ಬಿ ಖರಾಬು ಜಮೀನು ಮಂಜೂರು; ಆಕ್ಷೇಪಣೆ ಸಲ್ಲಿಕೆ ಅವಧಿ ಕಡಿತಕ್ಕೆ ವಿಧೇಯಕ ಮಂಡನೆ

ಬೆಂಗಳೂರು; ಜಮೀನು ಮಾರಾಟ ಮಾಡಲು ಕೈಗಾರಿಕೋದ್ಯಮಿಗಳಿಗೆ ಅವಕಾಶ ಕಲ್ಪಿಸುವ ಕರ್ನಾಟಕ ಭೂ ಸುಧಾರಣಾ (ತಿದ್ದುಪಡಿ) ಕಾಯ್ದೆ 2020 ವಿಧೇಯಕ ಮಂಡಿಸಿದ್ದ ರಾಜ್ಯ ಬಿಜೆಪಿ ಸರ್ಕಾರವೀಗ ಸಾವಿರಾರು ಕೋಟಿ ರು.ಬೆಲೆ ಬಾಳುವ ‘ಬಿ’ ಖರಾಬು ಭೂಮಿಯನ್ನು ಮಂಜೂರು ಮಾಡುವ ಸಂಬಂಧ ಸಾರ್ವಜನಿಕರ ಆಕ್ಷೇಪಣೆ ಸಲ್ಲಿಕೆಯ ಅವಧಿಯನ್ನು ಕಡಿತಗೊಳಿಸಲು ಹೊರಟಿದೆ. ಈ ಸಂಬಂಧ ಕರ್ನಾಟಕ ಭೂ ಕಂದಾಯ (ತಿದ್ದುಪಡಿ) ವಿಧೇಯಕ 2020ನ್ನು ತರಾತುರಿಯಲ್ಲಿ ಮಂಡಿಸಲು ಸಕಲ ಸಿದ್ಧತೆಯನ್ನು ನಡೆಸಿರುವುದು ಇದೀಗ ಬಹಿರಂಗವಾಗಿದೆ.

ಕರ್ನಾಟಕ ಭೂ ಕಂದಾಯ(ತಿದ್ದುಪಡಿ) ವಿಧೇಯಕ 2020ರ ಕರಡು ಪ್ರತಿ ‘ದಿ ಫೈಲ್‌’ಗೆ ಲಭ್ಯವಾಗಿದೆ.

ಸಾರ್ವಜನಿಕರ ಉಪಯೋಗಕ್ಕೆ ಅಗತ್ಯ ಇರುವ ಸಾರ್ವಜನಿಕ ರಸ್ತೆ, ಬೀದಿ, ಓಣಿ ಅಥವಾ ‘ಬಿ’ ಖರಾಬು ಭೂಮಿಯನ್ನು ಇನ್ಫೋಸಿಸ್‌ ಸೇರಿದಂತೆ ಹಲವು ಕಾರ್ಪೋರೇಟ್‌ ಉದ್ಯಮಗಳ ಹೆಸರಿಗೆ ಈಗಾಗಲೇ ಮಂಜೂರು ಮಾಡಿರುವ ರಾಜ್ಯ ಸರ್ಕಾರ, ಬಿ ಖರಾಬು ಭೂಮಿ ಎಂದು ವರ್ಗೀಕರಿಸಲಾದ ಭೂಮಿಯ ಮೇಲೆ ಸಾರ್ವಜನಿಕ ಹಕ್ಕನ್ನು ಕೊನೆಗಾಣಿಸುವ ಸಂಬಂಧ ಸಾರ್ವಜನಿಕರಿಂದ ಆಕ್ಷೇಪಣೆ ಆಹ್ವಾನಿಸಲು ಇದ್ದ ಅವಧಿಯನ್ನು ಕಡಿತಗೊಳಿಸಲು ಮುಂದಾಗಿದೆ.

‘ಸಾರ್ವಜನಿಕ ರಸ್ತೆ, ಬೀದಿ, ಓಣಿ ಅಥವಾ ‘ಬಿ’ ಖರಾಬು ಭೂಮೆಯೆಂದು ವರ್ಗೀಕರಿಸಲಾದ ಭೂಮಿಯ ಮೆಲೆ ಇದಕ್ಕೆ ಪರಿಣಾಮಕಾರಿಯಾಗಿ ಘೋಷಣೆಯನ್ನು ಮಾಡಿದ ತರುವಾಯ ಸಾರ್ವಜನಿಕ ಹಕ್ಕಿನ ಅಳಿಯುವಿಕೆಯ ಪೂರ್ವದಲ್ಲಿ ಸಾರ್ವಜನಿಕರಿಂದ ಆಕ್ಷೇಪಣೆಯನ್ನು ಆಹ್ವಾನಿಸುವುದಕ್ಕಾಗಿ ಗೊತ್ತುಪಡಿಸಿದ ಸಮಯವನ್ನು ತೊಂಬತ್ತು ದಿನಗಳಿಂದ ಒಂದು ತಿಂಗಳ ಅವಧಿಗೆ ಕಡಿಮೆಗೊಳಿಸಲು ಸದರಿ ಅಧಿನಿಯಮದ 68ನೇ ಪ್ರಕರಣವನ್ನು ತಿದ್ದುಪಡಿ ಮಾಡಲಾಗುವುದು,’ ಎಂದು ವಿಧೇಯಕದಲ್ಲಿ ಹೇಳಲಾಗಿದೆ.

ಅದೇ ರೀತಿ ‘ಅನಧಿಕೃತ ಬೇಸಾಯ ಭೂಮಿಯ ಸಕ್ರಮೀಕರಣಕ್ಕಾಗಿ ಅರ್ಜಿಗಳ ವಿಲೇಯು ಬಾಕಿಯಿದ್ದು ನಮೂನೆ 50ರಲ್ಲಿ ಸುಮಾರು 10,572 ಅರ್ಜಿಗಳು ಮತ್ತು ನಮೂನೆ 53ರಲ್ಲಿ 1,40,781 ಅರ್ಜಿಗಳು ವಿಲೇಗಾಗಿ ಇನ್ನೂ ಬಾಕಿ ಉಳಿದಿವೆ. ಕಾಲಮಿತಿಯು 2020ರ ಏಪ್ರಿಲ್‌ 27ರಂದು ಕೊನೆಗೊಳ್ಳುತ್ತಿದೆ. ಆದ್ದರಿಂದ ಎರಡು ವರ್ಷಗಳ ಮತ್ತಷ್ಟು ಕಾಲಮಿತಿಯನ್ನು ವಿಸ್ತರಿಸುವ’ ಉದ್ದೇಶದಿಂದ ವಿಧೇಯಕವನ್ನು ಮಂಡಿಸುತ್ತಿರುವುದು ತಿಳಿದು ಬಂದಿದೆ.

ಇನ್ನು, ಭೂ ಮಂಜೂರಾತಿ ಸಂಬಂಧ ತಿದ್ದುಪಡಿಯನ್ನೂ ತರಲಿದೆ. ಕರ್ನಾಟಕ ಭೂ ಕಂದಾಯ (ತಿದ್ದುಪಡಿ) ಅಧಿನಿಯಮದ ಪ್ರಕಾರ ಭೂಮಿಯನ್ನು ಮಂಜೂರು ಮಾಡುವ ಸಂಬಂಧ ಹೆಚ್ಚುವರಿ ಸಮಿತಿಗೆ ಶಿಫಾರಸ್ಸು ಮಾಡುವ ಅವಧಿಯನ್ನು 2 ವರ್ಷಕ್ಕೆ ಏರಿಸಲಿದೆ.

‘ಮೂಲ ಅಧಿನಿಯಮದ 94-ಬಿ ಪ್ರಕರಣದ (1)ನೇ ಉಪ ಪ್ರಕರಣದಲ್ಲಿ ‘ಇಪ್ಪತ್ತು ವರ್ಷದೊಳಗೆ’ ಬದಲಿಗೆ ಇಪ್ಪತ್ತೆರಡು ವರ್ಷದೊಳಗೆ’ ಎಂಬ ಪದಗಳನ್ನು ಸೇರ್ಪಡೆಗೊಳಿಸುತ್ತಿರುವುದು ವಿಧೇಯಕದಿಂದ ಗೊತ್ತಾಗಿದೆ. ಕರ್ನಾಟಕ ಭೂ ಕಂದಾಯ (ತಿದ್ದುಪಡಿ) ಅಧಿನಿಯಮ, 2000ರ ಪ್ರಾರಂಭದ ದಿನಾಂಕದಿಂದ 20 ವರ್ಷದೊಳಗೆ ನಿಯಮಗಳಿಗೆ ಒಳಪಟ್ಟು ಜಿಲ್ಲಾಧಿಕಾರಿಗಳು 94-ಎ ಪ್ರಕರಣದ ಅಡಿಯಲ್ಲಿ ರಚಿಸಿದ ಸಮಿತಿಗೆ ಶಿಫಾರಸ್ಸು ಮಾಡಬಹುದಾಗಿತ್ತು. ಈ ಸಮಿತಿಯು ಶಿಫಾರಸ್ಸನ್ನು ಸ್ವೀಕರಿಸಿದ ನಂತರ ಭೂಮಿಯನ್ನು ಮಂಜೂರು ಮಾಡಬಹುದಾಗಿತ್ತು.

ಬೆಂಗಳೂರು ನಗರ ಜಿಲ್ಲೆಯೊಂದರಲ್ಲೇ ಒಟ್ಟು 6,954 ಎಕರೆ ವಿಸ್ತೀರ್ಣದಲ್ಲಿ ಬಿ ಖರಾಬು ಭಮಿ ಇದೆ. ಯಲಹಂಕದಲ್ಲಿ 1,962 ಎಕರೆ, ಬೆಂಗಳೂರು ಪೂರ್ವ ತಾಲೂಕಿನಲ್ಲಿ 1,365 ಎಕರೆ, ಬೆಂಗಳೂರು ದಕ್ಷಿಣದಲ್ಲಿ 1,892 ಎಕರೆ, ಆನೇಕಲ್‌ ತಾಲೂಕಲ್ಲಿ 920 ಎಕರೆಯೂ ಇದರಲ್ಲಿ ಒಳಗೊಂಡಿದೆ. ಇದರ ಅಂದಾಜು ಬೆಲೆ 30 ಸಾವಿರ ಕೋಟಿಗೂ ಅಧಿಕ ಇದೆ ಎನ್ನಲಾಗಿದೆ.

ಆನೇಕಲ್‌ ತಾಲೂಕಿನ ಸರ್ಜಾಪುರ ಹೋಬಳಿಯಲ್ಲಿ ಇನ್ಫೋಸಿಸ್‌ ಕಂಪನಿ ಖರೀದಿಸಿದ್ದ ಭೂಮಿಯಲ್ಲಿದ್ದ ‘ಬಿ’ ಖರಾಬು , ಓಣಿ, ಹದ್ದಿಗಿಡದ ಹಳ್ಳ, ಸಾರ್ವಜನಿಕ ರಸ್ತೆಯೂ ಸೇರಿತ್ತು. ಆದರೆ ಸರ್ಕಾರದ ಮಟ್ಟದಲ್ಲಿ ಬಿ ಖರಾಬು ಸೇರಿದಂತೆ ಓಣಿ, ರಸ್ತೆಯ ಮೇಲೆ ಸಾರ್ವಜನಿಕರ ಹಕ್ಕನ್ನು ಕೊನೆಗಾಣಿಸುವ ಉದ್ದೇಶದಿಂದಲೇ ಇನ್ಫೋಸಿಸ್‌ ಕಂಪನಿಗೆ ಬಿಜೆಪಿ ಸರ್ಕಾರ ಮಂಜೂರು ಮಾಡಿದ್ದನ್ನು ಸ್ಮರಿಸಬಹುದು.

ಕೆರೆ, ಕುಂಟೆ, ಮಳೆ ನೀರು ಹರಿದು ಬರುವ ಕಾಲುವೆಗಳು, ದನಕರುಗಳಿಗೆ ಆಶ್ರಯ ತಾಣವಾಗಿದ್ದ ಹುಲ್ಲುಬನ್ನಿ, ಖರಾಬು, ಗುಂಡು ತೋಪು, ಸ್ಮಶಾನ, ಹದ್ದಿಗಿಡದ ಖರಾಬು ಜಾಗವನ್ನು ಸರಕಾರದ ಸುಪರ್ದಿಗೆ ಪಡೆಯಲಾಗಿದೆ. ಆದರೆ, ಸಾಗುವಳಿ ಭೂಮಿಯಲ್ಲಿನ ಎ ಮತ್ತು ಬಿ ಖರಾಬು ಜಾಗವು ಭೂಗಳ್ಳರ ಸುಪರ್ದಿಯಲ್ಲಿದೆ.
ಎ ಖರಾಬು ಜಮೀನನ್ನು ಮಂಜೂರು ಮಾಡಲು ಕಾನೂನಿನಲ್ಲಿ ಅವಕಾಶವಿದೆ. ಬಿ ಖರಾಬು ಜಾಗದ ಮಂಜೂರು ಮಾಡುವಂತಿಲ್ಲ. ಈ ಜಾಗವನ್ನು ಸಾರ್ವಜನಿಕ ಉದ್ದೇಶಕ್ಕಷ್ಟೇ ಬಳಸಬೇಕಿದೆ. ಆದರೆ, ಈ ನಿಯಮವು ಪಾಲನೆಯಾಗುತ್ತಿಲ್ಲ ಎಂಬ ಬಲವಾದ ಆರೋಪಗಳು ಕೇಳಿ ಬರುತ್ತಲೇ ಇವೆ.

ಅಲ್ಲದೆ, ಅನಧಿಕೃತವಾಗಿ ಸಾಗುವಳಿ ಮಾಡಿದ್ದ ಕಂದಾಯ ಜಮೀನಿನ ಒಡೆತನ ಕೋರಿ ಶಿವಮೊಗ್ಗ ಜಿಲ್ಲೆಯೊಂದರಲ್ಲೇ 1,45,601 ರೈತರು ಕರ್ನಾಟಕ ಭೂ ಕಂದಾಯ ಕಾಯ್ದೆಯ ಕಲಂ 94-ಬಿ ಅಡಿ ನಮೂನೆ 53ರಲ್ಲಿ ಅರ್ಜಿ ಸಲ್ಲಿಸಿದ್ದರು. ಅವುಗಳಲ್ಲಿ ಇದುವರೆಗೆ 18,383 ಅರ್ಜಿಗಳನ್ನು ಇತ್ಯರ್ಥ ಮಾಡಲಾಗಿತ್ತು. 38,077.12 ಎಕರೆಗೆ ಸಾಗುವಳಿ ಹಕ್ಕು ನೀಡಲಾಗಿದೆ. ಅದರಲ್ಲಿ ಬಹುತೇಕ ಜಮೀನಿನ ಸಾಗುವಳಿ ಹಕ್ಕನ್ನು ನಿಯಮಬಾಹಿರವಾಗಿ ನೀಡಲಾಗಿದೆ ಎಂಬ ಆರೋಪ ಕೇಳಿ ಬಂದಿತ್ತು.

the fil favicon

SUPPORT THE FILE

Latest News

Related Posts