ಬೆಂಗಳೂರು; ರಾಜ್ಯದ ಸಾರ್ವಜನಿಕ ಆಸ್ಪತ್ರೆಗಳಲ್ಲಿ ಬ್ಯಾಂಡೇಜ್ ಬಟ್ಟೆ ಖರೀದಿಗೆ ಸಂಬಂಧಿಸಿದಂತೆ ಕರೆದಿದ್ದ ಟೆಂಡರ್‍ನಲ್ಲಿಯೇ ಲೋಪಗಳನ್ನು ಎಸಗಿದ್ದರ ಕುರಿತು ದಾಖಲೆ ಸಹಿತ ‘ದಿ ಫೈಲ್’ ವರದಿ ಪ್ರಕಟಿಸುತ್ತಿದ್ದಂತೆ ಕರ್ನಾಟಕ ವೈದ್ಯಕೀಯ ಸರಬರಾಜು ನಿಗಮವು ಲೋಪಗಳನ್ನು ರಾತ್ರೋರಾತ್ರಿ ಬದಲಾಯಿಸಿ ತಿದ್ದುಪಡಿ ಮಾಡಿರುವುದು ಇದೀಗ ಬಹಿರಂಗವಾಗಿದೆ.
ಮೂಲ ಟೆಂಡರ್‍ನಲ್ಲಿ ನಿಗದಿಪಡಿಸಿದ್ದ ಪ್ರಮಾಣಕ್ಕಿಂತಲೂ ಮರು ಟೆಂಡರ್‍ನಲ್ಲಿ ಪರಿಕರಗಳ ಪ್ರಮಾಣ ಹೆಚ್ಚಳ ಮಾಡಿತ್ತು. ಇದು ಕೆಟಿಪಿಪಿ ಕಾಯ್ದೆ ಮತ್ತು ನಿಯಮಗಳ ಉಲ್ಲಂಘನೆಯಾಗಿತ್ತು. ಈ ಕುರಿತು ‘ದಿ ಫೈಲ್’ ವರದಿ ಪ್ರಕಟಿಸಿದ ಕೂಡಲೇ ನಿಗಮವು ಟೆಂಡರ್ ಷರತ್ತು ಮತ್ತು ಇಂಡೆಂಟ್ ಪ್ರಮಾಣವನ್ನೂ ಬದಲಾಯಿಸಿರುವುದು ಗೊತ್ತಾಗಿದೆ.
ಕೇವಲ ಟೆಂಡರ್ ಷರತ್ತು ಮತ್ತು ಬ್ಯಾಂಡೇಜ್‌ಗಳ ಪ್ರಮಾಣವನ್ನಷ್ಟೇ ಬದಲಾಯಿಸಿರುವ ನಿಗಮವು, ಬ್ಯಾಂಕ್ ಗ್ಯಾರಂಟಿ, ಸ್ಯಾಂಪಲ್ ಸಲ್ಲಿಕೆ ಮತ್ತು ಎಂಎಸ್‌ಎಂಇ ಕುರಿತಾಗಿ ನಿಗಮವು ಇದುವರೆಗೂ ಯಾವುದೇ ಬದಲಾವಣೆ ಮಾಡದೇ ಇರುವುದು ಮತ್ತಷ್ಟು ಅನುಮಾನಗಳಿಗೆ ಕಾರಣವಾಗಿದೆ.
ರಾತ್ರೋರಾತ್ರಿ ತಿದ್ದುಪಡಿ
ಬ್ಯಾಂಡೇಜ್ ಬಟ್ಟೆ ಖರೀದಿ ಸಂಬಂಧ ಕರೆದಿದ್ದ ಮೂಲ ಟೆಂಡರ್‍ನಲ್ಲಿದ್ದ ಪ್ರಮಾಣ ಮತ್ತು ಮರು ಟೆಂಡರ್‍ನಲ್ಲಿದ್ದ ಪ್ರಮಾಣಕ್ಕೂ ಭಾರೀ ವ್ಯತ್ಯಾಸವಿತ್ತು. ಈ ಕುರಿತು ‘ದಿ ಫೈಲ್’ ವರದಿ ಪ್ರಕಟಿಸುತ್ತಿದ್ದಂತೆ ನಿಗಮವು ತನ್ನ ತಪ್ಪನ್ನು ತಿದ್ದುಕೊಂಡಿದೆ.
ವಿಶೇಷವೆಂದರೇ ಫೆ.14ರ ರಾತ್ರಿ 9 ಗಂಟೆಗೆ ತಿದ್ದುಪಡಿ ಮಾಡಿ ವೆಬ್‌ಸೈಟ್‌ನಲ್ಲಿ ಅಪ್ಲೋಡ್ ಮಾಡಿರುವುದು ಗೊತ್ತಾಗಿದೆ.
ನಿಗಮವು ರಾತ್ರೋರಾತ್ರಿ ಮಾಡಿರುವ ತಿದ್ದುಪಡಿ ಕುರಿತು ‘ಸರ್ಕಾರಿ ಇಲಾಖೆಯು ರಾತ್ರಿ ಪಾಳಿಯಲ್ಲಿಯೂ ಕೆಲಸ ಮಾಡುತ್ತದೆಯೇ, ಅಥವಾ ಅಧಿಕಾರಿಗಳು ಮಾಡಿರುವ ತಪ್ಪನ್ನು ಮುಚ್ಚಿ ಹಾಕಲು ತಿದ್ದುಪಡಿ ಮಾಡಲಾಗಿದೆಯೇ ಎಂದು,’ ಎಂದು ನಿಗಮದ ಹೆಸರು ಹೇಳಲಿಚ್ಛಿಸದ ಹಿರಿಯ ಅಧಿಕಾರಿಯೊಬ್ಬರು ಹೇಳುತ್ತಾರೆ.
95 ವಸ್ತುಗಳಿಗೂ ಮರು ಟೆಂಡರ್
ಟೆಂಡರ್ ಸಂಖ್ಯೆ 1062ರಲ್ಲಿ ಶಸ್ತ್ರಚಿಕಿತ್ಸೆಗಳಿಗೆ ಸಂಬಂಧಿಸಿದ ಒಟ್ಟು 147 ವಸ್ತುಗಳ ಖರೀದಿಗೆ ಟೆಂಡರ್ ಆಹ್ವಾನಿಸಿತ್ತು. ಇವುಗಳಲ್ಲಿ ಕೆಲವು ಐಟಂಗಳನ್ನು ಅಂತಿಮಗೊಳಿಸಿದೆ. ಬ್ಯಾಂಡೇಜ್ ಕ್ಲಾತ್ ಸೇರಿ ಹಲವು ಐಟಂಗಳನ್ನು ಇನ್ನೂ ಅಂತಿಮಗೊಳಿಸಿರಲಿಲ್ಲ.
ಈ ಕುರಿತು ‘ದಿ ಫೈಲ್’ ವರದಿ ಪ್ರಕಟಿಸುತ್ತಿದ್ದಂತೆಯೇ ನಿಗಮವು 95 ವಸ್ತುಗಳಿಗೆ ಸಂಬಂಧಿಸಿದಂತೆ 5 ಮರು ಟೆಂಡರ್ ಕರೆದಿದೆ.
ಅಲ್ಲದೇ ಈ ವಸ್ತುಗಳನ್ನು ಕರ್ನಾಟಕ ಮೂಲದ ಎಂಎಸ್‌ಎಂಇಗಳಿಂದ ವಿಶೇಷ ಖರೀದಿಗೆ ಕಾಯ್ದಿರಿಸಲಾಗಿದೆಯೇ ಎಂಬ ಕುರಿತೂ ನಿಗಮವು ಇನ್ನು ಸ್ಪಷ್ಟವಾಗಿ ಹೇಳಿಲ್ಲ.
ರಾಜ್ಯದ ಸಾರ್ವಜನಿಕ ಆಸ್ಪತ್ರೆಗಳಲ್ಲಿ ಬ್ಯಾಂಡೇಜ್ ಬಟ್ಟೆ ಕೊರತೆ ತೀವ್ರವಾಗಿ ಕಾಡುತ್ತಿದ್ದರೂ ಸಹ ಈ ಸಂಬಂಧ ಕರೆದಿದ್ದ 9 ಕೋಟಿ ರು. ಮೊತ್ತದ ಟೆಂಡರ್‌ನ್ನೂ ಇನ್ನೂ ಅಂತಿಮಗೊಳಿಸಿಲ್ಲ. ಬ್ಯಾಂಡೇಜ್ ಬಟ್ಟೆ ಸಕಾಲಕ್ಕೆ ದೊರೆಯದ ಕಾರಣ ಅಪಘಾತ ಸಂದರ್ಭ ಮತ್ತು ಶಸ್ತ್ರಚಿಕಿತ್ಸೆ ಕೊಠಡಿಗಳಲ್ಲಿ ಕಾರ್ಯನಿರ್ವಹಿಸುವ ವೈದ್ಯಕೀಯ ಸಿಬ್ಬಂದಿಯ ಕಾರ್ಯನಿರ್ವಹಣೆಗೆ ಅಡ್ಡಿಯಾಗಿತ್ತು.
ವ್ಯವಸ್ಥಾಪಕ ನಿರ್ದೇಶಕ ಚಿದಾನಂದ ಸದಾಶಿವ ವಟಾರೆ ಅವರು ಈ ಐಟಂಗೆ ಪ್ರಧಾನ ಕಾರ್ಯದರ್ಶಿ ಮತ್ತು ಆಯುಕ್ತರ ಅನುಮೋದನೆಯಿಲ್ಲದೆ ಟೆಂಡರ್ ಷರತ್ತುಗಳನ್ನು ಹಠಾತ್ತನೆ ಬದಲಾಯಿಸಿದ್ದಾರೆ. ಇದರ ಹಿಂದೆ ಕಮಿಷನ್ ವ್ಯವಹಾರ ನಡೆದಿದೆ ಎಂಬ ಆರೋಪವೂ ಕೇಳಿ ಬಂದಿತ್ತು. ಅಲ್ಲದೇ ನಿರ್ದಿಷ್ಟ ಬಿಡ್‌ದಾರರ ಲಾಬಿಗೆ ಮಣಿದು ಟೆಂಡರ್ ಪ್ರಮಾಣವನ್ನೂ ಹೆಚ್ಚಿಸಿದ್ದಾರೆ ಎಂದು ಹೇಳಲಾಗಿತ್ತು.
ಪ್ರಮಾಣ ಹೆಚ್ಚಳ
ಮೂಲ ಟೆಂಡರ್‍ನಲ್ಲಿ ಬ್ಯಾಂಡೇಜ್ ಬಟ್ಟೆಗೆ ಅಗತ್ಯವಿರುವ ಪ್ರಮಾಣ 173,768 ಯುನಿಟ್ ಗಳಾಗಿತ್ತು. ಮರು ಟೆಂಡರ್ ನಲ್ಲಿ ಪ್ರಮಾಣವನ್ನು 2,31,691 ಯುನಿಟ್ ಎಂದು ಪ್ರಕಟಿಸಿದೆ. ಮೂಲ ಟೆಂಡರ್ ಶೀರ್ಷಿಕೆ ವಾರ್ಷಿಕ ಇಂಡೆಂಟ್ 2022-23ರಡಿಯಲ್ಲಿ ಕರ್ನಾಟಕದಾದ್ಯಂತ ವಿವಿಧ ಆರೋಗ್ಯ ಸಂಸ್ಥೆಗಳು ಶಸ್ತ್ರಚಿಕಿತ್ಸೆಗೆ ಬಳಸುವ ಹೊಲಿಗೆ ಮತ್ತು ಇತರ ಔಷಧಗಳನ್ನು ಸರಬರಾಜು ಮಾಡಲು ಟೆಂಡರ್ ಆಹ್ವಾನಿಸಿತ್ತು. ಮರು ಟೆಂಡರ್‍ನಲ್ಲಿಯೂ ವಾರ್ಷಿಕ ಇಂಡೆಂಟ್ 2022-23ರ ಅಡಿಯಲ್ಲಿ ಕರ್ನಾಟಕದಾದ್ಯಂತ ವಿವಿಧ ಆರೋಗ್ಯ ಸಂಸ್ಥೆಗಳಿಗೆ ಬ್ಯಾಂಡೇಜ್ ಬಟ್ಟೆ ಸರಬರಾಜು ಮಾಡಲು ಮರು ಟೆಂಡರ್ ಕರೆದಿತ್ತು.
ಬ್ಯಾಂಡೇಜ್ ಬಟ್ಟೆ ಖರೀದಿ; ಅಂತಿಮಗೊಳ್ಳದ ಟೆಂಡರ್, ಅನುಮೋದನೆಯಿಲ್ಲದಿದ್ದರೂ ಷರತ್ತು ಬದಲಾವಣೆ
ಐಟಂ ಒಂದೇ ಆಗಿದ್ದರೆ ಮತ್ತು ವಾರ್ಷಿಕ ಇಂಡೆಂಟ್ ವರ್ಷ ಒಂದೇ ಆಗಿದ್ದ ಸಂದರ್ಭದಲ್ಲಿ 2022-23 ವಾರ್ಷಿಕ ಇಂಡೆಂಟ್, ಮರು ಟೆಂಡರ್‍ನಲ್ಲಿ ಪ್ರಮಾಣವು ಹೇಗೆ ಬದಲಾಗುತ್ತದೆ ಎಂಬ ಪ್ರಶ್ನೆಯೂ ಎದುರಾಗಿದೆ. ಪಟ್ಟಭದ್ರ ಹಿತಾಸಕ್ತಿಗಳಿಗೆ ಕೆಎಸ್‌ಎಂಎಸ್‌ಸಿಎಲ್‌ನ ವ್ಯವಸ್ಥಾಪಕ ನಿರ್ದೇಶಕರು ಮಣಿದಿರುವುದು ಇದರಿಂದಲೇ ವ್ಯಕ್ತವಾಗುತ್ತದೆ ಎನ್ನುತ್ತಾರೆ ಅಧಿಕಾರಿಯೊಬ್ಬರು.