ನಷ್ಟ; ಬಿಡಿಎ ಆಯುಕ್ತ ಸೇರಿ 8 ಅಧಿಕಾರಿಗಳ ವಿರುದ್ಧ ಸಲ್ಲಿಕೆಯಾಗದ ಚಾರ್ಜ್‌ಶೀಟ್‌

ಬೆಂಗಳೂರು; ಗ್ರಾಮೀಣ ಮೂಲಸೌಕರ್ಯ ಯೋಜನೆಗಳ (ಆರ್‌ಐಡಿಎಫ್‌) ಅನುಷ್ಟಾನದಲ್ಲಿ ಆಡಳಿತ ನಿಯಮಗಳ ಉಲ್ಲಂಘನೆ ಮತ್ತು ಏರಿಕೆ ವೆಚ್ಚದಲ್ಲಿ ಗಣನೀಯ ಹೆಚ್ಚಳ ಮತ್ತು ಇದರಿಂದ ಸರ್ಕಾರದ ಬೊಕ್ಕಸಕ್ಕೆ ತೀವ್ರ ಆರ್ಥಿಕ ನಷ್ಟ ಸಂಭವಿಸಿರುವ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪಕ್ಕೊಳಗಾಗಿರುವ ಬಿಡಿಎನ ಹಾಲಿ ಆಯುಕ್ತ ಐಎಎಸ್‌ ಅಧಿಕಾರಿ ರಾಜೇಶ್‌ಗೌಡ, ಚೆಸ್ಕಾಂನ ವ್ಯವಸ್ಥಾಪಕ ನಿರ್ದೇಶಕ ಜಯ ವಿಭವಸ್ವಾಮಿ ಮತ್ತು ಒಬ್ಬ ಕೆಎಎಸ್‌ ಅಧಿಕಾರಿ ಸೇರಿದಂತೆ ಒಟ್ಟು 8 ಅಧಿಕಾರಿಗಳ ವಿರುದ್ಧ ಸಹಕಾರ ಇಲಾಖೆ ಈವರೆಗೂ ಕ್ರಮ ಕೈಗೊಂಡಿಲ್ಲ.

ಅಲ್ಲದೆ ಈ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲು ಸಿಬ್ಬಂದಿ ಆಡಳಿತ ಸುಧಾರಣೆ ಇಲಾಖೆಗೆ ಪ್ರಸ್ತಾಪಿಸಿಲ್ಲ. ಸರ್ಕಾರದ ಬೊಕ್ಕಸಕ್ಕೆ ತೀವ್ರ ಆರ್ಥಿಕ ನಷ್ಟಕ್ಕೆ ಕಾರಣರಾಗಿರುವ ಪ್ರಕರಣದಲ್ಲಿ ಭಾಗಿಯಾಗಿರುವ ಈ ಅಧಿಕಾರಿಗಳ ವಿರುದ್ಧ ದೋಷಾರೋಪಣೆ ಪಟ್ಟಿಯನ್ನೂ ತಯಾರಿಸಿ ಸಿಬ್ಬಂದಿ ಆಡಳಿತ ಸುಧಾರಣೆ ಇಲಾಖೆಗೆ ಸಲ್ಲಿಸಲು ಸೂಚಿಸಿ 6 ತಿಂಗಳಾದರೂ ಈವರೆಗೂ ಸಲ್ಲಿಸಿಲ್ಲ ಎಂದು ತಿಳಿದು ಬಂದಿದೆ. ಸಚಿವ ಎಸ್‌ ಟಿ ಸೋಮಶೇಖರ್‌ ಅವರು ಕೂಡ ಈ ಕುರಿತು ಗಮನಹರಿಸಿಲ್ಲ ಎಂದು ಗೊತ್ತಾಗಿದೆ.

2015-16ರಲ್ಲಿ ರಾಜ್ಯದಲ್ಲಿ ಜಾರಿಗೊಂಡಿದ್ದ ಡಬ್ಲ್ಯೂಐಎಫ್‌, ಎನ್‌ಡಬ್ಲ್ಯೂಎಸ್‌ ಮತ್ತು ಗ್ರಾಮೀಣ ಮೂಲಸೌಕರ್ಯಗಳ ಯೋಜನೆ ಅನುಷ್ಠಾನದಲ್ಲಿ ಆಡಳಿತ ನಿಯಮಗಳನ್ನು ಉಲ್ಲಂಘಿಸಿದ ಆರೋಪಕ್ಕೆ ಬಿಡಿಎ ನ ಹಾಲಿ ಆಯುಕ್ತ ಐಎಎಸ್‌ ಅಧಿಕಾರಿ ರಾಜೇಶ್‌ಗೌಡ ಮತ್ತು ಮತ್ತೊಬ್ಬ ಐಎಎಸ್‌ ಅಧಿಕಾರಿ ಜಯ ವಿಭವ ಸ್ವಾಮಿ ಸೇರಿದಂತೆ ಒಟ್ಟು 8 ಅಧಿಕಾರಿಗಳು ಗುರಿಯಾಗಿದ್ದರು.

ಬಿಡಿಎ ಆಯುಕ್ತ ಐಎಎಸ್‌ ಅಧಿಕಾರಿ ರಾಜೇಶ್‌ಗೌಡ, ಚೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಐಎಎಸ್‌ ಅಧಿಕಾರಿ ಜಯ ವಿಭವಸ್ವಾಮಿ, ಕೆಎಎಸ್‌ ಅಧಿಕಾರಿ ಡಾ ಎನ್‌ ನವೀನ್‌ಕುಮಾರ್‌ ರಾಜು, ಕಾರ್ಯಪಾಲಕ ಅಭಿಯಂತರ ಹನುಮಂತರಾಯಪ್ಪ, ಸಹಾಯಕ ಕಾರ್ಯಪಾಲಕ ಅಭಿಯಂತರ ಅರಣಿ ಗಿರೀಶ್‌, ಮಲ್ಲಿಕಾರ್ಜುನ ಆಲೀಪುರ, ಸಿ ಎಸ್‌ ಹೆಗಡೆ ಮತ್ತು ಸಿ ಎಸ್‌ ಗಾಂಜಿ ಅವರ ವಿರುದ್ಧ ಕ್ರಮ ಕೈಗೊಳ್ಳಲು ಸಿಬ್ಬಂದಿ ಆಡಳಿತ ಸುಧಾರಣೆ ಇಲಾಖೆಯ ಸರ್ಕಾರದ ಉಪ ಕಾರ್ಯದರ್ಶಿ ಡಾ ಆನಂದ ಕೆ ಅವರು ಸಹಕಾರ ಇಲಾಖೆಗೆ 2021ರ ಆಗಸ್ಟ್‌ 17ರಂದು ಪತ್ರ ಬರೆದಿದ್ದಾರೆ. ಈ ಪತ್ರದ ಪ್ರತಿ ‘ದಿ ಫೈಲ್‌’ಗೆ ಲಭ್ಯವಾಗಿದೆ.

ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ನಿವೃತ್ತ ಜಿಲ್ಲಾ ನ್ಯಾಯಾಧೀಶ ಸಿ ಆರ್‌ ಬೆನಕನಹಳ್ಳಿ ಅವರು ವರದಿ ನೀಡಿದ್ದರು. ‘ಕಾಲಮಿತಿಯಲ್ಲಿ ಕಾಮಗಾರಿ ಪೂರ್ಣಗೊಳಿಸದೇ ವಿಳಂಬ ಮಾಡಿದ್ದರಿಂದ ಅಭಿವೃದ್ಧಿ ಕುಂಠಿತವಾಗಿತ್ತಲ್ಲದೆ ಬೊಕ್ಕಸಕ್ಕೆ ತೀವ್ರ ಆರ್ಥಿಕ ನಷ್ಟಕ್ಕೆ ಕಾರಣರಾಗಿದ್ದರು. ಏರಿಕೆ ವೆಚ್ಚವನ್ನು ಶೇ.50ಕ್ಕಿಂತಲೂ ಹೆಚ್ಚಳಗೊಳಿಸಿದ್ದರು. ಈ ಪ್ರಕರಣದಲ್ಲಿ 8 ಅಧಿಕಾರಿಗಳು ಭಾಗಿಯಾಗಿದ್ದಾರೆ. ಇದೊಂದು ಗಂಭೀರ ದುರ್ನಡತೆ,’ ಎಂದು ಬೆನಕನಹಳ್ಳಿ ಅವರು ವರದಿಯಲ್ಲಿ ಉಲ್ಲೇಖಿಸಿರುವುದು ಡಾ ಆನಂದ ಅವರು ಬರೆದಿರುವ ಪತ್ರದಿಂದ ತಿಳಿದು ಬಂದಿದೆ.

‘ಇಬ್ಬರು ಐಎಎಸ್‌ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (ಸೇವೆಗಳು-1)ಗೆ ಪ್ರಸ್ತಾಪ ಸಲ್ಲಿಸಬೇಕು. ಕೆಎಎಸ್‌ ಅಧಿಕಾರಿ ಮತ್ತು ಉಳಿದ 4 ಮಂದಿ ಅಧಿಕಾರಿಗಳು ಲೋಕೋಪಯೋಗಿ ಇಲಾಖೆ ವ್ಯಾಪ್ತಿಗೆ ಸೇರಿದ್ದಾರೆ. ಈ ಅಧಿಕಾರಿಗಳ ವಿರುದ್ಧ ಜಂಟಿ ಇಲಾಖೆ ವಿಚಾರಣೆ ಕೈಗೊಳ್ಳಲು ಅನುವಾಗುವಂತೆ ಸಂಬಂಧಪಟ್ಟ ಇಲಾಖೆಗಳ ಅನುಮತಿ ಪಡೆದು ಇಲಾಖೆ ಅನುಮೋದನೆಯೊಂದಿಗೆ ಕರಡು ದೋಷಾರೋಪಣೆ ಪಟ್ಟಿ ತಯಾರಿಸಬೇಕು ಎಂದು 2021ರ ಮಾರ್ಚ್‌ ಮತ್ತು ಮೇ 25ರಂದು ಸಿಬ್ಬಂದಿ ಆಡಳಿತ ಸುಧಾರಣೆ ಇಲಾಖೆ ಕೋರಿತ್ತು,’ ಎಂಬ ಮಾಹಿತಿ ಪತ್ರದಿಂದ ಗೊತ್ತಾಗಿದೆ.

ಕಳೆದ ಮಾರ್ಚ್‌ ಮತ್ತು ಮೇ ತಿಂಗಳಿನಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯು ಪತ್ರ ಬರೆದಿದ್ದರೂ ಸಹಕಾರ ಇಲಾಖೆಯ ಹಿಂದಿನ ಪ್ರಧಾನ ಕಾರ್ಯದರ್ಶಿ ತುಷಾರ್‌ ಗಿರಿನಾಥ್‌ ಅವರು ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಹೀಗಾಗಿ ಸಿಬ್ಬಂದಿ ಆಡಳಿತ ಸುಧಾರಣೆ ಇಲಾಖೆಯು ಇಲಾಖೆಯ ಪ್ರಧಾನ ಕಾರ್ಯದರ್ಶಿ ಎನ್‌ ಜಯರಾಮ್‌ ಅವರಿಗೆ ಪತ್ರ ಬರೆದಿದ್ದಾರೆ. ಈ ಪತ್ರದ ಮೇಲೂ ಇಲಾಖೆಯು ಕ್ರಮ ಕೈಗೊಂಡಿಲ್ಲ ಎಂದು ತಿಳಿದು ಬಂದಿದೆ.

SUPPORT THE FILE

Latest News

Related Posts