‘ಮೋದಿ @ 20′ ಪುಸ್ತಕ ಬಿಡುಗಡೆ ಕಾರ್ಯಕ್ರಮಕ್ಕೆ 35.69 ಲಕ್ಷ ರು. ವೆಚ್ಚ; ಸರ್ಕಾರದ ಹಣ ದುರ್ಬಳಕೆ ಆರೋಪ

ಬೆಂಗಳೂರು; ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಜುಲೈ 27ರಂದು ಪ್ರಧಾನಿ ನರೇಂದ್ರ ಮೋದಿ ಅವರ ‘ಮೋದಿ @ 20′ ಕನ್ನಡಾನುವಾದದ ಪುಸ್ತಕ ಬಿಡುಗಡೆ ಕಾರ್ಯಕ್ರಮ ಮತ್ತು ಡಿಜಿಟಿಲ್ ಮೀಡಿಯಾಗಳಲ್ಲಿ ಪ್ರಸಾರ ಸೇರಿದಂತೆ ಒಟ್ಟಾರೆ ಕಾರ್ಯಕ್ರಮಕ್ಕೆ ರಾಜ್ಯ ಸರ್ಕಾರವು 35.69 ಲಕ್ಷ ರು. ವೆಚ್ಚ ಮಾಡಿರುವುದು ಇದೀಗ ಬಹಿರಂಗವಾಗಿದೆ.

 

ಈ ಕುರಿತು ಮಾಹಿತಿ ಹಕ್ಕು ಕಾರ್ಯಕರ್ತ ಹಾಗೂ ವಕೀಲ ಭೀಮನಗೌಡ ಪರಗೊಂಡ ಅವರು ಆರ್‌ಟಿಐ ಅಡಿಯಲ್ಲಿ ಮಾಹಿತಿ ಪಡೆದುಕೊಂಡಿದ್ದಾರೆ. ಇದರ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ರಾಜ್ಯಪಾಲ ಥಾವರ್‌ಚಂದ್‌ ಗೆಹ್ಲೋಟ್‌, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ರವೀಂದ್ರ ಕಲಾಕ್ಷೇತ್ರದಲ್ಲಿ 2022ರ ಜುಲೈ 27ರಂದು ಪುಸ್ತಕ ಬಿಡುಗಡೆ ಮಾಡಿದ್ದರು. ಡಿಜಿಟಲ್‌ ಮೀಡಿಯಾ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರ ಮಾಡಲು ಛಾಯಾ ಚಿತ್ರೀಕರಣ, ವಿಡಿಯೋ ಚಿತ್ರೀಕರಣ ಸೇರಿದಂತೆ ಕಾರ್ಯಕ್ರಮಕ್ಕೆ ಒಟ್ಟಾರೆ 35.69 ಲಕ್ಷ ರು. ಖರ್ಚಾಗಿದೆ ಎಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಆರ್‌ಟಿಐ ಅಡಿಯಲ್ಲಿ ಮಾಹಿತಿ ಒದಗಿಸಿದೆ.

 

ಪ್ರಧಾನಿ ನರೇಂದ್ರ ಮೋದಿ @ 20 ಪುಸ್ತಕ ಬಿಡುಗಡೆ ಕಾರ್ಯಕ್ರಮಕ್ಕೆ ಡಿಜಿಟಲ್‌ ಮೀಡಿಯಾ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರ ಅಡಲು ಛಾಯಾ ಚಿತ್ರೀಕರಣ ಮತ್ತು ವಿಡಿಯೋ ಚಿತ್ರೀಕರಣಕ್ಕೆ 12.38 ಲಕ್ಷ ರು. ಖರ್ಚಾಗಿದೆ.

 

ವೇದಿಕೆಗೆ ಹೂವಿನ ಅಲಂಕಾರಕ್ಕೆ 6,39,450 ರು.,, ಬೆಳಕು ವಿನ್ಯಾಸ ಸೇರಿದಂತೆ 24,67,958 ರು. ಖರ್ಚಾಗಿರುವುದು ಆರ್‌ಟಿಐ ಮಾಹಿತಿಯಿಂದ ತಿಳಿದು ಬಂದಿದೆ.

 

‘ಪ್ರಧಾನಿ ನರೇಂದ್ರ ಮೋದಿ ಅವರ ಹೆಸರಲ್ಲಿ ಮೋದಿ @20 ಪುಸ್ತಕ ಬಿಡುಗಡೆಗೆ ರಾಜ್ಯ ಸರ್ಕಾರದ ಬೊಕ್ಕಸದಿಂದ ಒಂದು ದಿನದ ಕಾರ್ಯಕ್ರಮಕ್ಕೆ ರೂಪಾಯಿ 35, 69, 675/- ಗಳನ್ನು ಬೇಕಾಬಿಟ್ಟಿಯಾಗಿ ಖರ್ಚು ತೋರಿಸಲಾಗಿದೆ. ಸರ್ಕಾರಿ ಹಣವನ್ನು ಕಾರ್ಯಕ್ರಮ ದ ಆಯೋಜಕರು ಸಂಪೂರ್ಣವಾಗಿ ದುರ್ಬಳಕೆ ಮಾಡಿಕೊಂಡಿದ್ದಾರೆ. ಇದರಲ್ಲಿ ಅಕ್ರಮ ಜರುಗಿದ್ದು ಮೇಲ್ನೋಟಕ್ಕೆ ಕಂಡು ಬಂದಿದೆ. ಶೀಘ್ರದಲ್ಲಿ ಇದರ ವಿರುದ್ಧ ಮೊಕದ್ದಮೆ ಹುಡಲು ಚಿಂತನೆ ನಡೆಸಿದ್ದೇನೆ,’ ಎನ್ನುತ್ತಾರೆ ಭೀಮನಗೌಡ ಪರಗೊಂಡ.

 

ಈ ಪುಸ್ತಕವು ಮೋದಿಯವರು ಗುಜರಾತ್ ಸಿಎಂ ಆಗಿದ್ದ ಅವಧಿಯಿಂದ ಹಿಡಿದು ಭಾರತದ ಪ್ರಧಾನಿ ಆಗುವವರೆಗೆ ಅಂದರೆ ಮೋದಿಯವರ ಕಳೆದ 20 ವರ್ಷಗಳ ರಾಜಕೀಯ ಜೀವನದ ಪಯಣವನ್ನು ವಿವರಿಸುತ್ತದೆ. 2002 ರಲ್ಲಿ ಗುಜರಾತ್‌ನ (Gujrat) ಆಡಳಿತವನ್ನು ವಹಿಸಿಕೊಂಡರು. ಕಳೆದ 8 ವರ್ಷಗಳಿಂದ ರಾಷ್ಟ್ರವನ್ನು ಮುನ್ನಡೆಸುತ್ತಿದ್ದಾರೆ. ಈ ಪುಸ್ತಕವು ಕಳೆದ 20 ವರ್ಷಗಳಲ್ಲಿ ನರೇಂದ್ರ ಮೋದಿಯವರು ರೂಪಿಸಿದ ಮತ್ತು ಜಾರಿಗೆ ತಂದ ಆಡಳಿತದ ಮಾದರಿಯನ್ನು ಎತ್ತಿ ತೋರಿಸುವ ಮತ್ತು ಪ್ರದರ್ಶಿಸುವ ಪ್ರಯತ್ನವಾಗಿದೆ ಎಂದು ಪ್ರಕಾಶಕರು ಹೇಳಿದ್ದನ್ನು ಸ್ಮರಿಸಬಹುದು.

 

ಬುದ್ದಿಜೀವಿಗಳು ಮತ್ತು ತಜ್ಞರು ಬರೆದಿರುವ ತುಣುಕುಗಳ ಸಂಕಲನವಾಗಿರುವ ಈ ಪುಸ್ತಕವು, ಪ್ರಧಾನಿ ಮೋದಿಯವರ ಅನನ್ಯ ಆಡಳಿತ ಮಾದರಿಯ ಖಾತೆಯಲ್ಲಿ ಕಳೆದ 20 ವರ್ಷಗಳಲ್ಲಿ ಗುಜರಾತ್ ಮತ್ತು ದೇಶದ ಮೂಲಭೂತ ಪರಿವರ್ತನೆಯ ಮೇಲೆ ಬೆಳಕು ಚೆಲ್ಲುತ್ತದೆ ಎಂದೂ ಹೇಳಿತ್ತು.

 

ಈ ಪುಸ್ತಕವನ್ನು ರೂಪಾ ಪಬ್ಲಿಕೇಷನ್ಸ್ ಪ್ರಕಟಿಸಿದೆ. ಇದರಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಬಗ್ಗೆ ಬುದ್ಧಿಜೀವಿಗಳು ಮತ್ತು ತಜ್ಞರು ಬರೆದಿರುವ ತುಣುಕುಗಳ ಸಂಕಲನವಿದೆ.

 

ಕರ್ನಾಟಕದ ಬಗ್ಗೆ ವಿಶೇಷ ಆಸಕ್ತಿ ಹೊಂದಿರುವ ಪ್ರಧಾನಿ ಮೋದಿಯವರು ಕನ್ನಡ ನೆಲ, ಜಲ, ಉದ್ಯಮ, ಹೊಸ ತಂತ್ರಜ್ಞಾನ ಬಗೆಗೆ ಅಭಿಮಾನ ಹೊಂದಿದ್ದಾರೆ. ಅವರ ವಿಚಾರಧಾರೆಗಳನ್ನು ಕರ್ನಾಟಕದಲ್ಲಿ ಜನರಿಗೆ ತಲುಪಿಸುವ ಕೆಲಸ ಮಾಡಲಾಗುವುದು. ಅವರ ಪುಸ್ತಕವನ್ನು ಕನ್ನಡಕ್ಕೆ ಅನುವಾದಿಸಿ ರಾಜ್ಯದ್ಯಂತ ಹಂಚುವ ಕೆಲಸವನ್ನು ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕಾರ್ಯಕ್ರಮದಲ್ಲಿ ಹೇಳಿದ್ದರು.

the fil favicon

SUPPORT THE FILE

Latest News

Related Posts