ನೆರೆ; ಆಗಸ್ಟ್‌ನಲ್ಲಿ ಮನವಿ ಸಲ್ಲಿಸಿದ್ದ ಬಿಜೆಪಿ ಸರ್ಕಾರ, ಸೆಪ್ಟಂಬರ್‌ ಹಾನಿಗೆ ಕೋರಿಕೆಯನ್ನೇ ಸಲ್ಲಿಸಿಲ್ಲ?

ಬೆಂಗಳೂರು; ಕಳೆದ ಸಾಲಿನ (2019) ಸೆಪ್ಟಂಬರ್‌ ಮತ್ತು ಅಕ್ಟೋಬರ್‌ನಲ್ಲಿ ರಾಜ್ಯದಲ್ಲಿ ಸಂಭವಿಸಿದ ಭಾರೀ ಪ್ರವಾಹ ಮತ್ತು ಭೂ ಕುಸಿತದಿಂದಾದ ಹಾನಿಗೆ ನೆರವು ಪಡೆಯಲು ರಾಜ್ಯ ಬಿಜೆಪಿ ಸರ್ಕಾರವು ಕೇಂದ್ರಕ್ಕೆ ಯಾವುದೇ ಮನವಿಯನ್ನಾಗಲಿ, ಕೋರಿಕೆಯನ್ನಾಗಲಿ ಸಲ್ಲಿಸಿಯೇ ಇಲ್ಲ ಎಂಬ ಹೊಸ ಅಂಶ ಇದೀಗ ಬಹಿರಂಗವಾಗಿದೆ.

ಕೇಂದ್ರ ಸರ್ಕಾರವು ಪ್ರವಾಹ ಪರಿಹಾರ ನೀಡುವ ವಿಚಾರವು ವಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತು ಆಡಳಿತ ಪಕ್ಷದ ನಡುವೆ ವಾಕ್ಸಮರ ನಡೆಯುತ್ತಿರುವ ಬೆನ್ನಲ್ಲೇ ಸೆಪ್ಟಂಬರ್‌ ಮತ್ತು ಅಕ್ಟೋಬರ್‌ನಲ್ಲಿ ಸಂಭವಿಸಿದ ಪ್ರವಾಹ ಸಂಬಂಧ ಕೇಂದ್ರದಿಂದ ಪರಿಹಾರ ಕೇಳಿಲ್ಲ ಎಂಬ ವಿಚಾರವೂ ಮುನ್ನೆಲೆಗೆ ಬಂದಿದೆ.

ಈ ಕಾರಣಕ್ಕಾಗಿಯೇ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು 2019 ಆಗಸ್ಟ್‌ 1ರಿಂದ 2020ರ ಜುಲೈ 31ರವರೆಗೆ ಪ್ರಕೃತಿ ವಿಕೋಪದಿಂದಾಗಿ ಉಂಟಾದ ಹಾನಿ ಹಾಗೂ ಕೈಗೊಂಡ ಕ್ರಮಗಳ ಬಗ್ಗೆ ಮಾಹಿತಿ ನೀಡುತ್ತಿಲ್ಲ ಎನ್ನಲಾಗಿದೆ. ಹೀಗಾಗಿಯೇ 2019ರ ಆಗಸ್ಟ್‌ 1ರಿಂದ 2020ರ ಜುಲೈ 2020ರವರೆಗೆ ಮಾಹಿತಿ ನೀಡಲು ಮುಖ್ಯಮಂತ್ರಿ ಸಚಿವಾಲಯವೂ ತಿಣುಕಾಡುತ್ತಿದೆ.

 

ಅಲ್ಲದೆ ಕಂದಾಯ ಇಲಾಖೆ (ವಿಪತ್ತು ನಿರ್ವಹಣೆ) ಅಧಿಕಾರಿಗಳು ಈ ಕುರಿತು ಮಾಹಿತಿಯನ್ನು ಸಿದ್ದರಾಮಯ್ಯ ಅವರಿಗೆ ತಲುಪಿಸುವ ಮುನ್ನ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಗಮನಕ್ಕೆ ತರಬೇಕು ಎಂದು ಮುಖ್ಯಮಂತ್ರಿಯವರ ಕಾರ್ಯದರ್ಶಿ ಡಾ ಎಸ್‌ ಸೆಲ್ವಕುಮಾರ್‌ ಅವರು ಕಂದಾಯ ಇಲಾಖೆ ಅಧಿಕಾರಿಗಳಿಗೆ ಪತ್ರ ಮುಖೇನ ಸೂಚಿಸಿದ್ದಾರೆ. ಈ ಪತ್ರದ ಪ್ರತಿ ‘ದಿ ಫೈಲ್‌’ಗೆ ಲಭ್ಯವಾಗಿದೆ.

ಆಗಸ್ಟ್‌ ಹಾನಿಗೆ ಮಾತ್ರ ಪರಿಹಾರ ಕೇಳಿದ್ದ ಸರ್ಕಾರ?

2019ರ ಆಗಸ್ಟ್‌ ನಲ್ಲಿ ಶುರುವಾಗಿದ್ದ ಪ್ರವಾಹವು ಸೆಪ್ಟಂಬರ್ ಮತ್ತು ಅಕ್ಟೋಬರ್‌ವರೆಗೂ ಮಂದುವರೆದಿತ್ತು. ಸೆಪ್ಟಂಬರ್‌ ಮತ್ತು ಅಕ್ಟೋಬರ್‌ನಲ್ಲಿ ರಾಜ್ಯದಲ್ಲಿ ಸುರಿದಿದ್ದ ಭಾರೀ ಮಳೆ ಮತ್ತು ಭೂ ಕುಸಿತಕ್ಕೆ ಕೃಷಿ, ತೋಟಗಾರಿಕೆ ಬೆಳೆ ಹಾನಿ, ರಸ್ತೆಗಳು, ಸೇತುವೆಗಳು ಕೊಚ್ಚಿ ಹೋಗಿದ್ದವು. ಆದರೆ ರಾಜ್ಯ ಬಿಜೆಪಿ ಸರ್ಕಾರ ಕೇವಲ ಆಗಸ್ಟ್‌ನಲ್ಲಿ ಸಂಭವಿಸಿದ ಪ್ರವಾಹಕ್ಕೆ ಮಾತ್ರ ಪರಿಹಾರ ಕೋರಿ ಮನವಿ ಸಲ್ಲಿಸಿತ್ತು ಎಂದು ಗೊತ್ತಾಗಿದೆ.

 

ಈ ಸಂಬಂಧ ಕಂದಾಯ (ವಿಪತ್ತು ನಿರ್ವಹಣೆ) ಹಿರಿಯ ಅಧಿಕಾರಿಯೊಬ್ಬರು ‘ದಿ ಫೈಲ್‌’ಗೆ ಮಾಹಿತಿ ನೀಡಿದ್ದು, ಆರ್ಥಿಕ ನೆರವು ಕೋರುವ ಸಂಬಂಧ ಕೇಂದ್ರ ಸರ್ಕಾರಕ್ಕೆ ಆಗಸ್ಟ್‌ನಲ್ಲಿ ಮನವಿ ಸಲ್ಲಿಸಿದ್ದನ್ನು ಹೊರತುಪಡಿಸಿದರೆ ಸೆಪ್ಟಂಬರ್‌ ಮತ್ತು ಅಕ್ಟೋಬರ್‌ ನೆರೆ ಸಂಬಂಧ ಪರಿಹಾರ ಕೋರಿ ಮನವಿಯನ್ನೇ ಸಲ್ಲಿಸಿಲ್ಲ ಎಂದು ತಿಳಿಸಿದರು.

ಕಳೆದ ಆಗಸ್ಟ್‌ನಲ್ಲಿ ಸಂಭವಿಸಿದ ಭಾರೀ ಮಳೆಯಿಂದಾಗಿ 13,663.51 ಹೆಕ್ಟೇರ್‌ ಪ್ರಮಾಣದಲ್ಲಿ ಕೃಷಿ ಮತ್ತು ತೋಟಗಾರಿಕೆ ಪ್ರದೇಶಗಳಲ್ಲಿದ್ದ ಬೆಳೆಯು ಸಂಪೂರ್ಣ ನಾಶವಾಗಿದೆ. ಈ ಎರಡೂ ವಲಯಗಳಿಂದಲೇ 15,230 ಕೋಟಿ ರು.ನಷ್ಟ ಸಂಭವಿಸಿತ್ತು. ಅಲ್ಲದೆ ರಸ್ತೆ, ಸೇತುವೆ, ಕಟ್ಟಡ, ಮನೆ ಹಾನಿಯೂ ಸೇರಿದಂತೆ ಒಟ್ಟು 35,160.81 ಕೋಟಿ ರು. ನಷ್ಟವಾಗಿದೆ ಎಂದು ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿತ್ತು. ನೆರವು ಕೋರಿದ್ದ ಮೊತ್ತಕ್ಕೆ ಎದುರಾಗಿ ಕೇಂದ್ರ ಸರ್ಕಾರವು ಕೇವಲ 1,652 ಕೋಟಿ ಮಾತ್ರ ಬಿಡುಗಡೆ ಮಾಡಿತ್ತು. ಅಲ್ಲದೆ ಒಂದು ವರ್ಷದ ಸಂಭ್ರಮದಲ್ಲಿದ್ದ ಬಿಜೆಪಿ ಸರ್ಕಾರ ನೀಡಿದ್ದ ಜಾಹೀರಾತಿನಲ್ಲಿ ಕೆಂದ್ರ ಸರ್ಕಾರ 1,869 ಕೋಟಿ ನೆರವು ನೀಡಿದೆ ಎಂದು ತಪ್ಪಾಗಿ ಬಿಂಬಿಸಿದೆ ಎಂಬ ಆರೋಪಗಳು ಕೇಳಿ ಬಂದಿವೆ.

ಅದೇ ರೀತಿ 2019ರ ಆಗಸ್ಟ್‌ನಲ್ಲಿ ತೀವ್ರ ಮಳೆ ಮತ್ತು ಭೂ ಕುಸಿತದಿಂದಾಗಿ 17,981.00 ಹೆಕ್ಟೇರ್‌ ಕಾಫಿ ಬೆಳೆ ಹಾನಿಯಾಗಿತ್ತು. ಈ ಪೈಕಿ 12,895 ರೈತರಿಗೆ 40,78,00,000 ರು.ಇನ್‌ಪುಟ್‌ ಸಬ್ಸಿಡಿಯನ್ನು ಆಯಾ ರೈತರ ಖಾತೆಗೆ ಜಮಾ ಮಾಡಲಾಗಿದೆ ಎಂದು ಹೇಳಿತ್ತು. ಕಾಫಿ ಸೇರಿದಂತೆ ಇತರೆ ಬೆಳೆಹಾನಿ ಸಂಬಂಧ ಒಟ್ಟು 26,934 ರೈತರಿಗೆ 61,70,46,405 ರು. ಪರಿಹಾರ ಮೊತ್ತ ನೀಡಿತ್ತು ಎಂದು ಗೊತ್ತಾಗಿದೆ.

11 ವರ್ಷದಿಂದಲೂ ತಾರತಮ್ಯ

ಅಲ್ಲದೆ ನೆರೆ ಪರಿಹಾರ ನೀಡುವ ಸಂಬಂಧ ಕೇಂದ್ರ ಸರ್ಕಾರವು ಕಳೆದ 11 ವರ್ಷಗಳಿಂದಲೂ ತಾರತಮ್ಯ ಎಸಗುತ್ತಲೇ ಬಂದಿದೆ. ಕಾಂಗ್ರೆಸ್‌ ನೇತೃತ್ವದ ಯುಪಿಎ ಸರ್ಕಾರದ 6 ವರ್ಷದ (2008-2014) ಅವಧಿಯಲ್ಲಿಯೇ ರಾಜ್ಯಕ್ಕೆ ಬಿಡುಗಡೆ ಆಗದ ಮೊತ್ತವೇ ಹೆಚ್ಚಿತ್ತು. ಬಿಜೆಪಿ ನೇತೃತ್ವದ 5 ವರ್ಷದ (2014-19)ಲ್ಲಿಯೂ ಅರ್ಧದಷ್ಟು ಮೊತ್ತವನ್ನು ಬಾಕಿ ಉಳಿಸಿಕೊಂಡಿತ್ತು. ಮನಮೋಹನ್‌ಸಿಂಗ್ (2008-09ರಿಂದ 2014) ಮತ್ತು ನರೇಂದ್ರ ಮೋದಿ(2014-19) ಅವಧಿಯಲ್ಲಿಯೂ ರಾಜ್ಯಕ್ಕೆ ಬಿಡುಗಡೆಯಾಗಿರುವ ಪರಿಹಾರ ಧನ ಅತ್ಯಲ್ಪ ಪ್ರಮಾಣದಲ್ಲಿದೆ ಎಂಬ ವಿಚಾರ ದಾಖಲೆಯಿಂದ ತಿಳಿದು ಬಂದಿದೆ.

ಕೇಳಿದ್ದು 53.625 ಕೋಟಿ, ಕೊಟ್ಟಿದ್ದು 11,495 ಕೋಟಿಯಷ್ಟೇ

2008-09ರಿಂದ 2019-20 ಸಾಲಿನವರೆಗೂ (ಅಕ್ಟೋಬರ್‌15 ಅಂತ್ಯಕ್ಕೆ) 53.625 ಕೋಟಿ ರು.ಗಳನ್ನು(ಆಯಾ ವರ್ಷದ ತಿಂಗಳವಾರು ಲೆಕ್ಕದಲ್ಲಿ) ರಾಜ್ಯ ಸರ್ಕಾರ ಕೋರಿದ್ದರೆ, ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ್ದು ಕೇವಲ 11,495.55 ಕೋಟಿ ರು.ಗಳಷ್ಟೇ. 2008-09ರಿಂದ 2014ರವರೆಗೆ ಯುಪಿಎ ಸರ್ಕಾರದ ಅವಧಿಯಲ್ಲಿ ಸಂಭವಿಸಿದ್ದ ಬರ ಮತ್ತು ಪ್ರವಾಹ ಸಂಬಂಧ ರಾಜ್ಯ ಸರ್ಕಾರ ಒಟ್ಟು 29,656.09 ಕೋಟಿ ರು. ಕೋರಿದ್ದರೆ, ಕೇವಲ 2,499.85 ಕೋಟಿ ರು.ಗಳನ್ನಷ್ಟೇ  ಬಿಡುಗಡೆ ಮಾಡಿ 32,155.94 ಕೋಟಿ ರು.ಗಳನ್ನು ಬಾಕಿ ಉಳಿಸಿಕೊಂಡಿತ್ತು.

ಅದೇ ರೀತಿ 2014ರಲ್ಲಿ ಅಧಿಕಾರ ಹಿಡಿದಿದ್ದ ಬಿಜೆಪಿ ನೇತೃತ್ವದ ಎನ್‌ಡಿಎ ಅವಧಿಯಲ್ಲಿ ಸಂಭವಿಸಿದ್ದ ಬರ ಮತ್ತು ಪ್ರವಾಹ ಸಂಬಂಧ ರಾಜ್ಯ ಸರ್ಕಾರ ಒಟ್ಟು 26,031.2 ಕೋಟಿ ರು.ಪರಿಹಾರ ಕೋರಿದ್ದರೆ, ಬಿಡುಗಡೆ ಆಗಿದ್ದು ಕೇವಲ 8,995.7 ಕೋಟಿ ರು.ಗಳಷ್ಟೇ. 17,035.5 ಕೋಟಿ ರು.ಗಳನ್ನು ಬಿಡುಗಡೆ ಮಾಡದೇ ಬಾಕಿ ಉಳಿಸಿಕೊಂಡಿತ್ತು.

ಯಡಿಯೂರಪ್ಪ (2008-09ರಿಂದ 2011) ಡಿ ವಿ ಸದಾನಂದಗೌಡ ಮತ್ತು ಜಗದೀಶ್‌ ಶೆಟ್ಟರ್‌ (2011-12) ಅವಧಿಯಲ್ಲಿ ಸಂಭವಿಸಿದ್ದ ಬರ ಮತ್ತು ಪ್ರವಾಹ ಸಂದರ್ಭದಲ್ಲಿಯೂ ಹಿಂದಿನ ಕಾಂಗ್ರೆಸ್‌ ನೇತೃತ್ವದ ಯುಪಿಎ ಸರ್ಕಾರ ಮತ್ತು ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಕೇಂದ್ರದಲ್ಲಿದ್ದ ಎನ್‌ಡಿಎ ಸರ್ಕಾರವೂ ರಾಜ್ಯಕ್ಕೆ ನಿರೀಕ್ಷೆಯಂತೆ ಪರಿಹಾರ ಧನ ನೀಡಿರಲಿಲ್ಲ.

ಮತ್ತೊಂದು ವಿಶೇಷವೆಂದರೆ ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಹಣಕಾಸು ಸಚಿವರೂ ಆಗಿದ್ದ ಮನಮೋಹನ್‌ಸಿಂಗ್‌ಅವರು ರಾಜ್ಯಕ್ಕೆ ಹೆಚ್ಚಿನ ಪರಿಹಾರ ಮೊತ್ತ ಬಿಡುಗಡೆ ಮಾಡಿದ್ದರು ಎಂದು ಕಾಂಗ್ರೆಸ್‌ ಬೆಂಬಲಿಗರು ಬೀಗಿದ್ದರಲ್ಲದೆ ಭರ್ಜರಿ ಪ್ರಚಾರ ಗಿಟ್ಟಿಸಿದ್ದರು.  ಆದರೆ ಇದರ ವಾಸ್ತವವೇ ಬೇರೆ ಇದೆ.

 

2008-09ರ ಆಗಸ್ಟ್‌ ತಿಂಗಳಲ್ಲಿ ಎದುರಾಗಿದ್ದ ಪ್ರವಾಹ ಪರಿಹಾರವೆಂದು 516.72 ಕೋಟಿ ರು., ಮುಂಗಾರು ಬರವೆಂದು 2,019.50 ಕೋಟಿ ರು. ಸೇರಿ ಒಟ್ಟು 2,536.22 ಕೋಟಿ ರು.ಗಳನ್ನು ಬಿಡುಗಡೆ ಮಾಡಲು ಕೋರಿತ್ತು. ಆದರೆ ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ್ದು ಕೇವಲ 79.19 ಕೋಟಿ ರು.ಗಳಷ್ಟೇ.

ಬರ ಪರಿಹಾರ ಕೇಳಿದ್ದು 2,019 ಕೋಟಿ, ಕೊಟ್ಟಿದ್ದು 1.86 ಕೋಟಿ

ಮತ್ತೊಂದು ಸಂಗತಿ ಎಂದರೆ ಮುಂಗಾರು ಬರದಿಂದಾಗಿರುವ ನಷ್ಟವನ್ನು ಸರಿದೂಗಿಸಲು ರಾಜ್ಯ ಸರ್ಕಾರ ಕೋರಿದ್ದ 2,019.50 ಕೋಟಿ ರು.ಗೆ ಬದಲಿಗೆ ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ್ದು ಕೇವಲ 1.86 ಕೋಟಿ ರು.ಗಳಷ್ಟೆ. ಅದೇ ರೀತಿ 2009-10ರಿಂದ 2012ರಲ್ಲಿಯೂ ಹಣಕಾಸು ಸಚಿವರಾಗಿ ಮುಂದುವರೆದಿದ್ದ ಮನಮೋಹನ್‌ಸಿಂಗ್‌, ಪ್ರಣಬ್‌ಮುಖರ್ಜಿ ಮತ್ತು ಪಿ ಚಿದಂಬರಂ ಅವಧಿಯಲ್ಲಿಯೂ ರಾಜ್ಯಕ್ಕೆ ಕನಿಷ್ಟ ಮೊತ್ತ ಬಿಡುಗಡೆ ಆಗಿತ್ತು.

ಈ ಮೂವರ ಅವಧಿಯಲ್ಲಿ ಒಟ್ಟು 26,509.03  ಕೋಟಿ ರು.ನೆರವಿಗೆ ರಾಜ್ಯ ಸರ್ಕಾರ ಕೋರಿತ್ತು. ಆದರೆ ಬಿಡುಗಡೆ ಆಗಿದ್ದು ಕೇವಲ 1,946.94 ಕೋಟಿ ರು.ಗಳಷ್ಟೆ. 2010ರಲ್ಲಿ ಉಂಟಾಗಿದ್ದ ಪ್ರವಾಹದಿಂದ ಬಾಧಿತ ಪ್ರದೇಶಗಳನ್ನು ಪುನಶ್ಚೇತನಗೊಳಿಸಲು ರಾಜ್ಯ ಸರ್ಕಾರ 1,045.36 ಕೋಟಿ ರು.ಗಳನ್ನು ಕೇಳಿದ್ದರೆ, ಕಾಂಗ್ರೆಸ್‌ ನೇತೃತ್ವದ ಕೇಂದ್ರ ಸರ್ಕಾರ ಬಿಡಿಗಾಸನ್ನೂ ನೀಡಿರಲಿಲ್ಲ ಎಂಬ ವಿಚಾರ ದಾಖಲೆಯಿಂದ ತಿಳಿದು ಬಂದಿದೆ.

ಪ್ರವಾಹ, ಬರ ಎದುರಾದಾಗಲೆಲ್ಲ ಪರಿಹಾರಕ್ಕಾಗಿ ಕೇಂದ್ರ ಸರ್ಕಾರದ ಮುಂದೆ ಆಡಳಿತ ಪಕ್ಷವು ಪ್ರತಿಪಕ್ಷಗಳ ನಿಯೋಗವನ್ನು ನಿಲ್ಲಿಸಿ ಕೈಯೊಡ್ಡುತ್ತಲೇ ಇದೆ. ಆದರೆ ಯಾವ ಸರ್ಕಾರವೂ ಪಕ್ಷಾತೀತವಾಗಿ ಇರಲಿ, ಪರಿಸ್ಥಿತಿ ಗಂಭೀರತೆ ಅರಿತು ರಾಜ್ಯ ಸರ್ಕಾರದ ಬೇಡಿಕೆಗೆ ತಕ್ಕಂತೆ ಹಣ ಬಿಡುಗಡೆ ಮಾಡಿಲ್ಲ.

ಕೇಂದ್ರಕ್ಕೆ ಕರ್ನಾಟಕ ಸಾವಿರಾರು ಕೋಟಿ ರು.ಮೊತ್ತದಲ್ಲಿ  ತೆರಿಗೆ ನೀಡುತ್ತಿದೆಯಾದರೂ ಪರಿಹಾರಕ್ಕಾಗಿ ಕೇಂದ್ರದ ಮುಂದೆ ಕೈಯೊಡ್ಡಿ ನಿಲ್ಲಬೇಕಾದ ಸ್ಥಿತಿ ಇದೆ ಎಂದು ಕೇಂದ್ರದ ವಿರುದ್ಧ ಹರಿಹಾಯ್ದಿದ್ದರು. ಅಲ್ಲದೆ, ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್‌ ಮುಖಂಡರು ಪ್ರತಿಭಟನೆ ನಡೆಸಿದ್ದನ್ನು ಸ್ಮರಿಸಬಹುದು.

the fil favicon

SUPPORT THE FILE

Latest News

Related Posts