ವೈದ್ಯಕೀಯ ಸೀಟು ವಂಚನೆ; ತನಿಖೆ ವಿಳಂಬ, ಅಧಿಕಾರಿಗಳ ವಿರುದ್ಧ ವಿಚಾರಣೆಗೆ ವರ್ಷದ ಬಳಿಕ ಅನುಮತಿ

Photo Credit; Financial Express

ಬೆಂಗಳೂರು; ಸುಳ್ಳು ಜಾತಿ ಮತ್ತು ಸುಳ್ಳು ಗ್ರಾಮೀಣ ಅಭ್ಯರ್ಥಿ ಪ್ರಮಾಣ ಪತ್ರಗಳನ್ನು ಪಡೆದು ಮೆಡಿಕಲ್‌, ಇಂಜಿನಿಯರಿಂಗ್‌, ಔಷಧ ವಿಜ್ಞಾನದಲ್ಲಿ ಸರ್ಕಾರಿ ಸೀಟು ನೀಡಿ ಪ್ರತಿಭಾವಂತ ಅಭ್ಯರ್ಥಿಗಳಿಗೆ ಅನ್ಯಾಯವೆಸಗಿ ವಂಚನೆ ಮಾಡಿದ್ದ ಪ್ರಕರಣದಲ್ಲಿ ಪದವಿಪೂರ್ವ ಶಿಕ್ಷಣ ಇಲಾಖೆಯ ನಿವೃತ್ತ ಉಪ ನಿರ್ದೇಶಕಿ ಸಿ ಎಸ್‌ ಗೀತಾದೇವಿ ಅವರನ್ನು ನ್ಯಾಯಾಲಯದಲ್ಲಿ ವಿಚಾರಣೆಗೊಳಪಡಿಸಲು ಸರ್ಕಾರವು ಸಿಐಡಿಗೆ ಅನುಮತಿ ನೀಡಿದೆ.

 

ಅರ್ಹ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಆಗಿರುವ ವಂಚನೆ ಕುರಿತು ಸಿಐಡಿ ಘಟಕವು ಕಳೆದ 7 ವರ್ಷದಿಂದಲೂ ತನಿಖೆ ನಡೆಸುತ್ತಿದೆಯಾದರೂ ಆರೋಪ ಸಾಬೀತಾಗಿರುವ ಅಧಿಕಾರಿಗಳ ವಿರುದ್ಧ ವಿಚಾರಣೆ ನಡೆಸಲು ಸರ್ಕಾರವು ತ್ವರಿತಗತಿಯಲ್ಲಿ ಅನುಮತಿ ನೀಡುತ್ತಿಲ್ಲ. ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವರಾಗಿದ್ದ ಎಸ್‌ ಸುರೇಶ್‌ಕುಮಾರ್‌ ಅವಧಿಯಲ್ಲಿ ವಿಚಾರಣೆಗೆ ಅನುಮತಿ ಕೋರಿ ಸಿಐಡಿ ಪತ್ರ ಬರೆದಿತ್ತಾದರೂ ವರ್ಷದಿಂದಲೂ ಅನುಮತಿ ದೊರೆತಿರಲಿಲ್ಲ. ಬಿ ಸಿ ನಾಗೇಶ್‌ ಅವರು ಇಲಾಖೆಗೆ ಸಚಿವರಾಗಿ ಅಧಿಕಾರ ಸ್ವೀಕರಿಸಿದ ನಾಲ್ಕೈದು ತಿಂಗಳ ಅನುಮತಿ ದೊರೆತಿದೆ.

 

ಸಿ ಎಸ್‌ ಗೀತಾದೇವಿ ಅವರ ಪ್ರಕರಣದಲ್ಲಿಯೂ ನ್ಯಾಯಾಲಯದಲ್ಲಿ ವಿಚಾರಣೆಗೆ ಅನುಮತಿ ಕೋರಿ ಸಿಐಡಿ ಘಟಕವು ಸಲ್ಲಿಸಿದ್ದ ಕೋರಿಕೆಗೆ ಒಂದು ವರ್ಷದ ಬಳಿಕ ಅನುಮತಿ ನೀಡಿದೆ. ಅನುಮತಿ ನೀಡಿರುವುದಕ್ಕೆ ಸಂಬಂಧಿಸಿದಂತೆ ಶೀಘ್ರದಲ್ಲಿಯೇ ಆದೇಶ ಹೊರಡಿಸಲಿದೆ. ಈ ಸಂಬಂಧ ಕರಡು ಆದೇಶದ ಪ್ರತಿ ಮತ್ತು ನಡವಳಿಗಳು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ಪದವಿಪೂರ್ವ ಶಿಕ್ಷಣ ಇಲಾಖೆ ಹೊರಡಿಸಲಿರುವ ಆದೇಶದ ಪ್ರತಿ

 

ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಆದೇಶದ ಉಲ್ಲಂಘನೆ ಮಾಡಿ ಪ್ರತಿಭಾವಂತ ಅಭ್ಯರ್ಥಿಗಳಿಗೆ ಅನ್ಯಾಯ ಮಾಡಿ ಇಲಾಖೆಗೆ ವಂಚನೆ ಮಾಡಿರುವ ಕುರಿತಂತೆ ನ್ಯಾಯಾಲಯದಲ್ಲಿ ಅಭಿಯೋಜನೆಗೊಳಪಡಿಸಲು ಅಭಿಯೋಜನಾ ಮಂಜೂರಾತಿ ನೀಡಬೇಕು ಎಂದು ಸಿಐಡಿಯ ಪೊಲೀಸ್‌ ಮಹಾನಿರ್ದೇಶಕರು (ಆರ್ಥಿಕ ಅಪರಾಧ, ವಿಶೇಷ ಘಟಕಗಳು) 2021ರ ಜನವರಿ 28ರಂದು ಪದವಿಪೂರ್ವ ಶಿಕ್ಷಣ ಇಲಾಖೆಗೆ ಪತ್ರ ಬರೆದಿದ್ದರು.

 

ಈ ಕೋರಿಕೆ ಪತ್ರವನ್ನು ಕಳೆದ ಒಂದು ವರ್ಷದಿಂದಲೂ ಪರಿಶೀಲನೆ ನಡೆಸುತ್ತಿದ್ದ ಪದವಿಪೂರ್ವ ಶಿಕ್ಷಣ ಇಲಾಖೆಯು ವರ್ಷದ ಬಳಿಕ ಅಂದರೆ 2022ರ ಮಾರ್ಚ್‌ನಲ್ಲಿ ಈ ಸಂಬಂಧ ಆದೇಶ ಹೊರಡಿಸಲಿದೆ ಎಂದು ತಿಳಿದು ಬಂದಿದೆ.

 

ಪ್ರಕರಣದ ವಿವರ

 

ವೈದ್ಯಕೀಯ, ಇಂಜಿನಿಯರಿಂಗ್‌, ಔಷಧ ವಿಜ್ಞಾನ ಪ್ರವೇಶಕ್ಕೆ ಸಿಇಟಿ ಮೂಲಕ ಸರ್ಕಾರಿ ಸೀಟು ಹಂಚಿಕೆ ಪ್ರಕ್ರಿಯೆಯ ಭಾಗವಾಗಿ ದಾಖಲೆಗಳ ಪರಿಶೀಲನೆಗೆ 2013ರ ಜೂನ್‌ 23ರಂದು ಅಂತಿಮ ದಿನಾಂಕವೆಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಗೊತ್ತುಪಡಿಸಿತ್ತು. ಪ್ರಾಧಿಕಾರದ ಈ ಆದೇಶವನ್ನು ಉಲ್ಲಂಘಿಸಿ ವಿಶೇಷ ದಿನಾಂಕವನ್ನು ಗೊತ್ತುಪಡಿಸಲಾಗಿತ್ತಲ್ಲದೆ ಒಟ್ಟು 26 ಅಭ್ಯರ್ಥಿಗಳಿಂದ ಸುಳ್ಳು ಜಾತಿ ಪ್ರಮಾಣ ಪತ್ರ ಮತ್ತು ಸುಳ್ಳು ಗ್ರಾಮೀಣ ಅಭ್ಯರ್ಥಿ ಪ್ರಮಾಣ ಪತ್ರಗಳನ್ನು ಪಡೆದು ಮೆಡಿಕಲ್‌, ಇಂಜಿನಿಯರಿಂಗ್‌, ಔಷಧ ವಿಜ್ಞಾನ ಸೀಟು ಪಡೆಯಲು ಅವಕಾಶ ಮಾಡಿಕೊಟ್ಟಿದ್ದರು.

 

ಇದರಿಂದಾಗಿ ಪ್ರತಿಭಾವಂತ ಮತ್ತುಅರ್ಹ ವಿದ್ಯಾರ್ಥಿಗಳಿಗೆ ಅನ್ಯಾಯವಾಗಿದೆಯಲ್ಲದೆ ಇಲಾಖೆಗೂ ವಂಚನೆ ಆಗಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಆಡಳಿತಾಧಿಕಾರಿ ಎಸ್‌ ಎನ್‌ ಗಂಗಾಧರಯ್ಯ ಅವರು ಮಲ್ಲೇಶ್ವರಂ ಪೊಲಿಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ದೂರಿನ ಕುರಿತಂತೆ ಪ್ರಾಧಿಕಾರದ ಅಂದಿನ ಆಡಳಿತಾಧಿಕಾರಿ ಪಿ ಕುಲಕರ್ಣಿ ಮತ್ತಿತರರ ವಿರುದ್ಧ ಐಪಿಸಿ ಕಲಂ 468, 471, 119, 182, 420, 34 ಅಡಿ ಇದೇ ಠಾಣೆಯಲ್ಲಿ 2014ರ ಜುಲೈ 16ರಂದು ಸಲ್ಲಿಸಿದ್ದ ದೂರಿನ ಆಧರಿಸಿ ಸಿಐಡಿ ಘಟಕವು ತನಿಖೆಯನ್ನು ಕೈಗೊಂಡಿತ್ತು. ಈ ಪೈಕಿ ಕುಲಕರ್ಣಿ ಅವರ ವಿರುದ್ಧದ ಪ್ರಕರಣವನ್ನು 2014 ಸೆಪ್ಟಂಬರ್‌ 9ರಂದು ಸಿಐಡಿ ಘಟಕಕ್ಕೆ ವರ್ಗಾಯಿಸಲಾಗಿತ್ತು.

 

ತನಿಖೆ ವೇಳೆಯಲ್ಲಿ ಸಾಕ್ಷಿದಾರರ ಹೇಳಿಕೆ ಮತ್ತು ದಾಖಲಾತಿಗಳ ಪರಿಶೀಲನೆಯಿಂದ ಭೌತಶಾಸ್ತ್ರ ಉಪನ್ಯಾಸಕರಾಗಿದ್ದ ಎಂ ಬಿ ಅಶ್ವಥಲಕ್ಷ್ಮಿ, ಜೀವಶಾಸ್ತ್ರ ಉಪನ್ಯಾಸಕರಾಗಿದ್ದ ಕೆ ಗೀತಾ ಮತ್ತು ಸಹಾಯಕ ನಿರ್ದೇಶಕರಾಗಿದ್ದ ಸಿ ಎಸ್‌ ಗೀತಾದೇವಿ ಅವರನ್ನು ಸಿಆರ್‌ಪಿಸಿ ಕಲಂ 197ರ ಅನ್ವಯ ಅಭಿಯೋಜನೆಗೊಳಪಡಿಸಲು ತನಿಖಾಧಿಕಾರಿಗಳು ಅನುಮತಿ ಕೋರಿದ್ದರು.

 

ಸಿಐಡಿ ವರದಿಯಲ್ಲೇನಿದೆ?

 

ಅಭ್ಯರ್ಥಿ ಕುಮಾರಿ ಜಿ ನೇಹಾ ಕಾರಂತ 2013ರ ಜೂನ್‌ 6ರಂದು ಸಾಮಾನ್ಯ ವರ್ಗ (ಜಿಎಂ)ದಡಿ ದಾಖಲೆ ಪರಿಶೀಲಿಸಿಕೊಂಡಿದ್ದರು. ದಾಖಲಾತಿ ಪರಿಶೀಲನೆ ಕೊನೆಯ ದಿನಾಂಕ ಮುಗಿದಿದ್ದರೂ ಸಹ ಉದ್ದೇಶಪೂರ್ವಕವಾಗಿ ಎರಡನೇ ಬಾರಿಗೆ ದಾಖಲಾತಿ ಪರಿಶೀಲನೆಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಬೆಂಗಳೂರು ಕೇಂದ್ರದ ಸಿಇಟಿ ಕೌನ್ಸಲಿಂಗ್‌ ನ ಪರಿಶೀಲನಾ ಅಧಿಕಾರಿ ಅಶ್ವಥ ಲಕ್ಷ್ಮಿ ಅವರು ಮಾಡಿಕೊಟ್ಟಿದ್ದರು.

 

ನೇಹಾ ಕಾರಂತ ಅವರು ಓದಿರುವ ಶಾಲೆಗಳು ಗ್ರಾಮೀಣ ಪ್ರದೇಶಕ್ಕೆ ಒಳಪಡದಿದ್ದರೂಸಹ ಅವರ ದಾಖಲೆಗಳನ್ನು ದುರುದ್ಧೇಶದಿಂದ ಸರಿಯಾಗಿ ಪರಿಶೀಲಿಸದೇ ಮತ್ತು ಈ ಹಿಂದೆ ಕಂಪ್ಯೂಟರಿನಲ್ಲಿರುವ ದತ್ತಾಂಶಗಳೊಡನೆ ತಾಳೆ ಮಾಡಿರಲಿಲ್ಲ. ಮತ್ತು ಸಿಇಟಿ ಬ್ರೋಚರ್‌ನಲ್ಲಿ ನೀಡಲಾಗಿದ್ದ ಮಾಹಿತಿಗಳ ಪ್ರಕಾರ ದಾಖಲೆಗಳನ್ನು ಸರಿಯಾಗಿ ಪರಿಶೀಲನೆ ನಡೆಸಿರಲಿಲ್ಲ. ಹೀಗಾಗಿ ನೇಹಾ ಕಾರಂತ ಅವರಿಂದ ಸುಳ್ಳು ಗ್ರಾಮೀಣ ವ್ಯಾಸಂಗ ಪ್ರಮಾಣ ಪತ್ರ ಪಡೆದು ಜಿಎಂ ಕೋಟಾದಿಂದ ಜಿಎಂಆರ್‌ ಕೋಟಾಕ್ಕೆ ಅಕ್ರಮ ವರ್ಗ ಬದಲಾವಣೆ ಮಾಢಿ ದಾಖಲೆ ಪರಿಶೀಲನೆ ಮಾಡಿ ಸ್ವೀಕೃತಿ ನೀಡಿದ್ದರು.

 

ಸುಳ್ಳು ಗ್ರಾಮೀಣ ವ್ಯಾಸಂಗ ಪ್ರಮಾಣ ಪತ್ರ ಪಡೆದ ಆಧಾರದ ಮೇಲೆ ನೇಹಾ ಕಾರಂತ ಅವರು ಮಂಗಳೂರಿನ ಎ ಜೆ ಇನ್ಸಿಟಿಟ್ಯೂಟ್‌ ಆಫ್ ಮೆಡಿಕಲ್‌ ಸೈನ್ಸ್‌ ಕಾಲೇಜಿನಲ್ಲಿ ಸೀಟು ಗಿಟ್ಟಿಸಿಕೊಂಡಿದ್ದರು. ಇದರಿಂದ ನೇಹಾ ಕಾರಂತ ಅವರಿಗೆ ಸಿಇಟಿ ಕೌನ್ಸಲಿಂಗ್‌ನಲ್ಲಿ ಸೀಟನ್ನು ಪಡೆಯಲು ಅನುಕೂಲ ಮಾಡಿಕೊಟ್ಟು ನಿಜವಾದ ಅಭ್ಯರ್ಥಿಗಳಿಗೆ ಸಿಗಬೇಕಿದ್ದ ಸೀಟನ್ನು ಪಡೆಯಲು ವಂಚಿತರನ್ನಾಗಿ ಮಾಡಿ ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಂಡಿದ್ದಲ್ಲದೆ ಸರ್ಕಾರಕ್ಕೆ ಮೋಸ ಮಾಡಿ ಐಪಿಸಿ ಕಲಂ 417, 465, 119, 468, 471, ಸಹ ಕಲಂ 34 ರೀತಿ ಅಪರಾಧ ಎಸಗಿರುವುದನ್ನು ತನಿಖೆ ವೇಳೆ ಸಾಬೀತುಪಡಿಸಲಾಗಿತ್ತು.

 

ಅದೇ ರೀತಿ ಗ್ರಾಮೀಣ ಶಾಲೆಯಲ್ಲಿ ವ್ಯಾಸಂಗ ಮಾಡದ ಎನ್‌ ವತ್ಸಲಾ ಎಂಬುವರು ಸಹ ಜಿ ಎಂ ಕೋಟಾದಡಿ ದಾಖಲೆ ಪರಿಶೀಲಿಸಿಕೊಂಡಿದ್ದರು. ದಾಖಲಾತಿ ಪರಿಶೀಲನೆ ಕೊನೆಯ ದಿನಾಂಕ ಮುಗಿದಿದ್ದರೂ ಉದ್ದೇಶಪೂರ್ವಕವಾಗಿ ಬೆಂಗಳೂರಿನಲ್ಲಿದ್ದ ಸಿಇಟಿ ಕೇಂದ್ರದಲ್ಲಿ ಪರಿಶೀಲನೆಗೆ ಅವಕಾಶ ಮಾಡಿಕೊಟ್ಟಿದ್ದರು. ಇವರನ್ನು ಜಿಎಂ ಕೋಟಾದಿಂದ ಜಿಎಂಆರ್‌ ಕೋಟಾಕ್ಕೆ ಮತ್ತು 3 ಎಜಿದಿಂದ 3ಎಆರ್‌ ಕೋಟಾಕ್ಕೆ ವರ್ಗ ಬದಲಾವಣೆ ಮಾಡಿ ಸ್ವೀಕೃತಿ ಪತ್ರ ನೀಡಿದ್ದರು. ಈ ಮೂಲಕ ಎನ್‌ ವತ್ಸಲಾ ಅವರು ಮಂಗಳೂರಿನ ಕೆ ಎಸ್‌ ಹೆಗ್ಗಡೆ ಮೆಡಿಕಲ್‌ ಅಕಾಡೆಮಿಯಲ್ಲಿ ಸೀಟು ಪಡೆಯಲು ಅನುಕೂಲ ಮಾಡಿಕೊಡಲಾಗಿತ್ತು ಎಂಬುದು ಸಿಐಡಿ ತನಿಖೆ ವರದಿಯಿಂದ ತಿಳಿದು ಬಂದಿದೆ.

 

ಮತ್ತೋರ್ವ ಅಭ್ಯರ್ಥಿ ಎನ್‌ ವಿಕಾಸ್‌ ಎಂಬಾತನು ಸಲ್ಲಿಸಿದ್ದ ದಾಖಲಾತಿಗಳನ್ನು ಸರಿಯಾಗಿ ಪರಿಶೀಲನೆ ನಡೆಸದೆಯೇ 3 ಎಜಿ ಕೋಟಾದಿಂದ 3 ಎಆರ್‌ ಕೋಟಾಕ್ಕೆ ವರ್ಗ ಬದಲಾವಣೆ ಮಾಡಿ ಸ್ವೀಕೃತಿ ನೀಡಲಾಗಿತ್ತು. ಈತ ಪಡೆದಿದ್ದ ಸುಳ್ಳು ಗ್ರಾಮೀಣ ವ್ಯಾಸಂಗ ಪ್ರಮಾಣ ಪತ್ರದ ಆಧಾರದ ಮೇಲೆ ಸರ್ಕಾರಿ ಕೋಟಾದಡಿ ಆದಿಚುಂಚನಗಿರಿ ಇನ್ಸಿಟ್ಯೂಟ್‌ ಆಫ್‌ ಮೆಡಿಕಲ್‌ ಸೈನ್ಸ್‌ ಕಾಲೇಜಿನಲ್ಲಿ ಎಂಬಿಬಿಎಸ್‌ ಸೀಟು ಪಡೆದುಕೊಳ್ಳಲು ಅನುಕೂಲ ಮಾಡಿಕೊಡಲಾಗಿತ್ತು ಎಂಬುದು ವರದಿಯಿಂದ ಗೊತ್ತಾಗಿದೆ.

 

ಬಳ್ಳಾರಿಯ ಸಿಇಟಿ ಕೇಂದ್ರದಲ್ಲಿ ಪಿ ಸಾಯಿಕೃಷ್ಣ ಎಂಬಾತ 3ಎಆರ್‌ ಕೋಟಾದಡಿ ದಾಖಲೆ ಪರಿಶೀಲಿಸಿಕೊಂಡಿದ್ದ. ದಾಖಲಾತಿ ಪರಿಶೀಲನೆ ಕೊನೆ ದಿನಾಂಕ ಮುಗಿದ ನಂತರವೂ ಎರಡನೇ ಬಾರಿಗೆ ಬೆಂಗಳೂರಿನ ಸಿಇಟಿ ಕೇಂದ್ರದಲ್ಲಿ ಪರಿಶೀಲನೆಗೆ ಅವಕಾಶ ಮಾಡಿಕೊಟ್ಟು 2ಎ ಜಾತಿ ಪ್ರಮಾಣ ಪತ್ರವನ್ನು ಸರಿಯಾಗಿ ಪರಿಶೀಲನೆ ಮಾಡದೇ 3 ಎಜಿ ಕೋಟಾದಿಂದ 3ಎಆರ್‌ ಕೊಟಾಕ್ಕೆ ಮತ್ತು 3 ಎಆರ್ ಕೋಟಾದಿಂದ 2ಎಆರ್‌ ಕೋಟಾಕ್ಕೆ ವರ್ಗ ಬದಲಾವಣೆ ಮಾಡಿ ಸ್ವೀಕೃತಿ ನೀಡಲಾಗಿತ್ತು. 2ಎಆರ್‌ ಪ್ರಮಾಣ ಪತ್ರದ ಆಧಾರದ ಮೇಲೆ ಸರ್ಕಾರಿ ಕೋಟಾದಡಿ ಆರ್‌ ವಿ ಇಂಜಿನಿಯರಿಂಗ್‌ ಕಾಲೇಜಿನಲ್ಲಿ ಪಿ ಸಾಯಿಕೃಷ್ಣ ಎಂಬಾತನಿಗೆ ಸೀಟು ದೊರಕಿತ್ತು.

 

‘ಹೀಗೆ ಆರೋಪಿ ಕೆ ಗೀತಾ ಅವರು ಅಭ್ಯರ್ಥಿಗಳಾದ ಎನ್‌ ವತ್ಸಲಾ, ಮತ್ತು ಪಿ ಸಾಯಿಕೃಷ್ಣ ಅವರುಗಳು ಸಲ್ಲಿಸಿರುವ ದಾಖಲೆಗಳನ್ನು ಸರಿಯಾಗಿ ಪರಿಶೀಲನೆ ಮಾಡದೇ ಸಿಇಟಿ ಕೌನ್ಸಲಿಂಗ್‌ನಲ್ಲಿ ಸೀಟು ಪಡೆಯಲು ಅನುಕೂಲ ಮಾಡಿಕೊಟ್ಟು ನಿಜವಾದ ಅಭ್ಯರ್ಥಿಗಳಿಗೆ ಸಿಗಬೇಕಾದ ಸೀಟನ್ನು ಪಡೆಯಲು ವಂಚಿತರನ್ನಾಗಿ ಮಾಡಿ ಅಧಿಕಾರ ದುರುಪಯೋಗಪಡಿಸಿಕೊಂಡು ಸರ್ಕಾರಕ್ಕೆ ಮೋಸ ಮಾಡಿ ಅಪರಾಧ ಎಸಗಿರುವುದು ತನಿಖೆಯಿಂದ ಸಾಬೀತಾಗಿದೆ,’ ಎಂಬ ವಿವರಣೆ ವರದಿಯಲ್ಲಿದೆ.

SUPPORT THE FILE

Latest News

Related Posts