ಕೇಸರಿ ಧಿರಿಸು ಪ್ರಕರಣ; ಪೊಲೀಸ್‌ ಮ್ಯಾನುಯಲ್‌ ಉಲ್ಲಂಘಿಸಿದ್ದರೂ ಕ್ರಮ ವಹಿಸದ ಗೃಹ ಸಚಿವ

ಬೆಂಗಳೂರು; ವಿಜಯಪುರ ಗ್ರಾಮೀಣ ಹಾಗೂ ಉಡುಪಿ ಜಿಲ್ಲೆಯ ಕಾಪು ಪೊಲೀಸ್‌ ಠಾಣೆಗಳಲ್ಲಿ ಕೇಸರಿ ದಿರಿಸು ಧರಿಸಿ ಆಯುಧ ಪೂಜೆ ನೆರವೇರಿಸಿದ್ದ ಪೊಲೀಸರು ಕರ್ನಾಟಕ ಪೊಲೀಸ್‌ ಮ್ಯಾನುಯಲ್‌ನ್ನು ಉಲ್ಲಂಘಿಸಿರುವ ಆರೋಪಕ್ಕೆ ಗುರಿಯಾಗಿದ್ದಾರೆ.

ಕೇಸರಿ ಧಿರಿಸು ಧರಿಸಿ ಆಯುಧ ಪೂಜೆ ನೆರವೇರಿಸಿದ್ದ ಪೊಲೀಸರ ನಡೆ ಕುರಿತು ಕಾನೂನು ತಜ್ಞರ ವಲಯದಲ್ಲಿಯೂ ಚರ್ಚೆಗೆ ಕಾರಣವಾಗಿದೆ. ಪೊಲೀಸರು ಸಾರ್ವಜನಿಕ ನೌಕರರಾಗಿರುವ ಕಾರಣ ಇದಕ್ಕೆ ತಕ್ಕನಾಗಿ ವರ್ತಿಸಿಲ್ಲ. ಸಾರ್ವಜನಿಕವಾಗಿ ಅವರು ಯಾವುದೇ ಮತದವರಿಗೆ ಮತ್ತು ತಮ್ಮ ಅಧಿಕಾರ ನಿರ್ವಹಣೆಯಲ್ಲಿ ಸಹಾಯ ಮಾಡಿದರೆನ್ನುವ ಭಾವನೆ ಬರುವಂತೆ ವರ್ತಿಸಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಈ ಸಂಬಂಧ ಖ್ಯಾತ ವಕೀಲ ಕೆ ಬಿ ಕೆ ಸ್ವಾಮಿ ಅವರು ಟ್ವೀಟ್‌ ಕೂಡ ಮಾಡಿದ್ದಾರೆ. ‘ ಪೊಲೀಸ್‌ ಅಧಿಕಾರಿಗಳು ತಮ್ಮ ವೈಯಕ್ತಿಕ ಜೀವನದಲ್ಲಿ ಯಾವುದೇ ಮತವನ್ನು ಅನುಸರಿಸಲು ಪ್ರಚಾರ ಮಾಡಲು ಸ್ವತಂತ್ರರಾಗಿದ್ದರೂ ಸಾರ್ವಜನಿಕವಾಗಿ ಅವರು ಯಾವುದೇ ಮತದವರಿಗೆ ತಮ್ಮ ಅಧಿಕಾರ ನಿರ್ವಹಣೆಯಲ್ಲಿ ಸಹಾಯ ಮಾಡಿದರೆನ್ನುವ ಭಾವನೆ ಬಾರದಂತೆ ವರ್ತಿಸತಕ್ಕದ್ದು,’ ಎಂದು ಟ್ವೀಟ್‌ ಮಾಡಿರುವ ಸ್ವಾಮಿ ಅವರು ಕರ್ನಾಟಕ ಪೊಲೀಸ್‌ ಮ್ಯಾನುಯಲ್‌ನ ಆಧ್ಯಾಯ 7ರಲ್ಲಿರುವ 290ನೇ ಆದೇಶವನ್ನು (ಪುಟ 73) ಉಲ್ಲೇಖಿಸಿದ್ದಾರೆ.

ಪೊಲೀಸರು ಕೇಸರಿ ಧಿರಿಸು ಧರಿಸಿದ್ದ ಪ್ರಕರಣದ ಕುರಿತು ಕಾನೂನು ತಜ್ಞರು ಮತ್ತು ಸಾಮಾಜಿಕ ಜಾಲತಾಣದಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿದ್ದರೂ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಈ ಬಗ್ಗೆ ಮೌನ ಮುರಿದಿಲ್ಲ.

ವಿಜಯಪುರ ಗ್ರಾಮೀಣ ಹಾಗೂ ಉಡುಪಿ ಜಿಲ್ಲೆಯ ಕಾಪು ಪೊಲೀಸ್‌ ಠಾಣೆಗಳಲ್ಲಿ ಪೊಲೀಸರು ಕೇಸರಿ ದಿರಿಸು ಧರಿಸಿ ಆಯುಧ ಪೂಜೆ ನೆರವೇರಿಸಿರುವುದು ವಿವಾದಕ್ಕೆ ಕಾರಣವಾಗಿತ್ತು. ಈ ಫೋಟೋಗಳು ಸಾಮಾಜಿಕ ಮಾಧ್ಯಮ ಗಳಲ್ಲಿ ಹರಿದಾಡುತ್ತಲ್ಲದೆ ಖಾಕಿ ಪಡೆಯ ವರ್ತನೆಗೆ ತೀವ್ರ ವಿರೋಧ ವ್ಯಕ್ತವಾಗಿತ್ತು.

ವಿಜಯಪುರ ಗ್ರಾಮೀಣ ಠಾಣೆಯಲ್ಲಿ ನಡೆದ ಆಯುಧ ಪೂಜೆಯಲ್ಲಿ ಪಾಲ್ಗೊಂಡಿದ್ದ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎಚ್‌.ಡಿ. ಆನಂದಕುಮಾರ್‌ ಸೇರಿದಂತೆ ಎಲ್ಲರೂ ಕೇಸರಿ ಶಾಲು, ಬಿಳಿ ಟೊಪ್ಪಿ, ಬಿಳಿ ಕುರ್ತಾ ಮತ್ತು ಪೈಜಾಮಾ ಧರಿಸಿದ್ದರು. ಕೇಸರಿ ಶಾಲು ಧರಿಸಿರುವುದನ್ನು ಎಸ್‌ಪಿ ಸಮರ್ಥಿಸಿಕೊಂಡಿದ್ದನ್ನು ಸ್ಮರಿಸಬಹುದು.

‘ಆಯುಧ ಪೂಜೆ ಅಂಗವಾಗಿ ಪೊಲೀಸ್ ಠಾಣೆಗಳಲ್ಲಿ ಮೊದಲಿನಿಂದಲೂ ಶಸ್ತ್ರಾಸ್ತ್ರಗಳಿಗೆ ಪೂಜೆ ಸಲ್ಲಿಸುವುದು ಸಂಪ್ರದಾಯ. ಆ ಪ್ರಕಾರ ಅಂದು ವಿಜಯಪುರ ಗ್ರಾಮೀಣ ಠಾಣೆಯಲ್ಲೂ ಪೂಜೆ ನಡೆಯಿತು. ಈ ಕಾರ್ಯಕ್ರಮದಲ್ಲಿ ನಾನೂ ಪಾಲ್ಗೊಂಡಿದ್ದೇನೆ. ಇದರಲ್ಲಿ ತಪ್ಪೇನಿಲ್ಲ. ಮುಸ್ಲಿಮರು ಕರೆದರೂ ಹೋಗುವೆ, ನಮಾಜ್ ಮಾಡುವೆ. ನಾನು ಯಾವುದೇ ಆಚರಣೆಯ ವಿರೋಧಿಯಲ್ಲ’ ಎಂದು ವಿಜಯಪುರ ಎಸ್‌ಪಿ ಆನಂದಕುಮಾರ್‌ ನೀಡಿದ್ದ ಹೇಳಿಕೆಯನ್ನು ಪ್ರಜಾವಾಣಿ ಪತ್ರಿಕೆಯು ಪ್ರಕಟಿಸಿತ್ತು.

ಅದೇ ರೀತಿ ಕಾಪು ಪೊಲೀಸ್‌ ಠಾಣೆಯಲ್ಲಿನ ಆಯುಧ ಪೂಜೆ ವೇಳೆ ಅಲ್ಲಿನ ಪುರುಷ ಪೊಲೀಸ್‌ ಅಧಿಕಾರಿಗಳು ಮತ್ತು ಸಿಬ್ಬಂದಿ ಕೇಸರಿ ಅಂಗಿ ಹಾಗೂ ಬಿಳಿ ಪಂಚೆ ಧರಿಸಿದ್ದರು. ಮಹಿಳಾ ಸಿಬ್ಬಂದಿಯಲ್ಲಿ ಹಲವರು ಕೇಸರಿ ಸೀರೆ ಧರಿಸಿದ್ದರು. ಇದು ತಮ್ಮ ಗಮನಕ್ಕೆ ಬಂದಿಲ್ಲ ಎಂದು ಎಂದಿರುವ ಉಡುಪಿ ಎಸ್‌ಪಿ ಎನ್‌.ವಿಷ್ಣುವರ್ಧನ್‌ ಹೇಳಿದ್ದರು.

ಪೊಲೀಸರ ಕೇಸರಿ ಧಿರಿಸು ಪ್ರಕರಣವು ವಿವಾದದ ಸ್ವರೂಪ ಪಡೆಯುತ್ತಿದ್ದಂತೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಟೀಕಿಸಿದ್ದರು. ‘ಪೊಲೀಸರ ದಿರಿಸು ಮಾತ್ರ ಏಕೆ ಬದಲಿಸಿದ್ದೀರಿ ಮುಖ್ಯಮಂತ್ರಿಗಳೇ? ಅವರ ಕೈಗೆ ತ್ರಿಶೂಲಗಳನ್ನೂ ಕೊಟ್ಟು, ಹಿಂಸೆಯ ದೀಕ್ಷೆ ಕೊಟ್ಟು ಬಿಡಿ. ಅಲ್ಲಿಗೆ ನಿಮ್ಮ ಜಂಗಲ್ ರಾಜ್ ಸ್ಥಾಪನೆಯ ಕನಸು ನನಸಾಗಬಹುದು’ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.

‘ಗೂಂಡಾಗಿರಿಯನ್ನು ‘ಕ್ರಿಯೆಗೆ ಪ್ರತಿಕ್ರಿಯೆ’ ಎಂದು ಸಮರ್ಥಿಸಿದ ಮುಖ್ಯಮಂತ್ರಿ ಕರೆಗೆ ಓಗೊಟ್ಟು ಪೊಲೀಸರು ನೆಲದ ಕಾನೂನನ್ನು ಠಾಣೆಯೊಳಗೆ ಕೂಡಿ ಹಾಕಿ, ಕಾಡಿನ ಕಾನೂನನ್ನು ಜಾರಿಗೆ ತರಲು ಬೀದಿಗಿಳಿದಂತಿದೆ.’ ಎಂದಿದ್ದರು.

‘ಇದು ಯೋಗಿ ಆದಿತ್ಯನಾಥರ ಉತ್ತರ ಪ್ರದೇಶದ ಜಂಗಲ್ ರಾಜ್ ಅಲ್ಲ. ಬಸವರಾಜ ಬೊಮ್ಮಾಯಿ ಅವರೇ, ಸಂವಿಧಾನಬದ್ಧವಾಗಿ ಆಡಳಿತ ನಡೆಸಲು ಸಾಧ್ಯವಾಗದಿದ್ದರೆ ದಯವಿಟ್ಟು ರಾಜೀನಾಮೆ ಕೊಟ್ಟು ಪ್ರಜಾಪ್ರಭುತ್ವ ಉಳಿಸಿ’ ಎಂದು ಸಿದ್ದರಾಮಯ್ಯ ಒತ್ತಾಯಿಸಿದ್ದನ್ನು ಸ್ಮರಿಸಬಹುದು.

the fil favicon

SUPPORT THE FILE

Latest News

Related Posts