ಆಟೋಮೊಬೈಲ್‌ ವಲಯದಲ್ಲಿ ಹೂಡಿಕೆ; ಪೂರ್ವಾನುಭವ ದಾಖಲೆಯಿಲ್ಲ, ಪ್ರವರ್ತಕರ ವಿವರಗಳಿಲ್ಲ

ಬೆಂಗಳೂರು; ಏರೋಸ್ಪೇಸ್‌ ಪಾರ್ಕ್‌ನಲ್ಲಿ ಬಹು ಕೌಶಲ ಅಭಿವೃದ್ಧಿ ಕೇಂದ್ರ ಸ್ಥಾಪಿಸಲು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಅವರ ಕುಟುಂಬದ ಸದಸ್ಯರು ಟ್ರಸ್ಟಿಗಳಾಗಿರುವ ಸಿದ್ಧಾರ್ಥ ವಿಹಾರ್‍‌ ಟ್ರಸ್ಟ್‌  ಎರಡು ಆಯ್ಕೆಗಳನ್ನು ಕೆಐಎಡಿಬಿ ಮುಂದೆ ಇರಿಸಿತ್ತು.  ಮೊದಲ ಆಯ್ಕೆಯಲ್ಲಿ 2.17 ಎಕರೆ ಅಥವಾ ಎರಡನೇ ಆಯ್ಕೆಯಲ್ಲಿ 5 ಎಕರೆ ವಿಸ್ತೀರ್ಣದ ನಿವೇಶನ ಕೇಳಿತ್ತು.  ಟ್ರಸ್ಟ್‌ ಕೋರಿದ್ದ  ಎರಡನೇ ಆಯ್ಕೆಯನ್ನು ಪರಿಗಣಿಸಿದ್ದ ರಾಜ್ಯಮಟ್ಟದ ಏಕಗವಾಕ್ಷಿ ಅನುಮೋದನಾ ಸಮಿತಿಯು, 5 ಎಕರೆ ವಿಸ್ತೀರ್ಣದ ಸಿ ಎ ನಿವೇಶನವನ್ನು ಮಂಜೂರು ಮಾಡಿದೆ.

 

ಖರ್ಗೆ ಕುಟುಂಬದ ಸದಸ್ಯರು ಟ್ರಸ್ಟಿಗಳಾಗಿರುವ ಸಿದ್ಧಾರ್ಥ ವಿಹಾರ್ ಟ್ರಸ್ಟ್‌ಗೆ ಏರೋಸ್ಪೇಸ್‌ ಪಾರ್ಕ್‌ನಲ್ಲಿ 5 ಎಕರೆ ವಿಸ್ತೀರ್ಣದ ಸಿಎ ನಿವೇಶನ ಮಂಜೂರಾಗಿರುವ ಪ್ರಕರಣವು ರಾಷ್ಟ್ರಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಇದೇ ಪ್ರಕರಣದಲ್ಲಿ ತನಿಖೆ ನಡೆಸಬೇಕು ಎಂದು ರಾಜ್ಯಸಭೆ ಸದಸ್ಯ ಲಹರ್‍‌ ಸಿಂಗ್‌ ಸಿರೋಯಾ ಮತ್ತು ವಿಧಾನ ಪರಿಷತ್‌ನ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣ ಸ್ವಾಮಿ ಅವರು ರಾಜ್ಯಪಾಲರಿಗೆ ದೂರು ಸಲ್ಲಿಸಿದ್ದಾರೆ. ಈ ಬೆಳವಣಿಗೆ ನಡುವೆಯೇ ಸಿದ್ದಾರ್ಥ ವಿಹಾರ್‍‌ ಟ್ರಸ್ಟ್‌ನ ಪ್ರಾಜೆಕ್ಟ್‌ ರಿಪೋರ್ಟ್‌ ಕೂಡ ಮುನ್ನೆಲೆಗೆ ಬಂದಿದೆ.

 

ಸಿ ಎ ನಿವೇಶನಕ್ಕಾಗಿ ಸಿದ್ಧಾರ್ಥ ವಿಹಾರ್‍‌ ಟ್ರಸ್ಟ್‌ ಸಲ್ಲಿಸಿರುವ ಪ್ರಾಜೆಕ್ಟ್‌ ರಿಪೋರ್ಟ್‌ ‘ದಿ ಫೈಲ್‌’ಗೆ ಲಭ್ಯವಾಗಿದೆ.

 

 

 

ಮಂಜೂರಾಗಿರುವ ಸಿ ಎ ನಿವೇಶನದಲ್ಲಿ ಆಟೋಮೊಬೈಲ್‌ (ಬಸ್‌ ಬಾಡಿ ಬಿಲ್ಡಿಂಗ್‌) ಮತ್ತು ಇದಕ್ಕೆ ಪೂರಕವಾದ ಉತ್ಪಾದಕ ಚಟುವಟಿಕೆ ಹಾಗೂ ಕ್ಯಾಡ್‌-ಕ್ಯಾಮ್‌ ನಂತಹ ಸಾಫ್ಟ್‌ವೇರ್‍‌ ಕೌಶಲ್ಯಗಳ ತರಬೇತಿ ನೀಡಲಿದೆ ಎಂದು ಟ್ರಸ್ಟ್‌ ತನ್ನ ಪ್ರಾಜೆಕ್ಟ್‌ ರಿಪೋರ್ಟ್‌ನಲ್ಲಿ ವಿವರಿಸಿದೆ. ಆದರೆ ಈ ಟ್ರಸ್ಟ್‌ಗೆ ಆಟೋಮೊಬೈಲ್‌ ಕ್ಷೇತ್ರದಲ್ಲಿ ಪೂರ್ವಾನುಭವ ಇದೆಯೇ ಇಲ್ಲವೇ ಎಂಬುದರ ಬಗ್ಗೆ ಪ್ರಾಜೆಕ್ಟ್‌ ರಿಪೊರ್ಟ್‌ನಲ್ಲಿ ಯಾವ ಲಗತ್ತುಗಳೂ ಕಂಡು ಬಂದಿಲ್ಲ.

 

 

ಅಷ್ಟೇ ಅಲ್ಲದೇ ಈ ಯೋಜನೆಗೆ ಒಟ್ಟು 25 ಕೋಟಿ ಅಂದಾಜು ವೆಚ್ಚವನ್ನು ತೋರಿಸಿದೆ. ಈ ಪೈಕಿ ದುಡಿಯುವ ಬಂಡವಾಳವೆಂದು 5 ಕೋಟಿ ರು ನಮೂದಿಸಿದೆ. ಪ್ರವರ್ತಕರ ಕೊಡುಗೆ 10 ಕೋಟಿ ರು ಎಂದು ಹೇಳಿದೆಯಾದರೂ ಪ್ರವರ್ತಕರು ಯಾರು, 10 ಕೋಟಿ ರು. ನಲ್ಲಿ ಯಾವ್ಯಾವ ಪ್ರವರ್ತಕರು ಎಷ್ಟೆಷ್ಟು ಕೋಟಿ ರು.ಗಳನ್ನು ಕೊಡುಗೆ ನೀಡಲಿದ್ದಾರೆ ಎಂಬ ವಿವರಗಳು, ಪ್ರಾಜೆಕ್ಟ್‌ ರಿಪೋರ್ಟ್‌ನಲ್ಲಿ ಕಂಡು ಬಂದಿಲ್ಲ.

 

ಬಹು ಕೌಶಲ ಅಭಿವೃದ್ಧಿ ಕೇಂದ್ರ ಸ್ಥಾಪಿಸಲು ಅರ್ಜಿ ಸಲ್ಲಿಸಿದ್ದ ಸಿದ್ಧಾರ್ಥ ವಿಹಾರ್‍‌ ಟ್ರಸ್ಟ್‌ ಕಾರ್ಯ ಯೋಜನೆಯಲ್ಲಿ ಏರೋಸ್ಪೇಸ್‌ ಪಾರ್ಕ್‌ನಲ್ಲಿ ಎರಡು ಕಡೆ ನಿವೇಶನ ಕೋರಿತ್ತು. ಮೊದಲ ಆಯ್ಕೆಯಲ್ಲಿ ಪ್ಲಾಟ್‌ ನಂಂಬರ್‍‌ ಎಎಂ 3ರಲ್ಲಿನ 2.17 ಎಕರೆ ಅಥವಾ ಎ ಎಂ 4ರಲ್ಲಿದ್ದ 5 ಎಕರೆ ವಿಸ್ತೀರ್ಣದ ನಿವೇಶನ ಕೋರಿತ್ತು ಎಂಬುದು ಪ್ರಾಜೆಕ್ಟ್‌ ರಿಪೋರ್ಟ್‌ನಿಂದ ಗೊತ್ತಾಗಿದೆ.

 

 

ಆದರೆ ರಾಜ್ಯಮಟ್ಟದ ಏಕ ಗವಾಕ್ಷಿ ಅನುಮೋದನಾ ಸಮಿತಿಯು,  ಟ್ರಸ್ಟ್‌ ಕೋರಿದ್ದ ಎರಡನೇ ಆಯ್ಕೆಗೆ ಮನ್ನಣೆ ನೀಡಿ 5 ಎಕರೆ ವಿಸ್ತೀರ್ಣದ ಸಿ ಎ ನಿವೇಶನ ಮಂಜೂರು ಮಾಡಲು ಅನುಮೋದಿಸಿರುವುದು ಸಮಿತಿ ನಡವಳಿಯಿಂದ ತಿಳಿದು ಬಂದಿದೆ.

 

ಈ ಯೋಜನೆಯ ಭಾಗವಾಗಿ ಕಟ್ಟಡ ನಿರ್ಮಾಣವು 2026ರ ಅಕ್ಟೋಬರ್‍‌ 29ರ ಹೊತ್ತಿಗೆ ಪೂರ್ಣಗೊಳ್ಳಲಿದೆ.  2027ರ ನವೆಂಬರ್‍‌ 30ರ ಹೊತ್ತಿಗೆ ಯಂತ್ರೋಪಕರಣಗಳ ಅಳವಡಿಕೆಯಾದರೇ 2027ರ ಡಿಸೆಂಬರ್‍‌ 30ರೊಳಗೆ ಉತ್ಪಾದನಾ ಘಟಕ ಚಾಲನೆ ಯಾಗಲಿದೆ ಎಂದು ಕಾರ್ಯ ಯೋಜನೆಯಲ್ಲಿ ವಿವರಿಸಿರುವುದು ಗೊತ್ತಾಗಿದೆ.

 

ಕಾರ್ಖಾನೆಗೆ 5,000 ಸ್ಕೈಯರ್‍‌ ಮೀಟರ್‍‌, ಕಚೇರಿಗೆ 1,000 ಸ್ಕೈಯರ್‍‌ ಮೀಟರ್‍‌, ಇಂಡಸ್ಟ್ರಿಯಲ್‌ ಹೌಸಿಂಗ್‌ ಕಾಲೋನಿಗೆ 2,500 ಸ್ಕೈಯರ್‍‌ ಮೀಟರ್‍‌- ದಾಸ್ತಾನು ಉಗ್ರಾಣಕ್ಕೆ 1,675 ಸ್ಕೈಯರ್‍‌ ಮೀಟರ್‍‌ ಸೇರಿದಂತೆ ಇನ್ನಿತರೆ ಉದ್ದೇಶಗಳಿಗೆ ಒಟ್ಟಾರೆ 20,235 ಸ್ಕೈಯರ್ ಮೀಟರ್‍‌ ಜಾಗ ಬಳಕೆಯಾಗಲಿದೆ ಎಂದು ಕಾರ್ಯ ಯೋಜನೆಯಲ್ಲಿ ಉಲ್ಲೇಖಿಸಿದೆ.

 

ಮೊದಲ ವರ್ಷದಲ್ಲಿ ಟರ್ನ್ ಓವರ್‍‌ 2.00 ಕೋಟಿ, ಎರಡನೇ ವರ್ಷದಲ್ಲಿ 5.00 ಕೋಟಿ, ಮೂರನೇ ವರ್ಷದಲ್ಲಿ 7.00 ಕೋಟಿ, ನಾಲ್ಕನೇ ವರ್ಷದಲ್ಲಿ 9.00 ಕೋಟಿ, 5ನೇ ವರ್ಷದಲ್ಲಿ 12 ಕೋಟಿ ಟರ್ನ್ ಓವರ್‍‌ ಮಾಡಲಿದೆ.

 

ಯೋಜನಾ ವೆಚ್ಚದ ರೂಪದಲ್ಲಿ   ಭೂಮಿಗೆ 14.00 ಕೋಟಿ, ಕಟ್ಟಡಕ್ಕೆ 5 ಕೋಟಿ, ಯಂತ್ರೋಪಕರಣಕ್ಕೆ 2.00 ಕೋಟಿ, ದುಡಿಯುವ ಬಂಡವಾಳ 1.00 ಕೋಟಿ, ಕಂಟಿಜೆನ್ಸಿ 1.00 ಕೋಟಿ, ಇತರೆ 2 ಕೋಟಿ ಸೇರಿ ಒಟ್ಟಾರೆ 25 ಕೋಟಿ ರು ಹೂಡಿಕೆ ಎಂದು ವಿವರಿಸಿರುವುದು ತಿಳಿದು ಬಂದಿದೆ.

 

ಈ ಘಟಕದಲ್ಲಿ ಒಟ್ಟು 150 ಮಂದಿ ಉದ್ಯೋಗ ಲಭಿಸಲಿದೆ. ಕೌಶಲ್ಯ ಹೊಂದಿರುವ 50, ಅರೆ ಕೌಶಲ್ಯವುಳ್ಳವರು 50, ಫ್ಯಾಕ್ಟರಿ ಮ್ಯಾನೇಜರ್‍‌ 25, ಸ್ಟೋರೆಜ್‌ ಎಕ್ಸಿಕ್ಯೂಟಿವ್‌ 25 ಮಂದಿ ಸೇರಿ ಒಟ್ಟಾರೆ 150 ಮಂದಿಗೆ ಉದ್ಯೋಗ ಸಿಗಲಿದೆ. ಈ 25 ಕೋಟಿಯಲ್ಲಿ ಪ್ರವರ್ತಕರ ಕೊಡುಗೆ 10.00 ಕೋಟಿ, ಬ್ಯಾಂಕ್‌ಗಳಿಂದ ಟರ್ಮ್ ಲೋನ್‌ ರೂಪದಲ್ಲಿ 10.00 ಕೋಟಿ, ದುಡಿಯುವ ಬಂಡವಾಳ 5.00 ಕೋಟಿ ಸೇರಿ ಒಟ್ಠಾರೆ 25 ಕೋಟಿ ಇರಲಿದೆ ಎಂದು ಪ್ರಾಜೆಕ್ಟ್‌ ರಿಪೋರ್ಟ್‌ನಲ್ಲಿ ವಿವರಿಸಿದೆ.

 

‘ಸಿದ್ಧಾರ್ಥ ವಿಹಾರ್ ಟ್ರಸ್ಟ್ ಕೆಐಎಡಿಬಿಗೆ ಸಲ್ಲಿಸಿರುವ ಯೋಜನಾ ವರದಿಯಲ್ಲಿ ಆರ್ & ಡಿ ಸೆಂಟರ್, ಸೆಂಟರ್ ಆಫ್ ಎಕ್ಸಲೆನ್ಸ್ & ಟ್ರೈನಿಂಗ್ ಇನ್ಸ್ಟಿಟ್ಯೂಟ್ ನಡೆಸುತ್ತೇವೆ ಎಂದು ಯೊಜನಾ ವರದಿಯಲ್ಲಿ ತೋರಿಸಿದೆ. ಆಟೋಮೊಬೈಲ್ ಚಟುವಟಿಕೆ ಪ್ರಮುಖವಾಗಿದೆ ಎಂದು ಹೇಳಲಾಗಿದೆ. ಆದರೆ ಈ ಟ್ರಸ್ಟ್ ಗೆ ಈ ಹಿಂದೆ ಈ ರೀಯ ಉದ್ಯಮ ನಡೆಸಿದ ಬಗ್ಗೆ ಎಲ್ಲೂ ಹೇಳಿಲ್ಲ. ಸಚಿವ ಎಂ.ಬಿ.ಪಾಟೀಲ್ ಅಧ್ಯಕ್ಷತೆಯ ರಾಜ್ಯ ಏಕಗವಾಕ್ಷಿ ಸಮೀತಿಯು ಸಿದ್ಧಾರ್ಥ ವಿಹಾರ್ ಟ್ರಸ್ಟ್ ಇವರ ಅರ್ಜಿಯನ್ನು ಮಾತ್ರ ಪರಿಗಣಿಸಿ ಇತರ ಅರ್ಜಿಗಳನ್ನು ತಿರಸ್ಕರಿಸಿ ಸ್ವಜನಪಕ್ಷಪಾತ ನಡೆಸಿದ್ದಾರೆ. ಯೋಜನಾ ವರದಿಯಲ್ಲಿ ಪ್ರವರ್ತಕರ ಕೊಡುಗೆ 10 ಕೋಟಿ ಅಂತ ತೋರಿಸಿದ್ದಾರೆ. ಆದರೆ ಅದರಲ್ಲಿ ಕೊಡುಗೆ ನೀಡುವ ಪ್ರವರ್ತಕರ ವಿವರವನ್ನು ತೋರಿಸಿಲ್ಲ. ಇದರಿಂದ ಇಲ್ಲಿ ಭಾರಿ ಅಕ್ರಮ, ಭ್ರಷ್ಟಚಾರ ನಡೆದಿದೆ, ‘ ಎಂದು ಶಂಕೆ ವ್ಯಕ್ತಪಡಿಸುತ್ತಾರೆ ದಿನೇಶ್‌ ಕಲ್ಲಹಳ್ಳಿ

the fil favicon

SUPPORT THE FILE

Latest News

Related Posts