ಬೆಂಗಳೂರು; ಗ್ಯಾರಂಟಿಗಳನ್ನು ಅನುಷ್ಠಾನಗೊಳಿಸಿರುವ ರಾಜ್ಯ ಕಾಂಗ್ರೆಸ್ ಸರ್ಕಾರವು ಸಂಪನ್ಮೂಲ ಕ್ರೋಢೀಕರಣಕ್ಕಾಗಿ ಹರಸಾಹಸ ಪಡುತ್ತಿರುವ ಬೆನ್ನಲ್ಲೇ ಇತರೆ ಇಲಾಖೆಗಳಿಗೆ ಹಂಚಿಕೆ ಆಗುತ್ತಿದ್ದ ಅನುದಾನದಲ್ಲಿ ಕಡಿತಗೊಳಿಸಲಾರಂಭಿಸಿದೆ. ಇದಕ್ಕೊಂದು ಸ್ಪಷ್ಟ ನಿದರ್ಶನ ಬೆಂಗಳೂರು ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆ.
ಸಿದ್ದರಾಮಯ್ಯ ಅವರು ಎರಡನೇ ಬಾರಿ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದ ಮೊದಲ ವರ್ಷದಲ್ಲಿ ಅಂದರೆ 2023-24ರಲ್ಲಿ ನೀಡಿದ್ದ ಅನುದಾನಕ್ಕಿಂತಲೂ 2024-25ನೇ ಸಾಲಿನಲ್ಲಿ ಕಡಿತಗೊಳಿಸಿರುವುದು ಬಹಿರಂಗವಾಗಿದೆ.
2023-24ನೇ ಆರ್ಥಿಕ ವರ್ಷದಲ್ಲಿ ಹಂಚಿಕೆ ಮಾಡಿರುವ ಅನುದಾನಕ್ಕಿಂತಲೂ 2024-25ನೇ ಸಾಲಿನಲ್ಲಿ ಹಂಚಿಕೆ ಮಾಡಿರುವ ಪ್ರಮಾಣಕ್ಕೆ ಹೋಲಿಸಿದರೆ ಶೇ.60ರಷ್ಟು ಕಡಿತಗೊಂಡಿರುವುದು ಗೊತ್ತಾಗಿದೆ.
ಗ್ಯಾರಂಟಿಗಳಲ್ಲೊಂದಾದ ಅನ್ನಭಾಗ್ಯ ಮತ್ತು ಗೃಹ ಲಕ್ಷ್ಮಿ ಯೋಜನೆಗಳಿಗೆ ಪ್ರತೀ ವರ್ಷವು ಅನುದಾನ ಹೊಂದಿಸಲು ಸಾಧ್ಯವಿಲ್ಲ. ಅಲ್ಲದೇ ಈ ಯೋಜನೆಗಳಿಗೆ ಅನುದಾನ ಒದಗಿಸಿದಲ್ಲಿ ಇತರೆ ಲೆಕ್ಕ ಶೀರ್ಷಿಕೆಗಳಲ್ಲಿನ ಅನುದಾನದಲ್ಲಿ ಕಡಿತಗೊಳಿಸಬೇಕಾದ ಸ್ಥಿತಿ ಎದುರಾಗಲಿದೆ ಎಂದು ಆರ್ಥಿಕ ಇಲಾಖೆಯು ಹೇಳಿತ್ತು.
ಗೃಹ ಲಕ್ಷ್ಮಿ; ನಿರಂತರ ಸಾಲದ ಸುಳಿ, ಆದಾಯದ ಕೊರತೆ, ಹಣಕಾಸು ಹೊಣೆಗಾರಿಕೆ ಕಾಯ್ದೆ ಉಲ್ಲಂಘನೆ
ಅಲ್ಲದೇ ವಸತಿ ಶಿಕ್ಷಣ ಸಂಸ್ಥೆಗಳಲ್ಲಿನ ಪ್ರವೇಶಾತಿ ಪ್ರಮಾಣ ಹೆಚ್ಚಿಸಲೂ ಸಮಾಜ ಕಲ್ಯಾಣ ಇಲಾಖೆ ಪ್ರಸ್ತಾವಿಸಿತ್ತು. ಆದರೆ ಆರ್ಥಿಕ ಇಲಾಖೆಯು ಪ್ರಸ್ತುತ ಆರ್ಥಿಕ ಕ್ಲಿಷ್ಟತೆಯನ್ನು ಮುಂದಿಟ್ಟು ಪ್ರವೇಶಾತಿ ಹೆಚ್ಚಳಕ್ಕೆ ಅನುಮತಿ ನಿರಾಕರಿಸಿತ್ತು.
ಅಲ್ಲದೇ ಅನ್ನಭಾಗ್ಯದ ಗ್ಯಾರಂಟಿ ನೀಡಿರುವುದಕ್ಕೂ ಆರ್ಥಿಕ ಇಲಾಖೆಯು ಆಕ್ಷೇಪ ವ್ಯಕ್ತಪಡಿಸಿತ್ತು.
ಭಾರೀ ಪ್ರಮಾಣದ ಆದಾಯ ಕೊರತೆ; ಅರ್ಥ ಸಚಿವರಿಂದಲೇ ವಿತ್ತೀಯ ಹೊಣೆಗಾರಿಕೆ ಕಾಯ್ದೆ ಉಲ್ಲಂಘನೆ
ಈ ಬೆಳವಣಿಗಳ ನಡುವೆಯೇ ವೈದ್ಯಕೀಯ ಶಿಕ್ಷಣ ಇಲಾಖೆಯ ವ್ಯಾಪ್ತಿಯಲ್ಲಿನ ಬೆಂಗಳೂರು ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆಯ ಟ್ರಾಮಾ ಕೇರ್ ಕೇಂದ್ರಕ್ಕೆ ಮೂಲ ಅನುದಾನದಲ್ಲೇ ಕಡಿತಗೊಳಿಸಿರುವುದು ಮುನ್ನೆಲೆಗೆ ಬಂದಿದೆ.
ಬೆಂಗಳೂರು ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆ ಮತ್ತು ಇದರ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ಆಸ್ಪತ್ರೆಗಳ ಕುರಿತು 2024ರ ಏಪ್ರಿಲ್ 5ರಂದು ನಡೆದಿದ್ದ ಸಭೆಯಲ್ಲಿ ಈ ಸಂಗತಿಯ ಕುರಿತು ಚರ್ಚೆಯಾಗಿದೆ. ಈ ಸಭೆಯ ನಡವಳಿಗಳು ‘ದಿ ಫೈಲ್’ಗೆ ಲಭ್ಯವಾಗಿವೆ.
ವೈದ್ಯಕೀಯ ಮಹಾವಿದ್ಯಾಲಯದ ಟ್ರಾಮಾ ಕೇಂದ್ರಕ್ಕೆ ಅನುದಾನ ಕಡಿತಗೊಂಡಿದೆ ಎಂದು ಸಭೆಯಲ್ಲಿ ಕೇಂದ್ರದ ವಿಶೇಷಾಧಿಕಾರಿಗಳು ಮಾಹಿತಿ ನೀಡಿದ್ದಾರೆ. ಈ ಸಂಬಂಧ ವೈದ್ಯಕೀಯ ಶಿಕ್ಷಣ ಸಚಿವ ಡಾ ಶರಣ ಪ್ರಕಾಶ್ ಪಾಟೀಲ್ ಅವರೊಂದಿಗೂ ಅಧಿಕಾರಿಗಳು ಚರ್ಚಿಸಿದ್ದಾರೆ ಎಂದು ಗೊತ್ತಾಗಿದೆ.
‘ಟ್ರಾಮಾ ಕೇರ್ ಕೇಂದ್ರಕ್ಕೆ ಬೆಂಗಳೂರು ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆಯ ಸಾಮಾನ್ಯ ಲೆಕ್ಕ ಶೀರ್ಷಿಕೆ 2210ರ 103ರ ಅಡಿಯಲ್ಲಿ 2024-25ನೇ ಸಾಲಿನಲ್ಲಿ ಮೊತ್ತ ರು 722.80/- ನಿಗದಿಪಡಿಸಿದೆ. ಆದರೆ ಈ ಅನುದಾನವು ಹಿಂದಿನ ಆರ್ಥಿಕ ವರ್ಷದಲ್ಲಿ (2023-24) ಹಂಚಿಕೆ ಮಾಡಿರುವ ಅನುದಾನಕ್ಕಿಂತ ಶೇ.44 ಹಾಗೂ ಶೇ.15ರಷ್ಟು ಹಣದುಬ್ಬರದೊಂದಿಗೆ ಒಟ್ಟು ಶೇ.60ರಷ್ಟು ಅನುದಾನವು ಕಡಿತಗೊಂಡಿದೆ,’ ಎಂದು ಸಭೆಗೆ ಮಾಹಿತಿ ಒದಗಿಸಿರುವುದು ನಡವಳಿಯಿಂದ ತಿಳಿದು ಬಂದಿದೆ.
ಬೆಂಗಳೂರು ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆಯ ಅಡಿಯಲ್ಲಿ ವಿಕ್ಟೋರಿಯಾ ಆಸ್ಪತ್ರೆ, ವಾಣಿ ವಿಲಾಸ, ಮಿಂಟೋ, ಸೂಪರ್ ಸ್ಪೆಷಾಲಿಟಿ, ಟ್ರಾಮಾ ಕೇಂದ್ರಗಳು, ಸರ್ಕಾರಿ ಶುಶ್ರೂಷಾ ಮಹಾವಿದ್ಯಾಲಯ, ಸರ್ಕಾರಿ ಶುಶ್ರೂಷಾ ಶಾಲೆಗಳು ಕಾರ್ಯನಿರ್ವಹಿಸುತ್ತಿವೆ.
ಈ ಆಸ್ಪತ್ರೆಗಳಿಗೆ ಅಕ್ಕಪಕ್ಕದ ರಾಜ್ಯಗಳು ಹಾಗೂ ಇತರೆ ಭಾಗಗಳಿಂದಲೂ ಕ್ಲಿಷ್ಟಕರ ಸಮಸ್ಯೆಗಳಿಂದ ಬಳಲುತ್ತಿರುವ ರೋಗಿಗಳಿಗೆ ಆಸ್ಪತ್ರೆಯಲ್ಲಿ ಸೇವೆ ನೀಡಲಾಗುತ್ತಿದೆ.
ಆಸ್ಪತ್ರೆಗಳಲ್ಲಿ ಶಸ್ತ್ರಚಿಕಿತ್ಸಾಗಾರಗಳಲ್ಲಿ ಕಾರ್ಯನಿರ್ವಹಿಸುವ ವೈದ್ಯರುಗಳಿಗೆ ಪೂರ್ವ ಶಸ್ತ್ರಚಿಕಿತ್ಸಾ ಕರ್ತವ್ಯ ವಿನಾಯಿತಿ ರದ್ದುಗೊಳಿಸುವ ಬಗ್ಗೆಯೂ ಸಭೆಯಲ್ಲಿ ಚರ್ಚಿಸಲಾಗಿದೆ. ಮಿಂಟೋ ಆಸ್ಪತ್ರೆಯಲ್ಲಿ ಹಾಸಿಗೆ ಸಾಮರ್ಥ್ಯವನ್ನು ಹೆಚ್ಚಿಸಬೇಕು. ಈ ಮೂಲಕ ಬಡ ರೋಗಿಗಳು ಅನುಕೂಲವಾಗುವಂತೆ ಕ್ರಮ ಕೈಗೊಳ್ಳಬೇಕು ಎಂದು ವೈದ್ಯಕೀಯ ಶಿಕ್ಷಣ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಮೊಹ್ಮದ್ ಮೊಹಸೀನ್ ಅವರು ಅಧಿಕಾರಿಗಳಿಗೆ ಸೂಚಿಸಿರುವುದು ಗೊತ್ತಾಗಿದೆ.
ಹಾಗೆಯೇ ಸಂಸ್ಥೆಯಲ್ಲಿ ಲಭ್ಯವಿರುವ ಅನುದಾನಗಳನ್ನು ಸುದುಪಯೋಗಪಡಿಸಿಕೊಳ್ಳಬೇಕು ಮತ್ತು ಈ ಸಂಬಂಧ ಸರ್ಕಾರಕ್ಕೆ ಕ್ರಿಯಾ ಯೋಜನೆ ಸಲ್ಲಿಸಬೇಕು. ಇದನ್ನು ಆರ್ಥಿಕಕಕ ಸಮಿತಿಯಲ್ಲಿ ಮಂಡಿಸಿ ಅನುಮೋದನೆ ಪಡೆದುಕೊಳ್ಳಬೇಕು ಎಂದು ಆರ್ಥಿಕ ಇಲಾಖೆಯ ಸರ್ಕಾರದ ಕಾರ್ಯದರ್ಶಿಗಳು ಅಧಿಕಾರಿಗಳಿಗೆ ನಿರ್ದೇಶನ ನೀಡಿರುವುದು ತಿಳಿದು ಬಂದಿದೆ.