ಸರ್ಕಾರಿ ಶಾಲೆಗಳ ದತ್ತು; ಅತಿಥಿ ಶಿಕ್ಷಕರಲ್ಲಿ ಬದ್ಧತೆ ಕೊರತೆ ನೆಪ ಮುಂದಿರಿಸಿದ ಕಾಂಗ್ರೆಸ್‌ ಸರ್ಕಾರ

ಬೆಂಗಳೂರು; ರಾಜ್ಯದ ಸರ್ಕಾರಿ ಶಾಲೆಗಳನ್ನು ಖಾಸಗಿ  ಶಿಕ್ಷಣ ಆಡಳಿತ ಮಂಡಳಿಗಳಿಗೆ ದತ್ತು ನೀಡುವ ಪ್ರಸ್ತಾವನೆ ಹಿಂದೆ ಸರ್ಕಾರಿ ಶಾಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ  ಅತಿಥಿ ಶಿಕ್ಷಕರಲ್ಲಿ ಬದ್ಧತೆ ಕೊರತೆ ಮತ್ತು ಗುಣಮಟ್ಟದ ಶಿಕ್ಷಣ ದೊರೆಯುತ್ತಿಲ್ಲ ಎಂಬ ನೆಪವನ್ನು  ಮುಖ್ಯಮಂತ್ರಿ ಡಿ ಕೆ ಶಿವಕುಮಾರ್‍‌ ಅವರು ಮುಂದೊಡ್ಡಿರುವುದು ಅಂದಾಜು 27,000 ಅತಿಥಿ ಶಿಕ್ಷಕರು ಬೀದಿಗೆ ಬೀಳಲು ಕಾರಣವಾಗುವ ಸಾಧ್ಯತೆಗಳಿವೆ.

 

ಸರ್ಕಾರಿ ಶಾಲೆಗಳನ್ನು ದತ್ತು ನೀಡುವ ಕುರಿತು ಶಿಕ್ಷಣ ತಜ್ಞರಿಂದ ಆಕ್ಷೇಪ ವ್ಯಕ್ತವಾಗಿರುವ ಬೆನ್ನಲ್ಲೇ ಅತಿಥಿ ಶಿಕ್ಷಕರ ಬದ್ಧತೆಯ ಕೊರತೆ ಮತ್ತು ಗುಣಮಟ್ಟದ ಶಿಕ್ಷಣ ದೊರಕುತ್ತಿಲ್ಲ ಎಂಬ ಕಾರಣವನ್ನು ಮುಂದೊಡ್ಡಿರುವುದು ಶಿಕ್ಷಣ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

 

 

‘ಪ್ರಸ್ತುತ ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಸುಮಾರು 50,000 ಶಿಕ್ಷಕರ ಕೊರತೆ ಇದೆ. ಈ ಕೊರತೆಯನ್ನು ಅತಿಥಿ ಶಿಕ್ಷಕರನ್ನು ನಿಯೋಜಿಸುವ ಮೂಲಕ ಇಲಾಖೆ ಸರಿದೂಗಿಸುತ್ತಿರುವುದು ಸರಿಯಷ್ಟೇ. ಆದರೆ ಸದರಿ ಶಿಕ್ಷಕರಿಂದ ಬದ್ಧತೆಯ ಕೊರತೆಯಿಂದಾಗಿ ಉತ್ತಮ ಗುಣಮಟ್ಟದ ಶಿಕ್ಷಣ ದೊರೆಯುತ್ತಿಲ್ಲ ಎಂಬುದನ್ನು ಗಮನಿಸಲಾಗಿದೆ ಎಂದು ಉಪ ಮುಖ್ಯಮಂತ್ರಿಗಳು ತಿಳಿಸಿದರು. ಆದ್ದರಿಂದ ಶಿಕ್ಷಕರ ಕೊರತೆಯನ್ನು ನೀಗಿಸಲು ಖಾಸಗಿ ಶಿಕ್ಷಣ ಆಡಳಿತ ಮಂಡಳಿಯನ್ನು ಸಂಪರ್ಕಿಸಿ 1.1 ಅನುಪಾತದಲ್ಲಿ ಸರ್ಕಾರಿ ಶಾಲೆಗಳನ್ನು ದತ್ತು ತೆಗೆದುಕೊಳ್ಳಲು ಹೆಚ್ಚುವರಿ ಗುಣಮಟ್ಟದ ಶಿಕ್ಷಕರನ್ನು ಒದಗಿಸಲು ಹಾಗೂ ಪ್ರಶಿಕ್ಷಣ ತರಬೇತಿ ನೀಡಲು ಪ್ರಸ್ತಾಪಿಸಬೇಕು,’ ಎಂದು ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ.

 

 

ರಾಜ್ಯದ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಖಾಲಿ ಇರುವ ಶಿಕ್ಷಕರ ಕೊರತೆಯನ್ನು ನೀಗಿಸಲು ಅತಿಥಿ ಶಿಕ್ಷಕರನ್ನು ಹಲವು ವರ್ಷಗಳಿಂದಲೂ  ನೇಮಿಸಿಕೊಳ್ಳಲಾಗುತ್ತಿದೆ. ಇವರನ್ನು ಖಾಯಂಗೊಳಿಸಬೇಕು ಎಂಬ ಹಕ್ಕೊತ್ತಾಯ ಹಿಂದಿನಿಂದಲೂ ಕೇಳಿ ಬರುತ್ತಿದೆಯಾದರೂ ಸರ್ಕಾರಗಳು ಇದನ್ನು ಒಪ್ಪಿಲ್ಲ. ಈ ಬೆಳವಣಿಗೆ ನಡುವೆಯೇ  ಈ ಶಿಕ್ಷಕರಿಗೆ ನೀಡುತ್ತಿದ್ದ  ಗೌರವ ಸಂಭಾವನೆಯನ್ನು 2022ರ ಜೂನ್‌ 18ರಂದು ಪರಿಷ್ಕರಿಸಿ ಹೆಚ್ಚಳ ಮಾಡಲಾಗಿತ್ತು.

 

ಇದೀಗ ಸರ್ಕಾರಿ ಶಾಲೆಗಳನ್ನು ಖಾಸಗಿ ಶಿಕ್ಷಣ ಆಡಳಿತ ಮಂಡಳಿಗಳಿಗೆ ದತ್ತು ನೀಡುವ ಪ್ರಸ್ತಾವವನ್ನು ಮುಂದಿರಿಸಲು  ಬದ್ಧತೆಯಲ್ಲಿ  ಕೊರತೆ ಮತ್ತು ಗುಣಮಟ್ಟದ ಶಿಕ್ಷಣ ನೀಡುತ್ತಿಲ್ಲ  ಎಂಬ ಅಂಶವನ್ನು ಮುಂದೊಡ್ಡಿರುವುದು ಅತಿಥಿ ಶಿಕ್ಷಕರ ಆಕ್ರೋಶಕ್ಕೆ ಕಾಂಗ್ರೆಸ್‌ ಸರ್ಕಾರವು ತುಪ್ಪ ಸುರಿದಂತಾಗಿದೆ.

 

ಪ್ರಾಥಮಿಕ ಶಾಲಾ ಅತಿಥಿ ಶಿಕ್ಷಕರಿಗೆ 7,500 ರು. ನಿಂದ 10,000 ರು.ಗಳಿಗೆ, ಪ್ರೌಢಶಾಲೆ ಅತಿಥಿ ಶಿಕ್ಷಕರಿಗೆ 8,000 ರು.ನಿಂದ 10,500 ರು.ವರೆಗೆ ಪರಿಷ್ಕರಿಸಿ ಹೆಚ್ಚಳ ಮಾಡಲಾಗಿತ್ತು. ಅಲ್ಲದೇ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ನೇರ ನೇಮಕಾತಿಯಿಂದ ಭರ್ತಿ ಮಾಡಲು ಅವಕಾಶವಿದೆ. ನೇರ ನೇಮಕಾತಿಯಿಂದ ಭರ್ತಿ ಮಾಡುವವರೆಗೆ ಅಥವಾ ಶೈಕ್ಷಣಿಕ ವರ್ಷದ ಅಂತ್ಯದವರೆಗೆ ಎಂಬ ಷರತ್ತು ವಿಧಿಸಲಾಗಿದೆ.

 

ಪ್ರಸಕ್ತ ಶೈಕ್ಷಣಿಕ ಸಾಲಿಗೆ (2023-24) ಸಂಬಂಧಿಸಿ ರಾಜ್ಯದ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಖಾಲಿ ಇರುವ ಶಿಕ್ಷಕರ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಸೂಚಿಸಲಾಗಿತ್ತು. ಆದರೂ  ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ಅತಿಥಿ ಶಿಕ್ಷಕರನ್ನು  ನೇಮಕಾತಿ ಮಾಡಬೇಕು ಎಂದು ಆಯುಕ್ತರು ಸೂಚಿಸಿದ್ದರು.

 

ರಾಜ್ಯದ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಒಟ್ಟು 27,000 ಅತಿಥಿ ಶಿಕ್ಷಕರ ನೇಮಕಾತಿಗೆ ಆದೇಶ ನೀಡಲಾಗಿತ್ತು.  ಇದರಲ್ಲಿ ಸರ್ಕಾರ ಈಗಾಗಲೇ ಆದೇಶ ನೀಡಿರುವ 15,000 ಪದವೀಧರ ಪ್ರಾಥಮಿಕ ಶಿಕ್ಷಕರ (6 ರಿಂದ 8ನೆ ತರಗತಿ) ನೇಮಕವೂ ಒಳಗೊಂಡಿದೆ. ಒಂದೊಮ್ಮೆ ಸರ್ಕಾರಿ ಶಾಲೆಗಳನ್ನು ಖಾಸಗಿ ಶಿಕ್ಷಣ ಆಡಳಿತ ಮಂಡಳಿಗಳಿಗೆ ದತ್ತು ನೀಡಿದಲ್ಲಿ 27,000 ಅತಿಥಿ ಶಿಕ್ಷಕರು ಬೀದಿಗೆ ಬೀಳುವ ಸಾಧ್ಯತೆಗಳೇ ಹೆಚ್ಚಾಗಿವೆ ಎನ್ನಲಾಗಿದೆ.

 

 

ಈ ನೇಮಕ ಪ್ರಕ್ರಿಯೆಗೆ ಕೆಲವು ಷರತ್ತುಗಳನ್ನು ಆಯುಕ್ತರ ಕಚೇರಿ ವಿಧಿಸಿತ್ತು. ಆದ್ಯತೆ ಮೇರೆಗೆ ಅತಿಥಿ ಶಿಕ್ಷಕರ ನೇಮಕ ಮಾಡಬೇಕು. ಇದನ್ನು ಆಯಾ ಶಾಲಾ ಮುಖ್ಯಶಿಕ್ಷಕರೇ ನಡೆಸಬೇಕು. ಸರ್ಕಾರಿ ಕರ್ನಾಟಕ ಪಬ್ಲಿಕ್‌ ಸ್ಕೂಲ್‌/ ಬೆಂಗಳೂರು ಪಬ್ಲಿಕ್‌ ಸ್ಕೂಲ್‌ಗಳಲ್ಲಿ ಹಾಗೂ ಆದರ್ಶ ವಿದ್ಯಾಲಯಗಳಲ್ಲಿ ಶೇಕಡ 100 ಹುದ್ದೆಗಳು ಭರ್ತಿಯಾಗಬೇಕು. ಅಲ್ಲಿ ಆದ್ಯತೆ ಮೇರೆಗೆ ಅತಿಥಿ ಶಿಕ್ಷಕರನ್ನು ನೇಮಕ ಮಾಡಬೇಕು ಎಂದು ಆಯುಕ್ತರು ಕೋರಿದ್ದರು. ಹೆಚ್ಚುವರಿ ಶಿಕ್ಷಕರು ಇರುವ ಶಾಲೆಗಳಿಗೆ ಅತಿಥಿ ಶಿಕ್ಷಕರ ಹುದ್ದೆಗಳನ್ನು ಮಂಜೂರು ಮಾಡುವಂತಿಲ್ಲ ಎಂದು ಸೂಚಿಸಿದ್ದರು.

 

ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಂಡ ಹುದ್ದೆಗೆ ವರ್ಗಾವಣೆ/ನೇಮಕಾತಿ ಮುಖಾಂತರ ಖಾಯಂ ಶಿಕ್ಷಕರು ಸ್ಥಳನಿಯುಕ್ತಿಗೊಂಡಲ್ಲಿ ಸದರಿ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅತಿಥಿ ಶಿಕ್ಷಕರನ್ನು ಕರ್ತವ್ಯದಿಂದ ಬಿಡುಗಡೆಗೊಳಿಸಿ ತಾಲ್ಲೂಕಿನಲ್ಲಿ ವರ್ಗಾವಣೆಯಿಂದ ತೆರವಾದ ಹುದ್ದೆಗೆ ಅತಿಥಿ ಶಿಕ್ಷಕರನ್ನು ಹಂಚಿಕೆ ಮಾಡಬೇಕೆಂದು ಆದೇಶದಲ್ಲಿ ತಿಳಿಸಲಾಗಿತ್ತು.

 

ಅತಿಥಿ ಶಿಕ್ಷಕರನ್ನು ಅತೀ ಹೆಚ್ಚು ಮಕ್ಕಳಿರುವ ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಶಿಕ್ಷಕರ ಹುದ್ದೆಗಳು ಖಾಲಿ ಇರುವ ಪ್ರೌಢ ಶಾಲೆಗಳಿಗೆ ಆದ್ಯತೆ ಮೇರೆಗೆ ಒದಗಿಸಬೇಕು. ಅತಿಥಿ ಶಿಕ್ಷಕರನ್ನು ಪ್ರಮುಖವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಅತ್ಯಾವಶ್ಯಕ ಖಾಲಿ ಹುದ್ದೆಗಳಿಗೆ ಆದ್ಯತೆ ಮೇರೆಗೆ ನೇಮಿಸುವುದು.  ಅತಿಥಿ ಶಿಕ್ಷಕರನ್ನು ಆಯಾ ಹುದ್ದೆಗೆ ನಿಗಧಿಪಡಿಸಿದ ಕನಿಷ್ಠ ವಿದ್ಯಾರ್ಹತೆಯನ್ನು ಪರಿಗಣಿಸಿ ಮೆರಿಟ್ ಆಧಾರದಲ್ಲಿ ಆಯ್ಕೆ ಮಾಡತಕ್ಕದ್ದು. ಅತಿಥಿ ಶಿಕ್ಷಕರ ಹಾಜರಾತಿ ವಹಿಯನ್ನು ಪ್ರತ್ಯೇಕವಾಗಿ ನಿರ್ವಹಿಸಬೇಕು ಎಂದು ಹೇಳಲಾಗಿತ್ತು.

 

ಎಲ್ಲಿ ಎಷ್ಟು ಹುದ್ದೆಗಳಿವೆ?

 

ಬೆಳಗಾವಿ-1046, ಬಾಗಲಕೋಟೆ-1130, ವಿಜಯಪುರ-1115, ಕಲಬುರ್ಗಿ-1706,  ಬೀದರ್‌- 681, ರಾಯಚೂರು- 1540, ಕೊಪ್ಪಳ- 1035, ಗದಗ- 471, ಧಾರವಾಡ-540, ಹಾವೇರಿ- 617, ಬಳ್ಳಾರಿ- 540, ಚಿತ್ರದುರ್ಗ-571, ದಾವಣಗೆರೆ- 979, ಶಿವಮೊಗ್ಗ- 731, ಉಡುಪಿ- 312, ಚಿಕ್ಕಮಗಳೂರು- 430, ತುಮಕೂರು- 585, ಕೋಲಾರ- 499, ಬೆಂಗಳೂರು ದಕ್ಷಿಣ- 573, ಬೆಂಗಳೂರು ಗ್ರಾಮೀಣ- 367, ಮಂಡ್ಯ- 827, ಹಾಸನ- 712, ದಕ್ಷಿಣ ಕನ್ನಡ- 828, ಕೊಡಗು- 259, ಮೈಸೂರು- 1090, ಚಾಮರಾಜನಗರ-409, ಬೆಂಗಳೂರು ಉತ್ತರ- 186, ಚಿಕ್ಕಬಳ್ಳಾಪುರ- 551, ಬೆಳಗಾವಿ ಚಿಕ್ಕೋಡಿ-1673, ತುಮಕೂರು ಮಧುಗಿರಿ- 553, ರಾಮನಗರ-571, ಯಾದಗಿರಿ- 1364, ಉತ್ತರ ಕನ್ನಡ, ಶಿರಸಿ- 584, ವಿಜಯನಗರ- 1685 ಹುದ್ದೆಗಳಿವೆ.

ಸರ್ಕಾರ ಅವರಿಗೆ ಮಾಸಿಕ 10 ಸಾವಿರ ರೂ.ಮಾತ್ರ ವೇತನ ನಿಗದಿ ಮಾಡಿದೆ. ಇಂದು ಕಾರ್ಮಿಕ ಇಲಾಖೆಯ ಕನಿಷ್ಠ ವೇತನ ಕಾಯ್ದೆಯಡಿ ಕನಿಷ್ಠ ವೇತನ 18 ಸಾವಿರ ರೂ. ಇದೆ. ಪಿಎಫ್‌, ಇಎಸ್‌ಐ ಗಳನ್ನು ನೀಡಬೇಕಾಗುತ್ತದೆ. ಖಾಸಗಿಯವರೂ ಈ ಸೌಲಭ್ಯ ನೀಡಬೇಕು ಎಂಬ ನಿಯಮವಿದೆ. ಆದರೆ, ಸರ್ಕಾರದಿಂದ ನೇಮಕವಾಗುವ ತಾತ್ಕಾಲಿಕ ಶಿಕ್ಷಕರಿಗೇ ಕನಿಷ್ಠ ವೇತನವಿಲ್ಲ ಎಂಬುದು ಅತಿಥಿ ಶಿಕ್ಷಕರ ವಲಯದಲ್ಲಿ ಅಸಮಾಧಾನವಿದೆ.

 

ರಾಜ್ಯದ ತಾಲೂಕು  ಪಂಚಾಯ್ತಿ ವ್ಯಾಪ್ತಿಯ ಶಿಕ್ಷಣ ಇಲಾಖೆಯಲ್ಲಿ 2022-23ನೇ ಸಾಲಿನಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ತೆರವಾಗಿರುವ ಶಿಕ್ಷಕರ ಹುದ್ದೆಗಳಿಗೆ ಎದುರಾಗಿ ಅತಿಥಿ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಶಿಕ್ಷಕರಿಗೆ 2022ರ ಅಕ್ಟೋಬರ್‍‌ ರಿಂದ 2023ರ ಮಾರ್ಚ್‌ವರೆಗಿನ ಅವಧಿಯವರೆಗೆ 13509.12 ಲಕ್ಷ ರು.ಗಳನ್ನು 2022ರ ನವೆಂಬರ್‍‌ 19ರಂದು ಆರ್ಥಿಕ ಇಲಾಖೆಯು ಬಿಡುಗಡೆಗೊಳಿಸಿತ್ತು.

 

 

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಸಿಎಸ್‌ಆರ್‍‌ ಅನುದಾನ ಕುರಿತು 2023ರ ಆಗಸ್ಟ್‌ 16ರಂದು ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್‍‌ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ 1.1 ಅನುಪಾತದಲ್ಲಿ ಸರ್ಕಾರಿ ಶಾಲೆಗಳನ್ನು ದತ್ತು ತೆಗೆದುಕೊಳ್ಳಲು ಖಾಸಗಿ ಶಿಕ್ಷಣ ಮಂಡಳಿಗಳನ್ನು ಸಂಪರ್ಕಿಸಿ ಪ್ರಸ್ತಾವನೆ ಸಲ್ಲಿಸುವ ಕುರಿತು ಚರ್ಚೆಯಾಗಿತ್ತು.

ಖಾಸಗಿ ಶಿಕ್ಷಣ ಮಂಡಳಿಗಳಿಗೆ ಸರ್ಕಾರಿ ಶಾಲೆಗಳ ದತ್ತು ಪ್ರಸ್ತಾವ; ಶಿಕ್ಷಣ ಪದವೀಧರರ ಭವಿಷ್ಯ ಮಸುಕು!

 

ದತ್ತು ನೀಡುವ ಯೋಜನೆಯನ್ನೂ ಸೇರಿಸಿದಂತೆ ಸಭೆಯಲ್ಲಿ ಕೈಗೊಂಡ ನಿರ್ಣಯಗಳಿಗೆ ಅನುಸಾರವಾಗಿ ತ್ವರಿತಗತಿಯಲ್ಲಿ ಒಂದು ವಿಸ್ತೃತ ಪ್ರಸ್ತಾವನೆಯನ್ನು ತಯಾರಿಸಿ ಒಂದು ವಾರದ ಒಳಗಾಗಿ ಉಪ ಮುಖ್ಯಮಂತ್ರಿಗಳಿಗೆ ಪ್ರಸ್ತುತ ಪಡಿಸಬೇಕು ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಸೂಚಿಸಲಾಗಿತ್ತು.

 

ಅಲ್ಲದೇ ಶಾಲೆಗಳ ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಳ್ಳಲು ದಾನಿಗಳ ಮೊರೆ ಹೋಗಲು ನಿರ್ಣಯಿಸಿದೆ. ‘ ದಾನಿಗಳ ಕೊಡುಗೆಗಾಗಿ ಅನುಗುಣವಾಗಿ ಸರ್ಕಾರಿ ಶಾಲೆ/ಕೊಠಡಿಯ ಮುಂದೆ ಇನ್ನಿತರೆ ಮೂಲಭೂತ ಸೌಕರ್ಯಗಳ ಮುಂದೆ ದಾನಿಗಳ ಹೆಸರನ್ನು ಸೇರಿಸಲು ಅವಕಾಶ ಕಲ್ಪಿಸುವುದು ಹಾಗೂ ಇನ್ನಿತರೆ ಷರತ್ತುಗಳನ್ನು ಸೇರಿ ಒಂದು ಒಡಂಬಡಿಕೆ ತಯಾರಿಸಬೇಕು,’ ಎಂಬ ನಿರ್ಣಯನ್ನೂ ಕೈಗೊಳ್ಳಲಾಗಿದೆ.

 

ಸಿಎಸ್‌ಆರ್‍‌ ಅನುಷ್ಠಾನ ಸಮಿತಿ ಸಭೆಯಲ್ಲಿ ಭಾಗವಹಿಸಿರುವ ಡಿ ಕೆ ಶಿವಕುಮಾರ್‍‌, ಮಧು ಬಂಗಾರಪ್ಪ ಮತ್ತಿತರರು

 

ರಾಜ್ಯಕ್ಕೆ ಕನಿಷ್ಠ 5,000 ಕೋಟಿ ಸಿಎಸ್‌ಆರ್‍‌ ಅಡಿಯಲ್ಲಿ ಕಂಪನಿಗಳ ಕಾಯ್ದೆ ಪ್ರಕಾರ ಶಿಕ್ಷಣ ಕ್ಷೇತ್ರದಲ್ಲಿ ಉಪಯೋಗಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್‍‌ ಅವರು 2023ರ ಆಗಸ್ಟ್ 4ರಂದು ನಡೆದಿದ್ದ ಸಭೆಯಲ್ಲಿ ಪ್ರಸ್ತಾಪಿಸಿದ್ದರು. ಇದನ್ನು ಕಾರ್ಯಗತಗೊಳಿಸಲು 2023ರ ಆಗಸ್ಟ್‌ 16ರಂದು ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್‍‌ ಅಧ್ಯಕ್ಷತೆಯಲ್ಲಿ ಸಭೆ ನಡೆಸಲಾಗಿತ್ತು. ಈ ಸಭೆಯಲ್ಲಿಯೇ ಶಿಕ್ಷಕರ ಕೊರತೆ ನೀಗಿಸಲು ಸರ್ಕಾರಿ ಶಾಲೆಗಳನ್ನು ಖಾಸಗಿ ಶಿಕ್ಷಣ ಮಂಡಳಿಗಳಿಗೆ ದತ್ತು ನೀಡುವ ಕುರಿತು ತೀರ್ಮಾನಿಸಿದೆ.

 

ರಾಜ್ಯದಲ್ಲಿ ಈಗಾಗಲೇ 285 ಕರ್ನಾಟಕ ಪಬ್ಲಿಕ್‌ ಶಾಲೆಗಳು ಅಸ್ತಿತ್ವದಲ್ಲಿವೆ. ಇದೇ ಮಾದರಿಯಂತೆ ರಾಜ್ಯದ 6000 ಗ್ರಾಮ ಪಂಚಾಯತ್‌ಗಳಲ್ಲಿ ಮುಂದಿನ 5 ವರ್ಷಗಳಲ್ಲಿ ಕರ್ನಾಟಕ ಪಬ್ಲಿಕ್‌ ಶಾಲೆಳನ್ನು ಸಿಎಸ್‌ಆರ್‍‌ ಸಹಯೋಗದೊಂದಿಗೆ ಪ್ರಾರಂಭಿಸಲು ಕ್ರಿಯಾ ಯೋಜನೆ ತಯಾರಿಸಲು ಡಿ ಕೆ ಶಿವಕುಮಾರ್‍‌ ಸೂಚಿಸಿದ್ದರು.

the fil favicon

SUPPORT THE FILE

Latest News

Related Posts