ಗೋಮಾಳ ಮಂಜೂರಿಗೆ ತಹಶೀಲ್ದಾರ್‌ರಿಂದಲೇ ಲಂಚಕ್ಕೆ ಬೇಡಿಕೆ!; ಎ ಜಿ ಗಮನದಲ್ಲಿದ್ದರೂ ಕ್ರಮ ವಹಿಸದ ಸರ್ಕಾರ

ಬೆಂಗಳೂರು; ಸಂಘ ಪರಿವಾರದ ಅಂಗಸಂಸ್ಥೆಯಾಗಿರುವ ಜನಸೇವಾ ಟ್ರಸ್ಟ್‌ 35.33 ಎಕರೆ ವಿಸ್ತೀರ್ಣದ ಗೋಮಾಳ ಜಮೀನು ಮಂಜೂರಾತಿಗಾಗಿ ಅರ್ಜಿ ಸಲ್ಲಿಸುವ ಮುನ್ನವೇ ಇದೇ ಗೋಮಾಳದಲ್ಲಿ ಜಮೀನು ಮಂಜೂರಿಗಾಗಿ ಅರ್ಜಿ ಸಲ್ಲಿಸಿದ್ದ ಖಾಸಗಿ ಸಂಘವೊಂದರಿಂದ ಕಂದಾಯ ಇಲಾಖೆಯ ತಹಶೀಲ್ದಾರ್‌ ಸೇರಿದಂತೆ ಸ್ಥಳೀಯ ಅಧಿಕಾರಿಗಳು ಲಂಚಕ್ಕೆ ಬೇಡಿಕೆ ಇರಿಸಿದ್ದರು. ಇದು ರಾಜ್ಯದ ಅಡ್ವೋಕೇಟ್‌ ಜನರಲ್‌ ಪ್ರಭುಲಿಂಗ ನಾವದಗಿ ಅವರ ಗಮನದಲ್ಲೂ ಇತ್ತು ಎಂಬ ಅಂಶವು ಇದೀಗ ಬಹಿರಂಗವಾಗಿದೆ.

 

 

ಈ ಸಂಬಂಧ ‘ದಿ ಫೈಲ್‌’ಗೆ ಕೆಲ ಮಹತ್ವದ ದಾಖಲೆಗಳು ಲಭ್ಯವಾಗಿವೆ.

 

ಬೆಂಗಳೂರು ನಗರ ಜಿಲ್ಲೆಯ ದಕ್ಷಿಣ ತಾಲೂಕಿನ ತಾವರೆಕೆರೆ ಹೋಬಳಿಯ ಕುರುಬರಹಳ್ಳಿಯಲ್ಲಿ ಗೋಶಾಲೆಗಳನ್ನು ನಡೆಸುತ್ತಿರುವ ಇತರೆ ಸಂಘ ಸಂಸ್ಥೆಗಳು ಗೋಮಾಳ ಜಮೀನಿಗಾಗಿ ಅರ್ಜಿ ಸಲ್ಲಿಸಿದ್ದವು. ಈ ಪೈಕಿ ಮಾತೃ ಫೌಂಡೇಷನ್‌ ಕೂಡ ಒಂದಾಗಿತ್ತು. ಅಸಹಾಯಕ ಹಾಗೂ ಕಸಾಯಿಖಾನೆಗೆ ಹೋಗುವ ಗೋವುಗಳನ್ನು ರಕ್ಷಿಸಿ ಹಸು, ಎಮ್ಮೆ ಇನ್ನಿತರೆ ಪ್ರಾಣಿಗಳಿಗೆ ಮೇವು, ನೀರು, ವೈದ್ಯಕೀಯ ಸೇವೆ ನೀಡುವ ಉದ್ದೇಶದಿಂದ 24 ಎಕರೆ ಜಮೀನನ್ನು ಮಂಜೂರಿಗಾಗಿ 2020ರಲ್ಲೇ ಅರ್ಜಿ ಸಲ್ಲಿಸಿತ್ತು.

 

ಆದರೆ ಈ ಅರ್ಜಿಯನ್ನು ಕಂದಾಯ ಇಲಾಖೆ ಅಧಿಕಾರಿಗಳು ಪರಿಗಣಿಸಿರಲಿಲ್ಲ. ಮತ್ತು ಜಮೀನು ಮಂಜೂರಾತಿಗಾಗಿ ಸಲ್ಲಿಸಿದ್ದ ಅರ್ಜಿ ಸಂಬಂಧ ಕಂದಾಯ ಇಲಾಖೆಯು ಯಾವುದೇ ಹಿಂಬರಹವನ್ನೂ ನೀಡಿರಲಿಲ್ಲ ಮತ್ತು ಮಾತೃ ಫೌಂಡೇಷನ್‌ ನೀಡಿದ್ದ ಅರ್ಜಿಯನ್ನು ಕಡತದಲ್ಲಿಯೂ ಇರಿಸಿರಲಿಲ್ಲ ಎಂಬುದು ಲಭ್ಯವಿರುವ ದಾಖಲೆಗಳಿಂದ ಗೊತ್ತಾಗಿದೆ.

 

ತಹಶೀಲ್ದಾರ್‌ರಿಂದಲೇ ಲಂಚದ ಬೇಡಿಕೆ!

 

ಒಟ್ಟು 24 ಎಕರೆ ವಿಸ್ತೀರ್ಣ ಗೋಮಾಳ ಮಂಜೂರಾತಿಗಾಗಿ ಮಾತೃ ಫೌಂಡೇಷನ್‌ ಸಲ್ಲಿಸಿದ್ದ ಅರ್ಜಿಯನ್ನು ಪರಿಗಣಿಸಲು ಸ್ಥಳೀಯ ತಹಶೀಲ್ದಾರ್‌ ಮತ್ತು ಇತರೆ ಸ್ಥಳೀಯ ಅಧಿಕಾರಿಗಳು ಲಂಚಕ್ಕೆ ಬೇಡಿಕೆ ಇರಿಸಿದ್ದರು ಎಂಬ ಆರೋಪವೂ ಕೇಳಿ ಬಂದಿದೆ. ಈ ಸಂಬಂಧ ಮಾತೃ ಫೌಂಡೇಷನ್‌ ನೇರವಾಗಿ ರಾಜ್ಯದ ಅಡ್ವೋಕೇಟ್‌ ಜನರಲ್‌ ಪ್ರಭುಲಿಂಗ ನಾವದಗಿ ಅವರಿಗೆ 2021ರ ಡಿಸೆಂಬರ್‌ 13ರಂದೇ ಪತ್ರ ಬರೆದಿತ್ತು. ಈ ಪತ್ರದ ಪ್ರತಿಯೂ ‘ದಿ ಫೈಲ್‌’ಗೆ ಲಭ್ಯವಾಗಿದೆ.

 

‘ಬೆಂಗಳೂರು ದಕ್ಷಿಣ ತಾಲೂಕಿನ ತಾವರೆಕೆರೆ ಹೋಬಳಿ ಕುರುಬರಹಳ್ಳಿ ಸರ್ವೆ ನಂಬರ್‌ 89ರಲ್ಲಿ ಗೋಮಾಳ ಜಮೀನು ಲಭ್ಯವಿದೆ ಎಂದು ರಾಜಸ್ವ ನಿರೀಕ್ಷರು ವರದಿ ಸಲ್ಲಿಸಿದ್ದರು. ಹೀಗಾಗಿ ಕಳೆದ 2 ವರ್ಷದಿಂದಲೂ ನಮ್ಮ ಫೌಂಡೇಷನ್‌ನಿಂದ ರಾಜಸ್ವ ನಿರೀಕ್ಷಕರು ಮತ್ತುತಹಶೀಲ್ದಾರ್‌ಗೆ ಅರ್ಜಿ ಸಲ್ಲಿಸಿದ್ದೆವು. ಆದರೆ ನಾವು ಅವರಿಗೆ ಲಂಚದ ಹಣ ಕೊಡಲಿಲ್ಲವೆಂದು ನಮ್ಮ ಅರ್ಜಿಯನ್ನು ಪರಿಗಣಿಸಲಿಲ್ಲ. ವಿಳಂಬ ಧೋರಣೆ ಮಾಡಿ ನಮ್ಮ ಕಡತವನ್ನು ಸ್ಥಗಿತಗೊಳಿಸಿದ್ದರು,’ ಎಂಬ ಅಂಶವನ್ನು ಅಡ್ವೋಕೇಟ್‌ ಜನರಲ್‌ ಅವರಿಗೆ ಪತ್ರ ಮುಖೇನ ಗಮನಕ್ಕೆ ತಂದಿದ್ದರು ಎಂಬುದು ಪತ್ರದಿಂದ ಗೊತ್ತಾಗಿದೆ.

 

ಅಲ್ಲದೆ ‘ಕಳೆದ ಮಾರ್ಚ್‌ನಲ್ಲೇ ನಮ್ಮ ಫೌಂಡೇಷನ್ ಟ್ರಸ್ಟ್‌ಗೆ ನಕ್ಷೆ ತಯಾರಾಗಿದ್ದರೂ ಚೆಕ್‌ ಲೀಸ್ಟ್‌ ಹಾಕಿರಲಿಲ್ಲ. ರಾಜಸ್ವ ನಿರೀಕ್ಷಕ ದೀಪಕ್‌ ಎಂಬುವರು ಗ್ರಾಮಸ್ಥರ ಹೆಸರಿನಲ್ಲಿ ತಕರಾರು ಸಲ್ಲಿಸಿ ಕಡತದಲ್ಲಿ ಟಿಪ್ಪಣಿ ಹಾಕಿದರೇ ತಹಶೀಲ್ದಾರ್‌ ಕೂಡ ಲಂಚದ ಹಣಕ್ಕೆ ಬೇಡಿಕೆ ಇಟ್ಟರು. ಮಾತೃ ಫೌಂಡೇಷನ್‌ ಟ್ರಸ್ಟ್‌ನವರು ಲಂಚದ ಹಣಕ್ಕೆ ಸ್ಪಂದಿಸಿಲ್ಲ ಎಂದು ಅಗತ್ಯ ಕ್ರಮ ಕೈಗೊಳ್ಳದೆಯೇ ಮಾರ್ಚ್‌ ತಿಂಗಳಿನಿಂದಲೂ ವ್ಯರ್ಥವಾಗಿ ಕಾಲಹರಣ ಮಾಡಿದರು. ಈಗ ಜನಸೇವಾ ಟ್ರಸ್ಟ್‌ಗೆ ಅನುಕೂಲ ಮಾಡಿಕೊಡಲು ಬೆಂಗಳೂರು ದಕ್ಷಿಣ ತಾಲೂಕಿನ ತಹಶೀಲ್ದಾರ್‌ ಮುಂದಾಗಿದ್ದಾರೆ,’ ಎಂದು ಫೌಂಡೇಷನ್‌ ಪತ್ರದಲ್ಲಿ ಆರೋಪಿಸಿದೆ.

 

ಈ ಸಂಬಂಧ ರಾಜ್ಯದ ಅಡ್ವೋಕೇಟ್‌ ಜನರಲ್‌ ಪ್ರಭುಲಿಂಗ ನಾವದಗಿ ಅವರ ಗಮನಕ್ಕೂ ಬಂದಿತ್ತು. ಈ ಕುರಿತು  2021ರ ಡಿಸೆಂಬರ್‌ 15ರಂದೇ ಕಂದಾಯ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಗಮನಕ್ಕೂ ತಂದಿದ್ದರು. ಆದರೂ ತಹಶೀಲ್ದಾರ್‌ ವಿರುದ್ಧ ಇದುವರೆಗೂ ಯಾವುದೇ ಕ್ರಮ ವಹಿಸಿಲ್ಲ ಎಂದು ಗೊತ್ತಾಗಿದೆ.

 

ಎಪ್ಪತ್ತು ಕೋಟಿ ರು. ಬೆಲೆಬಾಳುವ 35.33 ಎಕರೆ ವಿಸ್ತೀರ್ಣದ ಗೋಮಾಳ ಜಮೀನನ್ನು ಸಂಘ ಪರಿವಾರದ ಅಂಗ ಸಂಸ್ಥೆಯಾಗಿರುವ ಜನಸೇವಾ ಟ್ರಸ್ಟ್‌ಗೆ ಮಂಜೂರು ಮಾಡುವ ಪ್ರಸ್ತಾವನೆಯೇ ತಿರಸ್ಕೃತಗೊಂಡಿತ್ತು. ಅಲ್ಲದೆ ಜನಸೇವಾ ಟ್ರಸ್ಟ್‌ಗೆ ಕುರುಬರಹಳ್ಳಿಯಲ್ಲಿರುವ 35.33 ಎಕರೆ ವಿಸ್ತೀರ್ಣದ ಗೋಮಾಳ ಜಮೀನನ್ನು ಮಂಜೂರು ಮಾಡಲು ಹೋಬಳಿಯ ಮೂರು ಗ್ರಾಮಗಳ ಗ್ರಾಮಸ್ಥರು ವಿರೋಧಿಸಿ ತಕರಾರು ಎತ್ತಿದ್ದರು. ಅಲ್ಲದೆ ಸುಮಾರು ಒಂದು ಸಾವಿರ ಜಾನುವಾರುಗಳನ್ನು ಮೇಯಿಸಲು ಈ ಜಮೀನು ಅತ್ಯವಶ್ಯಕವಾಗಿತ್ತು ಎಂಬುದನ್ನು ಸ್ಮರಿಸಬಹುದು.

the fil favicon

SUPPORT THE FILE

Latest News

Related Posts