ಗುತ್ತಿಗೆದಾರರಿಂದ ‘ಲಂಪ್‌ಸಮ್‌’ ವಸೂಲಿಗೆ ಸೂಚನೆ; ಸಿಎಂ ವಿರುದ್ಧ ಮತ್ತೊಂದು ಗುರುತರ ಆರೋಪ

ಬೆಂಗಳೂರು; ಜಲಸಂಪನ್ಮೂಲ, ಲೋಕೋಪಯೋಗಿ, ಬಿಬಿಎಂಪಿ ಸೇರಿದಂತೆ ರಾಜ್ಯದ ವಿವಿಧ ಪ್ರಾಧಿಕಾರಗಳಿಂದ ಸಿವಿಲ್‌ ಸೇರಿದಂತೆ ಇನ್ನಿತರೆ ಕಾಮಗಾರಿಗಳನ್ನು ಪಡೆಯಲು ಗುತ್ತಿಗೆ ಮೊತ್ತದ ಶೇ.40ರಷ್ಟು ಹಣವನ್ನು ಕಮಿಷನ್‌ ರೂಪದಲ್ಲಿ ಬೇಡಿಕೆ ಇರಿಸಲಾಗುತ್ತಿದೆ ಎಂಬ ಗುತ್ತಿಗೆದಾರರ ಆರೋಪವು ಸಾಕಷ್ಟು ಸದ್ದು ಮಾಡುತ್ತಿರುವ ಬೆನ್ನಲ್ಲೇ ಎಲ್ಲಾ ಗುತ್ತಿಗೆದಾರರಿಂದ ಕಮಿಷನ್‌ಗೆ ಬದಲಾಗಿ ‘ಲಂಪ್‌ ಸಮ್‌’ ಪಡೆಯಲು ಖುದ್ದು ಮುಖ್ಯಮಂತ್ರಿಯೇ ಸೂಚಿಸಿದ್ದಾರೆ ಎಂಬ ಮತ್ತೊಂದು ಬಲವಾದ ಆರೋಪ ಕೇಳಿ ಬಂದಿದೆ.

ಗುತ್ತಿಗೆದಾರರಿಂದ ಶೇ.40ರಷ್ಟು ಕಮಿಷನ್‌ಗೆ ಬೇಡಿಕೆ ಇರಿಸಲಾಗುತ್ತಿದೆ ಎಂಬ ಗುತ್ತಿಗೆದಾರರ ಆರೋಪದ ಕುರಿತು ತನಿಖೆ ನಡೆಸಲು ಸೂಚಿತವಾಗಿರುವ ಹಿರಿಯ ಐಎಎಸ್‌ ಅಧಿಕಾರಿ ರಾಕೇಶ್‌ಸಿಂಗ್‌ ಅವರಿಗೆ ಇಂತಹದ್ದೊಂದು ಸಂದೇಶವನ್ನು ಮುಖ್ಯಮಂತ್ರಿಯಿಂದಲೇ ತಲುಪಿಸಲಾಗಿದೆ ಎಂದು ಕರ್ನಾಟಕ ರಾಷ್ಟ್ರಸಮಿತಿಯು ಆರೋಪಿಸಿದೆ. ಈ ಸಂಬಂಧ ರಾಜ್ಯಪಾಲರಿಗೆ 2021ರ ಡಿಸೆಂಬರ್ 10ರಂದು ಲಿಖಿತ ದೂರೊಂದನ್ನು ನೀಡಿದೆ. ದೂರಿನ ಪ್ರತಿ ‘ದಿ ಫೈಲ್‌’ಗೆ ಲಭ್ಯವಾಗಿದೆ.

ಶೇ.40ರಷ್ಟು ಕಮಿಷನ್‌ಗೆ ಬೇಡಿಕೆ ಇರಿಸಲಾಗುತ್ತಿದೆ ಎಂಬ ಆರೋಪಿಸಿ ಪ್ರಧಾನಿಗೆ ದೂರು ನೀಡಿದ್ದ ಗುತ್ತಿಗೆದಾರರು ಪರ್ಸೆಂಟೇಜ್‌ ವ್ಯವಹಾರವನ್ನು ಬಯಲಿಗೆ ಎಳೆದಿದ್ದರು. ಆದರೀಗ ‘ಲಮ್‌ಸಮ್‌’ ವಸೂಲು ಮಾಡಿ ಎಂದು ತನಿಖೆ ನಡೆಸುವ ರಾಕೇಶ್‌ಸಿಂಗ್‌ ಅವರಿಗೆ ಮುಖ್ಯಮಂತ್ರಿ ಸೂಚಿಸಿದ್ದಾರೆ ಎಂಬುದಕ್ಕೆ ಸಾಕ್ಷ್ಯಗಳಿವೆ ಎಂದು ಕರ್ನಾಟಕ ರಾಷ್ಟ್ರಸಮಿತಿ ಹೇಳುತ್ತಿರುವುದು ಪರ್ಸೆಂಟೇಜ್‌ ವ್ಯವಹಾರವನ್ನು ಮತ್ತಷ್ಟು ವಿಸ್ತರಿಸಿದಂತಾಗಿದೆ.

‘ಈಗ ನಮಗೆ ಲಭ್ಯವಾಗಿರುವ ಸ್ಪಷ್ಟ ಮಾಹಿತಿಯ ಪ್ರಕಾರ ಹೀಗೆ ಪರ್ಸೆಂಟೇಜ್ ಆರೋಪ ಕೇಳಿಬಂದ ಮೇಲೆ ಕಾಮಗಾರಿಗಳ ಅನುಮೋದನೆಗೆ ಲಂಪ್ ಸಮ್ (ಒಟ್ಟು ಮೊತ್ತ) ಸಂಗ್ರಹಿಸಿ ನೀಡುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಮುಖ್ಯಮಂತ್ರಿಯವರೇ ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ. ಇದಕ್ಕೆ ಸಂಬಂಧಿಸಿದ ಮಾಹಿತಿ ನಮ್ಮ ಬಳಿ ಇದ್ದು, ಮಾಹಿತಿದಾರರ ಗೌಪ್ಯತೆ ಕಾಪಾಡುವ ದೃಷ್ಟಿಯಿಂದ ಈ ಸಂದರ್ಭದಲ್ಲಿ ಬಹಿರಂಗಪಡಿಸಲು ಸಾಧ್ಯವಿರುವುದಿಲ್ಲ, ಆದರೆ ಸೂಕ್ತ ತನಿಖಾ ಸಂಸ್ಥೆಗೆ ವಿಚಾರಣೆಯ ಸಂದರ್ಭದಲ್ಲಿ ನೀಡಲಾಗುವುದು,’ ಎಂದು ದೂರಿನಲ್ಲಿ ಕರ್ನಾಟಕ ರಾಷ್ಟ್ರಸಮಿತಿಯು ವಿವರಿಸಿದೆ.

ಗುತ್ತಿಗೆದಾರರ ಸಂಘದ ಅಧ್ಯಕ್ಷರು ಪ್ರಧಾನಿಗೆ ಬರೆದಿರುವ ಪತ್ರದಲ್ಲಿ ಲೋಕೋಪಯೋಗಿ, ಪಂಚಾಯತಿ ರಾಜ್, ಸಣ್ಣ ಮತ್ತು ಬೃಹತ್ ನೀರಾವರಿ (ಜಲಸಂಪನ್ಮೂಲ ಇಲಾಖೆ), ಆರೋಗ್ಯ ಇಲಾಖೆಗಳ ಮತ್ತು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ನಗರಾಭಿವೃದ್ಧಿ ಇಲಾಖೆ) ಮೂಲಕ ಕೈಗೊಳ್ಳುವ ಕಾಮಗಾರಿಗಳಲ್ಲಿ ಶೇ. 40ರಷ್ಟು ಕಮೀಷನ್ ನೀಡಬೇಕಾಗಿದೆ ಎಂದು ಆರೋಪಿಸಲಾಗಿದೆ.

ಈ ಮೇಲಿನ ಐದು ಇಲಾಖೆಗಳಲ್ಲಿ ಎರಡು ಇಲಾಖೆಗಳಿಗೆ ರಾಕೇಶ್ ಸಿಂಗ್ ಅವರು ಅಪರ ಮುಖ್ಯ ಕಾರ್ಯದರ್ಶಿಗಳಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಗುತ್ತಿಗೆದಾರರ ಸಂಘದ ಆರೋಪದ ಬಗ್ಗೆ ವಿಚಾರಣೆ ನಡೆಸಿ ವರದಿ ನೀಡಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ರಾಕೇಶ್ ಸಿಂಗ್ ಅವರನ್ನು ನೇಮಿಸಿದ್ದಾರೆ. ಜಲಸಂಪನ್ಮೂಲ ಇಲಾಖೆ ಮತ್ತು ನಗರಾಭಿವೃದ್ಧಿ ಇಲಾಖೆಗಳು ಬೃಹತ್ ಪ್ರಮಾಣದ ಕಾಮಗಾರಿಗಳನ್ನು ಕಾರ್ಯಗತಗೊಳಿಸುವ ಇಲಾಖೆಗಳಲ್ಲಿ ಪ್ರಮುಖವಾಗಿದ್ದು, ಯಾರ ಮೇಲೆ ಆರೋಪವಿದೆಯೋ, ಅವರಿಗೇ ವಿಚಾರಣೆ ನಡೆಸಿ ವರದಿ ನೀಡಲು ಮುಖ್ಯಮಂತ್ರಿ ಆದೇಶಿಸಿರುವುದು ವ್ಯಂಗ್ಯವಾಗಿದೆ ಎಂದು ದೂರಿನಲ್ಲಿ ಹೇಳಲಾಗಿದೆ.

ರಾಜ್ಯದ ಜಲಸಂಪನ್ಮೂಲ ಮತ್ತು ನಗರಾಭಿವೃದ್ಧಿ ಇಲಾಖೆಯ ಕಾಮಗಾರಿಗಳಿಗೆ ಅನುಮೋದನೆ ನೀಡಲು ಬಾಕಿ ಇರುವ ಕಡತಗಳ ವಿಲೇವಾರಿಗೆ ಪರ್ಸಂಟೇಜ್ ಆಧಾರದ ಮೇಲೆ ರಾಜಕಾರಣಿಗಳು ಕಮೀಷನ್ ಪಡೆಯುತ್ತಾರೆ ಎನ್ನುವುದು ಎಲ್ಲರೂ ಮಾಡುವ ಮತ್ತು ಬಹುತೇಕವಾಗಿ ಸತ್ಯಾಂಶದಿಂದ ಕೂಡಿದ ಆರೋಪವಾಗಿದೆ ಎಂದು ಕರ್ನಾಟಕ ರಾಷ್ಟ್ರಸಮಿತಿಯು ದೂರಿನಲ್ಲಿ ತಿಳಿಸಿದೆ.

ಮುಖ್ಯಮತ್ರಿಗಳ ಈ ಕ್ರಮವು ಇಡೀ ಪ್ರಕರಣವನ್ನು ಮುಚ್ಚಿಹಾಕುವುದಕ್ಕೆ ಮಾಡಿರುವ ತಂತ್ರದಂತೆ ಕಾಣುತ್ತಿದ್ದು, ತಾವು ತಕ್ಷಣವೇ ಈ ಪ್ರಕರಣದ ಬಗ್ಗೆ ನ್ಯಾಯಯುತ ಕ್ರಮ ತೆಗೆದುಕೊಳ್ಳಬೇಕು ಮತ್ತು ಕಾಮಗಾರಿಗಳಲ್ಲಿ ನಡೆದಿರುವ ಭ್ರಷ್ಟಾಚಾರದ ತನಿಖೆಯನ್ನು ಉಚ್ಚ ನ್ಯಾಯಾಲಯದ ಹಾಲಿ ನ್ಯಾಯಮೂರ್ತಿಯ ಉಸ್ತುವಾರಿಯಲ್ಲಿ ನಡೆಸಲು ನಿರ್ದೇಶಿಸಬೇಕು ಎಂದು ದೂರಿನಲ್ಲಿ ಕೋರಿದೆ.

ದೂರಿನ ಆಧಾರದ ಮೇಲೆ ತನಿಖೆ ನಡೆಸುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕಾರ್ಯದರ್ಶಿ ಮಟ್ಟದಲ್ಲಿ ಆದೇಶ ನೀಡಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಯಾವ ಇಲಾಖೆಯಲ್ಲಿ ಲಂಚ ತೆಗೆದುಕೊಳ್ಳುತ್ತಾರೋ ಅಲ್ಲಿಂದಲೇ ತನಿಖೆ ಮಾಡಿಸೋದಾ? ಈ ಪರ್ಸೆಟೆಂಜ್ ತನಿಖೆ ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಾಧೀಶರಿಂದ ಆಗಬೇಕು ಎಂದು ಆಗ್ರಹಿಸಿದ್ದನ್ನು ಸ್ಮರಿಸಬಹುದು.

ಬಿಡಿಎನಲ್ಲಿ 300 ಕೋಟಿ ರೂ ಲಂಚ ನಡೆದಿದೆ ಎಂಬ ಆರೋಪವಿದೆ. ಬಿಜೆಪಿಯಲ್ಲಿ ಭ್ರಷ್ಟಾಚಾರ ಹೆಚ್ಚಾಗಿದೆ. ಭ್ರಷ್ಟಾಚಾರ ಹೆಚ್ಚಾಗಿದೆ ಎಂಬ ದೂರು ಬಂದ ಮೇಲೆ‌ ತನಿಖೆ ಮಾಡಬೇಕಲ್ಲವೇ, ಆದರೆ ಸಿಎಂ ಈ ಹಿಂದೆಯೂ ಇತ್ತು ಅಂತಾರೆ, ಹೌದು ಆ ಕಾಲದಲ್ಲೂ ಭ್ರಷ್ಟಾಚಾರ ಇತ್ತು. ಕಾಂಗ್ರೆಸ್ ನಲ್ಲಿ ಕಮಿಷನ್ ಪಡೆದಿದ್ದಾರೆ ಅಂದರೆ ತನಿಖೆ ಮಾಡಿಸಿ ಎಂದು ಸಿದ್ದರಾಮಯ್ಯ ಅವರು ಸವಾಲು ಎಸೆದಿದ್ದರು.

SUPPORT THE FILE

Latest News

Related Posts