ಅಲ್ಪಸಂಖ್ಯಾತರಿಗೆ ಸಾಲ ನೀಡಲು ಬ್ಯಾಂಕ್‌ಗಳಿಂದಲೂ ತಾರತಮ್ಯ; ಶೇ.29ರಷ್ಟು ಮಾತ್ರ ಪ್ರಗತಿ

ಬೆಂಗಳೂರು; ರಾಷ್ಟ್ರೀಕೃತ, ವಾಣಿಜ್ಯ ಮತ್ತು ಖಾಸಗಿ ಬ್ಯಾಂಕ್‌ಗಳು ಅಲ್ಪಸಂಖ್ಯಾತರಿಗೆ ನೀಡುತ್ತಿರುವ ಸಾಲ ಬೆಂಬಲ ನಿರೀಕ್ಷೆಗಿಂತಲೂ ಕಡಿಮೆ ಪ್ರಮಾಣದಲ್ಲಿದೆ. ಸಾಲ ನೀಡುತ್ತಿರುವ ಪ್ರಮಾಣವು ವರ್ಷದಿಂದ ವರ್ಷಕ್ಕೆ ಇಳಿಕೆಯಾಗುತ್ತಿದೆ. ಅದರಲ್ಲೂ ತುಂಬಾ ಮುಖ್ಯವಾಗಿ ಪ್ರಧಾನಮಂತ್ರಿ 15 ಅಂಶಗಳ ಕಾರ್ಯಕ್ರಮದಡಿಯಲ್ಲಿ ಅಲ್ಪಸಂಖ್ಯಾತರಿಗೆ ಬ್ಯಾಂಕ್‌ಗಳು ನೀಡಿರುವ ಸಾಲದ ಪ್ರಮಾಣ ಶೇ. 29ರಷ್ಟಿದೆ. ಪ್ರಗತಿ ಪ್ರಮಾಣವು ನಿರೀಕ್ಷೆಗಿಂತ ಕಡಿಮೆಯಾಗಿರುವುದು ಇದೀಗ ಬಹಿರಂಗವಾಗಿದೆ.

ಅಲ್ಪಸಂಖ್ಯಾತರ ಅಭಿವೃದ್ದಿ ಕುರಿತು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ ಎಚ್‌ ಡಿ ಕುಮಾರಸ್ವಾಮಿ ಮತ್ತು ಬಿಜೆಪಿ ಪಕ್ಷದ ನಡುವೆ ಬಿರುಸಿನ ಚರ್ಚೆಗಳು ನಡೆಯುತ್ತಿರುವ ಬೆನ್ನಲ್ಲೇ ಅಲ್ಪಸಂಖ್ಯಾತರಿಗೆ ಬ್ಯಾಂಕ್‌ಗಳು ನಿರೀಕ್ಷಿತ ಪ್ರಮಾಣದಲ್ಲಿ ಸಾಲದ ಬೆಂಬಲ ನೀಡದಿರುವ ವಿಚಾರವೂ ಮುನ್ನೆಲೆಗೆ ಬಂದಿದೆ.

ಪ್ರಧಾನಮಂತ್ರಿಗಳ ಹೊಸ 15 ಅಂಶಗಳ ಕಾರ್ಯಕ್ರಮದ ಕುರಿತು 2021ರ ಜೂನ್‌ 29ರಂದು ನಡೆದಿದ್ದ ಸಭೆಯಲ್ಲಿ ಅಲ್ಪಸಂಖ್ಯಾತರಿಗೆ ಬ್ಯಾಂಕ್‌ಗಳು ನಿರೀಕ್ಷೆಯಂತೆ ಸಾಲದ ಬೆಂಬಲ ನೀಡುತ್ತಿಲ್ಲ ಎಂಬ ಸಂಗತಿ ಚರ್ಚೆಯಾಗಿದೆ. ಅದೇ ರೀತಿ ಕರ್ನಾಟಕ ರಾಜ್ಯಮಟ್ಟದ ಬ್ಯಾಂಕರ್‌ಗಳ ಸಮಿತಿಯು 2021ರ ಆಗಸ್ಟ್‌ 5ರಂದು ನಡೆಸಿದ್ದ 154ನೇ ಸಭೆಯಲ್ಲಿಯೂ ಚರ್ಚೆಯಾಗಿದೆ. ಜೂನ್‌ 29ರಂದು ನಡೆದಿದ್ದ ಸಭೆ ವಿವರಗಳು ಬ್ಯಾಂಕರ್‌ಗಳ ಸಮಿತಿಯ ಸಭೆ ನಡವಳಿಗಳು ‘ದಿ ಫೈಲ್’ಗೆ ಲಭ್ಯವಾಗಿದೆ.

‘ಬ್ಯಾಂಕ್‌ಗಳಿಂದ ಅಲ್ಪಸಂಖ್ಯಾತರಿಗೆ ನೀಡಿರುವ ಸಾಲದ ಪ್ರಮಾಣದಲ್ಲಿ ಪ್ರಗತಿ ಪ್ರಮಾಣ ನಿರೀಕ್ಷೆಗಿಂತ ಕಡಿಮೆಯಾಗಿದ್ದು (ಶೇ.29) ಗಮನಿಸಲಾಗಿದೆ. ಪ್ರಗತಿಯನ್ನು ಹೆಚ್ಚಿಸುವ ಸಲುವಾಗಿ ಎಸ್‌ಎಲ್‌ಬಿಸಿ ಸಭೆಯಲ್ಲಿ ಚರ್ಚಿಸಿ ಅಗತ್ಯ ಕ್ರಮ ವಹಿಸಬೇಕು,’ ಎಂದು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ ರವಿಕುಮಾರ್‌ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

2021ರ ಮಾರ್ಚ್‌ 31ರ ಅಂತ್ಯಕ್ಕೆ 24,52,255 ಖಾತೆಗಳಿಗೆ 42,656 ಕೋಟಿ ರು.ಗಳಷ್ಟು ಸಾಲವನ್ನು ಬ್ಯಾಂಕ್‌ಗಳು ನೀಡಿವೆ. ಇದು ಒಟ್ಟು ಸಾಲದ ಪ್ರಮಾಣದಲ್ಲಿ ಶೇ.13.68ರಷ್ಟಿದೆ ಎಂಬುದು ಬ್ಯಾಂಕರ್‌ಗಳ ಸಮಿತಿ ಸಭೆಯ ನಡವಳಿಯಿಂದ ತಿಳಿದು ಬಂದಿದೆ.

ಆದರೆ ಬ್ಯಾಂಕಿಂಗ್‌ ವಲಯದ ಎ, ಬಿ, ಸಿ ಮತ್ತು ಡಿ ವರ್ಗದಲ್ಲಿರುವ ಬ್ಯಾಂಕ್‌ಗಳಿಂದ 40,586 ಕೋಟಿ ರು. ಪೈಕಿ 9,511 ಕೋಟಿ ರು. ಮುಂಗಡ ನೀಡಿರುವುದು ತಿಳಿದು ಬಂದಿದೆ.

ಅದೇ ರೀತಿ ಸಹಕಾರಿ ವಲಯದ ಕಸ್ಕಾರ್ಡ್‌ ಮತ್ತು ಇಂಡಿಯಾ ಕೋ ಆಪರೇಟೀವ್‌ ಬ್ಯಾಂಕ್‌ ಅಲ್ಪಸಂಖ್ಯಾತರಿಗೆ ಬಿಡಿಗಾಸನ್ನೂ ನೀಡಿಲ್ಲ. ಕರ್ನಾಟಕ ರಾಜ್ಯ ಸಹಕಾರಿ ಅಪೆಕ್ಸ್‌ ಬ್ಯಾಂಕ್‌ 1,393 ಕೋಟಿ ಬಾಕಿ ಇರಿಸಿಕೊಂಡಿದೆ.

ಹಾಗೆಯೇ ಈಕ್ವಿಟಿ ಸ್ಮಾಲ್‌ ಫೈನಾನ್ಸ್‌ ಬ್ಯಾಂಕ್‌ 40 ಕೋಟಿ ರು. ಪೈಕಿ 14 ಕೋಟಿಯಷ್ಟೇ ಮುಂಗಡ ನೀಡಿದೆ. ಉಜ್ಜೀವನ್‌ ಸ್ಮಾಲ್‌ ಫೈನಾನ್ಸ್‌ 195 ಕೋಟಿ ರು. ಪೈಕಿ 12 ಕೋಟಿ ರು., ಸೂರ್ಯೋದಯ ಸ್ಮಾಲ್‌ ಫೈನಾನ್ಸ್‌ ಬ್ಯಾಂಕ್‌ 59 ಕೋಟಿ ಪೈಕಿ 35 ಕೋಟಿ, ಇಎಸ್‌ಎಎಫ್‌ ಸ್ಮಾಲ್‌ ಫೈನಾನ್ಸ್‌ ಬ್ಯಾಂಕ್‌ 14 ಕೋಟಿ ಪೈಕಿ 11 ಕೋಟಿ, ಜನ ಸ್ಮಾಲ್‌ ಫೈನಾನ್ಸ್‌ ಬ್ಯಾಂಕ್‌ 229 ಕೋಟಿ ಪೈಕಿ 130 ಕೋಟಿ ಮುಂಗಡ ನೀಡಿರುವುದು ಗೊತ್ತಾಗಿದೆ.

ಅಲ್ಪಸಂಖ್ಯಾತರಿಗೆ ಶೇ.15ರಷ್ಟು ಸಾಲ ಮತ್ತು ಮುಂಗಡವನ್ನು ಆದ್ಯತೆ ಮೇಲೆ ನೀಡಬೇಕು ಮತ್ತು ಈ ಸಂಬಂಧ ಆರ್‌ಬಿಐ ನೀಡಿರುವ ಮಾರ್ಗಸೂಚಿಗಳ ಮೇಲೆ ನೀಡಲು ಕ್ರಮ ಕೈಗೊಳ್ಳಬೇಕು ಎಂದು ಬ್ಯಾಂಕ್‌ಗಳ ಮುಖ್ಯಸ್ಥರಿಗೆ ಸಮಿತಿ ಸಭೆಯು ಕೋರಿರುವುದು ಗೊತ್ತಾಗಿದೆ.

ಬೀದರ್‌ ಜಿಲ್ಲೆಯಲ್ಲಿ ಆದ್ಯತಾ ವಲಯದ ಕ್ಷೇತ್ರಗಳಲ್ಲಿ ಮಾರ್ಚ್‌ 2021ರ ಅಂತ್ಯಕ್ಕೆ ಒಟ್ಟು 556594 ಲಕ್ಷ ರು.ಗಳ ಸಾಲ ನೀಡಿದೆ. ಇದು ಒಟ್ಟು ಪ್ರಮಾಣದಲ್ಲಿ ಶೇ.22.97ರಷ್ಟಿದೆ. ಅದೇ ರೀತಿ ಕಲ್ಬುರ್ಗಿಯಲ್ಲಿ 1189600 ಲಕ್ಷ ರು., (ಶೇ. 23.71) ದಕ್ಷಿಣ ಕನ್ನಡದಲ್ಲಿ 2491756 ಲಕ್ಷ ರು. (ಶೇ.32.00) ಸಾಲ ನೀಡಿರುವುದು ತಿಳಿದು ಬಂದಿದೆ.

ಕೆನರಾ ಬ್ಯಾಂಕ್‌, ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ, ಯೂನಿಯನ್‌ ಬ್ಯಾಂಕ್‌ ಆಫ್‌ ಇಂಡಿಯಾ, ಬ್ಯಾಂಕ್‌ ಆಫ್‌ ಬರೋಡ 2021ರ ಮಾರ್ಚ್‌ ಅಂತ್ಯಕ್ಕೆ 27,259 ಕೋಟಿ ರು. ಪೈಕಿ ಒಟ್ಟು 4,301 ಕೋಟಿ ರು.ಗಳ ಮುಂಗಡವನ್ನು ನೀಡಿದೆ. ಇವೇ ಬ್ಯಾಂಕ್‌ಗಳು 27,259 ಕೋಟಿ ರು. ಮುಂಗಡ ನೀಡಲು ಬಾಕಿ ಉಳಿಸಿಕೊಂಡಿವೆ.

2021ರ ಮಾರ್ಚ್‌ ಅಂತ್ಯಕ್ಕೆ ಮುಂಗಡ- ಬಾಕಿ ಮೊತ್ತದ ವಿವರ (ಬ್ಯಾಂಕ್‌ವಾರು)

ಕೆನರಾ ಬ್ಯಾಂಕ್‌ – 1,285 ಕೋಟಿ ( ಬಾಕಿ – 17,975 ಕೋಟಿ)

ಎಸ್‌ಬಿಐ – 1,716 ಕೋಟಿ ( ಬಾಕಿ – 4,583 ಕೋಟಿ)

ಯೂನಿಯನ್‌ ಬ್ಯಾಂಕ್‌ ಆಫ್ ಇಂಡಿಯಾ – 1,049 ಕೋಟಿ ( ಬಾಕಿ – 2,539 ಕೋಟಿ)

ಬ್ಯಾಂಕ್‌ ಆಫ್‌ ಬರೋಡ – 250 ಕೋಟಿ ( ಬಾಕಿ – 2,223 ಕೋಟಿ)

 

ರಾಷ್ಟ್ರೀಕೃತ ಬ್ಯಾಂಕ್‌ಗಳ ಪೈಕಿ ಬ್ಯಾಂಕ್‌ ಆಫ್ ಇಂಡಿಯಾ, ಬ್ಯಾಂಕ್‌ ಆಫ್‌ ಮಹಾರಾಷ್ಟ್ರ, ಸೆಂಟ್ರಲ್‌ ಬ್ಯಾಂಕ್‌ ಆಫ್‌ ಇಂಡಿಯಾ, ಇಂಡಿಯನ್‌ ಬ್ಯಾಂಕ್‌, ಇಂಡಿಯನ್‌ ಓವರ್‌ಸೀಸ್‌ ಬ್ಯಾಂಕ್‌, ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌, ಪಂಜಾಬ್‌ ಸಿಂಡ್‌ ಬ್ಯಾಂಕ್‌ಗಳು 2,131 ಕೋಟಿ ರು. ಪೈಕಿ ಕೇವಲ 629 ಕೋಟಿ ರು. ಮಾತ್ರ ಮುಂಗಡ ಸಾಲ ನೀಡಿದೆ.

ಬ್ಯಾಂಕ್‌ ಆಫ್‌ ಇಂಡಿಯಾ – 132 ಕೋಟಿ ( ಬಾಕಿ – 483 ಕೋಟಿ)

ಬ್ಯಾಂಕ್‌ ಆಫ್‌ ಮಹಾರಾಷ್ಟ್ರ – ಶೂನ್ಯ ( ಬಾಕಿ – 269 ಕೋಟಿ)

ಸೆಂಟ್ರಲ್‌ ಬ್ಯಾಂಕ್‌ ಆಫ್ ಇಂಡಿಯಾ – 2 ಕೋಟಿ ( ಬಾಕಿ – 201 ಕೋಟಿ)

ಇಂಡಿಯನ್‌ ಬ್ಯಾಂಕ್‌ – 357 ಕೋಟಿ ( ಬಾಕಿ – 441 ಕೋ ಟಿ)

ಇಂಡಿಯನ್‌ ಓವರ್‌ಸೀಸ್‌ ಬ್ಯಾಂಕ್‌ – 1 ಕೋಟಿ ( ಬಾಕಿ – 401 ಕೋಟಿ)

ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ – 33 ಕೋಟಿ ( ಬಾಕಿ – 224 ಕೋಟಿ )

ಪಂಜಾಬ್‌ ಸಿಂಡ್‌ ಬ್ಯಾಂಕ್‌ – 2 ಕೋಟಿ ( ಬಾಕಿ – 10 ಕೋಟಿ)

 

ಕರ್ನಾಟಕ ಬ್ಯಾಂಕ್‌, ಕೊಟಕ್‌ ಮಹೀಂದ್ರಾ, ಸಿಟಿಯೂನಿಯನ್‌, ಧನಲಕ್ಷ್ಮಿ, ಫೆಡರಲ್‌, ಕರೂರ್‌ ವೈಶ್ಯ, ಎಚ್‌ಡಿಎಫ್‌ಸಿ, ಬಂಧನ್‌, ಐಡಿಎಫ್‌ಸಿ, ಆಕ್ಸಿಸ್‌, ಐಸಿಐಸಿಐ, ಲಕ್ಷ್ಮಿ ವಿಲಾಸ್‌ ಸೇರಿದಂತೆ ಒಟ್ಟು 33 ಬ್ಯಾಂಕ್‌ಗಳು 9,089 ಕೋಟಿ ರು. ಪೈಕಿ 4,105 ಕೋಟಿ ರು. ಗಳ ಮುಂಗಡ ನೀಡಿದೆ.

ಅದೇ ರೀತಿ ಕರ್ನಾಟಕ ಗ್ರಾಮೀಣ ಮತ್ತು ಕರ್ನಾಟಕ ವಿಕಾಸ್‌ ಗ್ರಾಮೀಣ ಬ್ಯಾಂಕ್‌ ಒಟ್ಟು 2,098 ಕೋಟಿ ರು. ಪೈಕಿ 476 ಕೋಟಿ ರು. ಮುಂಗಡ ನೀಡಿರುವುದು ತಿಳಿದು ಬಂದಿದೆ.

ಐಡಿಬಿಐ ಬ್ಯಾಂಕ್‌ – 158 ಕೋಟಿ (ಬಾಕಿ -548 ಕೋಟಿ)

ಕರ್ನಾಟಕ ಬ್ಯಾಂಕ್‌ – 248 ಕೋಟಿ ( ಬಾಕಿ – 519 ಕೋಟಿ)

ಕೋಟಕ್‌ ಮಹಿಂದ್ರಾ – 590 ಕೋಟಿ (ಬಾಕಿ – 114 ಕೋಟಿ)

ಜಮ್ಮು ಕಾಶ್ಮೀರ್‌ – 276 ಕೋಟಿ ( ಬಾಕಿ – 1,427 ಕೋಟಿ)

ಕರೂರ್‌ ವೈಶ್ಯ – 19 ಕೋಟಿ (ಬಾಕಿ – 25 ಕೋಟಿ)

ಲಕ್ಷ್ಮಿ ವಿಲಾಸ್‌ – 48 ಕೋಟಿ ( ಬಾಕಿ – 3 ಕೋಟಿ)

ಎಚ್‌ಡಿಎಫ್‌ಸಿ – 121 ಕೋಟಿ ( ಬಾಕಿ – 309 ಕೋಟಿ)

ಆಕ್ಸಿಸ್‌ ಬ್ಯಾಂಕ್‌ – 113 ಕೋಟಿ ( ಬಾಕಿ – 293 ಕೋಟಿ)

ಐಸಿಐಸಿಐ – 323 ಕೋಟಿ ( ಬಾಕಿ- 2,332 ಕೋಟಿ)

ಯೆಸ್‌ ಬ್ಯಾಂಕ್‌ – 95 ಕೋಟಿ ( ಬಾಕಿ -127 ಕೋಟಿ)

ಐಡಿಎಫ್‌ಸಿ – 47 ಕೋಟಿ ( ಬಾಕಿ – 90 ಕೋಟಿ)

ಅಲ್ಪಸಂಖ್ಯಾತರ ಆರ್ಥಿಕ ಚಟುವಟಿಕೆಗಳಿಗಾಗಿ ಸಾಲದ ಬೆಂಬಲ ನೀಡುವ ಕುರಿತು ರಾಜ್ಯಮಟ್ಟದ ಬ್ಯಾಂಕರ್‌ಗಳ ಸಮಿತಿ ಸಭೆಗಳಲ್ಲಿ ಆದ್ಯತೆ ವಿಷಯವಾಗಿ ಕೈಗೆತ್ತಿಕೊಳ್ಳಲಾಗಿದೆ. ಸಭೆಗಳಲ್ಲಿ ಹಲವು ಬಾರಿ ಪ್ರತ್ಯೇಕ ಕಾರ್ಯಸೂಚಿಯಾಗಿ ಕೈಗೊಂಡಿದ್ದರೂ ಬ್ಯಾಂಕ್‌ಗಳಿಂದ ನಿರೀಕ್ಷಿತ ಪ್ರಮಾಣದಲ್ಲಿ ಸಾಲದ ಬೆಂಬಲ ಸಿಗುತ್ತಿಲ್ಲ.

ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ (2017)ಯೂ ಲೀಡ್‌ ಬ್ಯಾಂಕ್‌ಗಳು ಆದ್ಯತಾ ವಲಯಗಳಿಗೆ 2,56,000 ಕೋಟಿ ರು.ಗಳ ಪೈಕಿ ಕೇವಲ 27,700 ಕೋಟಿ ರು.ಗಳ ಮಾತ್ರ ಅಂದರೆ ಶೇ.10.82ರಷ್ಟು ಮಾತ್ರ ಪ್ರಗತಿ ಸಾಧಿಸಲಾಗಿತ್ತು. ಅಲ್ಪಸಂಖ್ಯಾತರು ಹೆಚ್ಚಾಗಿರುವ ಜಿಲ್ಲೆಗಳಲ್ಲಿ ನಿರ್ದಿಷ್ಟ ಪರಿಶೀಲನೆ ಕೈಗೊಳ್ಳಲು ಸಭೆಗಳಲ್ಲಿ ಹಲವು ಬಾರಿ ಸೂಚನೆ ನೀಡುತ್ತಿದ್ದರೂ ಲೀಡ್‌ ಬ್ಯಾಂಕ್‌ಗಳು ಅಲ್ಪಸಂಖ್ಯಾತರಿಗೆ ಸಾಲದ ಬೆಂಬಲವನ್ನು ಹೆಚ್ಚಿಸುತ್ತಿಲ್ಲ ಎಂದು ಗೊತ್ತಾಗಿದೆ.

the fil favicon

SUPPORT THE FILE

Latest News

Related Posts