70 ಲಕ್ಷ ರೈತರಿಗೆ ಪರಿಹಾರ ಬಾಕಿ; ಸಿಬ್ಬಂದಿ ಕೊರತೆ ನೆಪವೊಡ್ಡಿದ ಕಾಂಗ್ರೆಸ್‌ ಸರ್ಕಾರ

ಬೆಂಗಳೂರು; ಬರ ಪರಿಸ್ಥಿತಿ ನಿರ್ವಹಣೆ ಮಾಡುವಲ್ಲಿ ವಿಫಲವಾಗಿದೆ ಎಂದು ಪ್ರತಿಪಕ್ಷಗಳು ಆರೋಪಿಸುತ್ತಿರುವ ನಡುವೆಯೇ ರಾಜ್ಯದಲ್ಲೀಗ ಅಂದಾಜು 70 ಲಕ್ಷ ರೈತರಿಗೆ ಪರಿಹಾರ ಪಾವತಿಸಲು ಸೂಕ್ತ ಸಿಬ್ಬಂದಿ ಕೊರತೆ ಇದೆ ಎಂದು ರಾಜ್ಯ ಕಾಂಗ್ರೆಸ್‌ ಸರ್ಕಾರವು ನೆಪ ಒಡ್ಡಿರುವುದು ಇದೀಗ ಬಹಿರಂಗವಾಗಿದೆ.

 

ಬರಪೀಡಿತ ಪ್ರದೇಶಗಳ ರೈತರಿಗೆ ಪರಿಹಾರ ನೀಡಲು 105 ಕೋಟಿ ರು. ಬಿಡುಗಡೆ ಮಾಡಿ 2024ರ ಜನವರಿ 5ರಂದು ಆದೇಶ ಹೊರಡಿಸಿರುವ ದಿನದಂದೇ 70 ಲಕ್ಷ ರೈತರಿಗೆ ಪರಿಹಾರ ಪಾವತಿಸಲು ಸಿಬ್ಬಂದಿ ಕೊರತೆ ಎದುರಾಗಿದೆ ಎಂದು ಕಂದಾಯ ಇಲಾಖೆಯು ಜಂಟಿ ಕಾರ್ಯದರ್ಶಿಗೆ ಅನಧಿಕೃತ ಟಿಪ್ಪಣಿ (ಕಂಇ 545 ಟಿಎನ್‌ಆರ್‍‌ 2023, ದಿನಾಂಕ 05.01.2024) ಹೊರಡಿಸಿದ್ದಾರೆ.

 

ಕಂದಾಯ ಇಲಾಖೆಯ ಸರ್ಕಾರದ ಉಪ ಕಾರ್ಯದರ್ಶಿಯು ಹೊರಡಿಸಿರುವ ಅನಧಿಕೃ ಟಿಪ್ಪಣಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ಕಂದಾಯ ಇಲಾಖೆಯ (ವಿಪತ್ತು ನಿರ್ವಹಣೆ) ವ್ಯಾಪ್ತಿಯಲ್ಲಿ ಕೆಎಸ್‌ಡಿಎಂಎ ಆಯುಕ್ತರನ್ನೇ ಬಟಾವಡೆ ಮಾಡುವ ಅಧಿಕಾರಿ ಎಂದು ಘೋಷಿಸಿ 2023ರ ಡಿಸೆಂಬರ್‍‌ 11ರಂದೇ ಆದೇಶ ಹೊರಡಿಸಿತ್ತು. ಈ ಆದೇಶದ ಪ್ರಕಾರ ಅಂದಾಜು 70 ಲಕ್ಷ ರೈತರಿಗೆ ಪರಿಹಾರ ಪಾವತಿಸಬೇಕಾಗಿತ್ತು. ಆದರೀಗ ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಕಂದಾಯ ಇಲಾಖೆಯಲ್ಲಿ ಸೂಕ್ತ ಸಿಬ್ಬಂದಿ ಇಲ್ಲ ಎಂಬ ಅಂಶವನ್ನು ಮುಂದಿರಿಸಿರುವುದು ಟಿಪ್ಪಣಿಯಿಂದ ತಿಳಿದು ಬಂದಿದೆ.

 

ಅನಧಿಕೃತ ಟಿಪ್ಪಣಿಯಲ್ಲೇನಿದೆ?

 

ಕಂದಾಯ ಇಲಾಖೆ (ವಿಪತ್ತು ನಿರ್ವಹಣೆ) ವ್ಯಾಪ್ತಿಯಲ್ಲಿ ಬರುವ ಕೆಎಸ್‌ಡಿಎಂಎ ಆಯುಕ್ತರನ್ನು ಬಟಾವಡೆ ಮಾಡುವ ಅಧಿಕಾರಿ ಎಂದು 2023ರ ಡಿಸೆಂಬರ್‍‌ 11ರಂದು ಘೋಷಿಸಿ ಆದೇಶ ಹೊರಡಿಸಲಾಗಿದೆ. ಈ ಆದೇಶದಂತೆ ಅಂದಾಜು 70 ಲಕ್ಷ ರೈತರಿಗೆ ಪರಿಹಾರ ಪಾವತಿಸಬೇಕಿದೆ. ಭೌತಿಕವಾಗಿ ಬಿಲ್‌ ತಯಾರಿಸಲು, ಕೆ2 ಮೂಲಕ ಖಜಾನೆಗೆ ಸಲ್ಲಿಸಲು, ಡಿಬಿಡಿ, ಫ್ರೂಟ್ಸ್‌ ಐಡಿ , ಭೂಮಿ ಉಸ್ತುವಾರಿ ಕೋಶದೊಂದಿಗೆ ಸಂವಹನ ಕೆಲಸಗಳನ್ನು ಮಾಡಲು ಸೂಕ್ತ ಸಿಬ್ಬಂದಿ ಅಗತ್ಯವಿದೆ. ಹೀಗಾಗಿ ವಿಪತ್ತು ನಿರ್ವಹಣೆ ವ್ಯಾಪ್ತಿಯಲ್ಲಿನ ಸಂಸ್ಥೆಗಳಲ್ಲಿ ತಹಶೀಲ್ದಾರ್‍‌ ವೇತನ ಶ್ರೇಣಿಯ 11 ಮಂದಿಯನ್ನು ನಿಯೋಜಿಸಬೇಕು ಎಂದು ಕೋರಿರುವುದು ಟಿಪ್ಪಣಿಯಿಂದ ಗೊತ್ತಾಗಿದೆ.

 

ಬರ ನಿರ್ವಹಣೆ ಕೈಪಿಡಿ ಪ್ರಕಾರ ರಾಜ್ಯದ 236 ತಾಲೂಕುಗಳ ಪೈಕಿ 223 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದೆ. ಕೇಂದ್ರ ಸರ್ಕಾರದ ಮಾರ್ಗಸೂಚಿಗಳ ಅನ್ವಯ ಶೇ.33ಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಅಧಿಕಾರಿಗಳ ಜಂಟಿ ಸಮೀಕ್ಷೆಯಲ್ಲಿ ವರದಿ ತಯಾರಿಸಿದ್ದರು. ಇದರ ಪ್ರಕಾರ 46.11 ಲಕ್ಷ ಹೆಕ್ಟೇರ್‍‌ ಕೃಷಿ ಹಾಗೂ 2.06 ಲಕ್ಷ ಹೆಕ್ಟೇರ್‍‌ ತೋಟಗಾರಿಕೆ ಸೇರಿದಂತೆ ಒಟ್ಟಾರೆ 48.17 ಲಕ್ಷ ಹೆಕ್ಟೇರ್‍‌ ಬೆಳೆ ಹಾನಿಯಾಗಿದೆ.

 

ಇದರಲ್ಲಿ 40.72 ಲಕ್ಷ ಹೆಕ್ಟೇರ್‍‌ ಮಳೆಯಾಶ್ರಿತ, 7.39 ಲಕ್ಷ ಹೆಕ್ಟೇರ್‍‌ ನೀರಾಔರಿ, ಹಾಗೂ 0.07 ಲಕ್ಷ ಹೆಕ್ಟೇರ್‍‌ ಬಹುವಾರ್ಷಿಕ ಬೆಳಹಾನಿ ಆಗಿದೆ. ಎನ್‌ಡಿಆರ್‍‌ಎಫ್‌ ಅಡಿಯಲ್ಲಿ 4,663.12 ಕೋಟಿ ರು.ಗಳ ಆರ್ಥಿಕ ನೆರವನ್ನು ನೀಡಬೇಕು ಎಂದು ರಾಜ್ಯ ಸರ್ಕಾರವು ಕೇಂದ್ರಕ್ಕೆ ಪತ್ರ ಬರೆದಿದೆ. ಮಳೆಯಾಶ್ರಿತ ಬೆಳೆಗೆ ಪ್ರತಿ ಹೆಕ್ಟೇರ್‍‌ 8,500 ರು., ನೀರಾವರಿ ಬೆಳೆಗೆ 17,000 ರು., ಬಹುವಾರ್ಷಿಕ ಬೆಳೆಗೆ 22,500 ರು. ಎಂದು ಇನ್‌ಪುಟ್‌ ಸಬ್ಸಿಡಿ ನಿಗದಿಪಡಿಸಿದೆ.

 

ಕೇಂದ್ರ ಸರ್ಕಾರದ ಅನುದಾನಕ್ಕಾಗಿ ಕಾಯದೇ ಹಿಂದಿನ ಬಿಜೆಪಿ ಸರ್ಕಾರವು ಎಸ್‌ಡಿಆರ್‌ಎಫ್ ಮಾರ್ಗಸೂಚಿ ದರಕ್ಕಿಂತಲೂ ಎರಡು ಪಟ್ಟು ಹೆಚ್ಚಳ ಮಾಡಿತ್ತು. ಮಳೆಯಾಶ್ರಿತ ಪ್ರದೇಶದ ಬೆಳೆ ಹಾನಿಗೆ ಎಸ್‌ಡಿಆರ್‌ಎಫ್ ದರ 6,800 ರು ಇತ್ತಾದರೂ ಹಿಂದಿನ ಸರ್ಕಾರ 13,600 ರೂ.ಗಳನ್ನು ಪರಿಹಾರ ನೀಡಿತ್ತು. ನೀರಾವರಿ ಜಮೀನಿಗೆ ಎಸ್‌ಡಿಆರ್‌ಎಫ್ ಮಾರ್ಗಸೂಚಿ ದರ 13,500 ಇದ್ದರೆ, ಹಿಂದಿನ ಸರ್ಕಾರವು 25000 ರೂ. ಪರಿಹಾರ ನೀಡಿತ್ತು. ತೋಟಗಾರಿಕಾ ಬೆಳೆ ಹಾನಿಗೆ ಎಸ್‌ಡಿಆರ್‌ಎಫ್ ಮಾರ್ಗಸೂಚಿ ದರ 18,000 ರೂ. ಇದ್ದರೆ, 28,000 ರೂ. ಪರಿಹಾರವನ್ನು ಹಿಂದಿನ ಬಿಜೆಪಿ ಸರ್ಕಾರವು ನೀಡಿತ್ತು ಎಂಬುದು ದಾಖಲೆಯಿಂದ ಗೊತ್ತಾಗಿದೆ.

 

‘ರಾಜ್ಯದ ರೈತರಿಗೆ ಬರ ಪರಿಹಾರವಾಗಿ ಕೇವಲ 105 ಕೋಟಿ ರೂ. ಬಿಡುಗಡೆ ಮಾಡಲು ರಾಜ್ಯದ ರೈತರನ್ನು ಆರು ತಿಂಗಳು ಸತಾಯಿಸಬೇಕಾಗಿತ್ತಾ, 123 ತಾಲೂಕುಗಳು ಬರ ಪೀಡಿತ ಎಂದು ನೀವೇ ಘೋಷಣೆ ಮಾಡಿದ್ದು, ಅಷ್ಟು ದೊಡ್ಡ ಮಟ್ಟದ ಬರಕ್ಕೆ ಪ್ರತಿ ಹೆಕ್ಟೇರ್ ಗೆ ಕೇವಲ 2000 ರೂ. ನೀಡುತ್ತಿರುವುದೇಕೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಟ್ವೀಟ್‌ ಮಾಡಿದ್ದರು.

 

ರಾಜ್ಯದ 69 ಲಕ್ಷ ರೈತರ ಖಾತೆಗಳಿಗೆ ಆಧಾರ್ ಲಿಂಕ್ ಮಾಡಿರುವ ಮಾಹಿತಿ ಸರ್ಕಾರದ ಬಳಿ ಇದ್ದರೂ, ಸುಳ್ಳು ಹೇಳಿ ಜನರ ದಾರಿ ತಪ್ಪಿಸಿದ ಉದ್ದೇಶವೇನು ? ನಮ್ಮ ಅವಧಿಯಲ್ಲಿ 2022-23 ನೇ ಸಾಲಿನಲ್ಲಿ ಪ್ರವಾಹದಿಂದ 13.09 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಹಾನಿಯಾದ ಬೆಳೆಗೆ 14.63 ಲಕ್ಷ ರೈತರ ಖಾತೆಗೆ ನೇರವಾಗಿ 2,031 ಕೋಟಿ ರೂ.ಗಳನ್ನು 2 ತಿಂಗಳೊಳಗೆ ಜಮೆ ಮಾಡಲಾಗಿತ್ತು ಎಂದು ಬಸವರಾಜ ಬೊಮ್ಮಾಯಿ ಅವರು ಟ್ವೀಟ್‌ ಮಾಡಿದ್ದನ್ನು ಸ್ಮರಿಸಬಹುದು.

SUPPORT THE FILE

Latest News

Related Posts