ಶಕ್ತಿ ಯೋಜನೆ ಸಮೀಕ್ಷೆ; ಜಿಪಿಎಸ್‌ ದಾಖಲೆಗಳಿಲ್ಲ, ವಿಧಾನಸಭಾ ಕ್ಷೇತ್ರವಾರು ಫೋಟೋಗಳೂ ಇಲ್ಲ

ಬೆಂಗಳೂರು;  ರಾಜ್ಯ ಕಾಂಗ್ರೆಸ್‌ ಸರ್ಕಾರವು ಜಾರಿಗೊಳಿಸಿರುವ ಗ್ಯಾರಂಟಿಗಳ ಪೈಕಿ ಶಕ್ತಿ ಯೋಜನೆಯನ್ನು ಸಮೀಕ್ಷೆ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಿರುವ ಎಂ2ಎಂ ಮೀಡಿಯಾ ನೆಟ್‌ವರ್ಕ್‌ ಸಂಸ್ಥೆಯು ಈ ಸಂಬಂಧ ಜಿಪಿಎಸ್‌ ದಾಖಲೆ, ವಿಧಾನಸಭಾ ಕ್ಷೇತ್ರವಾರು ಫೋಟೋಗಳ ಪ್ರತಿಗಳನ್ನು  ಸಲ್ಲಿಸಿಲ್ಲ ಎಂಬುದು ಆರ್‍‌ಟಿಐ ದಾಖಲೆಗಳಿಂದ ಬಹಿರಂಗವಾಗಿದೆ.

 

ಗ್ಯಾರಂಟಿ ಯೋಜನೆಗಳನ್ನು ಸಮೀಕ್ಷೆ ನಡೆಸಲು ಎಂ2ಎಂ ಮೀಡಿಯಾ ನೆಟ್‌ವರ್ಕ್‌ ಸಂಸ್ಥೆಯು ಸಮೀಕ್ಷೆ ನಡೆಸಿರುವ ಭಾಗವಾಗಿ ಜಿಪಿಎಸ್‌, ವಿಧಾನಸಭಾ ಕ್ಷೇತ್ರವಾರು ಪೋಟೋಗಳೊಂದಿಗೆ ಸಮೀಕ್ಷೆ ನಡೆಸಲಾಗುವುದು ಎಂದು ಪ್ರಸ್ತಾವನೆಯಲ್ಲಿ ಹೇಳಿತ್ತಾರೂ ಇದೀಗ ವರದಿಯೊಂದಿಗೆ ಯಾವುದೇ ದಾಖಲೆಗಳನ್ನು ನೀಡದಿರುವುದು ಚರ್ಚೆಗೆ ಗ್ರಾಸವಾಗಿದೆ.

 

ಶಕ್ತಿ ಯೋಜನೆ ಸಮೀಕ್ಷೆ ವರದಿ ಮತ್ತು ಈ ಸಂಬಂಧ ಜಿಪಿಎಸ್‌ ಸೇರಿದಂತೆ ಮತ್ತಿತರೆ ದಾಖಲೆಗಳನ್ನು ಕೋರಿ ‘ದಿ ಫೈಲ್‌’ ಆರ್‍‌ಟಿಐ ಅಡಿಯಲ್ಲಿ ಅರ್ಜಿ ಸಲ್ಲಿಸಿತ್ತು. ಈ ಅರ್ಜಿಗೆ ಉತ್ತರಿಸಿರುವ ಸಾರಿಗೆ ಇಲಾಖೆಯು ಎಂ2ಎಂ ಮೀಡಿಯಾ ನೆಟ್‌ವರ್ಕ್‌ ಸಂಸ್ಥೆಯು ಯಾವುದೇ ಜಿಪಿಎಸ್‌ ದಾಖಲೆಗಳು, ವಿಧಾನಸಭಾ ಕ್ಷೇತ್ರವಾರು ಫೋಟೋಗಳ ಪ್ರತಿಗಳನ್ನು ಸಲ್ಲಿಸಿಲ್ಲ ಎಂದು ಮಾಹಿತಿ ನೀಡಿದೆ.

 

ಶಕ್ತಿ ಯೋಜನೆಯೂ ಸೇರಿದಂತೆ ಇನ್ನಿತರೆ ಗ್ಯಾರಂಟಿ ಯೋಜನೆಗಳನ್ನು ಸಮೀಕ್ಷೆ ನಡೆಸಲು ಎಂ2ಎಂ ಮೀಡಿಯಾ ನೆಟ್‌ವರ್ಕ್‌ ಸಂಸ್ಥೆಯು 2023ರ ಆಗಸ್ಟ್‌ 31ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪ್ರಸ್ತಾವನೆ ಸಲ್ಲಿಸಿತ್ತು. ಸಮೀಕ್ಷೆಯನ್ನು ವೈಜ್ಞಾನಿಕ ಮಾದರಿಗಳಡಿಯಲ್ಲಿ ನಡೆಸಲಾಗುವುದು ಎಂದು ಸಂಸ್ಥೆಯ ಡಾ ಎಚ್‌ ವಿ ವಾಸು ಅವರು  ತಮ್ಮ  ಪ್ರಸ್ತಾವನೆಯಲ್ಲಿ ಹೇಳಿದ್ದರು.

 

ಎಂ2ಎಂ ಕಂಪನಿಯು ಸರ್ಕಾರಕ್ಕೆ ಸಲ್ಲಿಸಿರುವ ಸಮೀಕ್ಷಾ ಯೋಜನೆಯ ಪ್ರಸ್ತಾವನೆಯ 1ರಿಂದ 5ವರೆಗಿನ ಕ್ರಮಾಂಕದಲ್ಲಿ ವಿವರಿಸಿರುವಂತೆ ದತ್ತಾಂಶ ಸಂಗ್ರಹಣೆಗಾಗಿ ಆಧುನಿಕ ತಂತ್ರಜ್ಞಾನ ವಿಧಾನಗಳನ್ನು ಬಳಸುವುದಾಗಿ ಹೇಳಲಾಗಿತ್ತು. ಸಮೀಕ್ಷಾ ವರದಿಯನ್ನು ನೀಡುವಾಗ ಕರ್ನಾಟಕದ ಯಾವ ಯಾವ ಭಾಗಗಳಲ್ಲಿ ಜನಾಭಿಪ್ರಾಯ ಸಂಗ್ರಹಿಸಲಾಗಿದೆಯೋ ಅವುಗಳ ಜಿಪಿಎಸ್ ಲೊಕೇಷನ್‌ ಡಾಟಾ ಹಾಗೂ ಛಾಯಾಚಿತ್ರಗಳ ದಾಖಲೆ ಸಹಿತದ ವರದಿ ನೀಡುವುದಾಗಿ ಹೇಳಿತ್ತು.

 

ತನ್ನ ಸಮೀಕ್ಷಾ ವರದಿಯ ಅಧಿಕೃತತೆ ಹಾಗೂ ಪ್ರಾಮಾಣಿಕತೆಯನ್ನು ನಿರೂಪಿಸಲು ತಾನು ಈ ಪೂರಕ ದಾಖಲೆಗಳನ್ನು ಒದಗಿಸುವುದಾಗಿ ಈ ಎಂ2ಎಂ ಕಂಪನಿಯು ತಿಳಿಸಿತ್ತು. ಆದರೀಗ ಸಾರಿಗೆ ಇಲಾಖೆಯು ನೀಡಿರುವ ಮಾಹಿತಿ ಪ್ರಕಾರ ಈ ಸಮೀಕ್ಷೆಗೆ ಅಧಿಕೃತತೆ, ಪ್ರಾಮಾಣಿಕತೆ ಮತ್ತು ವಿಶ್ವಾಸಾರ್ಹತೆ ಬಗೆಗೆ ಹಲವು ಅನುಮಾನಗಳು ವ್ಯಕ್ತವಾಗಿವೆ.

 

ಎಂ2ಎಂ ನೀಡಿದ್ದ ಸಮೀಕ್ಷಾ ವರದಿಯನ್ನು ಸಾರಿಗೆ ಇಲಾಖೆಯು ಯಥಾವತ್ತಾಗಿ ಸ್ವೀಕರಿಸಿದೆ. ಆದರೆ ಈ ವರದಿಯಲ್ಲಿ ಜಿಪಿಎಸ್‌, ವಿಧಾನಸಭಾ ಕ್ಷೇತ್ರವಾರು ಪೋಟೋಗಳು ಮತ್ತಿತರೆ ದಾಖಲೆಗಳ ಕುರಿತು ಏನನ್ನೂ ಪ್ರಶ್ನಿಸದೇ ಇರುವ ಸಾರಿಗೆ ಇಲಾಖೆ ಅಧಿಕಾರಿಗಳ ನಡೆಯೂ ಸಹ ಚರ್ಚೆಗೆ ಗ್ರಾಸವಾಗಿದೆ.

 

ವರದಿ ಕುರಿತು ಸಚಿವ ರಾಮಲಿಂಗಾರೆಡ್ಡಿ ಅವರು ಸಹ ಈ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿದ್ದಾರೆ ಎಂದು ತಿಳಿದು ಬಂದಿದೆ.

 

ಗೃಹಲಕ್ಷ್ಮಿ ಸೇರಿದಂತೆ 4 ಗ್ಯಾರಂಟಿ ಯೋಜನೆಗಳ ಸಮೀಕ್ಷೆ ನಡೆಸಲು ಎಂ2ಎಂ ಮೀಡಿಯಾ ನೆಟ್‌ ವರ್ಕ್‌ ಕಂಪನಿಗೆ  4(ಜಿ) ವಿನಾಯಿತಿ ನೀಡುವ ಮುನ್ನ ಆರ್ಥಿಕ ಇಲಾಖೆಯ ಅಧಿಕಾರಿಗಳು  ಆಡಳಿತಾತ್ಮಕ  ಪ್ರಕ್ರಿಯೆಗಳನ್ನೇ ನಡೆಸಿರಲಿಲ್ಲ.

 

ಇಲಾಖೆಯ ಸರ್ಕಾರದ ಕಾರ್ಯದರ್ಶಿಯು  ಯಾರ ಅಭಿಪ್ರಾಯವನ್ನೂ ಪಡೆಯದೇ  ನೇರವಾಗಿ 4(ಜಿ) ವಿನಾಯಿತಿಗೆ ಕಡತ ಸಿದ್ಧಪಡಿಸಿ ಎಂದು ನಿರ್ದೇಶಿಸಿ  ಒಕ್ಕಣೆ ಹಾಕಿದ್ದು   ಆರ್‌ಟಿಐ ದಾಖಲೆಗಳಿಂದ ಬಹಿರಂಗಗೊಂಡಿತ್ತು.

ಕೋಟಿ ರು.ವೆಚ್ಚದ ಸಮೀಕ್ಷೆ; ಇಲಾಖೆಗಳ ಪ್ರಸ್ತಾವನೆಯಿಲ್ಲ, ಅಭಿಪ್ರಾಯವೂ ಇಲ್ಲ, ನೇರ ಮಾರ್ಗದಲ್ಲೇ 4(ಜಿ)

 

ಸಮೀಕ್ಷೆಗೆ 4(ಜಿ) ವಿನಾಯಿತಿ ನೀಡುವ ಮುನ್ನ ಆಡಳಿತ ಇಲಾಖೆಗಳ ಅಭಿಪ್ರಾಯವನ್ನೂ   ಕೋರಿರುವ ಬಗ್ಗೆ ಯಾವ ದಾಖಲೆಗಳೂ ಆರ್ಥಿಕ ಇಲಾಖೆಯ  ಕಡತದಲ್ಲಿ ಕಂಡುಬಂದಿಲ್ಲ. ಪ್ರಸ್ತಾವನೆಯನ್ನು ಆಡಳಿತ ಇಲಾಖೆಗಳಿಂದ ತರಿಸಿಕೊಳ್ಳದೇ ನೇರವಾಗಿ  ತಮ್ಮ ಹಂತದಲ್ಲೇ 4(ಜಿ) ವಿನಾಯಿತಿ ನೀಡಿರುವುದು ಅಧಿಕಾರಿಗಳು ಕರ್ತವ್ಯಲೋಪವೆಸಗಿರುವುದು ಮೇಲ್ನೋಟಕ್ಕೆ  ಕಂಡು ಬಂದಿತ್ತು.

 

 2023ರ ವಿಧಾನಸಭೆ ಚುನಾವಣೆಯಲ್ಲಿ  ಕಾಂಗ್ರೆಸ್‌ಗೆ ಪೂರ್ಣ ಬಹುಮತ ಬರಲಿದೆ ಎಂದು ಎಂ2ಎಂ ಮೀಡಿಯಾ ನೆಟ್‌ವರ್ಕ್‌ ಕಂಪನಿಯ ಈದಿನ.ಕಾಮ್‌ ವೆಬ್‌ಸೈಟ್‌ ಚುನಾವಣೆ ಪೂರ್ವ ಸಮೀಕ್ಷೆ ಹೇಳಿತ್ತು. ಕಾಂಗ್ರೆಸ್‌ ಪಕ್ಷವು ಸರ್ಕಾರ ರಚಿಸಿದ ಎರಡೇ ಎರಡು ತಿಂಗಳಲ್ಲಿ ಇದೇ ಕಂಪನಿಗೇ 58 ಸಾವಿರ ಕೋಟಿ ರು. ವೆಚ್ಚದ ಗ್ಯಾರಂಟಿಗಳ ಸಮೀಕ್ಷೆ ನಡೆಸಲು 1 ಕೋಟಿ ರು. ನೀಡಿದ್ದು  ಚರ್ಚೆಗೆ ಗ್ರಾಸವಾಗಿತ್ತು.

ಗ್ಯಾರಂಟಿಗಳ ಸಮೀಕ್ಷೆ; ಮಾಧ್ಯಮ ಸಂಸ್ಥೆಗೆ ಕೋಟಿ ರು ಕೊಟ್ಟ ಸರ್ಕಾರ

 

ಗ್ಯಾರಂಟಿಗಳ ಕುರಿತಾಗಿ ಐಸೆಕ್‌, ಮೌಲ್ಯಮಾಪನ ಪ್ರಾಧಿಕಾರಗಳಿಂದ ಸಮೀಕ್ಷೆ ನಡೆಸಬೇಕಿತ್ತು ಎಂದು ಪ್ರತಿಪಾದಿಸಿರುವ ಹಲವು ಅಧಿಕಾರಿಗಳು, ಕೇವಲ ಪ್ರಕಾಶನ, ಮುದ್ರಣದಂತಹ ಸೇವೆಗಳನ್ನು ಒದಗಿಸುತ್ತಿರುವ ಎಂ2ಎಂ ಮೀಡಿಯಾ ನೆಟ್‌ವರ್ಕ್‌ ಕಂಪನಿಗೆ ವಹಿಸಿರುವುದಕ್ಕೆ ಆಕ್ಷೇಪಗಳನ್ನು ವ್ಯಕ್ತಪಡಿಸಿದ್ದರು.

 

ಸರ್ವೆ ಕಾರ್ಯಕ್ಕೆ ಸರ್ಕಾರದ ಬೆನ್ನು ಬಿದ್ದಿದ್ದ ಎಂ2ಎಂ ಮೀಡಿಯಾ ನೆಟ್‌ವರ್ಕ್ ಕಂಪನಿ; ದಾಖಲೆ ಬಹಿರಂಗ

 

ಗ್ಯಾರಂಟಿಗಳ ಅನುಷ್ಠಾನಕ್ಕೆ ಸಂಬಂಧಿಸಿದ ಆಡಳಿತಾತ್ಮಕ ಪ್ರಕ್ರಿಯೆಗಳು ಜೂನ್‌, ಜುಲೈವರೆಗೂ ಚಾಲ್ತಿಯಲ್ಲಿದ್ದವು. ಇದಾದ ನಂತರವೂ ಯೋಜನೆ ಅನುಷ್ಠಾನದಲ್ಲಿ ಗೊಂದಲ ಮುಂದುವರೆದಿತ್ತು. ಬಹುತೇಕ ಫಲಾನುಭವಿಗಳಿಗೆ ಹಣವೂ ಇದುದವರೆಗೂ ಪಾವತಿಯಾಗಿಲ್ಲ.  ಮಾರ್ಗಸೂಚಿಗಳ ಸಂಬಂಧ ಆಗಸ್ಟ್‌ವರೆಗೂ ತಿದ್ದುಪಡಿಗಳು ಮುಂದುವರೆದಿದ್ದವು.

 

ಅಲ್ಲದೇ ಎಂ2ಎಂ ಮೀಡಿಯಾ ನೆಟ್‌ವರ್ಕ್‌ ಗೆ ಸಮೀಕ್ಷೆ ನಡೆಸಲು 25 ಲಕ್ಷ ರು ಪಾವತಿಸಿದ್ದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ಈ ಸಂಬಂಧ ಮಾಡಿಕೊಂಡಿರುವ ಒಪ್ಪಂದ, ಷರತ್ತುಗಳ ಕುರಿತು ದಾಖಲೆಗಳನ್ನು ಬಹಿರಂಗಪಡಿಸಿರಲಿಲ್ಲ.

ಕೋಟಿ ರು. ಸಮೀಕ್ಷೆ; 20 ಲಕ್ಷರು ಮುಂಗಡ ನೀಡಿ ದಾಖಲೆಗಳನ್ನೇ ಒದಗಿಸದ ಕೆಎಸ್‌ಆರ್‍‌ಟಿಸಿ

 

ಹೀಗಿದ್ದರೂ ಸಹ ಗ್ಯಾರಂಟಿಗಳು ಯಶಸ್ಸು ಕಂಡಿವೆ ಎಂದು ಎಂ2ಎಂ ಮೀಡಿಯಾ ನೆಟ್‌ವರ್ಕ್‌ ಕಂಪನಿಯು ಜುಲೈನಲ್ಲಿಯೇ ಬಿಡುಗಡೆಗೊಳಿಸಿರುವ ಸಮೀಕ್ಷೆ ವರದಿಯು ಸಂಶಯಗಳಿಗೆ ದಾರಿಮಾಡಿಕೊಟ್ಟಿತ್ತು.

the fil favicon

SUPPORT THE FILE

Latest News

Related Posts