ಎಸ್‌ ಟಿ ಕಲ್ಯಾಣ ಇಲಾಖೆ ನಿರ್ದೇಶಕರ ಹುದ್ದೆ; ಮೂರೇ ಮೂರು ದಿನದಲ್ಲಿ ಇಬ್ಬರು ಅಧಿಕಾರಿಗಳ ವರ್ಗಾವಣೆ

ಬೆಂಗಳೂರು; ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ನಿರ್ದೇಶಕರ ಹುದ್ದೆಗೆ ನೇಮಕವಾದ  ಮೂರೇ ಮೂರು ದಿನದಲ್ಲಿ ಇಬ್ಬರು ಅಧಿಕಾರಿಗಳನ್ನು ಕಾರಣಗಳಿಲ್ಲದೆಯೇ ವರ್ಗಾವಣೆ ಮಾಡಿ ಪುನಃ 20 ದಿನದಲ್ಲಿ ಅದೇ ಅಧಿಕಾರಿಯನ್ನು ಮರಳಿ ವರ್ಗಾವಣೆ ಮಾಡಿರುವುದು ಇದೀಗ ಬಹಿರಂಗವಾಗಿದೆ.

 

ಸರ್ಕಾರಿ ಅಧಿಕಾರಿ, ನೌಕರರ ವರ್ಗಾವಣೆ ಪ್ರಕ್ರಿಯೆಗಳಲ್ಲಿ ಕಮಿಷನ್‌, ಲಂಚ ಪಡೆದು ವರ್ಗಾವಣೆ ವ್ಯಾಪಾರ ನಡೆಸಿದ್ದರೇ ರಾಜಕೀಯದಿಂದಲೇ ನಿವೃತ್ತಿ ಪಡೆಯುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್‌ ಡಿ ಕುಮಾರಸ್ವಾಮಿಗೆ ಸದನದಲ್ಲಿಯೇ ಸವಾಲು ಎಸೆದಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಚಿವರಾಗಿರುವ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ನಿರ್ದೇಶಕರ ಹುದ್ದೆಗೆ ಮೂರು ಬಾರಿ ವರ್ಗಾವಣೆ ಅಧಿಸೂಚನೆ ಹೊರಡಿಸಿರುವುದು ಮುನ್ನೆಲೆಗೆ ಬಂದಿದೆ.

 

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯು ಮನಸೋ ಇಚ್ಛೆ ಅಧಿಕಾರಿ, ನೌಕರರ ವರ್ಗಾವಣೆಗಳನ್ನು ಮಾಡುತ್ತಿರುವುದರ ಬಗ್ಗೆ ಅಧಿಕಾರಿಶಾಹಿಯೊಳಗೆ ಅಸಮಾಧಾನಕ್ಕೆ ಕಾರಣವಾಗಿದೆ.

 

ಅಧಿಕಾರಕ್ಕೆ ಬಂದ ದಿನದಿಂದಲೇ ಅಧಿಕಾರಿ, ನೌಕರರ ವರ್ಗಾವಣೆಯಲ್ಲಿ ಲಂಚ ಪಡೆಯಲಾಗುತ್ತಿದೆ ಎಂಬ ಆರೋಪಗಳ ನಡುವೆಯೂ ಕಾಂಗ್ರೆಸ್‌ ಸರ್ಕಾರವು ಪದೇಪದೇ ವರ್ಗಾವಣೆ ‘ವ್ಯಾಪಾರ’ದ ಕೆಸರನ್ನು ಮೆತ್ತಿಕೊಳ್ಳುತ್ತಲೇ ಇದೆ. ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ನಿರ್ದೇಶಕರ ಹುದ್ದೆಗೆ ಹೊರಡಿಸಿದ್ದ ವರ್ಗಾವಣೆಯ ಮೂರು ಅಧಿಸೂಚನೆಗಳು ಈ ಎಲ್ಲಾ ಆರೋಪಗಳನ್ನು ಪುಷ್ಠೀಕರಿಸಿದಂತಾಗಿದೆ.

 

ಸಾರ್ವಜನಿಕ ಮತ್ತು ಆಡಳಿತಾತ್ಮಕ ಹಿತದೃಷ್ಟಿಯಿಂದ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಎಂದು ಬೆಳಗಾವಿ ಜಿಲ್ಲೆಯ ಸಮಾಜ ಕಲ್ಯಾಣ ಇಲಾಖೆಯ ಅಪರ ನಿರ್ದೇಶಕರಾಗಿದ್ದ ಕಲ್ಲೇಶ್‌ ಬಿ ಅವರನ್ನು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ನಿರ್ದೇಶಕರ ಸ್ಥಾನಕ್ಕೆ ವರ್ಗಾವಣೆ ಮಾಡಿ 2023ರ ಜೂನ್‌ 23ರಂದು ಅಧಿಸೂಚನೆ ಹೊರಡಿಸಲಾಗಿತ್ತು.

 

ಕಲ್ಲೇಶ್‌ ಅವರ ವರ್ಗಾವಣೆ ಅಧಿಸೂಚನೆ ಹೊರಬಿದ್ದ ಮೂರೇ ಮೂರು ದಿನದಲ್ಲಿ ಬೆಂಗಳೂರು ವಿಭಾಗದ ಪ್ರಾದೇಶಿಕ ಆಯುಕ್ತರ ಕಚೇರಿಯಲ್ಲಿ ಪ್ರಾದೇಶಿಕ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಕೆಎಎಸ್‌ (ಸೂಪರ್‌ ಟೈಂ ಸ್ಕೇಲ್‌) ಇಸ್ಲಾವುದ್ದೀನ್‌ ಗದ್ಯಾಳ ಇವರನ್ನು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ನಿರ್ದೇಶಕರನ್ನಾಗಿ ವರ್ಗಾವಣೆ ಮಾಡಿ 2023ರ ಜೂನ್ 26ರಂದು ಅಧಿಸೂಚನೆ ಹೊರಡಿಸಿತ್ತು.

 

ಇಸ್ಲಾವುದ್ದೀನ್‌ ಗದ್ಯಾಳ ಅವರು ಇದಾಗಿ 20 ದಿನಗಳಲ್ಲೇ ಕಲ್ಲೇಶ್‌ ಬಿ ಅವರನ್ನು ಪುನಃ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ನಿರ್ದೇಶಕರನ್ನಾಗಿ 2023ರ ಜುಲೈ 15ರಂದು ವರ್ಗಾವಣೆ ಮಾಡಿ ಅಧಿಸೂಚನೆ ಹೊರಡಿಸಲಾಗಿದೆ. ಇಸ್ಲಾವುದ್ದೀನ್‌ ಗದ್ಯಾಳ ಅವರು ನಿರ್ದೇಶಕರಾಗಿ ಅಧಿಕಾರ ವಹಿಸಿಕೊಂಡು 20 ದಿನದೊಳಗೇ ಪುನಃ ಪ್ರಾದೇಶಿಕ ಆಯುಕ್ತರ ಕಚೇರಿಗೆ ವಾಪಸ್‌ ಕಳಿಸಲಾಗಿದೆ.


 

ಮಣಿಪುರ ಮೂಲದ ಕರ್ನಾಟಕ ಕೇಡರ್‍‌ನ (KN 2020) ಐಎಎಸ್‌ ಅಧಿಕಾರಿಯಾಗಿರುವ ನೋನ್‌ಜಾಯ್‌ ಮೊಹ್ಮದ್‌ ಅಲಿ ಅಕ್ರಮ್‌ ಶಾ ಅವರನ್ನು ಕಳೆದ 8 ತಿಂಗಳಲ್ಲಿ 6 ಬಾರಿ ವಿವಿಧ ಸ್ಥಳ-ಹುದ್ದೆಗಳಿಗೆ ವರ್ಗಾವಣೆ ಮಾಡಿದ್ದು ಚರ್ಚೆಗೆ ಕಾರಣವಾಗಿತ್ತು.

 

8 ತಿಂಗಳಲ್ಲಿ 6 ಬಾರಿ ವರ್ಗಾವಣೆ; ಫುಟ್ಬಾಲ್‌ ಚೆಂಡಿನಂತಾದ ಮಣಿಪುರ ಮೂಲದ ಐಎಎಸ್‌ ಅಧಿಕಾರಿ ಅಕ್ರಮ್‌ ಶಾ

 

ಕರ್ನಾಟಕ ಕೈಗಾರಿಕೆ ಪ್ರದೇಶಾಭಿವೃದ್ಧಿ ಮಂಡಳಿ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಮತ್ತು ವಿಶೇಷ ಭೂ ಸ್ವಾಧೀನಾಧಿಕಾರಿ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕೆಎಎಸ್‌ (ಕಿರಿಯ ಶ್ರೇಣಿ) ಅಧಿಕಾರಿಗಳನ್ನು ಯಾವುದೇ ಸಕಾರಣವಿಲ್ಲದೇ ಮತ್ತು ಅತಿ ವಿಶೇಷ ಸಂದರ್ಭವಿಲ್ಲದಿದ್ದರೂ ಅವಧಿಪೂರ್ವ ವರ್ಗಾವಣೆ ಮಾಡಿ ವರ್ಗಾವಣೆಯ ಮಾರ್ಗಸೂಚಿಗಳನ್ನು ಉಲ್ಲಂಘಿಸಿರುವ ಆರೋಪಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗುರಿಯಾಗಿದ್ದರು.

 

 

 

 

ಸಕಾರಣಗಳಿಲ್ಲದಿದ್ದರೂ ನಾಲ್ವರು ಕೆಎಎಸ್‌ ಅಧಿಕಾರಿಗಳ ಅವಧಿಪೂರ್ವ ವರ್ಗಾವಣೆ; ಮಾರ್ಗಸೂಚಿ ಉಲ್ಲಂಘನೆ!

 

 

 

ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮದಲ್ಲಿದ್ದ ಲೆಕ್ಕಪರಿಶೋಧನಾಕಾರಿ ಒಂದು ಹುದ್ದೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಾಲ್ವರು ಅಧಿಕಾರಿಗಳಿಗೆ ಶಿಫಾರಸ್ಸು ಟಿಪ್ಪಣಿ ಹೊರಡಿಸಿದ್ದರು.

ಒಂದೇ ಹುದ್ದೆಗೆ ನಾಲ್ವರ ವರ್ಗಾವಣೆಗೆ ಮುಖ್ಯಮಂತ್ರಿ ಶಿಫಾರಸ್ಸು; ಪೈಪೋಟಿ ಸೃಷ್ಟಿಸಿದ ‘ಕೃಷ್ಣಾ’ದ ಟಿಪ್ಪಣಿಗಳು

 

ಇದನ್ನು ಮಾಜಿ ಮುಖ್ಯಮಂತ್ರಿ ಹೆಚ್‌ ಡಿ ಕುಮಾರಸ್ವಾಮಿ ಮತ್ತು ಬಿಜೆಪಿಯು ತೀವ್ರವಾಗಿ ಟೀಕಿಸಿದ್ದರು. ವರ್ಗಾವಣೆ ಹಿಂದೆ ಇರುವವರು ಯಾರು ಆ ಅತೀಂದ್ರ ಎಂದು ಟ್ವೀಟ್‌ ಕೂಡ ಮಾಡಿದ್ದರು.

‘ದಿ ಫೈಲ್‌’ ವರದಿ ಉಲ್ಲೇಖ; ‘ಕಾಸಿಗಾಗಿ ಪೋಸ್ಟಿಂಗ್‌ʼ ದಂಧೆ, 4 ಶಿಫಾರಸುಗಳ ಹಿಂದಿರುವ ಆ ʼಅತೀಂದ್ರʼ ಶಕ್ತಿ ಯಾವುದು?

 

ಸರ್ಕಾರಿ ಅಧಿಕಾರಿ, ನೌಕರರ ವರ್ಗಾವಣೆಗೆ ಜೂನ್‌ 30 ಕಡೇ ದಿನ ಎಂದು ಹೇಳಿದ್ದ ಸರ್ಕಾರವು ಕಡೇ ಗಳಿಗೆಯಲ್ಲಿ ಸಾರ್ವತ್ರಿಕ ವರ್ಗಾವಣೆ ಅವಧಿಯನ್ನು ಇದೇ ಜುಲೈ 3ರವರೆಗೂ ವಿಸ್ತರಿಸಿದ್ದರು.

ಸುತ್ತೋಲೆ ಉಲ್ಲಂಘಿಸಿ ಕೆಎಎಸ್‌, ಪಿಡಿಒ, ಅಬಕಾರಿ ನಿರೀಕ್ಷಕರು ಸೇರಿ 63 ಮಂದಿ ವರ್ಗಾವಣೆ

ಇದಾದ ನಂತರವೂ ವರ್ಗಾವಣೆ ಅಧಿಸೂಚನೆಗಳು ಹೊರಬಿದ್ದಿದ್ದವು. ವಿಶೇಷವೆಂದರೆ ಸರ್ಕಾರಿ ಜಮೀನನ್ನು ಮಾಜಿ ಸಚಿವ ಬಿ ಶ್ರೀರಾಮುಲು ಅವರಿಗೆ ಅಕ್ರಮವಾಗಿ ನೋಂದಣಿ ಮಾಡಿಕೊಡಲು ಸುಳ್ಳು ದಾಖಲೆಗಳನ್ನೇ ನೈಜವೆಂದು ನಂಬಿಸಿದ ಆರೋಪದ ಮೇರೆಗೆ ವಿಚಾರಣೆ ಎದುರಿಸಿದ್ದ ಶಶಿಧರ ಬಗಲಿ ಅವರನ್ನು ವಿಶೇಷ ಭೂಸ್ವಾಧೀನಾಧಿಕಾರಿಯನ್ನಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವರ್ಗಾವಣೆಗೊಳಿಸಿ ಅಧಿಸೂಚನೆ ಹೊರಡಿಸಿದ್ದರು.

ಸುಳ್ಳು ದಾಖಲೆ ಸೃಷ್ಟಿಸಿ ಸರ್ಕಾರಿ ಜಮೀನನ್ನೂ ಸೇರಿಸಿ ನೋಂದಾಯಿಸಿದ್ದ ಅಧಿಕಾರಿಗೆ ಭೂಸ್ವಾಧೀನಾಧಿಕಾರಿ ಹುದ್ದೆ

ಇದಷ್ಟೇ ಅಲ್ಲ, ಎಪಿಪಿಗಳ ನೇಮಕದಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳಿಗೆ ಸಂಬಂಧಿಸಿದಂತೆ ಲೋಕಾಯುಕ್ತ ಪೊಲೀಸರು ಸಲ್ಲಿಸಿದ್ದ ದೋಷಾರೋಪಣೆ ಪಟ್ಟಿಯಲ್ಲಿ  2ನೇ ಆರೋಪಿ ಎಂದು ಹೆಸರಿಸಿದ್ದ ನಾರಾಯಣಸ್ವಾಮಿ ಅವರನ್ನು ಅಭಿಯೋಜನಾ ಇಲಾಖೆಯ ನಿರ್ದೇಶಕರ ಹುದ್ದೆಗೆ ವರ್ಗಾವಣೆ ಮಾಡಲಾಗಿತ್ತು.

ಎಪಿಪಿಗಳ ಅಕ್ರಮ ನೇಮಕದಲ್ಲಿ ಭಾಗಿಯಾಗಿದ್ದ 2ನೇ ಆರೋಪಿ ಅಧಿಕಾರಿಗೆ ಆಡಳಿತಾಧಿಕಾರಿ ಹುದ್ದೆ

ಹಾಗೆಯೇ ಅರಣ್ಯ ಇಲಾಖೆಯಲ್ಲಿ ಅಧಿಕಾರಿಗಳ ವರ್ಗಾವಣೆ ಪ್ರಕ್ರಿಯೆಗೆ ಅಭಿವೃದ್ಧಿಪಡಿಸಲಾಗಿದ್ದ ತಂತ್ರಾಂಶವನ್ನೇ ದುರುಪಯೋಗಪಡಿಸಿಕೊಂಡಿದ್ದ ಆರೋಪವೂ ಕೇಳಿ ಬಂದಿತ್ತು.

ಲಂಚ; ಆಯಕಟ್ಟಿನ ಹುದ್ದೆಗಳನ್ನೇ ಬ್ಲಾಕ್‌ ಮಾಡಿ ತಂತ್ರಾಂಶ ದುರುಪಯೋಗಪಡಿಸಿಕೊಂಡ ಅಧಿಕಾರಿಗಳು?

ಕಾಸಿಗಾಗಿ ಪೋಸ್ಟಿಂಗ್‌ ಎಂಬ ಆರೋಪ ಕೇಳಿ ಬಂದಿದ್ದರ ನಡುವೆಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಿ ಎಸ್ ಪ್ರಹ್ಲಾದ್‌ ಎಂಬುವರನ್ನು ಬಿಬಿಎಂಪಿಯಲ್ಲಿನ ಮುಖ್ಯ ಇಂಜಿನಿಯರ್‌ ಹುದ್ದೆಗೆ ವರ್ಗಾವಣೆ ಮಾಡಲು ಟಿಪ್ಪಣಿ ಹೊರಡಿಸಿದ್ದರು.

ಕಾಸಿಗಾಗಿ ಪೋಸ್ಟಿಂಗ್‌ ಆರೋಪ ಬೆನ್ನಲ್ಲೇ ಎಸಿಬಿ ದಾಳಿಗೊಳಗಾಗಿದ್ದ ಮುಖ್ಯಇಂಜಿನಿಯರ್‍‌ಗೆ ಹೊಸ ಹುದ್ದೆ

ಇದಷ್ಟೇ ಅಲ್ಲ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್‌ ಕೂಡ ಆಯಕಟ್ಟಿನ ಹುದ್ದೆಗೆ ಕೆ ಟಿ ನಾಗರಾಜ್‌ ಅವರನ್ನು ನೇಮಿಸಿದ್ದರ ಬಗ್ಗೆಯೂ ಆರೋಪಗಳು ಕೇಳಿ ಬಂದಿದ್ದವು.

ಆದಾಯಕ್ಕಿಂತ ಶೇ. 207.11ರಷ್ಟು ಹೆಚ್ಚು ಆಸ್ತಿ ಹೊಂದಿರುವ ಆರೋಪಿತ ಅಧಿಕಾರಿ, ಡಿಕೆಶಿಗೆ ತಾಂತ್ರಿಕ ಸಲಹೆಗಾರ

47 ಕೋಟಿ ರು. ಆರ್ಥಿಕ ನಷ್ಟಕ್ಕೆ ಕಾರಣರಾಗಿದ್ದ ಆರೋಪಿತ ಅಧಿಕಾರಿಗೆ ಸಾರ್ವಜನಿಕ ಆರೋಗ್ಯ ತರಬೇತಿ ಸಂಸ್ಥೆಯ ನಿರ್ದೇಶಕರ ಹುದ್ದೆಗೆ ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಅವರು ವರ್ಗಾಯಿಸಿದ್ದರು.

47 ಕೋಟಿ ನಷ್ಟ; ಆರೋಪಿತ ಅಧಿಕಾರಿಗೆ ಸಾರ್ವಜನಿಕ ಆರೋಗ್ಯ ಸಂಸ್ಥೆಯಲ್ಲಿ ತರಬೇತಿ ಅಧಿಕಾರಿ ಹುದ್ದೆ

 

ವರ್ಗಾವಣೆ ಪ್ರಕ್ರಿಯೆಯಲ್ಲಿ ಯಾವುದೇ ವ್ಯಾಪಾರವಾಗಲೀ, ದಂಧೆಯನ್ನಾಗಲಿ ನಡೆದಿಲ್ಲ ಮತ್ತು ಇದನ್ನು ಸಾಬೀತುಪಡಿಸಿದರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸದನದಲ್ಲಿ ಹೇಳಿಕೆ ನೀಡಿದ್ದನ್ನು ಸ್ಮರಿಸಬಹುದು.

SUPPORT THE FILE

Latest News

Related Posts