ಖಾಸಗಿ ಶಿಕ್ಷಣ ಮಂಡಳಿಗಳಿಗೆ ಸರ್ಕಾರಿ ಶಾಲೆಗಳ ದತ್ತು ಪ್ರಸ್ತಾವ; ಶಿಕ್ಷಣ ಪದವೀಧರರ ಭವಿಷ್ಯ ಮಸುಕು!

photo credit;madhubangarappa official twitter page

ಬೆಂಗಳೂರು; ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಖಾಲಿ ಇರುವ ಸುಮಾರು 50,000 ಶಿಕ್ಷಕರ ಕೊರತೆ ನೀಗಿಸಲು ಸರ್ಕಾರಿ ಶಾಲೆಗಳನ್ನು ಖಾಸಗಿ ಶಿಕ್ಷಣ ಮಂಡಳಿಗಳಿಗೆ ದತ್ತು ನೀಡಲು ಸರ್ಕಾರವು ಪ್ರಸ್ತಾಪಿಸುವುದು ಮತ್ತು ಶಾಲೆಗಳ ಮೂಲಸೌಕರ್ಯಗಳಿಗಾಗಿ ದಾನಿಗಳ ನೆರವು ಪಡೆಯುವ ಬಗ್ಗೆ ಒಡಂಬಡಿಕೆ ತಯಾರಿಸಲು ನಿರ್ಧರಿಸಿರುವುದು ಇದೀಗ ಬಹಿರಂಗವಾಗಿದೆ.

 

ಗೃಹ ಲಕ್ಷ್ಮಿ ಸೇರಿದಂತೆ 5 ಗ್ಯಾರಂಟಿ ಯೋಜನೆಗಳಿಗಾಗಿ ಸಂಪನ್ಮೂಲ ಕ್ರೋಢೀಕರಣ ಮತ್ತು ಸಾಲವನ್ನು ಎತ್ತಲು ಹೆಣಗಾಡುತ್ತಿರುವ ರಾಜ್ಯ ಕಾಂಗ್ರೆಸ್‌ ಸರ್ಕಾರವು ಸರ್ಕಾರಿ ಶಾಲೆಗಳನ್ನು ಖಾಸಗಿ ಶಿಕ್ಷಣ ಮಂಡಳಿಗಳಿಗೆ ದತ್ತು ನೀಡುವ ಕುರಿತು ಪ್ರಸ್ತಾಪಿಸಲು ನಿರ್ಣಯ ಕೈಗೊಂಡಿರುವುದು ಚರ್ಚೆಗೆ ಗ್ರಾಸವಾಗಿದೆ. ಅಲ್ಲದೇ ಶಿಕ್ಷಕರ ನೇಮಕಾತಿ ಪ್ರಕ್ರಿಯೆ ನಡೆಸಲಾಗುವುದು ಎಂದು  ಸಚಿವ ಮಧು ಬಂಗಾರಪ್ಪ ಅವರು ಬಜೆಟ್‌ ಅಧಿವೇಶನದಲ್ಲಿ ನೀಡಿದ್ದ ಹೇಳಿಕೆಯಿಂದ ಭರವಸೆಯಿಂದಿದ್ದ ಶಿಕ್ಷಣ ಪದವಿ ಪಡೆದಿರುವ ನಿರುದ್ಯೋಗಿ ಸಮೂಹದಲ್ಲಿ ಇದೀಗ  ನಿರಾಸೆಯ ಕಾರ್ಮೋಡ ಕವಿದಂತಾಗಿದೆ.

 

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಸಿಎಸ್‌ಆರ್‍‌ ಅನುದಾನ ಕುರಿತು 2023ರ ಆಗಸ್ಟ್‌ 16ರಂದು ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್‍‌ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ 1.1 ಅನುಪಾತದಲ್ಲಿ ಸರ್ಕಾರಿ ಶಾಲೆಗಳನ್ನು ದತ್ತು ತೆಗೆದುಕೊಳ್ಳಲು ಖಾಸಗಿ ಶಿಕ್ಷಣ ಮಂಡಳಿಗಳನ್ನು ಸಂಪರ್ಕಿಸಿ ಪ್ರಸ್ತಾವನೆ ಸಲ್ಲಿಸುವ ಕುರಿತು ಚರ್ಚೆಯಾಗಿದೆ. ಈ ಕುರಿತು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉನ್ನತ ಅಧಿಕಾರಿಯೊಬ್ಬರು ‘ದಿ ಫೈಲ್‌’ಗೆ ಖಚಿತಪಡಿಸಿದ್ದಾರೆ.

 

ದತ್ತು ನೀಡುವ ಯೋಜನೆಯನ್ನೂ ಸೇರಿಸಿದಂತೆ ಸಭೆಯಲ್ಲಿ ಕೈಗೊಂಡ ನಿರ್ಣಯಗಳಿಗೆ ಅನುಸಾರವಾಗಿ ತ್ವರಿತಗತಿಯಲ್ಲಿ ಒಂದು ವಿಸ್ತೃತ ಪ್ರಸ್ತಾವನೆಯನ್ನು ತಯಾರಿಸಿ ಒಂದು ವಾರದ ಒಳಗಾಗಿ ಉಪ ಮುಖ್ಯಮಂತ್ರಿಗಳಿಗೆ ಪ್ರಸ್ತುತ ಪಡಿಸಬೇಕು ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ತಿಳಿದು ಬಂದಿದೆ.

 

ಅದೇ ರೀತಿ ಸಿಎಸ್‌ಆರ್‍‌ ಅನುಷ್ಠಾನ ಸಮಿತಿ ರಚಿಸಿರುವ ಸರ್ಕಾರವು ಇದಕ್ಕೆ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್‍‌ ಅವರನ್ನು ಅಧ್ಯಕ್ಷರನ್ನಾಗಿ ನೇಮಿಸಲು ಸೂಚಿಸಲಾಗಿದೆ.

 

‘ಪ್ರಸ್ತುತ ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಸುಮಾರು 50,000 ಶಿಕ್ಷಕರ ಕೊರತೆ ಇದೆ. ಈ ಕೊರತೆಯನ್ನು ಅತಿಥಿ ಶಿಕ್ಷಕರನ್ನು ನಿಯೋಜಿಸುವ ಮೂಲಕ ಇಲಾಖೆ ಸರಿದೂಗಿಸುತ್ತಿರುವುದು ಸರಿಯಷ್ಟೇ. ಆದರೆ ಸದರಿ ಶಿಕ್ಷಕರಿಂದ ಬದ್ಧತೆಯ ಕೊರತೆಯಿಂದಾಗಿ ಉತ್ತಮ ಗುಣಮಟ್ಟದ ಶಿಕ್ಷಣ ದೊರೆಯುತ್ತಿಲ್ಲ ಎಂಬುದನ್ನು ಗಮನಿಸಲಾಗಿದೆ ಎಂದು ಉಪ ಮುಖ್ಯಮಂತ್ರಿಗಳು ತಿಳಿಸಿದರು. ಆದ್ದರಿಂದ ಶಿಕ್ಷಕರ ಕೊರತೆಯನ್ನು ನೀಗಿಸಲು ಖಾಸಗಿ ಶಿಕ್ಷಣ ಆಡಳಿತ ಮಂಡಳಿಯನ್ನು ಸಂಪರ್ಕಿಸಿ 1.1 ಅನುಪಾತದಲ್ಲಿ ಸರ್ಕಾರಿ ಶಾಲೆಗಳನ್ನು ದತ್ತು ತೆಗೆದುಕೊಳ್ಳಲು ಹೆಚ್ಚುವರಿ ಗುಣಮಟ್ಟದ ಶಿಕ್ಷಕರನ್ನು ಒದಗಿಸಲು ಹಾಗೂ ಪ್ರಶಿಕ್ಷಣ ತರಬೇತಿ ನೀಡಲು ಪ್ರಸ್ತಾಪಿಸಬೇಕು,’ ಎಂದು ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ ಎಂದು ತಿಳಿದು ಬಂದಿದೆ.

 

ಅಲ್ಲದೇ ಶಾಲೆಗಳ ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಳ್ಳಲು ದಾನಿಗಳ ಮೊರೆ ಹೋಗಲು ನಿರ್ಣಯಿಸಿದೆ. ‘ ದಾನಿಗಳ ಕೊಡುಗೆಗಾಗಿ ಅನುಗುಣವಾಗಿ ಸರ್ಕಾರಿ ಶಾಲೆ/ಕೊಠಡಿಯ ಮುಂದೆ ಇನ್ನಿತರೆ ಮೂಲಭೂತ ಸೌಕರ್ಯಗಳ ಮುಂದೆ ದಾನಿಗಳ ಹೆಸರನ್ನು ಸೇರಿಸಲು ಅವಕಾಶ ಕಲ್ಪಿಸುವುದು ಹಾಗೂ ಇನ್ನಿತರೆ ಷರತ್ತುಗಳನ್ನು ಸೇರಿ ಒಂದು ಒಡಂಬಡಿಕೆ ತಯಾರಿಸಬೇಕು,’ ಎಂಬ ನಿರ್ಣಯನ್ನೂ ಕೈಗೊಳ್ಳಲಾಗಿದೆ ಎಂದು ಗೊತ್ತಾಗಿದೆ.

 

ಸಿಎಸ್‌ಆರ್‍‌ ಅನುಷ್ಠಾನ ಸಮಿತಿ ಸಭೆಯಲ್ಲಿ ಭಾಗವಹಿಸಿರುವ ಡಿ ಕೆ ಶಿವಕುಮಾರ್‍‌, ಮಧು ಬಂಗಾರಪ್ಪ ಮತ್ತಿತರರು

 

ರಾಜ್ಯಕ್ಕೆ ಕನಿಷ್ಠ 5,000 ಕೋಟಿ ಸಿಎಸ್‌ಆರ್‍‌ ಅಡಿಯಲ್ಲಿ ಕಂಪನಿಗಳ ಕಾಯ್ದೆ ಪ್ರಕಾರ ಶಿಕ್ಷಣ ಕ್ಷೇತ್ರದಲ್ಲಿ ಉಪಯೋಗಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್‍‌ ಅವರು 2023ರ ಆಗಸ್ಟ್ 4ರಂದು ನಡೆದಿದ್ದ ಸಭೆಯಲ್ಲಿ ಪ್ರಸ್ತಾಪಿಸಿದ್ದರು. ಇದನ್ನು ಕಾರ್ಯಗತಗೊಳಿಸಲು 2023ರ ಆಗಸ್ಟ್‌ 16ರಂದು ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್‍‌ ಅಧ್ಯಕ್ಷತೆಯಲ್ಲಿ ಸಭೆ ನಡೆಸಲಾಗಿತ್ತು. ಈ ಸಭೆಯಲ್ಲಿಯೇ ಶಿಕ್ಷಕರ ಕೊರತೆ ನೀಗಿಸಲು ಸರ್ಕಾರಿ ಶಾಲೆಗಳನ್ನು ಖಾಸಗಿ ಶಿಕ್ಷಣ ಮಂಡಳಿಗಳಿಗೆ ದತ್ತು ನೀಡುವ ಕುರಿತು ನಿರ್ಣಯ ಕೈಗೊಳ್ಳಲಾಗಿದೆ.

 

ರಾಜ್ಯದಲ್ಲಿ ಈಗಾಗಲೇ 285 ಕರ್ನಾಟಕ ಪಬ್ಲಿಕ್‌ ಶಾಲೆಗಳು ಅಸ್ತಿತ್ವದಲ್ಲಿವೆ. ಇದೇ ಮಾದರಿಯಂತೆ ರಾಜ್ಯದ 6000 ಗ್ರಾಮ ಪಂಚಾಯತ್‌ಗಳಲ್ಲಿ ಮುಂದಿನ 5 ವರ್ಷಗಳಲ್ಲಿ ಕರ್ನಾಟಕ ಪಬ್ಲಿಕ್‌ ಶಾಲೆಳನ್ನು ಸಿಎಸ್‌ಆರ್‍‌ ಸಹಯೋಗದೊಂದಿಗೆ ಪ್ರಾರಂಭಿಸಲು ಕ್ರಿಯಾ ಯೋಜನೆ ತಯಾರಿಸಲು ಡಿ ಕೆ ಶಿವಕುಮಾರ್‍‌ ಸೂಚಿಸಿರುವುದು ತಿಳಿದು ಬಂದಿದೆ.

 

6,000 ಗ್ರಾಮ ಪಂಚಾಯತ್‌ಳ ಪೈಕಿ ಪ್ರಥಮ ಹಂತದಲ್ಲಿ 500 ಪಂಚಾಯತ್‌ ಮಟ್ಟದಲ್ಲಿ ಒಂದು ಕರ್ನಾಟಕ ಪಬ್ಲಿಕ್ ಶಾಲೆಯನ್ನು ಸ್ಥಾಪಿಸಲು ಸೂಕ್ತ ಸರ್ಕಾರಿ ಶಾಲೆಯನ್ನು ಆಯ್ಕೆ ಮಾಡುವುದು. ಈ ಸ್ಥಳದಲ್ಲಿ ಇರುವ ಮೂಲಭೂತ ಸೌಕರ್ಯ (ಕಟ್ಟಡಗಳು, ಶೌಚಾಲಯ, ಪೀಠೋಪಕರಣಗಳು) ಹಾಗೂ ಶಿಕ್ಷಕರು, ಸಿಬ್ಬಂದಿಗಳ ವಿವರಗಳನ್ನು ಕ್ರೋಢೀಕರಿಸಬೇಕು. ಹಾಗೆಯೇ ಶಾಲೆವಾರು ಇರುವ ಮೂಲಭೂತ ಸೌಕರ್ಯ ಹಾಗೂ ಶಿಕ್ಷಕರ ಕೊರತೆಯನ್ನು ನಿಖರವಾಗಿ ಮಂಡಿಸಬೇಕು ಎಂದು ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ.

 

ಸ್ಥಳ ಲಭ್ಯತೆ ಇಲ್ಲದೇ ಇರುವ ಶಾಲೆಗಳಲ್ಲಿ 3 ಎಕರೆ ಭೂಮಿಯನ್ನು ಸಿಎಸ್‌ಆರ್‍‌ ಅಡಿಯಲ್ಲಿ ಖರೀದಿಸಿದಲ್ಲಿ ಭೂ ಪರಿವರ್ತನೆ ಶುಲ್ಕ, ನೋಂದಣಿ ಶುಲ್ಕ, ಇತ್ಯಾದಿಗಳನ್ನು ಸರ್ಕಾರದಿಂದ ವಿನಾಯಿತಿ ನೀಡಲು ನೀತಿ ರೂಪಿಸಬೇಕು. ಮಾದರಿ ಕರ್ನಾಟಕ ಪಬ್ಲಿಕ್‌ ಶಾಲೆಗಳನ್ನು ನಿರ್ಮಿಸಲು ಒಂದೇ ವಿನ್ಯಾಸ ಮತ್ತು ಅದರ ಅಂದಾಜು ಪತ್ರಿಕೆಯನ್ನು ತಯಾರಿಸಿ ಅದನ್ನು ಸಿಎಸ್‌ಆರ್‍‌ ಸಂಸ್ಥೆಗಳಿಗೆ ಒದಗಿಸಬೇಕು. ಈ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲ ಅವಶ್ಯವಾದ ಇಲಾಖಾ ಅನುಮೋದನೆಗಳನ್ನು ಶಾಲಾ ಶಿಕ್ಷಣ ಇಲಾಖೆಯ ಸಮನ್ವಯದಿಂದ ನೀಡಬೇಕು ಎಂದೂ ನಿರ್ಧರಿಸಲಾಗಿದೆ ಎಂದು ಗೊತ್ತಾಗಿದೆ.

 

ಈ ಎಲ್ಲಾ ಯೋಜನೆಗಳನ್ನು ಜಿಲ್ಲಾ ಮಟ್ಟದಲ್ಲಿ ಅನುಷ್ಠಾನಗೊಳಿಸಲು ಜಿಲ್ಲಾಧಿಕಾರಿಗಳಿಗೆ ಜವಾಬ್ದಾರಿ ನೀಡಬೇಕು. ಈ ಯೋಜನೆಯನ್ನು ತ್ವರಿತಗತಿಯಲ್ಲಿ ಒಂದು ವಿಸ್ತೃತ ಪ್ರಸ್ತಾವನೆಯನ್ನು ತಯಾರಿಸಿ ಒಂದು ವಾರದ ಒಳಗಾಗಿ ಉಪ ಮುಖ್ಯಮಂತ್ರಿಗಳಿಗೆ ಪ್ರಸ್ತುತ ಪಡಿಸಬೇಕು ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ತಿಳಿದು ಬಂದಿದೆ.

 

ಸಿಎಸ್‌ಆರ್‍‌ ಅನುಷ್ಠಾನ ಸಮಿತಿಗೆ ಡಿ ಕೆ ಶಿವಕುಮಾರ್‍‌ ಅವರನ್ನು ಅಧ್ಯಕ್ಷರನ್ನಾಗಿಸಲು ಸೂಚಿಸಿರುವ ಸಭೆಯು ಭಾರಿ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂ ಬಿ ಪಾಟೀಲ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಸಚಿವ ಪ್ರಿಯಾಂಕ್‌ ಖರ್ಗೆ, ಯೋಜನೆ ಸಚಿವ ಡಿ ಸುಧಾಕರ್‍‌, ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಸದಸ್ಯರನ್ನಾಗಿಸಲು ಸೂಚಿಸಲಾಗಿದೆ ಎಂದು ಗೊತ್ತಾಗಿದೆ.

 

ಕೋರ್ಟ್ ಆದೇಶ ಬಂದ ಕೂಡಲೇ 13 ಸಾವಿರ ಪದವೀಧರ ಶಿಕ್ಷಕರ ನೇಮಕಕ್ಕೆ ಕ್ರಮ ಕೈಗೊಳ್ಳುತ್ತೇವೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಬಜೆಟ್‌ ಅಧಿವೇಶನದಲ್ಲಿ ಹೇಳಿದ್ದರನ್ನು ಸ್ಮರಿಸಬಹುದು.

the fil favicon

SUPPORT THE FILE

Latest News

Related Posts