ಕೇಂದ್ರ ಪುರಸ್ಕೃತ; 3,609.19 ಕೋಟಿ ರು.ನಲ್ಲಿ ನಯಾಪೈಸೆ ಬಿಚ್ಚದ ಕೇಂದ್ರ, ರಾಜ್ಯ ಸರ್ಕಾರ

ಬೆಂಗಳೂರು; ಮಧ್ಯಾಹ್ನದ ಬಿಸಿಯೂಟ, ಪ್ರಧಾನ ಮಂತ್ರಿ ಮಾತೃ ವಂದನಾ, ಪೋಷಣ ಅಭಿಯಾನ, ಪೂರಕ ಪೌಷ್ಠಿಕಾಂಶ, ಭದ್ರಾ ಮೇಲ್ದಂಡೆ ಯೋಜನೆ, ವೃದ್ಧಾಪ್ಯ ವಿಶ್ರಾಂತಿ, ವಿಧವಾ ವೇತನದಂತಹ ಪ್ರಮುಖ ಕೇಂದ್ರ ಪುರಸ್ಕೃತ ಕಾರ್ಯಕ್ರಮಗಳಿಗೆ 2,556.19 ಕೋಟಿ ರು. ಅನುದಾನ ನಿಗದಿಪಡಿಸಿಕೊಂಡಿರುವ ಕೇಂದ್ರವು ಜುಲೈ ಅಂತ್ಯದವರೆಗೂ ನಯಾ ಪೈಸೆಯನ್ನೂ ಬಿಚ್ಚಿಲ್ಲ.

 

ಪ್ರಧಾನ ಮಂತ್ರಿ ಗ್ರಾಮ ಸಡಕ್‌, ವೇಗವರ್ಧಕ ನೀರಾವರಿ ಫಲಾನುಭವ, ಪೂರಕ ಪೌಷ್ಟಿಕಾಂಶ, ಪ್ರಧಾನಮಂತ್ರಿ ಮಾತೃ ವಂದನಾ, ಪೋಷಣ ಅಭಿಯಾನದ ಕೇಂದ್ರ ಪುರಸ್ಕೃತ ಯೋಜನೆಗಳಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರವು ಸಹ 1,053.00 ಕೋಟಿ ರು. ಅನುದಾನ ನಿಗದಿಪಡಿಸಿಕೊಂಡಿತ್ತು. ಆದರೆ ರಾಜ್ಯ ಸರ್ಕಾರವೂ ಸಹ ಜುಲೈ ಅಂತ್ಯದವರೆಗೂ ತನ್ನ ಪಾಲಿನ ಅನುದಾನದಲ್ಲಿ ಒಂದೇ ಒಂದು ಪೈಸೆಯನ್ನು ಬಿಚ್ಚಿಲ್ಲ.

 

ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್‌ ಅಧ್ಯಕ್ಷತೆಯಲ್ಲಿ ಆಗಸ್ಟ್‌ 14ರಂದು ನಡೆದಿದ್ದ ಸಭೆಯಲ್ಲಿ 2024-25ನೇ ಸಾಲಿನ ಕೇಂದ್ರ ಪುರಸ್ಕೃತ ಯೋಜನೆಗಳ ಇಲಾಖಾವಾರು ಪ್ರಗತಿ ಕುರಿತು ವಿಶ್ಲೇಷಣೆ ಮಾಡಲಾಗಿದೆ. ಈ ವೇಳೆಯಲ್ಲಿ ಕೇಂದ್ರ ಸರ್ಕಾರವು ಮಹತ್ವದ ಕಾರ್ಯಕ್ರಮಗಳಿಗೂ ಒಂದೇ ಒಂದು ದಮ್ಮಡಿಯನ್ನೂ ನೀಡದಿರುವ ಕುರಿತು ಚರ್ಚೆಯಾಗಿದೆ.

 

ವಿವಿಧ ಇಲಾಖೆಗಳು ಕೇಂದ್ರ ಪುರಸ್ಕೃತ ಯೋಜನೆಗಳಿಗೆ ಸಂಬಂಧಿಸಿದಂತೆ ಆರ್ಥಿಕ ಪ್ರಗತಿ ಕುರಿತು ಮಂಡಿಸಿರುವ ಅಂಕಿ ಅಂಶಗಳು ‘ದಿ ಫೈಲ್‌’ಗೆ ಲಭ್ಯವಾಗಿವೆ.

 

 

ಗ್ರಾಮೀಣಾಭಿವೃದ್ದಿ ಸೇರಿದಂತೆ ಒಟ್ಟು 25 ಇಲಾಖೆಗಳಿಗೆ ಈ ಸಾಲಿನಲ್ಲಿ ವಿವಿಧ ಕಾರ್ಯಕ್ರಮಗಳಿಗೆ 24,510.01 ಕೋಟಿ ರು. ಅನುದಾನ ಹಂಚಿಕೆಯಾಗಿದೆ. ಆದರೆ ಜುಲೈ ಅಂತ್ಯಕ್ಕೆ ಕೇಂದ್ರ ಸರ್ಕಾರವು ಬಿಡುಗಡೆ ಮಾಡಿದ್ದು 8,174.36 ಕೋಟಿ ರು ಮಾತ್ರ. ಇನ್ನೂ 16,335.65 ಕೋಟಿ ರು. ಬಾಕಿ ಇದೆ. ಇದು ಕೇಂದ್ರದ ಅನುದಾನದಲ್ಲಿ ಲಭ್ಯವಿರುವ ಅನುದಾನಕ್ಕೆ ಶೇ.287.71ರಷ್ಟಿರುವುದು ಗೊತ್ತಾಗಿದೆ.

 

ಪರಿಶಿಷ್ಟ ಪಂಗಡಗಳು, ಹಿಂದುಳಿದ ವರ್ಗ, ಸಣ್ಣ ನೀರಾವರಿ, ಮೀನುಗಾರಿಕೆ, ವೈದ್ಯಕೀಯ ಶಿಕ್ಷಣ ಸಹಕಾರ, ರೇಷ್ಮೆ ಮತ್ತು ಮೂಲಸೌಲಭ್ಯ ಅಭಿವೃದ್ದಿ ಇಲಾಖೆಗೆ 865.76 ಕೋಟಿ ರು. ಅನುದಾನ ನಿಗದಿಪಡಿಸಿಕೊಂಡಿದ್ದರೂ ಸಹ ಜುಲೈ ಅಂತ್ಯಕ್ಕೆ ನಯಾ ಪೈಸೆಯನ್ನೂ ಬಿಚ್ಚಿಲ್ಲ.

 

ರಾಜ್ಯ ಸರ್ಕಾರವು ಸಹ ನಗರಾಭಿವೃದ್ಧಿ, ವಸತಿ, ಹಿಂದುಳಿದ ವರ್ಗ, ಮೂಲಸೌಲಭ್ಯ ಅಭಿವೃದ್ಧಿ, ಮೀನುಗಾರಿಕೆ, ಒಳಾಡಳಿತ, ಸಹಕಾರ, ವೈದ್ಯಕೀಯ ಶಿಕ್ಷಣಕ್ಕೆ 1,033.67 ಕೋಟಿ ರು. ಅನುದಾನ ನಿಗದಿಪಡಿಸಿಕೊಂಡಿತ್ತು. ಜುಲೈ ಅಂತ್ಯದವರೆಗೆ ಈ ಇಲಾಖೆಗಳಿಗೂ ಬಿಡಿಗಾಸೂ ಬಂದಿಲ್ಲ.

 

ಕೇಂದ್ರ ಪುರಸ್ಕೃತ ಯೋಜನೆಗಳಿಗೆ ರಾಜ್ಯ ಸರ್ಕಾರವು ಒಟ್ಟು 22,196.42 ಕೋಟಿ ರು. ಅನುದಾನ ಹಂಚಿಕೆ ಮಾಡಿದೆ. ಜುಲೈ ಅಂತ್ಯಕ್ಕೆ 5,759.21 ಕೋಟಿ ರು. ಬಿಡುಗಡೆ ಮಾಡಿದೆ. ಬಿಡುಗಡೆಗೆ ಇನ್ನೂ 16,437.21 ಕೋಟಿ ರು. ಬಾಕಿ ಇದೆ. ಕೇಂದ್ರ ಮತ್ತು ರಾಜ್ಯವು ಬಿಡುಗಡೆ ಮಾಡಿರುವ ಅನುದಾನಕ್ಕೆ ಒಟ್ಟಾರೆ ಶೇ.58.33 ರಷ್ಟು ವೆಚ್ಚವಾಗಿರುವುದು ತಿಳಿದು ಬಂದಿದೆ.

 

ಇದರಲ್ಲಿ ಪರಿಶಿಷ್ಟ ಪಂಗಡಳಿಗೆ ಸಂಬಂಧಿಸಿದ ರಾಜ್ಯ ಸರ್ಕಾರವು ಬಿಡಿಗಾಸನ್ನೂ ಹಂಚಿಕೆ ಮಾಡಿಲ್ಲ. ಕೇಂದ್ರ ಸರ್ಕಾರವು 296.27 ಕೋಟಿ ರು. ಹಂಚಿಕೆ ಮಾಡಿದೆ. ಈ ಪೈಕಿ ಜುಲೈ ಅಂತ್ಯಕ್ಕೆ ನಯಾಪೈಸೆಯನ್ನೂ ಬಿಡುಗಡೆ ಮಾಡಿಲ್ಲ.

 

ಅದೇ ರೀತಿ ಹಿಂದುಳಿದ ವರ್ಗ ಇಲಾಖೆಗೆ ರಾಜ್ಯ ಸರ್ಕಾರವು 86.67 ಕೋಟಿ ರು., ಕೇಂದ್ರ ಸರ್ಕಾರವು 140.01 ಕೋಟಿ ರು. ಸೇರಿ ಒಟ್ಟಾರೆ 226.68 ಕೋಟಿ ರು. ಅನುದಾನ ನಿಗದಿಪಡಿಸಿಕೊಂಡಿದೆ. ಆದರೆ ಜುಲೈ ಅಂತ್ಯಕ್ಕೆ ಕೇಂದ್ರ ಮತ್ತು ರಾಜ್ಯವು ಬಿಡಿಗಾಸನ್ನೂ ಬಿಚ್ಚಿಲ್ಲ. ಹೀಗಾಗಿ ಇಲ್ಲಿ ಶೂನ್ಯ ವೆಚ್ಚವಾಗಿದೆ.

 

 

ವೈದ್ಯಕೀಯ ಶಿಕ್ಷಣದಲ್ಲಿಯೂ ರಾಜ್ಯ ಸರ್ಕಾರವು 15.20 ಕೋಟಿ ರು., ಕೇಂದ್ರ ಸರ್ಕಾರವು 27.80 ಕೋಟಿ ರು. ಸೇರಿ ಒಟ್ಟಾರೆ 43.00 ಕೋಟಿ ರು., ಸಹಕಾರ ಇಲಾಖೆಯಲ್ಲಿ ರಾಜ್ಯ ಸರ್ಕಾರವು 18.00 ಕೋಟಿ ರು., ಕೇಂದ್ರ ಸಕಾfರವು 26.00 ಕೋಟಿ ರು ಸೇರಿ ಒಟ್ಟಾರೆ 44.00 ಕೋಟಿ ರು. , ಮೂಲ ಸೌಲಭ್ಯ ಅಭಿವೃದ್ಧಿಗೆ ರಾಜ್ಯ ಸರ್ಕಾರವು 30.00 ಕೋಟಿ, ಕೇಂದ್ರ ಸರ್ಕಾರವು 12.50 ಕೊಟಿ ರು ಸೇರಿ ಒಟ್ಟಾರೆ 42.50 ಕೋಟಿ ರು. ಅನುದಾನ ಹಂಚಿಕೆ ಮಾಡಿಟ್ಟುಕೊಂಡಿದೆ.

 

ಆದರೆ ಜುಲೈ ಅಂತ್ಯದವರೆಗೂ ಈ ಮೂರೂ ಇಲಾಖೆಗಳಿಗೆ ಕೇಂದ್ರ ಮತ್ತು ರಾಜ್ಯವು ಒಂದೇ ಒಂದು ಪೈಸೆಯನ್ನೂ ನೀಡಿಲ್ಲ.

 

ಗ್ರಾಮೀಣಾಭಿವೃದ್ದಿ ಇಲಾಖೆಗೆ ಕೇಂದ್ರವು 9,745.01 ಕೋಟಿ ರು. ಅನುದಾನ ನಿಗದಿಪಡಿಸಿಕೊಂಡಿದೆ. ಈ ಪೈಕಿ ಜುಲೈ ಅಂತ್ಯಕ್ಕೆ 2,955.01 ಕೋಟಿ ರು. ಬಿಡುಗಡೆ ಮಾಡಿದೆ. ಆದರೆ ಇದೇ ಇಲಾಖೆಯ ಪ್ರಮುಖ ಕಾರ್ಯಕ್ರಮವಾದ ಪ್ರಧಾನಮಂತ್ರಿ ಗ್ರಾಮ್ ಸಡಕ್‌ ಯೋಜನೆಗೆ 250.00 ಕೋಟಿ ರು ಹಂಚಿಕೆ ಮಾಡಿಟ್ಟುಕೊಂಡಿದ್ದರೂ ಜುಲೈ ಅಂತ್ಯದವರೆಗೆ ಬಿಡಿಗಾಸೂ ನೀಡಿಲ್ಲ.

 

ರಾಜ್ಯ ಸರ್ಕಾರವು ಸಹ ಗ್ರಾಮೀಣಾಭಿವೃದ್ದಿ ಇಲಾಖೆಗೆ ನಿಗದಿಪಡಿಸಿರುವ 6,118.39 ಕೋಟಿ ರು. ಪೈಕಿ 531.94 ಕೋಟಿ ರು. ಬಿಡುಗಡೆ ಮಾಡಿದೆ. ಇದೇ ಇಲಾಖೆಯ ಮಹತ್ವದ ಕಾರ್ಯಕ್ರಮವಾದ ಪ್ರಧಾನ ಮಂತ್ರಿ ಗ್ರಾಮ ಸಡಕ್‌ ಯೋಜನೆಗೆ ರಾಜ್ಯ ಸರ್ಕಾರವು 250.00 ಕೋಟಿ ರು. ನಿಗದಿಪಡಿಸಿದ್ದರೂ ಸಹ ಜುಲೈ ಅಂತ್ಯಕ್ಕೆ ಬಿಡಿಗಾಸೂ ಕೊಟ್ಟಿಲ್ಲ.

 

ಕಂದಾಯ (ವಿಪತ್ತು ನಿರ್ವಹಣೆಗೆ ) ಇಲಾಖೆಯಲ್ಲಿ ವೃದ್ಧಾಪ್ಯ ವಿಶ್ರಾಂತಿ ವೇತನ ಮತ್ತು ನಿರಾಧಾರ ವೇತನ ನೀಡುವ ಬಹುಮುಖ್ಯ ಕಾರ್ಯಕ್ರಮವಿದೆ. ಇದರಲ್ಲಿ ವೃದ್ಧಾಪ್ಯ ವಿಶ್ರಾಂತಿಗೆ ಕೇಂದ್ರ ಸರ್ಕಾರವು 271.47 ಕೋಟಿ ರು., ನಿರಾಧಾರ ವಿಧವಾ ವೇತನಕ್ಕೆಂದು 142.68 ಕೋಟಿ ರು ನಿಗದಿಪಡಿಸಿಕೊಂಡಿದೆ. ಆದರೆ ಜುಲೈ ಅಂತ್ಯದವರೆಗೆ ಶೂನ್ಯ ಬಿಡುಗಡೆ ಮಾಡಿದೆ. ಆದರೆ ರಾಜ್ಯ ಸರ್ಕಾರವು ಇದೇ ವಿಭಾಗಕ್ಕೆ 1,067.77 ಕೋಟಿ ಮತ್ತು 792.40 ಕೋಟಿ ರು. ಬಿಡುಗಡೆ ಮಾಡಿದೆ.

 

ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆಗೆ ಕೇಂದ್ರ ಸರ್ಕಾರವು ಒಟ್ಟಾರೆ 1,821.31 ಕೋಟಿ ರು. ನಿಗದಿಪಡಿಸಿಕೊಂಡಿದೆ. ಈ ಪೈಕಿ ಜುಲೈ ಅಂತ್ಯಕ್ಕೆ 139.98 ಕೋಟಿ ರು. ಬಿಡುಗಡೆ ಮಾಡಿದೆ. ಇದೇ ಇಲಾಖೆಯ ಮಹತ್ವದ ಕಾರ್ಯಕ್ರಮಗಳಲ್ಲಿ ಒಂದಾಗಿರುವ ಮಧ್ಯಾಹ್ನ ಬಿಸಿಯೂಟ ಕಾರ್ಯಕ್ರಮಕ್ಕೆ 480.00 ಕೋಟಿ ರು. ನಲ್ಲಿ ಜುಲೈ ಅಂತ್ಯದವರೆಗೂ ನಯಾಪೈಸೆಯನ್ನೂ ಬಿಚ್ಚಿಲ್ಲ.

 

ಜಲಸಂಪನ್ಮೂಲ ಇಲಾಖೆಗೆ ನಿಗದಿಪಡಿಸಿರುವ 851.04 ಕೋಟಿ ರು. ಪೈಕಿ ಜುಲೈ ಅಂತ್ಯಕ್ಕೆ ಒಂದೇ ಒಂದು ದಮ್ಮಡಿಯನ್ನು ನೀಡಿಲ್ಲ. ಇದೇ ಇಲಾಖೆಯ ಮಹತ್ವದ ಕಾರ್ಯಕ್ರಮವಾದ ಭದ್ರಾ ಮೇಲ್ದಂಡೆ ಯೋಜನೆಗೆ 718.04 ಕೋಟಿ ರು. ನಿಗದಿಪಡಿಸಿಕೊಂಡಿದ್ದರೂ ಸಹ ಜುಲೈ ಅಂತ್ಯಕ್ಕೆ ಕಿಲುಬು ಕಾಸನ್ನೂ ನೀಡಿಲ್ಲ. ಅದೇ ರೀತಿ ವೇಗ ವರ್ಧಕ ನೀರಾವರಿ ಫಲಾನುಭವ ಕಾರ್ಯಕ್ರಮ, ವಿವಿಧ ನಿಗಮಗಳಡಿಯಲ್ಲಿನ ನೀರಾವರಿ ಯೋಜನೆಗಳಿಗೆ (ಎಐಬಿಪಿ)ಗೆ 133.00 ಕೋಟಿ ರು. ನಿಗದಿಪಡಿಸಿಕೊಂಡಿತ್ತು. ಈ ವಿಭಾಗದಲ್ಲಿಯೂ ಜುಲೈ ಅಂತ್ಯಕ್ಕೆ ಬಿಡಿಗಾಸೂ ಬಂದಿಲ್ಲ.

 

ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಗೆ ಕೇಂದ್ರವು ಹಂಚಿಕೆ ಮಾಡಿಟ್ಟುಕೊಂಡಿರುವ 1,821.31 ಕೋಟಿ ರು. ಪೈಕಿ ಜುಲೈ ಅಂತ್ಯಕ್ಕೆ 139.98 ಕೋಟಿ ರು. ನೀಡಿದೆ. ಇದೇ ಇಲಾಖೆಯ ಮತ್ತೊಂದು ಮಹತ್ವದ ಕಾರ್ಯಕ್ರಮವಾದ ಪೂರಕ ಪೌಷ್ಠಿಕಾಂಶ ಕಾರ್ಯಕ್ರಮಕ್ಕೆ 540 ಕೋಟಿ ರು. ನಿಗದಿಪಡಿಸಿಕೊಂಡಿದ್ದರೂ ಜುಲೈ ಅಂತ್ಯಕ್ಕೆ ಶೂನ್ಯ ಬಿಡುಗಡೆ ಮಾಡಿದೆ. ಇದೇ ಕಾರ್ಯಕ್ರಮಕ್ಕೆ ರಾಜ್ಯ ಸರ್ಕಾರವು 550 ಕೋಟಿ ರು. ಇಟ್ಟುಕೊಂಡಿದ್ದರೂ ಜುಲೈ ಅಂತ್ಯಕ್ಕೆ ಕೇಂದ್ರದಂತೆ ನಯಾಪೈಸೆಯನ್ನೂ ನೀಡಿಲ್ಲ.

 

ಪ್ರಧಾನ ಮಂತ್ರಿ ಮಾತೃ ವಂದನಾ ಯೋಜನೆಗೂ ರಾಜ್ಯ ಸರ್ಕಾರವು 90.00 ಕೋಟಿ ರು., ಕೇಂದ್ರವು 136.00 ಕೋಟಿ ರು. , ಪೋಷಣ ಅಭಿಯಾನಕ್ಕೆ ರಾಜ್ಯವು 91.00 ಕೋಟಿ ರು., ಕೇಂದ್ರವು 135.00 ಕೋಟಿ ರು. ಅನುದಾನವನ್ನು ನಿಗದಿಪಡಿಸಿಕೊಂಡಿದೆ. ಆದರೆ ಜುಲೈ ಅಂತ್ಯಕ್ಕೆ ಈ ಕಾರ್ಯಕ್ರಮಗಳಿಗೆ ಕಿಲುಬು ಕಾಸನ್ನೂ ನೀಡಿಲ್ಲ.

the fil favicon

SUPPORT THE FILE

Latest News

Related Posts