4 ಕೋಟಿ ರು ಮೌಲ್ಯದ ಸರ್ಕಾರಿ ಆಸ್ತಿ, ಖಾಸಗಿ ವ್ಯಕ್ತಿಗಳಿಗೆ ಪರಭಾರೆ; ತನಿಖಾ ವರದಿಯಿದ್ದರೂ ಕ್ರಮವಿಲ್ಲ

ಬೆಂಗಳೂರು; ಕರ್ನಾಟಕ ಆಹಾರ ನಿಗಮಕ್ಕೆ ಸೇರಿದ ಅಂದಾಜು ನಾಲ್ಕು ಕೋಟಿ ರು. ಬೆಲೆಬಾಳುವ ಸರ್ಕಾರಿ ಆಸ್ತಿಯನ್ನು ಖಾಸಗಿ ವ್ಯಕ್ತಿಗಳಿಗೆ ಕಾನೂನುಬಾಹಿರವಾಗಿ 5 ಖಾತೆ, ಪಿಐಡಿ ಸೃಷ್ಟಿಸಿರುವ ಪ್ರಕರಣವು ಯಾದಗಿರಿ ನಗರಸಭೆಯಲ್ಲಿ ನಡೆದಿರುವುದು ಇದೀಗ ಬಹಿರಂಗವಾಗಿದೆ.

 

ತಾಯಪ್ಪ ಎಂಬುವರು ಸಲ್ಲಿಸಿದ್ದ ದೂರನ್ನಾಧರಿಸಿ ತನಿಖೆ ನಡೆಸಿರುವ ಪೌರಾಯುಕ್ತ ಸಂಗಪ್ಪ ಉಪಾಸೆ ಅವರು ಈ ಸಂಬಂಧ ಕಲ್ಬುರ್ಗಿ ವಿಭಾಗದ ಪ್ರಾದೇಶಿಕ ಆಯುಕ್ತರಿಗೆ 2023ರ ಜೂನ್‌ 20ರಂದು ವರದಿ ಸಲ್ಲಿಸಿದ್ದಾರೆ. ವರದಿ ಸಲ್ಲಿಕೆಯಾಗಿ 2 ತಿಂಗಳು ಕಳೆದರೂ ಇದುವರೆಗೂ ಸಚಿವ ರಹೀಂ ಖಾನ್‌ ಆಗಲೀ, ಪ್ರಾದೇಶಿಕ ಆಯುಕ್ತರಾಗಲೀ ಯಾವುದೇ ಕ್ರಮಕೈಗೊಂಡಿಲ್ಲ ಎಂದು ಗೊತ್ತಾಗಿದೆ.  ಈ ವರದಿ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ಇದೇ ನಗರಸಭೆ ವ್ಯಾಪ್ತಿಯಲ್ಲಿ ಖೊಟ್ಟಿ ದಾಖಲೆ ಸೃಷ್ಟಿಸಿ ಬೊಕ್ಕಸಕ್ಕೆ 18.12 ಕೋಟಿ ರ. ನಷ್ಟವಾಗಿದ್ದ ಪ್ರಕರಣವು ಬಹಿರಂಗವಾಗಿತ್ತು. ಇದರ ಬೆನ್ನಲ್ಲೇ ಆಹಾರ ನಿಗಮಕ್ಕೆ ಸೇರಿದ ಆಸ್ತಿಯನ್ನೂ ಖಾಸಗಿ ವ್ಯಕ್ತಿಗಳ ಹೆಸರಿನಲ್ಲಿ ಮ್ಯುಟೇಷನ್, ಪಿಐಡಿ ಸೃಷ್ಟಿಸಿರುವುದು ಮುನ್ನೆಲೆಗೆ ಬಂದಿದೆ.

 

ಖೊಟ್ಟಿ ದಾಖಲೆ ಸೃಷ್ಟಿಸಿ ಬೊಕ್ಕಸಕ್ಕೆ 18.12 ಕೋಟಿ ನಷ್ಟ; ವರದಿ ಸಲ್ಲಿಸಿ 2 ತಿಂಗಳಾದರೂ ಕ್ರಮಕೈಗೊಳ್ಳದ ಸರ್ಕಾರ

 

ಯಾದಗಿರಿ ನಗರಸಭೆಗೆ ಸೇರಿದ ಸರ್ವೆ ನಂಬರ್‍‌ 391/1, 2ರಲ್ಲಿ ಮನೆ ಸಂಖ್ಯೆ 5-1-408/23 ಎ ಹಾಗೂ 24 ಎ, 25 ಎ, 26 ಎ, 27ಎ ಮತತು 5-1-408/28 ಎ ಎಂದು ಮನೆ ನಂಬರ್‍‌ ನೀಡಿ ಖಾಸಗಿ ವ್ಯಕ್ತಿಗಳಿಗೆ ಕಾನೂನುಬಾಹಿರವಾಗಿ 2023ರ ಮೇ 24ರಂದು 6 ಖಾತಾ ನಕಲು ಮತ್ತು ಪಿಐಡಿ ನೀಡಲಾಗಿತ್ತು.

 

ಈ ಪ್ರಕರಣದಲ್ಲಿ ಖಾತಾ ನಕಲು ವಿಭಾಗದ ವಿಷಯ ನಿರ್ವಾಹಕ ಶಿವಲೀಲಾ, ಇದನ್ನು ವರ್ಗಾವಣೆ ಮಾಡಿದ ಪುಷ್ಪಲತಾ ಸೇರಿ ನಗರಸಭೆಯ ಒಟ್ಟು 8 ಮಂದಿ ಅಧಿಕಾರಿಗಳು ಭಾಗಿಯಾಗಿದ್ದಾರೆ. ಅಲ್ಲದೇ 4 ಕೋಟಿ ರು. ಬೆಲೆಬಾಳುವ ಸರ್ಕಾರಿ ಆಸ್ತಿಯನ್ನು 22 ಲಕ್ಷ ಲಂಚ ಪಡೆದು ಖಾತೆ, ಮ್ಯುಟೇಷನ್‌, ಪಿಐಡಿ ಸೃಷ್ಟಿಸಿ ಅಧಿಕಾರ ದುರುಪಯೋಗಪಡಿಸಿಕೊಳ್ಳಲಾಗಿದೆ ಎಂದು ತಾಯಪ್ಪ ಎಂಬುವರು ದೂರಿನಲ್ಲಿ ವಿವರಿಸಿದ್ದರು.

 

ಈ ಕುರಿತು ತನಿಖೆ ನಡೆಸಿದ್ದ ಪೌರಾಯುಕ್ತ ಸಂಗಪ್ಪ ಉಪಾಸೆ ಅವರು, ತಾಯಪ್ಪ ಎಂಬುವರು  ದೂರಿನಲ್ಲಿ ಮಾಡಿದ್ದ ಆರೋಪಗಳನ್ನು ಸಾಬೀತುಪಡಿಸಿದ್ದಾರೆ.

 

ಆಹಾರ ನಿಗಮಕ್ಕೆ ಸೇರಿದ್ದ ಜಾಗವಿದು

 

ಯಾದಗಿರಿ ನಗರದ ಚಿತ್ತಾಪುರ ರಸ್ತೆಯಲ್ಲಿ ಒಟ್ಟು 100*140*3 ಸೇರಿ ಒಟ್ಟಾರೆ 42,000 ಚದರ ಅಡಿ ವಿಸ್ತಿರ್ಣದ 3 ಟಿನ್‌ ಶೆಡ್‌ ಗೋದಾಮು ಇದೆ. ಈ ಆಸ್ತಿಯನ್ನು 2011ರ ಮಾರ್ಚ್‌ 10ರಂದೇ ಆಹಾರ ನಿಗಮಕ್ಕೆ ಹಸ್ತಾಂತರವಾಗಿತ್ತು. ದೂರಿನಲ್ಲಿ ಪ್ರಸ್ತಾಪಿಸಿದ್ದಂತೆ ಆಸ್ತಿ ನಂ 5-1-408 ಸೇರಿ 6 ಆನ್‌ ಲೈನ್‌ ಖಾತೆಗಳು, ಫಾರಂ 3 ಕಡತ ದಾಖಲೆಗಳ ಪ್ರಕಾರ ಇದು ಯಾರದೇ ಪಿತ್ರಾರ್ಜಿತ ಆಸ್ತಿಯಾಗಿಲ್ಲ. ಮತ್ತು ಈ ಆಸ್ತಿಯನ್ನು ಯಾರಿಂದಲೂ ಖರೀದಿ ಮಾಡಿಲ್ಲ. ಹೀಗಾಗಿ ಈ ಆಸ್ತಿಯು ಆಹಾರ ಇಲಾಖೆಗೆ ಸೇರಿದೆ ಎಂದು ತನಿಖಾ ವರದಿಯಲ್ಲಿ ವಿವರಿಸಲಾಗಿದೆ.

 

ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಜಿಲ್ಲಾ ವ್ಯವಸ್ಥಾಪಕರು ಸಹ ಈ ಬಗ್ಗೆ ಯಾದಗಿರಿ ನಗರಸಭೆ ಪೌರಾಯುಕ್ತರಿಗೆ 2023ರ ಜುಲೈ 3ರಂದು ಪತ್ರವನ್ನೂ ಬರೆದಿದ್ದಾರೆ. ‘ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಮಾಲೀಕತ್ವದಲ್ಲಿರುವ ಮೂರು ನಿವೇಶನಗಳು, ಸರ್ಕಾರಿ ಗೋದಾಮು ಮತ್ತು ಒಂದು ಕಟ್ಟಡ ಒತ್ತುವರಿಯಾಗಿದೆ. ಇದನ್ನು ತೆರವುಗೊಳಿಸಿ ಖುಲ್ಲಾಗೊಳಿಸಬೇಕು,’ ಎಂದು ಪತ್ರ ಬರೆದಿದ್ದರು.

 

ನಗರಸಭೆ ಆಧಿಕಾರಿಗಳು ಭಾಗಿ

 

ನಗರಸಭೆಯಲ್ಲಿ ಈ ಹಿಂದೆ ಕಾರ್ಯನಿರ್ವಹಿಸಿfದ ಅಧಿಕಾರಿಗಳು, ಸಿಬ್ಬಂದಿಗಳು ಬೈ ನಂಬರ್‍‌ ನೀಡಿ ಆನ್‌ಲೈನ್‌ ಖಾತೆ, ಫಾರಂ 3 ನೀಡಿದ್ದರು. ಅಲ್ಲದೇ ಕೆಲವೊಂದು ಆಸ್ತಿಗಳು ಉಪ ನೋಂದಣಿ ಕಚೇರಿಯಲ್ಲಿ ನೋಂದಣಿಯಾಗಿ ನಗರಸಭೆಯಲ್ಲಿ ವರ್ಗಾವಣೆಯಾಗಿತ್ತು. ವರ್ಗಾವಣೆಯಾದ ಆಸ್ತಿಗಳ ಖಾತೆ ವರ್ಗಾವಣೆಯನ್ನು ರದ್ದುಪಡಿಸಲು ಪೌರಾಯುಕ್ತರಿಗೆ ಅಧಿಕಾರವಿಲ್ಲ. ಆದರೂ ಈ ಹಿಂದಿನ ಪೌರಾಯುಕ್ತರೇ ನೇರವಾಗಿ ಈ ವರ್ಗಾವಣೆಯನ್ನು ರದ್ದುಪಡಿಸಿದ್ದಾರೆ ಮತ್ತು ಈ ಅವ್ಯವಹಾರದ ಬಗ್ಗೆ ಮೇಲಾಧಿಕಾರಿಗಳಿಗೆ ಯಾವುದೇ ಮಾಹಿತಿಯನ್ನೂ ನೀಡಿಲ್ಲ ಎಂದು ಹೇಳಲಾಗಿದೆ.

 

ಅಲ್ಲದೇ ‘ಸರ್ವೆ ನಂಬರ್‍‌ 391/1, 2 ಹಳೇ ಪಹಣಿಗಳಲ್ಲಿ ಸೀಗಾ ಲೋಕಲ್‌ ಫಂಡ್‌ ಎಂದು ನಮೂದಾಗಿದ್ದು ಇದು ಆಹಾರ ನಿಗಮದ್ದೇ ಆಸ್ತಿ ಎಂದಿದೆ. ಈ ಹಿಂದೆ ನಗರಸಭೆಯಲ್ಲಿ ಕಾರ್ಯನಿರ್ವಹಿಸಿದ ಅಧಿಕಾರಿ, ಸಿಬ್ಬಂದಿಗಳು ನೇರವಾಗಿ ಕರ ನಿರ್ಧರಣಾ ಆದೇಶವನ್ನು ಸೃಷ್ಟಿಸಿ ಆಹಾರ ನಿಗಮಕ್ಕೆ ಸೇರಿದ 4 ಕೋಟಿ ರು ಬೆಲೆ ಬಾಳುವ ಆಸ್ತಿಯನ್ನು ನಿಯಮಬಾಹಿರವಾಗಿ ಆನ್‌ಲೈನ್‌ ಮೂಲಕ ಖಾತೆ ನಕಲು, ಫಾರಂ 3ನ್ನು ವರ್ಗಾವಣೆ ಮಾಡಿದ ಅಧಿಕಾರಿ ಸಿಬ್ಬಂದಿಗಳ ಮೇಲೆ ಸೂಕ್ತ ಕ್ರಮ ಜರುಗಿಸಬೇಕು,’ ಎಂದು ಪೌರಾಯುಕ್ತ ಸಂಗಪ್ಪ ಉಪಾಸೆ ಅವರು ಕಲ್ಬುರ್ಗಿ ವಿಭಾಗದ ಪ್ರಾದೇಶಿಕ ಆಯುಕ್ತರಿಗೆ ಬರೆದ ಪತ್ರದಲ್ಲಿ ಕೋರಿದ್ದಾರೆ.

the fil favicon

SUPPORT THE FILE

Latest News

Related Posts