Sunday | September 13, 2026 |

ಸರ್ಕಾರಿ ಶಾಲೆಗಳ ದತ್ತು ಪ್ರಸ್ತಾವ; ವಾಸ್ತವ ಸಂಗತಿಯನ್ನೇ ಮರೆಮಾಚಿದ ಸಚಿವ, ದಾಖಲೆ ಬಹಿರಂಗ

ಬೆಂಗಳೂರು; ಶಿಕ್ಷಕರ ಕೊರತೆ ನೀಗಿಸುವುದು ಮತ್ತು ಅತಿಥಿ ಶಿಕ್ಷಕರಲ್ಲಿನ ಬದ್ಧತೆ ಕೊರತೆಯನ್ನು ಮುಂದಿರಿಸಿ ಸರ್ಕಾರಿ ಶಾಲೆಗಳನ್ನು ಖಾಸಗಿ ಶಿಕ್ಷಣ ಆಡಳಿತ ಮಂಡಳಿಗಳಿಗೆ ದತ್ತು ನೀಡಲು ಪ್ರಸ್ತಾಪಿಸಬೇಕು ಎಂಬ ನಿರ್ಣಯ ಕೈಗೊಂಡು ಈ ಸಂಬಂಧ  ಅಧಿಕಾರಿಗಳಿಗೆ ಸೂಚಿಸಿದ್ದರೂ ಸಹ ಇದೀಗ ಅಂತಹ ಯಾವುದೇ ಪ್ರಸ್ತಾವನೆ ಇಲ್ಲ ಎಂದು ಹೇಳುವ ಮೂಲಕ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು  ವಾಸ್ತವ ಸಂಗತಿಯನ್ನೇ ಮರೆಮಾಚಿರುವುದು ಇದೀಗ ದಾಖಲೆ ಸಹಿತ ಬಹಿರಂಗವಾಗಿದೆ.

 

ಮಂಡ್ಯ ನಗರದಲ್ಲಿ 2023ರ ಆಗಸ್ಟ್‌ 18ರಂದು ನಡೆದಿದ್ದ ಕಾರ್ಯಕ್ರಮದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಮಧು ಬಂಗಾರಪ್ಪ ಅವರು ಸರ್ಕಾರಿ ಶಾಲೆಗಳನ್ನು ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ದತ್ತು ನೀಡುವ ಪ್ರಸ್ತಾಪವಿಲ್ಲ . ಖಾಸಗಿ ಸಹಭಾಗಿತ್ವದಲ್ಲಿ ಸರ್ಕಾರಿ ಶಾಲೆಗಳನ್ನು ಮೇಲ್ದರ್ಜೆಗೇರಿಸಬಹುದು. ಆದರೆ ಖಾಸಗಿಯವರಿಗೆ ದತ್ತು ಕೊಡುವ ಯಾವುದೇ ಪ್ರಸ್ತಾವ ಇಲಾಖೆ ಮುಂದಿಲ್ಲ. ಸರ್ಕಾರಿ ಶಾಲೆಗಳನ್ನು ಖಾಸಗೀಕರಣ ಮಾಡುವುದು ಅಥವಾ ಖಾಸಗಿಯವರಿಗೆ ದತ್ತು ನೀಡುವುದು ಅಸಾಧ್ಯ   ಎಂದು ಹೇಳಿಕೆ ನೀಡಿದ್ದಾರೆ. ಈ ಕುರಿತು ವಾರ್ತಾಭಾರತಿ ದಿನಪತ್ರಿಕೆಯು ಮುಖಪುಟದಲ್ಲಿ ಈ ಹೇಳಿಕೆಯನ್ನು ಪ್ರಕಟಿಸಿದೆ.

 

ವಾರ್ತಾಭಾರತಿ ಪತ್ರಿಕೆಯು ಪ್ರಕಟಿಸಿರುವ ಸುದ್ದಿ ಪ್ರತಿ

 

ಆದರೆ ವಾಸ್ತವದಲ್ಲಿ ಉಪ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ 2023ರ ಆಗಸ್ಟ್‌ 16ರಂದು ನಡೆದಿದ್ದ ಸಭೆಯಲ್ಲಿಯೇ ಸರ್ಕಾರಿ ಶಾಲೆಗಳನ್ನು ಖಾಸಗಿ ಶಿಕ್ಷಣ ಆಡಳಿತ ಮಂಡಳಿಗಳಿಗೆ ದತ್ತು ನೀಡಲು ಪ್ರಸ್ತಾಪಿಸಬೇಕು ಎಂಬ ನಿರ್ಣಯವನ್ನೂ ಕೈಗೊಳ್ಳಲಾಗಿದೆ. ಈ ಸಂಬಂಧ ಸಭೆಯ ನಡವಳಿಗಳು ‘ದಿ ಫೈಲ್‌’ಗೆ ಲಭ್ಯವಾಗಿವೆ.

 

ಸಭೆಯಲ್ಲಿ ಕೈಗೊಂಡಿದ್ದ ನಿರ್ಣಯವಿದು

 

 

‘ಪ್ರಸ್ತುತ ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಸುಮಾರು 50,000 ಶಿಕ್ಷಕರ ಕೊರತೆ ಇದೆ. ಈ ಕೊರತೆಯನ್ನು ಅತಿಥಿ ಶಿಕ್ಷಕರನ್ನು ನಿಯೋಜಿಸುವ ಮೂಲಕ ಇಲಾಖೆ ಸರಿದೂಗಿಸುತ್ತಿರುವುದು ಸರಿಯಷ್ಟೇ. ಆದರೆ ಸದರಿ ಶಿಕ್ಷಕರಿಂದ ಬದ್ಧತೆಯ ಕೊರತೆಯಿಂದಾಗಿ ಉತ್ತಮ ಗುಣಮಟ್ಟದ ಶಿಕ್ಷಣ ದೊರೆಯುತ್ತಿಲ್ಲ ಎಂಬುದನ್ನು ಗಮನಿಸಲಾಗಿದೆ ಎಂದು ಉಪ ಮುಖ್ಯಮಂತ್ರಿಗಳು ತಿಳಿಸಿದರು. ಆದ್ದರಿಂದ ಶಿಕ್ಷಕರ ಕೊರತೆಯನ್ನು ನೀಗಿಸಲು ಖಾಸಗಿ ಶಿಕ್ಷಣ ಆಡಳಿತ ಮಂಡಳಿಯನ್ನು ಸಂಪರ್ಕಿಸಿ 1.1 ಅನುಪಾತದಲ್ಲಿ ಸರ್ಕಾರಿ ಶಾಲೆಗಳನ್ನು ದತ್ತು ತೆಗೆದುಕೊಳ್ಳಲು ಹೆಚ್ಚುವರಿ ಗುಣಮಟ್ಟದ ಶಿಕ್ಷಕರನ್ನು ಒದಗಿಸಲು ಹಾಗೂ ಪ್ರಶಿಕ್ಷಣ ತರಬೇತಿ ನೀಡಲು ಪ್ರಸ್ತಾಪಿಸಬೇಕು,’ ಎಂದು ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ.

 

 

ರಾಜ್ಯದ ಸರ್ಕಾರಿ ಶಾಲೆಗಳನ್ನು ಖಾಸಗಿ  ಶಿಕ್ಷಣ ಆಡಳಿತ ಮಂಡಳಿಗಳಿಗೆ ದತ್ತು ನೀಡುವ ಪ್ರಸ್ತಾವನೆ ಹಿಂದೆ ಸರ್ಕಾರಿ ಶಾಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ  ಅತಿಥಿ ಶಿಕ್ಷಕರಲ್ಲಿ ಬದ್ಧತೆ ಕೊರತೆ ಮತ್ತು ಗುಣಮಟ್ಟದ ಶಿಕ್ಷಣ ದೊರೆಯುತ್ತಿಲ್ಲ ಎಂಬ ನೆಪವನ್ನು  ಮುಖ್ಯಮಂತ್ರಿ ಡಿ ಕೆ ಶಿವಕುಮಾರ್‍‌ ಅವರು ಮುಂದೊಡ್ಡಿರುವುದು ಅಂದಾಜು 27,000 ಅತಿಥಿ ಶಿಕ್ಷಕರು ಬೀದಿಗೆ ಬೀಳಲು ಕಾರಣವಾಗುವ ಸಾಧ್ಯತೆಗಳಿವೆ. ಸರ್ಕಾರಿ ಶಾಲೆಗಳನ್ನು ದತ್ತು ನೀಡುವ ಕುರಿತು ಶಿಕ್ಷಣ ತಜ್ಞರಿಂದ ಆಕ್ಷೇಪ ವ್ಯಕ್ತವಾಗಿರುವ ಬೆನ್ನಲ್ಲೇ ಅತಿಥಿ ಶಿಕ್ಷಕರ ಬದ್ಧತೆಯ ಕೊರತೆ ಮತ್ತು ಗುಣಮಟ್ಟದ ಶಿಕ್ಷಣ ದೊರಕುತ್ತಿಲ್ಲ ಎಂಬ ಕಾರಣವನ್ನು ಮುಂದೊಡ್ಡಿರುವುದು ಶಿಕ್ಷಣ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿತ್ತು.

 

ಸರ್ಕಾರಿ ಶಾಲೆಗಳ ದತ್ತು; ಅತಿಥಿ ಶಿಕ್ಷಕರಲ್ಲಿ ಬದ್ಧತೆ ಕೊರತೆ ನೆಪ ಮುಂದಿರಿಸಿದ ಕಾಂಗ್ರೆಸ್‌ ಸರ್ಕಾರ

 

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಸಿಎಸ್‌ಆರ್‍‌ ಅನುದಾನ ಕುರಿತು 2023ರ ಆಗಸ್ಟ್‌ 16ರಂದು ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್‍‌ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ 1.1 ಅನುಪಾತದಲ್ಲಿ ಸರ್ಕಾರಿ ಶಾಲೆಗಳನ್ನು ದತ್ತು ತೆಗೆದುಕೊಳ್ಳಲು ಖಾಸಗಿ ಶಿಕ್ಷಣ ಮಂಡಳಿಗಳನ್ನು ಸಂಪರ್ಕಿಸಿ ಪ್ರಸ್ತಾವನೆ ಸಲ್ಲಿಸುವ ಕುರಿತು ಚರ್ಚೆಯಾಗಿತ್ತು.

ಖಾಸಗಿ ಶಿಕ್ಷಣ ಮಂಡಳಿಗಳಿಗೆ ಸರ್ಕಾರಿ ಶಾಲೆಗಳ ದತ್ತು ಪ್ರಸ್ತಾವ; ಶಿಕ್ಷಣ ಪದವೀಧರರ ಭವಿಷ್ಯ ಮಸುಕು!

 

ದತ್ತು ನೀಡುವ ಯೋಜನೆಯನ್ನೂ ಸೇರಿಸಿದಂತೆ ಸಭೆಯಲ್ಲಿ ಕೈಗೊಂಡ ನಿರ್ಣಯಗಳಿಗೆ ಅನುಸಾರವಾಗಿ ತ್ವರಿತಗತಿಯಲ್ಲಿ ಒಂದು ವಿಸ್ತೃತ ಪ್ರಸ್ತಾವನೆಯನ್ನು ತಯಾರಿಸಿ ಒಂದು ವಾರದ ಒಳಗಾಗಿ ಉಪ ಮುಖ್ಯಮಂತ್ರಿಗಳಿಗೆ ಪ್ರಸ್ತುತ ಪಡಿಸಬೇಕು ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಸೂಚಿಸಲಾಗಿತ್ತು.

 

ಅಲ್ಲದೇ ಶಾಲೆಗಳ ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಳ್ಳಲು ದಾನಿಗಳ ಮೊರೆ ಹೋಗಲು ನಿರ್ಣಯಿಸಿದೆ. ‘ ದಾನಿಗಳ ಕೊಡುಗೆಗಾಗಿ ಅನುಗುಣವಾಗಿ ಸರ್ಕಾರಿ ಶಾಲೆ/ಕೊಠಡಿಯ ಮುಂದೆ ಇನ್ನಿತರೆ ಮೂಲಭೂತ ಸೌಕರ್ಯಗಳ ಮುಂದೆ ದಾನಿಗಳ ಹೆಸರನ್ನು ಸೇರಿಸಲು ಅವಕಾಶ ಕಲ್ಪಿಸುವುದು ಹಾಗೂ ಇನ್ನಿತರೆ ಷರತ್ತುಗಳನ್ನು ಸೇರಿ ಒಂದು ಒಡಂಬಡಿಕೆ ತಯಾರಿಸಬೇಕು,’ ಎಂಬ ನಿರ್ಣಯನ್ನೂ ಕೈಗೊಳ್ಳಲಾಗಿದೆ.

 

ಸಿಎಸ್‌ಆರ್‍‌ ಅನುಷ್ಠಾನ ಸಮಿತಿ ಸಭೆಯಲ್ಲಿ ಭಾಗವಹಿಸಿರುವ ಡಿ ಕೆ ಶಿವಕುಮಾರ್‍‌, ಮಧು ಬಂಗಾರಪ್ಪ ಮತ್ತಿತರರು

 

ರಾಜ್ಯಕ್ಕೆ ಕನಿಷ್ಠ 5,000 ಕೋಟಿ ಸಿಎಸ್‌ಆರ್‍‌ ಅಡಿಯಲ್ಲಿ ಕಂಪನಿಗಳ ಕಾಯ್ದೆ ಪ್ರಕಾರ ಶಿಕ್ಷಣ ಕ್ಷೇತ್ರದಲ್ಲಿ ಉಪಯೋಗಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್‍‌ ಅವರು 2023ರ ಆಗಸ್ಟ್ 4ರಂದು ನಡೆದಿದ್ದ ಸಭೆಯಲ್ಲಿ ಪ್ರಸ್ತಾಪಿಸಿದ್ದರು. ಇದನ್ನು ಕಾರ್ಯಗತಗೊಳಿಸಲು 2023ರ ಆಗಸ್ಟ್‌ 16ರಂದು ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್‍‌ ಅಧ್ಯಕ್ಷತೆಯಲ್ಲಿ ಸಭೆ ನಡೆಸಲಾಗಿತ್ತು. ಈ ಸಭೆಯಲ್ಲಿಯೇ ಶಿಕ್ಷಕರ ಕೊರತೆ ನೀಗಿಸಲು ಸರ್ಕಾರಿ ಶಾಲೆಗಳನ್ನು ಖಾಸಗಿ ಶಿಕ್ಷಣ ಮಂಡಳಿಗಳಿಗೆ ದತ್ತು ನೀಡುವ ಕುರಿತು ತೀರ್ಮಾನಿಸಿದೆ.

 

ರಾಜ್ಯದಲ್ಲಿ ಈಗಾಗಲೇ 285 ಕರ್ನಾಟಕ ಪಬ್ಲಿಕ್‌ ಶಾಲೆಗಳು ಅಸ್ತಿತ್ವದಲ್ಲಿವೆ. ಇದೇ ಮಾದರಿಯಂತೆ ರಾಜ್ಯದ 6000 ಗ್ರಾಮ ಪಂಚಾಯತ್‌ಗಳಲ್ಲಿ ಮುಂದಿನ 5 ವರ್ಷಗಳಲ್ಲಿ ಕರ್ನಾಟಕ ಪಬ್ಲಿಕ್‌ ಶಾಲೆಳನ್ನು ಸಿಎಸ್‌ಆರ್‍‌ ಸಹಯೋಗದೊಂದಿಗೆ ಪ್ರಾರಂಭಿಸಲು ಕ್ರಿಯಾ ಯೋಜನೆ ತಯಾರಿಸಲು ಡಿ ಕೆ ಶಿವಕುಮಾರ್‍‌ ಸೂಚಿಸಿದ್ದರು.

Hot this week

ದಿ ಫೈಲ್‌ ಸಂಪಾದಕರಿಗೆ ಜೀವ ಬೆದರಿಕೆ, ಅವಾಚ್ಯ ಶಬ್ದಗಳಿಂದ ನಿಂದನೆ ಪ್ರಕರಣ; ಅಪರಿಚಿತನ ವಿರುದ್ಧ ಕಡೆಗೂ ಎಫ್‌ಐಆರ್ ದಾಖಲಿಸಿದ ಪೊಲೀಸರು

ಬೆಂಗಳೂರು; ದಿ ಫೈಲ್‌ ಸುದ್ದಿ ಜಾಲತಾಣದಲ್ಲಿ ಪ್ರಕಟಿಸಿದ್ದ ವರದಿ ಉಲ್ಲೇಖಿಸಿ ಸಂಪಾದಕರಿಗೆ...

ಬಹು ದೊಡ್ಡ ಬರಗಾಲ; ಜಿಲ್ಲಾಧಿಕಾರಿಗಳ ಪಿ ಡಿ ಖಾತೆಗಳಲ್ಲಿ 310 ಕೋಟಿಯಷ್ಟೇ ಲಭ್ಯ

ಬೆಂಗಳೂರು; ರಾಜ್ಯದ ಇತಿಹಾಸದಲ್ಲಿ ಎರಡನೇ ಬಾರಿಗೆ ಕಾಣಿಸಿಕೊಂಡಿರುವ ಬಹುದೊಡ್ಡ ಬರಕ್ಕೆ ತುತ್ತಾಗಿರುವ...
Please Scan to make Your Contribution

Topics

ದಿ ಫೈಲ್‌ ಸಂಪಾದಕರಿಗೆ ಜೀವ ಬೆದರಿಕೆ, ಅವಾಚ್ಯ ಶಬ್ದಗಳಿಂದ ನಿಂದನೆ ಪ್ರಕರಣ; ಅಪರಿಚಿತನ ವಿರುದ್ಧ ಕಡೆಗೂ ಎಫ್‌ಐಆರ್ ದಾಖಲಿಸಿದ ಪೊಲೀಸರು

ಬೆಂಗಳೂರು; ದಿ ಫೈಲ್‌ ಸುದ್ದಿ ಜಾಲತಾಣದಲ್ಲಿ ಪ್ರಕಟಿಸಿದ್ದ ವರದಿ ಉಲ್ಲೇಖಿಸಿ ಸಂಪಾದಕರಿಗೆ...

ಬಹು ದೊಡ್ಡ ಬರಗಾಲ; ಜಿಲ್ಲಾಧಿಕಾರಿಗಳ ಪಿ ಡಿ ಖಾತೆಗಳಲ್ಲಿ 310 ಕೋಟಿಯಷ್ಟೇ ಲಭ್ಯ

ಬೆಂಗಳೂರು; ರಾಜ್ಯದ ಇತಿಹಾಸದಲ್ಲಿ ಎರಡನೇ ಬಾರಿಗೆ ಕಾಣಿಸಿಕೊಂಡಿರುವ ಬಹುದೊಡ್ಡ ಬರಕ್ಕೆ ತುತ್ತಾಗಿರುವ...

ಶೇ 14 ಟೆಂಡರ್ ಪ್ರೀಮಿಯಂಗೆ ಸಮರ್ಥನೆ ಮಾಡಲು ಶೇ.10ರಷ್ಟು ಸೇವಾ ಶುಲ್ಕ ಸೇರಿಸಿದ್ದ ಬಿಎಸ್‌ಡಬ್ಲ್ಯೂಎಂಎಲ್; ಆರ್ಥಿಕ ಇಲಾಖೆ ಅವಲೋಕನ

ಬೆಂಗಳೂರು; ಘನತ್ಯಾಜ್ಯ ಸಂಗ್ರಹಣೆ ಪ್ರಾಥಮಿಕ ಮತ್ತು ದ್ವಿತೀಯ ಹಂತದ ಸಾಗಾಣಿಕೆ ಮಾಡುವ...

ತನಿಖೆಯಿಂದ ಪತ್ತೆ ಹಚ್ಚಬಹುದಾದನ್ನು ದೂರುದಾರ ಸಾಬೀತುಪಡಿಸಬೇಕೇ?; ಸಿದ್ದಾರ್ಥ ವಿಹಾರ ಟ್ರಸ್ಟ್‌ ಪ್ರಕರಣದಲ್ಲಿ ನ್ಯಾಯಪೀಠದ ಅವಲೋಕನ

ಬೆಂಗಳೂರು; 'ದೂರುದಾರರ ವಿಚಾರಣೆಯ ಮೂಲಕವೇ  ಸಂಪೂರ್ಣ ಸರಪಳಿಯನ್ನು ಬಿಚ್ಚಿಡುವಂತೆ ಖಾಸಗಿ ದೂರುದಾರರಿಂದ...

Related Articles

Popular Categories

error: Content is protected !!