ಬೆಂಗಳೂರು; ಅನುಸೂಚಿತ ಜಾತಿ ಮತ್ತು ಬುಡಕಟ್ಟು ಉಪ ಹಂಚಿಕೆಯಡಿ ಪ್ರತಿ ಆರ್ಥಿಕ ವರ್ಷಕ್ಕೆ ನೀಡಲಾಗುವ ಅನುದಾನವನ್ನು ಆ ವರ್ಷವೇ ಖರ್ಚು ಮಾಡದಿದ್ದರೆ 2013ರ ಅಧಿನಿಯಮ ಮತ್ತು 2017ರ ತಿದ್ದುಪಡಿ ಅಧಿನಿಯಮದ ಪ್ರಕಾರ ಶಿಸ್ತುಕ್ರಮ ಜರುಗಿಸಬೇಕಿದ್ದರೂ ಕಳೆದ ಮೂರು ವರ್ಷದಲ್ಲಿ ಸಮಾಜ ಕಲ್ಯಾಣ ಇಲಾಖೆಯು ಯಾವೊಬ್ಬ ಅಧಿಕಾರಿಯ ವಿರುದ್ಧವೂ ಕ್ರಮ ಜರುಗಿಸಿಲ್ಲ.
ವಿಧಾನ ಪರಿಷತ್‌ನ ಸದಸ್ಯ ಸೂರಜ್ ರೇವಣ್ಣ ಅವರು ಈ ಸಂಬಂಧ ಕೇಳಿದ್ದ ಚುಕ್ಕೆ ಗುರುತಿಲ್ಲದ ಪ್ರಶ್ನೆಗೆ 2022ರ ಮಾರ್ಚ್ 11ರಂದು ಉತ್ತರಿಸಿರುವ ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಈ ಮಾಹಿತಿಯನ್ನು ಒದಗಿಸಿದ್ದಾರೆ.
‘ಆಯಾ ಆರ್ಥಿಕ ವರ್ಷದಲ್ಲಿ ಉಳಿಕೆಯಾದ ಮೊತ್ತವನ್ನು ಲೆಕ್ಕ ಪರಿಶೋಧನೆಯಾದ ನಂತರ ಮುಂದಿನ ಆರ್ಥಿಕ ವರ್ಷದ ನಂತರದ ಆರ್ಥಿಕ ವರ್ಷದಲ್ಲಿ ಮರು ಹಂಚಿಕೆ ಮಾಡಿ ಅನುದಾನವನ್ನು ವಿನಿಯೋಗಿಸಿಲು ಕ್ರಮ ವಹಿಸಲಾಗಿದೆ. ಈ ಹಿನ್ನೆಲೆಯಲ್ಲಿ ಇದಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಂಡಿರುವುದಿಲ್ಲ,’ ಎಂದು ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಉತ್ತರಿಸಿದ್ದಾರೆ.
ವಿಧಾನಪರಿಷತ್ ಸದಸ್ಯ ಟಿ ಎ ಶರವಣ ಅವರು 2020ರಲ್ಲಿಯೂ ಇದೇ ಪ್ರಶ್ನೆಯನ್ನು ಕೇಳಿದ್ದರು. ಇದಕ್ಕೆ ಉಪ ಮುಖ್ಯಮಂತ್ರಿ ಹಾಗೂ ಸಮಾಜ ಕಲ್ಯಾಣ ಸಚಿವರಾಗಿದ್ದ ಗೋವಿಂದ ಎಂ ಕಾರಜೋಳ ಅವರು ನೀಡಿದ್ದ ಉತ್ತರವನ್ನೇ ಹಾಲಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಮುಂದುವರೆಸಿ ವಿಸ್ತರಿಸಿದ್ದಾರೆ. 2020 ಮತ್ತು 2022ರಲ್ಲಿ ಸಮಾಜ ಕಲ್ಯಾಣ ಇಲಾಖೆಯು ನೀಡಿರುವ ಉತ್ತರವು ಸಿದ್ಧ ಉತ್ತರದಂತಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ.
ಎಸ್‌ಸಿಎಸ್‌ಪಿ, ಟಿಎಸ್‌ಪಿಯಡಿ ಬಿಡುಗಡೆಯಾದ ಅನುದಾನವನ್ನು ಆಯಾ ವರ್ಷ ಪೂರ್ಣ ಪ್ರಮಾಣದಲ್ಲಿ ವೆಚ್ಚಮಾಡಲು ಎಲ್ಲಾ ಇಲಾಖೆಗಳಿಂದ ಕ್ರಮ ವಹಿಸಲಾಗುತ್ತಿದೆ. ಆದಾಗ್ಯೂ ಕೆಲವು ಸಂದರ್ಭಗಳಲ್ಲಿ ಆರ್ಥಿಕ ವರ್ಷದಲ್ಲಿ ಅಂತ್ಯದಲ್ಲಿ ಬಿಡುಗಡೆಯಾಗುವ ಅನುದಾನ ಉಳಿಕೆಯಾಗುತ್ತದೆ. ಕೆಲವು ಇಲಾಖೆಗಳಲ್ಲಿ ಕೇಂದ್ರ ಪುರಸ್ಕೃತ ಯೋಜನೆಯಡಿ ಅರ್ಥಿಕ ವರ್ಷದ ಅಂತ್ಯಕ್ಕೆ ಬಿಡುಗಡೆಯಾಗುವ ಅನುದಾನವನ್ನು ಪುನರ್ ಮೌಲ್ಯೀಕರಿಸಿ ಮುಂದಿನ ವರ್ಷ ವಿನಿಯೋಗಿಸಲು ಕ್ರಮ ವಹಿಸಲಾಗುತ್ತಿದೆ ಎಂದು ಉತ್ತರದಲ್ಲಿ ತಿಳಿಸಿದ್ದಾರೆ.
2013ರ ಅಧಿನಿಯಮದಲ್ಲೇನಿದೆ?
ಅನುಸೂಚಿತ ಜಾತಿಗಳ ಉಪಯೋಜನೆ ಮತ್ತು ಬುಡಕಟ್ಟು ಉಪ ಯೋಜನೆಯ ಅನುಷ್ಠಾನದಲ್ಲಿ ಪಾರದರ್ಶಕತೆ ಮತ್ತು ಉತ್ತರದಾಯಿತ್ವದ ಬಗ್ಗೆ ಅಧಿನಿಯಮದ ಅಧ್ಯಾ 6ರಲ್ಲಿ ಸ್ಪಷ್ಟಪಡಿಸಲಾಗಿದೆ. ಇದರ ಪ್ರಕಾರ ಪ್ರತಿಯೊಂದು ಇಲಾಖೆಯೂ ಅನುಸೂಚಿತ ಜಾತಿಗಳ ಉಪಯೋಜನೆ ಮತ್ತು ಬುಡಕಟ್ಟು ಉಪ ಯೋಜನೆ ಸ್ಕೀಮುಗಳ ಅನುಷ್ಠಾನದ ಎಲ್ಲಾ ಹಂತಗಳಲ್ಲೂ ಪಾರದರ್ಶಕತೆ ಮತ್ತು ಉತ್ತರದಾಯಿತ್ವ ಇರುವಂತೆ ನೋಡಿಕೊಳ್ಳಬೇಕು.
ಅದೇ ರೀತಿ ಸಾರ್ವಜನಿಕ ನೌಕರನಾಗಿರುವ ಯಾರೇ ಕಾರ್ಯನಿರ್ವಾಹಕನು ಅಥವಾ ಅಧಿಕಾರಿಯು ಈ ಅಧಿನಿಯಮದ ಮೇರೆಗೆ ತಾನು ನಿರ್ವಹಿಬೇಕೆಂದು ಅಗತ್ಯಪಡಿಸಿರುವ ತನ್ನ ಕರ್ತವ್ಯಗಳನ್ನು ಉದ್ದೇಶಪೂರ್ವಕವಾಗಿ ನಿರ್ಲಕ್ಷ್ಯಿಸಿದರೆ, ಅವನು ಸರ್ಕಾರಿ ನೌಕರರು ಮತ್ತು ಕಾರ್ಯನಿರ್ವಾಹಕರಿಗೆ ಅನ್ವಯವಾಗಬಹುದಾದ ಸಂಬಂಧಪಟ್ಟ ಸೇವಾ/ಶಿಸ್ತುಪಾಲನಾ ನಿಯಮಗಳ ಮೇರೆಗೆ ಶಿಸ್ತಿನ ಕ್ರಮಕ್ಕೆ ಒಳಗಾಗತಕ್ಕದ್ದು. ಅಥವಾ ಅಂಥ ನಿರ್ಲಕ್ಷ್ಯದ ತೀವ್ರತೆಯನ್ನವಲಂಬಿಸಿ ಅನಸೂಚಿತ ಜಾತಿಗಳ ಉಪಯೋಜನೆ ಮತ್ತು ಬುಡಕಟ್ಟುಗಳ ಉಪ ಯೋಜನೆಯ ನೋಡಲ್ ಏಜೆನ್ಸಿ ನಿರ್ಧರಿಸುವಂತೆ 6 ತಿಂಗಳುವರೆಗೆ ವಿಸ್ತರಿಸಬಹದಾದ ಅವಧಿಯ ಕಾರಗೃಹವಾಸದಿಂದ ದಂಡಿತನಾಗತಕ್ಕದ್ದು ಎಂದು ಸ್ಪಷ್ಟಪಡಿಸಿದೆ.
2019-20ರಿಂದ 2021-22ನೇ ಸಾಲಿನವರೆಗೆ ಎಸ್‌ಸಿಎಸ್‌ಪಿ ಮತ್ತು ಟಿಎಸ್‌ಪಿ ಯೋಜನೆಯಡಿ ಯಾವ ಇಲಾಖೆಯೂ ಆಯಾ ಆರ್ಥಿಕ ವರ್ಷದಲ್ಲಿ ಅನುದಾನವನ್ನು ಪೂರ್ಣ ಪ್ರಮಾಣದಲ್ಲಿ ವೆಚ್ಚ ಮಾಡಿರಲಿಲ್ಲ.
2019-20ನೇ ಸಾಲಿನಲ್ಲಿ ಒಟ್ಟು 27,558.60 ಕೋಟಿ ರು. ಅನುದಾನ ಹಂಚಿಕೆಯಾಗಿತ್ತು. ಇದರಲ್ಲಿ 25,387.62 ಕೋಟಿ ರು. ಖರ್ಚು ಮಾಡಿ 2,170.98 ಕೋಟಿ ರು. ಬಾಕಿ ಉಳಿದಿತ್ತು. ಎಸ್‌ಸಿಎಸ್‌ಪಿಗೆ 19,620.09 ಕೋಟಿ ರು., ಟಿಎಸ್‌ಪಿ ಅಡಿಯಲ್ಲಿ 7,938.51 ಕೋಟಿ ರು. ಒಳಗೊಂಡಿತ್ತು. ಒಟ್ಟು ಇಲಾಖೆಗಳ ಪೈಕಿ 8 ಇಲಾಖೆಗಳು ಶೇ. 90ಕ್ಕಿಂತಲೂ ಕಡಿಮೆ ಪ್ರಗತಿ ಸಾಧಿಸಿದ್ದವು.
ವಾರ್ತಾ, ಸಾರ್ವಜನಿಕ ಸಂಪರ್ಕ ಇಲಾಖೆ, ಕೌಶಲ್ಯಾಭಿವೃದ್ಧಿ, ಅರಣ್ಯ, ಯೋಜನೆ, ಸಾಂಖ್ಯಿಕ, ಭಾರೀ ನೀರಾವರಿ, ವಸತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಮತ್ತು ಮೀನುಗಾರಿಕೆ ಇಲಾಖೆಗಳು 2019-20ನೇ ಸಾಲಿನಲ್ಲಿ ಶೇ.90ಕ್ಕಿಂತ ಕಡಿಮೆ ಪ್ರಗತಿ ಸಾಧಿಸಿದ್ದವು. ಆದರೂ ಈ ಇಲಾಖೆಗಳ ಯಾವೊಬ್ಬ ಅಧಿಕಾರಿಯ ವಿರುದ್ಧ ಅಧಿನಿಯಮದ ಪ್ರಕಾರ ಒಂದೇ ಒಂದು ಶಿಸ್ತು ಕ್ರಮ ಜರುಗಿಸಿಲ್ಲ. ಮತ್ತು ಯಾರೊಬ್ಬರ ಮೇಲೂ ಮೊಕದ್ದಮೆ ದಾಖಲಿಸಿಲ್ಲ ಎಂಬುದು ತಿಳಿದು ಬಂದಿದೆ.
ಅದೇ ರೀತಿ 2020-21ನೇ ಸಾಲಿನಲ್ಲಿ ಒಟ್ಟು 27,699.52 ಕೋಟಿ ರು. ಬಿಡುಗಡೆಯಾಗಿತ್ತು. 2020-21ನೇ ಸಾಲಿನಲ್ಲಿ ಸೆಪ್ಟಂಬರ್ ಅಂತ್ಯಕ್ಕೆ ಕೇವಲ 5,603.36 ಕೋಟಿ ರು. ವೆಚ್ಚ ಮಾಡಿ 21,900.54 ಕೋಟಿ ರು. ಬಾಕಿ ಉಳಿಸಿಕೊಂಡಿತ್ತು. ಇದು ಒಟ್ಟು ಹಂಚಿಕೆಯಲ್ಲಿ ಶೇ. 20.37ರಷ್ಟು ಮಾತ್ರ ಪ್ರಗತಿ ಕಂಡಿತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷದಲ್ಲಿ ಶೇ.10.72ರಷ್ಟು ಮಾತ್ರ ಏರಿಕೆಯಾಗಿತ್ತು.
ಪರಿಶಿಷ್ಟ ಜಾತಿ ಉಪ ಯೋಜನೆಯಡಿಯಲ್ಲಿ 35 ಇಲಾಖೆಗಳ ವ್ಯಾಪ್ತಿಯಲ್ಲಿ 2021ರ ಸೆಪ್ಟಂಬರ್ ಅಂತ್ಯಕ್ಕೆ ಒಟ್ಟು 18,331.54 ಕೋಟಿ ರು. ಹಂಚಿಕೆಯ ಪೈಕಿ ಬಿಡುಗಡೆ ಮಾಡಿದ್ದು 8,856.24 ಕೋಟಿ ರು. ಮಾತ್ರ. ಈ ಪೈಕಿ ವೆಚ್ಚ ಮಾಡಿರುವುದು 5,885.52 ಕೋಟಿ ರು., ಇದು ಒಟ್ಟು ಹಂಚಿಕೆ, ಬಿಡುಗಡೆಯಲ್ಲಿ ಶೇ.32.11ರಷ್ಟು ಪ್ರಗತಿ ಸಾಧಿಸಲಾಗಿದೆ.
ಪರಿಶಿಷ್ಟ ಬುಡಕಟ್ಟು ಉಪಯೋಜನೆಯಡಿಯಲ್ಲಿ 35 ಇಲಾಖೆಗಳಿಗೆ ಒಟ್ಟು 7,673.47 ಕೋಟಿ ರು. ಹಂಚಿಕೆ ಮಾಡಲಾಗಿದ್ದು ಈ ಪೈಕಿ 3,340.79 ಕೋಟಿ ರು. ಬಿಡುಗಡೆಯಾಗಿದೆ. ಇದರಲ್ಲಿ ವೆಚ್ಚ ಮಾಡಿರುವುದು 2,200.80 ಕೋಟಿ ರು. ಮಾತ್ರ. ಇದು ಒಟ್ಟು ಹಂಚಿಕೆ ಮತ್ತು ಬಿಡುಗಡೆಯಲ್ಲಿ ಶೇ. 28.68ರಷ್ಟು ಮಾತ್ರ ಪ್ರಗತಿ ಕಂಡಿತ್ತು.
2021-22ನೇ ಸಾಲಿನಲ್ಲಿ 2022ರ ಜನವರಿ ಅಂತ್ಯಕ್ಕೆ ಬಹುತೇಕ ಇಲಾಖೆಗಳು ಶೇ.50ಕ್ಕಿಂತ ಕಡಿಮೆ ಪ್ರಗತಿ ಸಾಧಿಸಿತ್ತು. ಪರಿಶಿಷ್ಟ ಜಾತಿ ಉಪಯೋಜನೆ ಅಡಿಯಲ್ಲಿ ಒಟ್ಟು 18,829.05 ಕೋಟಿ ರು ಅನುದಾನ ಒದಗಿಸಲಾಗಿತ್ತು. 2022ರ ಜನವರಿ ಅಂತ್ಯಕ್ಕೆ 14,002.07 ಕೋಟಿ ರು ಬಿಡುಗಡೆಯಾಗಿತ್ತು. ಇದರಲ್ಲಿ 12,037.97 ಕೋಟಿ ರು. ಖರ್ಚು ಮಾಡಿ ಇನ್ನೂ 1,964.1 ಕೋಟಿ ರು. ಬಾಕಿ ಉಳಿದಿತ್ತು.
ಪರಿಶಿಷ್ಟ ಬುಡಕಟ್ಟು ಉಪ ಯೋಜನೆಯಲ್ಲಿ 2022ರ ಜನವರಿ ಅಂತ್ಯಕ್ಕೆ 8,094.22 ಕೋಟಿ ರು.ಅನುದಾನದ ಪೈಕಿ 6,309.40 ಕೋಟಿ ರು. ಬಿಡುಗಡೆಯಾಗಿತ್ತು. ಇದರಲ್ಲಿ 4,652.91 ಕೋಟಿ ರು. ಖರ್ಚು ಮಾಡಿ 1,656.49 ಕೋಟಿ ರು. ಬಾಕಿ ಉಳಿದಿತ್ತು.
ವಸತಿ ಇಲಾಖೆಯು ಪ್ರಧಾನಮಂತ್ರಿ ಆವಾಸ್ ಯೋಜನೆಗೆ ಪರಿಶಿಷ್ಟ ಜಾತಿ ಉಪ ಯೋಜನೆಯಡಿಯಲ್ಲಿ 168.50 ಕೋಟಿ ರು. ಅನುದಾನ ಹಂಚಿಕೆಯಾಗಿದ್ದರೂ ಜನವರಿ ಅಂತ್ಯಕ್ಕೆ ಬಿಡಿಗಾಸೂ ನೀಡಿರಲಿಲ್ಲ. ಸಮಾಜ ಕಲ್ಯಾಣ ಇಲಾಖೆಯಲ್ಲಿ ಇದೇ ಯೋಜನೆಯಡಿಯಲ್ಲಿ 50 ನೂತನ ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯಗಳ ನಿರ್ವಹಣೆಗೆ 50 ಕೋಟಿ ರು. ಅನುದಾನ ಒದಗಿಸಿದ್ದರೂ ಜನವರಿ ಅಂತ್ಯಕ್ಕೆ ನಯಾಪೈಸೆಯನ್ನೂ ನೀಡಿರಲಿಲ್ಲ. ಪರಿಶಿಷ್ಟ ಜಾತಿಯವರ ಅಭಿವೃದ್ಧಿ ಯೋಜನೆ, ಮೆಟ್ರಿಕ್ ನಂತರದ ವಿದ್ಯಾರ್ಥಿ ವೇತನಕ್ಕೆ 121.47 ಕೋಟಿ ರು. ಅನುದಾನ ಒದಗಿಸಿದ್ದರೂ ಇದರಲ್ಲಿಯೂ ಜನವರಿ ಅಂತ್ಯಕ್ಕೆ ಬಿಡಿಗಾಸೂ ಕೊಟ್ಟಿರಲಿಲ್ಲ.
2013ರಲ್ಲಿ ಕಾಯ್ದೆ ಜಾರಿಗೊಂಡ ನಂತರ ಅಂದರೆ 2014-15ನೇ ಸಾಲಿನಲ್ಲಿ ಎಸ್‌ಸಿಪಿ ಮತ್ತು ಟಿಎಸ್‌ಪಿ ಯೋಜನೆಯಡಿಯಲ್ಲಿ ಒಟ್ಟು 16,322.93 ಕೋಟಿ ರು. ಅನುದಾನ ನಿಗದಿಪಡಿಸಿತ್ತು. ಈ ಪೈಕಿ 14,191.58 ಕೋಟಿ ರು. ಬಿಡುಗಡೆಯಾಗಿತ್ತು. ಇದರಲ್ಲಿ 13,2245.50 ಕೋಟಿ ರು. ವೆಚ್ಚ ಮಾಡಿದ್ದ ಅಧಿಕಾರಿಗಳು 3,077.43 ಕೋಟಿ ರು. ಬಾಕಿ ಉಳಿಸಿಕೊಂಡಿದ್ದರು. ಆರ್ಥಿಕ ವರ್ಷದ ಆರಂಭದಲ್ಲೇ ಅನುದಾನ ಹಂಚಿಕೆಯಾಗಿದ್ದರೂ ಆ ವರ್ಷದ ಅಂತ್ಯದಲ್ಲಿ ಅನುದಾನ ಬಿಡುಗಡೆಯಾಗಿತ್ತು. ಹೀಗಾಗಿ 3,077.43 ಕೋಟಿ ರು. ಖರ್ಚಾಗಿರಲಿಲ್ಲ ಎಂದು ಅಧಿಕಾರಿಗಳು ಅಂದು ಸಮಜಾಯಿಷಿ ನೀಡಿದ್ದರು.
2022-23ನೇ ಸಾಲಿಗೆ ಒಟ್ಟು 35 ಆಡಳಿತ ಇಲಾಖೆಗಳಿಗೆ ಎಸ್‌ಸಿಎಸ್‌ಪಿ ಮತ್ತು ಟಿಎಸ್‌ಪಿ ಅಡಿಯಲ್ಲಿ ರಾಜ್ಯ ವಲಯದಿಂದ ಒಟ್ಟು 25,038.71 ಕೋಟಿ ರು. ಅನುದಾನ ಒದಗಿಸಿದೆ. ಇದರಲ್ಲಿ ಪರಿಶಿಷ್ಟ ಜಾತಿ ಉಪಯೋಜನೆಯಡಿಯಲ್ಲಿ 17, 921.48 ಕೋಟಿ ರು. ಮತ್ತು ಗಿರಿಜನ ಉಪಯೋಜನೆಯಡಿಯಲ್ಲಿ 7,117.26 ಕೋಟಿ ರು. ಸೇರಿದೆ. ಅದೇ ರೀತಿ ಜಿಲ್ಲಾ ವಲಯದಿಂದ 11 ಇಲಾಖೆಗಳಿಗೆ ಈ ಎರಡೂ ಯೋಜನೆಗಳಿಗೆ ಒಟ್ಟು 3,195.59 ಕೋಟಿ ರು ಒದಗಿಸಿದೆ.