ವಿಕಾಸಸೌಧ ಕಟ್ಟಡಕ್ಕೆ ಕಳಪೆ ಕಲ್ಲು; ಎಂಜಿನಿಯರ್‌ಗಳ ವಿರುದ್ಧ ಲೋಕಾಯುಕ್ತರು ನೀಡಿದ್ದ ಶಿಫಾರಸ್ಸು ತಿರಸ್ಕೃತ

photo credit-deccan hearald

ಬೆಂಗಳೂರು: ವಿಕಾಸಸೌಧದ ಕಲ್ಲು ಕಟ್ಟಡ ನಿರ್ಮಾಣ ಕಾಮಗಾರಿ ವೇಳೆಯಲ್ಲಿ ಕಳಪೆ ಕಲ್ಲುಗಳ ಬಳಸಿ ಕಟ್ಟಡದ ಬಾಳಿಕೆ ಮತ್ತು ಭದ್ರತೆಗೆ ಧಕ್ಕೆ, ಗುತ್ತಿಗೆದಾರರಿಗೆ ಅಧಿಕ ಮೊತ್ತ ಪಾವತಿಗೆ ಕಾರಣರಾಗಿದ್ದಾರೆ ಎಂಬ ಗುರುತರ ಆರೋಪಕ್ಕೆ ಗುರಿಯಾಗಿರುವ ಲೋಕೋಪಯೋಗಿ ಇಲಾಖೆ ಅಧೀಕ್ಷಕ ಎಂಜಿನಿಯರ್‌ಗಳಾದ ಬಿ ಕೆ ಪವಿತ್ರ ಹಾಗೂ ಎನ್‌.ಜೆ. ಗೌಡಯ್ಯ ಎಂಬುವರ ವಿರುದ್ದ ಶಿಸ್ತು ಕ್ರಮ ಜರುಗಿಸಬೇಕು ಎಂದು ಲೋಕಾಯುಕ್ತರು ಶಿಫಾರಸ್ಸು ಮಾಡಿದ್ದರೂ ಆರೋಪಿತ ಅಧಿಕಾರಿಗಳಿಬ್ಬರನ್ನು ದೋಷಮುಕ್ತಗೊಳಿಸಲು ಲೋಕೋಪಯೋಗಿ ಇಲಾಖೆಯು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ.

 

ರಾಜ್ಯ ಸಿವಿಲ್‌ ಸೇವೆಗಳಲ್ಲಿನ ಗ್ರೂಪ್‌ ಎ ವೃಂದದ ಅಧಿಕಾರಿಗಳ ವಿರುದ್ಧ ಇಲಾಖೆ ವಿಚಾರಣೆ ವಹಿಸುವುದು, ದಂಡನೆ ವಿಧಿಸುವ ಸಂಬಂಧ ಲೋಕಾಯುಕ್ತ, ಉಪ ಲೋಕಾಯುಕ್ತರು ಶಿಫಾರಸ್ಸುಗಳನ್ನು ತಿರಸ್ಕರಿಸುವ, ಮಾರ್ಪಡಿಸುವ ಪ್ರಸ್ತಾವನೆಗಳ ಕುರಿತು ಕಾನೂನು ಸಚಿವ ಜೆ ಸಿ ಮಾಧುಸ್ವಾಮಿ ಅವರ ಅಧ್ಯಕತೆಯಲ್ಲಿ 2022ರ ಆಗಸ್ಟ್‌ 2ರಂದು ನಡೆದ ಸಚಿವ ಸಂಪುಟ ಉಪ ಸಮಿತಿ ಮುಂದೆ ಲೋಕೋಪಯೋಗಿ ಇಲಾಖೆಯು ಈ ಪ್ರಸ್ತಾವನೆ ಸಲ್ಲಿಸಿದೆ. ಇದಕ್ಕೆ ಸಚಿವ ಸಿ ಸಿ ಪಾಟೀಲ್‌ ಅವರು ಅನುಮೋದಿಸಿದ್ದಾರೆ ಎಂದು ತಿಳಿದು ಬಂದಿದೆ. ಪ್ರಸ್ತಾವನೆಯ ಪ್ರತಿ ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ಲೋಕೋಪಯೋಗಿ ಇಲಾಖೆಯು ಸಲ್ಲಿಸಿರುವ ಪ್ರಸ್ತಾವನೆ

 

ವಿಶೇಷವೆಂದರೆ ವಿಕಾಸ ಸೌಧ ನಿರ್ಮಾಣ ಸಂದರ್ಭದಲ್ಲಿ ಕಳಪೆ ಕಲ್ಲುಗಳಿಂದಾಗಿ ಬಿರುಕು, ತೇವಾಂಶ ಕಾಣಿಸಿಕೊಂಡು ಕಟ್ಟಡದ ಬಾಳಿಕೆ ಮತ್ತು ಭದ್ರತೆಗೂ ಧಕ್ಕೆಯಾಗಲಿದೆ ಎಂದು ವಿಚಾರಣಾ ಅಧಿಕಾರಿಗಳ ಮುಂದೆ ಶಿಸ್ತು ಪ್ರಾಧಿಕಾರವೂ ಆಗಿದ್ದ ಲೋಕೋಪಯೋಗಿ ಇಲಾಖೆ ಕಳವಳ ವ್ಯಕ್ತಪಡಿಸಿತ್ತು. ಆದರೀಗ ಆರೋಪಿತ ಅಧಿಕಾರಿಗಳು ನೀಡಿದ್ದ ಸಮಜಾಯಿಷಿಯನ್ನು ಒಪ್ಪಿಕೊಂಡಿರುವ ಲೋಕೋಪಯೋಗಿ ಇಲಾಖೆಯು ಅವರನ್ನು ದೋಷಮುಕ್ತಗೊಳಿಸಲು ಪ್ರಸ್ತಾವನೆ ಸಲ್ಲಿಸಿರುವುದರ ಹಿಂದೆ ಹಲವು ಅನುಮಾನಗಳಿಗೆ ದಾರಿಮಾಡಿಕೊಟ್ಟಿದೆ.

 

 

ವಿಕಾಸಸೌಧ ಕಟ್ಟಡಕ್ಕೆ ಕಳಪೆ ಕಲ್ಲುಗಳನ್ನು ಬಳಸಿರುವ ಕುರಿತು 11 ವರ್ಷ ಸುದೀರ್ಘ ವಿಚಾರಣೆ ನಡೆಸಿದ್ದ ಹಿಂದಿನ ಲೋಕಾಯುಕ್ತರಾದ ಸಂತೋಷ್‌ ಹೆಗ್ಡೆ ಮತ್ತು ವಿಶ್ವನಾಥ ಶೆಟ್ಟಿ ಅವರು ವರದಿ ಸಲ್ಲಿಸಿದ್ದರು. ಕಳಪೆ ಕಲ್ಲುಗಳ ಬಳಕೆಗೆ ಅರ್ಧ ಡಜನ್‌ ಎಂಜಿನಿಯರ್‌ಗಳು ಹೊಣೆಗಾರರು ಎಂದು ವರದಿಯಲ್ಲಿ ವಿವರಿಸಲಾಗಿತ್ತು.
ಎಸ್‌.ಎಂ. ಕೃಷ್ಣ ಅವರು ಮುಖ್ಯಮಂತ್ರಿ ಆಗಿದ್ದಾಗ (2004) ವಿಕಾಸಸೌಧ ನಿರ್ಮಾಣವಾಗಿದ್ದು, ಟೆಂಡರ್‌ನಲ್ಲಿ ನಿರ್ದಿಷ್ಟಪಡಿಸಿದ ಗುಣಮಟ್ಟದ ಕಲ್ಲುಗಳನ್ನು ಬಳಸದೆ, ಉಬ್ಬುತಗ್ಗುಗಳಿರುವ ಕಲ್ಲುಗಳನ್ನು ಉಪಯೋಗಿಸಲಾಗಿದೆ. ಇದರಿಂದ ಸರ್ಕಾರಕ್ಕೆ ಕೋಟ್ಯಂತರ ರೂಪಾಯಿ ನಷ್ಟವಾಗಿದೆ ಎಂದು ಸರ್ಕಾರಕ್ಕೆ ಕಳುಹಿಸಿರುವ ವರದಿಯಲ್ಲಿ ಉಲ್ಲೇಖಿಸಲಾಗಿತ್ತು.

 

ಕೇವಲ 15 ವರ್ಷಗಳಲ್ಲಿ ವಿಕಾಸಸೌಧದ ಗೋಡೆಗಳಲ್ಲಿ ಬಿರುಕುಗಳು ಮತ್ತು ತೇವಾಂಶ ಕಾಣಿಸಿಕೊಂಡಿದೆ. ಈ ದೋಷಪೂರಿತ ಕಾಮಗಾರಿಯಲ್ಲಿ ಆಗಿನ 14 ಎಂಜಿನಿಯರ್‌ಗಳು ಭಾಗಿಯಾಗಿದ್ದು, ಅವರಿಗೆ ನಿರ್ದಿಷ್ಟ ಅವಧಿಯವರೆಗೆ ಬಡ್ತಿ ಮತ್ತು ವೇತನ ಬಡ್ತಿಯನ್ನು ತಡೆಹಿಡಿಯುವಂತೆ ಶಿಫಾರಸು ಮಾಡಲಾಗಿದೆ. ಸೇವೆಯಿಂದ ನಿವೃತ್ತಿ ಹೊಂದಿರುವ ಕೆಲವು ಎಂಜಿನಿಯರ್‌ಗಳ ಪಿಂಚಣಿ ಹಣದಲ್ಲಿ ಭಾಗಶಃ ಕಡಿತ ಮಾಡಬೇಕು ಎಂದು ಶಿಫಾರಸ್ಸು ಮಾಡಿತ್ತು.

 

‘ಟೆಂಡರ್‌ನಲ್ಲಿ ನಿರ್ದಿಷ್ಟಪಡಿಸಿದ್ದ ಪ್ರಕಾರ ಕಟ್ಟಡಕ್ಕೆ ಏಕರೂಪ, ಗಾತ್ರ ಮತ್ತು ಮೇಲ್ಮೈ ಹೊಂದಿದ್ದ (ಆಶ್ಲರ್‌) ಕಲ್ಲುಗಳನ್ನು ಬಳಸಬೇಕಿತ್ತು. ಆದರೆ, ಕಳ‍ಪೆ ಕಲ್ಲುಗಳನ್ನು ಉಪಯೋಗಿಸಲಾಗಿದೆ. ಕಲ್ಲುಗಳ ಆರು ಮುಖಗಳನ್ನು ಕೆತ್ತಿ ಸಮತಟ್ಟು ಮಾಡದೆ, ಒಂದು ಬದಿಯನ್ನು (ಕಟ್ಟಡ ಮುಂಭಾಗ) ಮಾತ್ರ ಸಮ ಮಾಡಲಾಗಿದೆ’. ಎಂದು ಲೋಕಾಯುಕ್ತರು ವರದಿಯಲ್ಲಿ ಪ್ರಸ್ತಾಪಿಸಿದ್ದರು.

 

‘ಕಾರ್ಯಪಾಲಕ ಎಂಜಿನಿಯರ್‌ ಎನ್‌ ಜಿ ಗೌಡಯ್ಯ, ಬಿ ಕೆ ಪವಿತ್ರ ಅವರ ವಿರುದ್ಧದ ಆರೋಪಗಳು ಸಾಬೀತಾಗಿದೆ. ಎನ್‌ ಗೌಡಯ್ಯ ಅವರಿಗೆ ಒಂದು ವಾರ್ಷಿಕ ವೇತನ ಬಡ್ತಿಯನ್ನು ಸಂಚಿತ ಪರಿಣಾಮ ಸಹಿತವಾಗಿ ತಡೆಹಿಡಿಯುವ ದಂಡನೆಯೊಂದಿಗೆ ಕರ್ನಾಟಕ ನಾಘರಿಕ ಸೇವಾ ನಿಯಮಾವಳಿಗಳ ನಿಯಮ 214(1)(ಎ) ಅಡಿ ಪಿಂಚಣಿಯ ಶೇ.25ರಷ್ಟನ್ನು 4 ವರ್ಷಗಳ ಕಾಲ ತಡೆಹಿಡಿಯಬೇಕು. ಬಿ ಕೆ ಪವಿತ್ರ ಅವರಿಗೆ 5 ವಾರ್ಷಿಕ ವೇತನ ಬಡ್ತಿಯನ್ನು ಸಂಚಿತ ಪರಿಣಾಮ ಸಹಿತವಾಗಿ ತಡೆಹಿಡಿಯುವ ದಂಡನೆಯನ್ನು ವಿಧಿಸಬೇಕು,’ ಎಂದು ಲೋಕಾಯುಕ್ತರು ವರದಿಯಲ್ಲಿ ಶಿಫಾರಸ್ಸು ಮಾಡಿದ್ದರು.

 

ಆಪಾದಿತ ಅಧಿಕಾರಿಗಳಾದ ಎನ್‌ ಜಿ ಗೌಡಯ್ಯ ಮತ್ತು ಬಿ ಕೆ ಪವಿತ್ರ ಎಂಬುವರು ಲೋಕಾಯುಕ್ತರ ದೋಷಾರೋಪಣೆ ಪಟ್ಟಿ, ವಿಚಾರಣೆ ವರದಿ ಹಾಗೂ ವರದಿಯಲ್ಲಿನ ಶಿಫಾರಸ್ಸುಗಳನ್ನು ರಾಜ್ಯ ಉಚ್ಛ ನ್ಯಾಯಾಲಯದಲ್ಲಿ ಪ್ರಶ್ನಿಸಿ ರಿಟ್‌ ಅರ್ಜಿ (9756/2019) (9809/2019) ದಾಖಲಿಸಿದ್ದರು. ಈ ಪ್ರಕರಣವನ್ನು ವಿಚಾರಣೆ ನಡೆಸಿದ್ದ ಉಚ್ಛ ನ್ಯಾಯಾಲಯವು 2019ರ ಮೇ 3ರಂದು ನೀಡಿದ್ದ ಮಧ್ಯಂತರ ತೀರ್ಪಿನ್ವಯ 2020ರ ಆಗಸ್ಟ್‌ 4ರಂದು ಆಕ್ಷೇಪಣೆ ಸಲ್ಲಿಕೆಯಾಗಿತ್ತು. ಆ ನಂತರ ಲೋಕಾಯುಕ್ತರ ಶಿಫಾರಸ್ಸಿನಂತೆ ಎನ್‌ ಜಿ ಗೌಡಯ್ಯ ಮತ್ತು ಬಿ ಕೆ ಪವಿತ್ರ ಎಂಬುವರಿಗೆ 2020ರ ಡಿಸೆಂಬರ್‌ 12ರಂದು ದಂಡನಾದೇಶವನ್ನು ಹೊರಡಿಸಿತ್ತು.

 

ಆರೋಪಿತ ಅಧಿಕಾರಿಗಳು ಉಚ್ಛ ನ್ಯಾಯಾಲಯದ ಮಧ್ಯಂತರ ಆದೇಶ ಜಾರಿಯಲ್ಲಿದ್ದಾಗ ದಂಡನಾದೇಶ ಹೊರಡಿಸಿರುವುದನ್ನು ಪ್ರಶ್ನಿಸಿದ್ದರು. ಹೀಗಾಗಿ 2020ರ ಡಿಸೆಂಬರ್‌ 15ರಂದು ಹೊರಡಿಸಿದ್ದ ದಂಡನಾದೇಶವನ್ನು 2021ರ ಫೆ.25ರಂದು ಹಿಂಪಡೆದಿತ್ತು. ಈ ಎಲ್ಲ ಬೆಳವಣಿಗೆಗಳನ್ನು ಕೂಲಂಕಷವಾಗಿ ಪರಿಶೀಲಿಸಿ ತೀರ್ಮಾನ ಕೈಗೊಳ್ಳಬೇಕು ಎಂದು ನ್ಯಾಯಾಲಯವು ನಿರ್ದೇಶನ ನೀಡಿತ್ತು.

 

ಇದೆಲ್ಲವನ್ನೂ ಪರಿಶೀಲಿಸಿರುವ ಲೋಕೋಪಯೋಗಿ ಇಲಾಖೆಯು ಇದೀಗ ‘ಎಲ್ಲಾ ಅಧಿಕಾರಿಗಳ ವಿರುದ್ಧ ಹೊರಿಸಲಾದ ಆರೋಪಗಳಲ್ಲಿ ನಿರ್ದಿಷ್ಟವಾಗಿ ಸರ್ಕಾರಕ್ಕೆ ಕೋಟ್ಯಾಂತರ ರುಪಾಯಿ ನಷ್ಟ ಉಂಟಾಗಿದೆಯೆಂದು ಆರೋಪಿಸಲಾಗಿತ್ತು. ಆದರೆ ವಿಚಾರಣೆ ವರದಿಯಲ್ಲಿ ಪ್ರಕರಣದಲ್ಲಿ ಆಪಾದಿತ ಅಧಿಕಾರಿಗಳು ಕೈಗೊಂಡ ಕ್ರಮದಿಂದ ನಿಖರವಾಗಿ ಎಷ್ಟು ಅಧಿಕ ಮೊತ್ತವನ್ನು ಗುತ್ತಿಗೆದಾರರಿಗೆ ಪಾವತಿ ಮಾಡಿದ್ದಾರೆಂಬುದಾಗಲಿ ಅಥವಾ ನಿಖರವಾಗಿ ಇಂತಿಷ್ಟು ಮೊತ್ತವು ಸರ್ಕಾರಕ್ಕೆ ನಷ್ಟವುಂಟಾಗಿದೆ ಎಂದು ತೀರ್ಮಾನಕ್ಕೆ ಬರುವುಲ್ಲಿ ಅಥವಾ ನಿರ್ಧರಿಸುವಲ್ಲಿ ವಿಚಾರಣಾಧಿಕಾರಿಗಳು ವಿಫಲರಾಗಿರುತ್ತಾರೆ,’ ಎಂದು ಪ್ರಸ್ತಾವನೆಯಲ್ಲಿ ವಿವರಿಸಿದೆ.

 

ಅದೇ ರೀತಿ ‘ ಒಟ್ಟಾರೆಯಾಗಿ ಪ್ರಕರಣದಲ್ಲಿನ ಸಂದರ್ಭ/ಸನ್ನಿವೇಶಗಳನ್ನು ಗಮನಿಸಿದಾಗ ವಿಚಾರಣಾ ವರದಿಯಲ್ಲಿ ಆರೋಪಗಳ ರುಜುವಾತನ್ನು ಸ್ಪಷ್ಟವಾಗಿ ನಿರೂಪಿಸಲು ಸಾಧ್ಯವಾಗಿಲ್ಲವೆಂಬುದು ಗಮನಾರ್ಹ ಅಂಶವಾಗಿದೆ. ವಿಚಾರಣಾ ವರದಿಯಲ್ಲಿ ಸಂಶಯದ ಬೊಟ್ಟು ಮಾಡಿ ತೋರಿಸಿರುವುದಾಗಿಯೇ ವಿನಃ ನಿರ್ದಿಷ್ಟ ಸಾಕ್ಷ್ಯಾಧಾರಗಳಿಂದ ಕೂಡಿದ ಸ್ಪಷ್ಟ ತೀರ್ಮಾನಗಳಾಗಿಲ್ಲ.,’ ಎಂದು ಹೇಳಿದೆ.
ಹೀಗಾಗಿ ಎನ್‌ ಜಿ ಗೌಡಯ್ಯ, ಬಿ ಕೆ ಪವಿತ್ರ ಇವರ ವಿರುದ್ಧದ ಸಾಕ್ಷ್ಯವು ಅವರುಗಳ ವಿರುದ್ಧ ಹೊರಿಸಿದ ಆರೋಪಗಳಿಗೆ ತಪ್ಪಿತಸ್ಥರನ್ನಾಗಿ ಮಾಡುವಷ್ಟು ಸಮರ್ಥವಾಗಿಲ್ಲವೆಂಬುದು ಕಂಡುಬಂದಿದೆ.

 

ಲೋಕಾಯುಕ್ತರು ಮಾಡಿರುವ ಶಿಫಾರಸ್ಸನ್ನು ಕೈಬಿಟ್ಟು ಅವರುಗಳು ನೀಡಿರುವ ಎರಡನೇ ಕಾರಣ ಕೇಳವ ನೋಟೀಸ್‌ಗೆ ನೀಡಿರುವ ಸಮಜಾಯಿಷಿಯನ್ನು ಒಪ್ಪಿಕೊಂಡು ದೋಷಮುಕ್ತಗೊಳಿಸುವ ಬಗ್ಗೆ ಅಥವಾ ಲೋಕಾಯುಕ್ತರ ಶಿಫಾರಸ್ಸನ್ನು ಒಪ್ಪುವ ಬಗ್ಗೆ ನಿರ್ಣಯ ಕೈಗೊಳ್ಳಬಹುದು,’ ಎಂದೂ ಇಲಾಖೆಯು ಸಂಪುಟ ಉಪ ಸಮಿತಿಗೆ ಸಲ್ಲಿಸಿರುವ ಪ್ರಸ್ತಾವನೆಯಲ್ಲಿ ಉಲ್ಲೇಖಿಸಿದೆ.

the fil favicon

SUPPORT THE FILE

Latest News

Related Posts