ಭಾರೀ ಪ್ರಮಾಣದ ಆದಾಯ ಕೊರತೆ; ಅರ್ಥ ಸಚಿವರಿಂದಲೇ ವಿತ್ತೀಯ ಹೊಣೆಗಾರಿಕೆ ಕಾಯ್ದೆ ಉಲ್ಲಂಘನೆ

ಬೆಂಗಳೂರು; ರಾಜ್ಯವನ್ನು ಭಾರೀ ಪ್ರಮಾಣದ ಆದಾಯ ಕೊರತೆಗೆ ದೂಡಲಿದೆ ಎಂದು ಹಣಕಾಸು ಇಲಾಖೆಯು ನೀಡಿದ್ದ ಎಚ್ಚರಿಕೆಯನ್ನೂ ಬದಿಗೊತ್ತಿ ಪಡಿತರದಾರರಿಗೆ 10 ಕೆ ಜಿ ಅಕ್ಕಿ ವಿತರಿಸುವ ಅನ್ನಭಾಗ್ಯ ಯೋಜನೆಯನ್ನು ಜಾರಿಗೆ ತಂದಿರುವುದನ್ನು ಇದೀಗ ‘ದಿ ಫೈಲ್‌’ ಆರ್‍‌ಟಿಐ ದಾಖಲೆ ಸಹಿತ ಹೊರಗೆಡವುತ್ತಿದೆ.

 

ಅನ್ನಭಾಗ್ಯ ಯೋಜನೆಯಡಿ ಅಕ್ಕಿ ವಿತರಿಸಲು ಕೇಂದ್ರ ಸರ್ಕಾರವು ಸ್ಪಂದಿಸುತ್ತಿಲ್ಲ ಮತ್ತು ಸಹಕರಿಸುತ್ತಿಲ್ಲ ಎಂದು ಕೇಂದ್ರದ ವಿರುದ್ಧ ಇಡೀ ಕಾಂಗ್ರೆಸ್‌ ಸರ್ಕಾರವೇ ಟೀಕೆಗಳನ್ನು ಮಾಡುತ್ತಿದೆ. ಇದರ  ನಡುವೆಯೇ 10 ಕೆ ಜಿ ಅಕ್ಕಿ ವಿತರಿಸುವ ಅನ್ನಭಾಗ್ಯ ಯೋಜನೆ ಜಾರಿಯು ಕಾರ್ಯಸಾಧುವಲ್ಲ ಎಂದು ಹಣಕಾಸು ಇಲಾಖೆ ನೀಡಿದ್ದ ಅಭಿಪ್ರಾಯವು ಇದೀಗ ಮುನ್ನೆಲೆಗೆ ಬಂದಿದೆ.

 

ವಿಶೇಷವೆಂದರೇ   ಅವಕಾಶ ಸಿಕ್ಕಾಗಲೆಲ್ಲಾ ವಿತ್ತೀಯ ಶಿಸ್ತಿನ ಕುರಿತು ಸದನದಲ್ಲಿ ಸುದೀರ್ಘವಾಗಿ ಅಂಕಿ ಅಂಶಗಳನ್ನಿಡಿದು  ಪಾಠ ಮಾಡುವ ಸಿದ್ದರಾಮಯ್ಯ ಅವರೇ ಇದೀಗ  ಕರ್ನಾಟಕ ವಿತ್ತೀಯ ಹೊಣೆಗಾರಿಕೆ ಕಾಯ್ದೆಯನ್ನು  ನೇರವಾಗಿಯೇ ಉಲ್ಲಂಘಿಸಿರುವುದು ಆರ್‍‌ಟಿಐ ದಾಖಲೆಗಳಿಂದ ತಿಳಿದು ಬಂದಿದೆ.

 

ಅಲ್ಲದೇ ‘ವಿತ್ತೀಯ ಹೊಣೆಗಾರಿಕೆ ಕಾಯ್ದೆಯಡಿ 3 ಮಾನದಂಡಗಳನ್ನು ಪಾಲಿಸಬೇಕಿದ್ದು, ಈ ಪೈಕಿ 2023-24 ರ ಬಜೆಟ್ ನಲ್ಲಿ 2 ಮಾನದಂಡಗಳನ್ನು ಕಾಯ್ದುಕೊಳ್ಳುವ ಮೂಲಕ ಆರ್ಥಿಕ ಶಿಸ್ತನ್ನು ಕಾಪಾಡಿಕೊಳ್ಳಲಾಗಿದೆ,’ ಎಂದು ಖುದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2023ರ ಜುಲೈ 7ರಂದು ಸದನದಲ್ಲಿಯೇ ಹೇಳಿಕೆ ನೀಡಿದ್ದರು. ಆದರೀಗ ಅವರೇ ವಿತ್ತೀಯ ಹೊಣೆಗಾರಿಕೆ ಕಾಯ್ದೆಯನ್ನು ಉಲ್ಲಂಘಿಸಿ ಆರ್ಥಿಕ ಅಶಿಸ್ತಿಗೆ ದಾರಿ ಮಾಡಿಕೊಟ್ಟಿರುವುದು ಚರ್ಚೆಗೆ ಗ್ರಾಸವಾಗಿದೆ.

 

‘ಈ ಯೋಜನೆಯನ್ನು ಜಾರಿಗೊಳಿಸಿದರೇ ಕರ್ನಾಟಕ ವಿತ್ತೀಯ ಹೊಣೆಗಾರಿಕೆ ಕಾಯ್ದೆ ಉಲ್ಲಂಘನೆಯಾಗುತ್ತದೆ,’ ಎಂದು ಹಣಕಾಸು ಇಲಾಖೆಯ ಎಚ್ಚರಿಕೆಯನ್ನೂ ಬದಿಗೊತ್ತಿರುವ  ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯವನ್ನು ಬೃಹತ್‌ ಪ್ರಮಾಣದ ಆದಾಯ ಕೊರತೆಗೆ ದೂಡಿರುವುದು ದಾಖಲೆಗಳಿಂದ ಗೊತ್ತಾಗಿದೆ.

 

ಆರ್ಥಿಕ ಇಲಾಖೆ ನೀಡಿರುವ ಅಭಿಪ್ರಾಯದಲ್ಲೇನಿದೆ?

 

ಪ್ರಸ್ತುತ ವಿತ್ತೀಯ ನಿರ್ಬಂಧಗಳ ಹಿನ್ನೆಲೆಯಲ್ಲಿ ಪ್ರಸಕ್ತ ಆರ್ಥಿಕ ವರ್ಷದಲ್ಲಿ ಈ ಯೋಜನೆಯನ್ನು ಅಳವಡಿಸುವುದು ಕಷ್ಟ. ಈ ಯೋಜನೆಯನ್ನು ಕೈಗೆತ್ತಿಕೊಳ್ಳುವುದರಿಂದ ಭಾರೀ ಪ್ರಮಾಣದ ಪುನರಾವರ್ತಿತ ಹೊಣೆಗಾರಿಕೆ ನಿರ್ಮಾಣವಾಗುತ್ತದೆ. ಕಂದಾಯ ಮತ್ತು ಬಂಡವಾಳ ಬಾಬ್ತುಗಳಲ್ಲಿ ಎಲ್ಲಾ ಲೆಕ್ಕ ಶೀರ್ಷಿಕೆ ಮತ್ತು ಇಲಾಖೆಗಳಿಗೆ ಪ್ರಸ್ತುತ ಆಯವ್ಯಯದಲ್ಲಿ ಒದಗಿಸಿರುವ ಹಂಚಿಕೆಯಲ್ಲಿ ಭಾರೀ ಪ್ರಮಾಣದ ಕಡಿತವನ್ನು ಮಾಡಬೇಕಾಗುತ್ತದೆ.

 

ಮುಂದೆ ಇದರಿಂದ ರಾಜ್ಯವನ್ನು  ಭಾರೀ ಪ್ರಮಾಣದ ಆದಾಯ ಕೊರತೆಗೆ ದೂಡಿದಂತಾಗುತ್ತದೆ. ಇದು ಕರ್ನಾಟಕ ವಿತ್ತೀಯ ಹೊಣೆಗಾರಿಕೆ ಕಾಯ್ದೆಯ ಉಲ್ಲಂಘನೆಯಾಗುತ್ತದೆ ಎಂದು ಆರ್ಥಿಕ ಇಲಾಖೆಯು ಸರ್ಕಾರವನ್ನು ಎಚ್ಚರಿಸಿತ್ತು ಎಂಬುದು  ಆರ್‍‌ಟಿಐ ದಾಖಲೆಗಳಿಂದ ತಿಳಿದು ಬಂದಿದೆ.

 

ಮತ್ತೊಂದು ವಿಶೇಷವೆಂದರೇ ಗೃಹ ಲಕ್ಷ್ಮಿ ಯೋಜನೆ ಅನುಷ್ಠಾನದ ಸಂದರ್ಭದಲ್ಲಿಯೂ ಆರ್ಥಿಕ ಇಲಾಖೆಯು ಇದೇ ಅಭಿಪ್ರಾಯವನ್ನು ಹೇಳಿತ್ತಲ್ಲದೇ ಸರ್ಕಾರವನ್ನು ಎಚ್ಚರಿಸಿತ್ತು.

 

ಗೃಹ ಲಕ್ಷ್ಮಿ; ನಿರಂತರ ಸಾಲದ ಸುಳಿ, ಆದಾಯದ ಕೊರತೆ, ಹಣಕಾಸು ಹೊಣೆಗಾರಿಕೆ ಕಾಯ್ದೆ ಉಲ್ಲಂಘನೆ

 

ಹಣಕಾಸು ಇಲಾಖೆಯ ಎಚ್ಚರಿಕೆ ನಡುವೆಯೂ  ಆಹಾರ ಮತ್ತು ನಾಗರಿಕ ಸರಬರಾಜು, ಗ್ರಾಹಕರ ವ್ಯವಹಾರಗಳು ಮತ್ತು ಕಾನೂನು ಮಾಪನ ಶಾಸ್ತ್ರ ಇಲಾಖೆಯ ಸಚಿವ ಕೆ ಹೆಚ್‌ ಮುನಿಯಪ್ಪ ಅವರು ಅಂತ್ಯೋದಯ ಅನ್ನ ಯೋಜನೆ ಮತ್ತು ಆದ್ಯತಾ ಪಡಿತರ ಚೀಟಿಯನ್ನು ಹೊಂದಿರುವ ಕುಟುಂಬಗಳಿಗೆ  10 ಕೆ ಜಿ ಅಕ್ಕಿ ವಿತರಿಸುವ ಅನ್ನ ಭಾಗ್ಯ ಯೋಜನೆಯ ಪ್ರಸ್ತಾವನೆಯನ್ನು ಸಚಿವ ಸಂಪುಟಕ್ಕೆ ಮಂಡಿಸಿದ್ದರು. ಈ ಯೋಜನೆಗೆ ಪ್ರತಿ ತಿಂಗಳು 841.46 ಕೋಟಿ ರು, ವಾರ್ಷಿಕವಾಗಿ 10,097.52 ಕೋಟಿ ರು. ಅನುದಾನ ಬೇಕಾಗುತ್ತದೆ ಎಂದು ಪ್ರಸ್ತಾವನೆಯಲ್ಲಿ ವಿವರಿಸಿರುವುದು ಗೊತ್ತಾಗಿದೆ.

 

ಹಾಗೆಯೇ ಈ ಯೋಜನೆಗಾಗಿ ಪ್ರತಿ ತಿಂಗಳು ಹೆಚ್ಚುವರಿಯಾಗಿ 229343.19 ಮೆಟ್ರಿಕ್‌ ಟನ್‌, ವಾರ್ಷಿಕವಾಗಿ 2752118.28 ಮೆಟ್ರಿಕ್‌ ಟನ್‌  ಆಹಾರ ಧಾನ್ಯ ಅಗತ್ಯವಿದೆ. ಹೆಚ್ಚುವರಿ ಆಹಾರ ಧಾನ್ಯಗಳ ಸಂಗ್ರಹಣೆ ಮತ್ತು ವಿತರಣೆಗೆ ತಗಲುವ ಸಂಪೂರ್ಣ ವೆಚ್ಚವನ್ನು ರಾಜ್ಯ ಸರ್ಕಾರವೇ ಭರಿಸಲಿದೆ ಎಂದೂ ಸಚಿವ ಸಂಪುಟದ ಟಿಪ್ಪಣಿಯಲ್ಲಿ ಉಲ್ಲೇಖಿಸಿರುವುದು ತಿಳಿದು ಬಂದಿದೆ.

 

ಮುಂದಿನ ಒಂದು ವರ್ಷ ಹೊಸ ಬಿಪಿಎಲ್‌ ಚೀಟಿಯಿಲ್ಲ

 

ನೆರೆಯ ರಾಜ್ಯಗಳಿಗೆ ಹೋಲಿಸಿದರೆ ರಾಜ್ಯದಲ್ಲಿಯೇ ಅತೀ ಹೆಚ್ಚು ಬಿಪಿಎಲ್‌ ಪಡಿತರ ಚೀಟಿದಾರರು ಇದ್ದಾರೆ. ಹೀಗಾಗಿ ಮುಂದಿನ ಒಂದು ವರ್ಷದವರೆಗೆ ಹೊಸದಾಗಿ ಬಿಪಿಎಲ್‌ ಪಡಿತರ ಚೀಟಿಗಳನ್ನು ಮಂಜೂರು ಮಾಡಬಾರದು ಎಂದು ಆರ್ಥಿಕ ಇಲಾಖೆಯು ಹೇಳಿದೆ.

 

ವಿಶೇಷವೆಂದರೇ ರಾಜ್ಯದಲ್ಲಿ ಹೊಸದಾಗಿ ಬಿಪಿಎಲ್‌ ಪಡಿತರ ಚೀಟಿಗಳಿಗಾಗಿ 2,95,986 ಅರ್ಜಿಗಳನ್ನು ಸರ್ಕಾರವು ಈಗಾಗಲೇ ಸ್ವೀಕರಿಸಿದೆ. ಈ ಪೈಕಿ 19,889 ಪಡಿತರ ಚೀಟಿಗಳನ್ನು ವಿತರಿಸಲಾಗಿದೆ.

 

ಕರ್ನಾಟಕದಲ್ಲಿ ಶೇ.85.23ರಷ್ಟು ಅಂದರೆ  1,13,84,605 ಬಿಎಪಿಎಲ್‌ ಪಡಿತರ ಚೀಟಿದಾರರಿದ್ದಾರೆ. ಗುಜರಾತ್‌ನಲ್ಲಿ 76, 07,818 (ಶೇ.62.11), ಮಹಾರಾಷ್ಟ್ರದಲ್ಲಿ 1,57,16,582 (ಶೇ.64.36), ತೆಲಂಗಾಣದಲ್ಲಿ 54,07,637 (ಶೇ. 65.59), ತಮಿಳುನಾಡಿನಲ್ಲಿ 1,11,41,076 (ಶೇ.60.14), ಕೇರಳದಲ್ಲಿ 41,28,595 (ಶೇ.52.57), ಗೋವಾದಲ್ಲಿ 1,43,918 (ಶೇ.41.88)ರಷ್ಟು ಬಿಪಿಎಲ್‌ ಪಡಿತರ ಚೀಟಿದಾರರಿದ್ದಾರೆ ಎಂದು ಹಣಕಾಸು ಇಲಾಖೆಯು ಅಂಕಿ ಅಂಶಗಳನ್ನು ಒದಗಿಸಿರುವುದು ತಿಳಿದು ಬಂದಿದೆ.

 

ಸರ್ಕಾರದ ಸಮರ್ಥನೆ ಏನು?

 

ರಾಜ್ಯದಲ್ಲಿ ವಾಸವಾಗಿರುವ ಬಡ ಕುಟುಂಬಗಳಿಗೆ ಸಾಕಷ್ಟು ಆಹಾರ ಧಾನ್ಯಗಳ ಲಭ್ಯತೆ ಖಾತರಿಪಡಿಸಲು ಹಾಗೂ ಆಹಾರ ಭದ್ರತೆಯನ್ನು ಮುಂದುವರೆಸಲು ಸರ್ಕಾರವು ಬದ್ಧತೆ ಹೊಂದಿರುತ್ತದೆ. ಬಡ ಕುಟುಂಬಗಳಿಗೆ ಸಾಕಷ್ಟು ಆಹಾರ ಧಾನ್ಯಗಳ ಲಭ್ಯತೆಯಿಂದಾಗಿ ಈ ವರ್ಗದ ಜನತೆಯ ಆರೋಗ್ಯ ಮಟ್ಟ ಹಾಗೂ ಸಾಮಾನ್ಯ ಜೀವನಶೈಲಿಯಲ್ಲಿ ಸುಧಾರಣೆಯಾಗುವುದರೊಂದಿಗೆ ಬಡ ಜನತೆಯ ಜೀವನಮಟ್ಟವನ್ನು ಮೇಲ್ದರ್ಜೆಗೇರಿಸಲು ಸಹಕಾರಿಯಾಗುತ್ತದೆ.

 

ಈ ಹಿನ್ನೆಲೆಯಲ್ಲಿ ಅಂತ್ಯೋದಯ ಅನ್ನ ಯೋಜನೆ ಮತ್ತು ಆದ್ಯತಾ ಪಡಿತರ ಚೀಟಿಯನ್ನು ಹೊಂದಿರುವ ಕುಟುಂಬಗಳ ಪೈಕಿ ಪ್ರತಿ ಸದಸ್ಯರಿಗೆ 10 ಕೆ ಜಿ ಆಹಾರ ಧಾನ್ಯವನ್ನು ಉಚಿತವಾಗಿ ವಿತರಿಸಲು ರಾಜ್ಯ ಸರ್ಕಾರವು ನಿರ್ಧರಿಸಿದೆ ಎಂದು ಸಚಿವ ಸಂಪುಟ ಟಿಪ್ಪಣಿಯಲ್ಲಿ ಸಮರ್ಥನೆ ಮಾಡಿಕೊಂಡಿರುವುದು ಗೊತ್ತಾಗಿದೆ.

 

ಆದರೆ 10 ಕೆ ಜಿ ಅಕ್ಕಿಯನ್ನು ವಿತರಿಸಲು ಕೇಂದ್ರ ಸರ್ಕಾರವು ತೊಡರುಗಾಲು ಹಾಕಿತ್ತು. ರಾಜ್ಯಕ್ಕೆ ಮುಕ್ತ ಮಾರುಕಟ್ಟೆ ಮಾರಾಟ ಯೋಜನೆಯಡಿ ರಾಜ್ಯ ಸರ್ಕಾರಗಳಿಗೆ ಅಕ್ಕಿ ಹಂಚಿಕೆ ನಿಲ್ಲಿಸಿತ್ತು. ರಾಷ್ಟ್ರೀಯ ಆಹಾರ ಭದ್ರತೆ ಕಾಯ್ದೆಯನ್ವಯ ರಾಜ್ಯ ಸರ್ಕಾರದ ವತಿಯಿಂದ ಹೆಚ್ಚುವರಿಯಾಗಿ ವಿತರಿಸಲಿರುವ ಆದ್ಯತಾ ಪಡಿತರ ಚೀಟಿಗಳ ಫಲಾನುಭವಿಗಳಿಗೆ ಪ್ರತಿ ತಿಂಗಳು 5 ಕೆ ಜಿ ಲೆಕ್ಕದಲ್ಲಿ 20,000 ಮೆಟ್ರಿಕ್‌ ಟನ್‌ ಪ್ರಮಾಣದ ಆಹಾರ ಧಾನ್ಯವನ್ನು ವಿತರಿಸಲು ಪರ್ಯಾಯ ಮಾರ್ಗ ಕಂಡುಕೊಳ್ಳಬೇಕಿದೆ ಎಂಬ ಅಂಶವನ್ನು ಟಿಪ್ಪಣಿ ಹಾಳೆಯಲ್ಲಿ ವಿವರಿಸಲಾಗಿದೆ.

 

2022 ಅಕ್ಟೋಬರ್‍‌ ಮತ್ತು ನವಂಬರ್‍‌ ತಿಂಗಳಿನಲ್ಲಿ ಹೊರಡಿಸಿರುವ ಆದೇಶಗಳ ಅನ್ವಯ ಪ್ರತಿ ಕೆ ಜಿ ಅಕ್ಕಿ ಖರೀದಿ ದರವು 32.94 ರು. ಇದೆ. ಅದರಂತೆ ಪ್ಲಾಸ್ಟಿಕ್‌ ಚೀಲದಲ್ಲಿ ಪ್ರತಿ ಕೆ ಜಿ ಗೆ 32.24 ರು. ದರದಲ್ಲಿ ಖರೀದಿಸಿದಲ್ಲಿ 1,030.50 ಕೋಟಿ ರು. ಬೇಕಿದೆ. ಪ್ರಸ್ತುತ ಪ್ರಸ್ತಾಪಿಸಿದ್ದಂತೆ 3.00 ಲಕ್ಷ ಮೆಟ್ರಿಕ್‌ ಟನ್‌ ಅಕ್ಕಿಯನ್ನು ಪ್ರತಿ ಕೆ ಜಿ ಗೆ 34.60 ರು. ದರದಲ್ಲಿ ಖರೀದಿಸಿದರೆ 1,101.30 ಕೋಟಿ ರು. ವೆಚ್ಚವಾಗುತ್ತದೆ ಎಂದು ಇಲಾಖೆಯ ಸರ್ಕಾರದ ಕಾರ್ಯದರ್ಶಿ ಆಗಿದ್ದ ಎಂ ಟಿ ರೇಜು ಅವರು ಟಿಪ್ಪಣಿ ಹಾಳೆಯಲ್ಲಿ ವಿವರಿಸಿದ್ದರು.

 

ನವೆಂಬರ್‌ 2023ರ ಅಂತ್ಯದವರೆಗೆ ಅನ್ನ ಭಾಗ್ಯ ಯೋಜನೆಗೆ 3,357 ಕೋಟಿ ರು. ಖರ್ಚಾಗಿದೆ. ಇದುವರೆಗೆ 1,10,86,116 ಮಂದಿ ಫಲಾನುಭವಿಗಳು ಈ ಯೋಜನೆಗೆ ನೋಂದಾಯಿಸಿದ್ದಾರೆ  ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸದನಕ್ಕೆ ಉತ್ತರ ಒದಗಿಸಿದ್ದರು.

 

2020ನೇ ಸಾಲಿನ ಕರ್ನಾಟಕ ಆರ್ಥಿಕ ಹೊಣೆಗಾರಿಕೆ (ತಿದ್ದುಪಡಿ) ವಿಧೇಯಕವನ್ನು ಹಿಂದಿನ ಸರ್ಕಾರವು ಮಂಡಿಸಿದ್ದಾಗ ಇದನ್ನು ತೀವ್ರವಾಗಿ ವಿರೋಧಿಸಿದ್ದ  ಪ್ರತಿಪಕ್ಷ ನಾಯಕರಾಗಿದ್ದ ಸಿದ್ದರಾಮಯ್ಯ ಅವರು ಕಳವಳ ವ್ಯಕ್ತಪಡಿಸಿದ್ದರು. ಸಾಲ ಮಾಡುವ ಪ್ರಮಾಣ ಹೆಚ್ಚಿಸಿ ರಾಜ್ಯವನ್ನು ಸಂಕಷ್ಟಕ್ಕೆ ದೂಡಲಾಗುತ್ತಿದೆ ಎಂದು ಟೀಕಿಸಿದ್ದರು.

 

ಸಾಲ ಹೆಚ್ಚಿಸಿಕೊಳ್ಳುವುದರಿಂದ ರಾಜ್ಯದ ಆರ್ಥಿಕ ಪರಿಸ್ಥಿತಿ ಮೇಲೆ ಆಗುವ ಗಂಭೀರ ಪರಿಣಾಮವನ್ನು ಎಳೆಎಳೆಯಾಗಿ ವಿವರಿಸಿದ್ದರು. ಶೇ. 3ರ ಮಿತಿಯಲ್ಲಿದ್ದಾಗ ಹೊಣೆಗಾರಿಕೆಯು 46 ಸಾವಿರ ಕೋಟಿ ರು. ಅಗಲಿದೆ. ಶೇ. 5 ಆದರೆ 93 ಸಾವಿರ ಕೋಟಿ ರು ತಲುಪಲಿದೆ. ಈಗಿನ ಸಂದರ್ಭದಲ್ಲಿ ಬದ್ಧ ವೆಚ್ಚ ಶೇ.90ಕ್ಕೆ ಮುಟ್ಟಿದ್ದು ಅಭಿವೃದ್ಧಿ ಕಾರ್ಯಕ್ಕೆ ಎಲ್ಲಿದೆ ಹಣ ಎಂದು ಪ್ರಶ್ನಿಸಿದ್ದನ್ನು ಸ್ಮರಿಸಬಹುದು.

the fil favicon

SUPPORT THE FILE

Latest News

Related Posts