ರಾಷ್ಟ್ರೋತ್ಥಾನದ ಬೆನ್ನಲ್ಲೇ ಜನಸೇವಾ ಟ್ರಸ್ಟ್‌ಗೂ 70 ಕೋಟಿ ರು.ಮೌಲ್ಯದ 35.33 ಎಕರೆ ಗೋಮಾಳ ಮಂಜೂರು

ಬೆಂಗಳೂರು; ಆಶ್ರಯ ಯೋಜನೆ ಮತ್ತು ಶಾಶ್ವತ ಪುನರ್‌ ವಸತಿ ಉದ್ದೇಶವೂ ಸೇರಿದಂತೆ ಇನ್ನಿತರೆ ಸಾರ್ವಜನಿಕ ಉದ್ದೇಶಗಳಿಗೆಂದು ಮೀಸಲಿರಿಸಿರುವ 40 ಎಕರೆ ವಿಸ್ತೀರ್ಣದ ಗೋಮಾಳ ಜಮೀನಿನ ಪೈಕಿ 35.33 ಎಕರೆ ಜಮೀನನ್ನು ಸಂಘ ಪರಿವಾರದ ಅಂಗ ಸಂಸ್ಥೆ ಎಂದು ಹೇಳಲಾಗಿರುವ ಜನಸೇವಾ ಟ್ರಸ್ಟ್‌ಗೆ ಮಂಜೂರು ಮಾಡಲು ಸಚಿವ ಸಂಪುಟ ಅನುಮೋದಿಸಿರುವುದು ವಿವಾದಕ್ಕೆ ದಾರಿಮಾಡಿಕೊಟ್ಟಿದೆ.

 

ಶೈಕ್ಷಣಿಕ ಉದ್ದೇಶದ ಹೆಸರಿನಲ್ಲಿ ರಾಜ್ಯದ ಬೆಂಗಳೂರು ನಗರ ಸೇರಿದಂತೆ ವಿವಿಧ ಜಿಲ್ಲೆ, ತಾಲೂಕು, ಹೋಬಳಿ ಮಟ್ಟದಲ್ಲಿ ರಾಷ್ಟ್ರೋತ್ಥಾನ ಪರಿಷತ್‌, ರಾಷ್ಟ್ರೋತ್ಥಾನ ಟ್ರಸ್ಟ್‌ಗೆ ಗೋಮಾಳ, ಸರ್ಕಾರಿ ಜಮೀನು ಮಂಜೂರು ಮಾಡಿರುವ ಬೆನ್ನಲ್ಲೇ ಬೆಂಗಳೂರು ದಕ್ಷಿಣ ತಾಲೂಕಿನ ತಾವರೆಕೆರೆ ಹೋಬಳಿಯ ಕುರುಬರಹಳ್ಳಿಯ ಸರ್ವೇ ನಂಬರ್‌ 89ರಲ್ಲಿ ಮೀಸಲಿರಿಸಿರುವ ಒಟ್ಟು ಗೋಮಾಳ ಪೈಕಿ  ಜನಸೇವಾ ಟ್ರಸ್ಟ್‌ಗೆ 35.33 ಎಕರೆ ಮಂಜೂರು ಮಾಡಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಅಧ್ಯಕ್ಷತೆಯಲ್ಲಿ ನಡೆದಿದ್ದ  ಸಚಿವ ಸಂಪುಟ ಸಭೆಯು  ಅನುಮೋದಿಸಿರುವುದು ಮುನ್ನೆಲೆಗೆ ಬಂದಿದೆ.

 

ಸದ್ಯ  ಜನಸೇವಾ ಟ್ರಸ್ಟ್‌ಗೆ ಮಂಜೂರಾಗಲಿರುವ ತಾವರೆಕೆರೆ ಹೋಬಳಿಯ ಕುರುಬರಹಳ್ಳಿಯಲ್ಲಿ ಕೃಷಿ ಜಮೀನು ಎಕರೆಯೊಂದಕ್ಕೆ ಸರ್ಕಾರಿ ಮಾರ್ಗಸೂಚಿ ಬೆಲೆಯು 1.20 ಕೋಟಿ ರು. ಇದೆ. ಇದರ ಪ್ರಕಾರ 35.33 ಎಕರೆಗೆ 42.09 ಕೋಟಿ ರು. ಆಗಲಿದೆ. ಹಾಗೆಯೇ ಮುಕ್ತ ಮಾರುಕಟ್ಟೆಯಲ್ಲಿ ಎಕರೆಯೊಂದಕ್ಕೆ 2 ಕೋಟಿ ರು. ಎಂದು ಅಂದಾಜಿಸಿದರೂ 35.33 ಗುಂಟೆಗೆ 70.66 ಕೋಟಿ ರು. ಮೌಲ್ಯವಿದೆ.

 

40 ಎಕರೆ ವಿಸ್ತೀರ್ಣದ ಗೋಮಾಳದಲ್ಲಿ ಆಶ್ರಯ ಯೋಜನೆಗಾಗಿ ರಾಜೀವ್‌ಗಾಂಧಿ ಗ್ರಾಮೀಣ ವಸತಿ ನಿಗಮ ಮತ್ತು ಶಾಶ್ವತ ಪುನರ್‌ ವಸತಿ ಉದ್ದೇಶಕ್ಕೆ ಕರ್ನಾಟಕ ಕೊಳೆಗೇರಿ ಅಭಿವೃದ್ದಿ ಮಂಡಳಿಗೂ ಜಮೀನು ಕಾಯ್ದಿರಿಸಿದೆ. ಅಲ್ಲದೆ ಈ ಎರಡೂ ನಿಗಮಗಳು ಈ ಜಮೀನಿನಲ್ಲಿ ಸ್ವಾಧೀನ ಹೊಂದಿರುವುದು 2020ರಲ್ಲಿ  ಮ್ಯುಟೇಷನ್‌ ದಾಖಲಾತಿಯಿಂದ ತಿಳಿದು ಬಂದಿದೆ.

 

ಆಶ್ರಯ, ಶಾಶ್ವತ ಪುನರ್‌ವಸತಿಗಾಗಿ ಮೀಸಲಿರಿಸಿರುವ ಬಗೆಗಿನ ಭೂಮಿ ತಂತ್ರಾಂಶದಲ್ಲಿರುವ ದಾಖಲೆ ಪ್ರತಿ

 

ಜನಸೇವಾ ಟ್ರಸ್ಟ್‌ ಅಡಿಯಲ್ಲಿಯೇ ಕಾರ್ಯನಿರ್ವಹಿಸುತ್ತಿರುವ ಜನಸೇವಾ ವಿಶ್ವಸ್ಥ ಮಂಡಳಿಗೆ 2009ರಲ್ಲಿ ಯಡಿಯೂರಪ್ಪ ಮೊದಲ ಬಾರಿ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿಯೂ 6 ಎಕರೆ ಜಮೀನನ್ನು ನೀಡಲಾಗಿತ್ತು. ಈ ಕುರಿತು ಮಹಾಲೇಖಪಾಲರು (ಸಿಎಜಿ) ಆಕ್ಷೇಪ ವ್ಯಕ್ತಪಡಿಸಿದ್ದರು. ಈ ವರದಿ ಅಧರಿಸಿ ಸಾರ್ವಜನಿಕ ಲೆಕ್ಕಪತ್ರ ಸಮಿತಿಯ ಅಧ್ಯಕ್ಷರಾಗಿದ್ದ ರಾಮಲಿಂಗಾರೆಡ್ಡಿ ಅವರು ಪರಿಶೀಲನೆಗೆ ಕೈಗೆತ್ತಿಕೊಂಡಿದ್ದರು.

 

ಸಾರ್ವಜನಿಕ ಲೆಕ್ಕಪತ್ರ ಸಮಿತಿಯು ಈ ಪ್ರಕರಣದ ಕುರಿತು ಪರಿಶೀಲನೆ ನಡೆಸುತ್ತಿರುವ ಬೆನ್ನಲ್ಲೇ ಇದೀಗ ಜನಸೇವಾ ಟ್ರಸ್ಟ್‌ಗೆ 35.33 ಎಕರೆ ವಿಸ್ತೀರ್ಣದ ಗೋಮಾಳ ಜಮೀನನ್ನು ಮಂಜೂರು ಮಾಡಿರುವುದು ಸಿಎಜಿ ಆಕ್ಷೇಪಣೆಗೆ ಒಳಗಾಗುವ ಸಾಧ್ಯತೆಗಳಿವೆ.

 

ಬೆಂಗಳೂರಿನ ದಕ್ಷಿಣ ತಾಲೂಕಿನ ಚನ್ನೇನಹಳ್ಳಿಯಲ್ಲಿರುವ ಜನಸೇವಾ ವಿಶ್ವಸ್ಥ ಮಂಡಳಿಗೆ ಶೈಕ್ಷಣಿಕ ಹಾಗೂ ಸಾಮಾಜಿಕ ಚಟುವಟಿಕೆಗಳಿಗಾಗಿ 2009ರ ಫೆಬ್ರುವರಿಯಲ್ಲಿ  6 ಎಕರೆಯನ್ನು ಮಂಜೂರು ಮಾಡಿತ್ತು. ಶೇ.50ರ ರಿಯಾಯಿತಿ ನೀಡಲಾಗಿದ್ದ ಮೂಲ ಆದೇಶವನ್ನು ಮಾರ್ಪಡಿಸಿದ್ದ ಅಂದಿನ ಸರ್ಕಾರವು ಶೇ. 75ರ ರಿಯಾಯಿತಿಯನ್ನಾಗಿ ಮಾರ್ಪಡಿಸಿತ್ತು.

 

ಹಂಚಿಕೆಯನ್ನು ಪಡೆದವರ ಕೋರಿಕೆ ಮೇರೆಗೆ ರಿಯಾಯಿತಿ ನೀಡಲಾಗಿತ್ತು ಎಂದು ಸರ್ಕಾರ ಹೇಳಿತ್ತಾದರೂ ಅಂತಹ ಕೋರಿಕೆ ಪತ್ರವು ದಾಖಲೆಗಳಲ್ಲಿ ಇರಲಿಲ್ಲ. ಭೂಮಿಯ ಮಾರ್ಗಸೂಚಿ ಮೌಲ್ಯವು ಎಕರೆಯೊಂದಕ್ಕೆ 45 ಲಕ್ಷ ರು. ಆಗಿತ್ತು. ಆದರೆ ಹೆಚ್ಚುವರಿಯಾಗಿ ನೀಡಿದ್ದ ರಿಯಾಯಿತಿಯು 67.50 ಲಲಕ್ಷ ರು ಗಳಾಗಿತ್ತು ಎಂದು ಸಿಎಜಿ ವರದಿಯಲ್ಲಿ ಪ್ರಸ್ತಾಪವಾಗಿತ್ತು.

 

ಬೆಂಗಳೂರು ನಗರ ಜಿಲ್ಲೆಯ ಯಲಹಂಕ ತಾಲೂಕಿನ ಹುರುಳಿಚಿಕ್ಕನಹಳ್ಳಿ ಗ್ರಾಮದಲ್ಲಿ 9.32 ಎಕರೆ ಗೋಮಾಳ, ಬೈಯಪ್ಪನಹಳ್ಳಿ, ಕಲ್ಬುರ್ಗಿಯಲ್ಲಿ 17 ಎಕರೆ , ಬಳ್ಳಾರಿ ನಗರದ ಕುವೆಂಪು ನಗರ ಬಡಾವಣೆಯಲ್ಲಿ ಸಿ ಎ ನಿವೇಶನವನ್ನು ರಾಷ್ಟ್ರೋತ್ಥಾನ ಪರಿಷತ್‌ ಈಗಾಗಲೇ ಮಂಜೂರು ಮಾಡಿಸಿಕೊಂಡಿದೆ.

ರಾಷ್ಟ್ರೋತ್ಥಾನ ಪರಿಷತ್‌, ಬಿಜೆಪಿ ಕಚೇರಿಗೆ ಗೋಮಾಳ, ಜಮೀನು ಹಂಚಿಕೆ ಸುತ್ತ ‘ದಿ ಫೈಲ್‌’ನ 13 ವರದಿಗಳು

 

ಹೊಸಪೇಟೆಯ ಜಂಬೂನಾಥನಹಳ್ಳಿಯಲ್ಲಿ 5 ಎಕರೆ ಜಮೀನನ್ನು ಮಂಜೂರು ಮಾಡಿಸಿಕೊಳ್ಳಲು ಸಲ್ಲಿಸಿರುವ ಪ್ರಸ್ತಾವನೆ ಸದ್ಯ ಚಾಲನೆಯಲ್ಲಿದೆ. ಈ ಮಧ್ಯೆ ಹಾವೇರಿಯಲ್ಲಿಯೂ 10 ಎಕರೆ ಮಂಜೂರಾತಿ ಸಂಬಂಧ ಪ್ರಸ್ತಾವನೆ ಸಲ್ಲಿಸಬೇಕು ಎಂದು ಹಾವೇರಿ ಜಿಲ್ಲಾಧಿಕಾರಿಗೆ 2022ರ ಆಗಸ್ಟ್‌ 8ರಂದು ಕಂದಾಯ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಪತ್ರ ಬರೆದಿರುವುದನ್ನು ಸ್ಮರಿಸಬಹುದು.

the fil favicon

SUPPORT THE FILE

Latest News

Related Posts