ಇಸ್ಲಾಮಿಕ್‌ ಸಂಸ್ಥೆಯ ಜಮೀನು ವಶಕ್ಕೆ ಪಡೆದ ಸರ್ಕಾರ, ರಾಷ್ಟ್ರೋತ್ಥಾನದ 76 ಎಕರೆ ಹಿಂಪಡೆದಿಲ್ಲವೇಕೆ?

ಬೆಂಗಳೂರು; ಇಸ್ಲಾಮಿಕ್‌ ಮಿಷನ್‌ ಆಫ್‌ ಇಂಡಿಯಾ ನಡೆಸುತ್ತಿದ್ದ ಇಸ್ಲಾಮಿಯಾ ಇನ್ಸಿಟಿಟ್ಯೂಟ್‌ ಆಫ್‌ ಟೆಕ್ನಾಲಜಿ ಸಂಸ್ಥೆಯನ್ನು ಒತ್ತುವರಿ ಆರೋಪದಲ್ಲಿ ಸಿಲುಕಿಸಿ ಸಂಸ್ಥೆಯ ಸ್ವಾಧೀನದಲ್ಲಿದ್ದ 8 ಎಕರೆ ವಿಸ್ತೀರ್ಣದ ಜಮೀನನ್ನು ಒತ್ತುವರಿಯಿಂದ ತೆರವುಗೊಳಿಸಿರುವ ಬಿಜೆಪಿ ಸರ್ಕಾರವು, ರಾಷ್ಟ್ರೋತ್ಥಾನ ಪರಿಷತ್‌, ಜನಸೇವಾ ವಿಶ್ವಸ್ಥ ಮಂಡಳಿ ಸೇರಿದಂತೆ ಧಾರ್ಮಿಕ ಮತ್ತು ಶೈಕ್ಷಣಿಕ ಸಂಸ್ಥೆಗಳಿಗೆ ಯಾವುದೇ ಕಾರಣಗಳಿಲ್ಲದೆಯೇ ನೀಡಿದ್ದ ಕೋಟ್ಯಂತರ ರು., ಬೆಲೆ ಬಾಳುವ ಜಮೀನನ್ನು ಹಿಂಪಡೆದುಕೊಳ್ಳುವ ಬಗ್ಗೆ ಕಠಿಣ ಕ್ರಮಗಳನ್ನು ಕೈಗೊಂಡಿಲ್ಲ.

ಇಸ್ಲಾಮಿಕ್ ಮಿಷನ್ ಆಫ್‌ ಇಂಡಿಯಾ ಸಂಸ್ಥೆಯು ಭೂ ಒತ್ತುವರಿ ಮಾಡಿಕೊಂಡಿಲ್ಲ ಎಂದು ಹಲವು ವರ್ಷಗಳ ಹಿಂದೆಯೇ ತನಿಖಾ ವರದಿ ಇದ್ದರೂ ಜಮೀನನ್ನು ಬೆಂಗಳೂರು ನಗರ ಜಿಲ್ಲಾಧಿಕಾರಿ ವಶಪಡಿಸಿಕೊಂಡಿದ್ದರು. ಆದರೆ ಸಂಘ ಪರಿವಾರದ ಅಂಗ ಸಂಸ್ಥೆ ಎಂದೇ ಕರೆಯಲಾಗುವ ರಾಷ್ಟ್ರೋತ್ಥಾನ ಪರಿಷತ್‌, ಜನಸೇವಾ ವಿಶ್ವಸ್ಥ ಮಂಡಳಿಗೆ ಸಕಾರಣಗಳಿಲ್ಲದೇ ನೀಡಿದ್ದ ಜಮೀನನ್ನು ಹಿಂಪಡೆದುಕೊಳ್ಳಲು ಬೆಂಗಳೂರು ನಗರ ಜಿಲ್ಲಾಧಿಕಾರಿ ಆಸ್ಥೆ ವಹಿಸಿಲ್ಲ. ಈ ಎರಡೂ ಪ್ರಕರಣಗಳು ಬಿಜೆಪಿ ಸರ್ಕಾರದ ತಾರತಮ್ಯ ಧೋರಣೆಗೆ ಹಿಡಿದ ಕೈಗನ್ನಡಿಯಾಗಿದೆ.

ರಾಷ್ಟ್ರೋತ್ಥಾನ ಪರಿಷತ್‌, ಜನಸೇವಾ ವಿಶ್ವಸ್ಥ ಮಂಡಳಿ ಸೇರಿದಂತೆ ಧಾರ್ಮಿಕ ಮತ್ತು ಶೈಕ್ಷಣಿಕ ಸಂಸ್ಥೆಗಳಿಗೆ ಯಾವುದೇ ಕಾರಣಗಳಿಲ್ಲದೆಯೇ ಸ್ವಯಂ ಪ್ರೇರಿತವಾಗಿ ಅಂದಿನ ಸರ್ಕಾರವು ಕೋಟ್ಯಂತರ ರು.,ಬೆಲೆ ಬಾಳುವ 89 ಎಕರೆ 29 ಗುಂಟೆ ಮಂಜೂರಾತಿ ಮಾಡಲಾಗಿತ್ತು. ಅಲ್ಲದೆ ಇದೂ ಸೇರಿದಂತೆ ಇನ್ನಿತರೆ 115 ಪ್ರಕರಣಗಳಲ್ಲಿ ಸರ್ಕಾರಕ್ಕೆ 248.17 ಕೋಟಿ ರು. ನಷ್ಟ ಸಂಭವಿಸಿರುವ ಪ್ರಕರಣಗಳನ್ನು ಸಿಎಜಿ ವರದಿಯಲ್ಲಿ ವಿವರಿಸಲಾಗಿದೆ.

ಈ ವರದಿಯನ್ನಾಧರಿಸಿ ಕಾಂಗ್ರೆಸ್‌ನ ಹಿರಿಯ ಶಾಸಕ ರಾಮಲಿಂಗಾರೆಡ್ಡಿ ಅವರ ಅಧ್ಯಕ್ಷತೆಯಲ್ಲಿರುವ ಸಾರ್ವಜನಿಕ ಲೆಕ್ಕಪತ್ರ ಸಮಿತಿಯು ವಿಚಾರಣೆಗೆ ಕೈಗೆತ್ತಿಕೊಂಡಿದೆಯಾದರೂ ಕೈಗೊಂಡಿರುವ ಕ್ರಮಗಳ ಬಗ್ಗೆ ಕಂದಾಯ ಇಲಾಖೆಯು ಉತ್ತರವನ್ನು ನೀಡದೇ ನುಣುಚಿಕೊಳ್ಳುತ್ತಿದೆ.

ಸರ್ಕಾರಿ ಭೂಮಿ ಮಂಜೂರಾತಿ, ಗುತ್ತಿಗೆ, ಒತ್ತುವರಿಗಳ ತೆರವುಗೊಳಿಸುವಿಕೆ ಹಾಗೂ ಅಕ್ರಮ ಹಿಡುವಳಿಗಳನ್ನು ಸಕ್ರಮಗೊಳಿಸುವಿಕೆ ಬಗ್ಗೆ ಭಾರತದ ಲೆಕ್ಕ ನಿಯಂತ್ರಕರು ಮತ್ತು ಮಹಾಲೆಕ್ಕಪರಿಶೋಧಕರು 2018ರ ಡಿಸೆಂಬರ್‌ 17ರಂದು ಸಲ್ಲಿಸಿದ್ದ ವರದಿ ಮೇಲೆ ಕಂದಾಯ ಇಲಾಖೆ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದಿರುವುದು

ಅಧಿಕ ಪ್ರಮಾಣದಲ್ಲಿ ರಿಯಾಯಿತಿ ನೀಡಿರುವ, ಭೂಮಿಯ ಮೌಲ್ಯವನ್ನು ತಪ್ಪಾಗಿ ವಿಧಿಸಿರುವುದು, ಮೌಲ್ಯಮಾಪನದ ಸಾಮಾನ್ಯ ತತ್ವಗಳನ್ನು ಅಳವಡಿಸಿಕೊಳ್ಳದ ಕಾರಣ ಸರ್ಕಾರಕ್ಕೆ ವರಮಾನ ಖೋತಾ ಆಗಿರುವ ಪ್ರಕರಣಗಳ ಕುರಿತು ಸಿಎಜಿ ಸುದೀರ್ಘವಾಗಿ ಚರ್ಚಿಸಿತ್ತು.

ಈ ಎಲ್ಲಾ ಪ್ರಕರಣಗಳ ಕುರಿತು 2021ರ ಜನವರಿ 5ರಂದು ಸಾರ್ವಜನಿಕ ಲೆಕ್ಕಪತ್ರ ಸಮಿತಿ ನಡೆಸಿದ ಸಭೆಯಲ್ಲಿ ಮಾಹಿತಿ ನೀಡಬೇಕಿದ್ದ ಕಂದಾಯ ಇಲಾಖೆ ಅಧಿಕಾರಿಗಳು ಹೊಣೆಗಾರಿಕೆಯಿಂದ ನುಣುಚಿಕೊಂಡಿದ್ದರು. 7 ತಿಂಗಳ ನಂತರವೂ ಲೆಕ್ಕಪತ್ರ ಸಮಿತಿಗೆ ಉತ್ತರವನ್ನು ನೀಡಿಲ್ಲ ಎಂದು ತಿಳಿದು ಬಂದಿದೆ.

ಸಿಎಜಿ ವರದಿಯಲ್ಲಿ ಉಲ್ಲೇಖಿಸಿರುವ ಪ್ರಕರಣಗಳ ಕುರಿತು ಕೈಗೊಂಡ ಕ್ರಮಗಳ ಕುರಿತು ಕಂದಾಯ ಇಲಾಖೆ ಅಧಿಕಾರಿಗಳು ಕಾಲಾವಕಾಶ ತಂತ್ರಗಾರಿಕೆಯನ್ನು ಮುಂದೊಡ್ಡಿದ್ದರು. ವರದಿ ಸಲ್ಲಿಸಿ 3 ವರ್ಷಗಳಾದರೂ ಯಾವುದೇ ಕ್ರಮ ಕೈಗೊಳ್ಳದೆ ಬೇಜವಾಬ್ದಾರಿಯನ್ನು ಪ್ರದರ್ಶಿಸಿದ ಇಲಾಖೆ ಅಧಿಕಾರಿಗಳನ್ನು ಸಭೆಯಲ್ಲಿದ್ದ ಬಹುತೇಕ ಸದಸ್ಯ ಶಾಸಕರು ಪಕ್ಷಾತೀತವಾಗಿ ತರಾಟೆಗೆ ತೆಗೆದುಕೊಂಡಿದ್ದರು.

ಬೆಂಗಳೂರು ನಗರ ಜಿಲ್ಲಾಧಿಕಾರಿಯೂ ಸೇರಿದಂತೆ ಕಂದಾಯ ಇಲಾಖೆಯ ಉನ್ನತ ಅಧಿಕಾರಿಗಳು ಈ ಸಭೆಯಲ್ಲಿ ಭಾಗವಹಿಸಿದ್ದರು. ಸಿಎಜಿ ವರದಿ ಮೇಲೆ ಕೈಗೊಂಡ ಕ್ರಮಗಳ ಕುರಿತು ಅಧಿಕಾರಿಗಳ ಬಳಿ ಯಾವುದೇ ಮಾಹಿತಿಯೂ ಇಲ್ಲ. ಪ್ರತಿ ಪ್ರಕರಣದ ಬಗ್ಗೆ ಕೇಳಿದ ಮಾಹಿತಿಗೆ ಸರಿಯಾದ ಉತ್ತರ ನೀಡಿರಲಿಲ್ಲ. ಬದಲಿಗೆ ಇನ್ನಷ್ಟು ಕಾಲಾವಕಾಶ ಕೋರಿದ್ದರು. ಸಮಿತಿ ಇದನ್ನು ಗಂಭೀರವಾಗಿ ಪರಿಗಣಿಸಿತ್ತು.

ಪ್ರಕರಣದ ವಿವರ

ರಾಷ್ಟ್ರೋತ್ಥಾನ ಪರಿಷತ್‌ ಸೇರಿದಂತೆ ಹಲವು ಧಾರ್ಮಿಕ ಮತ್ತು ಶೈಕ್ಷಣಿಕ ಸಂಸ್ಥೆಗಳು ಅರ್ಜಿಯನ್ನು ಸಲ್ಲಿಸದಿದ್ದರೂ ಜಮೀನು ಮಂಜೂರಾತಿಯಾಗಿತ್ತು. ಅಲ್ಲದೆ ಜಮೀನು ಮಂಜೂರಾತಿಯಲ್ಲಿ ನೀಡಲಾಗಿದ್ದ ರಿಯಾಯಿತಿಗಳನ್ನು ಯಾವುದೇ ಕಾರಣಗಳನ್ನೂ ದಾಖಲಿಸಿರಲಿಲ್ಲ. ಸರ್ಕಾರವು ಸ್ವಯಂ ಪ್ರೇರಿತವಾಗಿ ಕರ್ನಾಟಕ ಸರ್ಕಾರದ (ವಿಷಯಗಳ ವ್ಯವಹಾರ) ನಿಯಮಗಳಡಿಯಲ್ಲಿ ನೀಡಿತ್ತು. ಆದರೆ ಕರ್ನಾಟಕ ಭೂ ಮಂಜೂರಾತಿ ನಿಯಮಗಳ ನಿಯಮ-27ರ ಅಡಿಯಲ್ಲಿ ಅಗತ್ಯವಿರುವ ಯಾವುದೇ ಕಾರಣಗಳನ್ನೂ ದಾಖಲಿಸಿರಲಿಲ್ಲ ಎಂದು ಸಿಎಜಿ ವರದಿಯಲ್ಲಿ ವಿವರಿಸಲಾಗಿತ್ತು.

ಬೆಂಗಳೂರು ದಕ್ಷಿಣ ತಾಲೂಕಿನ ಚನ್ನೇನಹಳ್ಳಿಯಲ್ಲಿರುವ ಜನಸೇವಾ ವಿಶ್ವಸ್ಥ ಮಂಡಳಕ್ಕೆ ಶೈಕ್ಷಣಿಕ ಹಾಗೂ ಸಾಮಾಜಿಕ ಚಟುವಟಿಕೆಗಳಿಗಾಗಿ 2009ರ ಫೆಬ್ರುವರಿಯಲ್ಲಿ 6 ಎಕರೆ ಭೂಮಿಯನ್ನು ಮಂಜೂರು ಮಾಡಿತ್ತು. ಶೇ.50ರ ರಿಯಾಯಿತಿಯನ್ನು ನೀಡಲಾಗಿದ್ದ ಮೂಲ ಆದೇಶವನ್ನು ಮಾರ್ಪಡಿಸಿದ್ದ ಅಂದಿನ ಸರ್ಕಾರ ಶೇ.75ರ ರಿಯಾಯಿತಿಗೆ ಮಾರ್ಪಾಡಿಸಿತ್ತು.

ಹಂಚಿಕೆಯನ್ನು ಪಡೆದವರ ಕೋರಿಕೆ ಮೇರೆಗೆ ರಿಯಾಯಿತಿ ನೀಡಲಾಗಿತ್ತು ಎಂದು ಸರ್ಕಾರ ಹೇಳಿತ್ತಾದರೂ ಅಂತಹ ಕೋರಿಕೆಯ ಪತ್ರವು ದಾಖಲೆಗಳಲ್ಲಿ ಇರಲಿಲ್ಲ. ಭೂಮಿಯ ಮಾರ್ಗಸೂಚಿ ಮೌಲ್ಯವು ಎಕರೆಯೊಂದಕ್ಕೆ 45 ಲಕ್ಷ ಆಗಿತ್ತು. ಆದರೆ ಹೆಚ್ಚುವರಿಯಾಗಿ ನೀಡಿದ್ದ ರಿಯಾಯಿತಿಯು 67.50 ಲಕ್ಷ ರು.ಗಳಾಗಿತ್ತು ಎಂದು ಸಿಎಜಿ ವರದಿಯಲ್ಲಿ ಪ್ರಸ್ತಾಪವಾಗಿತ್ತು.

ಅದೇ ರೀತಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ರಾಷ್ಟ್ರೋತ್ಥಾನ ಪರಿಷತ್‌ಗೆ 2009ರ ಅಕ್ಟೋಬರ್‌ ಮತ್ತು 2011ರ ಮಾರ್ಚ್‌ನಲ್ಲಿ 76 ಎಕರೆ 03 ಗುಂಟೆ ಜಮೀನನ್ನು ಸ್ವಯಂ ಪ್ರೇರಿತವಾಗಿ ಮಂಜೂರು ಮಾಡಲಾಗಿತ್ತು. ಕನಕಪುರದ ದೇವರ ಕಗ್ಗಲಹಳ್ಳಿಯ ಸರ್ವೆ ನಂಬರ್‌ 72 ಮತ್ತು 78ರಲ್ಲಿ ಮಹಾತ್ಮಗಾಂಧಿ ವಿದ್ಯಾಪೀಠಕ್ಕೆ 05 ಎಕರೆ 07 ಗುಂಟೆ, ಬೆಂಗಳೂರು ನಗರ ಜಿಲ್ಲೆಯ ಕೃಷ್ಣ ಸೇವಾಶ್ರಮ ಟ್ರಸ್ಟ್‌ಗೆ 2011ರ ಜೂನ್‌ನಲ್ಲಿ 02 ಎಕರೆ, ಧಾರವಾಡ ಜಿಲ್ಲೆಯ ಕರ್ನಾಟಕ ಶಿಕ್ಷಣ ಮಂಡಳಿಗೆ 2011ರಲ್ಲಿ 06 ಎಕರೆ 19 ಗುಂಟೆ, ಜಮೀನನ್ನು ಚಾರಿಟಬಲ್‌, ದತ್ತಿ ಚಟುವಟಿಕೆಗಳಿಗೆ ಮಂಜೂರು ಮಾಡಿತ್ತು ಎಂಬುದು ಸಿಎಜಿ ವರದಿಯಲ್ಲಿ ಹೇಳಲಾಗಿತ್ತು.

ಈ ಎಲ್ಲಾ ಪ್ರಕರಣಗಳಲ್ಲಿ ಅಂದಿನ ಸರ್ಕಾರವು ಯಾವುದೇ ಕಾರಣಗಳನ್ನು ದಾಖಲಿಸದೆಯೇ ಸ್ವಯಂ ಪ್ರೇರಿತವಾಗಿ ಶೇ.20ರಿಂದ 100ರವರೆಗೆ ರಿಯಾಯಿತಿಗಳನ್ನು ನೀಡಿತ್ತು. ಇದು ಭೂಮಿಯ ಬೆಲೆಯನ್ನು 18.93 ಕೋಟಿ ಮೊತ್ತದಷ್ಟು ಕಡಿಮೆ ಪ್ರಮಾಣದಲ್ಲಿ ವಸೂಲಾತಿ ಮಾಡಲು ಕಾರಣವಾಗಿತ್ತು ಎಂದು ಸಿಎಜಿ ವರದಿಯಲ್ಲಿ ವಿವರಿಸಲಾಗಿದೆ.
ಹಾಗೆಯೇ 51 ಪ್ರಕರಣಗಳಲ್ಲಿ ಅಧಿಕ ರಿಯಾಯಿತಿಗಳನ್ನು ನೀಡಲಾಗಿತ್ತು.

ನಿರ್ದಿಷ್ಟಪಡಿಸಲಾಗಿದ್ದ ಷರತ್ತುಗಳನ್ನು ಪೂರೈಸಿರುವುದನ್ನು ಖಚಿತಪಡಿಸಿಕೊಳ್ಳದೆಯೇ ನಿರ್ದಿಷ್ಟ ದರಗಳಲ್ಲಿ ರಿಯಾಯಿತಿಗಳನ್ನು ನೀಡಿದ್ದರಿಂದ 176.01 ಕೋಟಿ ಮೊತ್ತದಷ್ಟು ಹೆಚ್ಚುವರಿ/ಅಧಿಕ ಪ್ರಮಾಣದಲ್ಲಿ ರಿಯಾಯಿತಿಗಳನ್ನು ನೀಡಲಾಗಿತ್ತು. ಸರ್ಕಾರಿ ಆದೇಶಗಳಲ್ಲಿ ನಿರ್ದಿಷ್ಟಪಡಿಸಲಾಗಿದ್ದ ಮಾರುಕಟ್ಟೆ ಮೌಲ್ಯಕ್ಕಿಂತ ಭೂಮಿಯ ಮಾರುಕಟ್ಟೆ ಮೌಲ್ಯವನ್ನು ಜಿಲ್ಲಾಧಿಕಾರಿಗಳು ತಪ್ಪಾಗಿ ಲೆಕ್ಕ ಹಾಕಿದ್ದರಿಂದ 30 ಪ್ರಕರಣಗಳಲ್ಲಿ ಸರ್ಕಾರದ ವರಮಾನದಲ್ಲಿ 17.83 ಕೋಟಿ ಮೊತ್ತದಷ್ಟು ನಷ್ಟಕ್ಕೆ ಕಾರಣರಾಗಿದ್ದರು.

ವಾಣಿಜ್ಯ, ವಸತಿ ಉದ್ದೇಶಗಳಿಗಾಗಿ ಪರಿವರ್ತಿಸಲಾದಂತಹ ಭೂಮಿಗೆ ನಿರ್ದಿಷ್ಟ ಶೇಕಡವಾರು ಮಾರ್ಗಸೂಚಿ ಮೌಲ್ಯ ಹೆಚ್ಚಳಗೊಳಿಸುವ ಸಲುವಾಗಿ ಕೇಂದ್ರ ಮೌಲ್ಯಮಾಪನ ಸಮಿತಿಯ ತತ್ವವನ್ನು ಅಳವಡಿಸಿಕೊಳ್ಳದ ಕಾರಣ ಒಟ್ಟು 29 ಪ್ರಕರಣಗಳಲ್ಲಿ 35.40 ಕೋಟಿ ವರಮಾನ ಕಳೆದುಕೊಂಡಿತ್ತು ಎಂದು ಸಿಎಜಿ ವರದಿಯಲ್ಲಿ ವಿವರಿಸಲಾಗಿತ್ತು.

the fil favicon

SUPPORT THE FILE

Latest News

Related Posts