ಬೆಂಗಳೂರು; ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರಿಗೆ 14 ಬದಲಿ ನಿವೇಶನಗಳನ್ನು ಹಂಚಿಕೆ ಮಾಡಿರುವ ಪ್ರಕರಣದಲ್ಲಿ ಆರೋಪಿಯಾಗಿರುವ ಮುಡಾ ಆಯುಕ್ತ ನಟೇಶ್ ಅವರು ರಾಮನಗರ ಜಿಲ್ಲೆ ಬಿಡದಿ ಹೋಬಳಿಯ ಕೇತಗಾನಹಳ್ಳಿಯ ವಿವಿಧ ಸರ್ವೆ ನಂಬರ್‍ಗಳಲ್ಲಿನ ಜಮೀನುಗಳಿಗೆ ಸಂಬಂಧಿಸಿದಂತೆ ಕಂಡು ಬಂದಿರುವ ಲೋಪದಲ್ಲಿಯೂ ಭಾಗಿಯಾಗಿರುವುದು ಇದೀಗ ಬಹಿರಂಗವಾಗಿದೆ.
ರಾಮನಗರ ತಾಲೂಕಿನ ಬಿಡದಿ ಹೋಬಳಿಯ ಕೇತಗಾನಹಳ್ಳಿ ಗ್ರಾಮದ ಸರ್ವೆ ನಂಬರ್ 7,8,9,10,16,17 ಮತ್ತು 79ರ ಜಮೀನುಗಳಿಗೆ ಸಂಬಂಧಿಸಿದಂತೆ ದುರಸ್ತಿ, ಪೋಡಿ, ಆಕಾರ್ ಬಂದ್ ದುರಸ್ತಿಯಾಗಿದ್ದ ಅವಧಿಯಲ್ಲಿ ಕರ್ತವ್ಯ ನಿರ್ವಹಿಸಿದ್ದ ಅಧಿಕಾರಿಗಳ ಪಟ್ಟಿಯನ್ನು ಪ್ರಾದೇಶಿಕ ಭೂ ದಾಖಲೆಗಳ ಜಂಟಿ ನಿರ್ದೇಶಕರು ನೀಡಿರುವ ವರದಿಯಲ್ಲಿ ನೀಡಿದ್ದಾರೆ. ರಾಮನಗರ ತಹಶೀಲ್ದಾರ್ ಆಗಿದ್ದ ಡಿ ಬಿ ನಟೇಶ್ ಅವರ ಹೆಸರೂ ಕೂಡ ಇದೆ.
ಪ್ರಾದೇಶಿಕ ಭೂ ದಾಖಲೆಗಳ ಜಂಟಿ ನಿರ್ದೇಶಕರು ಪ್ರಾದೇಶಿಕ ಆಯುಕ್ತರಿಗೆ 2025ರ ಮಾರ್ಚ್ 15ರಂದು ಸಲ್ಲಿಸಿರುವ ವರದಿಯ ಪ್ರತಿಯು ‘ದಿ ಫೈಲ್’ಗೆ ಲಭ್ಯವಾಗಿದೆ.
ಕೇತಿಗಾನಹಳ್ಳಿ ಗ್ರಾಮದ ಸರ್ವೆ ನಂಬರ್ 7, 8, 9, 10, 16 ಮತ್ತು 17ರಲ್ಲಿ ಈ ಹಿಂದೆ ಅಳತೆ ಮಾಡಿ ಹೊಸ ಸರ್ವೆ ನಂಬರ್‍ಗಳನ್ನು ದಾಖಲಿಸಿ ಆಕಾರ್ ಬಂದ್ ದುರಸ್ತಿಪಡಿಸಿದ್ದ ಅಧಿಕಾರಿ, ನೌಕರರ ಪಟ್ಟಿಯನ್ನು ಭೂ ದಾಖಲೆಗಳ ಜಂಟಿ ನಿರ್ದೇಶಕರು ಪ್ರಾದೇಶಿಕ ಅಯುಕ್ತರಿಗೆ ಒದಗಿಸಿರುವುದು ವರದಿಯಿಂದ ಗೊತ್ತಾಗಿದೆ.
ಬೆಂಗಳೂರು ವಿಭಾಗದ ಭೂ ದಾಖಲೆಗಳ ಉಪ ನಿರ್ದೇಶಕ ಇ ಪ್ರಕಾಶ್, ರಾಮನಗರ ತಾಲೂಕಿನಲ್ಲಿ ತಹಶೀಲ್ದಾರ್ ಆಗಿದ್ದ ಡಿ ಬಿ ನಟೇಶ್, ಭೂ ದಾಖಲೆಗಳ ಸಹಾಯಕ ನಿರ್ದೇಶಕ ಕೃಷ್ಣಪ್ಪ (ನಿವೃತ್ತ), ರಾಮನಗರ ತಾಲೂಕಿನ ತಹಶೀಲ್ದಾರ್ ಕಚೇರಿಯ ಭೂಮಾಪಕ ಎಂ ಪಿ ರವಿಕುಮಾರ್ (ಹಾಲಿ ಮಾಲೂರು ತಾಲೂಕಿನಲ್ಲಿ ಸಹಾಯಕ ನಿರ್ದೇಶಕರ ಕಚೇರಿಯಲ್ಲಿ ತಪಾಸಕರು), ಭೂ ಮಾಪಕ ಆರ್ ನಾಗರಾಜು (ಶಿರಾ ತಾಲೂಕಿನ ಸಹಾಯಕ ನಿರ್ದೇಶಕರ ಕಚೇರಿಯಲ್ಲಿನ ತಪಾಸಕರು), ತಪಾಸಕ ಬಾಬುರಾವ್ (ನಿವೃತ್ತ), ಭೂ ಮಾಪಕ ಬಿ ಎನ್ ನಾಗರಾಜು (ಚನ್ನಪಟ್ಟಣ ತಾಲೂಕಿನ ಸಹಾಯಕ ನಿರ್ದೇಶಕರ ಕಚೇರಿ) ಅವರು ಜಮೀನುಗಳ ಅಳತೆ ಮಾಡಿ, ಹೊಸ ಸರ್ವೆ ನಂಬರ್‍ಗಳನ್ನು ದಾಖಲಿಸಿದ್ದರು. ಮತ್ತು ಆಕಾರ್ ಬಂದ್ ದುರಸ್ತಿಪಡಿಸಿದ್ದರು ಎಂದು ವರದಿಯಲ್ಲಿ ವಿವರಿಸಿರುವುದು ತಿಳಿದು ಬಂದಿದೆ.
ಅದೇ ರೀತಿ ಕೇತಿಗಾನಹಳ್ಳಿ ಗ್ರಾಮದ ಸರ್ಕಾರಿ ಸರ್ವೆ ನಂಬರ್‍ಗಳಲ್ಲಿ 14-04 ಎಕರೆ ಒತ್ತುವರಿ ಜಮೀನನ್ನು ಅಳತೆ ಮಾಡಿ ಸರ್ಕಾರದ ವಶಕ್ಕೆ ಪಡೆಯುವ ಸಲುವಾಗಿ ಅಳತೆಗಾಗಿ ತಾಲೂಕು ಭೂ ಮಾಪಕರನ್ನು ನಿಯೋಜಿಸಿತ್ತು. ಆದರೆ ಇವರು ಸರ್ಕಾರಿ ಜಮೀನನ್ನು ಅಳತೆ ಮಾಡುವ ಬದಲಾಗಿ ಖಾಸಗಿ ವ್ಯಕ್ತಿಗಳಿಗೆ ಹೊಸದಾಗಿ ದುರಸ್ತಿಯಾಗಿರುವ ಪಟ್ಟಾ ಜಮೀನನ್ನೂ ಸರ್ಕಾರಿ ಜಮೀನು ಎಂದು ತಪ್ಪಾಗಿ ಅಳತೆ ಮಾಡಿದ್ದರು. ಅಲ್ಲದೇ ತಂತಿ ಬೇಲಿ ಹಾಕಿಸಿದ್ದರು ಎಂದು ಅಳತೆಯಿಂದ ಕಂಡು ಬಂದಿದೆ ಎಂದು ವರದಿಯಲ್ಲಿ ಉಲ್ಲೇಖಿಸಿರುವುದು ಗೊತ್ತಾಗಿದೆ.
ಪರಿಶೀಲನಾ ವರದಿಯ ಅಭಿಪ್ರಾಯದಲ್ಲೇನಿದೆ?
ಸರ್ವೆ ನಂಬರ್ 7ರ ಪೈಕಿ ದುರಸ್ತಾಗಿರುವ ಹೊಸ ಸರ್ವೆ ನಂಬರ್ 95ರಿಂದ 101ರ ಪ್ರಕರಣದಲ್ಲಿ ಉಪ ವಿಭಾಗಾಧಿಕಾರಿಗಳು 2009ರ ಅಕ್ಟೋಬರ್ 16ರಂದೇ ಗೈರು ವಿಲೇ ಕಡತ ತಯಾರಿಸಿದ್ದರು. ಪೋಡಿ ಮಾಡಲು ಅದೇಶ ಮಾಡಿರುವುದು ಕಂಡು ಬಂದಿದೆ. ಗೈರು ವಿಲೇ ಕಡತದ ಅದೇಶವಾಗುವ ಮುಂಚೆಯೇ ಅಂದರೇ 2009ರ ಆಗಸ್ಟ್ 25ರಂದೇ ಅಳತೆ ಮಾಡಿದ್ದರು. ಇದು ಇಲಾಖೆ ನಡವಳಿಗಳಿಗೆ ವಿರುದ್ಧವಾಗಿದೆ ಎಂದು ಪರಿಶೀಲನಾ ವರದಿಯಲ್ಲಿ ಅಭಿಪ್ರಾಯಪಟ್ಟಿರುವುದು ತಿಳಿದು ಬಂದಿದೆ.
ಈ ಅವಧಿಯಲ್ಲಿ ಭೂ ಮಾಪನ ಇಲಾಖೆಯ ಸುತ್ತೋಲೆ (ಸಂಖ್ಯೆ; ದ.ಪಲೋ.ಆಂ/40/2008-09, ದಿನಾಂಕ 20/10/2008)ರ ಸುತ್ತೋಲೆ ಪ್ರಕಾರ ನಮೂನೆ 1-5 ತಯಾರಿಸಿ ಸಕ್ಷಮ ಅಧಿಕಾರಿಗಳ ಅನುಮೋದನೆ ಪಡೆದಿರುವುದು ಕಂಡು ಬರುವುದಿಲ್ಲ ಎಂದು ವರದಿಯಲ್ಲಿ ಉಲ್ಲೇಖಿಸಿದೆ.
ಅಲ್ಲದೆ ಈ ಅವಧಿಯಲ್ಲಿ ಗೈರುವಿಲೇ ಕಡತ ತಯಾರಿಸುವಾಗ ಸರ್ಕಾರ ಸುತ್ತೋಲೆ (ಸಂಖಗಯೆ ಆರ್‍ಡಿ 74 ಎಲ್‌ಜಿಪಿ 2009, ದಿನಾಂಕ 17.09.2009)ರ ಸುತ್ತೋಲೆ ಪ್ರಕಾರ ಜಿಲ್ಲಾ ಮಟ್ಟದ ಗೈರುವಿಲೇ ಕಡತಗಳ ಪುನರ್ ನಿರ್ಮಾಣ ಸಮಿತಿ ಮುಂದೆ ಮಂಡಿಸಿ ನಡವಳಿ ತಯಾರಿಸಬೇಕಿತ್ತು. ಮತ್ತು ಜಿಲ್ಲಾ ಮಟ್ಟದ ಗೈರುವಿಲೇ ಕಡತಗಳ ಸಮಿತಿ ಸಭೆ ತೀರ್ಮಾನದಂತೆ ಉಪ ವಿಭಾಗಾಧಿಕಾರಿಗಳು ಕರ್ನಾಟಕ ಭೂ ಕಂದಾಯ ಕಾಯ್ದೆ 1964ರ ಕಲಂ 67 (2) ಅಡಿ ಗೈರು ವಿಲೇ ಕಡತ ಆದೇಶ ಹೊರಡಿಸಬೇಕಾಗಿತ್ತು.
‘ಈ ಪ್ರಕರಣದಲ್ಲಿ ಈ ರೀತಿ ಯಾವುದೇ ಕ್ರಮ ಜರುಗಿಸದೇ ಉಪ ವಿಭಾಗಾಧಿಕಾರಿಗಳು ನೇರವಾಗಿ 2009ರ ಅಕ್ಟೋಬರ್ 16ರಂದು ಗೈರುವಿಲೇ ಕಡತ ತಯಾರಿಸಿ ಪೋಡಿ ಮಾಡಲು ಅದೇಶ ಮಾಡಿದ್ದಾರೆ. ಇದು 2009ರ ಸೆ.17ರಂದು ಹೊರಡಿಸಿದ್ದ ಸುತ್ತೋಲೆ ಸೂಚನೆಗಳಿಗೆ ವಿರುದ್ಧವಾಗಿದೆ,’ ಎಂದು ಪರಿಶೀಲನಾ ವರದಿಯಲ್ಲಿ ವಿವರಿಸಿರುವುದು ಗೊತ್ತಾಗಿದೆ.
ಭೂ ಮಾಪನ ಕಂದಾಯ ವ್ಯವಸ್ಥೆ ಮತ್ತು ಭೂ ದಾಖಲೆಗಳ ಆಯುಕ್ತರು 2009ರ ಸೆ.25ರಂದು ಹೊರಡಿಸಿದ್ದ ಸುತ್ತೋಲೆ ನಿಯಮಾವಳಿ ಮತ್ತು ಮತ್ತು ಕರ್ನಾಟಕ ಭೂ ಕಂದಾಯ ನಿಯಮಾವಳಿ 1966ರ ನಿಯಮ 36(2)ರ ಪ್ರಕಾರ ತಹಶೀಲ್ದಾರ್ ಅವರ ಸಹಿ ನಂತರ ಭೂ ದಾಖಲೆಗಳ ಉಪ ನಿರ್ದೇಶಕರ ಮೇಲು ಸಹಿ ಕಡ್ಡಾಯವಾಗಿದೆ. ಆದರೆ ಈ ಪ್ರಕರಣದಲ್ಲಿ ತಹಶೀಲ್ದಾರ್ ಮಾತ್ರ ಮೇಲು ಸಹಿ ಮಾಡಿ ಭೂ ದಾಖಲೆಗಳ ಉಪ ನಿರ್ದೇಶಕರು ಮೇಲು ಸಹಿ ಮಾಡಿಸಿಲ್ಲ. ಹೀಗಾಗಿ ಈ ಪ್ರಕರಣದ ಪೋಡಿ ದುರಸ್ತಿಯೂ ಅಂತಿಮಗೊಂಡಿಲ್ಲ ಎಂದು ವರದಿಯಲ್ಲಿ ಉಲ್ಲೇಖಿಸಿದೆ.
ಹೊಸ ಸರ್ವೆ ನಂಬರ್ 99, 100, 101 ರಲ್ಲಿನ ನಕಾಶೆ ಕಂಡ ಕುಂಟೆ ಮೇಲೆ ದುರಸ್ತಾಗಿತ್ತು. ಆದರೂ ಸಹ ಖರಾಬು ಕಳೆಯದೇ ದುರಸ್ತಿಪಡಿಸಲಾಗಿದೆ. ಕುಂಟೆ ಜಾಗವು ಬೇರೆ ಕಡೆ ಸ್ಥಾನಿಕವಾಗಿ ಇದ್ದಲ್ಲಿ ಈ ಬಗ್ಗೆ ಸಕ್ಷಮ ಪ್ರಾಧಿಕಾರದಿಂದ ನಕಾಶೆ ತಿದ್ದುಪಡಿ ಬಗ್ಗೆ ಆದೇಶ ಪಡೆದಿರುವುದು ದಾಖಲೆಗಳಿಂದ ಕಂಡುಬಂದಿಲ್ಲ. ಹಾಗೂ ಸರ್ವೆ ನಂಬರ್ 95, 96, 97,98ರಲ್ಲಿನ ದುರಸ್ತಾದ ಪ್ರದೇಶಗಳಲ್ಲಿ ನಕಾಶೆಯಲ್ಲಿ ಕಂಡು ಬಂದ ಕಾಲುದಾರಿ ಮತ್ತು ಬಂಡಿದಾರಿ ಬಗ್ಗೆ ಖರಾಬು ಕಳೆಯದೇ ದುರಸ್ತಿಪಡಿಸಿರುವುದು ತಪ್ಪಾಗಿರುತ್ತದೆ ಎಂದು ಲೋಪವನ್ನು ಬಯಲು ಮಾಡಿದೆ.
ಸರ್ವೆ ನಂಬರ್ 8ರ ಪೈಕಿ ದುರಸ್ತಾಗಿರುವ ಹೊಸ ಸರ್ವೆ ನಂಬರ್ 68 ಮತ್ತು 69ರ ಮೂಲ ಮಂಜೂರಿ ಕಡತ ಲಭ್ಯವಿಲ್ಲ ಎಂದು ರಾಮನಗರ ಉಪ ವಿಭಾಗಾಧಿಕಾರಿಗಳು ಆದೇಶ ಮಾತ್ರ ಲಭ್ಯವಿದೆ. ಈ ಆದೇಶವು ಸರ್ಕಾರವು 2002ರ ಅಕ್ಟೋಬರ್ 30ರಂದು ಹೊರಡಿಸಿದ್ದ ಸೂಚನೆಗಳಂತೆ ಅವಶ್ಯ ದಾಖಲೆಗಳು ಲಭ್ಯವಿಲ್ಲದಿದ್ದರೂ ಸಹ ಉಪ ವಿಭಾಗಾಧಿಕಾರಿಗಳೇ ಆದೇಶ ಹೊರಡಿಸಿದ್ದಾರೆ. ಈ ಪ್ರಕರಣದಲ್ಲಿ ಉಪ ವಿಭಾಗಾಧಿಕಾರಿಗಳದ್ದು ಕರ್ತವ್ಯಲೋಪವಾಗಿದೆ ಎಂದು ಪರಿಶೀಲನಾ ತಂಡವು ಪತ್ತೆ ಹಚ್ಚಿರುವುದು ಗೊತ್ತಾಗಿದೆ.
ಸರ್ವೆ ನಂಬರ್ 9ರ ಪೈಕಿ ದುರಸ್ತಾಗಿರುವ ಹೊಸ ಸರ್ವೆ ನಂಬರ್ 70ರಿಂದ 79ರವರೆಗೆ ದುರಸ್ತಾದ ಕಡತಗಳ ಬಾಬ್ತು ಮೂಲ ಮಂಜೂರಿ ಕಡತಗಳು ಲಭ್ಯವಿಲ್ಲ. ಅಲ್ಲದೇ ರಾಮನಗರ ಉಪ ವಿಭಾಗಾಧಿಕಾರಿಗಳು ಕರ್ನಾಟಕ ಭೂ ಕಂದಾಯ ಅಧಿನಿಯಮ 1964ರ ಕಲಂ 67(2) ಅಡಿ ನೀಡಿದ್ದ ಆದೇಶವೂ ಸಹ ಪ್ರಸ್ತುತ ಲಭ್ಯವಿಲ್ಲ ಎಂಬ ಸಂಗತಿಯು ವರದಿಯಿಂದ ತಿಳಿದು ಬಂದಿದೆ.
ಅದೇ ರೀತಿ ಸರ್ವೆ ನಮಬರ್ 9ರ ಪೈಕಿ ದುರಸ್ತಾಗಿರುವ ಹೊಸ ಸರ್ವೆ ನಂಬರ್ 76ರ ಮೇರೆಗೆ ನಕಾಶೆ ಕಂಡ ಹಳ್ಳ ಹಾದುಹೋಗಿರುವ ಬಗ್ಗೆ ಪೋಡಿ ದುರಸ್ತಿ ಸಮಯದಲ್ಲಿ ಈ ನಂಬರ್‍ಗೆ ಯಾವುದೇ ಖರಾಬು ವಜಾ ಮಾಡಿಲ್ಲ ಎಂದು ವರದಿಯಲ್ಲಿ ಹೇಳಲಾಗಿದೆ.
ಸರ್ವೆ ನಂಬರ್ 9ರ ಪೈಕಿ ಹೊಸ ಸರ್ವೆ ನಂಬರ್ 77ರ ಟಿಪ್ಪಣಿಯಲ್ಲಿ 0.06 ಗುಂಟೆ ಖರಾಬು ವಜಾ ಮಾಡಿರುವ ಬಗ್ಗೆ ಖರಾಬು ವಿವರ ಮಾತ್ರ ನಮೂದಿಸಲಾಗಿದೆ. ಆದರೆ ಟಿಪ್ಪಣಿ ಕ್ಷೇತ್ರದಲ್ಲಿ ಖರಾಬು ಚಿಹ್ನೆ ತೋರಿಸಿಲ್ಲ. ಈ ಎಲ್ಲಾ ನ್ಯೂನತೆಗಳು ಇದ್ದರೂ ಸಹ ಪೋಡಿ ಪ್ರಕ್ರಿಯೆಗಳನ್ನು ಅಂತಿಮಗೊಳಿಸಿರುವುದು ತಪ್ಪಾದ ಕ್ರಮವಾಗಿದೆ ಎಂದು ಪರಿಶೀಲನಾ ತಂಡವು ವಿವರಿಸಿದೆ.
ಸರ್ವೆ ನಮಬರ್ 10ರ ಪೈಕಿ ಹೊಸ ಸರ್ವೆ ನಂಬರ್ 80ರಿಂದ 94ರವರೆಗೆ ದುರಸ್ತಾದ ಕಡತಗಳ ಬಾಬ್ತು ಮೂಲ ಮಂಜೂರಿ ಕಡತಗಳು ಲಭ್ಯವಿಲ್ಲ ಎಂದು ಉಪ ವಿಭಾಗಾಧಿಕಾರಿಗಳು ಹೊರಡಿಸಿದ್ದ ಆದೇಶದ ಪ್ರತಿಯು ಪ್ರಸ್ತುತ ಲಭ್ಯವಿದೆ. ಈ ಆದೇಶವು ಸರ್ಕಾರದ ಸುತ್ತೋಲೆ (ಕಂ ಇ 74, ಭೂದಾಸ 2002, ದಿನಾಂಕ 2002ರ ಅಕ್ಟೋಬರ್ 30 ಕಂಡಿಕೆ (3)ರಲ್ಲಿನ ಸೂಚನೆಗಳಂತೆ ಅವಶ್ಯ ದಾಖಲೆಗಳು ಲಭ್ಯವಿರಲಿಲ್ಲ. ಆದರೂ ಉಪ ವಿಭಾಗಾಧಿಕಾರಿಗಳು ಆದೇಶ ಹೊರಡಿಸಿರುವುದು ವರದಿಯಿಂದ ಗೊತ್ತಾಗಿದೆ.
ಉಳಿದ ಹೊಸ ಸರ್ವೆ ನಂಬರ್ 84ರಿಂದ 94ರವರೆಗಿನ ಮಂಜೂರಿದಾರರಿಗೆ ಸಂಬಂಧಿಸಿದ ಉಪ ವಿಭಾಗಾಧಿಕಾರಿಗಳು 1964ರ ಕರ್ನಾಟಕ ಭೂ ಕಂದಾಯ ಅಧಿನಿಯಮ ಕಲಂ 62(2) ಅಡಿ ನೀಡಿದ್ದ ಆದೇಶವೂ ಪ್ರಸ್ತುತ ಲಭ್ಯವಿಲ್ಲ.
‘ಪೋಡಿಯಾದ ಹೊಸ ಸರ್ವೆ ನಂಬರ್‍ನ ಆರ್‍ಟಿಸಿ ಇಂಡೀಕರಣದ ನಂತರ ಗೈರುವಿಲೆ ಕಡತದೊಂದಿಗಿನ ಪೋಡಿ ಕಡತದ ನಿರ್ವಹಣಾ ಪ್ರಾಧಿಕಾರ ತಹಶೀಲ್ದಾರ್ ಆಗಿದ್ದಾರೆ. ಆದರೆ ಮೂಲ ಕಡತ ಲಭ್ಯವಾಗದ ಕಾರಣ ಪೋಡಿ ನೈಜತೆ ಬಗ್ಗೆ ಸ್ಪಷ್ಟವಾಗಿ ತಿಳಿಸಲು ಬರುವುದಿಲ್ಲ,’ ಎಂದು ವರದಿಯಲ್ಲಿ ವಿವರಿಸಿದೆ.
ಕೇತಿಗಾನಹಳ್ಳಿಯಲ್ಲಿ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಮತ್ತಿತರರು ಅಕ್ರಮ ಮತ್ತು ಕಾನೂನುಬಾಹಿರವಾಗಿ ಜಮೀನು ಹೊಂದಿದ್ದಾರೆ ಎಂಬ ಆರೋಪಿತ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡವು, ಹೊಸ ಸರ್ವೆ ದಾಖಲೆಗಳೊಂದಿಗೆ ಸಂಕ್ಷಿಪ್ತ ಪ್ರಾತ್ಯಕ್ಷಿಕೆಯನ್ನು ಸಿದ್ಧಪಡಿಸಿತ್ತು.
ಸರ್ವೆ ನಂಬರ್ 7, 8, 9, 10, 16, 17 ಮತ್ತು 79ರಲ್ಲಿ ಇರುವ ಒಟ್ಟಾರೆ 110.32 ಎಕರೆಯಲ್ಲಿ 11.28 ಎಕರೆ ಅತಿಕ್ರಮಣವಾಗಿದೆ ಎಂದು ಪ್ರಾತ್ಯಕ್ಷಿಕೆಯಲ್ಲಿ ವಿವರಿಸಿತ್ತು.
ಕೇತಗಾನಹಳ್ಳಿ ಭೂ ಅಕ್ರಮ; ಎಸ್‌ಐಟಿ ಕೈ ಸೇರಿದ ಹೊಸ ಸರ್ವೆ ವರದಿ, 5.25 ಎಕರೆ ಒತ್ತುವರಿಯಾಗಿದೆಯೇ?
ಅತಿಕ್ರಮಣದಾರರ ಪಟ್ಟಿಯಲ್ಲಿ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಅವರ ಹೆಸರು ಕೂಡ ಇರುವುದನ್ನು ಸ್ಮರಿಸಬಹುದು.