ಬೆಂಗಳೂರು; ಕಪ್ಪು ಶಿಲೀಂಧ್ರ ಸೋಂಕಿತರ ಚಿಕಿತ್ಸೆಗೆ ಅತ್ಯವಶ್ಯಕ ಔಷಧವಾಗಿರುವ ಆಂಪೋಟೆರಿಸಿನ್ ಬಿ ಚುಚ್ಚುಮದ್ದು ಖರೀದಿಯಲ್ಲಿ ನಡೆದಿರುವ ಅಕ್ರಮವನ್ನು ‘ದಿ ಫೈಲ್’ ಇದೀಗ ಹೊರಗೆಡವುತ್ತಿದೆ.
ಆಂಪೋಟೆರಿಸಿನ್ ಚುಚ್ಚುಮದ್ದು ಖರೀದಿ ಸಂಬಂಧ ನಾಲ್ವರು ಬಿಡ್‌ದಾರರ ಪೈಕಿ ಇಬ್ಬರನ್ನು ಆಯ್ಕೆ ಮಾಡಿದ್ದ ಕರ್ನಾಟಕ ವೈದ್ಯಕೀಯ ಸರಬರಾಜು ನಿಗಮವು ಮೊದಲ ಬಿಡ್‌ದಾರ (ಎಲ್ 1) ಭಾರತ್ ಸೀರಮ್ಸ್ ವ್ಯಾಕ್ಸಿನ್ಸ್ ಲಿಮಿಟೆಡ್ ನಮೂದಿಸಿದ್ದ ದರಕ್ಕೆ ಹೊಂದಾಣಿಕೆ ಮಾಡಲು ನಿರಾಕರಿಸಿದ್ದ ಎರಡನೇ ಬಿಡ್‌ದಾರ ಮೈಲಾನ್ ಫಾರ್ಮಾಸ್ಯುಟಿಕಲ್ಸ್ ನಮೂದಿಸಿದ್ದ 460 ರು. ಹೆಚ್ಚುವರಿ ದರದಲ್ಲಿಯೇ (ತಲಾ ವಯಲ್‌ವೊಂದಕ್ಕೆ) 25,000 ವಯಲ್‌ಗಳನ್ನು ಖರೀದಿಸಿ ಅಂದಾಜು 1.14 ಕೋಟಿ ರು. ನಷ್ಟವಾಗಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ.
ನಿಯಮಗಳ ಪ್ರಕಾರ ಎಲ್ 1 ದರದಲ್ಲಿಯೇ ಖರೀದಿಸಬೇಕಿತ್ತು. ಎಲ್ 1 ಬಿಡ್‌ದಾರನ ದರಕ್ಕೆ ಹೊಂದಾಣಿಕೆ ಮಾಡಲು ನಿರಾಕರಿಸಿದ ಮೈಲಾನ್ ಕಂಪನಿಗೆ ವಯಲ್‌ವೊಂದಕ್ಕೆ 460 ರು. ಹೆಚ್ಚುವರಿ ದರದಲ್ಲಿಯೇ ಖರೀದಿ ಆದೇಶ ನೀಡಿರುವುದರ ಹಿಂದೆ ಆರೋಗ್ಯ ಸಚಿವ ಡಾ ಕೆ ಸುಧಾಕರ್ ಅವರ ಅತ್ಯಾಸಕ್ತಿಯೇ ಕಾರಣ ಎಂದು ತಿಳಿದು ಬಂದಿದೆ.
ಕೊರೊನಾ ವೈರಸ್ ನಿಯಂತ್ರಣಕ್ಕೆ ಸಂಬಂಧಿಸಿದಂತೆ ರಚನೆಯಾಗಿರುವ ಉಪ ಮುಖ್ಯಮಂತ್ರಿ ಡಾ ಸಿ ಎನ್ ಅಶ್ವಥ್‌ನಾರಾಯಣ್ ಅವರು ಸಹ ಸುಧಾಕರ್ ಅವರ ಅತ್ಯಾಸಕ್ತಿಯನ್ನು ಪ್ರೋತ್ಸಾಹಿಸಿದ್ದಾರೆ. ಮೈಲಾನ್ ಕಂಪನಿ ನಮೂದಿಸಿದ್ದ 460 ರು. ಹೆಚ್ಚುವರಿ ದರದಲ್ಲಿಯೇ 25,000 ವಯಲ್‌ಗಳನ್ನು ಖರೀದಿಸಲು 2021ರ ಜೂನ್ 2ರಂದು ಆರ್ಥಿಕ ಇಲಾಖೆ ನೀಡಿದ್ದ 4(ಜಿ) ವಿನಾಯಿತಿಗೆ ಡಾ ಸಿ ಎನ್ ಅಶ್ವಥ್‌ನಾರಾಯಣ್ ಅಧ್ಯಕ್ಷರಾಗಿರುವ ಕಾರ್ಯಪಡೆ ಸಮಿತಿಯು 2021ರ ಜೂನ್ 7ರಂದು ನಡೆದಿದ್ದ ಸಭೆಯಲ್ಲಿ ಘಟನೋತ್ತರ ಅನುಮೋದನೆ ನೀಡಿರುವುದು ನಡವಳಿಯಿಂದ ತಿಳಿದು ಬಂದಿದೆ. ಇದಕ್ಕೆ ಸಂಬಂಧಿಸಿದಂತೆ ಕೆಲ ದಾಖಲಾತಿಗಳು ‘ದಿ ಫೈಲ್’ಗೆ ಲಭ್ಯವಾಗಿದೆ.
ಭಾರತ್ ಸೀರಮ್ಸ್ ವ್ಯಾಕ್ಸಿನ್ಸ್ ಲಿಮಿಟೆಡ್ ನಮೂದಿಸಿದ್ದ 5,787.60 ರು. ದರದಲ್ಲಿ 25,000 ವಯಲ್ಸ್‌ಗಳನ್ನು ಖರೀದಿಸಿದ್ದರೆ 14,46,90,000 ರು. ವೆಚ್ಚವಾಗುತ್ತಿತ್ತು. ಆದರೆ ಈ ದರಕ್ಕೆ ಹೊಂದಾಣಿಕೆಗೆ ನಿರಾಕರಿಸಿದ್ದ ಮೈಲಾನ್ ಫಾರ್ಮಾಸ್ಯುಟಿಕಲ್ಸ್‌ನಿಂದ 6,247.50 ರು. ದರದಂತೆ 15.61 ಕೋಟಿ ರು. ದರದಲ್ಲಿ .25,000 ವಯಲ್‌ಗಳನ್ನು ಖರೀದಿಸಿದೆ. ಇದರಿಂದ 1.14 ಕೋಟಿ ರು. ಹೆಚ್ಚುವರಿಯಾಗಿ ಕಂಪನಿಗೆ ಲಾಭ ಮಾಡಿಕೊಟ್ಟಂತಾಗಿದೆ.
ಕಪ್ಪು ಶಿಲೀಂಧ್ರ ಸೋಂಕಿತರ ಚಿಕಿತ್ಸೆಗೆ ಅತ್ಯವಶ್ಯಕತೆಯ ಆಂಪೊಟೆರಿಸಿನ್ ಬಿ ಲಿಪೊಸೊಮಲ್ 50 ಎಂ ಜಿ/ವಯಲ್ ಸಂಗ್ರಹಿಸಲು 2021ರ ಮೇ 19ರಂದು 1 ಲಕ್ಷ ವಯಲ್‌ಗಳಿಗೆ ದರ ಪಟ್ಟಿ ಆಹ್ವಾನ ಮಾಡಲಾಗಿತ್ತು. ಈ ದರಪಟ್ಟಿಯಲ್ಲಿ 4 ಬಿಡ್‌ದಾರರು ಭಾಗವಹಿಸಿದ್ದರು. ಈ ಪೈಕಿ ಇಬ್ಬರು ಬಿಡ್‌ದಾರರು ಅರ್ಹರಾಗಿದ್ದರು. ಇದರಲ್ಲಿ ಎಲ್ 1 ಆಗಿದ್ದ ಭಾರತ್ ಸೀರಮ್ಸ್ ಅಂಡ್ ವ್ಯಾಕ್ಸಿನ್ಸ್ ಲಿಮಿಟೆಡ್ ಪ್ರತಿ ವಯಲ್‌ಗೆ 5,787 ರು. ಮೈಲಾನ್ ಫಾರ್ಮಾಸ್ಯುಟಿಕಲ್ಸ್ ಪ್ರೈವೈಟ್ (ಎಲ್ 2) ಲಿಮಿಟೆಡ್ 6,247.50 ರು ನಮೂದಿಸಿತ್ತು ಎಂಬುದು ನಡವಳಿಯಿಂದ ಗೊತ್ತಾಗಿದೆ.
ಇಬ್ಬರು ಬಿಡ್‌ದಾರರು ನಮೂದಿಸಿದ್ದ ದರದಲ್ಲಿ 460 ರು. ವ್ಯತ್ಯಾಸವಿತ್ತು. ಹೀಗಾಗಿ 2021ರ ಮೇ 27ರಂದು ದರ ಸಂಧಾನ ಸಭೆ ನಡೆದಿತ್ತು. ಸಭೆಯಲ್ಲಿ ಪಾಲ್ಗೊಂಡಿದ್ದ ಎಲ್ 1 ಬಿಡ್‌ದಾರ ಭಾರತ್ ಸಿರಮ್ಸ್ ವ್ಯಾಕ್ಸಿನ್ಸ್ ಲಿಮಿಟೆಡ್ ಕಂಪನಿಯು ಭಾರತ ಸರ್ಕಾರದ ಔಷಧ ಇಲಾಖೆ ಹಂಚಿಕೆ ಅನ್ವಯ ಮಾತ್ರ ಸರಬರಾಜು ಮಾಡಲಿದೆ ಎಂದು ತಿಳಿಸಿತ್ತು. ಹೀಗಾಗಿ ದರ ಸಂಧಾನ ಸಭೆಯಲ್ಲಿ ಚರ್ಚೆ ನಡೆದಿತ್ತಲ್ಲದೆ ಭಾರತ್ ಸೀರಮ್ಸ್ ವ್ಯಾಕ್ಸಿನ್ಸ್ ಲಿಮಿಟೆಡ್‌ನಿಂದ ಪ್ರತಿ ವಯಲ್‌ಗೆ 5,787.60 ರು. ದರದಲ್ಲಿ 50,000 ವಯಲ್‌ಗಳನ್ನು 28,93,80,000 ರು. ದರದಲ್ಲಿ ಸಂಗ್ರಹಿಸಲು ಖರೀದಿ ಆದೇಶ ನೀಡಿತ್ತು.
ಮೈಲಾನ್ ಮೇಲೇಕೆ ಅತ್ಯಾಸಕ್ತಿ?
ಅದೇ ರೀತಿ ಮೈಲಾನ್ ಫಾರ್ಮಾಸ್ಯುಟಿಕಲ್ಸ್ ಪ್ರೈವೈಟ್ ಲಿಮಿಟೆಡ್ ಅವರು ದರ ಸಂಧಾನ ಸಭೆಯಲ್ಲಿ ಎಲ್ 1 ಬಿಡ್‌ದಾರರ ದರಕ್ಕೆ ಹೊಂದಾಣಿಕೆ ಮಾಡಲು ನಿರಾಕರಿಸಿತ್ತು. ಆದರೂ ಮೈಲಾನ್ ಫಾರ್ಮಾಸ್ಯುಟಿಕಲ್ಸ್ ಪ್ರೈ ಲಿ.,ನಿಂದ ಪ್ರತಿ ವಯಲ್‌ಗೆ 6,247.50 ರು. ದರದಂತೆ 25,000 ವಯಲ್‌ಗಳನ್ನು 15,61,87,500 ಕ್ಕೆ ಖರೀದಿಸಲು ಆದೇಶ ನೀಡಿತ್ತು. ಇದಕ್ಕೆ ಆರ್ಥಿಕ ಇಲಾಖೆಯ ಕೆಟಿಪಿಪಿ ಕಾಯ್ದೆ ಕಲಂ 4 (ಜಿ) ಅಡಿಯಲ್ಲಿ ವಿನಾಯಿತಿ ಕೋರಿದ್ದ (ಸರ್ಕಾರದ ಆದೇಶ ಸಂಖ್ಯೆ ಆಕುಕ 3ಫ್‌ಪಿಆರ್ 20221 ದಿನಾಂಕ 02-06-2021ರಲ್ಲಿ ) ಪ್ರಸ್ತಾವನೆಗೆ ಕಾರ್ಯಪಡೆ ಸಮಿತಿಯು ಅನುಮೋದನೆ ನೀಡಿರುವುದು ನಡವಳಿಯಿಂದ ತಿಳಿದು ಬಂದಿದೆ.
ಕಪ್ಪು ಶಿಲೀಂಧ್ರ (ಬ್ಲಾಕ್ ಫಂಗಸ್) ರೋಗ ಚಿಕಿತ್ಸೆಗೆ ಕೇಂದ್ರ ಸರ್ಕಾರವು 23,680 ಆಂಪೋಟೆರಿಸಿಯನ್ ಚುಚ್ಚುಮದ್ದುಗಳನ್ನು ವಿವಿಧ ರಾಜ್ಯಗಳಿಗೆ ಹಂಚಿಕೆ ಮಾಡಿತ್ತಾದರೂ ಕರ್ನಾಟಕದಲ್ಲಿ ದಾಖಲಾಗಿರುವ ರೋಗಿಗಳ ಸಂಖ್ಯೆಗೆ ತಕ್ಕಂತೆ ಹಂಚಿಕೆ ಮಾಡಿರಲಿಲ್ಲ.
ಈ ಸೋಂಕು ಕಾಣಿಸಿಕೊಂಡ ಅರಂಭದಲ್ಲಿ ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ಅಂಕಿ ಅಂಶಗಳ ಪ್ರಕಾರ ಕರ್ನಾಟಕದಲ್ಲಿ 500 ರೋಗಿಗಳಿಗೆ ದಿನಕ್ಕೆ 7 ವಯಲ್‌ಗಳಂತೆ ಒಟ್ಟು 3,500 ವಯಲ್‌ಗಳನ್ನು ಹಂಚಿಕೆ ಮಾಡಬೇಕಿತ್ತು. ಆದರೆ ಕೇಂದ್ರ ಸರ್ಕಾರವು ಕೇವಲ 1,270 ವಯಲ್‌ಗಳನ್ನು ಹಂಚಿಕೆ ಮಾಡಿತ್ತು.
‘ವಿವಿಧ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಕಪ್ಪು ಶಿಲೀಂಧ್ರ ರೋಗಿಗಳ ಸಂಖ್ಯೆ ಹೆಚ್ಚುತ್ತಿರುವ ಬಗ್ಗೆ ಸಮಗ್ರವಾಗಿ ಪರಿಶೀಲಿಸಿದ ಬಳಿಕ ಈ ಹಂಚಿಕೆ ಮಾಡಲಾಗಿತ್ತು. ಕರ್ನಾಟಕಕ್ಕೆ ಹಂಚಿಕೆ ಆಗಿರುವ ವಯಲ್‌ಗಳು, ರೋಗಿಗಳ ಅನುಪಾತಕ್ಕೆ ತಕ್ಕಂತಿಲ್ಲ ಎಂಬ ಆರೋಪವೂ ಕೇಳಿ ಬಂದಿತ್ತು.
ಒಬ್ಬ ರೋಗಿಗೆ ಕನಿಷ್ಠ 30ರಿಂದ 40 ವಯಲ್‌ಗಳು ಬೇಕು. ಒಟ್ಟು 15 ದಿನ ಚಿಕಿತ್ಸೆಗೆ ಒಬ್ಬ ರೋಗಿಗೆ 105 ವಯಲ್ ಬೇಕಾಗಲಿದೆ. ಇದರ ಪ್ರಕಾರ 500 ರೋಗಿಗಳಿಗೆ 52,500 ವಯಲ್ ಬೇಕಾಗಲಿದೆ ಎಂದು ಹೇಳಲಾಗುತ್ತಿದೆ. ಸೋಂಕು ಕಾಣಿಸಿಕೊಂಡ ಅರಂಭದ ದಿನಗಳಲ್ಲಿ ಸಾರ್ವಜನಿಕ ಆಸ್ಪತ್ರೆ ಮತ್ತು ಖಾಸಗಿ ಆಸ್ಪತ್ರೆಗಳಲ್ಲೂ ಆಂಪೋಟೆರಿಸಿಯನ್ ಬಿ ಚುಚ್ಚುಮದ್ದು ತೀವ್ರ ಕೊರತೆಯಲ್ಲಿತ್ತು.
ಮುಕ್ತ ಮಾರುಕಟ್ಟೆಯಲ್ಲಿ ಒಂದು ವಯಲ್‌ಗೆ 7,000 ರು. ಸರಾಸರಿ ದರವಿದೆ. ಇದರ ಪ್ರಕಾರ ಒಬ್ಬ ರೋಗಿ 50,000 ರು. ತೆರಬೇಕು. 15 ದಿನದ ಚಿಕಿತ್ಸೆಗೆ ಕನಿಷ್ಠ 7.50 ಲಕ್ಷ ರು.ಗಳನ್ನು ಒಬ್ಬ ರೋಗಿ ತೆರಬೇಕಿದೆ. ಇದು ಅತ್ಯಂತ ದುಬಾರಿಯಾಗಿತ್ತು. ರೆಮ್‌ಡಿಸಿವಿರ್ ಕಾಳಸಂತೆಯಲ್ಲಿ ಮಾರಾಟವಾದ ಹಾಗೆಯೇ ಆಂಪೋಟೆರಿಸಿನ್ ಬಿ ಇಂಜೆಕ್ಷನ್ ಕೂಡ ಕಾಳಸಂತೆಯಲ್ಲಿ ಮಾರಾಟವಾಗುತ್ತಿತ್ತು.