಳನ್ನು ಒಟ್ಟು ರೂ. 10,962/- ಕೋಟಿಗಳ ವೆಚ್ಚದಲ್ಲಿ ಪ್ರಾರಂಭಿಸಲಾಗಿದೆ. ಇದರಲ್ಲಿ ಕೇಂದ್ರ ಸರ್ಕಾರವು ತನ್ನ ಪಾಲಿನ ಒಟ್ಟು 7541 ಕೋಟಿ ರು.ಗಳನ್ನು ಬಿಡುಗಡೆ ಮಾಡಿದೆ.
ಪ್ರತಿ ರಾಜ್ಯದಲ್ಲಿ ಆರೋಗ್ಯ ಸೇವೆಗಳ ಕನಿಷ್ಠ ಸೌಲಭ್ಯ ಹೊಂದಿರುವ ಒಂದು ಜಿಲ್ಲೆಗೆ ಒಂದು ಮೆಡಿಕಲ್ ಕಾಲೇಜು ಸೌಲಭ್ಯ ಒದಗಿಸುವ ಉದ್ದೇಶದಿಂದ ಈ ಯೋಜನೆಯ ಎರಡನೇ ಹಂತದಲ್ಲಿ ಪ್ರತಿ ಮೆಡಿಕಲ್ ಕಾಲೇಜಿಗೆ 250 ಕೋಟಿಗಳಂತೆ ಒಟ್ಟು 6000 ಕೋಟಿಗಳ ವೆಚ್ಚದಲ್ಲಿ 24 ಮೆಡಿಕಲ್ ಕಾಲೇಜುಗಳನ್ನು ಸ್ಥಾಪಿಸಲು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಅನುಮೋದನೆ ನೀಡಿರುವುದನ್ನು ಸ್ಮರಿಸಬಹುದು.

Hot this week

ಏಕಬಳಕೆ ಪ್ಲಾಸ್ಟಿಕ್‌ ಬಳಕೆಗಿಲ್ಲ ಕಡಿವಾಣ, ನಿಷೇಧದ ಕಾನೂನು ಕಾಗದದ ಮೇಲಷ್ಟೇ ಜಾರಿ; ಪಾಲಿಕೆ ಬಳಿ ಮಾಹಿತಿಯೇ ಇಲ್ಲ

ಮೈಸೂರು: ಏಕಬಳಕೆ ಪ್ಲಾಸ್ಟಿಕ್‌ನ ಉತ್ಪಾದನೆ, ಸಂಗ್ರಹಣೆ, ವಿತರಣೆ ಮತ್ತು ಬಳಕೆಯನ್ನು ಸಂಪೂರ್ಣವಾಗಿ...
Please Scan to make Your Contribution

Topics

ಏಕಬಳಕೆ ಪ್ಲಾಸ್ಟಿಕ್‌ ಬಳಕೆಗಿಲ್ಲ ಕಡಿವಾಣ, ನಿಷೇಧದ ಕಾನೂನು ಕಾಗದದ ಮೇಲಷ್ಟೇ ಜಾರಿ; ಪಾಲಿಕೆ ಬಳಿ ಮಾಹಿತಿಯೇ ಇಲ್ಲ

ಮೈಸೂರು: ಏಕಬಳಕೆ ಪ್ಲಾಸ್ಟಿಕ್‌ನ ಉತ್ಪಾದನೆ, ಸಂಗ್ರಹಣೆ, ವಿತರಣೆ ಮತ್ತು ಬಳಕೆಯನ್ನು ಸಂಪೂರ್ಣವಾಗಿ...

ಖಾಸಗಿ ವಿಶ್ವವಿದ್ಯಾಲಯಗಳ ಸ್ಥಾಪನೆ; ಕನಿಷ್ಟ ಭೂಮಿ ಪ್ರಮಾಣ, ಜಂಟಿ ಸ್ಥಿರ ಠೇವಣಿ 25 ಕೋಟಿ ಬದಲಿಗೆ 20 ಕೋಟಿ ರು ಇಳಿಕೆಗೆ ಚಿಂತನೆ

ಬೆಂಗಳೂರು;  ಖಾಸಗಿ ವಿಶ್ವವಿದ್ಯಾಲಯಗಳ ಸ್ಥಾಪನೆಗೆ ಇದ್ದ  ಕನಿಷ್ಠ ಭೂಮಿ ಅವಶ್ಯಕತೆ ತೆಗೆದುಹಾಕುವುದು...

35,280 ಚಾಲ್ತಿಯಲ್ಲಿಲ್ಲದ ಬ್ಯಾಂಕ್‌ ಖಾತೆಗಳಲ್ಲಿ 239.66 ಕೋಟಿ; ಅಭಿವೃದ್ಧಿ ಯೋಜನೆಗಳಿಗೆ ಬಳಸದೇ ನಿರ್ಲಕ್ಷ್ಯ, 14.37 ಕೋಟಿ ಬಡ್ಡಿ ನಷ್ಟ

ಬೆಂಗಳೂರು; ರಾಜ್ಯದ ಗ್ರಾಮ ಪಂಚಾಯ್ತಿಗಳು  ಚಾಲ್ತಿಯಲ್ಲೇ ಇಲ್ಲದ 35,280  ಬ್ಯಾಂಕ್‌ ಖಾತೆಗಳಲ್ಲಿ ...

ಸರ್ಕಾರಿ ಲೆಕ್ಕಪತ್ರಗಳ ಮರು ಹೊಂದಾಣಿಕೆಯಲ್ಲಿ ಲೋಪ; ಆದಾಯ, ಸ್ವೀಕೃತಿ, ಬಂಡವಾಳ ವೆಚ್ಚದಲ್ಲಿ ವ್ಯತ್ಯಾಸ, ಕಳವಳ ವ್ಯಕ್ತಪಡಿಸಿದ ಲೆಕ್ಕಪರಿಶೋಧನಾ ಮಹಾನಿರ್ದೇಶಕ

ಬೆಂಗಳೂರು; ಸರ್ಕಾರಿ ಲೆಕ್ಕಪತ್ರಗಳಲ್ಲಿ ಸಂಪೂರ್ಣ ನಿಖರತೆ, ಪಾರದರ್ಶಕತೆ ಮತ್ತು ವಿಶ್ವಾಸಾರ್ಹತೆ ಖಚಿತಪಡಿಸಬೇಕಿದ್ದ...

Related Articles

Popular Categories

error: Content is protected !!