ಬೆಂಗಳೂರು; ಮಂಡ್ಯ ತಾಲೂಕಿನ ವ್ಯಾಪ್ತಿಯಲ್ಲಿರುವ ವಿದ್ಯಾರ್ಥಿ ನಿಲಯಗಳ ನಿರ್ವಹಣೆ ಮತ್ತು ಬೆಡ್ ಕವರ್ಸ್, ಸೊಳ್ಳೆ ಪರದೆ ಸೇರಿದಂತೆ ಇನ್ನಿತರೆ ವಸ್ತುಗಳ ಖರೀದಿ ಹೆಸರಿನಲ್ಲಿ ಭಾರೀ ಪ್ರಮಾಣದಲ್ಲಿ ಹಣ ದುರುಪಯೋಗವಾಗಿದೆ.
2023-24ನೇ ಒಂದೇ ವರ್ಷದಲ್ಲಿ ಮಂಡ್ಯ ತಾಲೂಕುವೊಂದರಲ್ಲೇ ಡಿ ಸಿ ಬಿಲ್‌ಗಳ ಮೂಲಕ 86,05,365 ರು.ಗಳನ್ನು ಖಜಾನೆ ಮೂಲಕ ಸೆಳೆದಿದೆ. ಮತ್ತು ಈ ಮೊತ್ತವನ್ನು ಪ್ರತ್ಯೇಕ ಸಂಸ್ಥೆಗಳಿಗೆ ಪಾವತಿಸಿದೆ. ಕಳೆದ ನಾಲ್ಕು ವರ್ಷಗಳಲ್ಲಿ 2,08,99,815 ರು.ಗಳನ್ನು ಡಿ ಸಿ ಬಿಲ್‌ಗಳ ಮೂಲಕ ಖಜಾನೆಯಿಂದ ಸೆಳೆದು ಪ್ರತ್ಯೇಕ ಸಂಸ್ಥೆಗಳಿಗೆ ಪಾವತಿಸಿರುವುದು ಬಹಿರಂಗವಾಗಿದೆ.
2021-22ನೇ ಸಾಲಿನಿಂದ 2023-24ನೇ ಸಾಲಿನವರೆಗೆ ಭಾರೀ ಪ್ರಮಾಣದಲ್ಲಿ ಹಣ ದುರುಪಯೋಗವಾಗಿರುವುದನ್ನು ಡಾ ಬಿ ಆರ್ ಅಂಬೇಡ್ಕರ್ ಅಭಿವೃದ್ಧಿ ನಿಗಮದ ಉಪ ವ್ಯವಸ್ಥಾಪಕರ ನೇತೃತ್ವದ ತನಿಖಾ ತಂಡವು ಪತ್ತೆ ಹಚ್ಚಿದೆ.
2020-21ನೇ ಸಾಲಿನಿಂದ 2023-24ನೇ ಸಾಲಿನವರೆಗೆ ಸರ್ಕಾರವು ಮಂಡ್ಯ ತಾಲೂಕಿನ ವಿವಿಧ ವಿದ್ಯಾರ್ಥಿ ನಿಲಯಗಳಿಗೆ ಅನುದಾನ ಬಿಡುಗಡೆ ಮಾಡಿತ್ತು. ಈ ಅನುದಾನವನ್ನು ವೆಚ್ಚ ಮಾಡುವ ಮುನ್ನ ಅರ್ಥಿಕ ಮಿತವ್ಯಯ ಪಾಲನೆ ಮಾಡಿಲ್ಲ. ಬದಲಿಗೆ ಬೇಡಿಕೆ ಇಲ್ಲದಿದ್ದರೂ ಅನಗತ್ಯವಾಗಿ ಖರೀದಿ ಮಾಡಲಾಗಿದೆ. ಅಲ್ಲದೇ ಮಾರುಕಟ್ಟೆ ದರಕ್ಕಿಂತಲೂ ದುಪ್ಪಟ್ಟು ದರ ತೆತ್ತು ಖರೀದಿಸಿರುವುದನ್ನು ತಪಾಸಣೆ ತಂಡವು ಬಯಲು ಮಾಡಿದೆ.
ತಪಾಸಣೆ ತಂಡವು ನೀಡಿರುವ ವರದಿಯ ಕುರಿತು ಇಲಾಖಾಧಿಕಾರಿಗಳು ಸಚಿವ ಮಹದೇವಪ್ಪ ಅವರೊಂದಿಗೆ ಚರ್ಚಿಸಿದ್ದಾರೆ ಎಂದು ಗೊತ್ತಾಗಿದೆ.
ನಿಗಮದ ಉಪ ವ್ಯವಸ್ಥಾಪಕಿ ಪ್ರತಿಭ ಎಸ್ ಅವರು ಸಮಾಜ ಕಲ್ಯಾಣ ಇಲಾಖೆಯ ಆಯುಕ್ತರಿಗೆ 2024ರ ಆಗಸ್ಟ್ 19ರಂದು ವರದಿ ಸಲ್ಲಿಸಿದ್ದಾರೆ. ಈ ವರದಿಯ ಪ್ರತಿಯು ‘ದಿ ಫೈಲ್’ಗೆ ಲಭ್ಯವಾಗಿದೆ.
ಟಿವಿ, ಬೆಡ್ ಕವರ್ಸ್, ಗ್ಯಾಸ್ ಸ್ಟೌವ್ ರಿಪೇರಿ, ಗ್ರೈಂಡರ್ ಮೋಟಾರ್ ರಿಪೇರಿ, ಫ್ಯಾನ್ ರೆಗ್ಯುಲೇಟರ್, ವಾಟರ್ ಫ್ಯೂರಿಫೈಯರ್, ಸೊಳ್ಳೆ ಪರದೆ, ಕಂಪ್ಯೂಟರ್ ರಿಪೇರಿ, ಶೌಚಾಲಯ, ಬಾಗಿಲು ರಿಪೇರಿ ಸೇರಿದಂತೆ ಇನ್ನಿತರೆ ವಸ್ತುಗಳ ಖರೀದಿಯಲ್ಲಿ ಅಕ್ರಮಗಳು ನಡೆದಿವೆ.
ಅಲ್ಲದೇ ವಿವಿಧ ಸಂಸ್ಥೆಗಳಿಂದ ವಸ್ತುಗಳನ್ನು ಪದೇ ಪದೇ ಖರೀದಿಸಲಾಗಿದೆ ಮತ್ತು ರಿಪೇರಿ ಹೆಸರಿನಲ್ಲಿ ಅಪಾರ ಪ್ರಮಾಣದಲ್ಲಿ ಹಣವನ್ನು ವೆಚ್ಚ ಮಾಡಿರುವುದನ್ನು ತಪಾಸಣೆ ತಂಡವು ಬಹಿರಂಗಗೊಳಿಸಿದೆ.
‘ವಿದ್ಯಾರ್ಥಿ ನಿಲಯಗಳಿಗೆ ಬಿಡುಗಡೆಯಾಗಿದ್ದ (ಲೆಕ್ಕ ಶೀರ್ಷಿಕೆ; 2225-00-101-0-61) ಅನುದಾನವನ್ನು ಆರ್ಥಿಕ ಮಿತವ್ಯಯ ಪಾಲನೆ ಮಾಡಿ ಅನಗತ್ಯ ವೆಚ್ಚಗಳಿಗೆ ಕಡಿವಾಣ ಹಾಕಿ ಹೆಚ್ಚುವರಿಯಾಗಿ ಲಭ್ಯವಿರುವ ಅನುದಾನವನ್ನು ಸರ್ಕಾರಕ್ಕೆ ಭರಣ ಮಾಡಬಹುದಿತ್ತು. ಆದರೆ ನಿರ್ವಹಣೆಗಾಗಿ ಇವರ ಕರ್ತವ್ಯ ಅವಧಿಯಲ್ಲಿ ಹೆಚ್ಚುವರಿ ವೆಚ್ಚ ಭರಿಸುವ ಮೂಲಕ ಕರ್ತವ್ಯದಲ್ಲಿ ಲೋಪ ಎಸಗಿದ್ದಾರೆ,’ ಎಂದು ತನಿಖಾಧಿಕಾರಿಗಳು ಅಭಿಪ್ರಾಯಿಸಿರುವುದು ವರದಿಯಿಂದ ಗೊತ್ತಾಗಿದೆ.
ದುಪ್ಪಟ್ಟು ದರದಲ್ಲಿ ಟಿ ವಿ ಖರೀದಿ
ಕಿಯೋನಿಕ್ಸ್ ಸಂಸ್ಥೆಯಿಂದ ಮಾರುಕಟ್ಟೆ ದರಕ್ಕಿಂತ ಹೆಚ್ಚಿನ ದರದಲ್ಲಿ ಟಿ ವಿ ಖರೀದಿ 2021-22ನೇ ಸಾಲಿನಲ್ಲಿ ಮಾರುಕಟ್ಟೆ ದರಕ್ಕಿಂತ ಹೆಚ್ಚಿನ ದರದಲ್ಲಿ ಕಿಯೋನಿಕ್ಸ್ ವತಿಯಿಂದ ಎಲ್ ಜಿ ಕಂಪನಿಯಿಂದ ಟಿ ವಿಗಳನ್ನು 8 ವಿದ್ಯಾರ್ಥಿ ನಿಲಯಗಳಿಗೆ ಖರೀದಿಸಲಾಗಿದೆ.
ಕೊತ್ತತ್ತಿ, ಮಂಗಲ, ಕೆರೆಗೋಡು, ಮಂಡ್ಯ ಟೌನ್, ಶಿವಪುರ, ಬಸರಾಳುವಿನಲ್ಲಿರುವ 8 ವಿದ್ಯಾರ್ಥಿ ನಿಲಯಗಳಿಗೆ ತಲಾ 93,440 ರು. ದರದಲ್ಲಿ ಒಟ್ಟು 7,47,520 ರು ವೆಚ್ಚದಲ್ಲಿ ಖರೀದಿಸಲಾಗಿತ್ತು. ಆದರೆ ಇದೇ ಟಿ ವಿ ಗೆ ಆನ್ ಲೈನ್‌ನಲ್ಲಿ ತಲಾ ಟಿ ವಿ ಒಂದಕ್ಕೆ 47,990 ರು. ಇತ್ತು. ಇದರ ಪ್ರಕಾರ 8 ಟಿ ವಿ ಗಳಿಗೆ 3,83,920 ರು. ಆಗಲಿದೆ. ಆದರೆ ಇಲಾಖೆಯು ಖರೀದಿಸಿದ್ದ ಟಿ ವಿ ದರಗಳಿಗೆ ಹೋಲಿಸಿದರೆ 3,63,600 ರು. ವ್ಯತ್ಯಾಸವಿತ್ತು ಎಂದು ವರದಿಯಲ್ಲಿ ದಾಖಲೆ ಸಮೇತ ವಿವರಿಸಿದೆ.
ಬೇಡಿಕೆ ಇಲ್ಲದಿದ್ದರೂ ಬೆಡ್ ಕವರ್ಸ್ ಖರೀದಿ
ಕೊತ್ತತ್ತಿ ಸೇರಿದಂತೆ 14 ಸರ್ಕಾರಿ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ನಿಲಯಗಳ ವಿದ್ಯಾರ್ಥಿಗಳಿಗೆ . 2021-22ನೇ ಸಾಲಿನಲ್ಲಿ 2,76,236 ರು. ದರದಲ್ಲಿ ಬೆಡ್ ಕವರ್ಸ್‌ಗಳನ್ನು ಸಿರಾ ಎಂಟರ್ ಪ್ರೈಸೆಸ್, ಎಸ್‌ಬಿಎಂಜೆಪಿ ಎಂಟರ್ ಪ್ರೈಸೆಸ್‌ನಿಂದ ಖರೀದಿಸಿತ್ತು.
ಆದರೆ ಬೆಡ್ ಕವರ್ಸ್‌ಗಳಿಗೆ ವಿದ್ಯಾರ್ಥಿ ನಿಲಯಗಳ ವಾರ್ಡನ್‌ಗಳಿಂದ ಯಾವುದೇ ಬೇಡಿಕೆ ಇರಲಿಲ್ಲ. ಆದರೂ ನಿಯಮಬಾಹಿರವಾಗಿ ಎರಡೆರಡು ಬಾರಿ ಡಿ ಸಿ ಬಿಲ್ ಮುಖಾಂತರ ಬೆಡ್ ಕವರ್ಸ್‌ಗಳನ್ನು ಬೇರೆ ಬೇರೆ ಸಂಸ್ಥೆಗಳಿಂದ ಹೆಚ್ಚಿನ ಮೊತ್ತ ಪಾವತಿಸಿ ಖರೀದಿಸಿತ್ತು. ಎಸ್‌ಬಿಎಂಜೆಪಿ ಎಂಟರ್ ಪ್ರೈಸೆಸ್‌ನಿಂದ 01 ಬೆಡ್ ಕವರ್ಸ್‌ಗೆ ಜಿ ಎಸ್ ಟಿ ಸೇರಿದಂತೆ 785.00 ಮೊತ್ತದಲ್ಲಿ ಖರೀದಿಸಿರುವುದು ಕಂಡು ಬರುತ್ತದೆ. ಆದರೆ ಸಿರಾ ಎಂಟರ್ ಪ್ರೈಸೆಸ್‌ನಿಂದ ಬೆಡ್ ಕವರ್ಸ್ ಖರೀದಿಸಿರುವ ಬಗ್ಗೆ ವೋಚರ್ಸ್‌ಗಳನ್ನು ಪರಿಶೀಲನೆ ನೀಡಿರಲಿಲ್ಲ ಎಂದು ವರದಿಯಿಂದ ಗೊತ್ತಾಗಿದೆ.
‘ನಿಲಯದ ವಾರ್ಡ್‌ನ್‌ಗಳ ಬೇಡಿಕೆ ಇಲ್ಲದಿದ್ದರೂ ಸಹ 2021-22ನೇ ಸಾಲಿನಲ್ಲಿ 08 ವಿದ್ಯಾರ್ಥಿ ನಿಲಯಗಳಿಗೆ ಒಟ್ಠಾರೆ 2,76,236 ರು. ಮೊತ್ತದಲ್ಲಿ ಬೆಡ್ ಕವರ್ಸ್‌ಗಳನ್ನು ಖರೀದಿ ಮಾಡಿರುತ್ತಾರೆ. ಆದರೆ ಬೆಡ್ ಕವರ್ಸ್‌ಗಳ ಖರೀದಿ ಕುರಿತಂತೆ ವಾರ್ಡನ್‌ಗಳ ಬೇಡಿಕೆ ಪತ್ರ ಇರುವುದಿಲ್ಲ. 06 ವಿದ್ಯಾರ್ಥಿ ನಿಲಯಗಳಿಗೆ 02 ಪ್ರತ್ಯೇಕ ಸಂಸ್ಥೆಗಳಿಂದ ಬೆಡ್ ಕವರ್ಸ್‌ಗಳನ್ನು ಒಂದೆರಡು ತಿಂಗಳ ಅಂತರದಲ್ಲಿ ಖರೀದಿಸುವ ಔಚಿತ್ಯವೇನಿತ್ತು ಎಂಬ ಬಗ್ಗೆ ತಿಳಿದು ಬಂದಿರುವುದಿಲ್ಲ,’ ಎಂದು ವರದಿಯಲ್ಲಿ ವಿವರಿಸಿರುವುದು ತಿಳಿದು ಬಂದಿದೆ.
ಅದೇ ರೀತಿ ವಿದ್ಯಾರ್ಥಿ ನಿಲಯಗಳಲ್ಲಿ ಈಗಾಗಲೇ ವಾಟರ್ ಫ್ಯೂರಿಫೈಯರ್‌ಗಳು ಇದ್ದವು. ಮತ್ತು ಉತ್ತಮ ಸುಸ್ಥಿತಿಯಲ್ಲಿದ್ದವು. ಆದರೂ ಸಹ ಅನಗತ್ಯವಾಗಿ ವಾಟರ್ ಫ್ಯೂರಿಫೈಯರ್‌ಗಳನ್ನು 4,43,370 ರು. ದರದಲ್ಲಿ ಖರೀದಿಸಲಾಗಿತ್ತು. ಅನಗತ್ಯವಾಗಿ ರಿಪೇರಿ ಎಂಬುದಾಗಿ ವೆಚ್ಚ ಭರಿಸಿ ಹಣ ಸೆಳೆದಿದ್ದರು.
‘ಪರಿಶೀಲನೆಯಲ್ಲಿ ಕಂಡು ಬಂದಿರುವಂತೆ ತಾಲೂಕು ವ್ಯಾಪ್ತಿಯಲ್ಲಿನ 03 ವಿದ್ಯಾರ್ಥಿ ನಿಲಯಗಳಲ್ಲಿ ಈಗಾಗಲೇ ವಾಟರ್ ಫ್ಯೂರಿಫೈಯರ್‌ಗಳಿ ಇದ್ದಾಗ್ಯೂ ಸಹ ಅನಗತ್ಯವಾಗಿ 3 ವಾಟರ್ ಫ್ಯೂರಿಫೈಯರ್‌ಗಳನ್ನು ಡಿ ಸಿ ಬಿಲ್‌ಗಳ ಮೂಲಕ ಖಜಾನೆಯಿಂದ ನಿಯಮಬಾಹಿರವಾಗಿ 4,43,370 ರುಗಳನ್ನು ಸೆಳೆದಿರುತ್ತಾರೆ. ಇದರಿಂದ ಸರ್ಕಾರಕ್ಕೆ ಹೆಚ್ಚುವರಿ ಹೊರೆ ಉಂಟು ಮಾಡಿದಂತಾಗಿದೆ,’ ಎಂದು ತಪಾಸಣೆ ವರದಿಯಲ್ಲಿ ವಿವರಿಸಿರುವುದು ತಿಳಿದು ಬಂದಿದೆ.
2020-21ನೇ ಸಾಲಿನಲ್ಲಿ ಮಂಡ್ಯ ತಾಲೂಕು ವ್ಯಾಪ್ತಿಯಲ್ಲಿರುವ ವಿದ್ಯಾರ್ಥಿ ನಿಲಯಗಳಿಗೆ ನಿರ್ವಹಣೆ ಹೆಸರಿನಲ್ಲಿ ಡಿ ಸಿ ಬಿಲ್ ಮೂಲಕ ಖಜಾನೆಯಿಂದ ಹಣ ಸೆಳೆದು ಪ್ರತ್ಯೇಕ ಸಂಸ್ಥೆಗಳಿಗೆ ಪಾವತಿಸಿರುವುದನ್ನೂ ಸಹ ತಪಾಸಣೆ ತಂಡವು ಪತ್ತೆ ಹಚ್ಚಿದೆ.
ಮಂಡ್ಯ ಟೌನ್‌ನಲ್ಲಿರುವ ಸರ್ಕಾರಿ ಮೆಟ್ರೀಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯವು 2020-21ನೇ ಸಾಲಿನಲ್ಲಿ ಡಿ ಸಿ ಬಿಲ್ ಮೂಲಕ ಒಟ್ಟಾರೆ 4,89,426 ರು.ಗಳನ್ನು ಖಜಾನೆಯಿಂದ ಸೆಳೆದಿದೆ. ಈ ಹಣವನ್ನು ಪ್ರತ್ಯೇಕ ಸಂಸ್ಥೆಗಳಿಗೆ ಭರಿಸಿದೆ.
ಮಂಗಲದಲ್ಲಿರುವ ಸರ್ಕಾರಿ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯವು 3,68,055 ರು.ಗಳನ್ನು ಖಜಾನೆಯಿಂದ ಹಣ ಸೆಳೆದಿದೆ. ಅದೇ ರೀತಿ ಮಂಗಲದಲ್ಲಿರುವ ಸರ್ಕಾರಿ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯವು 9,46,774 ರು.,ಗಳನ್ನು ಡಿ ಸಿ ಬಿಲ್‌ಗಳ ಮೂಲಕ ಖಜಾನೆಯಿಂದ ಹಣ ಸೆಳೆದಿದೆ.
2021-22ನೇ ಸಾಲಿನಲ್ಲಿ ಕೊತ್ತತ್ತಿಯಲ್ಲಿರುವ ಸರ್ಕಾರಿ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯವು 8,83,516 ರು.ಗಳನ್ನು ಡಿ ಸಿ ಬಿಲ್‌ಗಳ ಮೂಲಕ ಖಜಾನೆಯಿಂದ ಹಣ ಸೆಳೆದಿತ್ತು. ಮಂಗಲದಲ್ಲಿರುವ ಸರ್ಕಾರಿ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ನಿಲಯವು 6,92,620 ರು.ಗಳನ್ನು ಸೆಳೆದಿತ್ತು.
ಕೆರೆಗೋಡುವಿನಲ್ಲಿರುವ ಸರ್ಕಾರಿ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯವು 4,15,456 ರು, ಮಂಡ್ಯ ಟೌನ್‌ನಲ್ಲಿರುವ ಸರ್ಕಾರಿ ವೃತ್ತಿಪರ ಕಾಲೇಜು ಬಾಲಕಿಯರ ವಿದ್ಯಾರ್ಥಿ ನಿಲಯವು 1,34,076 ರು.ಗಳು, ಇದೇ ಮಂಡ್ಯ ಟೌನ್‌ನಲ್ಲಿರುವ ಸರ್ಕಾರಿ ಮೆಟ್ರಿಕ್ ಪೂರ್ವ ಬಾಲಕಿಯರ ವಿದ್ಯಾರ್ಥಿ ನಿಲಯವು 11,55,275 ರು.ಗಳನ್ನು ಸೆಳೆದಿತ್ತು.
ಶಿವಪುರದಲ್ಲಿರುವ ಸರ್ಕಾರಿ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯವು 14,92,704 ರು., ಬಸರಾಳುವಿನಲ್ಲಿರುವ ಸರ್ಕಾರಿ ಬಾಲಕರ ವಿದ್ಯಾರ್ಥಿ ನಿಲಯವು 12,94,596 ರು., ಮಂಡ್ಯ ಟೌನ್‌ನಲ್ಲಿರುವ ಸರ್ಕಾರಿ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯವು 9,20,474 ರು.ಗಳನ್ನು ಡಿ ಸಿ ಬಿಲ್ ಮೂಲಕ ಹಣ ಸೆಳೆದಿತ್ತು.
2022-23ನೇ ಸಾಲಿನಲ್ಲಿ ಮಂಡ್ಯ ಟೌನ್‌ನಲ್ಲಿರುವ ಸರ್ಕಾರಿ ಮೆಟ್ರಿಕ್ ಪೂರ್ವ ಬಾಲಕಿಯರ ವಿದ್ಯಾರ್ಥಿ ನಿಲಯವು 17, 98, 484 ರು., ಕೆರೆಗೋಡುವಿನಲ್ಲಿರುವ ಸರ್ಕಾರಿ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯವು 6,24,537 ರು., ಮಂಡ್ಯ ಟೌನ್‌ನಲ್ಲಿರುವ ಸರ್ಕಾರಿ ಪಿಯು ಕಾಲೇಜು ಬಾಲಕರ ವಿದ್ಯಾರ್ಥಿ ನಿಲಯವು 2,98,002 ರು., ಶಿವಪುರದಲ್ಗಲಿರುವ ಸರ್ಳಕಾರಿ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ಬಾಲಕರ ವಿದ್ಯಾರ್ಥಿ ನಿಲಯವು 8,95,740 ರು., ಮಂಗಲದಲ್ಲಿರುವ ಸರ್ಕಾರಿ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯವು 12, 65,600 ರು., ಕೊತ್ತತ್ತಿಯಲ್ಲಿರುವ ಸರ್ಕಾರಿ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯವು 14.01,170, ಮಂಡ್ಯ ಟೌನ್‌ನಲ್ಲಿರುವ ಬಾಲಕರ ಪಿ ಜಿ ವಿದ್ಯಾರ್ಥಿ ನಿಲಯವು 2,97, 418 ರು.ಗಳನ್ನು ಸೆಳೆದಿತ್ತು.
2023-24ನೇ ಸಾಲಿನಲ್ಲಿ ಬಸರಾಳುವಿನಲ್ಲಿರುವ ಸರ್ಕಾರಿ ಮೆಟ್ರಿಕ್ ಪೂವ್ ವಿದ್ಯಾರ್ಥಿ ನಿಲಯವು 15,23,976 ರು., ಮಂಗಲದಲ್ಲಿರುವ ಬಾಲಕರ ವಿದ್ಯಾರ್ಥಿ ನಿಲಯವು 7,49,431, ಕೆರೆಗೋಡುವಿನಲ್ಲಿರುವ ಸರ್ಕಾರಿ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ನಿಲಯವು 11,37,947 ರು., ಶಿವಪುರದಲ್ಲಿರುವ ಸರ್ಕಾರಿ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯವು 8,98,170 ರು., ಕೊತ್ತತ್ತಿಯಲ್ಲಿರುವ ಸರ್ಕಾರಿ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ನಿಲಯವು 14,14,715 ರು.,
ಮಂಡ್ಯ ಟೌನ್‌ನಲ್ಲಿರುವ ಸರ್ಕಾರಿ ಮೆಟ್ರಿಕ್ ಪೂರ್ವ ಬಾಲಕಿಯರ ವಿದ್ಯಾರ್ಥಿ ನಿಲಯವು 19,62,378 ರು.,
ಮಂಡ್ಯ ಟೌನ್‌ನಲ್ಲಿರುವ ಸರ್ಕಾರಿ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯ (ಘಟಕ 1) 3,52,222 ರು.,
ಇದೇ ಮಂಡ್ಯ ಟೌನ್‌ನಲ್ಲಿರುವ ಸರ್ಕಾರಿ ಮೆಟ್ರಿಕ್ ಪೂರ್ವ ಬಾಲಕಿಯರ ವಿದ್ಯಾರ್ಥಿ ನಿಲಯವು 5,66,526 ರು.ಗಳನ್ನು ಡಿ ಸಿ ಬಿಲ್‌ಗಳ ಮೂಲಕ ಖಜಾನೆಯಿಂದ ಹಣ ಸೆಳದಿರುವುದು ವರದಿಯಿಂದ ಗೊತ್ತಾಗಿದೆ.