ಜನಸೇವಾ ಟ್ರಸ್ಟ್‌ಗೆ ಗೋಮಾಳ;80 ಕೋಟಿ ಬೆಲೆಯ 40 ಎಕರೆ ಇದ್ದರೂ 70 ಕೋಟಿ ಮೌಲ್ಯದ 35 ಎಕರೆ ಮಂಜೂರು

ಬೆಂಗಳೂರು; ಜನಸೇವಾ ಟ್ರಸ್ಟ್‌ ಈಗಾಗಲೇ ಚನ್ನೇನಹಳ್ಳಿಯಲ್ಲಿ ಅಂದಾಜು 80 ಕೋಟಿ ರು. ಬೆಲೆ ಬಾಳುವ 40.07 ಎಕರೆ ಜಮೀನು ಹೊಂದಿದ್ದರೂ ಚನ್ನೇನಹಳ್ಳಿಗೆ ಹೊಂದಿಕೊಂಡಿರುವ  ಬೆಂಗಳೂರು ದಕ್ಷಿಣ ತಾಲೂಕಿನ ತಾವರೆಕೆರೆ ಹೋಬಳಿಯ ಕುರುಬರಹಳ್ಳಿಯಲ್ಲಿಯೂ 35.33 ಎಕರೆ ವಿಸ್ತೀರ್ಣದ ಗೋಮಾಳ ಜಮೀನನ್ನು ಇದೇ ಟ್ರಸ್ಟ್‌ಗೆ ರಾಜ್ಯ ಬಿಜೆಪಿ ಸರ್ಕಾರವು ಮಂಜೂರು ಮಾಡಿರುವುದು ಚರ್ಚೆಗೆ ಗ್ರಾಸವಾಗಿದೆ.

 

ಸರ್ಕಾರಿ ಜಮೀನುಗಳ ಭೂ ಮಂಜೂರಾತಿಗಾಗಿ ಸಲ್ಲಿಸುವ ಪ್ರಸ್ತಾವನೆಗಳ ಸಂಬಂಧ ಬೆಂಗಳೂರು ದಕ್ಷಿಣ ತಾಲೂಕಿನ ತಹಶೀಲ್ದಾರ್‌ ಸಿ ರಾಮಲಕ್ಷ್ಮ್ಯಯ್ಯ ಎಂಬುವರು ಸರ್ಕಾರಕ್ಕೆ ಸಲ್ಲಿಸಿರುವ ಚೆಕ್‌ಲಿಸ್ಟ್‌ನಲ್ಲಿ ಈ ಮಾಹಿತಿ ಇದೆ. ಚೆಕ್‌ ಲಿಸ್ಟ್‌ ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ಜನಸೇವಾ ಟ್ರಸ್ಟ್‌ನ ಭಾಗವಾಗಿರುವ ಜನಸೇವಾ ವಿಶ್ವಸ್ಥ ಮಂಡಳಿಯು ಚನ್ನೇನಹಳ್ಳಿ ಗ್ರಾಮದ ಸರ್ವೇ ನಂಬರ್‌ 16ರಲ್ಲಿ 14.13 ಎಕರೆ, ಸರ್ವೆನಂಬರ್‌ 17/1ರಲ್ಲಿ 2.28 ಎಕರೆ, ಸರ್ವೆ ನಂಬರ್‌ 17/2ರಲ್ಲಿ 4-08 ಎಕರೆ, ಸರ್ವೆ ನಂಬರ್‌ 18/1ರಲ್ಲಿ 11-30 ಎಕರೆ, ಸರ್ವೆ ನಂಬರ್‌ 52/1ರಲ್ಲಿ 1-08 ಎಕರೆ, ಸರ್ವೆ ನಂಬರ್‌ 19ರಲ್ಲಿ 6-00 ಎಕರೆ ಸೇರಿ ಒಟ್ಟು 40-07 ಎಕರೆ ಜಮೀನು ಹೊಂದಿರುವುದು ಚೆಕ್‌ಲಿಸ್ಟ್‌ನಿಂದ ತಿಳಿದು ಬಂದಿದೆ.

 

ಚನ್ನೇನಹಳ್ಳಿ ಗ್ರಾಮದ ಸರ್ವೇ ನಂಬರ್‌ 16ರಲ್ಲಿ 14.13 ಎಕರೆಯು ಜನಸೇವಾ ಟ್ರಸ್ಟ್‌ನ ಭಾಗವಾಗಿರುವ ಜನಸೇವಾ ವಿಶ್ವಸ್ಥ ಮಂಡಳಿಯ ಹೆಸರಿನಲ್ಲಿದೆ ಎಂದು ಚೆಕ್‌ಲಿಸ್ಟ್‌ನಲ್ಲಿ ದಾಖಲೆ ಇದೆ. ಭೂಮಿ ತಂತ್ರಾಂಶದ ಮ್ಯುಟೇಷನ್‌ನಲ್ಲಿ ಇದೇ ಸರ್ವೆ ನಂಬರ್‌ನಲ್ಲಿರುವ 14.13 ಎಕರೆಯು ಜನಸೇವಾ ಕೇಂದ್ರದ ಹೆಸರಿನಲ್ಲಿದೆ.

 

 

 

ಹಾಗೆಯೇ ಸರ್ವೆ ನಂಬರ್‌ 18ರಲ್ಲಿ ಜನಸೇವಾ ಟ್ರಸ್ಟ್‌ ಹೆಸರಿನಲ್ಲಿಯೇ 11.30 ಎಕರೆ, ಸರ್ವೆ ನಂಬರ್‌ 19ರಲ್ಲಿ 9.13 ಎಕರೆ ಸರ್ಕಾರಿ ಗೋಮಾಳವಿದ್ದರೆ ಇದಕ್ಕೆ ಹೊಂದಿಕೊಂಡಂತಿರುವ 6.00 ಎಕರೆಯು ಶೈಕ್ಷಣಿಕ ಉದ್ದೇಶದ ಹೆಸರಿನಲ್ಲಿ ಜನಸೇವಾ ವಿಶ್ವಸ್ಥ ಮಂಡಳಿಯು ಹೊಂದಿರುವುದು ಭೂಮಿ ತಂತ್ರಾಂಶದಿಂದ ಗೊತ್ತಾಗಿದೆ.

 

ಚನ್ನೇನಹಳ್ಳಿಯಲ್ಲಿ ಸರ್ಕಾರಿ ಮಾರ್ಗಸೂಚಿ ಬೆಲೆ ಎಕರೆಗೆ 1.25 ಕೋಟಿ ರು. ಮೌಲ್ಯವಿದೆ. ಮಾರುಕಟ್ಟೆ ಮೌಲ್ಯ ಅಂದಾಜು 2 ಕೋಟಿ ಎಂದು ಪರಿಗಣಿಸಿದರೂ ಜನಸೇವಾ ಟ್ರಸ್ಟ್‌ನ ಜನವಿಶ್ವಸ್ಥ ಮಂಡಳಿಯು ಹೊಂದಿರುವ 40 ಎಕರೆಗೆ 80 ಕೋಟಿ ರು. ಮೌಲ್ಯವಾಗಲಿದೆ.

 

ಹಾಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ಶಾಸಕರಾಗಿದ್ದ ಅವಧಿಯಲ್ಲಿ (2011)ಯೂ ಜನಸೇವಾ ಟ್ರಸ್ಟ್‌ಗೆ ಚನ್ನೇನಹಳ್ಳಿಯ ಸರ್ವೆ ನಂಬರ್‌ 19ರಲ್ಲಿ 6 ಎಕರೆ ಜಮೀನು ಶೈಕ್ಷಣಿಕ ಉದ್ದೇಶಕ್ಕೆ ಮಂಜೂರು ಮಾಡಿಸಿಕೊಂಡಿತ್ತಾದರೂ ಆ ಜಾಗವನ್ನು ಬಳಸಿಕೊಳ್ಳದೆಯೇ ಖಾಲಿ ಬಿಟ್ಟಿದೆ ಎಂದು ಮಾತೃ ಫೌಂಡೇಷನ್‌ ಸರ್ಕಾರಕ್ಕೆ ದೂರನ್ನೂ ಸಲ್ಲಿಸಿತ್ತು.

 

‘ತಮ್ಮ ಸರ್ಕಾರ ಅಧಿಕಾರದಲ್ಲಿದ್ದಾಗ ಈ ರೀತಿ ಒಳಗೊಳಗೇ ಗೋಮಾಳ ಜಾಗವನ್ನು ಮಂಜೂರು ಮಾಡಿಸಿಕೊಂಡು ಹಾಗೇ ಇಟ್ಟಿರುತ್ತಾರೆ. ಆದರೆ ಅದೇ ಉದ್ದೇಶಕ್ಕೆ ಬಳಸುವುದಿಲ್ಲ. ಈಗಾಗಲೇ ಅವರ ಟ್ರಸ್ಟ್‌ನಲ್ಲಿ 45 ಎಕರೆ ಜಾಗವಿದೆ. ಶೇ.80ರಷ್ಟು ಜಾಗವನ್ನು ಬಳಸಿಕೊಂಡಿಲ್ಲ,’ ಎಂದು ಫೌಂಡೇಷನ್‌ ಸರ್ಕಾರಕ್ಕೆ ಸಲ್ಲಿಸಿದ್ದ ದೂರಿನಲ್ಲಿ ಪ್ರಸ್ತಾಪಿಸಿತ್ತು. ಆದರೂ ಕಂದಾಯ ಸಚಿವ ಆರ್‌ ಅಶೋಕ್‌ ಅವರು ಜನಸೇವಾ ಟ್ರಸ್ಟ್‌ಗೆ 35 ಎಕರೆ ಜಮೀನನ್ನು ಮಂಜೂರು ಮಾಡಿಸುವಲ್ಲಿ  ಯಶಸ್ವಿಯಾಗಿದ್ದಾರೆ.

the fil favicon

SUPPORT THE FILE

Latest News

Related Posts