Sunday | May 31, 2026 |

ಕೋಟಿ ವೆಚ್ಚದಲ್ಲಿ ಸಮೀಕ್ಷೆ; ಗೌಪ್ಯತೆಗೆ ಖಾತ್ರಿ ನೀಡಿದರಷ್ಟೇ ಭೌಗೋಳಿಕ ಸ್ಥಳ, ದಾಖಲೆಗಳ ಸಲ್ಲಿಕೆ, ಪತ್ರ ಮುನ್ನೆಲೆಗೆ

ಬೆಂಗಳೂರು;  ಸಮೀಕ್ಷೆ ನಡೆಸಿರುವ ಭೌಗೋಳಿಕ ಸ್ಥಳಗಳು, ದಾಖಲೆಗಳ ಸುರಕ್ಷತೆ ಮತ್ತು ಗೌಪ್ಯತೆ ಕಾಯ್ದುಕೊಳ್ಳಲಾಗುವುದು ಎಂದು ಸರ್ಕಾರವು ಕೋರಿದರೆ ಮಾತ್ರ  ಜಿಪಿಎಸ್‌ ದಾಖಲೆ, ಕ್ಷೇತ್ರವಾರು ಫೋಟೋಗಳನ್ನು ಮುಚ್ಚಿದ ಲಕೋಟೆಯಲ್ಲಿ ನೀಡಲಾಗುವುದು ಎಂದು ಶಕ್ತಿ ಯೋಜನೆ ಸಮೀಕ್ಷೆ ನಡೆಸಿರುವ ಎಂ2ಎಂ ಮೀಡಿಯಾ ಕಂಪನಿಯು ಬರೆದಿರುವ ಪತ್ರವು ಇದೀಗ ಬಹಿರಂಗವಾಗಿದೆ.

 

ಗ್ಯಾರಂಟಿ ಯೋಜನೆ ಕುರಿತು ಸಮೀಕ್ಷೆ, ಅಧ್ಯಯನ, ಮೌಲ್ಯಮಾಪನ ಹೆಸರಿನಲ್ಲಿ ಕೋಟ್ಯಂತರ ರುಪಾಯಿ ಖರ್ಚು ಮಾಡಿರುವ ಕುರಿತು ವಿಧಾನ ಪರಿಷತ್‌ನಲ್ಲಿ ಚರ್ಚೆಯಾಗಿರುವ ಬೆನ್ನಲ್ಲೇ ಎಂ 2 ಎಂ ಕಂಪನಿಯು ಭೌಗೋಳಿಕ, ಸ್ಥಳ, ದಾಖಲೆಗಳನ್ನು ಸಲ್ಲಿಸಲು ಗೌಪ್ಯತೆ ವಿಷಯವನ್ನು ಮುಂದಿಟ್ಟಿರುವುದು ಮುನ್ನೆಲೆಗೆ ಬಂದಿದೆ.

 

ಶಕ್ತಿ ಯೋಜನೆ ಸೇರಿದಂತೆ ನಾಲ್ಕು ಗ್ಯಾರಂಟಿಗಳನ್ನು 1 ಕೋಟಿ ರು ವೆಚ್ಚದಲ್ಲಿ ಸಮೀಕ್ಷೆ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಿರುವ ಎಂ2ಎಂ ಮೀಡಿಯಾ ನೆಟ್‌ವರ್ಕ್‌ ಈ ಸಂಬಂಧ ಜಿಪಿಎಸ್‌ ದಾಖಲೆ ಮತ್ತು ವಿಧಾನಸಭೆ ಕ್ಷೇತ್ರವಾರು ಫೋಟೋ ಪ್ರತಿಗಳನ್ನು ಒದಗಿಸಲಾಗುವುದು ಎಂದು ಎಂ 2 ಎಂ ಕಂಪನಿಯು  ತನ್ನ ಪತ್ರದಲ್ಲಿ ಹೇಳಿತ್ತು.  ಆದರೆ ಈ ದಾಖಲೆಗಳ  ಸಲ್ಲಿಕೆಗೆ ಸಂಬಂಧಿಸಿದಂತೆ ‘ಗೌಪ್ಯತೆ’ ವಿಷಯ ಕುರಿತು ಆರಂಭಿಕ ಪ್ರಸ್ತಾವದಲ್ಲಿ ಉಲ್ಲೇಖಿಸಿರಲಿಲ್ಲ ಮತ್ತು  ಪ್ರಸ್ತಾಪವನ್ನೂ ಮಾಡಿರಲಿಲ್ಲ.

 

 

 

ಆದರೆ  ಈ ದಾಖಲೆಗಳನ್ನು  ಒದಗಿಸಿರಲಿಲ್ಲ. ಈ ಸಂಬಂಧ ‘ದಿ ಫೈಲ್‌’ ಆರ್‍‌ಟಿಐ ಅಡಿಯಲ್ಲಿ ಪಡೆದಿದ್ದ ದಾಖಲೆ ಸಮೇತ ವರದಿ ಪ್ರಕಟಿಸಿತ್ತು.

 

ಈ ವರದಿ ಪ್ರಕಟವಾದ ನಂತರ ಸಾರಿಗೆ ಇಲಾಖೆಯು  ಜಿಪಿಎಸ್‌ ದಾಖಲೆ ಮತ್ತು ವಿಧಾನಸಭೆ ಕ್ಷೇತ್ರವಾರು ಫೋಟೋ ಪ್ರತಿಗಳನ್ನು ಒದಗಿಸಬೇಕು ಎಂದು ಎಂ2ಎಂ ಮೀಡಿಯಾ ಕಂಪನಿಗ ಪತ್ರ ಬರೆದಿತ್ತು.  2024ರ ಜೂನ್ 24ರಂದು ಎಂ2ಎಂ ಮೀಡಿಯಾ ನೆಟ್‌ವರ್ಕ್‌ ಕಂಪನಿಯು ಸಾರಿಗೆ ಇಲಾಖೆಗೆ ಉತ್ತರಿಸಿತ್ತು. ಮೊದಲಿನ ಪ್ರಸ್ತಾವನೆಯಲ್ಲಿ  ಉಲ್ಲೇಖಿಸದೇ ಇದ್ದ ‘ಗೌಪ್ಯತೆ’ ಸಂಗತಿಯನ್ನು 2024ರ ಜೂನ್‌ 24ರ ಪತ್ರದಲ್ಲಿ ಪ್ರಸ್ತಾವಿಸಿದೆ.

 

ಈ ಪತ್ರದ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ಕರ್ನಾಟಕ ಸರ್ಕಾರವು ಜಾರಿಗೊಳಿಸಿರುವ ಎಲ್ಲಾ ಬಗೆಯ ಯೋಜನೆಗಳ ಕುರಿತು ಕರ್ನಾಟಕ ಮೌಲ್ಯಮಾಪನ ಪ್ರಾಧಿಕಾರದ ಮೂಲಕ  ಸಮೀಕ್ಷೆ, ಅಧ್ಯಯನ, ಸಮೀಕ್ಷೆ ನಡೆಸಿರುವ ಖಾಸಗಿ ಅಧ್ಯಯನ ಸಂಸ್ಥೆಗಳು ಸರ್ಕಾರಕ್ಕೆ ವರದಿಗಳನ್ನು ನೀಡಿವೆ. ಈ ವರದಿಗಳೊಂದಿಗೆ ಅಧ್ಯಯನದ ಸ್ಥಳ ಮತ್ತು ಫೋಟೋ ಪ್ರತಿಗಳನ್ನೂ ಲಗತ್ತಿಸಿ ವರದಿ ಸಲ್ಲಿಸಿವೆ.

 

ಆದರೆ ಶಕ್ತಿ ಯೋಜನೆ ಕುರಿತು ಸಮೀಕ್ಷೆ ನಡೆಸಿರುವ ಎಂ2ಎಂ ಮೀಡಿಯಾ ನೆಟ್‌ವರ್ಕ್‌ ಕಂಪನಿಯು ಜಿಪಿಎಸ್‌ ದಾಖಲೆ, ವಿಧಾನಸಭೆ ಕ್ಷೇತ್ರವಾರು ಫೋಟೋ ಪ್ರತಿಗಳನ್ನು ಸಲ್ಲಿಸಲು ಗೌಪ್ಯತೆ ಮತ್ತು ದಾಖಲೆಗಳ ಸುರಕ್ಷತೆ ಕಾರಣವನ್ನು ಮುಂದೊಡ್ಡಿರುವುದು ಚರ್ಚೆಗೆ ಗ್ರಾಸವಾಗಿದೆ.

 

ಎಂ2ಎಂ ಮೀಡಿಯಾ ನೆಟ್‌ವರ್ಕ್‌ ಪತ್ರದಲ್ಲೇನಿದೆ?

 

‘ನಾವು  ನಡೆಸಿದ ಸಮೀಕ್ಷೆಗಳ ಛಾಯಾಚಿತ್ರ ಪುರಾವೆಗಳು ಮತ್ತು ಭೌಗೋಳಿಕ ಸ್ಥಳಗಳ  ದತ್ತಾಂಶವನ್ನು ಸಹ ಹೊಂದಿದ್ದೇವೆ.  ಅನುಬಂಧ 1 ರಲ್ಲಿ ವಿವರಿಸಿದಂತೆ, ನಾವು  ಸಮೀಕ್ಷೆಯಲ್ಲಿ ಭಾಗವಹಿಸಿದ್ದ ಪ್ರತಿಯೊಬ್ಬ  ಪ್ರತಿವಾದಿಯೊಂದಿಗೆ ಮೌಖಿಕ ಒಪ್ಪಂದಗಳನ್ನು ಮಾಡಿಕೊಂಡಿದ್ದೇವೆ. ಇದು ಸಮೀಕ್ಷೆಯಲ್ಲಿನ  ಪ್ರಮಾಣಿತವಾದ ವಿಧಾನವಾಗಿದೆ. ಯೋಜನೆಯ ಅನುಷ್ಠಾನದ ನೀತಿಯ ಕುರಿತು ಪ್ರತಿಕೂಲವಾಗಿ ಪ್ರತಿಕ್ರಿಯಿಸಿರಬಹುದಾದ ವ್ಯಕ್ತಿಗಳು ಅಥವಾ ಪ್ರದೇಶಗಳ ಮಾಹಿತಿಯನ್ನು ಗೌಪ್ಯವಾಗಿಡಲಾಗುವುದು ಎಂದು ಮೌಖಿಕ ಒಪ್ಪಂದ ಮಾಡಿಕೊಳ್ಳಲಾಗಿದೆ,’ ಎಂದು ಪತ್ರದಲ್ಲಿ ಪ್ರಸ್ತಾವಿಸಿರುವುದು ತಿಳಿದು ಬಂದಿದೆ.

 

 

ಸಮೀಕ್ಷೆಯಲ್ಲಿ  ಪ್ರತಿಕ್ರಿಯಿಸಿದವರ ಮತ್ತು ಸ್ಥಳಗಳ ಗೌಪ್ಯತೆ ಮತ್ತು ಈ  ಗೌಪ್ಯತೆಯನ್ನು ರಕ್ಷಿಸಲು, ಸೂಕ್ಷ್ಮವಾಗಿರುವ ದತ್ತಾಂಶಗಳ ಗೌಪ್ಯತೆ ಕಾಯ್ದುಕೊಳ್ಳಲಾಗುವುದು ಎಂದು ಜವಾಬ್ದಾರಿಯುತ ಪ್ರಾಧಿಕಾರವು ಪತ್ರ ನೀಡಿದ ನಂತರ  ನಾವು ಛಾಯಾಚಿತ್ರ ಪುರಾವೆಗಳು ಮತ್ತು ಜಿಯೋಲೋಕಲೈಸೇಶನ್ ದತ್ತಾಂಶವನ್ನು   ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸುತ್ತೇವೆ.  ಸರಿಯಾದ ಸುರಕ್ಷತಾ ಕ್ರಮಗಳಿಲ್ಲದೆ ಈ ಗೌಪ್ಯ ದತ್ತಾಂಶವನ್ನು   ಬಹಿರಂಗಪಡಿಸುವುದರಿಂದ ಸಮೀಕ್ಷೆಯಲ್ಲಿ  ಒಳಗೊಂಡಿರುವ ಪ್ರತಿಕ್ರಿಯೆದಾರರ ಮೇಲೆ ತೀವ್ರ ಪರಿಣಾಮಗಳು ಉಂಟಾಗಬಹುದು ಎಂದೂ ಪತ್ರದಲ್ಲಿ ವಿವರಿಸಿರುವುದು ಗೊತ್ತಾಗಿದೆ.

 

ಅದೇ ರೀತಿ ಸಮೀಕ್ಷೆಯಲ್ಲಿ ಭಾಗವಹಿಸಿದವರೊಂದಿಗೆ ಮಾಡಿಕೊಳ್ಳಲಾಗಿದೆ ಎಂದು ಹೇಳಲಾಗಿರುವ ಒಪ್ಪಂದದ ನಮೂನೆಯನ್ನೂ ಇದೇ ಪತ್ರದೊಂದಿಗೆ ಸಲ್ಲಿಸಿದೆ.

 

‘ನಾನು ಎಂ2ಎಂ ಮೀಡಿಯಾ ನೆಟ್‌ವರ್ಕ್‌ ಸಂಸ್ಥೆಯಿಂದ ಬಂದಿದ್ದೇನೆ. ನಾವು ಸರ್ಕಾರದ ಯೋಜನೆಗಳ ಕುರಿತು ಹಾಗೂ ಇನ್ನಿತರ ಸಂಗತಿಗಳ ಕುರಿತು ಜನಸಾಮಾನ್ಯರ ಅನಿಸಿಕೆಗಳ ಕುರಿತು ಸಮೀಕ್ಷೆ ನಡೆಸುತ್ತಿದ್ದೇವೆ. ಹಾಗಾಗಿ ಕರ್ನಾಟಕದಾದ್ಯಂತ ಸಾವಿರಾರು ಜನರ ಸಂದರ್ಶನ ಮಾಡುತ್ತಿದ್ದೇವೆ. ಈ ಸಮೀಕ್ಷೆಯ ಫಲಿತಾಂಶಗಳನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು. ನಿಮ್ಮ ಗುರುತು ಹಾಗೂ ನೀವು ಹಂಚಿಕೊಂಡ ಮಾಹಿತಿಯನ್ನು ಗೌಪ್ಯವಾಗಿಡಲಾಗುವುದು. ನೀವು ನಿಮ್ಮ ಹದಿನೈದು ನಿಮಿಷ ನೀಡಿ ಸಮೀಕ್ಷೆಯಲ್ಲಿ ಪಾಲ್ಗೊಳ್ಳಬೇಕು ಎಂದು ಮನವಿ ಮಾಡುತ್ತಿದ್ದೇವೆ,’ ಎಂದು ನಮೂನೆಯಲ್ಲಿ ಕೋರಿರುವುದು ತಿಳಿದು ಬಂದಿದೆ.

 

 

2023ರ ಸೆಪ್ಟಂಬರ್‍‌, ಅಕ್ಟೋಬರ್, ನವೆಂಬರ್‍‌, ಡಿಸೆಂಬರ್‍‌ನಲ್ಲಿ ಕ್ರಮವಾಗಿ ನಿಪ್ಪಾಣಿ, ಅಥಣಿ, ಚಾಮರಾಜನಗರ, ಚಿಕ್ಕೋಡಿ, ಸದಲಗಾ, ಕಾಗವಾಡ, ಗುಂಡ್ಲುಪೇಟೆಯಲ್ಲಿ ಸಮೀಕ್ಷೆ ನಡೆಸಲಾಗಿದೆ.

 

 

ದತ್ತಾಂಶಗಳ ಸಂಗ್ರಹಿಸಿದ ನಂತರ ಅವುಗಳನ್ನು ಸರಿಪಡಿಸಿ ವಿಶ್ಲೇಷಿಸಲಾಗಿದೆ. ಸಮೀಕ್ಷೆಯ ಎಲ್ಲಾ ಭೌಗೋಳಿಕ ಸ್ಥಳಗಳನ್ನು ನಾವು ಛಾಯಾಚಿತ್ರ ಸಾಕ್ಷ್ಯಗಳೊಂದಿಗೆ ಸಂಗ್ರಹಿಸಿದ್ದೇವೆ. ಇದನ್ನು ಸಂಬಂಧಪಟ್ಟ ಸರ್ಕಾರಿ ಪ್ರಾಧಿಕಾರಕ್ಕೆ  ಒದಗಿಸಲಾಗುವುದು ಎಂದೂ ಪತ್ರದಲ್ಲಿ ವಿವರಿಸಿರುವುದು ಗೊತ್ತಾಗಿದೆ.

 

 

ರಾಜ್ಯ ಕಾಂಗ್ರೆಸ್‌ ಸರ್ಕಾರವು ಜಾರಿಗೊಳಿಸಿರುವ ಗ್ಯಾರಂಟಿಗಳ ಪೈಕಿ ಶಕ್ತಿ ಯೋಜನೆಯನ್ನು ಸಮೀಕ್ಷೆ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಿರುವ ಎಂ2ಎಂ ಮೀಡಿಯಾ ನೆಟ್‌ವರ್ಕ್‌ ಸಂಸ್ಥೆಯು ಈ ಸಂಬಂಧ ಜಿಪಿಎಸ್‌ ದಾಖಲೆ, ವಿಧಾನಸಭಾ ಕ್ಷೇತ್ರವಾರು ಫೋಟೋಗಳ ಪ್ರತಿಗಳನ್ನು  ಸಲ್ಲಿಸಿಲ್ಲ ಎಂಬುದು ಆರ್‍‌ಟಿಐ ದಾಖಲೆಗಳಿಂದ ಬಹಿರಂಗವಾಗಿತ್ತು.

 

 

 

ಶಕ್ತಿ ಯೋಜನೆಯೂ ಸೇರಿದಂತೆ ಇನ್ನಿತರೆ ಗ್ಯಾರಂಟಿ ಯೋಜನೆಗಳನ್ನು ಸಮೀಕ್ಷೆ ನಡೆಸಲು ಎಂ2ಎಂ ಮೀಡಿಯಾ ನೆಟ್‌ವರ್ಕ್‌ ಸಂಸ್ಥೆಯು 2023ರ ಆಗಸ್ಟ್‌ 31ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪ್ರಸ್ತಾವನೆ ಸಲ್ಲಿಸಿತ್ತು. ಸಮೀಕ್ಷೆಯನ್ನು ವೈಜ್ಞಾನಿಕ ಮಾದರಿಗಳಡಿಯಲ್ಲಿ ನಡೆಸಲಾಗುವುದು ಎಂದು ಸಂಸ್ಥೆಯ ಡಾ ಎಚ್‌ ವಿ ವಾಸು ಅವರು  ತಮ್ಮ  ಪ್ರಸ್ತಾವನೆಯಲ್ಲಿ ಹೇಳಿದ್ದರು.

 

ಎಂ2ಎಂ ಕಂಪನಿಯು ಸರ್ಕಾರಕ್ಕೆ ಸಲ್ಲಿಸಿರುವ ಸಮೀಕ್ಷಾ ಯೋಜನೆಯ ಪ್ರಸ್ತಾವನೆಯ 1ರಿಂದ 5ವರೆಗಿನ ಕ್ರಮಾಂಕದಲ್ಲಿ ವಿವರಿಸಿರುವಂತೆ ದತ್ತಾಂಶ ಸಂಗ್ರಹಣೆಗಾಗಿ ಆಧುನಿಕ ತಂತ್ರಜ್ಞಾನ ವಿಧಾನಗಳನ್ನು ಬಳಸುವುದಾಗಿ ಹೇಳಲಾಗಿತ್ತು. ಸಮೀಕ್ಷಾ ವರದಿಯನ್ನು ನೀಡುವಾಗ ಕರ್ನಾಟಕದ ಯಾವ ಯಾವ ಭಾಗಗಳಲ್ಲಿ ಜನಾಭಿಪ್ರಾಯ ಸಂಗ್ರಹಿಸಲಾಗಿದೆಯೋ ಅವುಗಳ ಜಿಪಿಎಸ್ ಲೊಕೇಷನ್‌ ಡಾಟಾ ಹಾಗೂ ಛಾಯಾಚಿತ್ರಗಳ ದಾಖಲೆ ಸಹಿತದ ವರದಿ ನೀಡುವುದಾಗಿ ಹೇಳಿತ್ತು.

 

ಶಕ್ತಿ ಯೋಜನೆ ಸಮೀಕ್ಷೆ; ಜಿಪಿಎಸ್‌ ದಾಖಲೆಗಳಿಲ್ಲ, ವಿಧಾನಸಭಾ ಕ್ಷೇತ್ರವಾರು ಫೋಟೋಗಳೂ ಇಲ್ಲ

 

ತನ್ನ ಸಮೀಕ್ಷಾ ವರದಿಯ ಅಧಿಕೃತತೆ ಹಾಗೂ ಪ್ರಾಮಾಣಿಕತೆಯನ್ನು ನಿರೂಪಿಸಲು ತಾನು ಈ ಪೂರಕ ದಾಖಲೆಗಳನ್ನು ಒದಗಿಸುವುದಾಗಿ ಈ ಎಂ2ಎಂ ಕಂಪನಿಯು ತಿಳಿಸಿತ್ತು. ಆದರೀಗ ಸಾರಿಗೆ ಇಲಾಖೆಯು ನೀಡಿರುವ ಮಾಹಿತಿ ಪ್ರಕಾರ ಈ ಸಮೀಕ್ಷೆಗೆ ಅಧಿಕೃತತೆ, ಪ್ರಾಮಾಣಿಕತೆ ಮತ್ತು ವಿಶ್ವಾಸಾರ್ಹತೆ ಬಗೆಗೆ ಹಲವು ಅನುಮಾನಗಳು ವ್ಯಕ್ತವಾಗಿದ್ದವು.

 

ಇಲಾಖೆಯ ಸರ್ಕಾರದ ಕಾರ್ಯದರ್ಶಿಯು  ಯಾರ ಅಭಿಪ್ರಾಯವನ್ನೂ ಪಡೆಯದೇ  ನೇರವಾಗಿ 4(ಜಿ) ವಿನಾಯಿತಿಗೆ ಕಡತ ಸಿದ್ಧಪಡಿಸಿ ಎಂದು ನಿರ್ದೇಶಿಸಿ  ಒಕ್ಕಣೆ ಹಾಕಿದ್ದು   ಆರ್‌ಟಿಐ ದಾಖಲೆಗಳಿಂದ ಬಹಿರಂಗಗೊಂಡಿತ್ತು.

 

ಕೋಟಿ ರು.ವೆಚ್ಚದ ಸಮೀಕ್ಷೆ; ಇಲಾಖೆಗಳ ಪ್ರಸ್ತಾವನೆಯಿಲ್ಲ, ಅಭಿಪ್ರಾಯವೂ ಇಲ್ಲ, ನೇರ ಮಾರ್ಗದಲ್ಲೇ 4(ಜಿ)

 

ಸಮೀಕ್ಷೆಗೆ 4(ಜಿ) ವಿನಾಯಿತಿ ನೀಡುವ ಮುನ್ನ ಆಡಳಿತ ಇಲಾಖೆಗಳ ಅಭಿಪ್ರಾಯವನ್ನೂ   ಕೋರಿರುವ ಬಗ್ಗೆ ಯಾವ ದಾಖಲೆಗಳೂ ಆರ್ಥಿಕ ಇಲಾಖೆಯ  ಕಡತದಲ್ಲಿ ಕಂಡುಬಂದಿಲ್ಲ. ಪ್ರಸ್ತಾವನೆಯನ್ನು ಆಡಳಿತ ಇಲಾಖೆಗಳಿಂದ ತರಿಸಿಕೊಳ್ಳದೇ ನೇರವಾಗಿ  ತಮ್ಮ ಹಂತದಲ್ಲೇ 4(ಜಿ) ವಿನಾಯಿತಿ ನೀಡಿರುವುದು ಅಧಿಕಾರಿಗಳು ಕರ್ತವ್ಯಲೋಪವೆಸಗಿರುವುದು ಮೇಲ್ನೋಟಕ್ಕೆ  ಕಂಡು ಬಂದಿತ್ತು.

 

 2023ರ ವಿಧಾನಸಭೆ ಚುನಾವಣೆಯಲ್ಲಿ  ಕಾಂಗ್ರೆಸ್‌ಗೆ ಪೂರ್ಣ ಬಹುಮತ ಬರಲಿದೆ ಎಂದು ಎಂ2ಎಂ ಮೀಡಿಯಾ ನೆಟ್‌ವರ್ಕ್‌ ಕಂಪನಿಯ ಈದಿನ.ಕಾಮ್‌ ವೆಬ್‌ಸೈಟ್‌ ಚುನಾವಣೆ ಪೂರ್ವ ಸಮೀಕ್ಷೆ ಹೇಳಿತ್ತು. ಕಾಂಗ್ರೆಸ್‌ ಪಕ್ಷವು ಸರ್ಕಾರ ರಚಿಸಿದ ಎರಡೇ ಎರಡು ತಿಂಗಳಲ್ಲಿ ಇದೇ ಕಂಪನಿಗೇ 58 ಸಾವಿರ ಕೋಟಿ ರು. ವೆಚ್ಚದ ಗ್ಯಾರಂಟಿಗಳ ಸಮೀಕ್ಷೆ ನಡೆಸಲು 1 ಕೋಟಿ ರು. ನೀಡಿದ್ದು  ಚರ್ಚೆಗೆ ಗ್ರಾಸವಾಗಿತ್ತು.

ಗ್ಯಾರಂಟಿಗಳ ಸಮೀಕ್ಷೆ; ಮಾಧ್ಯಮ ಸಂಸ್ಥೆಗೆ ಕೋಟಿ ರು ಕೊಟ್ಟ ಸರ್ಕಾರ

 

ಗ್ಯಾರಂಟಿಗಳ ಕುರಿತಾಗಿ ಐಸೆಕ್‌, ಮೌಲ್ಯಮಾಪನ ಪ್ರಾಧಿಕಾರಗಳಿಂದ ಸಮೀಕ್ಷೆ ನಡೆಸಬೇಕಿತ್ತು ಎಂದು ಪ್ರತಿಪಾದಿಸಿರುವ ಹಲವು ಅಧಿಕಾರಿಗಳು, ಕೇವಲ ಪ್ರಕಾಶನ, ಮುದ್ರಣದಂತಹ ಸೇವೆಗಳನ್ನು ಒದಗಿಸುತ್ತಿರುವ ಎಂ2ಎಂ ಮೀಡಿಯಾ ನೆಟ್‌ವರ್ಕ್‌ ಕಂಪನಿಗೆ ವಹಿಸಿರುವುದಕ್ಕೆ ಆಕ್ಷೇಪಗಳನ್ನು ವ್ಯಕ್ತಪಡಿಸಿದ್ದರು.

 

ಸರ್ವೆ ಕಾರ್ಯಕ್ಕೆ ಸರ್ಕಾರದ ಬೆನ್ನು ಬಿದ್ದಿದ್ದ ಎಂ2ಎಂ ಮೀಡಿಯಾ ನೆಟ್‌ವರ್ಕ್ ಕಂಪನಿ; ದಾಖಲೆ ಬಹಿರಂಗ

 

ಗ್ಯಾರಂಟಿಗಳ ಅನುಷ್ಠಾನಕ್ಕೆ ಸಂಬಂಧಿಸಿದ ಆಡಳಿತಾತ್ಮಕ ಪ್ರಕ್ರಿಯೆಗಳು ಜೂನ್‌, ಜುಲೈವರೆಗೂ ಚಾಲ್ತಿಯಲ್ಲಿದ್ದವು. ಇದಾದ ನಂತರವೂ ಯೋಜನೆ ಅನುಷ್ಠಾನದಲ್ಲಿ ಗೊಂದಲ ಮುಂದುವರೆದಿತ್ತು. ಬಹುತೇಕ ಫಲಾನುಭವಿಗಳಿಗೆ ಹಣವೂ ಇದುದವರೆಗೂ ಪಾವತಿಯಾಗಿಲ್ಲ.  ಮಾರ್ಗಸೂಚಿಗಳ ಸಂಬಂಧ ಆಗಸ್ಟ್‌ವರೆಗೂ ತಿದ್ದುಪಡಿಗಳು ಮುಂದುವರೆದಿದ್ದವು.

 

ಅಲ್ಲದೇ ಎಂ2ಎಂ ಮೀಡಿಯಾ ನೆಟ್‌ವರ್ಕ್‌ ಗೆ ಸಮೀಕ್ಷೆ ನಡೆಸಲು 25 ಲಕ್ಷ ರು ಪಾವತಿಸಿದ್ದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ಈ ಸಂಬಂಧ ಮಾಡಿಕೊಂಡಿರುವ ಒಪ್ಪಂದ, ಷರತ್ತುಗಳ ಕುರಿತು ದಾಖಲೆಗಳನ್ನು ಬಹಿರಂಗಪಡಿಸಿರಲಿಲ್ಲ.

ಕೋಟಿ ರು. ಸಮೀಕ್ಷೆ; 20 ಲಕ್ಷರು ಮುಂಗಡ ನೀಡಿ ದಾಖಲೆಗಳನ್ನೇ ಒದಗಿಸದ ಕೆಎಸ್‌ಆರ್‍‌ಟಿಸಿ

 

ಹೀಗಿದ್ದರೂ ಸಹ ಗ್ಯಾರಂಟಿಗಳು ಯಶಸ್ಸು ಕಂಡಿವೆ ಎಂದು ಎಂ2ಎಂ ಮೀಡಿಯಾ ನೆಟ್‌ವರ್ಕ್‌ ಕಂಪನಿಯು ಜುಲೈನಲ್ಲಿಯೇ ಬಿಡುಗಡೆಗೊಳಿಸಿರುವ ಸಮೀಕ್ಷೆ ವರದಿಯು ಸಂಶಯಗಳಿಗೆ ದಾರಿಮಾಡಿಕೊಟ್ಟಿರುವುದನ್ನು ಸ್ಮರಿಸಬಹುದು.

Hot this week

ಆದಾಯಕ್ಕೂ ಮೀರಿದ ಆಸ್ತಿ ಗಳಿಕೆ ಆರೋಪ; ಆರೋಪಿತರಿಗೆ ಮುಖ್ಯ ಇಂಜಿನಿಯರ್ ಹುದ್ದೆಗೆ ನೇಮಕ, ಲೋಕಾ ದಾಳಿಯನ್ನೇ ಅಣಕಿಸಿದ ಸರ್ಕಾರ

ಬೆಂಗಳೂರು;  ಆದಾಯಕ್ಕೂ  ಮೀರಿದ ಆಸ್ತಿ ಗಳಿಕೆ ಆರೋಪದಡಿಯಲ್ಲಿ ಲೋಕಾಯುಕ್ತ ದಾಳಿಗೆ ಒಳಗಾಗಿದ್ದ ...

ಸಾರ್ವತ್ರಿಕ ರಜಾ ದಿನದ ವೇತನಕ್ಕೂ ಕತ್ತರಿ!; ಶಕ್ತಿ ಸೌಧದಲ್ಲೇ ಡೇಟಾ ಎಂಟ್ರಿ ಆಪರೇಟರ್‍‌ಗಳಿಗೆ ಶೋಷಣೆ, ದೌರ್ಜನ್ಯ ಆರೋಪ

ಬೆಂಗಳೂರು;  ಮುಖ್ಯಮಂತ್ರಿ ಸಚಿವಾಲಯವೂ ಸೇರಿದಂತೆ ಸಚಿವಾಲಯದ ಇತರೆ  ಕಚೇರಿಗಳಲ್ಲಿ ಹೊರಗುತ್ತಿಗೆಯಡಿಯಲ್ಲಿ  ಕಾರ್ಯನಿರ್ವಹಿಸುತ್ತಿರುವ...
Please Scan to make Your Contribution

Topics

ಆದಾಯಕ್ಕೂ ಮೀರಿದ ಆಸ್ತಿ ಗಳಿಕೆ ಆರೋಪ; ಆರೋಪಿತರಿಗೆ ಮುಖ್ಯ ಇಂಜಿನಿಯರ್ ಹುದ್ದೆಗೆ ನೇಮಕ, ಲೋಕಾ ದಾಳಿಯನ್ನೇ ಅಣಕಿಸಿದ ಸರ್ಕಾರ

ಬೆಂಗಳೂರು;  ಆದಾಯಕ್ಕೂ  ಮೀರಿದ ಆಸ್ತಿ ಗಳಿಕೆ ಆರೋಪದಡಿಯಲ್ಲಿ ಲೋಕಾಯುಕ್ತ ದಾಳಿಗೆ ಒಳಗಾಗಿದ್ದ ...

ಸಾರ್ವತ್ರಿಕ ರಜಾ ದಿನದ ವೇತನಕ್ಕೂ ಕತ್ತರಿ!; ಶಕ್ತಿ ಸೌಧದಲ್ಲೇ ಡೇಟಾ ಎಂಟ್ರಿ ಆಪರೇಟರ್‍‌ಗಳಿಗೆ ಶೋಷಣೆ, ದೌರ್ಜನ್ಯ ಆರೋಪ

ಬೆಂಗಳೂರು;  ಮುಖ್ಯಮಂತ್ರಿ ಸಚಿವಾಲಯವೂ ಸೇರಿದಂತೆ ಸಚಿವಾಲಯದ ಇತರೆ  ಕಚೇರಿಗಳಲ್ಲಿ ಹೊರಗುತ್ತಿಗೆಯಡಿಯಲ್ಲಿ  ಕಾರ್ಯನಿರ್ವಹಿಸುತ್ತಿರುವ...

ಸರ್ಕಾರದ ಹಿತಾಸಕ್ತಿ, ಘನತೆಗೆ ಧಕ್ಕೆ ನೆಪ; ಸಮಿತಿ ರಚನೆಯಿಲ್ಲದೇ 21 ಪ್ಯಾಕೇಜ್‌ ಟೆಂಡರ್ ಅನುಮೋದನೆ, 4,791.95 ಕೋಟಿ ರು ಹಗರಣ?

ಬೆಂಗಳೂರು; ಘನತ್ಯಾಜ್ಯ ನಿರ್ವಹಣೆಯ 21  ಪ್ಯಾಕೇಜ್‌ಗಳಿಗೆ ಟೆಂಡರ್‌ ಪ್ರಕ್ರಿಯೆಗೆ ಸಂಬಂಧಿಸಿದಂತೆ  ಐಎಎಸ್...

ಐಎಎಸ್‌ ವೃಂದದಲ್ಲಿ ಅನರ್ಹ 7 ಅಧಿಕಾರಿಗಳು ಮುಂದುವರಿಕೆ; ಬಂಡೆದ್ದ 25 ಕೆಎಎಸ್‌ ಅಧಿಕಾರಿಗಳು, ಅಖಾಡಕ್ಕಿಳಿದ ಡಿ ಕೆ ಶಿವಕುಮಾರ್

ಬೆಂಗಳೂರು;  ಕನಿಷ್ಟ 8 ವರ್ಷಗಳ ನಿಯಮಿತವಾಗಿ ಸೇವೆ ಸಲ್ಲಿಸಿರುವ  ಕೆಎಎಸ್‌ ಅಧಿಕಾರಿಗಳಿಗೆ...

Related Articles

Popular Categories

error: Content is protected !!