ಬೆಂಗಳೂರು; ಸಿದ್ದರಾಮಯ್ಯ ಅವರು ಎರಡನೇ ಬಾರಿ ಮುಖ್ಯಮಂತ್ರಿಯಾಗಿದ್ದ ಮೊದಲ ಅವಧಿಯಲ್ಲಿನ ವರ್ಗಾವಣೆ ಭರಾಟೆ ಎರಡನೇ ಅವಧಿಯಲ್ಲಿಯೂ ಮುಂದುವರೆದಿದೆ. ಮೊದಲ ಅವಧಿಯಲ್ಲಿ ಒಂದೇ ಹುದ್ದೆಗೆ ನಾಲ್ಕು ಮಂದಿಯನ್ನು ವರ್ಗಾವಣೆ ಮಾಡಲು ಖುದ್ದು ಮುಖ್ಯಮಂತ್ರಿಯೇ ಮಾಡಿದ್ದ ಶಿಫಾರಸ್ಸು ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿತ್ತು.
ಇದೀಗ ಎರಡನೇ ಅವಧಿಯಲ್ಲಿಯೂ ಇಂತಹದ್ದೇ ಪ್ರಕರಣಗಳು ಮರುಕಳಿಸುತ್ತಿವೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ದಿ ಇಲಾಖೆಯ ಅಧಿಕಾರಿ ನೌಕರರ ವರ್ಗಾವಣೆಯಲ್ಲಿಯೂ ಮೊದಲ ಅವಧಿಯಲ್ಲಿ ಕಂಡುಬಂದಿದ್ದ ಪ್ರಮಾದಗಳೇ ಪುನರಾವರ್ತನೆ ಆಗಿರುವುದು ತಿಳಿದು ಬಂದಿದೆ.
2024-25ನೇ ಸಾಲಿನ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ವಿವಿಧ ವೃಂದದ ನೌಕರರನ್ನು 2024ರ ಜುಲೈ 5 ಮತ್ತು 26ರಂದು ಹೊರಡಿಸಿರುವ ವರ್ಗಾವಣೆ ಆದೇಶಗಳಲ್ಲಿ ಎಡವಟ್ಟುಗಳು ಕಂಡು ಬಂದಿವೆ. ಒಂದೇ ಹುದ್ದೆಗೆ ಇಬ್ಬರು ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಹೊರಡಿಸಿರುವ ಆದೇಶವು ಈಗ ಅಧಿಕಾರಿಗಳಿಬ್ಬರ ಕಚ್ಚಾಟಕ್ಕೆ ಕಾರಣವಾಗಿದೆ.
ಜುಲೈ 5 ಮತ್ತು 26ರಂದು ಹೊರಡಿಸಿರುವ ಆದೇಶದ ಪ್ರತಿಗಳು ‘ದಿ ಫೈಲ್’ಗೆ ಲಭ್ಯವಾಗಿವೆ.
2024-25ನೇ ಸಾಲಿನ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವಿವಿಧ ವೃಂದದ ನೌಕರರ ವರ್ಗಾವಣೆಗೆ ಸಂಬಂಧಿಸಿದಂತೆ ಜುಲೈ 5ರಂದು 43 ಅಧಿಕಾರಿ, ನೌಕರರನ್ನು ವರ್ಗಾವಣೆ ಮಾಡಲಾಗಿತ್ತು.
ಈ ಪೈಕಿ ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸಿ ರಾಘವೇಂದ್ರ ಅವರನ್ನು ಹರಿಹರ ತಾಲೂಕಿನಿಂದ ದಾವಣಗೆರೆ ಜಿಲ್ಲೆಯ ಉಪನಿರ್ದೇಶಕರ ಕಚೇರಿಯಲ್ಲಿನ ಅಧೀಕ್ಷಕರು ದರ್ಜೆ-2 ಹುದ್ದೆಗೆ ಜುಲೈ 5ರಂದು ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿತ್ತು.
ಆದರೇ ಇದೇ ಇಲಾಖೆಯು ಜುಲೈ 26ರಂದು ಮತ್ತೊಂದು ವರ್ಗಾವಣೆ ಆದೇಶ ಹೊರಡಿಸಿತ್ತು. 106 ಮಂದಿ ಅಧಿಕಾರಿ ನೌಕರರನ್ನು ರಾಜ್ಯದ ವಿವಿಧ ಸ್ಥಳಗಳಿಗೆ ವರ್ಗಾವಣೆ ಮಾಡಲಾಗಿತ್ತು.
ದಾವಣಗೆರೆ ಜಿಲ್ಲೆಯ ಉಪ ನಿರ್ದೇಶಕರ ಕಚೇರಿಗೆ ಸಿ ರಾಘವೇಂದ್ರ ಎಂಬುವರನ್ನು ಅಧೀಕ್ಷಕರು ದರ್ಜೆ-2 ಹುದ್ದೆಗೆ ಜುಲೈ 5ರಂದು ವರ್ಗಾವಣೆ ಆದೇಶ ಹೊರಡಿಸಿದ್ದರೂ ಸಹ ಜುಲೈ 26ರಂದು ಇದೇ ಹುದ್ದೆಗೆ ರಾಜ್ಯ ಮಹಿಳಾ ನಿಲಯದ ಮಂಜುಳ ಅವರನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ.
ರಾಘವೇಂದ್ರ ಸಿ ಎಂಬುವರನ್ನು ಅದೇ ಹುದ್ದೆಗೆ ವರ್ಗಾವಣೆ ಮಾಡಿ ಹೊರಡಿಸಿರುವ ಆದೇಶವು ರದ್ದುಪಡಿಸದೇ ಅಥವಾ ಹಿಂಪಡೆಯದೇ ಮತ್ತೊಬ್ಬ ಅಧಿಕಾರಿ ಮಂಜುಳ ಅವರನ್ನೂ ಅದೇ ಹುದ್ದೆಗೆ ವರ್ಗಾವಣೆ ಮಾಡಿರುವುದು ಅಧಿಕಾರಿಗಳಿಬ್ಬರ ನಡುವೆ ಪೈಪೋಟಿ ಮತ್ತು ಕಿತ್ತಾಟಕ್ಕೆ ಇಲಾಖೆಯೇ ದಾರಿಮಾಡಿಕೊಟ್ಟಂತಾಗಿದೆ.
ಈ ವರ್ಗಾವಣೆ ಆದೇಶಗಳಿಗೆ ಸಚಿವೆ ಲಕ್ಷ್ಮಿ ಹೆಬ್ಬಾಳಕರ್ ಅವರು ಅನುಮೋದಿಸಿದ ನಂತರ ಇಲಾಖೆಯ ನಿರ್ದೇಶಕರೂ ಪಟ್ಟಿಗೆ ಅನುಮತಿ ನೀಡಿದ್ದಾರೆ ಎಂದು ಗೊತ್ತಾಗಿದೆ.
ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆಯ ಯೋಜನಾ ಅನುಷ್ಠಾನ ಘಟಕದಲ್ಲಿನ ಒಂದೇ ಒಂದು ಲೆಕ್ಕಾಧಿಕಾರಿ ಹುದ್ದೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಾಲ್ವರು ಲೆಕ್ಕ ಪರಿಶೋಧನಾಧಿಕಾರಿಗಳನ್ನು ವರ್ಗಾವಣೆ ಮಾಡಲು ಶಿಫಾರಸ್ಸು ಮಾಡಿದ್ದು ತೀವ್ರ ಚರ್ಚೆಗೆ ಗ್ರಾಸವಾಗಿತ್ತು.
ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆಯ ಯೋಜನಾ ಅನುಷ್ಠಾನ ಘಟಕದಲ್ಲಿ ಒಂದು ವರ್ಷ 4 ತಿಂಗಳಿನಿಂದ ಕಾರ್ಯನಿರ್ವಹಿಸುತ್ತಿರುವ ಎಂ ಜಿ ಮಂಜುನಾಥ ಅವರು ದಕ್ಷತೆಯಿಂದ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಯೋಜನಾ ಮುಖ್ಯಸ್ಥರು, ಲೆಕ್ಕಪತ್ರ ಮತ್ತು ಲೆಕ್ಕ ಪರಿಶೋಧನೆ ಇಲಾಖೆಯ ಪ್ರಧಾನ ನಿರ್ದೇಶಕರಿಗೆ ಪತ್ರ ಬರೆದಿದ್ದರು. ಆದರೂ ಸಹ ಇವರ ಹುದ್ದೆಗೆ ನಾಲ್ವರು ಲೆಕ್ಕಪರಿಶೋಧನಾಕಾರಿಗಳನ್ನು ವರ್ಗಾವಣೆ ಮಾಡಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೂಚಿಸಿದ್ದು ನಾಲ್ವರು ಅಧಿಕಾರಿಗಳ ಮಧ್ಯೆಯೇ ಪೈಪೋಟಿ ಸೃಷ್ಟಿಸಿತ್ತು.
ಇರುವ ಒಂದು ಹುದ್ದೆಗೆ ನಾಲ್ವರ ವರ್ಗಾವಣೆಗೆ ಶಿಫಾರಸ್ಸು
ಬಿಬಿಎಂಪಿಯಲ್ಲಿ ಲೆಕ್ಕ ಪರಿಶೋಧನಾಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ಎಸ್ ಕೆ ಜಗದೀಶ್ ಅವರನ್ನು ರಾಜ್ಯ ರಸ್ತೆ ಅಭಿವೃದ್ದಿ ನಿಗಮದಲ್ಲಿ ಎಂ ಜಿ ಮಂಜುನಾಥ್ ಇವರ ಸ್ಥಳಕ್ಕೆ ವರ್ಗಾಯಿಸಲು ಸೂಚಿಸಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗೃಹ ಕಚೇರಿಯಿಂದ ಟಿಪ್ಪಣಿ ಹೊರಡಿಸಿತ್ತು.
‘ದಿ ಫೈಲ್’ ವರದಿ ಉಲ್ಲೇಖ; ‘ಕಾಸಿಗಾಗಿ ಪೋಸ್ಟಿಂಗ್ʼ ದಂಧೆ, 4 ಶಿಫಾರಸುಗಳ ಹಿಂದಿರುವ ಆ ʼಅತೀಂದ್ರʼ ಶಕ್ತಿ ಯಾವುದು?
ಇದೇ ಹುದ್ದೆಗೆ ಬಿಬಿಎಂಪಿಯಲ್ಲಿ ಮುಖ್ಯ ಲೆಕ್ಕಾಧಿಕಾರಿಯವರ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮತ್ತೊಬ್ಬ ಲೆಕ್ಕಪರಿಶೋಧನಾಕಾರಿ ಕೆ ಎಚ್ ಶ್ರೀನಿವಾಸ್ ಅವರನ್ನು ಎಂ ಜಿ ಮಂಜುನಾಥ್ ಅವರ ಹುದ್ದೆಯ ಜಾಗಕ್ಕೆ ವರ್ಗಾಯಿಸಬೇಕು ಎಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಸಲ್ಲಿಸಿದ್ದ ಮನವಿ ಮೇಲೆಯೇ ಸಿದ್ದರಾಮಯ್ಯ ಅವರು ಇದನ್ನು ಪರಿಗಣಿಸಿ ಎಂದು ಷರಾ ಬರೆದಿದ್ದನ್ನು ಸ್ಮರಿಸಬಹುದು.
ಒಂದು ಎ.ಸಿ. ಹುದ್ದೆಗೆ ಮೂವರು ಕೆಎಎಸ್ ಅಧಿಕಾರಿಗಳ ವರ್ಗಾವಣೆಗೆ ಶಿಫಾರಸ್ಸು; ಬಿಕರಿಯಾದವೇ ಸಿಎಂ ಟಿಪ್ಪಣಿ?
ಅದೇ ರೀತಿ ಪೊಲೀಸ್ ಮಹಾನಿರ್ದೇಶಕರ ಕಚೇರಿಲ್ಲಿ ಕಾರ್ಯನಿರ್ವಹಿಸುತ್ತಿರುವ ಎಂ ನಾಗರಾಜು ಅವರು ಸಲ್ಲಿಸಿದ್ದ ಮನವಿ ಮೇಲೆಯೇ ಸಿದ್ದರಾಮಯ್ಯ ಅವರು ಮಂಜುನಾಥ್ ಅವರ ಜಾಗಕ್ಕೆ ಪರಿಗಣಿಸಿ ಎಂದು 2023ರ ಜೂನ್ 8ರಂದು ಷರಾ ಬರೆದಿದ್ದಾರೆ.
ಅದೇ ರೀತಿ ಮೈಸೂರು ಜಿಲ್ಲಾ ಪಂಚಾಯ್ತಿಯಲ್ಲಿ ಲೆಕ್ಕಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ಎಂ ಎಸ್ ಪ್ರತಿಭ ಅವರನ್ನೂ ಮಂಜುನಾಥ ಜಿ ಇವರ ಸ್ಥಳಕ್ಕೆ ನಿಯುಕ್ತಿಗೊಳಿಸಲು ಸಿದ್ದರಾಮಯ್ಯ ಅವರು ಟಿಪ್ಪಣಿಯಲ್ಲಿ ಸೂಚಿಸಿರುವುದು ಟಿಪ್ಪಣಿ ಪ್ರತಿಯಿಂದ ಗೊತ್ತಾಗಿದೆ.
ಆದರೆ ಮಂಜುನಾಥ್ ಅವರ ಕಾರ್ಯಕ್ಷಮತೆ ಬಗ್ಗೆ ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆಯ ಯೋಜನಾ ಅನುಷ್ಠಾನ ಘಟಕದ ಯೋಜನಾ ಮುಖ್ಯಸ್ಥರು ತೃಪ್ತಿ ವ್ಯಕ್ತಪಡಿಸಿದ್ದಾರೆ. ಇವರ ವರ್ಗಾವಣೆ ಸುಳಿವು ಹಿಡಿದ ಯೋಜನಾ ಮುಖ್ಯಸ್ಥರು ಕರ್ನಾಟಕ ರಾಜ್ಯ ಲೆಕ್ಕಪತ್ರ ಮತ್ತು ಲೆಕ್ಕ ಪರಿಶೋಧನೆ ಇಲಾಖೆಯ ಪ್ರಧಾನ ನಿರ್ದೇಶಕರಿಗೆ 2023ರ ಜೂನ್ 23ರಂದು ಪತ್ರವನ್ನೂ ಬರೆದಿದ್ದರು.