ಬೆಂಗಳೂರು; 2011ನೇ ಸಾಲಿನ ಕೆಎಎಸ್ ಅಧಿಕಾರಿಗಳ ನೇಮಕದಲ್ಲಿನ ಅಕ್ರಮಕ್ಕೆ ಸಂಬಂಧಿಸಿದಂತೆ ಕರ್ನಾಟಕ ಲೋಕಸೇವಾ ಆಯೋಗದ ಮಾಜಿ ಅಧ್ಯಕ್ಷ ಗೋನಾಳ್ ಭೀಮಪ್ಪ ಹಾಗೂ ಹಿಂದಿನ 8 ಸದಸ್ಯರುಗಳನ್ನು ವಿಚಾರಣೆಗೊಳಪಡಿಸುವ ಸಂಬಂಧ ಸಿಬ್ಬಂದಿ ಆಡಳಿತ ಸುಧಾರಣೆ ಇಲಾಖೆಯು ಸಚಿವ ಸಂಪುಟಕ್ಕೆ ಪ್ರಸ್ತಾವ ಮಂಡಿಸಿದೆ.
ಗೋನಾಳ್ ಭೀಮಪ್ಪ ಮತ್ತು ಇತರೆ 8 ಮಂದಿ ಸದಸ್ಯರ ವಿರುದ್ಧ ಅಭಿಯೋಜನೆಗೆ ಅನುಮತಿ ಕೋರಿ ರಾಷ್ಟ್ರಪತಿಗಳಿಗೆ ಪ್ರಸ್ತಾವ ಸಲ್ಲಿಸಲು ಸಿಐಡಿಯು, ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿತ್ತು. ಈ ಪ್ರಸ್ತಾವವನ್ನು ಪರಿಶೀಲಿಸಿರುವ ಕಾನೂನು ಇಲಾಖೆಯೂ ಸಹ ಸಿಐಡಿ ಕೋರಿಕೆಯ ಪ್ರಸ್ತಾವವನ್ನು ಅನುಮೋದಿಸಿದೆ!
ನಾಳೆ ಬೆಳಿಗ್ಗೆ ನಡೆಯಲಿರುವ ಸಚಿವ ಸಂಪುಟದಲ್ಲಿ ಈ ಕುರಿತು ಅಂತಿಮ ತೀರ್ಮಾನ ಹೊರಬೀಳಲಿದೆ.
ವಿಶೇಷವೆಂದರೇ ಕೆಪಿಎಸ್‌ಸಿ ಅಧ್ಯಕ್ಷರಾಗಿದ್ದ ಗೋನಾಳ್ ಭೀಮಪ್ಪ ಮತ್ತು ಇತರೆ 8 ಸದಸ್ಯರ ವಿರುದ್ಧದ ಆರೋಪಗಳನ್ನು ಹಿಂದಿನ ಬಿಜೆಪಿ ಸರ್ಕಾರವು ಕೈಬಿಟ್ಟಿತ್ತು. ಅಲ್ಲದೇ ಗೋನಾಳ್ ಭೀಮಪ್ಪ ವಿರುದ್ಧದ ಲೋಕಾಯುಕ್ತ ಪ್ರಕರಣವನ್ನು ಹೈಕೋರ್ಟ್ ಕೂಡ ರದ್ದುಗೊಳಿಸಿತ್ತು.
ಮತ್ತೊಂದು ವಿಶೇಷವೆಂದರೇ ಗೋನಾಳ್ ಭೀಮಪ್ಪ ಅವರು ಮಾಜಿ ಸಚಿವ ಎಚ್ ಆಂಜನೇಯ ಅವರ ತಂಗಿಯ ಪತಿಯೂ ಹೌದು. ಎಚ್ ಆಂಜನೇಯ ಅವರು ಸಿದ್ದರಾಮಯ್ಯ ಅವರಿಗೆ ಅತ್ಯಂತ ನಿಷ್ಠೆಯನ್ನು ವ್ಯಕ್ತಪಡಿಸುತ್ತಲೇ ಬಂದಿದ್ದಾರೆ. ಸಿದ್ದರಾಮಯ್ಯ ಅವರು ಎರಡನೇ ಅಂಬೇಡ್ಕರ್ ಎಂದೂ ಸಹ ಈಚೆಗಷ್ಟೇ ಹೇಳಿಕೆ ನೀಡಿದ್ದರು. ಈ ಬೆಳವಣಿಗೆ ನಡುವೆಯೇ ಗೋನಾಳ್ ಭೀಮಪ್ಪ ಅವರ ವಿರುದ್ಧ ಅಭಿಯೋಜನೆಗೆ ಅನುಮತಿ ಕೋರುವ ಪ್ರಸ್ತಾವವನ್ನು ಸಚಿವ ಸಂಪುಟಕ್ಕೆ ಮಂಡಿಸಲು ಅನುಮತಿ ನೀಡಿರುವುದು ಸಹ ಚರ್ಚೆಗೆ ಗ್ರಾಸವಾಗಿದೆ.
ಗೋನಾಳ್ ಭೀಮಪ್ಪ ಮತ್ತು ಇತರೆ ಸದಸ್ಯರ ವಿರುದ್ಧ ಅಭಿಯೋಜನೆಗೆ ಅನುಮತಿ ನೀಡುವ ಸಂಬಂಧ ಪ್ರಸ್ತಾವ ಮಂಡಿಸುವ ಮೂಲಕ ರಾಜ್ಯ ಕಾಂಗ್ರೆಸ್ ಸರ್ಕಾರವು ಈ ಪ್ರಕರಣಕ್ಕೆ ಮರು ಜೀವ ನೀಡಲು ಹೊರಟಿದೆ. ಇದು ರಾಜಕೀಯ ವಲಯದಲ್ಲಿ ಮತ್ತೊಂದು ಸುತ್ತಿನ ಸಂಚಲನಕ್ಕೆ ಕಾರಣವಾಗಲಿದೆ.
ಅಲ್ಲದೇ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಕರ್ನಾಟಕ ಸಿವಿಲ್ ಸೇವೆಗಳ( 2011ನೇ ಸಾಲಿನ ಗೆಜೆಟೆಡ್ ಪ್ರೊಬೇಷನರ್‍ಗಳ ಆಯ್ಕೆ ಮತ್ತು ನೇಮಕಾತಿಯ ಸಿಂಧುಗೊಳಿಸುವಿಕೆ) ಮಸೂದೆ 2022ಕ್ಕೆ ರಾಜ್ಯಪಾಲರು ಅಂಕಿತ ಹಾಕಿದ್ದರು.ಹೀಗಾಗಿ 2011ನೇ ಸಾಲಿನ ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳ ಭರ್ತಿಗೆ ಕೆಪಿಎಸ್‌ಸಿ ನಡೆಸಿದ್ದ ಪರೀಕ್ಷೆಯಲ್ಲಿ ಆಯ್ಕೆಯಾಗಿದ್ದ 362 ಅಭ್ಯರ್ಥಿಗಳ ನೇಮಕಾತಿಗೆ ಸಿಂಧುತ್ವದ ಮುದ್ರೆ ಒತ್ತಿತ್ತು.
ಈಗಿನ ರಾಜ್ಯ ಸರ್ಕಾರವು 2011ನೇ ಸಾಲಿನ ಅಕ್ರಮ ನೇಮಕಾತಿ ಸಂಬಂಧ ಅಭಿಯೋಜನೆಗೆ ಅನುಮತಿ ನೀಡಲು ಹೊರಟಿರುವುದು ಈಗಾಗಲೇ ನೇಮಕಾತಿ ಪತ್ರ ಪಡೆದು ಸೇವೆಯಲ್ಲಿರುವ 362 ಅಭ್ಯರ್ಥಿಗಳ ಭವಿಷ್ಯದ ಮೇಲೆ ಕಾರ್ಮೋಡ ಕವಿಯಲು ಕಾರಣವಾಗಲಿದೆ.
ಗೋನಾಳ್ ಪ್ರಕರಣ ರದ್ದುಗೊಳಿಸಿದ್ದ ಹೈಕೋರ್ಟ್
2011ರ ನೇಮಕಾತಿಯಲ್ಲಿ ಅಕ್ರಮಗಳಾಗಿವೆ ಎಂದು ಕೆಪಿಎಸ್‌ಸಿ ಹಿಂದಿನ ಅಧ್ಯಕ್ಷ ಗೋನಾಳ್ ಭೀಮಪ್ಪ ಅವರ ವಿರುದ್ಧ 2013ರ ಜೂನ್ 25 ರಂದು ವಿಧಾನಸೌಧ ಠಾಣೆ ಪೊಲೀಸರು ಗೋನಾಳ್ ಭೀಮಪ್ಪ ವಿರುದ್ಧ ಎಫ್‌ಐಆರ್ ದಾಖಲಿಸಿದ್ದರು. ರಾಜ್ಯಪಾಲರು 2017ರ ಫೆ 4ರಂದು ಅವರ ವಿಚಾರಣೆಗೆ ಅನುಮತಿ ನೀಡಿದ್ದರು.
ಇದನ್ನು ಗೋನಾಳ್ ಭೀಮಪ್ಪ ಅವರು ಹೈಕೋರ್ಟ್ ಮೊರೆ ಹೊಕ್ಕಿದ್ದರು. ಈ ಅರ್ಜಿಯನ್ನು ಮಾನ್ಯ ಮಾಡಿದ್ದ ನ್ಯಾಯಮೂರ್ತಿ ಆನಂದ್ ಬೈರಾರೆಡ್ಡಿ ಅವರು ಗೋನಾಳ್ ವಿರುದ್ಧದ ಪ್ರಕರಣವನ್ನು ರದ್ದುಗೊಳಿಸಿ ತೀರ್ಪು ನೀಡಿದ್ದರು.
‘ಕೆಪಿಎಸ್‌ಸಿ ಅಧ್ಯಕ್ಷರು ಹಾಗೂ ಸದಸ್ಯರುಗಳ ಹುದ್ದೆ ಸಾಂವಿಧಾನಿಕ ಹುದ್ದೆಯಾಗಿದೆ. ಸರಕಾರದ ಶಿಫಾರಸ್ಸಿನ ಮೇಲೆ ರಾಜ್ಯಪಾಲರು ನೇಮಕ ಮಾಡಿದರೂ ಇವರ ಮೇಲಿನ ಪ್ರಕರಣಗಳ ವಿಚಾರಣೆ(ಪ್ರಾಸಿಕ್ಯೂಷನ್)ಗೆ ಅನುಮತಿ ನೀಡುವ ಅಧಿಕಾರ ಇರುವುದು ರಾಷ್ಟ್ರಪತಿಗಳಿಗೆ ಮಾತ್ರ. ಹೀಗಾಗಿ ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ್ದು ಕಾನೂನು ಬಾಹಿರ ಕ್ರಮ,’ ಎಂದು ಅರ್ಜಿದಾರರ ಪರ ವಕೀಲರು ನ್ಯಾಯಾಲಯದಲ್ಲಿ ವಾದಿಸಿದ್ದರು.
ಆ ವಾದವನ್ನು ಮಾನ್ಯ ಮಾಡಿದ್ದ ನ್ಯಾಯಾಲಯ, ಅರ್ಜಿದಾರರ ವಿರುದ್ಧ ಲೋಕಾಯುಕ್ತ ದಾಖಲಿಸಿರುವ ಪ್ರಕರಣವನ್ನು ರದ್ದುಗೊಳಿಸಲಾಗುವುದು ಎಂದು ಆದೇಶ ನೀಡಿತ್ತು.
ಅದೇ ರೀತಿ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳಾ ಶ್ರೀಧರ್ ಅವರನ್ನು ಕರ್ನಾಟಕ ಲೋಕಸೇವಾ ಆಯೋಗದ ಸದಸ್ಯ ಸ್ಥಾನದಿಂದ ಅಮಾನತುಗೊಳಿಸಿ ಹಿಂದಿನ ರಾಜ್ಯಪಾಲರು ಹೊರಡಿಸಿದ್ದ ಆದೇಶವನ್ನು ಸಹ ಹೈಕೋರ್ಟ್ ಕೂಡ ರದ್ದುಪಡಿಸಿತ್ತು.
2011ನೇ ಸಾಲಿನ ಕೆಎಎಸ್ ನೇಮಕ ಸಂಬಂಧ ಕೆಪಿಎಸ್‌ಸಿ 2014ರ ಮಾ.21ರಂದು 162 ಗ್ರೂಪ್ ಎ ಮತ್ತು 200 ಗ್ರೂಪ್ ಬಿ ಹುದ್ದೆಗಳ ನೇಮಕದ ಅಂತಿಮ ಆಯ್ಕೆ ಪಟ್ಟಿ ಪ್ರಕಟಿಸಿತ್ತು. ನಂತರ ಡಾ.ಎಚ್.ಪಿ.ಎಸ್.ಮೈತ್ರಿ ನೇಮಕ ಪಾರದರ್ಶಕವಾಗಿ ನಡೆದಿಲ್ಲ, ವ್ಯಾಪಕ ಅಕ್ರಮ ನಡೆದಿವೆ. ಆಯೋಗದ ಸದಸ್ಯರೇ ಕರೆ ಮಾಡಿ ಹಣದ ಬೇಡಿಕೆ ಇಟ್ಟಿದ್ದರು ಎಂದು ಆರೋಪಿಸಿ ಅಂದಿನ ಅಡ್ವೊಕೇಟ್ ಜನರಲ್ ಪ್ರೋ.ರವಿವರ್ಮ ಕುಮಾರ್‌ಗೆ ದೂರು ನೀಡಿದ್ದರು.
ಅವರು ಆ ಬಗ್ಗೆ ತನಿಖೆ ನಡೆಸುವಂತೆ ಸರಕಾರಕ್ಕೆ ಪತ್ರ ಬರೆದಿದ್ದರು. ಸರಕಾರ ತನಿಖೆ ನಡೆಸಿ ವರದಿ ನೀಡುವಂತೆ ಸಿಐಡಿಗೆ ಸೂಚನೆ ನೀಡಿತ್ತು. ತನಿಖೆ ನಡೆಸಿ ಮಧ್ಯಂತರ ವರದಿ ಸಲ್ಲಿಸಿದ್ದ ಸಿಐಡಿ, ಮೇಲ್ನೋಟಕ್ಕೆ ಅಕ್ರಮ ನಡೆದಿರುವುದು ಸಾಬೀತಾಗಿದೆ ಎಂದು ಹೇಳಿತ್ತು. ಅಲ್ಲದೆ, ಸಮಗ್ರ ತನಿಖೆ ನಡೆಸಿ 10ಸಾವಿರಕ್ಕೂ ಅಧಿಕ ಪುಟಗಳ ವರದಿ ಸಲ್ಲಿಸಿದ್ದ ಕೆಪಿಎಸ್‌ಸಿ ಅಧ್ಯಕ್ಷರಾಗಿದ್ದ ಗೋನಾಳ್ ಭೀಮಪ್ಪ ಮತ್ತಿತರ ಅಧಿಕಾರಿಗಳು ಅಕ್ರಮವೆಸಗಿದ್ದಾರೆಂದು ಖಚಿತಪಡಿಸಿತ್ತು.
ಇದನ್ನು ಆಧರಿಸಿ ಡಿಪಿಎಆರ್, ವಿಧಾನಸೌಧ ಠಾಣೆಯಲ್ಲಿ ದೂರು ದಾಖಲಿಸಿತ್ತು.’ಕ್ಯಾಷ್ ಫಾರ್ ಜಾಬ್ಸ್’ ಎಂದೇ ಹೆಸರಾಗಿದ್ದ ಈ ಹಗರಣದ ಬಗ್ಗೆ ಲೋಕಾಯುಕ್ತ ವಿಶೇಷ ನ್ಯಾಯಾಲಯದಲ್ಲಿ ಪ್ರಕರಣ ದಾಖಲು ಮಾಡಿ ವಿಚಾರಣೆ ನಡೆಸಿತ್ತು.
2011ನೇ ಸಾಲಿನ ಕೆಎಎಸ್ ಪರೀಕ್ಷೆಯಲ್ಲಿ ಆಯ್ಕೆಯಾಗಿ ನಂತರ ನ್ಯಾಯಾಲಯಗಳ ತೀರ್ಪಿನಿಂದಾಗಿ ಕಂಗೆಟ್ಟಿದ್ದ 362 ಅಭ್ಯರ್ಥಿಗಳ ಪತ್ರಾಂಕಿತ ಹುದ್ದೆಯ ಕನಸಿಗೆ ಹಿಂದಿನ ಸರಕಾರ ಮರುಜೀವ ನೀಡುವ ಪ್ರಯತ್ನ ನಡೆಸಿತ್ತು. ಈ ಮಧ್ಯೆಯೇ, ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್ ಇಡೀ ನೇಮಕ ಪ್ರಕ್ರಿಯೆಯನ್ನು ರದ್ದುಗೊಳಿಸಿದ್ದರೂ ಸರಕಾರ ಅದನ್ನು ಧಿಕ್ಕರಿಸುವ ನಿರ್ಧಾರವನ್ನು ಕೈಗೊಳ್ಳುತ್ತಿದೆ ಎಂದು ನೊಂದ ಅಭ್ಯರ್ಥಿಗಳು ರಾಷ್ಟ್ರಪತಿ, ಪ್ರಧಾನಿಯವರಿಗೆ ದೂರು ನೀಡಿದ್ದರು.
ದೂರು ಆಧರಿಸಿ ರಾಷ್ಟ್ರಪತಿ ಮತ್ತು ಪ್ರಧಾನಮಂತ್ರಿ ಅವರ ಕಾರ್ಯಾಲಯದಿಂದ ಪರಿಶೀಲಿಸಿ ಕ್ರಮ ಕೈಗೊಳ್ಳಲು ರಾಜ್ಯ ಸರಕಾರಕ್ಕೆ ಸೂಚಿಸಿತ್ತು.
15 ದಿನಗಳಲ್ಲಿ 2011ರ ಕೆಎಎಸ್ ನೇಮಕ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಾಗುವುದೆಂದು ಹಿಂದಿನ ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ವಿಧಾನಸಭೆಯಲ್ಲಿ ಪ್ರಕಟಿಸಿದ್ದರು. ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿನ ಸಚಿವ ಸಂಪುಟವು, 2011ನೇ ಬ್ಯಾಚ್ ನೇಮಕ ಪ್ರಕರಣದ ಸಂಬಂಧ ಆರೋಪ ಎದುರಿಸುತ್ತಿದ್ದ ಅಂದಿನ ಕೆಪಿಎಸ್‌ಸಿ ಅಧ್ಯಕ್ಷ ಗೋನಾಳ್ ಭೀಮಪ್ಪ, ಸದಸ್ಯರಾದ ಮಂಗಳಾ ಶ್ರೀಧರ್, ಪಾಟೀಲ್ ಮೊದಲಾದವರ ವಿರುದ್ಧ ಆರೋಪಗಳನ್ನು ಕೈಬಿಡಲು ನಿರ್ಧಾರ ಕೈಗೊಂಡಿತ್ತು. ಈ ನಿರ್ಣಯವನ್ನು ರಾಷ್ಟ್ರಪತಿಗೂ ಕಳಿಸಿತ್ತು.
ಕೆಪಿಎಸ್ ಸಿ ಅಕ್ರಮ ನೇಮಕಾತಿ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಗೋನಾಳ್ ಭೀಮಪ್ಪ ತಮ್ಮ ತಂಗಿ ಗಂಡನಾಗಿದ್ದು, ಅವರ ರಕ್ಷಣೆಗೆ ಪ್ರಯತ್ನಿಸುತ್ತೇವೆ ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವರಾಗಿದ್ದ ಎಚ್ ಆಂಜನೇಯ ಹೇಳಿದ್ದನ್ನು ಸ್ಮರಿಸಬಹುದು.
ಅದೇ ರೀತಿ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಅವರು, ಗೋನಾಳ್ ಭೀಮಪ್ಪ ಅವರಿಗೆ ಕೆಪಿಎಸ್ ಸಿ ಪ್ರಕರಣ ಸಂಬಂಧ ರಕ್ಷಣೆ ಕೊಡುವಂತೆ ಹಾಗೂ ಅವರನ್ನು ಬಂಧಿಸದಂತೆ ನೋಡಿಕೊಳ್ಳಿ ಎಂದು ಅಂದಿನ ಸರ್ಕಾರಕ್ಕೆ ಸಲಹೆ ನೀಡಿದ್ದರು.