ಬಿಟ್‌ಕಾಯಿನ್‌ ಹಗರಣ; ಎಸ್‌ಐಟಿಯಿಂದ ರಿಷಿಕೇಶ್‌ ನೇಮಕ ಪ್ರಸ್ತಾವನೆ ಕೈಬಿಡಲು ಪ್ರಸ್ತಾವನೆ ಸಲ್ಲಿಕೆ

ಬೆಂಗಳೂರು; ಬಿಜೆಪಿ ಸರ್ಕಾರದ ಅವಧಿಯಲ್ಲಿ ಸಂಚಲನಕ್ಕೆ ಕಾರಣವಾಗಿದ್ದ ಬಿಟ್ ಕಾಯಿನ್ ಹಗರಣ ಮರು ತನಿಖೆ ನಡೆಸಲು ರಚಿಸಿರುವ ಎಸ್‌ಐಟಿಗೆ ಐಪಿಎಸ್‌ ರಿಷಿಕೇಶ್‌ ಸೋನಾವನೆ ನೇಮಕ ಪ್ರಸ್ತಾವನೆಯನ್ನೂ ಕೈಬಿಡಲು ಪ್ರಸ್ತಾವನೆ ಸರ್ಕಾರಕ್ಕೆ ಸಲ್ಲಿಕೆಯಾಗಿರುವುದು ಇದೀಗ ಬಹಿರಂಗವಾಗಿದೆ.

 

ಬಿಟ್‌ ಕಾಯಿನ್‌ ಹಗರಣದ ತನಿಖೆ ನಡೆಸುವ ನಿಟ್ಟಿನಲ್ಲಿ ಆರ್ಥಿಕ ಅಪರಾಧ ಘಟಕದ ಎಡಿಜಿಪಿ ಮನೀಶ್ ಖರ್ಭಿಕರ್ ನೇತೃತ್ವದಲ್ಲಿ ರಚನೆಯಾಗಿದ್ದ ಎಸ್ ಐ ಟಿ ಯಲ್ಲಿ ಆರ್ಥಿಕ ಅಪರಾಧ ವಿಭಾಗದ ಡಿಜಿಪಿ ಡಾ. ಕೆ ವಂಶಿ ಕೃಷ್ಣ, ಡಿಸಿಪಿ ಡಾ. ಅನೂಪ್ ಎ ಶೆಟ್ಟಿ, ಆರ್ಥಿಕ ಅಪರಾಧಗಳು ಮತ್ತು‌ ಸೈಬರ್ ಅಪರಾಧ ವಿಭಾಗದ ಅಧೀಕ್ಷಕರಾದ ಶರತ್ ಈ ತಂಡದಲ್ಲಿದ್ದರು.

 

ಆ ನಂತರ ನಡೆದ ಬೆಳವಣಿಗೆಯಲ್ಲಿ ಶರತ್‌ ಅವರ ಹೆಸರನ್ನು ಕೈಬಿಡಲಾಗಿತ್ತು. ಶರತ್‌ ಜಾಗಕ್ಕೆ ರಿಷಿಕೇಷ್‌ ಸೋನಾವನೆ ಅವರನ್ನು ನೇಮಿಸಬೇಕು ಎಂಬ ಪ್ರಸ್ತಾವನೆ ಸಲ್ಲಿಕೆಯಾಗಿತ್ತು. ಆದರೀಗ ರಿಷಿಕೇಷ್‌ ಸೋನಾವನೆ ಅವರನ್ನು  ನೇಮಿಸುವಂತೆ ಸಲ್ಲಿಸಿದ್ದ ಪ್ರಸ್ತಾವನೆಯನ್ನೂ ಕೈಬಿಡಲು ಸರ್ಕಾರಕ್ಕೆ ಮತ್ತೊಂದು ಪ್ರಸ್ತಾವನೆ ಸಲ್ಲಿಕೆಯಾಗಿದೆ ಎಂದು ಗೊತ್ತಾಗಿದೆ.

 

ಬೆಂಗಳೂರು ನಗರ ಕಾಟನ್‌ ಪೇಟೆ ಪೊಲೀಸ್‌ ಠಾಣೆ ಮೊ ಸಂಖ್ಯೆ 153/2020ರ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸುವ ಸಂಬಂಧ ತೆರೆದಿರುವ ಕಡತದಲ್ಲಿ ಈ ಪ್ರಸ್ತಾವನೆಯನ್ನು ಉಲ್ಲೇಖಿಸಲಾಗಿದೆ ಎಂದು ತಿಳಿದು ಬಂದಿದೆ.  ಈ ಸಂಬಂಧ ‘ದಿ ಫೈಲ್‌’ಗೆ ಟಿಪ್ಪಣಿ ಹಾಳೆಯೊಂದು ಲಭ್ಯವಾಗಿದೆ.

 

‘ಸರ್ಕಾರದ ಆದೇಶ ಸಂಖ್ಯೆ (HD 48 COD 2023(2) ದಿನಾಂಕ 30-06-2023ರಲ್ಲಿ ರಚಿಸಲಾದ ವಿಶೇಷ ತನಿಖಾ ತಂಡ ಸದಸ್ಯರಲ್ಲಿ ಸಿಐಡಿಯಲ್ಲಿರುವ ಆರ್ಥಿಕ ಅಪರಾಧಗಳ ವಿಭಾಗ ಮತ್ತು ಸೈಬರ್‍‌ ಅಪರಾಧಗಳ ವಿಭಾಗದ ಶರತ್‌ ಅವರ ಬದಲಿಗೆ ರಿಷಿಕೇಶ್‌ ಸೋನಾವನೆ ಅವರನ್ನು ನೇಮಿಸುವಂತೆ ಪ್ರಸ್ತಾವನೆ ಕಳಿಸಿಕೊಡಲಾಗಿರುತ್ತದೆ.  ಮುಂದುವರೆದಂತೆ ಸರ್ಕಾರದ ವತಿಯಿಂದ ರಚಿಸಲಾದ ವಿಶೇಷ ತನಿಖಾ ತಂಡದಲ್ಲಿ ಶರತ್‌ ಅವರ ಬದಲಿಗೆ ರಿಷಿಕೇಷ್ ಸೋನಾವನೆ ಅವರನ್ನು ನೇಮಿಸುವಂತೆ ಸಲ್ಲಿಸಲಾದ ಪ್ರಸ್ತಾವನೆಯನ್ನು ಕೈಬಿಡುವಂತೆ ಕೋರಿ, ಸದರಿ ಸದಸ್ಯರ ಬದಲಿಗೆ ಯಾವುದೇ ಅಧಿಕಾರಿಯನ್ನು ನೇಮಕ ಮಾಡದೇ (ಸರ್ಕಾರದ ಆದೇಶ ಸಂಖ್ಯೆ hd 48 cod 2023(2) ದಿನಾಂಕ 03-06-2023ರ ಸರ್ಕಾರದ ಆದೇಶದಲ್ಲಿ ರಚಿಸಲಾದ 1, 2 ಮತ್ತು 3ರಲ್ಲಿನ ಅಧಿಕಾರಿರವರುಗಳನ್ನು ಒಳಗೊಂಡಂತೆ ಸಮಿತಿಯು ಕಾರ್ಯನಿರ್ವಹಿಸುವಂತೆ ಸರ್ಕಾರದ ವತಿಯಿಂದ ಆದೇಶಿಸಲು ಕೋರಿರುತ್ತಾರೆ,’ ಎಂದು ಟಿಪ್ಪಣಿಯಲ್ಲಿ ಉಲ್ಲೇಖಿಸಿರುವುದು ಗೊತ್ತಾಗಿದೆ.

 

ಈ ಸಂಬಂಧದ ಕಡತ ಇದೀಗ ಗೃಹ ಸಚಿವ ಡಾ ಜಿ ಪರಮೇಶ್ವರ್‍‌ ಅವರ ಅನುಮೋದನೆಗೆ ಸಲ್ಲಿಸಲಾಗಿದೆ ಎಂದು ತಿಳಿದು ಬಂದಿದೆ.

 

ಬಿಟ್‌ಕಾಯಿನ್‌ ಕಳ್ಳತನ ಹಾಗೂ ವಿವಿಧ ವೆಬ್‌ಸೈಟ್‌/ಗೇಮಿಂಗ್‌ ಅಪ್ಲಿಕೇಷನ್‌ಗಳನ್ನು ಹ್ಯಾಕ್‌ ಮಾಡಿ ಅಕ್ರಮ ಲಾಭ ಪಡೆದುಕೊಂಡಿರುವ ಆರೋಪಿಗಳ ಕುರಿತಾಗಿ ಕಾಟನ್‌ ಪೇಟೆ ಪೊಲೀಸ್‌ ಠಾಣೆಯಲ್ಲಿ (ಮೊ ಸಂ 153/2020 ಕಲಂ 120(ಬಿ), 379, 384, 420, 465, 468,471, ರೇ/ವಿ 34 ಐಪಿಸಿ ಪ್ರಕರಣದ ಮುಂದಿನ ತನಿಖೆಗಾಗಿ ಸಿಐಡಿಯಲ್ಲಿ ವಿಶೇಷ ತನಿಖಾ ತಂಡ ರಚಿಸಲಾಗಿತ್ತು.

 

ಅದೇ ರೀತಿ ಆರೋಪಿ ಶ್ರೀ ಕೃಷ್ಣ ಅಲಿಯಾಸ್‌ ಶ್ರೀಕಿ ಮತ್ತು ಆತನ ಸಹಚರರ ವಿರುದ್ಧ ರಾಜ್ಯದ ವಿವಿಧ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿರುವ 5 ಪ್ರಕರಣಗಳನ್ನು 2023ರ ಜುಲೈ 14ರಂದು ಸಿಐಡಿಗೆ ವಹಿಸಿ ಆದೇಶಿಸಲಾಗಿತ್ತು.

 

ಬೆಂಗಳೂರು ನಗರ, ಸೈಬರ್‍‌ ಕ್ರೈಂ ಪೊಲೀಸ್‌ ಠಾಣೆ (4801/2018 ಕಲಂ 65, 66, 419, 429, 66(ಸಿ), 66(ಡಿ), 471, 468,474,465 ಐಟಿ ಆಕ್ಟ್‌ 2000 ಪ್ರಕರಣವು ಸಹ ಇದೇ ಆರೋಪಕ್ಕೆ ಸಂಬಂಧಿಸಿತ್ತು. ಹೀಗಾಗಿ ಈ ಹಿಂದೆ ವಹಿಸಲಾಗಿದ್ದ ಪ್ರಕರಣಗಳಂತೆಯೇ ಬೆಂಗಳೂರು ನಗರ ಸೈಬರ್‍‌ ಕ್ರೈಂ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿರುವ 4801/2018ರಲ್ಲಿ ದಾಖಲಾಗಿರುವ ಪ್ರಕರಣವನ್ನು ವಿಶೇಷ ತನಿಖಾ ತಂಡಕ್ಕೆ ವರ್ಗಾಯಿಸುವಂತೆ ಕೋರಲಾಗಿತ್ತು ಎಂದು ತಿಳಿದು ಬಂದಿದೆ.

 

ಅದೇ ರೀತಿ 2023ರ ಜೂನ್‌ 3ರಂದು ಹೊರಡಿಸಿದ್ದ ಸರ್ಕಾರದ ಆದೇಶದ ಪ್ರಕಾರ 4 ಅಧಿಕಾರಿಗಳನ್ನೊಳಗೊಂಡ ವಿಶೇಷ ತನಿಖಾ ತಂಡದಲ್ಲಿ ಕ್ರಮ ಸಂಖ್ಯೆ 04ರಲ್ಲಿದ್ದ ಅಧಿಕಾರಿ ಹೆಸರನ್ನು ಕೈ ಬಿಟ್ಟು ಹೊರಡಿಸುವ ತಿದ್ದುಪಡಿ ಆದೇಶ ಹಾಗೂ 4801/2018ರ ಪ್ರಕರಣವನ್ನು ವಿಶೇಷ ತನಿಖಾ ತಂಡಕ್ಕೆ ವಹಿಸುವ ಸಂಬಂಧ ಪ್ರಕ್ರಿಯೆಗಳು ನಡೆಯುತ್ತಿವೆ ಎಂಬುದು ಗೊತ್ತಾಗಿದೆ.

 

ಬಿಜೆಪಿ ಆಡಳಿತದ ಅವಧಿಯಲ್ಲಿ ಬಿಟ್ ಕಾಯಿನ್ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ಪ್ರಕರಣದ ಪ್ರಮುಖ ಆರೋಪಿ ಎನ್ನಲಾಗಿರುವ ಶ್ರೀಕಿಯನ್ನು‌ ಬಂಧನ ಮಾಡಲಾಗಿತ್ತು. ಈ ಹಗರಣದೊಂದಿಗೆ ಘಟಾನುಘಟಿ ನಾಯಕರ ಹೆಸರು ತಳಕು ಹಾಕಿಕೊಂಡಿತ್ತು.

 

ಮೂರು ವರ್ಷಗಳ ಹಿಂದೆ ಡ್ರಗ್ ಪ್ರಕರಣದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಕುಖ್ಯಾತ ಹ್ಯಾಕರ್‌ ಶ್ರೀಕಾಂತ್‌ ಯಾನೆ ಶ್ರೀಕಿ ಎಂಬಾತನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದರು. ಬಂಧಿತನ ವಿಚಾರಣೆ ನಡೆಸಿದ ವೇಳೆ ಈ ಬಿಟ್‌ ಕಾಯಿನ್‌ ದಂಧೆ ಬೆಳಕಿಗೆ ಬಂದಿತ್ತು. ಈ ವೇಳೆ ನಗರದ ಕಾಟನ್‌ಪೇಟೆ ಠಾಣೆಯಲ್ಲಿ ಬಿಟ್ ಕಾಯಿನ್ ಪ್ರಕರಣದ ಬಗ್ಗೆ ಪ್ರತ್ಯೇಕವಾಗಿ ಎಫ್‌ಐಆರ್‌ ದಾಖಲಿಸಿದ್ದ ಸಿಸಿಬಿಯು ತನಿಖೆ ಕೈಗೊಂಡಿತ್ತು. ಅಲ್ಲದೇ ಇ ಪ್ರೊಕ್ಯುರ್ಮೆಂಟ್‌ ವೆಬ್‌ಸೈಟ್‌ ಹ್ಯಾಕ್‌ ಪ್ರಕರಣ ಸಂಬಂಧ ಶ್ರೀಕಿ ವಿರುದ್ಧ ಸಿಐಡಿ ಕೂಡ ಪ್ರತ್ಯೇಕ ತನಿಖೆ ನಡೆಸಿತ್ತು.

 

ರಾಜಕೀಯ ತಿರುವು ಪಡೆದುಕೊಂಡಿದ್ದ ಬಿಟ್‌ ಕಾಯಿನ್‌ ಪ್ರಕರಣದಲ್ಲಿ ಭಾರಿ ಅವ್ಯವಹಾರ ನಡೆದಿದೆ. ಹ್ಯಾಕರ್‌ ಶ್ರೀಕಿಯನ್ನು ಬಳಸಿ ಆಡಳಿತ ಪಕ್ಷದವರು ಭಾರೀ ಮೊತ್ತದ ಹಣ ಲಪಟಾಯಿಸಿದ್ದಾರೆ ಎಂದು ಪ್ರತಿಪಕ್ಷದಲ್ಲಿದ್ದ ಕಾಂಗ್ರೆಸ್‌ ನಾಯಕರು ಆರೋಪಿಸಿದ್ದನ್ನು ಸ್ಮರಿಸಬಹುದು.

the fil favicon

SUPPORT THE FILE

Latest News

Related Posts