ಬೆಂಗಳೂರು; ಚಾಲ್ತಿಯಲ್ಲಿರುವ ಹಲವು ಕಾರ್ಯಕ್ರಮಗಳಿಗೂ ಅನುದಾನ ಒದಗಿಸಲು ಪರದಾಡುತ್ತಿರುವ ಹೊತ್ತಿನಲ್ಲೇ ಹೊರ ರಾಜ್ಯದ ಗಡಿ ಕನ್ನಡಿಗರ ಅಭಿವೃದ್ದಿಗೆ ಸಾಕಷ್ಟು ಅನುದಾನ ಸಿಗುತ್ತಿಲ್ಲ ಮತ್ತು ಇದಕ್ಕೆ ಅನುದಾನದ ಕೊರತೆಯೇ ಮೂಲ ಕಾರಣ ಎಂಬ ಸಂಗತಿಯು ಇದೀಗ ಬಹಿರಂಗವಾಗಿದೆ.
ಗಡಿ ಕನ್ನಡಿಗರ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರವು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ನೀಡಿರುವ ವಿವರಣೆಯಲ್ಲಿ ಈ ಮಾಹಿತಿ ಇದೆ. ಗಡಿ ಪ್ರದೇಶ ಅಭಿವೃದ್ದಿ ಪ್ರಾಧಿಕಾರವು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ನೀಡಿರುವ ವಿವರಣೆಯ ಮಾಹಿತಿಯು ‘ದಿ ಫೈಲ್’ಗೆ ಲಭ್ಯವಾಗಿದೆ.
ಗಡಿ ಕನ್ನಡಿಗರ ಸಮಸ್ಯೆಗಳ ವಿವರಗಳನ್ನು ನೀಡಿರುವ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರವು ನೆರೆಯ ರಾಜ್ಯಗಳು ಗಡಿ ಭಾಗಗಳಲ್ಲಿ ಕೈಗೊಂಡಿರುವ ಕ್ರಮಗಳು ಮತ್ತು ಒದಗಿಸಿರುವ ಅನುದಾನದ ಕುರಿತು ಮಾಹಿತಿಯನ್ನೂ ನೀಡಿದೆ. ಜತೆಗೆ ಕರ್ನಾಟಕದ ಗಡಿ ಪ್ರದೇಶಗಳಲ್ಲಿ ಅನುದಾನ ಕೊರತೆಯಿಂದ ಹೊರರಾಜ್ಯದ ಗಡಿ ಕನ್ನಡಿಗರಿಗೆ ಸಾಕಷ್ಟು ಅನುದಾನ ನೀಡಲು ಸಾಧ್ಯವಾಗುತ್ತಿಲ್ಲ ಎಂದು ಸರ್ಕಾರದ ಗಮನ ಸೆಳೆದಿದೆ.
ಗಡಿ ಅಭಿವೃದ್ಧಿ ಪ್ರಾಧಿಕಾರದ ಕಾಯ್ದೆ 2010ರ ಪ್ರಕಾರ ಹೊರ ರಾಜ್ಯದ ಶಾಲೆಗಳಿಗೆ ಸಾಂಸ್ಕೃತಿಕ ಸಂಸ್ಥೆಗಳಿಗೆ ಸಹಾಯ ಮಾಡಲು ಅವಕಾಶ ಕಲ್ಪಿಸಿದೆ. ರಾಜ್ಯದಲ್ಲಿ ಸಾಂಸ್ಕೃತಿಕ ನೀತಿ ಜಾರಿಗೊಳಿಸುವ ಬಗ್ಗೆ ಸರ್ಕಾರವು 2017ರ ಅಕ್ಟೋಬರ್ 10ರಂದು ಆದೇಶವನ್ನೂ ಹೊರಡಿಸಿದೆ. ಇದರ ಪ್ರಕಾರ ಗಡಿನಾಡು ಪ್ರಾಧಿಕಾರದ ವ್ಯಾಪ್ತಿಗೆ ಹೊರನಾಡನ್ನು ಸೇರಿಸಿ ಪಕ್ಕದ ರಾಜ್ಯಗಳಲ್ಲಿನ ಕನ್ನಡ ಭಾಷಿಕರು ಇರುವ ಸ್ಥಳಗಳಲ್ಲಿ ಅಗತ್ಯ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ವ್ಯವಸ್ಥೆ ಕಲ್ಪಿಸಲು ಅವಕಾಶವನ್ನೂ ಕಲ್ಪಿಸಿದೆ.
ಆದರೆ ‘ಅನುದಾನದ ಕೊರತೆಯಿಂದ ಹೊರರಾಜ್ಯದ ಗಡಿ ಕನ್ನಡಿಗರಿಗೆ ಸಾಕಷ್ಟು ಅನುದಾನ ನೀಡಲು ಸಾಧ್ಯವಾಗುತ್ತಿಲ್ಲ. ಈ ಬಗ್ಗೆ ಆರ್ಥಿಕ ಇಲಾಖೆ ಮತ್ತು ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆಯು ವಿಶೇಷ ಅನುದಾನ ನೀಡಿ ಯೋಜನೆಗಳನ್ನು ಕಾರ್ಯಗತಗೊಳಿಸಬೇಕಿದೆ,’ ಎಂದು ಕೋರಿರುವುದು ಗೊತ್ತಾಗಿದೆ.
ಮಹಾರಾಷ್ಟ್ರ ಸರ್ಕಾರವು ಮರಾಠಿಗರ ಕಾಳಜಿಗೋಸ್ಕರ ಒಬ್ಬ ಗಡಿ ಉಸ್ತುವಾರಿ ಸಚಿವರನ್ನು ನೇಮಿಸಿದೆ. ಅದೇ ರೀತಿ ಮಹಾರಾಷ್ಟ್ರ ಸರ್ಕಾರವು ಕರ್ನಾಟಕದ ಮರಾಠಿ ಮಾತನಾಡುವ ಪ್ರದೇಶಗಳಿಗೆ 50.00 ಕೋಟಿ ರು.ಗಳನ್ನು ಅನುದಾನ ನೀಡಿದೆ. ಇದರಲ್ಲಿ ಆರೋಗ್ಯ ವಿಮಾ ಸೌಲಭ್ಯಗಳನ್ನು ಒದಗಿಸುತ್ತಿದೆ. ಅಲ್ಲಿನ ಮರಾಠಿಗರಿಗೆ ಅಲ್ಲಿನ ವಿಶ್ವವಿದ್ಯಾಲಯಗಳಲ್ಲಿ ಉಚಿತ ಶಿಕ್ಷಣ ಯೋಜನೆ ಆರಂಭಿಸಿದೆ. ಅದೇ ರೀತಿ ಕರ್ನಾಟಕ ಸರ್ಕಾರವು ಸಹ ಹೊರ ರಾಜ್ಯದ ಭಾಷಾ ಅಲ್ಪಸಂಖ್ಯಾತರ ಕನ್ನಡಿಗರಿಗೆ ಆರೋಗ್ಯ ಸೌಲಭ್ಯ ವಿಸ್ತರಿಸಬೇಕು ಎಂದು ವಿವರಿಸಿರುವುದು ತಿಳಿದು ಬಂದಿದೆ.
ಮಹಾರಾಷ್ಟ್ರ, ಕೇರಳ, ತಮಿಳುನಾಡು, ಆಂಧ್ರ, ತೆಲಂಗಾಣದ ಗಡಿಭಾಗಗಳಲ್ಲಿನ ಹಲವಾರು ಐತಿಹಾಸಿಕ ಕನ್ನಡ ಭಾಷೆಯ ಮಹಾಪುರುಷರ, ಶರಣರ ಕನ್ನಡ ಹೋರಾಟಗಾರರ ಸ್ಮಾರಕಗಳ ಜೀರ್ಣೋದ್ದಾರ ಕೆಲಸಗಳಿಗೂ ವಿಶೇಷ ಅನುದಾನವನ್ನು ನೀಡಿಲ್ಲ. ಗೋವಾದಲ್ಲಿ ಕನ್ನಡ ಭವನ ನಿರ್ಮಾಣ ಮಾಡಲು ಸರ್ಕಾರಿ ಜಾಗವನ್ನು ಗೋವಾ ಸರ್ಕಾರ ನೀಡುತ್ತಿಲ್ಲ. ನಿವೇಶನ ಖರೀದಿ ಮತ್ತು ಭವನ ನಿರ್ಮಾಣ ಮಾಡಲು ಆರ್ಥಿಕ ಇಲಾಖೆಯು ಇನ್ನೂ ಅನುಮೋದನೆ ನೀಡಿಲ್ಲ.
ಅದೇ ರೀತಿ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ವಾರ್ಷಿಕ ಅನುದಾನವನ್ನು ಹೆಚ್ಚಿಸಿಲ್ಲ. ಕನ್ನಡ ಶಾಲೆಗಳು, ಕನ್ನಡ ಪ್ರದೇಶದ ಸಮಗ್ರ ಅಭಿವೃದ್ದಿಗೆ ವಿಶೇಷ ಕ್ರಿಯಾ ಯೋಜನೆ ಮಂಜೂರಾಗಿಲ್ಲ. ಈ ವರ್ಷ ಕೇವಲ ಕೇವಲ 15.00 ಕೋಟಿ ರು ಅನುದಾನ ಲಭ್ಯವಿದೆ. 19 ಗಡಿ ಜಿಲ್ಲೆ ಮತ್ತು 63 ಗಡಿ ತಾಲೂಕುಗಳು ಹಾಗೂ 06ಹೊರ ರಾಜ್ಯಗಳ ಗಡಿ ಕನ್ನಡ ಪ್ರದೇಶಗಳ ಅಭಿವೃದ್ದಿ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಪ್ರಾಧಿಕಾರವು ವಿವರಿಸಿರುವುದು ಗೊತ್ತಾಗಿದೆ.
ಮಹಾರಾಷ್ಟ್ರ, ಕೇರಳ ಹಾಗೂ ಇನ್ನಿತರೆ ಒಟ್ಟು 06 ಗಡಿ ರಾಜ್ಯಗಳಲ್ಲಿ ಕನ್ನಡ ಮಾಧ್ಯಮ ಶಿಕ್ಷಣ ಪಡೆಯುವ ಮಕ್ಕಳಿಗೆ ಕರ್ನಾಟಕದಲ್ಲಿನ ನವೋದಯ, ಮೊರಾರ್ಜಿ, ರಾಣಿ ಚನ್ನಮ್ಮ ಹಾಗೂ ಇತರೆ ವಸತಿ ಶಾಲೆಗಳಲ್ಲಿ ಹೊರ ರಾಜ್ಯದ ವಿದ್ಯಾರ್ಥಿಗಳಿಗೆ ವಸತಿ ನಿಲಯಗಳಲ್ಲಿ ಪ್ರವೇಶಕ್ಕೆ ಅನುಮತಿಯೂ ಇಲ್ಲವಾಗಿದೆ. ಕನಿಷ್ಠ ಶೇ.5ರಷ್ಟು ಮೀಸಲಾತಿಯೂ ಇಲ್ಲವಾಗಿದೆ. ಹೀಗಾಗಿ ಹೊರ ರಾಜ್ಯದ ಕನ್ನಡ ಭಾಷಿಕ ಮಕ್ಕಳಿಗೆ ಪ್ರವೇಶ ನೀಡಲು ಕರ್ನಾಟಕ ಸರ್ಕಾರ ತಯಾರಿಸಿರುವ ಅರ್ಜಿ ನಮೂನೆಯಲ್ಲಿ ಹೊರ ರಾಜ್ಯದ ವಿದ್ಯಾರ್ಥಿಗಳಿಗೆ ಅರ್ಜಿ ಸಲ್ಲಿಸಲು ಅವಕಾಶವೂ ಇಲ್ಲದಂತಾಗಿದೆ. ಇದರಿಂದಾಗಿ ಪ್ರವೇಶ ನಿರಾಕರಿಸಲಾಗುತ್ತಿದೆ. ಈ ಬಗ್ಗೆ ಸೂಕ್ತ ಆದೇಶವನ್ನು ಇದುವರೆಗೂ ಹೊರಡಿಸಿಲ್ಲ.
ಮಹಾರಾಷ್ಟ್ರ ಹಾಗೂ ಇತರೆ ಕನ್ನಡ ಭಾಷಿಕರಿಗೆ ಶಿಕ್ಷಣ ಮತ್ತು ಉದ್ಯೋಗಗಳಲ್ಲಿ ಮೀಸಲಾತಿ ನೀಡುವಾಗ ಕರ್ನಾಟಕ ಸರ್ಕಾರದಲ್ಲಿ ಸಾಮಾನ್ಯ ಪ್ರವರ್ಗದಲ್ಲಿ ಪರಿಗಣಿಸಲಾಗುತ್ತಿದೆ. ಆಧರೆ ಸಾಮಾಜಿಕ ಮೀಸಲಾತಿಗೆ ಒಳಪಡುವ ಹೊರರಾಜ್ಯಗಳ ತಳ ಸಮುದಾಯದ ಭಾಷಾ ಅಲ್ಪಸಂಖ್ಯಾತರುಗಳಿಗೆ ಅವರ ಜಾತಿ ಪ್ರವರ್ಗಗಳಂತೆ ಕರ್ನಾಟಕ ರಾಜ್ಯದಲ್ಲಿ ಅವರ ಜಾತಿ ಪ್ರವರ್ಗಗಳನ್ನೇ ಯಥಾವತ್ತಾಗಿ ಪರಿಗಣಿಸಬೇಕೆಂಬ ಬೇಡಿಕೆಯನ್ನು ಇದುವರೆಗೂ ಈಡೇರಿಸಿಲ್ಲ.
ಹಾಗೆಯೇ ಇದಕ್ಕೆ ಸಂಬಂಧಿಸಿಂತೆ ಸರ್ಕಾರವು ಆದೇಶವನ್ನೂ ಹೊರಡಿಸಿಲ್ಲ.
ಕೇರಳ ಮತ್ತು ಮಹಾರಾಷ್ಟ್ರದ ಕನ್ನಡ ಭಾಷಿಕ ಪ್ರದೇಶಗಳಿಗೆ ಸಾಂಸ್ಕೃತಿಕ , ಶೈಕ್ಷಣಿಕ ಮತ್ತು ಸಾಮಾಜಿಕ ಸೌಲಭ್ಯಗಳೂ ಸಹ ಆದ್ಯತೆ ಮೇಲೆ ಒದಗಿಸಿಲ್ಲ. ಗಡಿನಾಡ ಕನ್ನಡ ವಿದ್ಯಾರ್ಥಿಗಳಿಗೆ ಸೈಕಲ್ ಭಾಗ್ಯ, ನಲಿ ಕಲಿ ಕಲಿಕಾ ಸಾಮಗ್ರಿಗಳು, ಕನ್ನಡ ಸಾಹಿತ್ಯ, ಇತರೆ ಲೇಖಕ ಪುಸ್ತಕಗಳೂ ಪೂರೈಕೆ ಆಗುತ್ತಿಲ್ಲ. ಆಂಧ್ರ ಪ್ರದೇಶದ ಗಡಿ ಭಾಗದ ಕನ್ನಡ ಮಾಧ್ಯಮ ಶಾಲೆಗಳನ್ನು ಸಿಬಿಎಸ್‌ಸಿ ಆಂಗ್ಲ ಮಾಧ್ಯಮವನ್ನಾಗಿ ಪರಿವರ್ತಿಸುತ್ತಿದೆ. ಮಹಾರಾಷ್ಟ್ರದಲ್ಲಿ ಒಂದೂ ಸರ್ಕಾರಿ ಕನ್ನಡ ಪ್ರೌಢಶಾಲೆಯೂ ಇಲ್ಲವಾಗಿದೆ. ಹೀಗಾಗಿ ಅಲ್ಲಿನ ವಿದ್ಯಾರ್ಥಿಗಳಿಗೆ ಪ್ರೌಢಶಿಕ್ಷಣ ಮುಂದುವರೆಸಲು ಸಾಧ್ಯವಾಗುತ್ತಿಲ್ಲ ಎಂಬ ಸಂಗತಿಯು ಪ್ರಾಧಿಕಾರದ ವಿವರಣೆಯಿಂದ ಗೊತ್ತಾಗಿದೆ.
ಅದೇ ರೀತಿ 2021-22ರಿಂದ ವಿದ್ಯಾರ್ಥಿ ವೇತನವನ್ನು ನಿಲ್ಲಿಸಿದೆ. ಇದರಿಂದಾಗಿ ಹೊರ ರಾಜ್ಯದಲ್ಲಿ ಎಂಎ, ಪಿಎಚ್‌ಡಿ, ಎಂ ಫಿಲ್ ಹಾಗೂ ಐಚ್ಛಿಕ ಸ್ನಾತಕೋತ್ತರ ಕನ್ನಡ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಪಡೆಯಲು ಸಾಧ್ಯವಾಗುತ್ತಿಲ್ಲ.
ವಿದ್ಯಾರ್ಥಿ ವೇತನವನ್ನು ರದ್ದುಗೊಳಿಸಿರುವ ಆದೇಶವನ್ನು ಈಗಿನ ಕಾಂಗ್ರೆಸ್ ಸರ್ಕಾರವು ಹಿಂಪಡೆದಿಲ್ಲ. ಮತ್ತು ಆರ್ಥಿಕ ಇಲಾಖೆಯೂ ಸಹ ವಿಶೇಷ ಅನುದಾನವೂ ಇಲ್ಲವಾಗಿದೆ.