ಏರೋಸ್ಪೇಸ್‌ ಪಾರ್ಕ್‌ನಲ್ಲಿ ಪಾಲನೆಯಾಗದ ಮೀಸಲಾತಿ; ಸಾಮಾನ್ಯರಿಗೆ ಮನ್ನಣೆ, ದಲಿತ ಉದ್ದಿಮೆದಾರರಿಗೆ ವಂಚನೆ

ಬೆಂಗಳೂರು; ಬೆಂಗಳೂರು ನಗರ ಜಿಲ್ಲೆಯ ಹೈಟೆಕ್‌ ಡಿಫೆನ್ಸ್‌ ಏರೋಸ್ಪೇಸ್‌ ಪಾರ್ಕ್‌ ಮೊದಲ ಹಂತಕ್ಕೆ ಭೂ ಸ್ವಾಧೀನಗೊಂಡಿರುವ ಜಮೀನಿನಲ್ಲಿ ನಿವೇಶನಗಳ ಹಂಚಿಕೆಯಲ್ಲಿ ಮೀಸಲಾತಿ ಪಾಲನೆಯಾಗಿಲ್ಲ ಎಂಬುದನ್ನು   ಕರ್ನಾಟಕ ವಿಧಾನಮಂಡಲದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣ ಸಮಿತಿಯು ಹೊರಗೆಡವಿದೆ.

 

ಹದಿನಾರನೇ ವಿಧಾನಸಭೆಗೆ ಶಾಸಕ ಪಿ ಎಂ ನರೇಂದ್ರಸ್ವಾಮಿ ಅಧ್ಯಕ್ಷತೆಯ  ಸಮಿತಿಯು ಸಲ್ಲಿಸಿರುವ ಎರಡನೇ ವರದಿಯು ಕೈಗಾರಿಕೆ, ವಾಣಿಜ್ಯ ಇಲಾಖೆ ಸೇರಿದಂತೆ ಹಲವು ಇಲಾಖೆಗಳ ವಿವಿಧ ಯೋಜನೆಗಳಲ್ಲಿ ಮೀಸಲಾತಿ ಪಾಲನೆಯಾಗದೇ ಇರುವುದನ್ನು ಪತ್ತೆ ಹಚ್ಚಿದೆ. ಅಲ್ಲದೇ  ಪರಿಶಿಷ್ಟರಿಗೆ ಹಲವು ಸೌಲಭ್ಯಗಳನ್ನು ಒದಗಿಸುವುದರಲ್ಲಿ ಆಗಿರುವ ವಂಚನೆಯ ಹಲವು ಪ್ರಕರಣಗಳನ್ನು ಬಹಿರಂಗಗೊಳಿಸಿದೆ.

 

ಮೀಸಲಾತಿ ಪಾಲನೆ ಮಾಡದ ಇಲಾಖೆಗಳ ಕಾರ್ಯವೈಖರಿಗೆ ಅಸಮಾಧಾನ ವ್ಯಕ್ತಪಡಿಸಿದೆ. ಅಧಿಕಾರಿಶಾಹಿ ತನ್ನ ಧೋರಣೆಯನ್ನು ಬದಲಾಯಿಸಿಕೊಳ್ಳದಿರುವುದಕ್ಕೆ ಕಿಡಿ ಕಾರಿದೆ.

 

ವಿಶೇಷವೆಂದರೇ ಬಿಜೆಪಿ ಶಾಸಕ ಎಂ ಪಿ ಕುಮಾರಸ್ವಾಮಿ ಅವರು  ಇದೇ ಸಮಿತಿ ಅಧ್ಯಕ್ಷರಾಗಿದ್ದಾಗಲೂ ನೀಡಿದ್ದ ವರದಿಯಲ್ಲಿಯೂ ಪರಿಶಿಷ್ಟರಿಗೆ ಆಗಿರುವ ವಂಚನೆ ಕುರಿತು ವಿವರಿಸಿತ್ತು. ಮೀಸಲಾತಿ ಪಾಲನೆ ಸೇರಿದಂತೆ ಇನ್ನಿತರೆ ಸೌಲಭ್ಯಗಳನ್ನು ಒದಗಿಸುವ ಸಂಬಂಧ ಸಮಿತಿಯು ಮಾಡಿದ್ದ ಶಿಫಾರಸ್ಸುಗಳನ್ನು ಇಲಾಖೆಗಳು ಇದುವರೆಗೂ ಜಾರಿಗೊಳಿಸಿರಲಿಲ್ಲ.

 

ಹೈಟೆಕ್‌ ಡಿಫೆನ್ಸ್‌ ಏರೋಸ್ಪೇಸ್‌ ಪಾರ್ಕ್‌ ಸೇರಿದಂತೆ ರಾಜ್ಯದಾದ್ಯಂತ ಕೈಗಾರಿಕೆ, ವಿಶೇಷ ವಲಯ ರಚನೆ ಸಂಬಂಧ ಸ್ವಾಧೀನಪಡಿಸಿಕೊಂಡ ಭೂಮಿ ಹಂಚಿಕೆ ಸಂದರ್ಭದಲ್ಲಿ ಸಾಮಾನ್ಯ ಜನಾಂಗದವರಿಗೆ ಪ್ರಥಮ ಆದ್ಯತೆ ನೀಡಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಜನಾಂಗದವರಿಗೆ ವಂಚನೆ ಮಾಡಲಾಗುತ್ತಿರುವುದನ್ನು ಸಮಿತಿಯು ಹೊರಗೆಡವಿತ್ತು.

 

2021-22ನೇ ಸಾಲಿಗೆ ಸಂಬಂಧಿಸಿದಂತೆ ಸಮಿತಿಯು ವಿಧಾನಮಂಡಲಕ್ಕೆ 2022ರ ಸೆ.21ರಂದು ಸಲ್ಲಿಸಿರುವ ಐದನೇ ವರದಿಯಲ್ಲಿ ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡವನ್ನು ಹೇಗೆ ಶೋಷಿಸುತ್ತಿದೆ ಎಂಬುದರ ಕುರಿತು ವಿಶ್ಲೇಷಿಸಿತ್ತು.

 

ಬೆಂಗಳೂರು ನಗರ ಜಿಲ್ಲೆಗೆ ಸಂಬಂಧಿಸಿದಂತೆ ಹೈಟೆಕ್‌ ಡಿಫೆನ್ಸ್‌ ಏರೋಸ್ಪೇಸ್‌ ಪಾರ್ಕ್‌ ಮೊದಲನೇ ಹಂತಕ್ಕೆ ಒಟ್ಟು 2,737.1 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಂಡಿತ್ತು. ಈ ಪೈಕಿ 353.45 ಎಕರೆ ಹಂಚಿಕೆ ಮಾಡಬೇಕಿತ್ತು. ಆದರೆ ಕೇವಲ 193 ಎಕರೆಯನ್ನಷ್ಟೇ ಹಂಚಿಕೆ ಮಾಡಿರುವ ಇಲಾಖೆಯು ಇನ್ನೂ 90 ಎಕರೆಯನ್ನು ಹಂಚಿಕೆ ಮಾಡಿಲ್ಲ. ಹೀಗಾಗಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಕೇವಲ ಶೇ.22.65ರಷ್ಟೇ ಹಂಚಿಕೆಯಾದಂತಿದೆ. ನಿಯಮಾನುಸಾರ ಶೇ.24.1ರಷ್ಟು ಹಂಚಿಕೆ ಮಾಡುವಲ್ಲಿ ಇಲಾಖೆಯು ವಿಫಲವಾಗಿದೆ ಎಂಬ ಅಂಶವನ್ನು ವರದಿಯಲ್ಲಿ ಉಲ್ಲೇಖಿಸಿತ್ತು.

 

‘ಏರೋಸ್ಪೇಸ್‌ ಪಾರ್ಕ್‌ ಮೊದಲನೇ ಹಂತದಲ್ಲಿ ಪ.ಜಾತಿ ಜನಾಂಗದವರಿಗೆ ನಿರ್ದಿಷ್ಟಪಡಿಸಿದ ಶೇ.24.1ರಷ್ಟು ಭೂಮಿಯನ್ನು ಆದ್ಯತೆ ಮೇರೆಗೆ ಹಂಚಿಕೆ ಮಾಡದೇ ಸ್ವಾಧೀನಪಡಿಸಿಕೊಂಡಿರುವ ಭೂಮಿಯಲ್ಲಿ ಸಾಮಾನ್ಯ ಜನಾಂಗದವರಿಗೆ ಪ್ರಥಮ ಆದ್ಯತೆ ನೀಡಿ ಹಂಚಿಕೆ ಮಾಡಲಾಗಿದೆ. ಮೊದಲ ಹಂತದಲ್ಲಿ ಭೂಮಿ ಪಡೆಯಲು ಪ.ಜಾತಿ ಮತ್ತು ಪ.ಪಂಗಡದ ಜನಾಂಗದವರು ವಂಚಿತರಾಗಿದ್ದಾರೆ,’ ಎಂದು ಸಮಿತಿಯು ಗಂಭೀರವಾಗಿ ಪರಿಗಣಿಸಿತ್ತು.

 

ಇದಕ್ಕೆ ಸಂಬಂಧಿಸಿದಂತೆ ಕೈಗೊಂಡಿರುವ ಕ್ರಮಗಳ ಕುರಿತು ಪಿ ಎಂ ನರೇಂದ್ರಸ್ವಾಮಿ ಅಧ್ಯಕ್ಷತೆಯ ಸಮಿತಿಯು  ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದೆ. ಇದಕ್ಕೆ ಉತ್ತರಿಸಿರುವ ಇಲಾಖೆ ಅಧಿಕಾರಿಗಳು ಹೈಟೆಕ್‌ ಡಿಫೆನ್ಸ್‌ ಏರೋಸ್ಪೇಸ್‌ ಪಾರ್ಕ್‌ನ ಎರಡನೇ ಹಂತದಲ್ಲಿ ಸರಿದೂಗಿಸಲು ಯತ್ನಿಸಲಾಗುತ್ತಿದೆ ಎಂದು ಸಮಜಾಯಿಷಿ ನೀಡಿರುವುದು ವರದಿಯಿಂದ ಗೊತ್ತಾಗಿದೆ.

 

‘ಈ ಹಿಂದೆ 353.45 ಎಕರೆ ಹಂಚಿಕೆ ಮಾಡಬೇಕೆಂದು ತೀರ್ಮಾನಿಸಿದ್ದರ ಪೈಕಿ 193 ಎಕರೆ ಹಂಚಿಕೆ ಮಾಡುವಾಗ ದೂರುಗಳು ಬಂದಿದ್ದವು. 160 ಎಕರೆ ಪಡೆಯಲಾಗಿದ್ದು ಪ್ರಥಮವಾಗಿ 90 ಎಕರೆಗೆ ಸಂಬಂಧಿಸಿದಂತೆ ಸಭೆ ಮಾಡಿ ಹಂಚಿಕೆ ಮಾಡಲಾಗಿದೆ. ಅದರಲ್ಲಿ 70 ಎಕರೆ ಕಡಿಮೆಯಾಗಿದೆ. ಫೇಸ್‌ 2 ರಲ್ಲಿ 690 ಎಕರೆಯಲ್ಲಿ  ಶೇ.24.1ರಷ್ಟು ಪ್ರಕಾರ 200 ಎಕರೆ ಕೊಟ್ಟಿದ್ದಾರೆ. ಫೇಸ್‌ 2ರಲ್ಲಿ ಸರಿದೂಗಿಸಲು ವ್ಯವಸ್ಥೆ ಮಾಡಲಾಗುತ್ತಿದೆ,’ ಎಂದು ಅಧಿಕಾರಿಗಳು ವಿವರಣೆ ನೀಡಿರುವುದು ತಿಳಿದು ಬಂದಿದೆ.

 

ಎರಡನೇ ಹಂತದಲ್ಲಿ ಹರಳೂರು ಮುದ್ದೇನಹಳ್ಳಿಯಲ್ಲಿ ದೊಡ್ಡ ದೊಡ್ಡ ಫ್ಲಾಟ್‌ಗಳನ್ನು ರಚಿಸಿರುವ ಕಾರಣ 20 ಎಕರೆ ಜಾಗ ಕೊರತೆಯಾಗಿದೆ. ಹೀಗಾಗಿ ದೇವನಹಳ್ಳಿಯಲ್ಲಿರುವ ಜಿಲ್ಲಾಧಿಕಾರಿಗಳ ಕಚೇರಿಯ ಹಿಂಭಾಗದಲ್ಲಿ ಐಟಿಐಆರ್‌ ಪಾರ್ಕ್‌ ಡೆವಲೆಪ್‌ ಮಾಡಲಾಗುತ್ತಿದೆ. ಈ ಪ್ರದೇಶದಲ್ಲಿ ಮೀಸಲಾತಿ ಪ್ರಮಾಣವನ್ನು ಸರಿದೂಗಿಸಲಾಗುವುದು ಎಂದು ವಿವರಣೆ ನೀಡಿದೆ.

 

2009ರಲ್ಲಿ ಇತರರಿಗೆ 20,785 ಎಕರೆ ಹಂಚಿಕೆ ಮಾಡಲಾಗಿತ್ತು. ಪರಿಶಿಷ್ಟ ಜಾತಿಯವರಿಗೆ 198 ಎಕರೆ ಮಾತ್ರ ನೀಡಲಾಗಿತ್ತು. ಶೇ.50ರಷ್ಟು ಸಹಾಯ ಧನ ನಂತರ ಮೀಸಲಾತಿ ಬಂದಿದೆ. 2020ರಲ್ಲಿ   ಶೇ.18ರಷ್ಟು ಹಂಚಿಕೆ ಮಾಡಲಾಗಿದೆ. ಈ ಹಿಂದೆಯೂ ಸಹ ಸಮಿತಿಯಲ್ಲಿ ಚರ್ಚೆಯಾಗಿತ್ತು. ಅದರ ಪ್ರಕಾರ ಶೇ.21ರಷ್ಟು ಈ ವರ್ಗದವರಿಗೆ ಹಂಚಿಕೆ ಮಾಡಬೇಕು ಎಂದು ಸೂಚಿಸಲಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

 

ಕೆಐಎಡಿಬಿ ಪ್ರಾರಂಭವಾದ ದಿನದಿಂದ 2009ರವರೆಗೆ ಹಂಚಿಕೆ ಮಾಡಿರುವ ಕೈಗಾರಿಕೆ ಪ್ರದೇಶದಲ್ಲಿ ಅತ್ಯಂತ ಕಡಿಮೆ ಪ್ರಮಾಣದಲ್ಲಿ ಅಂದರೆ ಕೇವಲ ಶೇ.0.7ರಷ್ಟು ಮಾತ್ರ ಪರಿಶಿಷ್ಟ ಉದ್ದಿಮೆದಾರರಿಗೆ ಹಂಚಿಕೆ ಮಾಡಲಾಗಿದೆ. 2009ರ ನಂತರ ಮೀಸಲಾತಿ ಪ್ರಕಾರ ಶೇ.24.1ರಷ್ಟು ಮೀಸಲಾತಿ ಅಳವಡಿಸಿಕೊಳ್ಳದೇ ಕಾಯ್ದೆ ವಿರುದ್ಧವಾಗಿ ಶೇ.22.65ಷ್ಟನ್ನೇ 2022ರವರೆಗೂ ಮುಂದುವರೆಸಿದೆ.

 

ಅಲ್ಲದೇ ಬೆಂಗಳೂರು ನಗರ, ಗ್ರಾಮಾಂತರ, ಕೋಲಾರ ಜಿಲ್ಲೆಯಲ್ಲಿನ ಸುಮಾರು 12 ಕೈಗಾರಿಕೆ ಪ್ರದೇಶಗಳಲ್ಲಿ ಮೀಸಲಾತಿ ನಿಗದಿತ ಪ್ರಮಾಣಕ್ಕಿಂತ ಕಡಿಮೆ ಹಂಚಿಕೆಯಾಗಿದೆ. ಹಾಗೆಯೇ ಇವೇ ಕೈಗಾರಿಕೆ ಪ್ರದೇಶಗಳಲ್ಲಿ ಪರಿ‍ಶಿಷ್ಟರಲ್ಲದವರಿಗೆ ಹೆಚ್ಚಾಗಿ ಹಂಚಿಕೆ ಮಾಡಲಾಗಿದೆ ಎಂಬುದನ್ನೂ ಸಮಿತಿಯು ಪತ್ತೆ ಹಚ್ಚಿದೆ.

 

ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಸಮಿತಿಗೆ ಒದಗಿಸಿರುವ ಮಾಹಿತಿ ಪ್ರಕಾರ 2018ರಿಂದ 2021ರವರೆಗೆ 3 ವರ್ಷಗಳವರೆಗೆ ಸಮೀಕ್ಷೆ ನಡೆದಿದೆ. ಶೇ.48ರಷ್ಟು ದುರುಪಯೋಗವಾಗಿದೆ ಎಂದು ಸಮೀಕ್ಷೆಯು ಹೇಳಿದೆ.

ವ್ಯಾಜ್ಯದಲ್ಲಿರುವ ಜಮೀನು ಹಂಚಿಕೆ; ದಲಿತರು ಉದ್ಯಮಿಗಳಾಗದಂತೆ ತಡೆಗಟ್ಟುವ ಹುನ್ನಾರ

 

ಹಾಗೆಯೆ ಪ.ಜಾತಿ ಮತ್ತು ಪ.ಪಂಗಡದವರಿಗೆ ಭೂಮಿ ಹಂಚಿಕೆ ಮಾಡಲು ವ್ಯಾಜ್ಯರಹಿತ ಭೂಮಿಯನ್ನು ಗುರುತಿಸಿ ಅವರುಗಳಿಗೆ ಮೊದಲ ಆದ್ಯತೆ ಮೇರೆಗೆ ಆಯಾಯ ಹಂತಗಳಲ್ಲಿಯೇ ಹಂಚಿಕೆ ಮಾಡಬೇಕಿತ್ತು. ಕಾಯ್ದೆ ಉಲ್ಲಂಘಿಸಿ ಭೂಮಿ ಹಂಚಿಕೆಯಲ್ಲಿ ಕೊರತೆಯುಂಟು ಮಾಡಿದ ಅಧಿಕಾರಿಗಳ ವಿರುದ್ಧ ಶಿಸ್ತು, ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸಮಿತಿಯು ನಿರ್ದೇಶಿಸಿದೆ.

 

 

ಲ್ಯಾಂಡ್‌ ಆಡಿಟ್‌ ಕಮಿಟಿಯಿಂದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನಾಂಗದವರಿಗೆ ಹಂಚಿಕೆಗೆ ನಿಗದಿಯಾಗಿದ್ದ 2 ಎಕರೆ ಭೂಮಿಯನ್ನು ಏಕ ಗವಾಕ್ಷಿ ಸಮಿತಿಯು ಒಂದು ಎಕರೆಗೆ ಇಳಿಸಿ ತಿದ್ದುಪಡಿ ಮಾಡಿರುವುದಕ್ಕೆ ತೀವ್ರವಾಗಿ ವಿರೋಧಿಸಿರುವ ಸಮಿತಿಯು ‘2 ಎಕರೆ ಭೂಮಿಯನ್ನು ಒಂದು ಎಕರೆಗೆ ಇಳಿಸಿರುವುದ್ನನು ಪುನರ್‌ ಪರಿಶೀಲಿಸಬೇಕು. ನಿಗದಿಪಡಿಸಿರುವಂತೆ 2 ಎಕರೆ ಭೂಮಿಯನ್ನು ಹಂಚಿಕೆ ಮಾಡಲು ಕ್ರಮವಹಿಸಬೇಕು,’ ಎಂದು ನಿರ್ದೇಶಿಸಿದೆ.

SUPPORT THE FILE

Latest News

Related Posts