ಬೆಂಗಳೂರು; ಸಚಿವ ಈಶ್ವರ್ ಖಂಡ್ರೆ ಅವರ ಒಡೆತನದಲ್ಲಿರುವ ಇಂಜಿನಿಯರಿಂಗ್ ಕಾಲೇಜು ಸೇರಿದಂತೆ ಮತ್ತಿತರೆ ಶೈಕ್ಷಣಿಕ ಸಂಸ್ಥೆಗಳ ಬೋಧಕ, ಬೋಧಕೇತರ ಸಿಬ್ಬಂದಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿ, ನೌಕರರು ಕಾಂಗ್ರೆಸ್ ಅಭ್ಯರ್ಥಿ ಸಾಗರ್ ಖಂಡ್ರೆ ಅವರ ಪರವಾಗಿ ಪ್ರಚಾರ ಮಾಡುತ್ತಿದ್ದಾರೆ ಎಂಬ ಆರೋಪಗಳನ್ನು ಸಾಬೀತುಪಡಿಸುವಲ್ಲಿ ಕೇಂದ್ರ ಸಚಿವ ಭಗವಂತ ಖೂಬಾ ಮತ್ತು ಅವರ ಪ್ರತಿನಿಧಿಗಳು ವಿಫಲರಾಗಿದ್ದಾರೆ.
ದೂರಿನಲ್ಲಿ ಮಾಡಿದ್ದ ಆರೋಪಗಳಿಗೆ ಸಂಬಂಧಿಸಿದಂತೆ ಸಚಿವ ಖೂಬಾ ಮತ್ತು ಅವರ ಪರವಾದ ಏಜೆಂಟ್‌ಗಳು ಯಾವುದೇ ಪುರಾವೆ, ಸಾಕ್ಷ್ಯ, ದಾಖಲೆಗಳನ್ನು ಒದಗಿಸಿಲ್ಲ. ಹೀಗಾಗಿ ಬಹುತೇಕ ದೂರುಗಳನ್ನು ಕಲ್ಬುರ್ಗಿ ವಿಭಾಗದ ಪ್ರಾದೇಶಿಕ ಆಯುಕ್ತರು ವಿಲೇ ಮಾಡಿದ್ಧಾರೆ.
ಲೋಕೋಪಯೋಗಿ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಕಾಂಗ್ರೆಸ್ ಪರವಾಗಿ ಕೆಲಸ ಮಾಡುತ್ತಿದ್ದಾರೆ ಎಂಬ ದೂರಿನ ಮೇರೆಗೆ ಕೆಲವರನ್ನು ಭಾಲ್ಕಿ ತಾಲೂಕಿನಿಂದ ವರ್ಗಾವಣೆ ಮಾಡಲಾಗಿದೆ.
ಚುನಾವಣೆ ಘೋಷಣೆಯಾದ ನಂತರ ಕಾಂಗ್ರೆಸ್ ಅಭ್ಯರ್ಥಿಗೆ ಸಹಾಯವಾಗುವ ನಿಟ್ಟಿನ ಲ್ಲಿ ಅಮರ್ ಖಂಡ್ರೆ ಎಂಬುವರು ಬೀದರ್ ಡಿಸಿಸಿ ಬ್ಯಾಂಕ್‌ನಿಂದ ಸಾಲ ನೀಡುವ ಆಮಿಷ ಒಡ್ಡಿದ್ದರು ಎಂದು ದೂರಲಾಗಿತ್ತು. ಈ ಆರೋಪವನ್ನೂ ಸಾಬೀತುಪಡಿಸುವಲ್ಲಿ ಸಚಿವ ಖೂಬಾ ಅವರು ವಿಫಲರಾಗಿದ್ದಾರೆ.
ಕೇಂದ್ರ ಸಚಿವ ಭಗವಂತ ಖೂಬಾ ಅವರು 2024ರ ಮಾರ್ಚ್‌ನಿಂದ ಏಪ್ರಿಲ್ 15ರವರೆಗೆ ಹಲವು ದೂರುಗಳನ್ನು ಸಲ್ಲಿಸಿದ್ದರು. ದೂರು, ಕಲ್ಬುರ್ಗಿ ಪ್ರಾದೇಶಿಕ ವಿಭಾಗದ ಆಯುಕ್ತರ ವರದಿ ಮತ್ತು ರಾಜ್ಯ ನೋಡಲ್ ಅಧಿಕಾರಿಯವರ ಪತ್ರಗಳು ‘ದಿ ಫೈಲ್’ಗೆ ಲಭ್ಯವಾಗಿವೆ.
ದೂರಿನಲ್ಲಿ ವಿವರಿಸಿದ್ದ ಕೆಲ ಆರೋಪಗಳ ಕುರಿತು ತನಿಖೆ ನಡೆಸಿದ್ದ ಪ್ರಾದೇಶಿಕ ಆಯುಕ್ತರು ನಿಷ್ಪಕ್ಷಪಾತದ ದೃಷ್ಟಿಕೋನದಿಂದ ಕೆಲವು ದೂರುಗಳ ವಿಷಯದಲ್ಲಿ ಖುದ್ದು ತನಿಖೆ ನಡೆಸಬೇಕು ಎಂದು ಕಲ್ಬುರ್ಗಿ ಜಿಲ್ಲಾ ಪಂಚಾಯ್ತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಸೂಚಿಸಲಾಗಿದೆ.
ಆದರೆ ಬೀದರ್ ಡಿಸಿಸಿ ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕರಾದ ಮಂಜುಳಾ, ವಿಠಲ ರೆಡ್ಡಿ, ಬಾಬುರಾವ್ ಕಲ್ಯಾಣಿ ಅವರುಗನ್ನು ಬೇರೆ ಹುದ್ದೆಗಳಿಗೆ ವರ್ಗಾವಣೆ ಮಾಡಲು ಶಿಫಾರಸ್ಸು ಮಾಡಿದ್ದಾರೆ. ಈ ಶಿಫಾರಸ್ಸನ್ನು ಒಳಗೊಂಡ ವರದಿಯನ್ನು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ (ಚುನಾವಣೆ) ರಾಜ್ಯ ನೋಡಲ್ ಅಧಿಕಾರಿ ಜಿ ವಿ ನಾಗರಾಜ್ ಅವರು ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ವರದಿಯನ್ನು ಸಲ್ಲಿಸಿದ್ದಾರೆ.
ಬೀದರ್ ಕ್ಷೇತ್ರದಿಂದ ಸ್ಪರ್ಧಿಸಿರುವ ಸಚಿವ ಈಶ್ವರ್ ಖಂಡ್ರೆ ಅವರ ಪುತ್ರ ಸಾಗರ್ ಖಂಡ್ರೆ ಅವರ ಪರವಾಗಿ ಸಚಿವರ ಒಡೆತನದಲ್ಲಿರುವ ಶೈಕ್ಷಣಿಕ ಸಂಸ್ಥೆಗಳ ಬೋಧಕ, ಬೋಧಕೇತರ ನೌಕರರು ಪ್ರಚಾರ ಮಾಡುತ್ತಿದ್ದಾರೆ ಎಂದು ಭಗವಂತ ಖೂಬಾ ಅವರು ದೂರು ನೀಡಿದ್ದರು. ಈ ದೂರನ್ನು ಪರಿಶೀಲಿಸಿದ್ದ ಕಲ್ಬುರ್ಗಿ ಪ್ರಾದೇಶಿಕ ಆಯುಕ್ತರು ಕಾಲೇಜು ಶಿಕ್ಷಣ ಇಲಾಖೆಯ ಪ್ರಾದೇಶಿಕ, ಜಂಟಿ ನಿರ್ದೇಶಕರು, ತಹಶೀಲ್ದಾರ್ ಅವರನ್ನು ವಿಚಾರಣೆಗೆ ಒಳಪಡಿಸಿದ್ದರು.
ಕೇಂದ್ರ ಸಚಿವ ಖೂಬಾ ಅವರು ಸಲ್ಲಿಸಿದ್ದ ದೂರಿನಲ್ಲಿ ಯಾವುದೇ ಪುರಾವೆ, ದಾಖಲೆಗಳನ್ನು ಸಲ್ಲಿಸಿರಲಿಲ್ಲ. ಅಲ್ಲದೇ ನಿರ್ದಿಷ್ಟವಾಗಿ ಯಾವುದೇ ವ್ಯಕ್ತಿ, ನೌಕರರ ಹೆಸರುಗಳನ್ನೂ ಉಲ್ಲೇಖಿಸಿರಲಿಲ್ಲ. ಅದೇ ರೀತಿ ದೂರಿನೊಂದಿಗೆ ವಿಸ್ಥಾ ಥಾಟ್ಸ್ ಹೆಸರಿನ ಬ್ಲಾಗ್‌ನ್ನು ಪ್ರಸ್ತುತಪಡಿಸಿದ್ದರು. ಆದರೆ ಈ ಬ್ಲಾಗ್‌ನ ಮೂಲಕ ಯಾವುದೇ ಲಿಂಕ್ ಸ್ಥಾಪಿಸಲು ಸಾಧ್ಯವಾಗಿಲ್ಲ ಎಂದು ವರದಿಯಲ್ಲಿ ವಿವರಿಸಲಾಗಿದೆ.
‘ವಿಚಾರಣೆಗೆ ಹಾಜರಾಗಿದ್ದ ಎಲ್ಲಾ ಆಧಿಕಾರಿಗಳು, ತಾವಾಗಲೀ ಅಥವಾ ತಮ್ಮ ಅಧೀನ ಸಿಬ್ಬಂದಿಗಳಾಲೀ ಯಾವುದೇ ಚುನಾವಣೆ ಪ್ರಕ್ರಿಯೆಯಲ್ಲಿ ಭಾಗವಹಿಸಿರುವುದಿಲ್ಲವೆಂದು ತಿಳಿಸಿ, ತಮ್ಮ ಲಿಖಿತ ವಿವರಣೆಯನ್ನು ಸಲ್ಲಿಸಿರುತ್ತಾರೆ. ವಿಚಾರಣೆ ಸಮಯದಲ್ಲಿ ದೂರುದಾರರ ಪರವಾಗಿ ಹಾಜರಿದ್ದ ಏಜೆಂಟ್/ವಕೀಲರು ಯಾವುದೇ ಪುರಾವೆಗಳನ್ನು ಸಲ್ಲಿಸಿಲ್ಲ. ಹೀಗಾಗಿ ಈ ದೂರು ರುಜುವಾತಾಗಿಲ್ಲ,’ ಎಂದು ವರದಿಯಲ್ಲಿ ಪ್ರಾದೇಶಿಕ ಆಯುಕ್ತರು ಅಭಿಪ್ರಾಯಪಟ್ಟಿರುವುದು ಗೊತ್ತಾಗಿದೆ.
ಈಶ್ವರ್ ಖಂಡ್ರೆ ಅವರು ತಮ್ಮ ಸಚಿವ ಸ್ಥಾನದ ಅಧಿಕಾರ ದುರುಪಯೋಗಪಡಿಸಿಕೊಂಡು ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರನ್ನು ಕಾಂಗ್ರೆಸ್ ಪರವಾಗಿ ಚುನಾವಣೆ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಕೇಂದ್ರ ಸಚಿವ ಖೂಬಾ ಅವರು ನೀಡಿದ್ದ ದೂರು ಸಹ ಸಾಬೀತಾಗಿಲ್ಲ.
‘ತಮ್ಮ ಅಧೀನ ಸಿಬ್ಬಂದಿಗಳು ಯಾವುದೇ ಚುನಾವಣೆ ಪ್ರಚಾರ ಪ್ರಕ್ರಿಯೆಯಲ್ಲಿ ಭಾಗವಹಿಸಿರುವುದಿಲ್ಲ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಮತ್ತು ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳು ಲಿಖಿತ ವಿವರಣೆ ಸಲ್ಲಿಸಿದ್ದಾರೆ. ವಿಚಾರಣೆ ಸಮಯದಲ್ಲಿ ದೂರುದಾರರ ಏಜೆಂಟ್‌ಗಳು ಯಾವುದೇ ಪುರಾವೆಯನ್ನು ಸಲ್ಲಿಸಿಲ್ಲ. ಆದರೂ ನಿಷ್ಪಕ್ಷಪಾತದ ದೃಷ್ಟಿಕೋನದಿಂದ ಈ ವಿಷಯದಲ್ಲಿ ಖುದ್ದಾಗಿ ತನಿಖೆ ಕೈಗೊಂಡು ವರದಿಯನ್ನು ಸಲ್ಲಿಸಬೇಕು ಎಂದು ಕಲ್ಬುರ್ಗಿ ಜಿಲ್ಲಾ ಪಂಚಾಯ್ತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಸೂಚಿಸಿರುವುದು,’ ವರದಿಯಿಂದ ತಿಳಿದು ಬಂದಿದೆ.
ಹಾಗೆಯೇ ಭಾಲ್ಕಿ ನಗರದ ಭೀಮಣ್ಣ ಖಂಡ್ರೆ ಇನ್ಸಿಟಿಟ್ಯೂಟ್ ಆಫ್ ಟೆಕ್ನಾಲಜಿ, ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಕಾಂಗ್ರೆಸ್ ಪಕ್ಷದ ಸಭೆಯನ್ನು ಆಯೋಜಿಸಲಾಗಿತ್ತು. ಈ ಕುರಿತೂ ಸಚಿವ ಖೂಬಾ ಅವರು ದೂರು ಸಲ್ಲಿಸಿದ್ದರು. ಈ ಕುರಿತು ಪ್ರಾದೇಶಿಕ ವಿಭಾಗದ ಆಯುಕ್ತರು ಸಹಾಯಕ ಚುನಾವಣಾಧಿಕಾರಿಗಳನ್ನು ವಿಚಾರಣೆಗೊಳಪಡಿಸಿದ್ದರು.
‘ಈ ಕುರಿತು ಸಹಾಯಕ ಚುನಾವಣಾಧಿಕಾರಿಗಳು ತಮ್ಮ ಲಿಖಿತ ವಿವರಣೆಯನ್ನು ಸಲ್ಲಿಸಿದ್ದಾರೆ. ನಿಯಮಾನುಸಾರ ಕಾಯ್ದೆಯಲ್ಲಿರುವ ಅವಕಾಶಗಳನ್ವಯ ಸಂಬಂಧಪಟ್ಟ ಪ್ರಾಂಶುಪಾಲರು ನೀಡಿದ್ದ ನಿರಾಕ್ಷೇಪಣ ಪತ್ರದ ಅನ್ವಯ ನಿಯಮಾನುಸಾರ ಪರವಾನಿಗೆ ನೀಡಲಾಗಿದೆ,’ ಎಂದು ನೀಡಿದ್ದ ವಿವರಣೆಯನ್ನು ಪ್ರಾದೇಶಿಕ ಆಯುಕ್ತರು ಪುರಸ್ಕರಿಸಿರುವುದು ವರದಿಯಿಂದ ಗೊತ್ತಾಗಿದೆ.
ಕಾಂಗ್ರೆಸ್ ಅಭ್ಯರ್ಥಿಗೆ ಸಹಾಯವಾಗುವ ನಿಟ್ಟಿನ ಲ್ಲಿ ಅಮರ್ ಖಂಡ್ರೆ ಎಂಬುವರು ಬೀದರ್ ಡಿಸಿಸಿ ಬ್ಯಾಂಕ್‌ನಿಂದ ಸಾಲ ನೀಡುವ ಆಮಿಷ ಒಡ್ಡಿದ್ದರು ಎಂದು ದೂರಲಾಗಿತ್ತು.ಈ ಆರೋಪಕ್ಕೆ ಸಂಬಂಧಿಸಿದಂತೆಯೂ ಯಾವುದೇ ದಾಖಲೆಗಳನ್ನೂ ಒದಗಿಸಿಲ್ಲ. ಹೀಗಾಗಿ ಈ ದೂರನ್ನೂ ವಿಲೇ ಮಾಡಿರುವುದು ತಿಳಿದುಬಂದಿದೆ.
ಭಾಲ್ಕಿ ತಾಲೂಕಿನ ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಅಲ್ತಾಫ್ ಎಂಬುವರು ಕಾಂಗ್ರೆಸ್ ಪರವಾಗಿ ಚುನಾವಣೆ ಪ್ರಚಾರದಲ್ಲಿ ನಿರತರಾಗಿದ್ದಾರೆ ಎಂಬ ದೂರಿನ ಕುರಿತು ವಿಚಾರಣೆ ನಡೆಸಿದ್ದ ಪ್ರಾದೇಶಿಕ ಆಯುಕ್ತರು, ಅವರನ್ನು ಚುನಾವಣೆ ಕಾರ್ಯದಿಂದ ಮುಕ್ತಗೊಳಿಸಿ ಆದೇಶ ಹೊರಡಿಸಿದ್ದಾರೆ. ಅದೇ ರೀತಿ ಪಿಡಿಒ ಚಂದ್ರಶೇಖರ್ ಬಿನ್ನಾಳೆ ಅವರ ವಿರುದ್ಧವೂ ಆರೋಪಿಸಿದ್ದರು. ಆದರೇ ಈ ಆರೋಪವನ್ನು ಸಾಬೀತುಪಡಿಸುವಲ್ಲಿ ವಿಫಲರಾಗಿರುವುದು ವರದಿಯಿಂದ ತಿಳಿದು ಬಂದಿದೆ.