ಹೊರಗುತ್ತಿಗೆ ಸೇವೆ ಸ್ಥಗಿತಕ್ಕೆ ಸೂಚನೆ; ಬೀದಿಗೆ ಬಿದ್ದ ಅಟಲ್‌ಜಿ ಜನಸ್ನೇಹಿಯ ಡೇಟಾ ಎಂಟ್ರಿ ಆಪರೇಟರ್‍‌ಗಳು

ಬೆಂಗಳೂರು; ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಲು ಏದುಸಿರು ಬಿಡುತ್ತಿರುವ ಕಾಂಗ್ರೆಸ್‌ ಸರ್ಕಾರವು ಇದೀಗ ಏಕಾಏಕೀ ರಾಜ್ಯದ ಅಟಲ್‌ಜಿ ಜನಸ್ನೇಹಿ ಕೇಂದ್ರಗಳಲ್ಲಿ ಹೊರಗುತ್ತಿಗೆ ಸೇವೆ ಸ್ಥಗಿತಗೊಳಿಸಿ ಡೇಟಾ ಎಂಟ್ರಿ ಆಪರೇಟರ್‍‌ಗಳನ್ನು ಬೀದಿಯಲ್ಲಿ ನಿಲ್ಲಿಸಿದೆ.

 

ಸಾರ್ವತ್ರಿಕ ಚುನಾವಣೆ, ಕೋವಿಡ್‌ ಸಂದರ್ಭ, ಅತಿವೃಷ್ಟಿ ಮತ್ತು ಅನಾವೃಷ್ಟಿಯಂತಹ ಸಂದರ್ಭಗಳಲ್ಲಿ ಅಟಲ್‌ ಜೀ ಜನಸ್ನೇಹಿ ಕೇಂದ್ರಗಳಲ್ಲಿ ಸಾವಿರಾರು ಸಂಖ್ಯೆಯಲ್ಲಿ ಡೇಟಾ ಎಂಟ್ರಿ ಆಪರೇಟರ್‍‌ಗಳು ಕಾರ್ಯನಿರ್ವಹಿಸುತ್ತಿದ್ದರು. ಆದರೀಗ ಕಾಂಗ್ರೆಸ್‌ ಸರ್ಕಾರವು ದಿಢೀರ್‍‌ ಎಂದು ಅವರ ಸೇವೆಯನ್ನು ಸ್ಥಗಿತಗೊಳಿಸಿ ಹೊರಡಿಸಿರುವ ಆದೇಶದಿಂದಾಗಿ ಅವರ ಬದುಕನ್ನು ಕಿತ್ತುಕೊಂಡತಾಗಿದೆ.

 

ಈ ಸಂಬಂಧ ಡೇಟಾ ಆಪರೇಟರ್‍‌ಗಳು ತಮ್ಮ ಸೇವೆ ಮುಂದುವರೆಸಬೇಕು ಎಂದು ಕೋರಿ ಸಲ್ಲಿಸಿದ್ದ ಮನವಿಯೂ ಮುಖ್ಯಮಂತ್ರಿ ಕಚೇರಿಯ ಕಸದ ಬುಟ್ಟಿಗೆ ಸೇರಿದೆ.

 

ಹೊರಗುತ್ತಿಗೆ ಅಡಿಯಲ್ಲಿ ಸೇವೆ ಸಲ್ಲಿಸುತ್ತಿರುವ ಡೇಟಾ ಆಪರೇಟರ್‍‌ಗಳನ್ನು 2023ರ ಜುಲೈ 28ರಂದು ನಡೆದ ಸಭೆಯಲ್ಲಿ ಪ್ರಧಾನ ಕಾರ್ಯದರ್ಶಿ ಅವರ ನಿರ್ದೇಶನದಂತೆ ಕೆಲಸದಿಂದ ಕಿತ್ತು ಹಾಕಲಾಗಿದೆ.’ಅಟಲ್‌ಜೀ ಜನಸ್ನೇಹಿ ನಿರ್ದೇಶನಾಲಯದ ಅಡಿಯಲ್ಲಿ ನೇಮಿಸಿಕೊಂಡಿರುವ ಡಾಟಾ ಎಂಟ್ರಿ ಆಪರೇಟರ್‍‌ಗಳನ್ನು ಆರ್ಥಿಕ ಇಲಾಖೆಯು ಅನುಮೋದಿಸಿರುವವ ಸಂಸ್ಥೆಗೆ ಸೀಮಿತಗೊಳಿಸಿ ಇನ್ನುಳಿದ ಆಪರೇಟರ್‍‌ಗಳನ್ನು ಕರ್ತವ್ಯದಿಂದ ಬಿಡುಗಡೆಗೊಳಿಸಲು ಸೂಚಿಸಲಾಗಿದೆ,’ ಎಂದು ನಿರ್ದೇಶಕರು 2023ರ ಜುಲೈ 31ರಂದು ಅಧಿಕೃತ ಜ್ಞಾಪನ ಪತ್ರ ಹೊರಡಿಸಿದ್ದಾರೆ. ಈ ಪತ್ರವು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ರಾಜ್ಯದ ಅಟಲ್‌ಜೀ ಜನಸ್ನೇಹಿ ಕೇಂದ್ರಗಳಿಗೆ ಹೊರಗುತ್ತಿಗೆ ಆಧಾರದ ಮೇಲೆ ಡೇಟಾ ಎಂಟ್ರಿ ಆಪರೇಟರ್‍‌ಗಳ ಸೇವೆಯನ್ನು ಒದಗಿಸಲು ಧಾರವಾಡದ ಎಸ್‌ಬಿಎಲ್‌ ಎಂಟರ್‍‌ಪ್ರೈಸೆಸ್‌ಗೆ ಸೂಚಿಸಲಾಗಿತ್ತು. ಜುಲೈ 2023ರವರೆಗೆ ಈ ಸಂಸ್ಥೆಯಿಂದ ರಾಜ್ಯದ ಅಟಲ್‌ಜೀ ಜನಸ್ನೇಹಿ ಕೇಂದ್ರಗಳಿಗೆ ಹೊರಗುತ್ತಿಗೆ ಆಧಾರದ ಮೇಲೆ ಡೇಟಾ ಎಂಟ್ರಿ ಆಪರೇಟರ್‍‌ಗಳ ಸೇವೆಯನ್ನು ಪಡೆಯಲಾಗಿತ್ತು.

 

‘ಅಟಲ್‌ಜಿ ಜನಸ್ನೇಹಿ ಕೇಂದ್ರಗಳಿಗೆ ಹೊರಗುತ್ತಿಗೆ ಆಧಾರದ ಮೇಲೆ ಡೇಟಾ ಎಂಟ್ರಿ ಆಪರೇಟ್‌ಗಳನ್ನು ಕೂಡಲೇ ಕರ್ತವ್ಯದಿಂದ ಬಿಡುಗಡೆಗೊಳಿಸಲು ಸೂಚಿಸಿ ಹೊರಗುತ್ತಿಗೆ ಆಧಾರದ ಸೇವೆಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ಸ್ಥಗಿತಗೊಳಿಸಿ ಆದೇಶಿಸಿದೆ.

 

ಸುಮಾರು ವರ್ಷಗಳಿಂದ ಅಟಲ್‌ ಜಿ ಜನಸ್ನೇಹಿ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಚುನಾವಣೆ, ಕೋವಿಡ್‌, ಅತಿವೃಷ್ಟಿ, ಅನಾವೃಷ್ಟಿ ಸಂದರ್ಭದಲ್ಲಿ ಕಾರ್ಯನಿರ್ವಹಿಸಿದ್ದಾರೆ. ಸೇವೆಯನ್ನು ಸ್ಥಗಿತಗೊಳಿಸುವ  ನಿರ್ಧಾರದಿಂದ ನಮ್ಮ ಜೀವನವೇ ಬಲಿಯಾಗಲಿದೆ ಎಂದು ಡೇಟಾ ಎಂಟ್ರಿ ಆಪರೇಟರ್‍‌ಗಳು ಮನವಿಯಲ್ಲಿ ಗೋಳು ತೋಡಿಕೊಂಡಿದ್ದಾರೆ.

 

‘ನಾವೆಲ್ಲರೂ ಇದೇ ಕೆಲಸವನ್ನು ಅವಲಂಬಿಸಿ ಬದುಕುತ್ತಿದ್ದೇವೆ. ನಮ್ಮ ಕುಟುಂಬವೂ ಕೂಡ ನಮ್ಮನ್ನೇ ಆಧರಿಸಿ ಜೀವನ ನಡೆಸುತ್ತಿದೆ. ನಾವು ಎಷ್ಟೋ ಜನರು ಅಂಗವಿಕಲರಿದ್ದೇವೆ. ವಿಧವೆಯರಿದ್ದೇವೆ. ನಾವೀಗ ಬೀದಿಪಾಲಾಗಿದ್ದೇವೆ. ನಾವೆಲ್ಲರೂ ಇದೇ ಕೆಲಸವನ್ನು ಅವಲಂಬಿಸಿ ನಮ್ಮ ಮಕ್ಕಳನ್ನು ಶಾಲೆಗೆ ಕಳಿಸುತ್ತಿದ್ದೇವೆ. ಈಗ ತಾವು ನಮ್ಮನ್ನು ಕೆಲಸದಿಂದ ಸ್ಥಗಿತಗೊಳಿಸಿದರೆ ನಾವು  ನಮ್ಮ ಮಕ್ಕಳು ಬೀದಿಪಾಲಾಗುವ ಪರಿಸ್ಥಿತಿ ಬರುತ್ತದೆ. ನಮ್ಮ ಜೀವನ ಬೀದಿಪಾಲಾಗಲು ಕಾರಣಕರ್ತರಾಗಬೇಡಿ,’ ಎಂದು ಡೇಟಾ ಆಪರೇಟರ್‍‌ಗಳು ಮನವಿಯಲ್ಲಿ ಕೋರಿದ್ದಾರೆ.

the fil favicon

SUPPORT THE FILE

Latest News

Related Posts